ಸಿಎಂ ಮುಂದುವರಿಕೆ; ಹೈಕಮಾಂಡ್ ತೀರ್ಮಾನ ಅಂತಿಮ-ಸಿದ್ದರಾಮಯ್ಯ

ಮಂಗಳೂರು: ಮುಖ್ಯಮಂತ್ರಿಗಳ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ, ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಹೈಕಮಾಂಡ್
ತೆಗೆದುಕೊಳ್ಳುತ್ತಾರೆ,ಅದನ್ನು ನಾವೆಲ್ಲ ಪಾಲಿಸಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೆಲ ಸಚಿವರು ಹೇಳಿಕೆ ನೀಡುತ್ತಿರುವ ಬಗ್ಗೆ ಮೇಲಿನಂತೆ ಪ್ರತಿಕ್ರಿಯಿಸಿ ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡ್ ಗೆ ಸೇರಿದ್ದು, ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಿದ್ದರಾಮಯ್ಯ ಕಠಿಣವಾಗಿ ಹೇಳಿದರು.

ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯಿಸಿ,ದ್ವೇಷಪೂರಿತ ಭಾಷಣ ಮಾಡುವವರ ಮೇಲೆ ಎಫ್ ಐ ಆರ್ ದಾಖಲಾಗುತ್ತದೆ. ಅವರು ಮಹಿಳೆಯರಿಗೆ ಅಗೌರವವಾಗಿ ಭಾಷಣದಲ್ಲಿ ಮಾತನಾಡಿದ್ದಾರೆ ಎಂದು ತಿಳಿಸಿದರು.

ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್ ಐ ಟಿ ವರದಿ ಸಲ್ಲಿಕೆ ಬಗ್ಗೆ ಪ್ರಶ್ನೆಗೆ, ಎಸ್ ಐ ಟಿ ತನಿಖೆಗೆ ಮಧ್ಯಪ್ರವೇಶ ಮಾಡುವುದಿಲ್ಲ. ಈ ತಿಂಗಳಾಂತ್ಯದಲ್ಲಿ ಎಸ್ ಐ ಟಿ ವರದಿ ಸಲ್ಲಿಕೆಯಾಗಲಿದೆ ಎಂದು ಎಸ್ ಐ ಟಿ ತಿಳಿಸಿದೆ ಎಂಬುದಾಗಿ ಗೃಹಸಚಿವರು ಮಾಹಿತಿ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಿಎಂ ಮುಂದುವರಿಕೆ; ಹೈಕಮಾಂಡ್ ತೀರ್ಮಾನ ಅಂತಿಮ-ಸಿದ್ದರಾಮಯ್ಯ Read More

ಅನೈತಿಕ ಪೊಲೀಸ್‌ಗಿರಿಗೆ ಕಡಿವಾಣ:ಪಲೀಸರ ಕಾರ್ಯ ಶ್ಲಾಘನೀಯ – ಸಿಎಂ

ಬೆಂಗಳೂರು: ರಾಜ್ಯದ ಘನತೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕಂಟಕವಾಗಿದ್ದ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್‌ಗಿರಿಗೆ ರಾಜ್ಯದಲ್ಲಿ ಕಡಿವಾಣ ಬಿದ್ದಿದ್ದು ಅದರ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು.

ಮಂಗಳವಾರ ಬೆಂಗಳೂರಿನ ಪೊಲೀಸ್ ಹುತಾತ್ಮರ ಉದ್ಯಾನವನದಲ್ಲಿ ನಡೆದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ನಮನ ಸಲ್ಲಿಸಿ ಸಿಎಂ ಮಾತನಾಡಿದರು.

ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅವಿರತವಾಗಿ ಶ್ರಮಿಸುತ್ತಾ, ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳ ದಕ್ಷತೆ, ಕರ್ತವ್ಯನಿಷ್ಠೆಯನ್ನು ಈ ದಿನ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ.

ಕೋಟ್ಯಂತರ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಟ್ಟ ಇವರೆಲ್ಲರ ತ್ಯಾಗ – ಬಲಿದಾನವು ಶಾಶ್ವತವಾಗಿ ನೆನಪಿನಲ್ಲುಳಿಯುವಂತದ್ದು ಎಂದು ಮುಖ್ಯ ಮಂತ್ರಿಗಳು ಬಣ್ಣಿಸಿದರು.

ಪೊಲೀಸ್‌ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ಅನೈತಿಕ ಪೊಲೀಸ್‌ ಗಿರಿಗೆ ಕಡಿವಾಣ ಬಿದ್ದಿರುವುದು ಉತ್ತಮ ಕೆಲಸ. ಹಾಗೆಯೇ ಮಾದಕ ವಸ್ತು ಹಾವಳಿಗೂ ಬ್ರೇಕ್ ಬಿದ್ದಿದ್ದು ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪರಿಶಿಷ್ಠ ಜಾತಿ ಹಾಗೂ ವರ್ಗದವರ ಮೇಲಿನ ದೌರ್ಜನ್ಯ ತಡೆಗೆ ಡಿಸಿಆರ್‌ಇ ಪೊಲೀಸ್‌ ಠಾಣೆಗಳನ್ನು ಕಾರ್ಯೋನ್ಮುಖಗೊಳಿಸಿದ್ದೇವೆ. ಇವು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿ ದೇಶದಲ್ಲಿ 191 ಮಂದಿ ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ತ್ಯಾಗ ಮಾಡುವ ಮೂಲಕ ಹುತಾತ್ಮರಾಗಿದ್ದಾರೆ. ಅವರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲಾಗದು. ಅವರನ್ನೆಲ್ಲ ಸ್ಮರಿಸಿ, ನಮಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಿಎಂ ತಿಳಿಸಿದರು ‌

ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯ ವೈದ್ಯಕೀಯ ಮರು ಪಾವತಿ ವೆಚ್ಚವನ್ನು ವಾರ್ಷಿಕ 1 ಲಕ್ಷ ರೂ.ಗಳಿಂದ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣಾ ವೆಚ್ಚವನ್ನು 1,000 ರೂ.ಗಳಿಂದ 1,500 ರೂ.ಗೆ ಹೆಚ್ಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅನೈತಿಕ ಪೊಲೀಸ್‌ಗಿರಿಗೆ ಕಡಿವಾಣ:ಪಲೀಸರ ಕಾರ್ಯ ಶ್ಲಾಘನೀಯ – ಸಿಎಂ Read More

ಆರ್ ಎಸ್ ಎಸ್ ನವರು ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸಿದ್ದರು:ಸಿಎಂ

ಮೈಸೂರು: ಆರ್ ಎಸ್ ಎಸ್ ನವರು ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ್ದರು, ಈಗಲೂ ವಿರೋಧಿಸುತ್ತಿದ್ದಾರೆ,ಹಾಗಾಗಿ ವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರು ವಿಶ್ವ ವಿದ್ಯಾಲಯದ ರಜತ ಮಹೋತ್ಸವ ಹಾಗೂ ನೂತನ ಜ್ಞಾನ ದರ್ಶನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ. ಅವರು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಜ್ಞಾನ‌ ಸಂಪಾದನೆ ಮಾಡಿದರು. ಬಳಿಕ ತಮ್ಮ ಜ್ಞಾನವನ್ನು ಬದುಕಿನುದ್ದಕ್ಕೂ ಸಮಾಜದ ಬದಲಾವಣೆಗೆ ಬಳಸಿದರು ಎಂದು ತಿಳಿಸಿದರು.

ಅಂಬೇಡ್ಕರ್ ಅವರ ಹೆಸರಲ್ಲಿ ಬಿಜೆಪಿಯವರು, ಸಂಘ ಪರಿವಾರದವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ, ಸತ್ಯ ಏನೆಂದರೆ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಡಾಂಗೆ ಎಂದು ಸ್ವತಃ ಅಂಬೇಡ್ಕರ್ ಅವರೇ ತಮ್ಮದೇ ಹಸ್ತಾಕ್ಷರದಲ್ಲಿ ಬರೆದಿದ್ದಾರೆ. ಇಂಥಾ ಸತ್ಯಗಳನ್ನು ಸಮಾಜದ ಮುಂದಿಟ್ಟು ಸಂಘ ಪರಿವಾರದ ಸುಳ್ಳುಗಳನ್ನು ಬಹಿರಂಗಗೊಳಿಸಬೇಕು ಎಂದು ಸಿದ್ದು ಕರೆ ನೀಡಿದರು.

ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ಅವರೇ ಸಾಟಿ. ಮತ್ತೊಬ್ಬ ಅಂಬೇಡ್ಕರ್ ಬರಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸಿ ಅವರ ಹಾದಿಯಲ್ಲಿ ನಡೆಯಬೇಕು ಎಂದು ಸಿಎಂ ಸಲಹೆ ನೀಡಿದರು ‌

ವಿಶ್ವದ ಎಲ್ಲಾ ಸಂವಿಧಾನಗಳನ್ನು ಓದಿ, ಜೀರ್ಣಿಸಿಕೊಂಡು ಭಾರತೀಯ ಸಮಾಜಕ್ಕೆ ಅನ್ವಯ ಆಗುವ ವಿಶ್ವ ಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್ ಅವರು ಭಾರತಕ್ಕೆ ಕೊಟ್ಟರು ಎಂದು ತಿಳಿಸಿದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಸನಾತನಿ ಒಬ್ಬ ಶೂ ಎಸೆದಿರುವುದು ಸನಾತನಿಗಳು, ಪಟ್ಟಭದ್ರರು ಸಮಾಜದಲ್ಲಿ ಇನ್ನೂ ಇದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂದು ಸಿಎಂ ಹೇಳಿದರು.

ಶೂ ಎಸೆತವನ್ನು ದಲಿತರಷ್ಟೇ ಅಲ್ಲ. ಪ್ರತಿಯೊಬ್ಬರೂ ವಿರೋಧಿಸಬೇಕು. ಹಾಗಾದಾಗ ಮಾತ್ರ ಸಮಾಜ ಬದಲಾವಣೆಯ ಹಾದಿಯಲ್ಲಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು ಎಂದರು.

