ವೈಭವದಿಂದ ನಡೆದ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ ಉತ್ಸವ

ಮೈಸೂರು: ಚಾಮುಂಡಿಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಉತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮೈಸೂರು ರಾಜವಂಶಸ್ಥರ ಕುಲದೇವತೆಯೂ ಅದ ಚಾಮುಂಡೇಶ್ವರಿಯ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.

ದೇವಸ್ಥಾನದಲ್ಲಿ ಮುಂಜಾನೆ 4 ಗಂಟೆಯಿಂದ ಪೂಜಾ ಕೈಂಕರ್ಯಗಳು ಆರಂಭಗೊಂಡವು.

ದೇವಿಯ ಮೂರ್ತಿಗೆ ಬೆಟ್ಟದಲ್ಲಿರುವ ದೇವಿ ಕೆರೆಯಿಂದ ತಂದ ಶುದ್ದ ಜಲದಿಂದ ಅಭಿಷೇಕ ಮಾಡಿ ನಂತರ ತಾಯಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ
ಬಳಿಕ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ಕುಂಕುಮಾರ್ಚನೆ, ಸಹಸ್ರನಾಮಾರ್ಚನೆ ನೆರವೇರಿಸಲಾಯಿತು.

ನಂತರ ಮಹಾ ಮಂಗಳಾರತಿ ಬಳಿಕ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಇರಿಸಿ, ದೇವಸ್ಥಾನದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು ಮತ್ತೆ ದೇವಸ್ಥಾನದ ಮುಂಭಾಗದಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.

ಅರಮನೆ ಪೊಲೀಸ್‌ ಬ್ಯಾಂಡ್‌ ಜೊತೆಗೆ ಮಂಗಳವಾದ್ಯ, ಛತ್ರಿ, ಚಾಮರಗಳೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ವರ್ಧಂತಿ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರು, ಗಣ್ಯರಿಗೆ ಜಿಲ್ಲಾಡಳಿತ ಅಗತ್ಯ ಸೌಲಭ್ಯ ಕೈಗೊಂಡಿತ್ತು.

ವರ್ಧಂತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೆಚ್ವು ಭಕ್ತರು ಆಗಮಿಸಿದ್ದರಿಂದ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಅವರು ಚಾಮುಂಡಿ ಸನ್ನಿಧಿಯಲ್ಲಿದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಚಾಮುಂಡೇಶ್ವರಿ ದೇವಿಯ ವರ್ಧಂತಿ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿರಲಿಲ್ಲ. ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಭಕ್ತಾದಿಗಳಿಗಾಗಿ ಉಚಿತ ಬಸ್ ಸೇವೆಯನ್ನು ಕಲ್ಪಿಸಲಾಗಿತ್ತು.

ಚಾಮುಂಡೇಶ್ವರಿ ದೇವಿಯ ವರ್ಧಂತಿ ಪ್ರಯುಕ್ತ ನಗರದ ಹಲವು ಭಾಗಗಳಲ್ಲಿ ಸಾರ್ವಜನಿಕವಾಗಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಹಮ್ಮಿಕೊಂಡು ಪ್ರಸಾದ ವಿನಿಯೋಗ ಮಾಡಲಾಯಿತು.

ವೈಭವದಿಂದ ನಡೆದ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ ಉತ್ಸವ Read More

ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಕುಂಕುಮ: ಶ್ರದ್ಧೆಯ ಜೊತೆ ಸುರಕ್ಷತೆ ಮುಖ್ಯ

ಮೈಸೂರು: ಮೈಸೂರು ನಗರದ ಪುರಾಣ ಪ್ರಸಿದ್ದ ಚಾಮುಂಡಿ ಬೆಟ್ಟ, ನಾಡ ಅದಿದೇವತೆ ದೇವಿ ಚಾಮುಂಡೇಶ್ವರಿ ತಾಯಿಯ ಪವಿತ್ರ ಸ್ಥಾನ.

