ಕಾಂಗ್ರೆಸ್‌ನಲ್ಲಿನ ಪವರ್‌ ಶೇರಿಂಗ್‌ ಚರ್ಚೆಯಿಂದ‌ ಅಭಿವೃದ್ಧಿ ಶೂನ್ಯ: ವಿಶ್ವನಾಥ್

ಮೈಸೂರು: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ. ಇದಕ್ಕೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಪವರ್‌ ಶೇರಿಂಗ್‌ ಚರ್ಚೆಯೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್‌ ಟೀಕಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನ ಬೆಳಗಾದರೆ ಸಾಕು ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಈ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯ ಪ್ರವೇಶಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ನಿಂದ ಸಿದ್ದರಾಮಯ್ಯ ಅವರನ್ನು ಹೊರಹಾಕಿದಾಗ ಆಶ್ರಯ ಕೊಟ್ಟಿದ್ದು ಕಾಂಗ್ರೆಸ ಪಕ್ಷ. ಆದರೆ ಈಗ ಸಿದ್ದರಾಮಯ್ಯ ಕಾಂಗ್ರೆಸ್‌ ಪಾರ್ಟಿಯನ್ನೇ ಮುಗಿಸಲು ಮುಂದಾಗಿದ್ದಾರೆ ಎಂದು ವಿಶ್ವನಾಥ್ ವ್ಯಂಗ್ಯವಾಡಿದರು.

ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಹಂಚಿಕೆ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷರ ಸಮಕ್ಷಮದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಡಿ.ಕೆ.ಸುರೇಶ್‌ ಸಹೋದರರ ಸಮ್ಮುಖದಲ್ಲಿ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರು ಉಪಸ್ಥಿತರಿದ್ದರು. ಆದರೆ ಈ ಬಗ್ಗೆ ಯಾರೊಬ್ಬರೂ ಈಗ ಬಾಯಿ ಬಿಡುತ್ತಿಲ್ಲ ಎಂದು ಹೇಳಿದರು.

ಡಿಕೆಶಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಾರ್ಟಿ ಧೂಳಿಪಟವಾಗಲಿದೆ ಎಂದು ವಿಶ್ವನಾಥ್ ಎಚ್ಚರಿಸಿದರು.

ಕಾಂಗ್ರೆಸ್‌ನಲ್ಲಿನ ಪವರ್‌ ಶೇರಿಂಗ್‌ ಚರ್ಚೆಯಿಂದ‌ ಅಭಿವೃದ್ಧಿ ಶೂನ್ಯ: ವಿಶ್ವನಾಥ್ Read More

ಜೈಲುಗಳನ್ನು ಐಷಾರಾಮಿ ಲಾಡ್ಜ್ ಗಳಾಗಿಸಿದೆ:ಸರ್ಕಾರದ ವಿರುದ್ಧ ರಾಕೇಶ್ ಗೌಡ‌ ಕಿಡಿ

ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿದ ಕಾಂಗ್ರೆಸ್ ಸರ್ಕಾರ ಜೈಲುಗಳನ್ನು ಐಷಾರಾಮಿ ಲಾಡ್ಜ್ ಗಳನ್ನಾಗಿಸಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ‌ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲ್ ಉಗ್ರರಿಗೆ, ಕೊಲೆಗಡುಕರಿಗೆ, ಅತ್ಯಾಚಾರಿಗಳಿಗೆ ಸ್ಲೀಪರ್ ಸೆಲ್ ಆಗಿ, ಮೋಜು ಮಸ್ತಿಯ ತಾಣವಾಗಿರುವುದು ಗಾಢ ನಿದ್ರೆಯಲ್ಲಿರುವ ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಪರಪ್ಪನ ಅಗ್ರಹಾರದ ಜೈಲು ಇಂದು ಕಾನೂನು ಬಾಹಿರ ಚಟುವಟಿಕೆಗಳ ಕೇಂದ್ರವಾಗಿದೆ. ದೇಶದ್ರೋಹಿಗಳು, ಉಗ್ರಗಾಮಿಗಳು, ರೇಪಿಸ್ಟ್‌ಗಳು, ಸ್ಮಗ್ಲರ್‌ಗಳು ಎಲ್ಲರೂ ಅಲ್ಲಿ ಐಷಾರಾಮಿ ಸೌಲಭ್ಯಗಳನ್ನು ಪಡೆದು ನೆಮ್ಮದಿಯಿಂದ ಬಾಳುತ್ತಿದ್ದಾರೆ. ಮನಃಪರಿವರ್ತನ ಕೇಂದ್ರಗಳಾಗಬೇಕಾಗಿದ್ದ ಕಾರಾಗೃಹಗಳು, ಉಗ್ರರಿಗೆ ಕ್ಲಬ್ ಗಳಾಗಿ ಪರಿವರ್ತನೆಯಾಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ಎಲ್ಲಾದಕ್ಕೂ ಗೊತ್ತಿಲ್ಲ, ತನಿಖೆ ಮಾಡ್ತೀವಿ, ವರದಿ ತರಿಸಿಕೊಳ್ತೀವಿ ಎನ್ನುವ ಗೃಹ ಸಚಿವರು ಜಾಣ ಮೌನ ವಹಿಸಿದ್ದಾರೆ. ಅದ್ಯಾವುದೂ ಪರಿವೇ ಇಲ್ಲ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖುರ್ಚಿಗಾಗಿ ಜಗಳ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಕುಂಬಕರ್ಣ ನಿದ್ರೆಯಿಂದ ಎಚ್ಚೆತ್ತು ಈಗಲಾದರೂ ಪರಪನ ಅಗ್ರಹಾರದಲ್ಲಿ ನಡೆಯುತ್ತಿರುವ ಮೋಜು ಮಸ್ತಿಗೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು‌ ಎಂದು ರಾಕೇಶ್ ಗೌಡ ಆಗ್ರಹಿಸಿದ್ದಾರೆ.

