ಡಾಕ್ಟರ್ ರಾಜು ನಿವಾಸದಲ್ಲಿಕಣ್ಮನ ಸೆಳೆವ ದಸರಾ ಗೊಂಬೆಗಳು

ಚನ್ನರಾಯಪಟ್ಟಣ: ರಾಜ್ಯದಲ್ಲೆಡೆ ದಸರಾ ವೈಭವ,ನವರಾತ್ರಿಯ ಸಂಭ್ರಮ ಸಡಗರ ಜೋರಾಗಿದೆ, ನವರಾತ್ರಿ ಪ್ರಯುಕ್ತ ಮನೆ ಮನೆಗಳಲ್ಲಿ ನವದರ್ಗಿಯರ ಪೂಜಾ ಕೈoಕ ರ್ಯ ಗಳು ಭಕ್ತಿ ಭಾವದಿಂದ ನೆರವೇರುತ್ತಿವೆ.

ಇಂದಿನಿಂದ ಅಕ್ಟೋಬರ್‌ ಎರಡನೇ ತಾರೀಖಿನವರೆಗೆ ಪಟ್ಟಣದ ಕಲಾವಿದರು, ಸಾಹಿತಿಗಳು ಹಾಗೂ ಪ್ರಾಧ್ಯಾಪಕರೂ ಆದ ಡಾಕ್ಟರ್ ರಾಜು ಅವರ ನಿವಾಸದಲ್ಲಿ ಗೊಂಬೆಗಳ ಲೋಕವೇ ಅನಾವರಣಗೊಂಡಿದೆ.

ನಮ್ಮ ಕಲೆ, ಸಂಸ್ಕೃತಿಗಳನ್ನು ಬೆಳೆಸಲು ನಾಡ ಹಬ್ಬ ದಸರೆಯ ಗೊಂಬೆ ಪ್ರದರ್ಶನ ಅನುಕೂಲವಾಗಿದೆ, ದಸರೆಯ ಸಾಂಪ್ರದಾಯಿಕ ಆಚರಣೆ ಇತಿಹಾಸ ಸಂಪ್ರದಾಯ ಕುರಿತು ಈ ಗೊಂಬೆಗಳ ಜೋಡಣೆಯನ್ನು ಎಲ್ಲರೂ ವೀಕ್ಷಿಸಿ ತಿಳಿದುಕೊಳ್ಳಬಹುದು.

ಪ್ರತಿ ದಿನ ಸಂಜೆ 6.30 ರಿಂದ 8.30 ರವರೆಗೆ ಡಾಕ್ಟರ್ ರಾಜು ಅವರ ನಿವಾಸದಲ್ಲಿ ಗೊಂಬೆಗಳ ಲೋಕವನ್ನು ಕಣ್ತುಂಬಿ ಕೊಳ್ಳಬಹುದಾಗಿದೆ.

ಡಾಕ್ಟರ್ ರಾಜು ನಿವಾಸದಲ್ಲಿಕಣ್ಮನ ಸೆಳೆವ ದಸರಾ ಗೊಂಬೆಗಳು Read More

ಗೆಲುವಿನಲ್ಲಿಯೂ ಕಾಂಗ್ರೆಸ್ ವಿಕೃತಿ: ನಿಖಿಲ್ ಆಕ್ರೋಶ

ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್ ಪಕ್ಷ ಆ ಗೆಲುವಿನಲ್ಲಿಯೂ ವಿಕೃತಿ ಮೆರೆಯುತ್ತಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ ಹೊರಬಿದ್ದ ಮೇಲೆ ಕಾರ್ಯಕರ್ತರಿಗೆ ದೀರ್ಘ ಪತ್ರ ಬರೆದಿರುವ ಅವರು; ಜೆಡಿಎಸ್ ಶಾಸಕರನ್ನು ಖಾಲಿ ಮಾಡಿಸುತ್ತೇನೆ ಎಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಕಿಡಿ ಕಾರಿದ್ದಾರೆ.

ನಿಖಿಲ್‌ ಬಚ್ಚಾ, ಪಾಪ ಎಂಬ ಅನುಕಂಪಕ್ಕೆ ತುತ್ತಾಗಿ ಕೈ ಚೆಲ್ಲುವ ಬಾಲಬುದ್ಧಿಯ ಮನಸ್ಥಿತಿಯವನಲ್ಲ ನಾನು ಎಂದು ಹೇಳಿದ್ದಾರೆ.

ಕೇವಲ ಸ್ವಾರ್ಥಕ್ಕಾಗಿ, ಅಧಿಕಾರದ ಹಪಾಹಪಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ, ಎಲ್ಲಿ ಹೆಚ್ಚು ಪ್ಯಾಕೇಜ್‌ ಸಿಕ್ಕಿದರೆ ಅಲ್ಲಿಗೆ ಹಾರಿ ಜೇಬು ಭರ್ತಿ ಮಾಡಿಕೊಳ್ಳುವ ರಾಜಕೀಯ ವ್ಯಾಪಾರಿಗಳಲ್ಲ ನಮ್ಮ ಶಾಸಕರು. ಗೆದ್ದಲು ಕಟ್ಟಿದ ಹುತ್ತದೊಳಕ್ಕೆ ಹಾವಿನಂತೆ ಹೊಕ್ಕು, ಕೈಹಿಡಿದವರನ್ನೇ ಕಚ್ಚಿ, ವಿಷಕಾರುವ ರಾಜಕೀಯ ವಿಷಜಂತುಗಳಿಗೆ ನಾವು ಹೆದರುವುದಿಲ್ಲ ಎಂದು ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ ನಿಖಿಲ್

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿದ್ದ ನನ್ನ ಸೋಲು ಅನಿರೀಕ್ಷಿತ. ಸೋಲು ಯಾಕಾಯಿತೆಂದು ಈಗಾಗಲೇ ಕಾರಣ ಕೊಟ್ಟಿದ್ದೇನೆ. ಹಾಗೆಂದು, ಸೋಲಿಗೆ ಹೆದರಿ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ, ನಮ್ಮ ಪಕ್ಷದ್ದೂ ಅಲ್ಲ.

