ನನ್ನದು ಕೃಷ್ಣತತ್ತ್ವ, ಕಾಂಗ್ರೆಸ್ ಪಕ್ಷದ್ದು ಕಂಸತತ್ತ್ವ:ಹೆಚ್ ಡಿ ಕೆ ತಿರುಗೇಟು

ನವದೆಹಲಿ: ಭಗವದ್ಗೀತೆಯನ್ನು ಶಾಲಾ ಮಕ್ಕಳಿಗೆ ಬೋಧಿಸಬೇಕು ಎಂದು ಪುನರುಚ್ಚರಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು,ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ
ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಹೆಚ್ ಡಿ ಕೆ,ನನ್ನನ್ನು ಮನುವಾದಿ ಎಂದಿರುವ ಮುಖ್ಯಮಂತ್ರಿ, ಸೈದ್ಧಾಂತಿಕ ಅಧಃಪತನ ಎಂದು ತಾಳ ಹಾಕಿದ ಸಚಿವ ಮಹದೇವಪ್ಪ, ಇವರಿಬ್ಬರೂ ಶಾಲಾ ಮಕ್ಕಳಿಗೇನು ಬೋಧಿಸುತ್ತಾರೆ ಎಂಬುದನ್ನು ಹೇಳಲಿ ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ ಎಂದು ಕಾರವಾಗಿ ಟೀಕಿಸಿದ್ದಾರೆ.

ಭಗವದ್ಗೀತೆ ಜಗದ ಬೆಳಕು, ಅರಿವು. ಸನ್ಮಾರ್ಗದ ದೀವಿಗೆ. ಆದರ್ಶಗಳ ಮಹಾಸಾರ. ಮಕ್ಕಳನ್ನು ಬಾಲ್ಯದಿಂದಲೇ ಒಳ್ಳೇ ಮಾರ್ಗದಲ್ಲಿ ನಡೆಸುವ ಸುದುದ್ದೇಶದಿಂದ ನಾನು ಕೇಂದ್ರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದು ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎಂದು ವಿನಂತಿಸಿದ್ದೇನೆ. ಬಹುಶಃ; ಮಹದೇವಪ್ಪನವರಿಗೆ ಭಗವದ್ಗೀತೆಯ ಸಾರ ಗೊತ್ತಿಲ್ಲ. ಅವರಿಗೆ ಇನ್ನಾವುದೋ ಗ್ರಂಥದ ಸಾರ ಗಾಢವಾಗಿ ಇಳಿದಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ನಾನೂ ಸೇರಿ ಜನಪ್ರತಿನಿಧಿಗಳೆಲ್ಲರೂ ಪ್ರಮಾಣ ಸ್ವೀಕರಿಸುವುದು ಸಂವಿಧಾನಬದ್ಧವಾಗಿಯೇ. ದೇವರು, ತಂದೆ ತಾಯಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುತ್ತೇವೆ. ಇದು ಕೂಡ ಸನ್ಮಾರ್ಗವೇ. ಹಾಗಾದರೆ ಮಹದೇವಪ್ಪನವರ ಮಾರ್ಗ ಯಾವುದು ಕಂಸ ಮಾರ್ಗವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಹದೇವಪ್ಪನವರೇ.. ನಿಮಗೆ ತಿಳಿದಿರಲಿ. ಇವತ್ತು ಭಾರತದ ರಾಜನೀತಿ ನಿಂತಿರುವುದೇ ಕೃಷ್ಣತತ್ತ್ವದ ಮೇಲೆ. ಸಮರ, ರಾಜಕೀಯ, ಜ್ಞಾನ, ಆಡಳಿತ, ಮನುಷ್ಯ ಸಂಬಂಧಗಳು ಎಲ್ಲಕ್ಕೂ ಭಗವದ್ಗೀತೆಯೇ ದೀವಿಗೆ. ಕೃಷ್ಣಬೋಧೆ ಸಾರ್ವಕಾಲಿಕ, ಭಗವದ್ಗೀತೆ ಕಾಲಾತೀತ. ನಿಮ್ಮನ್ನು ಅಜ್ಞಾನಿ ಎನ್ನುವುದು ನನಗೆ ಇಷ್ಟವಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಎಂದು ಸದಾ ಜಪಿಸುವ ನೀವು, ಭಗವದ್ಗೀತೆಯ ಜತೆಗೆ ರಾಮಾಯಣ, ಮಹಾಭಾರತವನ್ನೂ ಓದಿ. ಇದು ನನ್ನ ಸಲಹೆಯಷ್ಟೇ. ಭಗವದ್ಗೀತೆ ಓದಬೇಡಿ ಎಂದು ನಾನೆಂದೂ ಹೇಳಿಲ್ಲ,ಹೇಳುವುದೂ ಇಲ್ಲ ಎಂದು ಹೆಚ್ ಡಿ ಕೆ ತಿಳಿಸಿದ್ದಾರೆ.