ನಾನು ಬುದ್ದ, ಬಸವ, ಅಂಬೇಡ್ಕರ್ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡಿದ್ದೀನಿ. ಈ ಕಾರಣಕ್ಕೇ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯಬೇಕು ಎಂದು ಆಶಿಸುತ್ತೇನೆ. ವಿಜ್ಞಾನ ಓದಿಯೂ ಮೂಢ ನಂಬಿಕೆ ಆಚರಿಸುವವರಾಗಬೇಡಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಮೈಸೂರು ವಿವಿಯಲ್ಲಿ ಅಂಬೇಡ್ಕರ್ ಅಧ್ಯಯನ‌ ಕೇಂದ್ರ ಆಗಿ 25 ವರ್ಷಗಳಾಗಿವೆ. ಈ ಸಂದರ್ಭದಲ್ಲಿ “ವಿಶ್ವ ಜ್ಞಾನಿ ಅಂಬೇಡ್ಕರ್ ಸಭಾ ಭವನ” ಲೋಕಾರ್ಪಣೆ ಆಗುತ್ತಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ಪಟ್ಟರು.

ಆರ್ ಎಸ್ ಎಸ್ ನವರು ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸಿದ್ದರು:ಸಿಎಂ Read More

ಬಿಹಾರ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ-ಸಿದ್ದರಾಮಯ್ಯ

ಮೈಸೂರು: ಬಿಹಾರ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಿಎಂ,ಬಿಹಾರದಲ್ಲಿ ನಮ್ಮ ಮೈತ್ರಿ ಒಕ್ಕೂಟ ಗೆಲ್ಲುವು ಪಡೆಯುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಹಾರಕ್ಕೆ ಹೋಗುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ,ನನ್ನ ಪ್ರಚಾರದ ಅಗತ್ಯ ಇದ್ದರೆ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದು ಉತ್ತರಿಸಿದರು ‌

ಪ್ರತಿಪಕ್ಷದವರು ನವೆಂಬರ್ ನಲ್ಲಿ ಕ್ರಾಂತಿಯಾಗುತ್ತೆ ಅನ್ನುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ,ಯಾವ ಕ್ರಾಂತಿಯೂ ಇಲ್ಲ ಬ್ರಾಂತಿಯೂ ಇಲ್ಲ,ಕ್ರಾಂತಿ ಕ್ರಾಂತಿ ಎಂದು ಹೇಳುವವರಿಗೆ ಮಾಡಲು ಬೇರೆ ಕೆಲಸ ಇಲ್ಲ,
ಸುಮ್ಮನೆ ಏನೇನೊ ಹೇಳುತ್ತಾರೆ ಎಂದು ಸಿಎಂ ಗರಂ ಆದರು,ಜತೆಗೆ
ಮಾಧ್ಯಮದವರು ಆ ಹೇಳಿಕೆಗಳಿಗೆ ಪ್ರಚಾರ ಕೊಡುವುದನ್ನ ನಿಲ್ಲಿಸಲಿ,
ಆಗ ಅವರೇ ಸುಮ್ಮನಾಗುತ್ತಾರೆ ಎಂದು ಹೇಳಿದರು.

ಜಾತಿ ಗಣತಿ ಸಮೀಕ್ಷೆಗೆ ಇನ್ಫೋಸಿಸ್ ಸುಧಾಮೂರ್ತಿ ಹಾಗೂ ನಾರಾಯಣ್ ಮೂರ್ತಿ ಒಪ್ಪಿಲ್ಲವಲ್ಲಾ ಎಂಬ ಮತ್ತೊಂದು ಪ್ರಶ್ನೆಗೆ,ಇನ್ಫೋಸಿಸ್ ನವರು ಏನು ಬಹಳ ಬೃಹಸ್ಪತಿಗಳಾ,ಇದು ಹಿಂದುಳಿದ ವರ್ಗದ ಜಾತಿ ಸಮೀಕ್ಷೆ ಅಲ್ಲ,ಎಲ್ಲಾ ಜಾತಿಗಳ ಸಮೀಕ್ಷೆ,ಇದನ್ನ ಅರ್ಥ ಮಾಡಿಕೊಳ್ಳದಿದ್ದರೆ ನಾವು ಏನು ಮಾಡುವುದು,
ಇದು ಅಜ್ಞಾನವೋ ಉದ್ದೇಶ ಪೂರ್ವಕವೊ ಅವರಿಗೇ ಗೊತ್ತು ಎಂದು ಸಿದ್ದರಾಮಯ್ಯ ಹೇಳಿದರು.

ಗುತ್ತಿಗೆದಾರರ ಸಂಘದಿಂದ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ,
ಅದು ಸತ್ಯವಾಗಿದ್ರೆ ಅವರಿಗೆ ಕೋರ್ಟ್ ಗೆ ಹೋಗುವುದಕ್ಕೆ ಹೇಳಿ,ಅವರಾಗೇ ಏನೂ ಹೇಳಿಲ್ಲಾ,ಯಾರೋ ಇದನ್ನ ಅವರ ಬಳಿ ಹೇಳಿಸುತ್ತಿದ್ದಾರೆ ಎಂದು ತಿಳಿಸಿದರು.