ಈ ಸೋಲು ನನಗೆ ನೋವುಂಟು ಮಾಡಿದೆ, ನಿಜ. ಇಲ್ಲ ಎಂದು ಹೇಳಿ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ. ಹಾಗಂತ, ಸೋಲುತ್ತೇನೆ ಎಂದು ನಾನು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಗೆಲ್ಲಲು ಪ್ರಾಮಾಣಿಕವಾಗಿ ಹೋರಾಡಿದ್ದೇವೆ. ಕೆಲ ಅಂಶಗಳಿಂದ ಹಿನ್ನಡೆಯಾಗಿದೆ, ಮತ್ತೆ ಪುಟಿದೆದ್ದು ಬರುವ ಛಲ ನನಗಿದೆ ಎಂದು ಬರೆದಿದ್ದಾರೆ.

ನನ್ನ ಸೋಲು ನನ್ನ ಕಾರ್ಯಕರ್ತರಿಗೆ ಅತೀವ ನೋವುಂಟು ಮಾಡಿದೆ, ಅದು ನನಗೆ ಗೊತ್ತು, ಇಡೀ ರಾಜ್ಯದ ಕಾರ್ಯಕರ್ತರೆಲ್ಲರೂ ವೀರಯೋಧರಂತೆ ಚನ್ನಪಟ್ಟಣದಲ್ಲಿ ಹಗಲಿರಳೂ ದುಡಿದರು. ಮನೆಮನೆಯನ್ನೂ ತಲುಪಿ ನನ್ನ ಗೆಲುವಿಗಾಗಿ ಶ್ರಮಿಸಿದರು. ಅಂತಿಮವಾಗಿ ಸೋಲಾಯಿತು, ಅದು ಜನತಾ ಜನಾರ್ದನನ ನಿರ್ಣಯ. ಅದನ್ನು ನಾನು ಶಿರಬಾಗಿ ಸ್ವೀಕರಿಸಿದ್ದೇನೆ.

ವಿಪರ್ಯಾಸವೆಂದರೆ, ಗೆದ್ದವರಿಗೆ ನೆಮ್ಮದಿ ಇಲ್ಲ, ಕನಿಷ್ಠ ಗೆಲುವನ್ನು ಅರ್ಥಪೂರ್ಣವಾಗಿಸಿಕೊಳ್ಳುವ ಮನಃಸ್ಥಿತಿಯೂ ಇಲ್ಲ. ಆ ಮುಖಗಳಲ್ಲಿ ನಗುವೇ ಇಲ್ಲ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಅವರು ಗೆಲುವು ಕಂಡಿದ್ದಾರೆ. ಸಂಭ್ರಮಿಸಲಿ, ವಿಜೃಂಭಣೆ ಮಾಡಿಕೊಳ್ಳಲಿ. ಅದನ್ನು ಕಂಡು ಕಣ್ಣುರಿ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ, ಆದರೆ, ಹೇಗೆ ಗೆದ್ದೆವು ಎಷ್ಟರಮಟ್ಟಿಗೆ ಅಧಿಕಾರ ದುರ್ಬಳಕೆ ಮಾಡಿಕೊಂಡೆವು ಎನ್ನುವ ಸಣ್ಣ ಆತ್ಮವಿಮರ್ಶೆಯಾದರೂ ಬೇಡವೇ? ಮತದಾನಕ್ಕೆ ಕೆಲ ಗಂಟೆಗಳು ಉಳಿದಿರುವಾಗ ಚನ್ನಪಟ್ಟಣದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಎರಡು ತಿಂಗಳ 4,000 ಹಣವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡುತ್ತೀರಿ. ಆಯಾ ತಿಂಗಳಿಗೆ ಸಕಾಲಕ್ಕೆ ಹೋಗಬೇಕಾದ ಹಣವನ್ನು ಚುನಾವಣೆ ಉದ್ದೇಶಕ್ಕೆ ಬಳಸಿಕೊಳ್ಳುವ ದುರುದ್ದೇಶಕ್ಕೆ ಏನೆನ್ನಬೇಕು ಎಂದು ಪ್ರಶ್ನಿಸಿದ್ದಾರೆ.

ನಾವು ಸತ್ಯದ ಪರವಾಗಿದ್ದೇವೆ.ಸತ್ಯಮೇವ ಜಯತೆ ಎನ್ನುವುದು ನಮ್ಮ ಪಾಲಿಗೆ ಬರೀ ಜಾಹೀರಾತಿನ ಸ್ಲೋಗನ್ ಅಲ್ಲ, ರಾಷ್ಟ್ರಪಿತ ಬಾಪೂಜಿ ಹೇಳಿದ ಸತ್ಯ ಮಾರ್ಗದಲ್ಲಿಯೇ ನಡೆಯೋಣ. ಆ ಮರ್ಯಾದಾ ಪುರುಷೋತ್ತಮ ರಾಮನ ದಾರಿ ನಮ್ಮ ಆದರ್ಶ. ಶ್ರೀಕೃಷ್ಣ ಪರಮಾತ್ಮನ ಸತ್ಯನೀತಿ ನಮ್ಮ ಮುಂಬೆಳಕು. ನಾವು ಯಾರೂ ಧೃತಿಗೆಡಬೇಕಿಲ್ಲ, ನಿಮ್ಮೊಂದಿಗೆ ನಾನಿದ್ದೇನೆ. ಇಡೀ ಪಕ್ಷವೇ ಇದೆ ಎಂದು ಕಾರ್ಯಕರ್ತರಿಗೆ ಹುರುಪು ತುಂಬಿದ್ದಾರೆ ನಿಖಿಲ್ ಕುಮಾರಸ್ವಾಮಿ.

ಗೆಲುವಿನಲ್ಲಿಯೂ ಕಾಂಗ್ರೆಸ್ ವಿಕೃತಿ: ನಿಖಿಲ್ ಆಕ್ರೋಶ Read More

ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿಗಳು

ಬೆಂಗಳೂರು: ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿಯಲ್ಲಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಸಿ.ಪಿ.ಯೋಗೇಶ್ವರ್ ಭಾರೀ ಗೆಲುವು ಸಾಧಿಸಿದ್ದಾರೆ.