ನನ್ನದು ಕೃಷ್ಣತತ್ತ್ವ, ಕಾಂಗ್ರೆಸ್ ಪಕ್ಷದ್ದು ಕಂಸತತ್ತ್ವ:ಹೆಚ್ ಡಿ ಕೆ ತಿರುಗೇಟು Read More

ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಬೇಡಿ: ಸಿದ್ದರಾಮಯ್ಯ

ಮಂಗಳೂರು: ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನವನ್ನು ಪಡೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಫೇಸ್ ಮತ್ತು ಎಐ ಉನ್ನತ ಅಧ್ಯಯನ ಕೇಂದ್ರದ ಶಿಲಾನ್ಯಾಸ ಫೇಸ್ ಟ್ರೈಡ್ ಪಾರ್ಕ್ ಮತ್ತು ಫೇಸ್ ಸ್ಪೋರ್ಟ್ಸ ಅರೇನಾ ಶಿಲಾನ್ಯಾಸ ಹಾಗೂ ಪೇಸ್ ಕೇರ್ಸ್ ಸಮುದಾಯ ಸೇವೆ ಯೋಜನೆಗಳನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.
ಪೇಸ್ ಗ್ರೂಪ್ನ ಸಂಸ್ಥಾಪಕರಾದ ಡಾ.ಪಿ.ಎ.ಇಬ್ರಾಹಿಂ ಅವರ ದೂರದೃಷ್ಟಿಯ ಫಲವಾಗಿ ಭಾರತ ಹಾಗೂ ವಿದೇಶಗಳಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ಸ್ಥಾಪಿತವಾಗಿದ್ದು, ಸುಮಾರು 36,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ದೊಡ್ಡಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಪೇಸ್ ಸಂಸ್ಥೆ , ಉತ್ತಮ ಗುಣಮಟ್ಟದ ವಿದ್ಯಾಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.
ವಿದ್ಯೆ ಪಡೆದ ನಂತರ ಸಮಾಜಕ್ಕೆ ನೀಡುವ ಕೊಡುಗೆ ಬಗ್ಗೆ ವಿದ್ಯಾರ್ಥಿಗಳು ಗಮನಹರಿಸಬೇಕು. ಆಧುನಿಕ ಶಿಕ್ಷಣದ ಜೊತೆಗೆ ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನವನ್ನೂ ಹೊಂದಿರಬೇಕು. ಆಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಲು ಸಾಧ್ಯ. ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಲೀ , ಅಂಧಶ್ರದ್ಧೆಯ ಪಾಲನೆಯಾಗಲಿ ಮಾಡಬಾರದು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.
ಕೃತಕ ಬುದ್ಧಿಮತ್ತೆ ಕಲಿತು ಹಣೆಬರಹ ಅಂದರೆ ಅದು ವಿದ್ಯೆಯೇ ಅಲ್ಲ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತ ವಿದ್ಯೆ ಅಗತ್ಯವಿದೆ,ಸ್ವಾತಂತ್ರ್ಯ, ಸಮಾನತೆ, ಭಾತೃತ್ವವನ್ನು ನಮ್ಮ ಸಂವಿಧಾನ ಸಾರುತ್ತದೆ. ನಾವು ಏನೇ ಕಲಿತರೂ ವೈಚಾರಿಕತೆ ವೈಜ್ಞಾನಿಕತೆಯನ್ನು ಮೈಗೂಡಿಸಿಕೊಳ್ಳಬೇಕು . ಪ್ರತಿಯೊಬ್ಬರೂ ಮೊದಲು ಮಾನವನಾಗಬೇಕು ಎಂದು ತಿಳಿಸಿದರು.
ಪರಸ್ಪರ ಪ್ರೀತಿಸಬೇಕೆಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆದರೆ ನಮ್ಮ ಸಮಾಜದಲ್ಲಿ ಅಸಮಾನತೆ ತೊಲಗಿಸುವುದು ಸುಲಭ ಸಿಎಂ ನುಡಿದರು.