ಜೈಲುಗಳನ್ನು ಐಷಾರಾಮಿ ಲಾಡ್ಜ್ ಗಳಾಗಿಸಿದೆ:ಸರ್ಕಾರದ ವಿರುದ್ಧ ರಾಕೇಶ್ ಗೌಡ‌ ಕಿಡಿ Read More

ಕಾಂಗ್ರೆಸ್ ಪಕ್ಷದ ಮತಗಳ್ಳತನ:ಅಶೋಕ್ ಟೀಕೆ

ಬೆಂಗಳೂರು: ಸಿದ್ದರಾಮಯ್ಯನವರನ್ನ 1999ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಸೋಲಿಸಿತು, 2018 ರಲ್ಲಿ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಹೇಗೆ ಗೆದ್ದರು ಎನ್ನುವುದಕ್ಕೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಚುನಾವಣಾ ಅಕ್ರಮವೇ ಉದಾಹರಣೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಇವಿಎಂ ಗಳಂತಹ ಆಧುನಿಕ ತಂತ್ರಜ್ಞಾನ ಬಂದಮೇಲೆ ಕೂಡ ಕಾಂಗ್ರೆಸ್ ಪಕ್ಷ ಇಂತಹ ಚುನಾವಣಾ ಅಕ್ರಮ ಮಾಡುತ್ತದೆ ಎಂದರೆ, ಮತಪೆಟ್ಟಿಗೆ ಇದ್ದ ಕಾಲದಲ್ಲಿ ಹೇಗೆಲ್ಲಾ ಚುನಾವಣೆಗಳನ್ನು ಗೆಲ್ಲುತ್ತಿತ್ತು ಎನ್ನುವುದನ್ನ ನೀವೇ ಊಹಿಸಿಕೊಳ್ಳಿ ಎಂದು ‌ಜನತೆಗೆ ಟ್ವೀಟ್ ಮಾಡಿ ಹೇಳಿದ್ದಾರೆ.

ರಾಜ್ಯದಲ್ಲಿ ಈಗ ಇರುವುದು ಜನಾದೇಶದಿಂದ ಚುನಾಯಿತವಾದ ಸರ್ಕಾರ ಅಲ್ಲ, ಮತಗಳ್ಳತನದ ಮೂಲಕ ಅಧಿಕಾರ ಕಬಳಿಸಿರುವ ಮಾಫಿಯಾ ಸರ್ಕಾರ ಎಂದು ‌ಅಶೋಕ್ ಜರಿದಿದ್ದಾರೆ.

ಕಾಂಗ್ರೆಸ್ ಪಕ್ಷದ ಮತಗಳ್ಳತನ:ಅಶೋಕ್ ಟೀಕೆ Read More

ಕಾಂಗ್ರೆಸ್ ನಾಯಕ‌ ರಾಜೀವ್ ಹುಟ್ಟುಹಬ್ಬ:ಆಸ್ಟ್ರಿಚ್ ಪಕ್ಷಿ ದತ್ತು

ಮೈಸೂರು: ಕಾಂಗ್ರೆಸ್ ಹಿರಿಯ ನಾಯಕ ಎಚ್.ವಿ. ರಾಜೀವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಎಚ್.ವಿ. ರಾಜೀವ್ ಸ್ನೇಹಬಳಗದ ಸದಸ್ಯ ಆರ್. ಹುಡ್ಕೊ ಕುಮಾರ್ ಒಂದು ಆಸ್ಟ್ರಿಚ್ ಪಕ್ಷಿಯನ್ನು ದತ್ತು ಪಡೆದು ಮಾದರಿಯಾಗಿದ್ದಾರೆ.

ಮೈಸೂರಿನ ಝೂನಲ್ಲಿ ಹುಡ್ಕೊ ಕುಮಾರ್ ಒಂದು ಆಸ್ಟ್ರಿಚ್ ಹಕ್ಕಿಯನ್ನು ದತ್ತು ಪಡೆದುಕೊಂಡರು.

ಈ ವಿಶೇಷ ಕಾರ್ಯಕ್ರಮದಲ್ಲಿ ಹೆಚ್.ವಿ. ರಾಜೀವ್ ಅವರ ಪತ್ನಿ ಲಕ್ಷ್ಮೀ,ನವ್ಯ ರಾಜೀವ್, ಮಾಜಿ ಮೇಯರ್ ಭೈರಪ್ಪ, ಮಾಜಿ ಕಾರ್ಪೊರೇಟರ್ ಕೆ.ವಿ. ಮಲ್ಲೇಶ್, ನಾಗೇಶ್ ರಂಗನಾಥ್ ಮತ್ತಿತರರು ಹಾಜರಿದ್ದರು.