ಪ್ರತಿ ದಿನವೂ ಸಾವಿರಾರು ಭಕ್ತರು ತಾಯಿಯ ದರ್ಶನಕ್ಕಂದು ಬೆಟ್ಟ ಹತ್ತುತ್ತಾರೆ. ತಮ್ಮ ಹರಕೆ ತೀರಿಸಲು, ಕೃತಜ್ಞತೆ ವ್ಯಕ್ತಪಡಿಸಲು ಹಲವಾರು ಮಹಿಳೆಯರು ಬೆಟ್ಟದ ಮೆಟ್ಟಲುಗಳಿಗೆ ಶ್ರದ್ಧೆಯಿಂದ ಕುಂಕುಮ ಹಚ್ಚುವ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಪದ್ಧತಿ ಭಕ್ತಿ,ಶ್ರದ್ಧೆಯ ಪ್ರತೀಕವಾಗಿದೆ.

ಕುಂಕುಮ ಧಾರ್ಮಿಕ ಮಹತ್ವದ ಸಂಕೇತ,
ಕುಂಕುಮವು ಹಿಂದೂ ಧರ್ಮದಲ್ಲಿ ಮಂಗಳದ ಪ್ರತೀಕ. ಅರಿಶಿನ ಮತ್ತು ಸುಣ್ಣದಿಂದ ತಯಾರಾಗುವ ಈ ಕುಂಕುಮ ದೇವಿಗೆ ಅರ್ಪಣೆ, ಹಣೆಯಲ್ಲಿ ತಿಲಕ, ಹಾಗು ಹಬ್ಬಹರಿ ದಿನಗಳಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಭಕ್ತಿಯ ಮನೋಭಾವದಲ್ಲಿ, ತಾಯಿಗೆ ಅರ್ಪಿಸುವ ಈ ಕುಂಕುಮ ಹರಕೆ, ಆತ್ಮತೃಪ್ತಿ ನೀಡುತ್ತದೆ.

ಆದರೆ ಇದರಿಂದ ಇತ್ತೀಚೆಗೆ ಏನೆಲ್ಲಾ ಸಮಸ್ಯೆಗಳು ಕಾಡುತ್ತಿದು ಯಾರ ಅರಿವಿಗೂ ಬರುತ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ಕುಂಕುಮ ಬಳಸುವ ವಿಧಾನದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಈಗ ತಯಾರಾಗುತ್ತಿರುವ ಕೆಲವೊಂದು ಕುಂಕುಮಗಳಲ್ಲಿ ರಾಸಾಯನಿಕ ಮಿಶ್ರಣಗಳಿದ್ದು,ಇದು ಭಕ್ತರ ಪಾದಗಳಿಗೆ ಅಂಟಿ ಜಾರುವಿಕೆಗೆ ಕಾರಣವಾಗುತ್ತಿದೆ.

ವಿಶೇಷವಾಗಿ ಮಳೆಯ ದಿನಗಳಲ್ಲಿ ಅಥವಾ ಮೆಟ್ಟಿಲು ಒದ್ದೆಯಾದಾಗ, ಇದು ಬಹಳ ಅಪಾಯಕರಿ, ಹಲವಾರು ಭಕ್ತರು ಜಾರಿ ಗಾಯಗೊಂಡ ಉದಾಹರಣೆ ಕೂಡಾ ಇದೆ.

ಇತ್ತೀಚಿನ ದಿನಗಳಲ್ಲಿ ಮೆಟ್ಟಿಲುಗಳ ಮೇಲೆ ಕುಂಕುಮದ ಕೆಂಪು ಬಣ್ಣದ ಕಲೆಗಳು ಬೆಟ್ಟದ ಅಂದಕ್ಕೆ, ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿ, ಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಪರವಾಗಿ, ಎಲ್ಲ ಭಕ್ತರಿಗೆ ವಿನಮ್ರ ಮನವಿ ಏನೆಂದರೆ ನಿಮ್ಮ ಭಕ್ತಿಯ ಹರಕೆಯನ್ನು ಚಾಮುಂಡಿ ಬೆಟ್ಟದ ಪಾದದಲ್ಲಿ ಅಥವಾ ನಿಗದಿತ ಸ್ಥಳದಲ್ಲಿ ಮಾತ್ರ ಕುಂಕುಮ ಹಚ್ಚುವ ಮೂಲಕ ತೀರಿಸಿಕೊಳ್ಳಬೇಕು ಎಂದು ಒಂದು ಹೆಜ್ಜೆ ರಕ್ತದಾನಿಗಳ ಬಳಗ ಮೈಸೂರು ಜಿಲ್ಲೆ ಅಧ್ಯಕ್ಷ
ರಕ್ತದಾನಿ ಮಂಜು ಮನವಿ ಮಾಡಿದ್ದಾರೆ.