ಐಟಿ ಕಂಪನಿಗಳು ಆಂಧ್ರ ಪಾಲಾದ ವಿಚಾರ ಕುರಿತ ವರದಿಗಾರರ ಪ್ರಶ್ನೆಗೆ,
ಅಯಾ ಕಂಪನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜ್ಯಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ.ಒಂದು ಕಂಪನಿ ಬೇರೆ ರಾಜ್ಯಕ್ಕೆ ಹೋದ ಕೂಡಲೇ ಇಲ್ಲಿನ ವ್ಯವಸ್ಥೆ ಸರಿ ಇಲ್ಲ ಎಂದು ಹೇಳುವುದು ತಪ್ಪು,
ಹೂಡಿಕೆಗಳ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ,
ಹಾಗಾದರೆ ಅವರೆಲ್ಲ ಯಾಕೆ ನಮ್ಮಲ್ಲಿ ಉಳಿದುಕೊಂಡರು ಎಂದು ಸಿಎಂ ಸಮರ್ಥಿಸಿಕೊಂಡರು.

5 ವರ್ಷ ನಮ್ಮ ತಂದೆ ಸಿಎಂ ಆಗಿರುತ್ತಾರೆ ಎಂದು ನಿಮ್ಮ ಪುತ್ರನ ಹೇಳಿದ್ದಾರಲ್ಲಾ ಎಂಬ ವಿಚಾರಕ್ಕೆ ಅವನನ್ನೇ ಉಳಿದ ವಿಚಾರ ಕೇಳಿಕೊಳ್ಳಿ ಎಂದು ಸಿದ್ದರಾಮಯ್ಯ ಹೊರಟು ಬಿಟ್ಟರು.

ಬಿಹಾರ ಚುನಾವಣೆ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ-ಸಿದ್ದರಾಮಯ್ಯ Read More

ಬೆಂಗಳೂರು ಒಂದರಲ್ಲೇ ವರ್ಷಕ್ಕೆ 943 ಟನ್ ಅನ್ನ ವೇಸ್ಟ್ ಆಗುತ್ತಿದೆ-ಸಿಎಂ ಕಳವಳ

ಬೆಂಗಳೂರು: ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು, ಅದಕ್ಕೇ ಅನ್ನಭಾಗ್ಯಯೋಜನೆ ಜಾರಿಗೆ ತಂದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಆಹಾರ ಮತ್ತು ನಾಗರಿಕ‌ ಸರಬರಾಜು ಇಲಾಖೆ ಗುರುವಾರ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ವಿಶ್ವ ಆಹಾರ ದಿನ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಮಾತನಾಡಿದರು.

ಕವಿ ಬೇಂದ್ರೆಯವರು ರೈತರನ್ನು ಅನ್ನಬ್ರಹ್ಮ ಎಂದು ಕರೆದಿದ್ದಾರೆ. ಆದ್ದರಿಂದ ಅನ್ನ ವ್ಯರ್ಥ ಮಾಡುವುದು, ಬಿಸಾಡುವುದು ಅನ್ನಬ್ರಹ್ಮನಿಗೆ ಮಾಡುವ ಅವಮಾನ ಎಂದು ಹೇಳಿದರು.

ನಾವು ಒಂದು ಕಾಲದಲ್ಲಿ ಅನ್ನಕ್ಕಾಗಿ ಅಮೆರಿಕದ ಮೇಲೆ ಅವಲಂಭಿತರಾಗಿದ್ದೆವು. ಈಗ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ.ಇದರ ಜೊತೆಗೆ ಊಟ ವ್ಯರ್ಥ ಮಾಡುವ ಪ್ರಮಾಣವೂ ಹೆಚ್ಚಾಗುತ್ತಿರುವುದು ಬೇಸರ ತರುತ್ತಿದೆ ಎಂದು
ವಿಷಾದಿಸಿದರು.

ಬೆಂಗಳೂರು ಒಂದರಲ್ಲೇ ಪ್ರತೀ ವರ್ಷ 943 ಟನ್ ಆಹಾರ ವೇಸ್ಟ್ ಆಗುತ್ತಿದೆ. ಹೆಚ್ಚೂ ಕಡಿಮೆ 360 ಕೋಟಿ ಮೌಲ್ಯದ ಆಹಾರ ವೇಸ್ಟ್ ಮಾಡುತ್ತಿದ್ದೇವೆ ಎಂದು ಜಿಕೆವಿಕೆ ಅಧ್ಯಯನವನ್ನು ಉಲ್ಲೇಖಿಸಿದರು.
ಗೊತ್ತಿದ್ದೂ ಗೊತ್ತಿದ್ದೂ ಆಹಾರ ವೇಸ್ಟ್ ಮಾಡುವುದು ಅನ್ನಕ್ಕೆ ತೋರಿಸುವ ಅಹಂಕಾರ ಎಂದು ಸಿದ್ದು ಗರಂ ಆಗಿಯೇ ನುಡಿದರು.

ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಕಾಂಗ್ರೆಸ್ ಬದ್ದತೆ. ಹೀಗಾಗಿ ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪ್ರಧಾನಿ ಮನ ಮೋಹನ್ ಸಿಂಗ್. ಆಹಾರ ಭದ್ರತೆ ಕಾಯ್ದೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಬಡವರ ವಿರೋಧಿ ನೀತಿ ಬಿಜೆಪಿಯ ಸಿದ್ಧಾಂತ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಆ ಕಡೆ ಬಿಜೆಪಿಗೂ ಚಪ್ಪಾಳೆ ತಟ್ಟೋದು, ಈ ಕಡೆ ಬಡವರ ಪರ ಕಾರ್ಯಕ್ರಮ ಕೊಟ್ಟ ಕಾಂಗ್ರೆಸ್ಸಿಗೂ ಚಪ್ಪಾಳೆ ತಟ್ಟೋದು ಮಾಡಬೇಡಿ. ಅನ್ನದ ಪರವಾಗಿ ಇರುವ ಕಾಂಗ್ರೆಸ್ ಬದ್ಧತೆಯನ್ನು ಅರ್ಥ ಮಾಡಿಕೊಳ್ಳಿ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಅನ್ನಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಳ ಸಂತೆ ಮಾರಾಟ ತಪ್ಪಿಸಲು 5 ಕೆಜಿ ಅಕ್ಕಿ ಕೊಟ್ಟು ಉಳಿದ ಐದು ಕೆಜಿ ಕಾಳು, ಬೇಳೆ ವಿತರಿಸಲು ತೀರ್ಮಾನಿಸಿದ್ದೇವೆ ಎಂದು ಇದೇ‌ ವೇಳೆ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಒಂದರಲ್ಲೇ ವರ್ಷಕ್ಕೆ 943 ಟನ್ ಅನ್ನ ವೇಸ್ಟ್ ಆಗುತ್ತಿದೆ-ಸಿಎಂ ಕಳವಳ Read More

ಆರ್.ಎಸ್.ಎಸ್.ನಿಷೇಧ: ಪ್ರಿಯಾಂಕ ಖರ್ಗೆ ಹೇಳಿರೋದರಲ್ಲಿ ತಪ್ಪೇನಿದೆ: ಸಿಎಂ

ಮೈಸೂರು: ಸರ್ಕಾರಿ ಸ್ಥಳಗಳಲ್ಲಿ ಆರ್. ಎಸ್.ಎಸ್ ಚಟುವಟಿಕೆಗಳನ್ನು ಕೈಗೊಳ್ಳಬಾರದು,ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ನಿಷೇಧ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಹೇಳಿದ್ದಾರೆ,ಅದರಲ್ಲಿ ತಪ್ಪೇನಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,
ಬೆದರಿಕೆ ಕರೆಗಳು ಬರುತ್ತಿರುವುದಾಗಿ ಪ್ರಿಯಾಂಕ್ ಖರ್ಗೆಯವರು ಖುದ್ದು ತಿಳಿಸಿದ್ದಾರೆ ಇಂಥಾ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಆರ್.ಎಸ್.ಎಸ್.
ನಿಷೇಧದ ಬಗ್ಗೆ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ.
ತಮಿಳುನಾಡಿನಲ್ಲಿ ಯಾವ ರೀತಿ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಮಾಹಿತಿ ತರಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅದನ್ನು ಪರಿಶೀಲಿಸಲಾಗುವುದು, ಪ್ರಿಯಾಂಕ್ ಖರ್ಗೆ ಯವರಿಗೆ ರಕ್ಷಣೆ ಒದಗಿಸಲಾಗುವುದು ಎಂದು ಹೇಳಿದರು.

ದುಷ್ಟ ಶಕ್ತಿಗಳು ಯಾವಾಗಲೂ ಇಂಥದ್ದೇ ಕೆಲಸ ಮಾಡುವುದು. ಬೆದರಿಕೆಗಳಿಗೆ ಪ್ರಿಯಾಂಕ ಅವರು ಹೆದರುವುದಿಲ್ಲ. ನಾನೂ ಹೆಸದರುವುದಿಲ್ಲ ಎಂದು ಸಿಎಂ ತಿಳಿಸಿದರು.

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ತಡವಾಗುತ್ತಿದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಬೆಂಗಳೂರು ನಗರ ಬಿಟ್ಟರೆ ಬೇರೆಲ್ಲಿಯೂ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಎಂದು ಸಿದ್ದು ಉತ್ತರಿಸಿದರು.

ಶಾಸಕರಿಗೆ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಉಚ್ಚ ನ್ಯಾಯಾಲಯಕ್ಕೆ ಶ್ರೀನಿವಾಸಪುರ ಶಾಸಕರು ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಮಂತ್ರಿಗಳು ಜೆಡಿಎಸ್ ನವರು ನಮ್ಮ ಶಾಸಕರಿಗೆ ಅನುದಾನ ನೀಡಿದ್ದರೇ ಎಂದು ಪ್ರಶ್ನಿಸಿದರು.

ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಬೇಕಿದೆ ಎಲ್ಲರಿಗೂ ಅನುದಾನ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಆರ್.ಎಸ್.ಎಸ್.ನಿಷೇಧ: ಪ್ರಿಯಾಂಕ ಖರ್ಗೆ ಹೇಳಿರೋದರಲ್ಲಿ ತಪ್ಪೇನಿದೆ: ಸಿಎಂ Read More

ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧ:ಸಿಎಸ್ ಗೆ ಸಿಎಂ ಸೂಚನೆ

ಬಾಗಲಕೋಟೆ: ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ತಮಿಳುನಾಡು ರಾಜ್ಯದ ಕ್ರಮವನ್ನು ಪರಿಗಣಿಸಿ, ಪರಿಶೀಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈಗಾಗಲೇ ಮುಖ್ಯ ಕಾರ್ಯ ದರ್ಶಿಗಳಿಗೆ ಈ ಕುರಿತು ಸೂಚಿಸಿದ್ದೇವೆ,ಅವರು ಪರಿಶೀಲಿಸಿ ವರದಿ ನೀಡಲಿದ್ದಾರೆ,ನಂತರ ಮುಂದಿನ ಕ್ರಮ ಎಂದು ಹೇಳಿದರು.

ಸಚಿವ ಪ್ರಿಯಾಂಕ ಖರ್ಗೆಯವರು ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸಲು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಆರ್ ಎಸ್ ಎಸ್ ಸಂಘಟನೆ ತನ್ನ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಇದನ್ನು ನಿರ್ಬಂಧಿಸಿದಂತೆ ರಾಜ್ಯದಲ್ಲಿಯೂ ನಿರ್ಬಂಧಿಸಬೇಕು ಎಂದು ಪತ್ರ ಬರೆದಿದ್ದಾರೆ,ಹಾಗಾಗಿ ಈ ಬಗ್ಗೆ ಪರಿಶೀಲಿಸಲು ಸಿಎಸ್ ಗೆ ಸೂಚನೆ ಕೊಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬದಲಾವಣೆಯಲ್ಲಿ ಹೈಕಮಾಂಡ್ ನಿರ್ಧಾರವೇ ಮುಖ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಪಕ್ಷದ ವರಿಷ್ಠರ ಮತ್ತು ಶಾಸಕರ ಅಭಿಪ್ರಾಯ ಬಹಳ ಮುಖ್ಯ. ಶಾಸಕರ ಒಮ್ಮತ ಹಾಗೂ ಹೈಕಮಾಂಡ್ ಆರ್ಶೀವಾದ ಎರಡೂ ಇರಬೇಕು, ಇವತ್ತಿನ ಭೋಜನಕೂಟ ಕಾರ್ಯಕ್ರಮದಲ್ಲಿ ಯಾವುದೇ ವಿಶೇಷತೆ ಇಲ್ಲ. ಸಂಪುಟ ಪುನರ್ರಚನೆಗೂ ಇಂದಿನ ಭೋಜನಕೂಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಶಾಸಕ ಮುನಿರತ್ನ ಮತ್ತು ಡಿ.ಕೆ ಶಿವಕುಮಾರ್ ಅವರ ನಡುವಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ರವರು ನಿನ್ನೆ ಬೆಂಗಳೂರು ನಡಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಲಾಲ್ಬಾಗ್ ನಂತೆ ಮತ್ತಿಕರೆಯ ಜೆ ಪಿಪಾರ್ಕ್ ದಲ್ಲಿಯೂ ಕಾರ್ಯಕ್ರಮವಿತ್ತು. ಶಾಸಕ ಮುನಿರತ್ನರವರು ವೇದಿಕೆಗೆ ಆಗಮಿಸಿ, ತಮ್ಮ ಅಭಿಪ್ರಾಯವನ್ನು ನೀಡಬಹುದಾಗಿತ್ತು. ಆದರೆ ಶಾಸಕರು ತಮ್ಮ ಅಭಿಪ್ರಾಯವನ್ನು ತಿಳಿಸಲಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನವಿತ್ತೇ ಇಲ್ಲವೇ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಸುಧಾರಣೆಯಾಗುತ್ತಿದ್ದು, ಶೀಘ್ರವೇ ಆಸ್ಪತ್ರೆಯಿಂದ ಮನೆಗೆ ತೆರಳಿಲಿದ್ದಾರೆ ಎಂದು ಮುಖ್ಯ ಮಂತ್ರಿಗಳು ಇದೇ ವೇಳೆ ತಿಳಿಸಿದರು.

ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧ:ಸಿಎಸ್ ಗೆ ಸಿಎಂ ಸೂಚನೆ Read More

ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ ಹಂಪನಾ – ಸಿಎಂ

ಬೆಂಗಳೂರು: ಹಂಪನಾ ಅವರು ಕೇವಲ ಸಾಹಿತ್ಯ ರಚನೆಗಾಗಿ ಸಾಹಿತಿಯಾದವರಲ್ಲ, ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು.

ಗಾಂಧಿ ಭವನದಲ್ಲಿ ನಡೆದ “ಹಂಪನಾ 90” ಸಾಹಿತ್ಯ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ,
ಹಂಪನಾ ಅವರು ಸಮಾಜಮುಖಿ ಆಗುವ ಮೂಲಕ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ,ಅವರು ಕನ್ನಡಿಗರ ಹೆಮ್ಮೆಯ ನಾಗರಾಜಯ್ಯ ಎಂದು ಕೊಂಡಾಡಿದರು.