ಈ ವೇಳೆ ಮಾತನಾಡಿದ ಲಕ್ಷ್ಮಿ ರಾಜೀವ್ ಅವರು, ರಾಜೀವ್ ಅವರ ಜೀವನ ಸದಾ ಸಮಾಜಮುಖಿ ಕಾರ್ಯಗಳತ್ತ ಕೇಂದ್ರೀಕೃತವಾಗಿದೆ. ಅವರ ಹುಟ್ಟುಹಬ್ಬವನ್ನು ಹೀಗೆ ಅರ್ಥಪೂರ್ಣ ಕಾರ್ಯದ ಮೂಲಕ ಆಚರಿಸಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.

ಮಾಜಿ ಮೇಯರ್ ಭೈರಪ್ಪ ಅವರು ಮಾತನಾಡಿ, ಎಚ್.ವಿ. ರಾಜೀವ್ ಮೈಸೂರಿನ ಅಭಿವೃದ್ಧಿ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ನೀಡಿದ ಕೊಡುಗೆ ದೊಡ್ಡದು. ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತಹ ಕಾರ್ಯಕ್ರಮ ಸಾರ್ವಜನಿಕರಲ್ಲಿ ಸಂರಕ್ಷಣೆಯ ಅರಿವು ಮೂಡಿಸುತ್ತವೆ ಎಂದು ಹೇಳಿದರು.

ಆರ್. ಹುಡ್ಕೋ ಕುಮಾರ್ ಮಾತನಾಡಿ,ರಾಜೀವ್ ಅವರ ಹುಟ್ಟುಹಬ್ಬದಂದು ಒಂದು ಉತ್ತಮ ಕೆಲಸ ಮಾಡುವ ಆಸೆ ನನಗಿತ್ತು. ಆಸ್ಟ್ರಿಚ್ ದತ್ತು ಪಡೆಯುವ ಮೂಲಕ ಪ್ರಕೃತಿ ಮತ್ತು ಪ್ರಾಣಿಗಳ ಸಂರಕ್ಷಣೆಗೆ ನಮ್ಮ ಬದ್ಧತೆಯನ್ನು ತೋರಿಸಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ನೇಹಬಳಗ ಸದಸ್ಯರು ರಾಜೀವ್ ಅವರ ಸೇವಾ ಚಟುವಟಿಕೆಗಳನ್ನು ಮುಂದುವರಿಸುವ ಪ್ರತಿಜ್ಞೆ ಕೈಗೊಂಡರು.

ಕಾಂಗ್ರೆಸ್ ನಾಯಕ‌ ರಾಜೀವ್ ಹುಟ್ಟುಹಬ್ಬ:ಆಸ್ಟ್ರಿಚ್ ಪಕ್ಷಿ ದತ್ತು Read More

ಸರ್ಕಾರಿ ಬಸ್ ಗಳ ಮೇಲೆ‌ಸ್ಟಿಕ್ಕರ್:ಕ್ರಮಕ್ಕೆ ಬಿಜೆಪಿ ಯುವ ಮೋರ್ಚಾ ಆಗ್ರಹ

ಸರ್ಕಾರಿ ಬಸ್ ಗಳ ಮೇಲೆ‌ಸ್ಟಿಕ್ಕರ್:
ಕ್ರಮಕ್ಕೆ ಬಿಜೆಪಿ ಯುವ ಮೋರ್ಚಾ ಆಗ್ರಹ

ಮೈಸೂರು: ಸರ್ಕಾರಿ ಬಸ್ ಗಳ ಮೇಲೆ
ಸ್ಟಿಕ್ಕರ್ ಅಂಟಿಸಲು ಅನುಮತಿ ನೀಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಬಿಜೆಪಿ‌ ಯುವ ಮೋರ್ಚಾ ನಿಯೋಗ ಆಗ್ರಹಿಸಿದೆ.

ಮತಗಳ್ಳತನ ಬಗ್ಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಸರ್ಕಾರಿ ಬಸ್ ಗಳ ಮೇಲೆ ಸ್ಟಾಪ್ ಮತ ಕಳ್ಳತನ ಎಂಬ ಒಕ್ಕಣೆ ಇರುವ ಸ್ಟಿಕ್ಕರ್ ಗಳನ್ನ ಅಂಟಿಸಿ ಪ್ರತಿಭಟನೆ ನಡೆಸಲಾಗಿತ್ತು.

ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರ ನೇತೃತ್ವದಲ್ಲಿ ನಿನ್ನೆ ಸ್ಟಿಕ್ಕರ್ ಅಂಟಿಸುವ ಕಾರ್ಯ ನಡೆದು ಪ್ರತಿಭಟಿಸಲಾಗಿತ್ತು.

ಇದೀಗ ಕಾಂಗ್ರೆಸ್ ಕಾರ್ಯವನ್ನ ಖಂಡಿಸಿರುವ ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ಯರು ಗುರುವಾರ ಕೆಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದು ಸ್ಟಿಕ್ಕರ್ ಅಂಟಿಸಲು ಅನುಮತಿ ನೀಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಕೊಟ್ಟು ಆಗ್ರಹಿಸಿದ್ದಾರೆ.