ನಿಮ್ಮ ಶ್ರದ್ಧೆಗೆ ಭಂಗವಾಗದೆ, ಇತರರಿಗೂ ತೊಂದರೆ ಆಗದ ಮಾರ್ಗವೇ ನಿಜವಾದ ಜವಾಬ್ದಾರಿಯ ಭಕ್ತಿ ಎಂದು
ರಕ್ತದಾನಿ ಮಂಜು ತಿಳಿಹೇಳಿದ್ದಾರೆ.

ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಕುಂಕುಮ: ಶ್ರದ್ಧೆಯ ಜೊತೆ ಸುರಕ್ಷತೆ ಮುಖ್ಯ Read More

ಈ ಬಾರಿ ನೆಮ್ಮದಿಯಿಂದ ತಾಯಿ ದರ್ಶನ ಪಡೆದ ಭಕ್ತವೃಂದ

ಮೈಸೂರು: ಕಳೆದವಾರ ನೆಮ್ಮದಿಯಿಂದ ತಾಯಿ ಚಾಮುಂಡಿ ದರ್ಶನ ಪಡೆಯಲಾಗದೆ ಹತಾಶೆಯಿಂದ ಕಣ್ಣೀರು ಹಾಕಿದ್ದ ಭಕ್ತವೃಂದ ಈ ವಾರ ನೆಮ್ಮದಿಯಂದ ಭಕ್ತಿ ಸಮರ್ಪಿಸಿದ್ದಾರೆ.

ಮೊದಲ ಆಷಾಢ ಶುಕ್ರವಾರ ಬೆಟ್ಟದಲ್ಲಿ ಬಹಳ ಸಮಸ್ಯೆ ಆಗಿತ್ತು. ನಾವೆಲ್ಲ ಮಧ್ಯರಾತ್ರಿ ಯಿಂದ ತಾಯಿಯ ದರ್ಶನಕ್ಕೆ ನಿಂತಿದ್ದೀವಿ, ವಿಐಪಿ,ವಿವಿಐಪಿ,ಅವರ ಕಡೆಯವರು ಅಂತಾ ನೇರವಾಗಿ ಬಿಡ್ತಾ ಇದೀರಾ
ಮೆಟ್ಟಿಲು ಹತ್ತಿ ಬಂದ ಭಕ್ತರಿಗೆ ಅಮ್ಮನ ದರ್ಶನ ಮಾಡಿಕೊಡಲು ಆಗಿಲ್ಲ ಎಂದು ಬಹಳಷ್ಟು ಮಹಿಳೆಯರು ಹಿಡಿಶಾಪ ಹಾಕಿದ್ದರು.

ನೂಕು ನುಗ್ಗಲು,ಸರಿಯಾದ ವ್ಯವಸ್ಥೆ ಇಲ್ಲ ಎಂದು ಬೆಟ್ಟ ಹತ್ತಿ ಬಂದ ಮಹಿಳೆಯರು ತಾಯಿಯ ದರ್ಶನ ಪಡೆಯಲಾಗದೆ ಕಣ್ಣೀರು ಹಾಕಿದ್ದರು.

ಕಳೆದ ವಾರದ ಅವ್ಯವಸ್ಥೆ, ಮಹಿಳೆಯರ ಆಕ್ರೋಶದ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಸಮಾಧಾನವಾಗಿ ನಿಧಾನವಾಗಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ.

ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ಪ್ರಯುಕ್ತ ಮಾವಿನ ಕಾಯಿಗಳಿಂದ ದೇವಸ್ಥಾನ ಸುತ್ತಾ ಅಲಂಕಾರ ಮಾಡಲಾಗಿದ್ದು ವಿಶೇಷವಾಗಿ ಕಾಣುತ್ತಿದೆ.