ಯೋಗೇಶ್ವರ್ ಅವರು 25,515 ಮತಗಳ ಅಂತರದಿಂದ ಗೆಲುವು ದಾಖಲಿಸುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಗೆ ತಿರುಗೇಟು ಕೊಟ್ಟಿದ್ದಾರೆ.

ಶಿಗ್ಗಾಂವಿ ವಿಧಾನ ಸಭಾ ಕ್ಷೇತ್ರದಲ್ಲಿ
ಮಾಜಿ ಮುಖ್ಯ ಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಸೋಲನುಭವಿಸಿದ್ದಾರೆ.ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವಿನ ನಗೆ ಬೀರಿದ್ದಾರೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್​ ನ ಯಾಸೀರ್​ ಪಠಾಣ್​ಗೆ 13,448 ಮತಗಳ ಅಂತರದಲ್ಲಿ ಗೆಲುವು ದೊರೆತಿದೆ.

ಗಣಿ ಜಿಲ್ಲೆ ಬಳ್ಳಾರಿಯ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸಂಸದ ಇ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಬಂಗಾರು ಹನುಮಂತು ಸೋಲನುಭವಿಸಿದ್ದಾರೆ.

ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿಗಳು Read More

ಈ ಬಾರಿ ಜನ ನನಗೆ ಆಶೀರ್ವದಿಸುತ್ತಾರೆ:ನಿಖಿಲ್ ಮನದ ಮಾತು

ರಾಮನಗರ: ಕಳೆದ ಎರಡು ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದೆ, ಈ‌ ಬಾರಿ ಆಶೀರ್ವಾದ ಸಿಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಈ ಬಾರಿ ಚುನಾವಣೆಗೆ ನಿಲ್ಲಬೇಕೆಂಬ ಆಸೆ ಇರಲಿಲ್ಲ, ಆದರೆ ಸ್ಪರ್ಧೆ ಅನಿವಾರ್ಯವಾಯ್ತು ಎಂದು ನಿಖಿಲ್ ಹೇಳಿದರು.

ಮಾಧ್ಯಮಗೋಷ್ಟಿಯಲ್ಲಿ ಮನದಾಳದ ಮಾತು ಬಿಚ್ಚಿಟ್ಟ ನಿಖಿಲ್,
ಕೊನೆ ಕ್ಷಣದಲ್ಲಿ ಆದ ರಾಜಕೀಯ ಪರಿಸ್ಥಿತಿಗೆ ಕಾರ್ಯಕರ್ತರ ಆತಂಕ, ಗೊಂದಲಕ್ಕೆ ಪರಿಹಾರ ಬೇಕಿತ್ತು, ಹಾಗಾಗಿ ಸ್ಪರ್ಧೆ ಅನಿವಾರ್ಯ ಆಯ್ತು ಎಂದು ಹೇಳಿದರು.

ರಾಜ್ಯದಲ್ಲಿ ನಿನ್ನೆ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಇದರಲ್ಲಿ ಚನ್ನಪಟ್ಟಣ ಕ್ಷೇತ್ರ ಬಹಳ ಮಹತ್ವ ಪಡೆದುಕೊಂಡಿದೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಚನ್ನಪಟ್ಟಣ ಫಲಿತಾಂಶದ ಬಗ್ಗೆ ಕುತೂಹಲ ಇದೆ.ಈ ಉಪಚುನಾವಣೆ ರಾಜ್ಯದ ಇತಿಹಾಸದ ಪುಟದಲ್ಲಿ ಉಳಿಯುತ್ತದೆ. ಈ ಉಪಚುನಾವಣೆ ನಿಖಿಲ್ ಕುಮಾರಸ್ವಾಮಿ ಉಪಚುನಾವಣೆ ಆಗಿರಲಿಲ್ಲ, ಎರಡೂ ಪಕ್ಷದ ಕಾರ್ಯಕರ್ತರ ಚುನಾವಣೆ ಎಂದು ನುಡಿದರು.

ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜಿ ಅವರು ಸ್ಪಷ್ಟ ಸಂದೇಶ ಕೊಟ್ಟಿದ್ದರು, ನನ್ನ ಪರವಾಗಿ ನಡ್ಡಾರವರು ಮಾತನಾಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.

ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಮಾಡಿದ್ದಾರೆ. ಕಳೆದ 18 ದಿನಗಳ ಹಿಂದೆ ಎನ್ ಡಿ ಎ ಅಭ್ಯರ್ಥಿ ಯಾರು ಆಗಬೇಕು ಎಂಬ ಪ್ರಶ್ನೆ ಎದ್ದಿತ್ತು, ಆಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ನಿವಾಸಕ್ಕೆ ಕರೆದು ನನ್ನ ಹೆಸರು ಘೋಷಣೆ ಮಾಡಿದರು, ಕಳೆದ ಎರಡು ಬಾರಿ ರಾಜಕೀಯ ಕುತಂತ್ರದಿಂದ ನಾನು ಸೋಲು ಅನುಭವಿಸಬೇಕಾಯಿತು ಎಂದು ಬೇಸರದಲ್ಲೇ ಹೇಳಿದರು.

ಕಳೆದ 18 ದಿನಗಳಿಂದ ಸರಿಯಾಗಿ ನಿದ್ದೆ ಮಾಡಿಲ್ಲ. ಮುಖಂಡರು,ಎರಡೂ ಪಕ್ಷಗಳ ಕಾರ್ಯಕರ್ತರು ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ.ಈ ಚುನಾವಣೆಯಲ್ಲಿ ನನಗೆ ಪೂರಕವಾಗಿ ಜನ ಆಶೀರ್ವಾದ ಮಾಡಿದ್ದಾರೆ. ಹಿರಿಯ ನಾಗರೀಕರು, ಯುವಕರು ಹೆಚ್ಚು ಬೆಂಬಲ ನೀಡಿದ್ದಾರೆ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಈ ಉಪಚುನಾವಣೆ ನನಗೆ ಅಗ್ನಿ ಪರೀಕ್ಷೆ ಅಂತ ಹೇಳಿದ್ದೆ. ನಿನ್ನೆ ಶೇ 88.80 ರಷ್ಟು ಮತದಾನ ಆಗಿದೆ. ಚನ್ನಪಟ್ಟಣ ಇತಿಹಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾನ ಆಗಿದೆ ತಾಲೂಕಿನ ಜನತೆ ಒಂದು ದೊಡ್ಡ ಸಂದೇಶ ಕೊಟ್ಟಿದ್ದಾರೆ, ನನಗೆ ಈ ಬಾರಿ ಅವಕಾಶ ಕೊಡುವ ತೀರ್ಮಾನ ಮಾಡಿದ್ದಾರೆ ಎಂದು ನಿಖಿಲ್‌ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಜನ ನನಗೆ ಆಶೀರ್ವದಿಸುತ್ತಾರೆ:ನಿಖಿಲ್ ಮನದ ಮಾತು Read More