ಸರ್ಕಾರಿ ಬಸ್ ಗಳ ಮೇಲೆ‌ಸ್ಟಿಕ್ಕರ್:ಕ್ರಮಕ್ಕೆ ಬಿಜೆಪಿ ಯುವ ಮೋರ್ಚಾ ಆಗ್ರಹ Read More

ಸಿಎಂ ಪತ್ನಿಗೆ ರಿಲೀಫ್, ಸಂಭ್ರಮ:ಕೋರ್ಟ್ ತೀರ್ಪು ಬಿಜೆಪಿಗೆ ಮುಖಭಂಗ-ಹೆಚ್.ವಿ.ರಾಜೀವ್

ಮೈಸೂರು: ನ್ಯಾಯಾಲಯವು ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಪತ್ನಿಗೆ ರಿಲೀಫ್ ನೀಡಿರುವುದನ್ನು ಸ್ವಾಗತಿಸಿ ಸಿಎಂ ತವರು ಮೈಸೂರಿನಲ್ಲಿ ಕೈ ನಾಯಕರು ಸಿಹಿ ಹಂಚಿ‌ ಸಂಭ್ರಮಿಸಿದರು.

ಸಿಹಿ ವಿತರಿಸುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಗೊ. ಮಧುಸೂದನ್ ಅವರಿಗೆ ಸಿಹಿ ನೀಡಿದರು.ಈ‌ ವೇಳೆ ಗೊ. ಮಧುಸೂದನ್ ಅವರು ಸಿದ್ದರಾಮಯ್ಯ ವರಿಗೆ ಸೂಪರ್ ಜೈ ಹೇಳಿದ್ದಾರೆ ಅದಕ್ಕೆ ಕೈ ನಾಯಕರು ಖುಷಿ ಪಟ್ಟಿದ್ದಾರೆ.

ಮುಡಾ ಪ್ರಕರಣ ಸಿಎಂ ಪತ್ನಿಗೆ ರಿಲೀಫ್ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಎಚ್ ವಿ ರಾಜೀವ್ ಸ್ನೇಹ ಬಳಗದ ವತಿಯಿಂದ 101 ಗಣಪತಿ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಭಾವಚಿತ್ರ ಹಿಡಿದು ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸತ್ಯಮೇವ ಜಯತೆ ಎಂದು ಘೋಷಣೆ ಕೂಗಿ ಸಾರ್ವಜನಿಕರಿಗೆ ಸಿಹಿ ವಿತರಿಸಿ,
ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಕೂಗಿದರು.

ಈ ವೇಳೆ ಮಾತನಾಡಿದ ಮೂಡ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್ ಅವರು, ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ ಆರ್. ಅಂಬೇಡ್ಕರ್ ಅವರು ದೇಶಕ್ಕೆ ರಚಿಸಿಕೊಟ್ಟ ಸಂವಿಧಾನದ ಅಡಿಯಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಬಲಿಷ್ಠವಾಗಿದೆ ಪಾರದರ್ಶಕವಾಗಿದೆ ಎಂಬುದಕ್ಕೆ ಪಾರ್ವತಮ್ಮ ಅವರು ಭೂ ಪರಿಹಾರ ಪಡೆದುಕೊಂಡ ಪ್ರಕ್ರಿಯೆಗೆ ಮೂಡ ಸರಿಯಾಗಿ ಕಾರ್ಯನಿರ್ವಹಿಸಿದೆ ಎಂದು ಹೈಕೋರ್ಟ್, ಸುಪ್ರಿಂ ಕೋರ್ಟ್ ನೀಡಿದ ತೀರ್ಪು ನಿದರ್ಶನವಾಗಿದೆ ಎಂದು ಹೇಳಿದರು.

2014ರಲ್ಲಿ ಟ್ರಾನ್ಸ್ ಪರೆನ್ಸಿ ಭೂ ಕಾಯ್ದೆ ಬಂದ ನಂತರ ಮಾರುಕಟ್ಟೆಯ ಬೆಲೆಗಿಂತ ಮೂರು ಪಟ್ಟು ಪರಿಹಾರವನ್ನ ಭೂಮಾಲೀಕರಿಗೆ ನೀಡಬೇಕು ಎಂದು ಕಾಯ್ದೆಯ ನೀತಿ ಜಾರಿಯಾಗಿದೆ, ಬದಲಿ ನಿವೇಶನಕ್ಕೂ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದ ಜನಪ್ರತಿನಿಧಿಗಳ ಸಮಿತಿ ಮೂಡ ನಿವೇಶನ ಭೂಪರಿಹಾರ ಮತ್ತು ಬದಲಿ ನಿವೇಶನಕ್ಕೆ ಒಪ್ಪಿಗೆ ನೀಡಲಾಗಿತ್ತು, ಆದರೆ ಬಿಜೆಪಿ ಕೇಂದ್ರ ಸರ್ಕಾರ ಇಡಿ ಸಂಸ್ಥೆಯನ್ನ ದುರ್ಬಳಕೆ ಮಾಡಿಕೊಂಡು ಏಕಾಏಕಿ ವ್ಯವಸ್ಥೆಯನ್ನೆ ಅತಂತ್ರ ಮಾಡಲು ಹೊರಟಿತ್ತು ಎಂದು ದೂರಿದರು.