ನಾಗರಾಜಯ್ಯ ಅವರ ಸಾಹಿತ್ಯ ಮತ್ತು ಬದುಕಿಗೆ ನಾನು ಸಾಕ್ಷಿ ಆಗಿರುವುದು ನನ್ನ ಜೀವನದ ಸೌಭಾಗ್ಯ,ಅವರ ಬದುಕು ಮತ್ತು ಬರಹ ಹಾಗೂ ಸಾರ್ಥಕತೆ ಇಡೀ ಸಮಾಜಕ್ಕೆ ಮಾರ್ಗದರ್ಶನ ಎಂದು ಸಿಎಂ ಹೇಳಿದರು.

ಸಾಹಿತ್ಯ ಕೃಷಿಯಲ್ಲಿ ಮಾತ್ರವಲ್ಲದೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ.ಅವರ ಕೆಲಸ ಕನ್ನಡ ಜಗತ್ತಿಗೆ ತಲುಪಿರುವುದು ಅತ್ಯಂತ ಮಹತ್ವದ ಸಂಗತಿ ಎಂದು ಸಿಎಂ ನುಡಿದರು.

ಭಾಷಾ ಶಾಸ್ತ್ರ, ಸಂಶೋಧನೆ, ಮಕ್ಕಳ ಸಾಹಿತ್ಯ, ವಿಮರ್ಷೆ ಸೇರಿ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿ ಬೆರಗು ಮೂಡಿಸುವ ಕೆಲಸ ಮಾಡಿದ್ದಾರೆ,ಹಂಪನಾ ಅವರು ಒಳ್ಳೆ ವಾಗ್ಮಿ. ಅಧ್ಯಾಪಕರೂ ಆಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರೂ ಆಗಿದ್ದರು. ನಾನು ಸಾಹಿತ್ಯದ ವಿದ್ಯಾರ್ಥಿ ಅಲ್ಲ. ಆದರೂ ಸಾಹಿತ್ಯ ವಲಯದ ಒಡನಾಟ ಹೆಚ್ಚಾಗಿದ್ದು ನಾನು ಹಂಪನಾ ಅವರ ಅಭಿಮಾನಿ ಎಂದು ಸಿದ್ದರಾಮಯ್ಯ ಹೇಳಿದರು.

ಕಮಲಾ ಮತ್ತು ಹಂಪನಾ ಅವರು ಅದ್ಭುತ ದಂಪತಿ. ಇಬ್ಬರೂ ಸಾಹಿತ್ಯ ಕೃಷಿಯಲ್ಲಿ ಸಾಧನೆ ಮಾಡಿದವರು. ಇಬ್ಬರೂ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ ಮುಖ್ಯ ಮಂತ್ರಿಗಳು,ಹಂಪನಾ ಅವರು ಇನ್ನೂ ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕಲಿ ಎಂದು ಹಾರೈಸಿದರು.

ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ ಹಂಪನಾ – ಸಿಎಂ Read More

ಹುಲಿಗಳಿಗೆ ವಿಷಹಾಕಿ ಕೊಲ್ಲುವವರಿಗೆ ಕಠಿಣ ಕ್ರಮ:ಸಿಎಂ ಹೇಳಿಕೆಗೆ ತೇಜಸ್ವಿ ಸ್ವಾಗತ

ಮೈಸೂರು: ಕನ್ನಡ ಕ್ರಾಂತಿದಳದ ನಿರಂತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಲಿಗಳನ್ನು ವಿಷಹಾಕಿ ಕೊಲ್ಲುವವರಿಗೆ ಕಠಿಣ ಕಾನೂನು ಕ್ರಮ ಶತ ಸಿದ್ಧ ಎಂದು ಹೇಳಿರುವುದನ್ನು ಸ್ವಾಗತಿಸುವುದಾಗಿ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ
ಹೇಳಿದ್ದಾರೆ.

ನಿರಂತರವಾಗಿ ಹುಲಿಗಳಿಗೆ ವಿಷಹಾಕಿ ಕೊಲ್ಲುತ್ತಿರುವುದರ ವಿರುದ್ಧ ತೇಜಸ್ವಿ ನಾಗಲಿಂಗಸ್ವಾಮಿ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ ಹಾಗೂ ಅನೇಕ ಬಾರಿ ಪತ್ರ ಬರೆಯುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಹುಲಿಗಳು ಮತ್ತು ಆನೆಗಳ ಹತ್ಯೆ ಮಾಡುವವರ ವಿರುದ್ಧ ನಿರಂತರವಾಗಿ ಸಮರಸಾರುತ್ತ ಬಂದಿದಿದ್ದೇವೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಇದೆಲ್ಲದರ ಪರಿಣಾಮವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕೆಟ್ ಹಾಲ್ ನಲ್ಲಿ ನಡೆದ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಹುಲಿಗಳನ್ನು ವಿಷಾಹಾಕಿ ಹತ್ಯೆ ಮಾಡುವುದುನ್ನು ರಾಜ್ಯ ಸರ್ಕಾರ ಸಹಿಸಲ್ಲ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಶತಸಿದ್ಧ ಎಂದು ಕಠಿಣವಾಗಿ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿಯವರ ಈ ನಿಲುವಿನಿಂದ ನನಗೆ ಅತ್ಯಂತ ಸಂತಸ ತಂದಿದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಸ್ವಾಗತಿಸಿದ್ದಾರೆ.