ಸಚಿವ ಜಮೀರ್‌ ವಿರುದ್ಧ ಆರ್‌.ಅಶೋಕ ತೀವ್ರ ವಾಗ್ದಾಳಿ

ಚನ್ನಪಟ್ಟಣ: ಸಚಿವ ಜಮೀರ್‌ ಅಹ್ಮದ್‌ ಅವರು ಒಕ್ಕಲಿಗರನ್ನು ಅಥವಾ ಹಿಂದೂಗಳನ್ನು ಖರೀದಿಸುತ್ತೇನೆ ಎಂದು ಹೇಳುತ್ತಿದ್ದಾರೆಯೇ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪ್ರಶ್ನಿಸಿದರು.

ಚನ್ನಪಟ್ಟಣ ಉಪಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಚಾಮರಾಜಪೇಟೆಗೆ ಹೋಗಿ ರ‍್ಯಾಲಿ ಮಾಡಿ ಜಮೀರ್‌ ಅಹ್ಮದ್‌ರನ್ನು ಗೆಲ್ಲಿಸಿ ಅವರಿಗೆ ಜೀವನ ನೀಡಿದ್ದರು. ಅದೇ ಜಮೀರ್‌ ಅಹ್ಮದ್‌ ಈಗ ದೇವೇಗೌಡರ ಕುಟುಂಬವನ್ನು ಖರೀದಿಸುತ್ತೇವೆ ಎಂದು ಹೇಳಿದ್ದಾರೆ ಎಂದು
ಟೀಕಿಸಿದರು.

ದೇಶದ ಮಾಜಿ ಪ್ರಧಾನಿ ದೇವೇಗೌಡರು ಕಾವೇರಿ ನೀರು ಹಂಚಿಕೆಗಾಗಿ ಶ್ರಮಿಸಿದ್ದರು. ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದರು. ಅಂತಹವರನ್ನು ಖರೀದಿಸುತ್ತೇನೆ ಎಂದು ಜಮೀರ್‌ ಹೇಳುತ್ತಾರೆ. ಇದು ಒಕ್ಕಲಿಗರನ್ನು ಖರೀದಿಸುತ್ತೇವೆಂದು ಅರ್ಥವೇ ಅಥವಾ ಹಿಂದೂಗಳನ್ನು ಖರೀದಿಸುತ್ತೇವೆಂದು ಅರ್ಥವೇ ಎಂದು ಕಾರವಾಗಿ ಪ್ರಶ್ನಿಸಿದರು.

ಈಗಾಗಲೇ ಸಚಿವ ಜಮೀರ್‌ ಅಹ್ಮದ್‌ ರೈತರ ಜಮೀನು ಕಬಳಿಸುತ್ತಿದ್ದಾರೆ. ಈಗ ದೇವೇಗೌಡರ ಕುಟುಂಬ ಖರೀದಿಸಲು ಇರಾಕ್‌, ಇರಾನ್‌ನಿಂದ ಹಣ ಬಂದಿದೆಯೇ? ನಾವು ಮಣ್ಣಿನ ಮಕ್ಕಳಾಗಿದ್ದು, ಇದೇ ನಾಡಿನಲ್ಲಿ ಹುಟ್ಟಿ ಬೆಳೆದಿದ್ದೇವೆ. ಚುನಾವಣೆ ನಡೆಯುವ ಸಮಯದಲ್ಲೇ ಕಾಂಗ್ರೆಸ್‌ ಸಚಿವರು ಖರೀದಿ ಬಗ್ಗೆ ಮಾತನಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹಿಂದೆ ಇದ್ದ ರೌಡಿಗಳು ನಾಚುವಂತೆ ಅಬಕಾರಿ ಇಲಾಖೆಯ ಮೂಲಕ ಮದ್ಯ ಮಾರಾಟಗಾರರಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಲೂಟಿ ಮಾಡಿದ ಹಣದಲ್ಲಿ ಕುಟುಂಬ ಖರೀದಿಸುವವರನ್ನು ಚನ್ನಪಟ್ಟಣದ ಜನರು ಕ್ಷಮಿಸುವುದಿಲ್ಲ ಎಂದು ಅಶೋಕ್ ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14 ಸೈಟು ಕೊಳ್ಳೆ ಹೊಡೆದು ಅದಕ್ಕಾಗಿ 62 ಕೋಟಿ ರೂ. ನೀಡಿ ಎಂದು ಕೇಳುತ್ತಾರೆ. ಅವರ ಬದುಕಿನ ತೆರೆದ ಪುಸ್ತಕದಲ್ಲಿ ದರೋಡೆಗಳೇ ತುಂಬಿದೆ ಎಂದು ಲೇವಡಿ ಮಾಡಿದರು.

ಇದನ್ನೆಲ್ಲ ಜನ ಯೋಚನೆ ಮಾಡಿ ಬದಲಾವಣೆ ತರಬೇಕು,ನಿಖಿಲ್‌ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸಚಿವ ಜಮೀರ್‌ ವಿರುದ್ಧ ಆರ್‌.ಅಶೋಕ ತೀವ್ರ ವಾಗ್ದಾಳಿ Read More

ದೇವೇಗೌಡರು, ಕುಮಾರಸ್ವಾಮಿ ಒಕ್ಕಲಿಗರನ್ನು ಬೆಳೆಯಲು ಬಿಡಲ್ಲ:ಸಿಎಂ ಸಿದ್ದು

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಮತ್ತು ರೈತರಿಗೆ ನೀರು ಕೊಡುವುದರಲ್ಲಿ ಯೋಗೇಶ್ವರ್ ಆಧುನಿಕ ಭಗೀರಥ ಎಂದು ಸಿಎಂ ಸಿದ್ದರಾಮಯ್ಯ‌ ಹೇಳಿದರು.