ಈಗ ಬಿಜೆಪಿ ಷಡ್ಯಂತ್ರಕ್ಕೆ ನ್ಯಾಯಾಲಯದ ತೀರ್ಪು ಭಾರಿ ಮುಖಭಂಗವಾಗಿದೆ, ಬೆಂಗಳೂರು ಮೈಸೂರು ಕಾಲ್ನಡಿಗೆ ಇವೆಲ್ಲಾ ಹೈಡ್ರಾಮ ಎಂದು ಕರ್ನಾಟಕದ ಜನತೆಗೆ ಗೊತ್ತಾಗಿದೆ, ಈ ಕೂಡಲೇ ತಪ್ಪನ್ನ ಅರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕರ್ನಾಟಕ ಬಿಜೆಪಿ ಸಮಿತಿ ರಾಜ್ಯದ ಜನೆತೆಯ ಕ್ಷಮೆ ಕೇಳಬೇಕು ಎಂದು ರಾಜೀವ್ ಆಗ್ರಹಿಸಿದರು.

ಸಂಭ್ರಮಾಚರಣೆಯಲ್ಲಿ ನಗರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶಿವಕುಮಾರ್, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಕಂಸಾಳೆ ರವಿ, ಸೇವಾದಳ ಮೋಹನ್ ಕುಮಾರ್,ಯುವ ಕಾಂಗ್ರೆಸ್ ಮಲ್ಲೇಶ್ ಮಲ್ಲು, ಶ್ರೀಕಾಂತ್ ಯಾದವ್, ಹೇಮಂತ್,ಉಮೇಶ್, ಎಸ್ ಎನ್ ರಾಜೇಶ್ ಮತ್ತಿತರ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಿಎಂ ಪತ್ನಿಗೆ ರಿಲೀಫ್, ಸಂಭ್ರಮ:ಕೋರ್ಟ್ ತೀರ್ಪು ಬಿಜೆಪಿಗೆ ಮುಖಭಂಗ-ಹೆಚ್.ವಿ.ರಾಜೀವ್ Read More

ಜುಲೈ 19 ರಂದು ಮೈಸೂರಿನಲ್ಲಿ ಸಾಧನಾ ಸಮಾವೇಶ

ಮೈಸೂರು: ಜುಲೈ 19ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರ ಎರಡು ವರ್ಷಗಳಲ್ಲಿ ಮೈಸೂರು ನಗರಕ್ಕೆ ನೀಡಿದ ಕೊಡುಗೆಗಳು,ಹಲವಾರು ಐತಿಹಾಸಿಕ ಯೋಜನೆಗಳಿಗೆ ಶಂಕುಸ್ಥಾಪನೆಗೆ ಸಂಬಂಧಪಟ್ಟಂತೆ ಬೃಹತ್ ಮಟ್ಟದ ಸಾಧನ ಸಮಾವೇಶ ಹಮ್ಮಿಕೊಳ್ಳಲಾಗಿದೆ

ಈ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಚರ್ಚಿಸಲಾಯಿತು.

ಈ ಮಾತನಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ,ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿರುವ ಕಾಂಗ್ರೆಸ್ ಸರ್ಕಾರ ಈಗಾಗಲೇ ಮೂರ್ನಾಲ್ಕು ಭಾಗಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನ ಸಮೇವೇಶವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಹೇಳಿದರು.

ಜುಲೈ 19ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ನಗರ ಪ್ರಾಂತ್ಯಕ್ಕೆ ಸರ್ಕಾರ ನೀಡಿರುವ ಹಲವಾರು ಐತಿಹಾಸಿಕ ಕೊಡುಗೆಗಳು, ಬಹಳಷ್ಟು ವರ್ಷಗಳಿಂದ ಮೈಸೂರು ನಗರದ ಜನತೆಯ ಬೇಡಿಕೆ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳು ಹಾಗೂ ಇತರ ಇಲಾಖೆ ಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಮೈಸೂರು ನಗರ ಭಾಗದ ಕೆಆರ್ ವಿಧಾನಸಭಾ ಕ್ಷೇತ್ರ, ಚಾಮರಾಜ ವಿಧಾನಸಭಾ ಕ್ಷೇತ್ರ ಹಾಗೂ ಎನ್ಆರ್. ವಿಧಾನಸಭಾ ಕ್ಷೇತ್ರ ಜನತೆ, ಕಾರ್ಯಕರ್ತರು ಭಾಗವಹಿಸಲಿದ್ದು ವರುಣಾ ವಿಧಾನಸಭಾ ಕ್ಷೇತ್ರದ ಮಹಾಜನತೆ, ಕಾರ್ಯಕರ್ತರು ಹಾಗೂ ಇತರ ಇಲಾಖೆಗಳ ಫಲಾನುಭವಿಗಳು ಭಾಗವಹಿಸಬೇಕೆಂದು ಡಾ. ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಬಿ. ಜೆ ವಿಜಯ್ ಕುಮಾರ್, ಮುಖ್ಯಮಂತ್ರಿಗಳು ಮೈಸೂರು ನಗರ ಹಾಗೂ ಜಿಲ್ಲೆಯ ಶಾಸಕರ ಸಭೆ ಕರೆದು ವ್ಯವಸ್ಥಿತ ಸಿದ್ಧತೆ ಮಾಡಲು ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಅವರ ಸೂಚನೆ ಮೇರೆಗೆ ಇದೇ ತಿಂಗಳು 12 ರಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಅವರ ನೇತೃತ್ವದಲ್ಲಿ ಮೈಸೂರು ಜಿಲ್ಲೆ ಹಾಗೂ ನಗರ ವ್ಯಾಪ್ತಿಯ ಶಾಸಕರು, ಸಂಸದರು ಹಾಗೂ ಮಾಜಿ ಶಾಸಕರಸಭೆ ಕರೆಯಲಾಗಿದೆ.ಇದು ಸೀಮಿತವಾಗಿ ಮೈಸೂರು ನಗರ ವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರದ ಸಾಧನಾ ಸಮಾವೇಶ ಮಾತ್ರವೇ ವಿನಃ ರಾಜ್ಯದ ಎರಡು ವರ್ಷದ ಸಾಧನ ಸಮಾವೇಶವಲ್ಲ ಎಂದು ಸ್ಪಷ್ಟಪಡಿಸಿದರು.