ಮುಂಜಾನೆಯೇ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ಅವರ ನೇತೃತ್ವದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪಂಚಾಮೃತ ಅಭಿಷೇಕ, ಅರ್ಚನೆ.ಮಹಾಮಂಗಳಾರತಿ ಮಾಡಲಾಗಿತ್ತು.

ದೇವಸ್ಥಾನದ ಗರ್ಭ ಗುಡಿಯಲ್ಲಿ
ವಿವಿಧ ಪುಷ್ಟಗಳ ಮಧ್ಯೆ ಶ್ರೀ ಚಾಮುಂಡೇಶ್ವರಿ ತಾಯಿ ಕಂಗೊಳಿಸುತ್ತಿದ್ದಾಳೆ.

ಆಶಾಢ ಶುಕ್ರವಾರ ದಂದು ನಮ್ಮ ರಾಜ್ಯವಷ್ಟೇ ಅಲ್ಲದೆ ದೇಶ,ವಿದೇಶ ಗಳಿಂದಲೂ ಕೋಟಿ ಕೋಟಿ ಭಕ್ತರು ಆಗಮಿಸುತ್ತಾರೆ.

ನೂಕು,ನುಗ್ಗಲು ಆಗಬಾರದೆಂಬ ಕಾರಣಕ್ಕೆ ಬೆಟ್ಟಕ್ಕೆ ಖಾಸಗೀ ವಾಹನಗಳನ್ನು ನಿಷೇಧಿಸಲಾಗಿದೆ.ಮೈಸೂರಿನ ಲಲಿತ ಮಹಲ್ ಮೈದಾನದಿಂದ ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಈ ಭಾರಿ ಭಕ್ತರ ಅನುಕೂಲಕ್ಕಾಗಿ 300 ರೂ ಹಾಗೂ 2 ಸಾವಿರ ರೂ ಟಿಕೇಟ್ ನೀಡುವ ಮೂಲಕ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ದರ್ಶನ ವ್ಯವಸ್ಥೆಯಲ್ಲಿ ಹೋದರೇ ಕೇವಲ 10 ನಿಮಿಷದಲ್ಲೇ ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯಬಹುದಾಗಿದೆ.ಕಳೆದ ವಾರ ನೂಕು ನುಗ್ಗಲಿನಲ್ಲಿ ತಾಯಿ ದರ್ಶನ ಪಡೆದಿದ್ದ ಭಕ್ತರು ಈ ಭಾರಿ ಸರಾಗವಾಗಿ ತಾಯಿಯನ್ನ ಕಣ್ತುಂಬಿಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ವಾರ ಪ್ರಸಾದದ ವ್ಯವಸ್ಥೆ ಇಲ್ಲದೇ ಭಕ್ತರು ಬೇಸರ ವ್ಯಕ್ತಪಡಿಸಿದ್ದರು, ಈ ವಾರ ಪ್ರಸಾದ ವ್ಯವಸ್ಥೆ ಕೂಡಾ ಮಾಡಲಾಗಿದ್ದು ಭಕ್ತರು ಖುಷಿಯಾದರು.

ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಟಿ ಹರೀಶ್ ಗೌಡ,ನಟ ಡಾಲಿ ಧನಂಜಯ್,ನಟ ದರ್ಶನ್ ಸೇರಿದಂತೆ ನಟ ನಟಿಯರು ಕಲಾವಿದರು ಕುಟುಂಬ ಸಮೇತ ಬಂದು ತಾಯಿ ದರ್ಶನ ಪಡೆದರು.