ಮೂಢನಂಬಿಕೆಗಳಿರುವ ಸಮಾಜದ ಜೊತೆ ರಾಜಿಯಾಗಬೇಡಿ: ಸಿದ್ದರಾಮಯ್ಯ Read More

ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ-ಸಿಎಂ ಗೆ ಅಶೋಕ್ ಟಾಂಗ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನವರೇ,
ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸುಮಾರು 20 ವರ್ಷಗಳಾದ ಮೇಲೆ ಮೊಟ್ಟಮೊದಲ ಬಾರಿಗೆ ಡಿಸಿಎಂ ಡಿ‌.ಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ, ನಾಟಿಕೋಳಿ ತಿಂಡಿ ತಿಂದು ಹೋಮ್ ಟೂರ್ ಮಾಡಿಕೊಂಡು ಬಂದಿದ್ದೀರಿ.ಮುಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ಎಲ್ಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಛೇಡಿಸಿದ್ದಾರೆ.
ಯಾರ ಜೊತೆ ಅಂತ ನಿಮ್ಮ ಹೈಕಮಾಂಡ್ ಏಜೆಂಟ್ ವೇಣುಗೋಪಾಲ್ ಅವರು ಆದೇಶ ಕೊಡುವುದಕ್ಕೂ ಮುಂಚೆ ಒಮ್ಮೆ ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ ಎಂದು ಟ್ವೀಟ್ ಮಾಡಿ‌ ಸಿಎಂ ಕಾಲೆಳೆದಿದ್ದಾರೆ.
ಶೌಚಾಲಯಗಳೇ ಇಲ್ಲದ ಶಾಲೆಗಳು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳು, ಬಿದ್ದು ಹೋಗುತ್ತಿರುವ ಗೋಡೆಗಳು, ಶಿಕ್ಷಕರಿಲ್ಲದ ತರಗತಿಗಳನ್ನು ಒಮ್ಮೆ ಕಣ್ತುಂಬಿಕೊಂಡು ಬನ್ನಿ ಸಿದ್ದರಾಮಯ್ಯನವರೇ.
ಇಂತಹ ಲಜ್ಜೆಗೆಟ್ಟ ಸರ್ಕಾರವನ್ನ ಇಡೀ ಪ್ರಪಂಚದ ಇತಿಹಾಸದಲ್ಲೇ ಕಾಣಲು ಸಾಧ್ಯವಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.

ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ-ಸಿಎಂ ಗೆ ಅಶೋಕ್ ಟಾಂಗ್ Read More

ಮೌಢ್ಯ ಹೋಗಲಾಡಿಸಲು ಚಾ.ನಗರಕ್ಕೆ ಬರುತ್ತಿದ್ದೇನೆ:ಸಿದ್ದರಾಮಯ್ಯ

ಚಾಮರಾಜನಗರ: ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ. ಐದು ವರ್ಷಗಳಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚಾಮರಾಜನಗರದಲ್ಲಿ ಅಖಿಲ ಭಾರತ ಸಹಕಾರಿ ಸಂಘದ ಸಮಾರೋಪ ಸನಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ವೇಳೆ
ಮಾತನಾಡಿದ ಸಿಎಂ,
ಮೂಢನಂಬಿಕೆ ಮತ್ತು ಕಂದಾಚಾರಗಳಲ್ಲಿ ನನಗೆ ನಂಬಿಕೆ ಇಲ್ಲ,ಹಾಗಾಗಿಯೇ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುತ್ತೇನೆ ಎಂದು ಹೇಳಿದರು.

ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಮಾನವಾಗಿ ಕಾಣುವೆ, ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ. ಆ ಮೌಢ್ಯವನ್ನು ಹೋಗಲಾಡಿಸಲು ಇಲ್ಲಿಗೆ ಭೇಟಿ ನೀಡುತ್ತಲೇ ಇದ್ದೇನೆ, ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ ಎಂದು ವಿಶ್ವಾಸದಿಂದ ನುಡಿದರು.

ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ನವೆಂಬರ್ ಕ್ರಾಂತಿ ಎಂಬ ವಿಷಯವನ್ನು ಮಾಧ್ಯಮದವರೇ ಸೃಷ್ಟಿಸಿದರು. ಜನರ ಆಸೆಯಂತೆ ಐದು ವರ್ಷ ಸರ್ಕಾರ ನಡೆಸಿ ನಂತರವೂ ಪುನ: ಕಾಂಗ್ರೆಸ್ ಪಕ್ಷವೇ ಆಯ್ಕೆಯಾಗಿ ಬರಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಂಪುಟ ಪುನರ್ರಚನೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಬೇಕಿದೆ. ಒಟ್ಟು 34 ಸಚಿವರ ಸ್ಥಾನವಿದ್ದು, ಅದರಲ್ಲಿ ಎರಡು ಸ್ಥಾನಗಳು ಖಾಲಿಯಿದೆ. ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಈ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆದ ಬ್ಯಾಂಕ್ ದರೋಡೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಳುವಿನ ಬಗ್ಗೆ ಸುಳಿವು ಸಿಕ್ಕಿದೆ, ಘಟನೆಗೆ ಬಳಸಿದ ಕಾರು ಪೊಲೀಸರಿಗೆ ದೊರಕಿದೆ. ಬ್ಯಾಂಕ್ ದರೋಡೆಯ ಅಪರಾಧಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದರು.

ಮೌಢ್ಯ ಹೋಗಲಾಡಿಸಲು ಚಾ.ನಗರಕ್ಕೆ ಬರುತ್ತಿದ್ದೇನೆ:ಸಿದ್ದರಾಮಯ್ಯ Read More

ರಾಹುಲ್ ಗಾಂಧಿ ಅವರು ಸಮಯ ಕೊಟ್ಟರೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ:ಸಿಎಂ

ಮೈಸೂರು: ರಾಹುಲ್ ಗಾಂಧಿ ಅವರು ಸಮಯ ಕೊಟ್ಟರೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡುತ್ತೇನೆ ಇಲ್ಲದಿದ್ದರೆ ಇಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,ರಾಹುಲ್ ಗಾಂಧಿಯವರ ಸಮಯ ಕೇಳಿದ್ದೇನೆ
ಸಮಯ ಕೊಟ್ಟರೆ ಅಲ್ಲೇ ಉಳಿದುಕೊಂಡು ಚರ್ಚೆ ಮಾಡಿ ಬರುತ್ತೇನೆ ಎಂದು ಹೇಳಿದರು.

ರಾಜ್ಯದೆಲ್ಲೆಡೆ ನವೆಂಬರ್ ಕ್ರಾಂತಿ ಸದ್ದು ಮಾಡುತ್ತಿರುವ ಹೊತ್ತಲ್ಲೇ ಸಿದ್ದರಾಮಯ್ಯ ಅವರು ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ.ಆದರೆ ಅವರಿಗೆ ಇನ್ನೂ ಹೈಕಮಾಂಡ್ ಭೇಟಿ ಸಮಯ ಸಿಕ್ಕಿಲ್ಲ.ಇದೀಗ ಇದು‌ ಚರ್ಚೆಗೂ‌ ಗ್ರಾಸ ಒದಗಿಸಿದೆ.

ನವೆಂಬರ್‌ 15ಕ್ಕೆ ದೆಹಲಿಗೆ ಹೋಗುತ್ತಿದ್ದೇನೆ,
ಕಪಿಲ್ ಸಿಬಲ್ ಅವರ ಕಾರ್ಯಕ್ರಮ ಇದೆ
ಹಾಗಾಗಿ ದೆಹಲಿಗೆ ಹೋಗುತ್ತಿದ್ದೇನೆ,
ಅವತ್ತೆ ಹೋಗಿ ಅವತ್ತೆ ವಾಪಸ್ ಬರುವ ಪ್ಲ್ಯಾನ್ ಇದೆ. ಆದರೆ ರಾಹುಲ್ ಗಾಂಧಿ ಅವರ ಸಮಯ ಕೇಳಿದ್ದೇನೆ ಅವರು
ಸಮಯ ಕೊಟ್ಟರೆ ಅಲ್ಲೇ ಉಳಿದುಕೊಂಡು ಅವರನ್ನು ಮಾತನಾಡಿಸಿಯೇ ಬರುತ್ತೇನೆ ಇಲ್ಲದಿದ್ದರೆ ವಾಪಸುಬರುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರಾಹುಲ್ ಗಾಂಧಿ ಅವರು ಸಮಯ ಕೊಟ್ಟರೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ:ಸಿಎಂ Read More