ದೊಡ್ಡ ಮಳೂರಿನಲ್ಲಿ ಯೋಗೇಶ್ವರ್ ಪರ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿದ್ದು,ಯೋಗೇಶ್ವರ್ ಅವರಿಗೆ ಚನ್ನಪಟ್ಟಣ ಮಣ್ಣಿನ ಬಗ್ಗೆ, ರೈತ ಸಮುದಾಯ, ಪಶುಪಾಲಕರು, ಗೋ ಸಾಕಾಣಿಕೆದಾರರ ಮೇಲೆ ಬಹಳ ಪ್ರೀತಿ, ಗೌರವ ಹಾಗೂ ಕಾಳಜಿ ಇದೆ, ಹಾಗಾಗಿ ರೈತ ಕುಲದ ಉದ್ದಾರಕ್ಕಾಗಿ ಕೆರೆಗಳನ್ನು ತುಂಬಿಸಿ ಪುಣ್ಯಾತ್ಮ‌ ಎನ್ನಿಸಿಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಡ್ಯ ಲೋಕಸಭೆಯಲ್ಲಿ, ರಾಮನಗರ ವಿಧಾನಸಭೆಯಲ್ಲಿ ನಿಖಿಲ್ ಸೋತಿದ್ದಾರೆ. ಈಗ ಚನ್ನಪಟ್ಟಣಕ್ಕೆ ಕರೆತಂದು ನಿಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಭಾವ, ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರ ಗೆಲುವಿಗೆ ಯೋಗೇಶ್ವರ್ ಅವರು ಬಹಳ ಶ್ರಮಿಸಿದರು. ಆಗಲೇ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಅವರಿಗೆ ಬೆಂಬಲಿಸಿ ಗೆಲ್ಲಿಸುವ ಭರವಸೆ ನೀಡಿದ್ದರು. ಆದರೆ ಚುನಾವಣೆ ಬಂದಾಗ ಕೈ ಕೊಟ್ಟರು ಎಂದು ವ್ಯಂಗ್ಯವಾಡಿದರು.‌

ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಒಬ್ಬ ಒಕ್ಕಲಿಗರನ್ನೂ ಬೆಳೆಯಲು ಬಿಡುವುದಿಲ್ಲ. ನಾನು ಹಿಂದುಳಿದವನು ಅಂತ ನನ್ನನ್ನು ವಿರೋಧಿಸ್ತಾರೆ, ಓಕೆ. ಆದರೆ, ವೈ.ಕೆ.ರಾಮಯ್ಯ, ನಾಗೇಗೌಡ, ಬಚ್ಚೇಗೌಡ, ವರದೇಗೌಡ, ಪಟ್ಟಣ್ಣ, ಚಲುವರಾಯಸ್ವಾಮಿ, ಬಾಲಕೃಷ್ಣ, ಭೈರೇಗೌಡ, ಕೆ.ಆರ್.ಪೇಟೆ ಚಂದ್ರಶೇಖರ್ ಸೇರಿ ಸಾಲು ಸಾಲು ಒಕ್ಕಲಿಗರನ್ನು ರಾಜ್ಯದಲ್ಲಿ ಮುಗಿಸಿದರು ರಾಜ್ಯದಲ್ಲಿ ಒಕ್ಕಲಿಗ ನಾಯಕತ್ವವೇ ಬೆಳೆಯದಂತೆ ಮಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಬುದ್ದಿವಂತ ಒಕ್ಕಲಿಗರು, ರಾಜಕೀಯ ಪ್ರಜ್ಞೆ ಇರುವ ಒಕ್ಕಲಿಗರು ಯಾರನ್ನೂ ದೇವೇಗೌಡರು ಬೆಳೆಯಲು ಬಿಡದೆ ಮುಗಿಸ್ತಾರೆ. ಈಗ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನೂ ಮುಗಿಸುವ ಪರಯತ್ನ ಮಾಡ್ತಿದ್ದಾರೆ. ಆದರೆ ಇದು ಆಗಲ್ಲ. ನಾನು ಜಿ.ಟಿ.ದೇವೇಗೌಡರಿಗೂ ಎಚ್ಚರಿಸಿದ್ದೀನಿ. ಅಲ್ಲಿದ್ದರೆ ಮುಗಿಸ್ತಾರೆ. ಬೇಗ ಹೊರಗೆ ಬಂದ್ರೆ ನಿಮಗೆ ಒಳ್ಳೆಯದು ಎಂದು ಹೇಳಿದ್ದೇನೆ. ಮನೆ ಮಗ ಅಂತಿದ್ದ ಬಿ.ಎಲ್.ಶಂಕರ್, ವೈ.ಕೆ.ರಾಮಯ್ಯ ಅವರನ್ನೇ ಮುಗಿಸಿದವರು ಇನ್ನು ಯೋಗೇಶ್ವರ್ ಅವರನ್ನು ಸಹಿಸ್ತಾರಾ ಎಂದು ವ್ಯಂಗ್ಯವಾಗಿ ಸಿದ್ದು ಪ್ರಶ್ನಿಸಿದರು.

ನಾನು, ಜಾಲಪ್ಪ ಅವರು ಇಲ್ಲದೇ ಹೋಗಿದ್ದರೆ 1994 ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವೇ ಇರಲಿಲ್ಲ. ದೇವೇಗೌಡರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ರಾಷ್ಟ್ರೀಯ ಅಧ್ಯಕ್ಷರಾದ ಎಸ್.ಆರ್.ಬೊಮ್ಮಾಯಿ ಸಿದ್ದರಿರಲಿಲ್ಲ. ಏಕೆಂದರೆ ಇವರು ಬೊಮ್ಮಾಯಿ ಸರ್ಕಾರವನ್ನು ಕೆಡವಿದ್ದರು. ಆದರೂ ಆ ಸಂದರ್ಭದಲ್ಲಿ ನಾವೆಲ್ಲಾ ಒಟ್ಟಾಗಿ ದೇವೇಗೌಡರ ಪರವಾಗಿ ನಿಂತೆವು. ಈಗ ಸಿದ್ದರಾಮಯ್ಯ ಅವರಿಗೆ ಸೊಕ್ಕು, ಅಹಂ ಎನ್ನುತ್ತಿದ್ದಾರೆ.ಇದು ಪಾಳೇಗಾರಿಕೆ ಅಲ್ವಾ ದೇವೇಗೌಡರೇ ಎಂದು ಪ್ರಶ್ನಿಸಿದರು.