ಮೆಟ್ಟಿಲು ಹತ್ತಿ ಬಂದವರಿಗೆ ಪ್ರತ್ಯೇಕ ಧ್ವಾರ,2 ಸಾವಿರ ನೀಡಿದವರಿಗೆ ನೇರ ದರ್ಶನ ವ್ಯವಸ್ಥೆ,300 ರೂ ಟಿಕೇಟ್ ಪಡೆದವರಿಗೂ ಸುಲಭ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಮೆಟ್ಟಿಲು ಹತ್ತಿ ಬರುವ ಭಕ್ತರು ಬೆ.5 ರಿಂದ ಸಂಜೆ 6ವರಗೆ ಬರಬಹುದಾಗಿದೆ ಎಂದು ಸೂಚನಾ ಫಲಕ ಹಾಕಿದ್ದು,ಸಂಜೆ ನಂತರ ಬೆಟ್ಟ ಹತ್ತುವಂತಿಲ್ಲ.

ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಪೋಲಿಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಜಿಲ್ಲಾಡಳಿತ, ದೇವಸ್ಥಾನ ಆಡಳಿತ ಮಂಡಳಿ ಈ‌ ಬಾರಿ ಎಲ್ಲ ಲೋಪ ಸರಿಪಡಿಸಿ ಭಕ್ತರಿಗೆ ದರ್ಶನಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಿಕೊಟ್ಟಿರುವುದು ಸ್ತುತ್ಯಾರ್ಹ.

ಈ ಬಾರಿ ನೆಮ್ಮದಿಯಿಂದ ತಾಯಿ ದರ್ಶನ ಪಡೆದ ಭಕ್ತವೃಂದ Read More

ಇಬ್ಬನಿ,ತುಂತುರು ಮಳೆ ಹೂವಿನ ತೋರಣ ದಿಂದ ಕಂಗೊಳಿಸಿದ ಚಾಮುಂಡಿ ಬೆಟ್ಟ

ಮೈಸೂರು: ಮುಂಜಾನೆ ತಾಯಿಯ ದರುಶನಕ್ಕೆ ಬಂದ ಭಕ್ತರನ್ನು ಚಾಮುಂಡಿ ಬೆಟ್ಟದಲ್ಲಿ ತುಂತುರು ಮಳೆ ಮತ್ತು ಇಬ್ಬನಿ ನಡುವೆ ಹೂವೂಗಳ ತಳಿರು ತೋರಣ ಸ್ವಾಗತಿಸಿತು.

ಮೊದಲ ಆಷಾಢ ಶುಕ್ರವಾರ ಪ್ರಯುಕ್ತ ನಾಡ ಅಧಿದೇವಿ ಚಾಮುಂಡೇಶ್ವರಿ ತಾಯಿಗೆ ಇಂದು ಮುಂಜಾನೆ ಪಂಚಾಮೃತ ಅಭಿಷೇಕ, ಅರ್ಚನೆ, ಸಹಸ್ರನಾಮ ಅರ್ಚನೆ ಮಾಡಲಾಯಿತು.

ದೇವಿ ಚಾಮುಂಡಿ ವಿವಿಧ ಹೂವುಗಳ ನಡುವೆ ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಾ ಭಕ್ತರಿಗೆ ದರ್ಶನ ನೀಡಿದ್ದಾಳೆ.
ಜತೆಗೆ ದ್ವಾರದಲ್ಲಿ ಅಮ್ಮ ಎಂಬ ಹೂವಿನಿಂದ ಅಲಂಕಾರಗೊಂಡ ಅಕ್ಷರ ಭಕ್ತಿಯನ್ನು ಇಮ್ಮಡಿಸಿದೆ.

ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಪ್ರತಿವರ್ಷದಂತೆ ಈ ಬಾರಿಯೂ ಖಾಸಗಿ ವಾಹನಗಳ ಪ್ರವೇಶ ನಿರ್ಭಂಧಿಸಲಾಗಿದ್ದು, ಕೆ.ಎಸ್.ಆರ್.ಟಿ.ಸಿ ವತಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಲಲಿತಮಹಲ್ ಪ್ಯಾಲೇಸ್ ಸಮೀಪದ ಆವರಣದಿಂದಲೂ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಭಕ್ತರಿಗೆ ನಾಡದೇವಿಯ ದರುಶನ ಪಡೆಯಲು ಜಿಲ್ಲಾಡಳಿತದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತರ ಅನುಕೂಲಕ್ಕಾಗಿ 300ರೂ , 2 ಸಾವಿರ ಟಿಕೇಟ್ ವ್ಯವಸ್ಥೆ ಮಾಡಲಾಗಿದೆ.