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ ಮಾಡಬೇಕು-ಸಿಎಂ

ಮೈಸೂರು: ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ ಮಾಡಬೇಕು. ಕಚೇರಿಯಲ್ಲಿದ್ದು ಜನರ ಸಮಸ್ಯೆ ಆಲಿಸಬೇಕು ಎಂದು ಕೆಡಿಪಿ ಸಭೆಯಲ್ಲಿ ಸ್ಪಷ್ಟ ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮಂಗಳವಾರ ನಗರದಲ್ಲಿ ಮಾತನಾಡಿದ ಸಿಎಂ, ಮೈಸೂರಲ್ಲಿ ನಿನ್ನೆ ಕೆಡಿಪಿ ಸಭೆ ಮಾಡಿದ್ದೇನೆ. ಕಳೆದ ಆರು‌ ತಿಂಗಳ ಬಳಿಕ ಸಭೆ ಮಾಡಲಾಗಿದೆ,ನಿರಂತರ 10 ಗಂಟೆಗಳ ಕಾಲ ಅಧಿಕಾರಿಗಳ ಜೊತೆ ಸಭೆ ನಡೆಯಿತು. ನಾನು ಬೆಂಗಳೂರಲ್ಲಿ‌ರಲಿ, ಎಲ್ಲೇ ಇರಲಿ ಸಮಸ್ಯೆ ಹೊತ್ತು ನೂರಾರು ಜನ ಬರುತ್ತಾರೆ. ಕಾರ್ಯಕ್ರಮಕ್ಕೆ ಹೋಗುವುದಿದ್ದರೆ ದಿನವಿಡಿ ಕಾದಿರುತ್ತಾರೆ. ರಾತ್ರಿ 9 ಗಂಟೆಗೆ ಬ‌ಂದರೂ ಕಾಯುತ್ತಿರುತ್ತಾರೆ‌ ಎಂದು ವಿಷಾದಿಸಿದರು.

ಬಹುತೇಕ ಜನರ ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಇತ್ಯರ್ಥವಾಗುತ್ತವೆ. ಹೆಚ್ಚಾಗಿ ಕೃಷಿ ಇಲಾಖೆಗೆ ಸಂಬಂಧಿಸಿದ್ದೇ ಇರುತ್ತದೆ. ಪಹಣಿ, ಪೋಡಿ ಸೇರಿ ಹಲವು ವಿಚಾರಗಳು ಇರುತ್ತದೆ. ವೈಯಕ್ತಿಕ ಕಾರಣ ಇಟ್ಟುಕೊಂಡು ಬರುವುದು ಕಡಿಮೆ. ಪೊಲೀಸ್ ಇಲಾಖೆಯ ಹಲವು ಸಮಸ್ಯೆಗಳು ಜನರನ್ನ ಕಾಡುತ್ತವೆ. ಈ ಕಾರಣಕ್ಕೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ.

ಅಧಿಕಾರಿಗಳು ಜನರನ್ನ ಭೇಟಿ ಮಾಡಬೇಕು. ಕಚೇರಿಯಲ್ಲಿದ್ದು ಜನರ ಸಮಸ್ಯೆ ಆಲಿಸಬೇಕು. ಕಾನೂನು ರೀತಿ ಅಗತ್ಯಕ್ರಮ ಕೈಗೊಳ್ಳಬೇಕು. ಅನಗತ್ಯವಾಗಿ ಜನರನ್ನ ಅಲಿಸುವುದು ದೊಡ್ಡ ಅಪರಾಧ. ಜನರೇ ಪ್ರಜಾಪ್ರಭುತ್ವದಲ್ಲಿ ಪ್ರಭುಗಳು. ಜನರಿಗೆ ಈ ಕುರಿತು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದ ಸಿಎಂ ತಿಳಿಸಿದರು.

