ಮೈಸೂರು: ಚಾಮುಂಡಿಪುರಂನ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಸಿ. ಸಂದೀಪ್ ಅವರು ವಾರ್ಡ್ ನಂ 55 ರ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ, ಪೌರಕಾರ್ಮಿಕರಿಗೆ ದೀಪಗಳನ್ನು ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು.
ಈ ವೇಳೆ ಮಾತನಾಡಿದ ಅವರು,ಯಾವ ಹಬ್ಬವಿದ್ದರೂ ಕೂಡ ನಮ್ಮ ಪೌರಕಾರ್ಮಿಕರು ಮೊದಲು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಅವರು ನಗರವನ್ನು ಸ್ವಚ್ಛಗೊಳಿಸಿ, ಹಬ್ಬದ ವಾತಾವರಣ ಸೃಷ್ಟಿಸಿದ ನಂತರವೇ ತಮ್ಮ ಮನೆಯಲ್ಲಿ ಹಬ್ಬ ಆಚರಿಸುತ್ತಾರೆ. ಅವರು ತಮ್ಮ ಕೆಲಸದಲ್ಲಿಯೇ ದೇವರನ್ನು ಕಾಣುತ್ತಾರೆ. ಇಂತಹ ನಿಸ್ವಾರ್ಥ ಸೇವಕರೊಂದಿಗೆ ದೀಪಾವಳಿ ಹಬ್ಬ ಆಚರಣೆ ಮಾಡಿದ್ದು ನಮಗೆ ಸಂತಸ ತಂದಿದೆ ಎಂದು ತಿಳಿಸಿದರು.
ಈ ವಿನೂತನ ಕಾರ್ಯಕ್ರಮಕ್ಕೆ ಶ್ರೀರಾಮ ಗೆಳೆಯರ ಬಳಗದ ಸದಸ್ಯರಾದ ಭಾನುಕುಮಾರ್, ಮಧುಸೂಧನ್, ಪಾರ್ವತಿ, ಸುರೇಶ್ ಸಾಥ್ ನೀಡಿದರು.
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನುಮದಿನದ ಪ್ರಯುಕ್ತ ನಗರದ ಚಾಮುಂಡಿಪುರಂನಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಪೌರ ಕಾರ್ಮಿಕ ಬಂಧುಗಳಿಗೆ ಬಿಸಿ ಬಿಸಿ ಚಹಾ, ಬನ್ನು ಬಾಳೆಹಣ್ಣು ವಿತರಿಸಲಾಯಿತು.
ಚಹಾ ವಿತರಿಸಿ ಮಾತನಾಡಿದ ಶಾಸಕ ಟಿ.ಎಸ್. ಶ್ರೀವತ್ಸ ಅವರು, ದೇಶದ ಮುಂದಿನ ಭವಿಷ್ಯಕ್ಕಾಗಿ ಆರ್ಥಿಕವಾಗಿ ಭದ್ರ ಬುನಾದಿ ಮತ್ತು ದೇಶದ ಗಡಿಯನ್ನ ಬಲಿಷ್ಠಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಯವರು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಸಂಧರ್ಭದಲ್ಲಿ ಪೌರಕಾರ್ಮಿಕರ ಪಾದಪೂಜೆ ಮಾಡುವ ಮೂಲಕ ಮೋದಿ ಅವರು ಮಾದರಿಯಾಗಿದ್ದಾರೆ, ದೇಶದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ, ದೇಶದ ಪ್ರಗತಿಗಾಗಿ ಪೌರಕಾರ್ಮಿಕರ ಸ್ವಚ್ಛತಾ ಕಾರ್ಯದ ಸೇವೆ ಪ್ರಮುಖವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿನಗರ ಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮಪ್ರಸಾದ್, ಎಂ ಡಿ ಪಾರ್ಥಸಾರಥಿ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಉಪಾಧ್ಯಕ್ಷ ಜೋಗಿ ಮಂಜು, ವಿಶ್ವೇಶ್ವರಯ್ಯ,ರಘು ಅರಸ್, ನಿರೂಪಕ ಅಜಯ್ ಶಾಸ್ತ್ರಿ, ಜೀವದಾರ ರಕ್ತನಿಧಿ ಕೇಂದ್ರದ ಗಿರೀಶ್, ಪ್ರದೀಪ್, ಸಂದೀಪ್,ಕಿಶೋರ್, ದೂರ ರಾಜಣ್ಣ, ಶಿವಲಿಂಗ ಸ್ವಾಮಿ, ಆನಂದ್, ಸಚೀಂದ್ರ, ಸ್ಥಳೀಯ ನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.
