ಸಿಎಂ ವಿರುದ್ಧ ಹೇಮಾ ನಂದೀಶ್ ಕಿಡಿ
ಮೈಸೂರು: ಸಿಎಂ ಸಿದ್ದರಾಮಯ್ಯ
ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಏಕವಚನದಿಂದ ಹಾಗೂ ಅಗೌರವದಿಂದ ಸಂಭೋದನೆ ಮಾಡಿರುವುದು ಕಾಂಗ್ರೆಸ್ ಮಹಿಳಾ ವಿರೋಧಿ ಸಂಸ್ಕೃತಿಗೆ ಹಿಡಿದ ಕೈಗನ್ನಡಿ ಎಂದು ಬಿಜೆಪಿ ಮುಖಂಡರಾದ ಹೇಮಾನಂದೀಶ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಿದ್ದರಾಮಯ್ಯನವರು ಇತ್ತೀಚೆಗೆ ಹೇಳಿಕೆಯೊಂದರಲ್ಲಿ ಮಿಸ್ಟರ್, ಮಿಸೆಸ್ ಎಂತೋಳೋ ಅವಳು ನಿರ್ಮಲಾ ಸೀತಾರಾಮನ್ ಎಂದು ಸಂಭೋದಿಸುವ ಮೂಲಕ ಮಹಿಳೆಯರಿಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆ ಅಥವಾ ಯಾರೇ ಆಗಲಿ ಮಾತನಾಡುವಾಗ ಗೌರವಯುತವಾಗಿ ಮಾತನಾಡಬೇಕು ಎಂಬ ಪರಿಜ್ಞಾನ ಸಿಎಂ ಸ್ಥಾನದಲ್ಲಿ ಇರುವವರಿಗೆ ಇಲ್ಲದಿರುವುದು ಅತ್ಯಂತ ದುರಾದೃಷ್ಟಕರ ಮತ್ತು ದುರಂಹಕಾರವನ್ನು ಎತ್ತಿ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಬಗ್ಗೆ ಮಾತನಾಡುವಾಗಲೂ ಇದೇ ರೀತಿ ಏಕವಚನದಲ್ಲಿ ಎಂತವಳೊ ಅವಳು ಎಂದು ಸಂಭೋದಿಸುವ ಧೈರ್ಯ, ತಾಕತ್ತು ಸಿದ್ದರಾಮಯ್ಯನವರಿಗೆ
ಇದೇಯಾ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಪಕ್ಷದ ಮಹಿಳಾ ಹೈಕಮಾಂಡ್ ಮುಂದೆ ಕೈಕಟ್ಟಿ ಮಾತನಾಡುವ ಸಿದ್ದರಾಮಯ್ಯನವರು ಬೇರೆ ಮಹಿಳೆಯರ ಬಗ್ಗೆ ಮಾತನಾಡುವಾಗ ಏಕವಚನದಲ್ಲಿ ಮಾತನಾಡುವುದು ಮಹಿಳೆಯರಿಗೆ ಮಾಡುವ ಅಪಮಾನ ಮತ್ತು ಅತ್ಯಂತ ಖಂಡನೀಯ ವಿಚಾರ ಎಂದಿದ್ದಾರೆ.
ಮಹಿಳೆಯರನ್ನು ತುಚ್ಛವಾಗಿ ಕಾಣುವ ಕಾಂಗ್ರೇಸ್ ಪಕ್ಷದ ಈ ಮನಸ್ಥಿತಿಯನ್ನು ಕರ್ನಾಟಕದ ಸ್ವಾಭಿಮಾನಿ ಮಹಿಳೆಯರು ಕ್ಷಮಿಸುವುದಿಲ್ಲ.
ಪದೇ ಪದೇ ಭಾರತೀಯ ಜನತಾ ಪಕ್ಷಕ್ಕೆ ನಿಮ್ಮದು ಮನುವಾದದ ಸಂಸ್ಕೃತಿ ಎಂದು ಆಧಾರ ರಹಿತವಾಗಿ ಮಾತನಾಡುವ ಸಿದ್ದರಾಮಯ್ಯನವರದ್ದು ಯಾವ ಸಂಸ್ಕೃತಿ ಎಂದು ಹೇಮಾ ನಂದೀಶ್ ಪ್ರಶ್ನಿಸಿದ್ದಾರೆ.
ಇದು ಮನುವಾದನಾ, ಸಿದ್ದರಾಮಯ್ಯವಾದನಾ ಅಥವಾ ರಾಹುಲ್ ಗಾಂಧಿ ವಾದನಾ, ಸಿಎಂ ತತ್‌ಕ್ಷಣವೇ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದ್ದಾರೆ.