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ ಮಾಡಬೇಕು. ಕೆಲವರು ಕೇಂದ್ರ ಸ್ಥಾನದಲ್ಲಿ ವಾಸ ಮಾಡುತ್ತಿಲ್ಲ. ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ ಹೋಗುತ್ತಾರೆ. ಇದು ಸರಿಯಾದ ಪದ್ಧತಿಯಲ್ಲ ಎಂದು
ಗ್ರಾಪಂ ಪಿಡಿಒ,ಅಧಿಕಾರಿಗಳು, ತಾಲ್ಲೂಕು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಹೇಳಿದರು.

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ ಮಾಡಬೇಕು-ಸಿಎಂ Read More

ರಾಜ್ಯದಲ್ಲೆ ಕಟ್ಟೆಚ್ಚರಕ್ಕೆ ಸಿಎಂ ಸೂಚನೆ

ಮೈಸೂರು: ದೆಹಲಿಯಲ್ಲಿ ಕಾರು ಸ್ಫೋಟ ಬೆನ್ನಲ್ಲೇ ಮೈಸೂರು,ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಆದೇಶಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,ದೆಹಲಿ ಸ್ಪೋಟದಲ್ಲಿ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿದರು.

ಸ್ಪೋಟದ ವಿಷಯ ತಿಳಿಯಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.ಸರಿಯಾದ ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯಾದಂತ ಕಟ್ಟೆಚ್ಚರ ವಹಿಸುವಂತೆ
ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಸೂಚುಸಿದ್ದೇನೆ ಎಂದು ಸಿಎಂ ತಿಳಿಸಿದರು.

ಸಿಎಂ ಮಾತನಾಡಿದ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು
ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಆದೇಶ ಹೊರಡಿಸಿದ್ದಾರೆ.

ಏರ್​ಪೋರ್ಟ್, ಬಂದರು, ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ, ಎಲ್ಲಾ ಜಿಲ್ಲೆಗಳಲ್ಲಿ ನಿಗಾವಹಿಸುವಂತೆ ಎಸ್​ಪಿಗಳಿಗೆ ಡಿಜಿ&ಐಜಿಪಿ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಹೈ ಅಲರ್ಟ್ ಗೆ ಪೊಲೀಸ್ ಕಮಿಷನರ್​​​ ಸೀಮಂತ್​ ಕುಮಾರ್ ಸಿಂಗ್​​
ಸೂಚಿಸಿದ್ದಾರೆ.

ಕೂಡಲೇ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಬೇಕು. ಲಾಡ್ಜ್​ಗಳನ್ನು ತಪಾಸಣೆ ಮಾಡಿ, ಲಾಡ್ಜ್‌ನಲ್ಲಿ ತಂಗಿರುವ ಹೊರ ರಾಜ್ಯದವರ ವಿಚಾರಣೆ ಮಾಡಬೇಕು. ರಾತ್ರಿ ವೇಳೆ ಗಸ್ತು ಹೆಚ್ಚಳ ಮಾಡುವಂತೆ ಡಿಸಿಪಿ, ಎಸಿಪಿ, ಇನ್ಸ್​ಪೆಕ್ಟರ್​ಗಳಿಗೆ ಆದೇಶಿಸಿದ್ದಾರೆ.