ಮೈಸೂರು: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ದ್ವಂಸ ಮಾಡಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಪೌರಕಾರ್ಮಿಕರು ಪ್ರತಿಭಟಿಸಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಡಾಕ್ಟರ್ ವಿಷ್ಣುವರ್ಧನ್ ಉದ್ಯಾನವನ ಮುಂಭಾಗ ಪೌರಕಾರ್ಮಿಕರು ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ಪೌರಕಾರ್ಮಿಕ ಮಹದೇವ್,ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಸರಿಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ವಿಷ್ಣು ಸಮಾಧಿ ಸರಿಪಡಿಸದಿದ್ದರೆ ಸ್ವಚ್ಛತಾ ಕೆಲಸ ಬಿಟ್ಟು ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಮಾಜಿನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ ಮಾತನಾಡಿ, ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ದ್ವಂಸ ಮಾಡಿರುವುದು ಲಕ್ಷಾಂತರ ಅಭಿಮಾನಿಗಳಿಗೆ ನೋವು ತಂದಿದೆ ಎಂದು ತಿಳಿಸಿದರು.
ಸರ್ಕಾರ ಕೂಡಲೇ ವಿಷ್ಣು ಅವರ ಸಮಾಧಿ ಸ್ಥಳವನ್ನು ಕನ್ನಡ ಮತ್ತು ಸಂಸ್ಕೃತಿಯ ಪ್ರತೀಕವಾಗಿ ಅಭಿವೃದ್ಧಿಪಡಿಸಬೇಕು,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಭೂಮಿಯನ್ನು ತಕ್ಷಣ ಸ್ವಾಧೀನ ಪಡಿಸಿಕೊಂಡು ಮಾಲೀಕರಿಗೆ ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂತೋಷ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್, ಪೌರಕಾರ್ಮಿಕರಾದ ಮುರುಗೇಶ್, ಪ್ಯಾಲೆಸ್ ಮಹದೇವ್,ಗೋಪಾಲ್, ಪಳನಿ, ಎಂ. ಪಿ ಮುರುಗೇಶ್,ಮಹದೇವ, ವಿಜಯ್ ಸೇರಿದಂತೆ ಅನೇಕ ಪೌರಕಾರ್ಮಿಕರು ಪಾಲ್ಗೊಂಡಿದ್ದರು.
ಬೆಂಗಳೂರು: ಐದು ವರ್ಷ ನಾನೇ ಅಂತ ದಿಲ್ಲಿತನಕ ಹಾದಿ ಬೀದಿಯಲ್ಲಿ ಬೊಬ್ಬೆ ಹೊಡೆಯುವ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಾದ್ಯಂತ 10 ಪಾಲಿಕೆಗಳ 25,000ಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರ ಮಾಡುತ್ತಿರುವುದು ಕಾಣುತ್ತಿಲ್ಲ, ಕಿವಿಗೂ ಬಿದ್ದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಕುರ್ಚಿ ಕಿತ್ತಾಟದಲ್ಲಿ, ಬಣ ಬಡಿದಾಟದಲ್ಲಿ ಸಂಪೂರ್ಣವಾಗಿ ಮೈಮರೆತಿರುವ ರಾಜ್ಯ ಸರ್ಕಾರದ ಯಾವ ಮಂತ್ರಿಗಳೂ ಇದುವರೆಗೆ ಪ್ರತಿಭಟನಾ ನಿರತ ಪಾಲಿಕೆ ಸಿಬ್ಬಂದಿಯನ್ನು ಭೇಟಿ ಮಾಡುವ ಗೋಜಿಗೇ ಹೋಗಿಲ್ಲ ಎಂದು ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ, ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತೆ ಅಧಿಕಾರವಿಲ್ಲದ ಕುರ್ಚಿಯಲ್ಲಿ ಎಷ್ಟು ದಿನ ಅಂಟಿಕೊಂಡು ಕೂರುತ್ತೀರಿ,ರಾಜೀನಾಮೆ ಕೊಟ್ಟು ಹೊರಡಿ. ಒಂದು ಸುಭದ್ರ, ಸುಸ್ಥಿರ, ಜನಪರ ಆಡಳಿತ ಕೊಡಬಲ್ಲ ಬಲಿಷ್ಠ ಮುಖ್ಯಮಂತ್ರಿಗಾಗಿ ಕನ್ನಡಿಗರು ಕಾಯುತ್ತಿದ್ದಾರೆ ಎಂದು ಅಶೋಕ್ ವ್ಯಂಗ್ಯ ಸಲಹೆ ನೀಡಿದ್ದಾರೆ.