ಬಹಳ ವರ್ಷಗಳ ಮೈಸೂರು ಭಾಗದ ಕಾಂಗ್ರೆಸ್ ಕಾರ್ಯಕರ್ತರ ಬಹುದೊಡ್ಡ ಕನಸು ಮೈಸೂರಿನಲ್ಲಿ ಶ್ರೀಮತಿ ಇಂದಿರಾ ಗಾಂಧಿ ಕಾಂಗ್ರೆಸ್ ಭವನದ ಭೂಮಿ ಪೂಜೆಯನ್ನು ಇದೇ ತಿಂಗಳು ಕೊನೆಯ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ನೆರವೇರಿಸಲಿದ್ದಾರೆ ಎಂದು ಅವರು ತಿಳಿಸಿದರು‌.

ಕಾರ್ಯಕರ್ತರು, ಸ್ಥಳೀಯ ಮುಖಂಡರು ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಬೂತ್ ಮಟ್ಟದಲ್ಲಿ ಸಿದ್ಧತೆ ಆರಂಭಿಸಲು ಬಿ.ಜೆ.ವಿಜಯಕುಮಾರ್ ಕರೆ ನೀಡಿದರು.

ಸಭೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕಳೆಲೆ ಕೇಶವಮೂರ್ತಿ, ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಗಡೂರು ರಂಗಸ್ವಾಮಿ, ವರುಣ ವಿಧಾನಸಭಾ ಕ್ಷೇತ್ರದ ಪುರಸಭಾ ಸದಸ್ಯರು ವಿವಿಧ ಹಂತದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಜುಲೈ 19 ರಂದು ಮೈಸೂರಿನಲ್ಲಿ ಸಾಧನಾ ಸಮಾವೇಶ Read More

ಸುಳ್ಳು ಸುದ್ದಿ ತಡೆಗೆ ಕಾನೂನು ರೂಪಿಸಲುಹೊರಟ ಸರ್ಕಾರ: ಅಶೋಕ್ ಗೇಲಿ

ಬೆಂಗಳೂರು: ಸುಳ್ಳು ಸುದ್ದಿ ಹರಡುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಳ್ಳು ಸುದ್ದಿ ತಡೆಗೆ ಕಾನೂನು ರೂಪಿಸಲು ಹೊರಟಿರುವುದು ಈ ಶತಮಾನದ ಅತ್ಯಂತ ದೊಡ್ಡ ವಿಪರ್ಯಾಸ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ರಾಜ್ಯದಲ್ಲಿ ಸಂಭವಿಸುತ್ತಿರುವ ಹಾರ್ಟ್ ಅಟ್ಯಾಕ್ ಗಳಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ತಜ್ಞರ ವರದಿ ಸ್ಪಷ್ಟಪಡಿಸಿದೆ.

ಹಾರ್ಟ್ ಅಟ್ಯಾಕ್ ಗಳಿಗೆ ಕೋವಿಡ್ ಲಸಿಕೆಗೆ ತರಾತುರಿಯಲ್ಲಿ ಅನುಮೋದನೆ ನೀಡಿ ಲಸಿಕೆ ಕೊಟ್ಟಿದ್ದೇ ಕಾರಣ ಎಂದು ಸುಳ್ಳು ಸುದ್ದಿ ಹರಡಿದ ಸಿಎಂ ಸಿದ್ದರಾಮಯ್ಯನವರ ಮೇಲೆ ಸುಳ್ಳು ಸುದ್ದಿ ಕೇಸು ಹಾಕುವಿರಾ ಎಂದು ಟ್ವೀಟ್ ಮಾಡಿ ಅಶೋಕ್ ಪ್ರಶ್ನಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳೇ ಸುಳ್ಳು ಸುದ್ದಿ ಹರಡುವ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕರ್ನಾಟಕದ ದುರಂತ.ಸಿದ್ದರಾಮಯ್ಯ ಅವರ ನಿವೃತ್ತಿ ಸಮಯ ಹತ್ತಿರ ಬಂದಿದೆ ಎನ್ನುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ರಚನೆ ಮಾಡಿರುವ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿ ಎಂಬ ಪುನರ್ವಸತಿ ಕೇಂದ್ರವೇ ಸಾಕ್ಷಿ ಎಂದು ಅಶೋಕ್ ಜರಿದಿದ್ದಾರೆ‌

ಸಿದ್ದರಾಮಯ್ಯನವರೇ, ನಿಮ್ಮ ಸೇವೆ ಸಾಕು, ರಾಜೀನಾಮೆ ಕೊಟ್ಟು ನಿವೃತ್ತರಾಗಿ ಎಂದು ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಪರೋಕ್ಷವಾಗಿ ಹೇಳುತ್ತಿದ್ದಾರೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು. ಈ ರಬ್ಬರ್ ಸ್ಟ್ಯಾಂಪ್ ಕುರ್ಚಿ ಇದ್ದರೆಷ್ಟು, ಬಿಟ್ಟರೆಷ್ಟು. ನಿಮಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದಿದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುತ್ತಿರಲಿಲ್ಲ ಎಂದು
ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.