ರಾಜ್ಯದಲ್ಲೆ ಕಟ್ಟೆಚ್ಚರಕ್ಕೆ ಸಿಎಂ ಸೂಚನೆ Read More

ಜನರನ್ನು ಅಲೆದಾಡಿಸಿದರೆ ಸಹಿಸಲ್ಲ:ಅಧಿಕಾರಿಗಳಿಗೆ ಸಿಎಂ‌ ಕಠಿಣ ಎಚ್ಚರಿಕೆ

ಮೈಸೂರು: ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲೇ ಕೂರದೆ ತಾಲ್ಲೂಕುಗಳಲ್ಲಿ ನೆಲೆಸಿ ಜನರ ಸಮಸ್ಯೆ ಕೇಳಬೇಕು ಎಂಬ ಸೂಚನೆ ನೀಡಿದ್ದೆ,ಅದನ್ನು ಪಾಲಿಸದ ಅಧಿಕಾರಿಗಳ ಬಗ್ಗೆ ವರದಿ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಕೆಡಿಪಿ ಸಭೆಯಲ್ಲಿ ಈ ಸೂಚನೆ ನೀಡಿದ ಸಿಎಂ, ಜನ ಸೇವೆಯ ಪ್ರಮಾಣ ಮಾಡಿ ಹುದ್ದೆ ಸ್ವೀಕರಿಸಿದ್ದೀರಿ ಎಂಬುದನ್ನು ಮರೆಯಬೇಡಿ,ಯಾವುದೇ ಕಾರಣಕ್ಕೂ ಜನರನ್ನು ಅಲೆದಾಡಿಸಕೂಡದು ನಾನು ಇದನ್ನ ಸಹಿಸುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದರು.

ಜನಪ್ರತಿನಿಧಿಗಳು ಐದು ವರ್ಷಕ್ಕೊಮ್ಮೆ ಬರುವವರು, ಅಧಿಕಾರಿಗಳು ಶಾಶ್ವತವಾಗಿ ಇರುವವರು ಎಂಬ ಭಾವನೆ ಬಿಟ್ಟು ಕೆಲಸ ಮಾಡಿ ಎಂದು ಸೂಚಿಸಿದರು.

ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ ಏಳನೇ ಸ್ಥಾನದಿಂದ ಹದಿನಾಲ್ಕನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವರ್ಗಾವಣೆ ಕುರಿತು ಮಾತನಾಡಿದ ಮುಖ್ಯ ಮಂತ್ರಿಗಳು, ಅಧಿಕಾರಿ ಮತ್ತು ಸಿಬ್ಬಂದಿ ನಮಗೆ ಹತ್ತಿರದ ಕಾರ್ಯಕರ್ತರನ್ನೇ ಹಿಡ್ಕೊಂಡು ಬರುತ್ತೀರಿ,ಇದು ಸರಿಯಲ್ಲ,ಇದೊಂದು ಕೆಟ್ಟ ನಡವಳಿಕೆ ಎಂದು ಸಿಎಂ ಗರಂ ಆದರು.

ಸಭೆ ಆರಂಭವಾಗುತ್ತಿದ್ದಂತೆಯೇ, ಸಭೆಗೆ ಗೈರು ಆಗಿರುವ ಅಧಿಕಾರಿ ಮತ್ತು ಸಿಬ್ಬಂದಿ ಯಾರಾದರೂ ಇದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ‌ ಸೂಚಿಸಿದರು.

ಸಭೆಯಲ್ಲಿ ಗರಂ ಆಗಿಯೇ ಮಾತನಾಡುತ್ತಿದ್ದ ಸಿದ್ದರಾಮಯ್ಯ,ಐತಿಹಾಸಿಕ ದಸರಾ ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಿದ್ದಕ್ಕೆ ಜಿಲ್ಲಾಡಳಿತದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಕೂಡಾ ಸಲ್ಲಿಸಿದರು.

ಮೈಸೂರು ಅಭಿವೃದ್ಧಿಯ ವೇಗ ಹೆಚ್ಚಾಗಬೇಕು. ನಿಗಧಿತ ಅವಧಿಯ ಒಳಗೆ ಕೆಲಸಗಳು ಪೂರ್ಣಗೊಳ್ಳಬೇಕು ಎಂಬ ಸೂಚನೆಯನ್ನು ಹಿಂದಿನ ಕೆಡಿಪಿ ಸಭೆಯಲ್ಲಿ ನೀಡಿದ್ದೆ,ಆದರೂ ಈ ಬಗ್ಗೆ ಸಮಾಧಾನ ಆಗುವ ಮಟ್ಟಿಗೆ ವೇಗ ಪಡೆದುಕೊಂಡಿಲ್ಲ ಏಕೆ ಹೀಗೆ ಎಂದು ಪ್ರಶ್ನಿಸಿದರು.