ಮೈಸೂರು: ಮೈಸೂರು ನಗರರದ ಅಗ್ರಹಾರದಲ್ಲಿರುವ ಶೃಂಗೇರಿ ಶಂಕರಮಠದಲ್ಲಿ ಆಷಾಢಮಾಸದ ಪ್ರಯುಕ್ತ 150ಕ್ಕೂ ಹೆಚ್ಚು ಪೌರಕಾರ್ಮಿಕರು ಲಲಿತ ಸಹಸ್ರನಾಮ ಪಾರಾಯಣ ಮಾಡಿದರು.
ನಗರಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯಮೂರ್ತಿ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಡಾ. ಲಕ್ಷ್ಮಿದೇವಿ ನೇತೃತ್ವದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪೌರಕಾರ್ಮಿಕರಿಂದ ಲಲಿತ ಸಹಸ್ರನಾಮ ಪಾರಾಯಣದಲ್ಲಿ ಬನ್ನಾರಿಯಮ್ಮ ತಂಡ ಚಾಮುಂಡಿಪುರಂ ಬಡಾವಣೆ, ದೇವಸೇನಾ ತಂಡ ವಿಶ್ವೇಶ್ವರನಗರ, ದುರ್ಗಾದೇವಿ ತಂಡ ಸಿಲ್ಕ್ ಫ್ಯಾಕ್ಟರಿ ವೃತ್ತ, ರೇಣುಕಾದೇವಿ ತಂಡ ಅಕ್ಕನಬಳಗ, ಕಾಮಾಕ್ಷಿ ದೇವಿ ತಂಡ ವಸ್ತುಪ್ರದರ್ಶನ ಆವರಣ, ಶಾರದಾದೇವಿ ತಂಡ ಶಂಕರಮಠ, ಕರುಮಾರಿಯಮ್ಮ ತಂಡ ಕನಕಗಿರಿ, ಮೀನಾಕ್ಷಿದೇವಿ ತಂಡ ಗಾಡಿ ಚೌಕ ತಂಡ ಸೇರಿದಂತೆ ವಿವಿಧ ತಂಡಗಳನ್ನ ರಚಿಸಿ ಕಳೆದ 20 ದಿನಗಳಿಂದ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಲಲಿತಸಹಸ್ರನಾಮ ಹೇಳಿಕೊಟ್ಟು ಅಭ್ಯಾಸ ಮಾಡಿಸಿ ಶಂಕರಮಠದಲ್ಲಿ ಸಾಮೂಹಿಕವಾಗಿ ಲಲಿತ ಸಹಸ್ರನಾಮ ಕುಂಕುಮಾರ್ಚನೆ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಟಿ ಎಸ್ ಶ್ರೀವತ್ಸ ಮಾತನಾಡಿ ಶ್ಲೋಕಗಳು,ಪಾರಾಯಣಗಳನ್ನ ಕಲಿಯಲು ಯಾವುದೇ ಜಾತಿಯ ಸಂಕೋಲೆ ಇಲ್ಲ ಎಂದು ತಿಳಿಸಿದರು.