ಸುಳ್ಳು ಸುದ್ದಿ ತಡೆಗೆ ಕಾನೂನು ರೂಪಿಸಲುಹೊರಟ ಸರ್ಕಾರ: ಅಶೋಕ್ ಗೇಲಿ Read More

ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಲವಾರು ಬಾರಿ ಅಧಿಕಾರಿಗಳ ವಿರುದ್ಧ ಅವಹೇಳನವಾಗಿ ಮಾತಾಡಿದ್ದಾರೆ,ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ,ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಅಧಿಕಾರಿ ವಿರುದ್ಧ ಸಿದ್ದರಾಮಯ್ಯ ಅವಹೇಳನಕಾರಿಯಾಗಿ ಮಾತನಾಡಿದ್ದರು, ಆದರೂ ಕ್ರಮ ಕೈಗೊಳ್ಳಲಿಲ್ಲ. ರಾಜ್ಯದಲ್ಲಿ ಎಲ್ಲೂ ಅಭಿವೃದ್ಧಿ ಕಾರ್ಯ ನಡೆಯದೆ, ಶಾಸಕರು ದಂಗೆ ಏಳುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಹೈಕೋರ್ಟ್‌ ಸೂಚಿಸಿದೆ. ಈ ಸಮಸ್ಯೆಗಳನ್ನು ಮರೆಮಾಚಲು ರವಿಕುಮಾರ್‌ ಹೇಳಿಕೆಯನ್ನು ವಿವಾದ ಮಾಡಲಾಗಿದೆ ಎಂದು ಆರೋಪಿಸಿದರು.

ಬಿಜೆಪಿಯವರು ಮಾಡಿದರೆ ಎಫ್‌ಐಆರ್‌ ದಾಖಲಿಸುತ್ತಾರೆ. ಕಾಂಗ್ರೆಸ್‌ನವರು ಮಾಡಿದರೆ ಯಾವುದೇ ದೂರು ದಾಖಲಾಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲೇ ಕರೆಯುತ್ತಾರೆ. ರಾಷ್ಟ್ರಪತಿಗಳಿಗೆ ಗೌರವ ಕೊಡದೆ ಏಕವಚನದಲ್ಲೇ ಮಾತಾಡುತ್ತಾರೆ. ಅಂದರೆ ಕಾಂಗ್ರೆಸ್‌ಗೆ ಬೇರೆಯೇ ರೀತಿಯ ಕಾನೂನು ಇದೆ ಎಂದಾಯಿತು. ರವಿಕುಮಾರ್‌ ಯಾವ ರೀತಿಯ ಅಶ್ಲೀಲ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್‌ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

ಹಾಸನದಲ್ಲಿ ಸರಣಿ ಹೃದಯಾಘಾತ ಪ್ರಕರಣ ಕಂಡುಬಂದರೂ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿಲ್ಲ. ಕೋವಿಡ್‌ ಲಸಿಕೆಯಿಂದ ಹೀಗಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೋವಿಡ್‌ ಲಸಿಕೆಯನ್ನು ಇಡೀ ದೇಶದ ಜನರಿಗೆ ನೀಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಲಸಿಕೆ ಬಗ್ಗೆ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.

ಚಿಕ್ಕಮಗಳೂರು, ಕೊಡಗು, ಸಕಲೇಶಪುರದಲ್ಲಿ ಕಾಫಿ ಬೆಳೆ ಹಾನಿಯಾಗಿದ್ದರೂ, ತೋಟಗಾರಿಕೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ರೈತರನ್ನು ಭೇಟಿ ಮಾಡಿಲ್ಲ. ನಾನು ಹಾಸನಕ್ಕೆ ಭೇಟಿ ನೀಡಿ, ಹೃದಯಾಘಾತ ಹಾಗೂ ಕಾಫಿ ಬೆಳೆ ನಾಶದ ಬಗ್ಗೆ ವಿಚಾರಿಸುತ್ತೇನೆ. ಸರ್ಕಾರ ಕೂಡ ಈ ಕೆಲಸವನ್ನು ಕೂಡಲೇ ಮಾಡಬೇಕು ಎಂದು ಅಶೋಕ್ ಆಗ್ರಹಿಸಿದರು.