ಆಕಸ್ಮಿಕವಾಗಿ ಪ್ರಧಾನಿ ಆದ ದೇವೇಗೌಡರು ಪಾಳೆಗಾರಿಕೆ ಮಾತ್ರ ಬಿಡಲ್ಲ. ದಲಿತರು, ಹಿಂದುಳಿದವರನ್ನು ಕಂಡ್ರೆ ಆಗಲ್ಲ. ಒಕ್ಕಲಿಗರನ್ನು ಬೆಳೆಯಲು ಬಿಡಲ್ಲ. ಇದೆಲ್ಲಾ ಪಾಳೇಗಾರಿಕೆ ಅಲ್ವಾ, ಮೊಮ್ಮಗನಿಗಾಗಿ ಒಂದು ವಾರದಿಂದ ಚನ್ನಪಟ್ಟಣದಲ್ಲೇ ಇದ್ದಾರೆ. ಜೆಡಿಎಸ್ ಅಥವಾ ಬಿಜೆಪಿ ಯಿಂದ ಬೇರೆ ಯಾರಾದರೂ ನಿಂತಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಚನ್ನಪಟ್ಟಣದಲ್ಲಿ ನಿಂತು ಮತ ಕೇಳ್ತಾ ಇದ್ರಾ ಒಂದು‌ ವೇಳೆ ಎನ್ ಡಿ ಎ ಅಭ್ಯರ್ಥಿಯಾಗಿ ಯೋಗೇಶ್ವರ್ ಸ್ಪರ್ಧಿಸಿದ್ದರೆ ದೇವೇಗೌಡರು ಹೀಗೆ ವಾರಗಟ್ಟಲೆ ಇದ್ದು ಮತ ಕೇಳ್ತಿದ್ರಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆದೆ ಅಂತ ದೇವೇಗೌಡರಿಗೆ ಹೊಟ್ಟೆಯುರಿ. ಅದಕ್ಕೇ ನಮ್ಮ ಸರ್ಕಾರ ಕಿತ್ತು ಹಾಕುತ್ತೇನೆ ಎನ್ನುತ್ತಿದ್ದಾರೆ. ರಾಜ್ಯದ ಜನತೆ ಆರಿಸಿರುವ ನಮ್ಮ‌ ಸರ್ಕಾರವನ್ನು ಕುಮಾರಸ್ವಾಮಿ, ದೇವೇಗೌಡರಿಂದ ಕೀಳಲು ಸಾಧ್ಯವಿಲ್ಲ. ನಿಮ್ಮ ಹೊಟ್ಟೆಯುರಿ ನಿಮ್ಮನ್ನೇ ಸುಡತ್ತೆ ಹೊರತು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಏನು ಮಾಡ್ತೀರೊ ಮಾಡಿ ದೇವೇಗೌಡರೇ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು

ಚುನಾವಣೆ ಮುಗಿದ ಮೇಲೆ ಗೃಹಲಕ್ಷ್ಮಿ ಸೇರಿ ಗ್ಯಾರಂಟಿಗಳನ್ನು ಸರ್ಕಾರ ಬಂದ್ ಮಾಡುತ್ತೆ ಎಂದು ದೇವೇಗೌಡರು ಪರಮ ಸುಳ್ಳು ಹೇಳಿದ್ದಾರೆ. ದೇವೇಗೌಡರೇ,ಸಿದ್ದರಾಮಯ್ಯ ಒಮ್ಮೆ ಮಾತು ಕೊಟ್ಟರೆ ಯಾವುದೇ ಕಾರಣಕ್ಕೂ ಮಾತು ತಪ್ಪಲ್ಲ. ನಮ್ಮ ಸರ್ಕಾರ ಯಾವ ಗ್ಯಾರಂಟಿಗಳನ್ನೂ ನಿಲ್ಲಿಸುವುದಿಲ್ಲ ಎಂದು ಮೂರು ಬಾರಿ ಕಡಕ್ಕಾಗಿ ಪುನರುಚ್ಛರಿಸಿದರು.

ದೇವೇಗೌಡರು, ಕುಮಾರಸ್ವಾಮಿ ಒಕ್ಕಲಿಗರನ್ನು ಬೆಳೆಯಲು ಬಿಡಲ್ಲ:ಸಿಎಂ ಸಿದ್ದು Read More

ಸರಕಾರ ದಿವಾಳಿ;ಉಪ ಚುನಾವಣೆ ನಂತರ ಗೃಹಲಕ್ಷ್ಮಿ ಬಂದ್ -ದೇವೇಗೌಡರು

ಚನ್ನಪಟ್ಟಣ: ರಾಜ್ಯ ಕಾಂಗ್ರೆಸ್ ಸರ್ಕಾರದ ಖಜಾನೆ ದಿವಾಳಿಯಾಗಿದೆ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಹಣವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಟೀಕಿಸಿದರು.

ಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣ ಕ್ಷೇತ್ರದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮೆ ಮಾಡಿದ್ದಾರೆ ಎಂದು ಆರೋಪಿಸಿದರು.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸಿದ ಗೌಡರು; ಕಾಂಗ್ರೆಸ್ ಸರಕಾರ ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ. ಅದಕ್ಕೆ ಗ್ಯಾರಂಟಿ ಯೋಜನೆಗಳನ್ನು ಕೂಡ ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.

ಈ ಸರಕಾರ ದಿವಾಳಿಯಾಗಿದೆ. ಚುನಾವಣೆ ಮುಗಿದ ಮೇಲೆ‌ ಹಣ ಜಮೆ ಮಾಡುವುದನ್ನು ಮತ್ತೆ ನಿಲ್ಲಿಸುತ್ತಾರೆ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚೋಕೆ ಕಾಸಿಲ್ಲ, ಜನ ಉಗಿಯುತ್ತಿದ್ದಾರೆ ಎಂದು ಟೀಕಿಸಿದರು.