ಪೌರ ಕಾರ್ಮಿಕರು ಲಲಿತಾ ಸಹಸ್ರನಾಮ ಕಲಿತು ಪಾರಾಯಣ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದರು. ಅವರು ಸಮಯ ಹೊಂದಿಸಿಕೊಂಡು ಲಲಿತಾ ಸಹಸ್ರನಾಮ ಕಲಿತಿದ್ದಾರೆ ಎಂದು ಶ್ಲಾಘಿಸಿದರು.
ಹಾಗೂ ಲಲಿತ ಸಹಸ್ರನಾಮ ಕಲಿಸಿದವರು,ಆಯೋಜಕರು ಎಲ್ಲರಿಗೂ ಶಾಸಕರು ಅಭಿನಂದನೆ ಸಲ್ಲಿಸಿದರು.
ಕಳೆದ ಏಳೆಂಟು ವರ್ಷಗಳ ಹಿಂದೆ ಪೌರ ಕಾರ್ಮಿಕರ ಕಾಲೋನಿಯಲ್ಲಿ ಮತಾಂತರ ನಡೆಯುತ್ತಿತ್ತು.ಮತಾಂತರ ಮಾಡುವವರು ಕಡುಬಡವರು,ಪೌರ ಕಾರ್ಮಿಕರು ವಾಸಿಸುವ ಕಾಲೋನಿಗಳನ್ನೇ ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿದ್ದರು.
ನಂತರ ಆರ್ ಎಸ್ ಎಸ್ ನ ಹಲವಾರು ಮಂದಿ ಎಚ್ಚೆತ್ತುಕೊಂಡು ಮತಾಂತರ ಮಾಡುವವರಿಂದ ಜನರನ್ನು ಉಳಿಸಿದರು.ಮತಾಂತರ ಆಗುವವರಿಗೆ ತಿಳಿಹೇಳಿದರೆಂದು ಶ್ರೀವತ್ಸ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಲಕ್ಷ್ಮಿ ದೇವಿ , ನಗರ ಪಾಲಿಕೆ ಮಾಜಿ ಸದಸ್ಯರಾದ ಸೌಭಾಗ್ಯ ಮೂರ್ತಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ಕಲ್ಪನಾ ರಾಮಚಂದ್ರ,ಮಠದ ವ್ಯವಸ್ಥಾಪಕರಾದ ಶೇಷಾದ್ರಿ,ಹರೀಶ್, ಎಂ ಆರ್ ಬಾಲಕೃಷ್ಣ,ಅಜಯ್ ಶಾಸ್ತ್ರಿ, ರಂಗನಾಥ್ ಮತ್ತಿತರರು ಭಾಗವಹಿಸಿದ್ದರು.
ಮೈಸೂರು: ನಗರದ ಚಾಮುಂಡಿಪುರಂ, ಅಪೂರ್ವ ಹೋಟೆಲ್ ಬಳಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಮಕರ ಸಂಕ್ರಾಂತಿ ಅಂಗವಾಗಿ ಪೌರಕಾರ್ಮಿಕರಿಗೆ ಎಳ್ಳು ಬೆಲ್ಲ ವಿತರಿಸಿ ಶುಭ ಕೋರಲಾಯಿತು.
ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯ ಮ ವಿ ರಾಮಪ್ರಸಾದ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ವಾರ್ಡ್ ಹಿರಿಯ ಆರೋಗ್ಯ ನಿರೀಕ್ಷಕರಾದ ಶಿವಪ್ರಸಾದ್, ಸ್ವಚ್ಛತಾ ಮೇಲ್ವಿಚಾರಕ ಶಂಕರ್, ದೂರ ರಾಜಣ್ಣ, ಶ್ರೀಕಾಂತ್ ಕಶ್ಯಪ್, ರಾಕೇಶ್, ಜೇಟ್ಟಿ ಪ್ರಸಾದ್, ಆದರ್ಶ್, ಮಹಾದೇವಸ್ವಾಮಿ, ಶಿವಲಿಂಗ ಸ್ವಾಮಿ, ಮತ್ತಿತರರು ಹಾಜರಿದ್ದರು.