ಆರ್‌ಎಸ್‌ಎಸ್‌ಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಇಂದಿರಾಗಾಂಧಿ ಹಾಗೂ ರಾಜೀವ್‌ಗಾಂಧಿಗೆ, ಆರ್‌ಎಸ್‌ಎಸ್‌ಗೆ ಏನೂ ಮಾಡಲು ಸಾಧ್ಯವಾಗಿಲ್ಲ. ಅಂದಿನ ಪ್ರಧಾನಿ ನೆಹರೂ ಯೋಧರಿಗೆ ರಕ್ತ ನೀಡಲು ಆರ್‌ಎಸ್‌ಎಸ್‌ನ ಸಹಾಯ ಪಡೆದಿದ್ದರು. ಅಧಿಕಾರವಿದ್ದಾಗಲೇ ಕಾಂಗ್ರೆಸ್‌ಗೆ ಆರ್‌ಎಸ್‌ಎಸ್‌ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಅಧಿಕಾರಕ್ಕೆ ಬರುವ ಅವಕಾಶವೂ ಇಲ್ಲ. ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದರು.

ಸಿಎಂ ಕುರ್ಚಿ ಬದಲಾವಣೆ ಖಚಿತವಾಗಿದೆ. ಕಾಂಗ್ರೆಸ್‌ ಶಾಸಕರು ಕೂಡ ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆಂದು ಭವಿಷ್ಯ ನುಡಿಯುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸುತ್ತಿರುವುದು ಅದರ ಲಕ್ಷಣ. ಬಿಜೆಪಿಗೆ ಮದ್ದು ಅರೆಯುವ ಮೊದಲು ಕಾಂಗ್ರೆಸ್‌ಗೆ ಕಾಂಗ್ರೆಸ್ಸೇ ಮದ್ದು ಅರೆಯಲಿ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ Read More

ಕಾಂಗ್ರೆಸ್ ನಲ್ಲಿ ಕೆಲ ಗುಂಪುಗಳು ಸೈಲೆಂಟಾಗಿ ಕೆಲಸ ಮಾಡುತ್ತಿವೆ:ನಿಖಿಲ್ ಟಾಂಗ್

ಬೀದರ್: ಕಾಂಗ್ರೆಸ್ ನಲ್ಲಿ ಕೆಲವು ಗುಂಪು ನೇರ, ಇನ್ನು ಕೆಲವು ಗುಂಪುಗಳು ಸೈಲೆಂಟಾಗಿ ಕೆಲಸ ಮಾಡುತ್ತಿವೆ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

ಬೇರೆಯವರಂತೆ ಸರ್ಕಾರ ಪತನ ಆಗುತ್ತದೆ ಅಂತ ನಾನು ಹೇಳುವುದಿಲ್ಲ,ಆದರೆ ಕಾಂಗ್ರೆಸ್‌ ಪಕ್ಷದಲ್ಲಿ ಹಲವು ಗುಂಪುಗಳಿವೆ ಎಂದು ಹೇಳಿದರು.

ಬೀದರ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 5 ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ,ಸಿಎಂ ಖುರ್ಚಿಗಾಗಿ ಕಾಂಗ್ರೆಸ್‌ ನಲ್ಲಿ ಹಲವು ಪ್ರಕ್ರಿಯೆಗಳು ನಡೆಯುತ್ತಿವೆ. ಅದೇನೋ ಕ್ರಾಂತಿ ಆಗುತ್ತೆ ಅಂತ ಹೇಳ್ತಿದ್ದಾರೆ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡದೆ ಎರಡೂವರೆ ವರ್ಷ ಕಾಲಹರಣ ಮಾಡಿದ್ದಾರೆ. ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂದು ಖುದ್ದು ಅವರ ಪಕ್ಷದ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ರಾಜ್ಯಕ್ಕೆ ದೊಡ್ಡ ಗಾತ್ರದ ಬಜೆಟ್ ಕೊಟ್ಟಿದ್ದೀನಿ ಎಂದು ಸಿಎಂ ಬೆನ್ನು ತಟ್ಟುಕೊಳ್ಳುತ್ತಾರೆ ಅದರಲ್ಲಿ ಸಾಲ ಎಷ್ಟಾಗಿದೆ ಎಂಬುದನ್ನ ಜನರಿಗೆ ಹೇಳಲಿ ಎಂದು ನಿಖಿಲ್ ಸವಾಲು ಹಾಕಿದರು.

2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಸೀಟು ಹಂಚಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ,ಇದರಲ್ಲಿ ಯಾವುದೇ ಗೊಂದಲ ಇಲ್ಲ, ಸಂಸತ್ ಚುನಾವಣೆಯಲ್ಲಿ ಕೈ ಜೋಡಿಸಿದ್ದೇವೆ. ಅದನ್ನ ರಾಜ್ಯದ ಜನ ನೋಡಿದ್ದಾರೆ, ಅದರಲ್ಲಿ ಮುಚ್ಚು ಮರೆ ಇಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಜೀ ಅವರ ನಾಯಕತ್ವದಲ್ಲಿ ನಮ್ಮ ದೇಶ ಆರ್ಥಿಕವಾಗಿ ಮೂರನೇ ದೊಡ್ಡ ದೇಶವಾಗಿದೆ. ರಾಜ್ಯದ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಪುನರುಚ್ಛರಿಸಿದರು.

ಕಾಂಗ್ರೆಸ್ ನಲ್ಲಿ ಕೆಲ ಗುಂಪುಗಳು ಸೈಲೆಂಟಾಗಿ ಕೆಲಸ ಮಾಡುತ್ತಿವೆ:ನಿಖಿಲ್ ಟಾಂಗ್ Read More