ಆದರೆ ಮುಖ್ಯಮಂತ್ರಿಗಳ‌ ಈ ನಿರ್ಧಾರ ಹೇಳಿಕೆಗೆ ಮಾತ್ರ ಸಿಮೀತ ವಾಗಬಾರದು ಹುಲಿಗಳು ಮತ್ತು ಆನೆಗಳ ಹತ್ಯೆ ಪ್ರಕರಣದಲ್ಲಿ ಈ ಗಿರುವ ಕಾನೂನನ್ನು ತಿದ್ದುಪಡಿ ಮಾಡಿ ಹೇಳಿದ ಹಾಗೆ ಅತ್ಯಂತ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ತೇಜಸ್ವಿ ಮನವಿ ಮಾಡಿದ್ದಾರೆ.

ಆನೆಗಳು ಮತ್ತು ಹುಲಿಗಳು ನಮ್ಮ ರಾಜ್ಯದ ಮೊದಲ ಮತ್ತು ಎರಡನೇಯ ಸ್ಥಾನದಲ್ಲಿದೆ ಇವುಗಳ ಸಂತತಿ ಬೇಟೆಗಾರರ ದುಷ್ಕೃತ್ಯ ದಿಂದ ನಾಶವಾಗದಂತೆ ಕಠಿಣ ಕಾನೂನು ಜಾರಿಗೆ ತರಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಹುಲಿಗಳಿಗೆ ವಿಷಹಾಕಿ ಕೊಲ್ಲುವವರಿಗೆ ಕಠಿಣ ಕ್ರಮ:ಸಿಎಂ ಹೇಳಿಕೆಗೆ ತೇಜಸ್ವಿ ಸ್ವಾಗತ Read More

ಪ್ರಾಣಿ ಸಂಪತ್ತು ನಾಶಪಡಿಸುವವರ ವಿರುದ್ಧ ಕಠಿಣ ಕ್ರಮ-ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು: ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ, ಹಾಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪರಿಸರ, ಅರಣ್ಯ ಸಂರಕ್ಷಕರಿಗೆ ಮುಖ್ಯಮಂತ್ರಿ ಪದಕ ವಿತರಿಸಿ ಸಿಎಂ ಮಾತನಾಡಿದರು.

ಸಾಕಿದ ಹಸುವನ್ನು ತಿಂದಿದೆ ಎಂಬ ಕಾರಣಕ್ಕೆ ಹುಲಿಗಳಿಗೆ ವಿಷ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಯಾರೇ ಅರಣ್ಯ ಮತ್ತು ಪ್ರಾಣಿ ಸಂಪತ್ತನ್ನು ಕೊಲ್ಲಲು ಮುಂದಾದರೆ ಅವರು ಎಷ್ಟೇ ದೊಡ್ಡವರಾಗಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದರು.

ಅರಣ್ಯ ಪರಿಸರ ಆರೋಗ್ಯಕರವಾಗಿ ವಿಸ್ತರಣೆ ಆದಷ್ಟೂ ಮನುಷ್ಯ ಪರಿಸರ ಹೆಚ್ಚು ಆರೋಗ್ಯಕರವಾಗಿರುತ್ತದೆ. ಅರಣ್ಯದ ಉಳಿವು ಭೂಮಿಯ ಉಳಿವು ಎನ್ನುವುದನ್ನು ಮರೆಯಬಾರದು ಎಂದು ತಿಳಿಹೇಳಿದರು.

ಆನೆ ಮತ್ತು ಹುಲಿ ಸಂಪತ್ತಿನಲ್ಲಿ ನಮ್ಮ ರಾಜ್ಯ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ. ಇದರ ಜೊತೆಗೆ ಪ್ರಾಣಿ ಮತ್ತು ಮನುಷ್ಯರ ಸಂಘರ್ಷ ತಪ್ಪಬೇಕು, ಪ್ರಾಣಿಗಳು ಕಾಡು ಬಿಟ್ಟು ಹೊರಗೆ ಏಕೆ ಬರುತ್ತಿವೆ ಎಂಬ ಬಗ್ಗೆ ಅಧ್ಯಯನಗಳು ನಡೆದು ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ ಎಂದು ಮುಖ್ಯ ಮಂತ್ರಿಗಳು ಹೇಳಿದರು.

ದಿನೇ ದಿನೇ ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದರೆ ಮನುಷ್ಯ ಕುಲ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಅರಣ್ಯದ ಉಳಿವು ಮನುಷ್ಯನ ಉಳಿವು ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ, ಅರಣ್ಯ ರಾಯಬಾರಿ ಅನಿಲ್ ಕುಂಬ್ಳೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಾಣಿ ಸಂಪತ್ತು ನಾಶಪಡಿಸುವವರ ವಿರುದ್ಧ ಕಠಿಣ ಕ್ರಮ-ಸಿದ್ದರಾಮಯ್ಯ ಎಚ್ಚರಿಕೆ Read More