ಮೈಸೂರು: ಮೈಸೂರಿನ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ- ಫರ್ಟಿಲಿಟಿ ಸೆಂಟರ್ ಹಾಗೂ ಶ್ರೀ ದುರ್ಗಾ ಫೌಂಡೇಶನ್ ನವರು ಪೌರಕಾರ್ಮಿಕರಿಗೆ ಸೀರೆ, ಬಳೆ, ಎಳ್ಳು, ಬೆಲ್ಲ, ಬಾಗಿನ ವಿತರಿಸಿ ವಿಶೇಷವಾಗಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ ಮಂಜುನಾಥ್ ಮಾತನಾಡಿ ಹಬ್ಬಗಳು ಸಂಸ್ಕಾರ ಬಿಂಬಿಸುವ ಪ್ರತೀಕವಾಗಿವೆ ಎಂದು ಹೇಳಿದರು.
ನಮ್ಮ ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ ರೈತರು ಹೊಸವರ್ಷದಂತೆ ಆಚರಿಸುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಕೃಷಿ ಸಲಕರಣೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಗೌರವಿಸಲಾಗುತ್ತಿದೆ, ಜಾನುವಾರುಗಳನ್ನು ಸಿಂಗಾರಗೊಳಿಸಿ, ಗ್ರಾಮಗಳಲ್ಲಿ ಮೆರವಣಿಗೆ ಮಾಡಲಾಗುತ್ತಿದೆ,ಕೆಲವೆಡೆ ಕಿಚ್ಚು ಹಾಯಿಸಲಾಗುತ್ತದೆ ಎಂದು ತಿಳಿಸಿದರು.
ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾನಂದೀಶ್ ಮಾತನಾಡಿ ಪೌರ ಕಾರ್ಮಿಕ ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆ ಜತೆಗೆ ಜನರ ಆರೋಗ್ಯ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಸಹೋದರಿಯರಿಗೆ ಬಾಗಿನ ನೀಡಿದ್ದು ಒಳ್ಳೆಯ ಬೆಳವಣಿಗೆ ಇದನ್ನು ಪ್ರತಿವರ್ಷ ಮುಂದುವರಿಸಲಿ ಎಂದು ಹಾರೈಸಿದರು.
ಇಂತಹ ಮೌಲ್ಯಯುತ ಸೇವೆ ಖುಷಿ ನೀಡಿದ್ದು, ನಮಗಾಗಿ ದುಡಿಯುವ ಪೌರಕಾರ್ಮಿಕ ಮಹಿಳೆಯರ ಮನ-ಮೊಗದಲ್ಲಿ ಸಂತಸ ಮೂಡಿರುವುದು ಸಾರ್ಥಕ್ಯ ತರಿಸಿದೆ ಎಂದು ಹೇಳಿದರು.
ಕಾಂಗರೂ ಕೇರ್ ಸಿ.ಇ.ಒ ಹಾಗೂ ಸಂಸ್ಥಾಪಕ ಡಾ.ಶೇಖರ್ ಸುಬ್ಬಯ್ಯ,ವೈದ್ಯರಾದ ಡಾ. ವೀಣಾ, ಡಾ. ಶೃತಿ, ಡಾ. ಶುಭ, ಡಾ. ಸ್ವಾತಿ, ಡಾ. ರಶ್ಮಿ ಕಿಶೋರ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಅಕ್ಷತಾ, ನಿವೇದಿತ, ಗಣೇಶ್,ಅಂಬಾಭವಾನಿ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ಘಾಟ್ಕೆ, ಮಾಲಿನಿ ಪಾಲಾಕ್ಷ, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಎ ರವಿ, ಸಂಧ್ಯಾ ರಾಣಿ, ಐಶ್ವರ್ಯ, ಮಹಾನ್ ಶ್ರೇಯಸ್, ರಾಮಪ್ಪ ಮತ್ತಿತರರು ಹಾಜರಿದ್ದರು.