ಮೈಸೂರಿನ ಜನತೆ, ನನ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾರೆ, ನಾನು ಬೆಂಗಳೂರಿನಲ್ಲಿ ಇಲ್ಲದಿದ್ದರೆ ರಾತ್ರಿವರೆಗೂ ನನಗೆ ಕಾಯುತ್ತಾ ಇರುತ್ತಾರೆ. ಇವರಲ್ಲಿ ವೈಯುಕ್ತಿಕ ಸಮಸ್ಯೆಗಾಗಿ ಬರುವವರು ಕಡಿಮೆ. ಹೆಚ್ಚಾಗಿ ಕಂದಾಯ ಇಲಾಖೆಗಳ ಸಮಸ್ಯೆಗಳಿಗಾಗಿ ಬರುವವರೇ ಹೆಚ್ಚು. ಮೈಸೂರಿನಲ್ಲೇ ಅವರ ಕೆಲಸಗಳು ಆಗಿದ್ದರೆ, ಮೈಸೂರಿನ ಕಚೇರಿಗಳಲ್ಲೇ ಕುಳಿತು ಅಧಿಕಾರಿಗಳು ಜನರ ಅಹವಾಲು ಕೇಳಿದ್ದರೆ, ಕೇಳಿ ಬಗೆಹರಿಸಿದ್ದರೆ ಅವರು ಮೈಸೂರಿನಿಂದ ಬೆಂಗಳೂರಿನವರೆಗೂ ಹುಡುಕಿಕೊಂಡು ಬರುತ್ತಿದ್ದರೇ,ಜನರನ್ನು ಅಲೆದಾಡಿಸುವುದು ಅಕ್ಷಮ್ಯ ಇದನ್ನು ನಾನು ಖಂಡಿತಾ ಸಹಿಸಲ್ಲ ಎಂದು ಎಚ್ಚರಿಸಿದರು.

ಸಿಇಒ ಮತ್ತು ಇತರೆ ಅಧಿಕಾರಿಗಳು ಆಸ್ಪತ್ರೆ, ಶಾಲೆ, ಹಾಸ್ಟೆಲ್‌ ಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಹಿಂದೆ ಕೂಡಾ ಇದನ್ನೆ ಹೇಳಿದ್ದೆ,ನಾನು ಕೊಟ್ಟ ಸೂಚನೆ ಪಾಲನೆ ಆಗುತ್ತಿಲ್ಲ.

ಇನ್ಸ್‌ಪೆಕ್ಟರ್‌ಗಳು, ಪಿಡಿಒಗಳು, ವಿಎ ಗಳ ಮೇಲೆ ಈ ಬಗ್ಗೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿವೆ. ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಕಚೇರಿಗಳಿಗೆ ಗೌಪ್ಯ ಭೇಟಿ ನೀಡಿದರೆ ಕೆಲಸ ಕದಿಯುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಕ್ಕಿ ಬೀಳುತ್ತಾರೆ. ಇಲ್ಲಿಯವರೆಗೂ ಯಾರ ವಿರುದ್ಧವೂ ದೂರು ಬಂದಿಲ್ಲ. ವರದಿ ಬಂದಿಲ್ಲ ಏಕೆ ಎಂದು ಪ್ರಶ್ನಿಸಿದರು.

ಹೊಸದಾಗಿ ಬಂದಿರುವ ಡಿಡಿಪಿಐ ಅವರಿಗೆ ನಿಮ್ಮ ಅವಧಿಯಲ್ಲಿ ಉತ್ತಮ ಫಲಿತಾಂಶ ಬರಬೇಕು. ನಾನು ಗಮನಸತಾ ಇರುತ್ತೇನೆ ಎಂದು ಸಿಎಂ ಸೂಚಿಸಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಫಲಿತಾಂಶ ಉತ್ತಮವಾಗಿರಬೇಕು, ಇದಕ್ಕೆ ಏನು ಮಾಡಬೇಕು ಎನ್ನುವ ಬ್ಲೂಪ್ರಿಂಟ್‌ ಸಿದ್ದಪಡಿಸಿ ಎಂದು ಸಿದ್ದರಾಮಯ್ಯ ಆದೇಶಿಸಿದರು.

ಜನರನ್ನು ಅಲೆದಾಡಿಸಿದರೆ ಸಹಿಸಲ್ಲ:ಅಧಿಕಾರಿಗಳಿಗೆ ಸಿಎಂ‌ ಕಠಿಣ ಎಚ್ಚರಿಕೆ Read More