ನಿಖಿಲ್ ಅವರನ್ನು ವಿಧಾನಸೌಧಕ್ಕೆ ಕಳಿಸಿ. ಆ ಹುಡುಗ ನಿಮ್ಮ ಪರವಾಗಿ ದನಿ ಎತ್ತುತ್ತಾನೆ. ಇದರಲ್ಲಿ ನಿಮಗೆ ಯಾವುದೇ ಸಂಶಯ ಬೇಡ , ನಾನು ಒಬ್ಬ ರೈತನ ಮಗ, ನೀವು ರೈತನ ಮಕ್ಕಳು. ಇಗ್ಗಲೂರು ಅಣೆಕಟ್ಟು ಕಟ್ಟಿಸಿದ್ದು ಈ ದೇವೇಗೌಡ, ಬದುಕಿದ್ದಾನೆ. ಹದಿನೇಳು ಕೆರಗಳಿಗೆ ನೀರು ಹರಿಸಿದ್ದ ವ್ಯಕ್ತಿಯನ್ನು ಭಗೀರಥ ಅಂತಾರೆ. ಈ ಅಣೆಕಟ್ಟು ಕಟ್ಟಿಲ್ಲ ಅಂದರೆ ನೀರು ಹರಿಸೋಕೆ ಸಾಧ್ಯ ಆಗುತ್ತಿತ್ತಾ ಎಂದು ಪ್ರಶ್ನಿಸಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು 1600 ಕೋಟಿಯಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈಗಿರುವ ಸರ್ಕಾರ ಸಣ್ಣಪುಟ್ಟ ಕೆಲಸ ಮಾಡುತ್ತಿದೆ. ಪ್ರತಿಗ್ರಾಮಕ್ಕೆ ನೀರಾವರಿ ಸೌಲಭ್ಯ ಕೋಡಬೇಕಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಇಷ್ಟು ಹಣವನ್ನು ಕ್ಷೇತ್ರಕ್ಕೆ ಕೊಟ್ಟರು. ರಾಷ್ಟ್ರದ ಹಿತದೃಷ್ಟಿಯಿಂದ, ಮೋದಿ ಅವರ ಒತ್ತಾಸೆಯಿಂದ ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ಸಚಿವರಾಗಿದ್ದಾರೆ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟ ಮೇಲೆ ಯಾರು ಅಭ್ಯರ್ಥಿಯಾಗಿ ನಿಲ್ಲಬೇಕು ಎಂದು ಚರ್ಚೆ ನಡೆಯಿತು. ಡಿ.ಕೆ.ಶಿವಕುಮಾರ್ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡಿದರು. ಹಾಗಂತ ಎಲ್ಲರನ್ನೂ ನಂಬಿಸಿದರು. ನಾಮಪತ್ರ ಸಲ್ಲಿಸುವ ಒಂದು ದಿನಕ್ಕೆ ಮೊದಲು ಇದ್ದಕ್ಕಿದ್ದ ಹಾಗೆ ತಮ್ಮ ತೀರ್ಮಾನ ಬದಲಾಯಿಸಿ ಮತ್ತೊಬ್ಬ ಸ್ನೇಹಿತರನ್ನು ನಿಲ್ಲಿಸಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿಯನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ ಎಂದು ದೇವೇಗೌಡರು ಟೀಕಿಸಿದರು.

ಸರಕಾರ ದಿವಾಳಿ;ಉಪ ಚುನಾವಣೆ ನಂತರ ಗೃಹಲಕ್ಷ್ಮಿ ಬಂದ್ -ದೇವೇಗೌಡರು Read More

ಮೈಸೂರಿನಲ್ಲಿ ಸಚಿವರಿಗೆ ಕಪಾಳಮೋಕ್ಷ?;ಹೆಚ್ ಡಿ ಕೆ ಟೀಕೆ

ಚನ್ನಪಟ್ಟಣ: ಮೈಸೂರಿನಲ್ಲಿ ಸಚಿವರು ಇನ್ನಿತರರು ಹೊಡೆದಾಡಿಕೊಂಡಿರುವುದು ವರ್ಗಾವಣೆ ದಂಧೆ ವಿಚಾರಕ್ಕೆ ಎಂಬ ಮಾಹಿತಿ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು; ವರ್ಗಾವಣೆ ವ್ಯವಹಾರಕ್ಕೆ ಅವರು ಕಿತ್ತಾಡಿಕೊಂಡಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಹಂಚಿಕೆ ವಿಚಾರಕ್ಕೆ ಹೊಡೆದಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಒಬ್ಬ ಮಂತ್ರಿಯನ್ನು ಬಹಿರಂಗವಾಗಿ ಹೊಡೆಯುತ್ತಾರೆ ಎಂದರೆ ಈ ರಾಜ್ಯ ಎಲ್ಲಿಗೆ ಬಂದಿದೆ,ಏನು ಕತೆ ಇದು ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಏನಾಗ್ತಿದೆ ಇದನ್ನೆಲ್ಲ ಜನತೆ ಗಮನಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಮೈಸೂರಿನಲ್ಲಿ ಸಚಿವರಿಗೆ ಕಪಾಳಮೋಕ್ಷ?;ಹೆಚ್ ಡಿ ಕೆ ಟೀಕೆ Read More

ಇಡೀ ಕಾಂಗ್ರೆಸ್ ನನ್ನ ವಿರುದ್ಧ ಚುನಾವಣೆ ಮಾಡುತ್ತಿದೆ:ನಿಖಿಲ್

ಚನ್ನಪಟ್ಟಣ: ಸಿಎಂ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್ ಸಂಪುಟ ನನ್ನ ವಿರುದ್ಧ ಚನ್ನಪಟ್ಟಣದಲ್ಲಿ ಚುನಾವಣೆ ಮಾಡುತ್ತಿದೆ ಎಂದು ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.

ಕನ್ನಿದೊಡ್ಡಿ ಪ್ರಚಾರ ಸಭೆಯಲ್ಲಿ ಮಾತನಾಡಿದ ನಿಖಿಲ್,
ಯೋಗೇಶ್ವರ್‌ ಅವರಿಗೆ ಟಿಕೆಟ್ ಯಾತಕ್ಕಾಗಿ ಕೊಟ್ಟರು ಅಂತ ಎಲ್ಲರಿಗೂ ಗೊತ್ತಿದೆ. ಯೋಗೇಶ್ವರ್ ಅವರು 6 ವರ್ಷಕ್ಕೊಮ್ಮೆ ಪಕ್ಷಾಂತರ ಮಾಡುತ್ತಾರೆ. ಬಿಜೆಪಿಯಲ್ಲಿ ಅವರಿಗೆ ಎಲ್ಲಾ ಗೌರವ ನೀಡಿ ಶಕ್ತಿ ತುಂಬಿಸಿದ್ದರು.ಅವರ ಬಗ್ಗೆ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಅಭಿವೃದ್ಧಿ ಮಾಡಿಲ್ಲ.ಅಭಿವೃದ್ಧಿ ಬಗ್ಗೆ ಮಾತನಾಡಲು ಏನು ಇಲ್ಲ, ಹೀಗಾಗಿ ಅವರ ಟಾರ್ಗೆಟ್ ದೇವೇಗೌಡರು ಮತ್ತು ಕುಮಾರಸ್ವಾಮಿ ಈಗ ನಿಖಿಲ್ ಕುಮಾರಸ್ವಾಮಿ ಎಂದು ತಿರುಗೇಟು ನೀಡಿದರು.

ಇಗ್ಗಲೂರು ಡ್ಯಾಮ್ ಗೂ ದೇವೇಗೌಡರಿಗೂ ಏನು ಸಂಬಂಧ ಇಲ್ಲ ಅಂತಾರೆ. ಇಗ್ಗಲೂರು ಬ್ಯಾರೇಜ್ ಸ್ಥಳ ಪರಿಶೀಲನೆ ಪೋಟೋ ಬಿಡುಗಡೆಯಾಗಿದೆ. ಇಗ್ಗಲೂರು ಬ್ಯಾರೇಜ್‌ಗೂ ದೇವೇಗೌಡರಿಗೂ ಸಂಬಂಧ ಇಲ್ಲ ಅಂತಾ ಕಾಂಗ್ರೆಸ್ ನಾಯಕರು ಹೇಳಿದ್ದರು. ಇತಿಹಾಸವನ್ನು ಯಾರು ಮರೆ ಮಾಚುವುದಕ್ಕೆ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ನಿಖಿಲ್ ತಿರುಗೇಟು ನೀಡಿದರು.

ನಾನು ಯೋಗೇಶ್ವರ್ ಸತ್ತರೆ ಇಲ್ಲೇ ಮಣ್ಣಾಗುತ್ತೇವೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರೂ ಸಾಯುವುದು ಬೇಡ ಎಲ್ಲ ನೂರಾರು ವರ್ಷ ಚೆನ್ನಾಗಿರಲಿ. ಇಲ್ಲಿ ಹುಟ್ಟು ಸಾವಿನ ಮಾತಿನ ಅವಶ್ಯಕತೆ ಇಲ್ಲ.ನಾನು ಇಂತಹ ಮಾತುಗಳಿಂದ ಟ್ರಿಗರ್ ಆಗುವುದಿಲ್ಲ. ಹಿಂದೆನೂ ಆಗಿಲ್ಲ ಈಗಲೂ ಆಗುವುದಿಲ್ಲ ಎಂದು ತಿಳಿಸಿದರು.

ಇಡೀ ಕಾಂಗ್ರೆಸ್ ನನ್ನ ವಿರುದ್ಧ ಚುನಾವಣೆ ಮಾಡುತ್ತಿದೆ:ನಿಖಿಲ್ Read More

ನಿಖಿಲ್ ಗೆಲುವಿಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘ ಮನವಿ

ಮೈಸೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕದನದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಎನ್‌ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಪ್ರಚಾರ ಮಾಡಲಾಯಿತು.

ಚನ್ನಪಟ್ಟಣದ ಕೋಟೆ ಬೀದಿಯಲ್ಲಿ ಬ್ರಾಹ್ಮಣರ ಮುಖಂಡರ ಮನೆಗೆ ಭೇಟಿ ನೀಡಿ ನಿಖಿಲ್ ಕುಮಾರಸ್ವಾಮಿ ಪರ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಅವರ ನೇತೃತ್ವದಲ್ಲಿ ಕರಪತ್ರ ನೀಡಿ ಮತಯಾಚಿಸಲಾಯಿತು.

ಈ ವೇಳೆ ಡಿ.ಟಿ ಪ್ರಕಾಶ್ ಮಾತನಾಡಿ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ಹೆಚ್. ಡಿ ಕುಮಾರಸ್ವಾಮಿ ಅವರು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿದರು, ಶಂಕರ ಜಯಂತಿ ಆಚರಣೆ ಜಾರಿಗೆ ತಂದರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೆ ಸಂಘಟನಾ ಚಟುವಟಿಕೆಗಳಿಗಾಗಿ ನಿವೇಶನ ನೀಡಿದ್ದಾರೆ ಎಂದು ಸ್ಮರಿಸಿದರು.

ಹಾಗಾಗಿ ಈ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನ ಅತಿ ಹೆಚ್ಚು ಮತಗಳಿಂದ ಚುನಾಯಿಸ ಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ಚನ್ನಪಟ್ಟಣ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಾಘವೇಂದ್ರ ಮಯ್ಯ , ಚಂದ್ರಶೇಖರ್, ಕಡಕೋಳ ಜಗದೀಶ್, ಅಜಯ್ ಶಾಸ್ತ್ರಿ, ಮಧು ಹೆಗಡೆ, ವೆಂಕಟೇಶ್ ಮೂರ್ತಿ ಹಾಗೂ ಚನ್ನಪಟ್ಟಣ ಬ್ರಾಹ್ಮಣ ಮಹಾಸಭಾ ಮುಖಂಡರು ಹಾಜರಿದ್ದರು.

ನಿಖಿಲ್ ಗೆಲುವಿಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘ ಮನವಿ Read More