2000 ಟಿಕೇಟ್ ಪಡೆದವರಿಗೆ ಲಲಿತ ಮಹಲ್ ಹೋಟೆಲ್ ಸಮೀಪ ಬೆಟ್ಟಕ್ಕೆ ಎಸಿ ಬಸ್ ನಲ್ಲಿ ಕರೆದುಕೊಂಡು ಹೋಗಿ ಬೆಟ್ಟದಲ್ಲಿ ನೇರವಾಗಿ ದರ್ಶನ ಮಾಡಿ ನಂತರ ಪ್ರಸಾದ ರೂಪದಲ್ಲಿ ಚಾಮುಂಡೇಶ್ವರಿ ವಿಗ್ರಹ, ಲಾಡು, ಕುಡಿಯುವ ನೀರಿನ ಬಾಟಲ್ ,ಒಂದು ಬ್ಯಾಗ್ ವಿತರಿಸಲಾಗುತ್ತಿದೆ.

ಆಷಾಢ ಶುಕ್ರವಾರದ ಪ್ರಯುಕ್ತ ನಾಡ ಅಧಿದೇವತೆಯ ದರ್ಶನಕ್ಕಾಗಿ ಸಾವಿರಾರು ಮಂದಿ ಭಕ್ತರು ಮೆಟ್ಟಿಲುಗಳನ್ನು ಹತ್ತಿ ಆಗಮಿಸಿ ದೇವಿಯ ದರ್ಶನ ಪಡೆದರು.

ಮುಂಜಾನೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಭಕ್ತರು ನಿಂತು ದೇವಿಯ ದರ್ಶನ ಪಡೆದು ಪುನೀತರಾದರು.

ಇಬ್ಬನಿ,ತುಂತುರು ಮಳೆ ಹೂವಿನ ತೋರಣ ದಿಂದ ಕಂಗೊಳಿಸಿದ ಚಾಮುಂಡಿ ಬೆಟ್ಟ Read More

ಚಾಮುಂಡಿ ಬೆಟ್ಟದಲ್ಲಿ ಅರಣ್ಯ ನಾಶ:ಕರ್ನಾಟಕ ಸೇನಾ ಪಡೆ ಪ್ರತಿಭಟನೆ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳ ಬೆಂಕಿ ಹಾಕಿದ ಕೃತ್ಯದಿಂದ 100 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶವಾಗಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರಿನ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಜಿಲ್ಲಾಡಳಿತ ಕೂಡಲೇ 100 ಎಕರೆ ಪ್ರದೇಶದಲ್ಲಿ ಎರಡು ಪಟ್ಟು, ಗಿಡ ಮರಗಳನ್ನು ನೆಡಬೇಕು, ಜತೆಗೆ ಇವುಗಳನ್ನು ಸಂರಕ್ಷಣೆ ಮಾಡಬೇಕು, ಹೆಚ್ಚು ಹೆಚ್ಚು ಅರಳಿ ಮರಗ‌ಳನ್ನು ನೆಡಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ತೇಜೇಶ್ ಲೋಕೇಶ್ ಗೌಡ ಒತ್ತಾಯಿಸಿದರು.

ನಿನ್ನೆ ನಡೆದ ಈ ಘಟನೆಯನ್ನು ಸರ್ಕಾರ ತೀವ್ರವಾಗಿ ಪರಿಗಣಿಸಿ ಚಾಮುಂಡಿ ಬೆಟ್ಟಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಪ್ರತಿ ದಿನ ಪೋಲೀಸ್ ಜೀಪು ಎರಡು- ಮೂರು ಬಾರಿ ಚಾಮುಂಡಿ ಬೆಟ್ಟ ಗಸ್ತು ತಿರುಗುವ ವ್ಯವಸ್ಥೆ ಮಾಡಬೇಕು,ಈ ರೀತಿ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಕೋರಿದರು.

ಪ್ರತಿಭಟನೆಯಲ್ಲಿ ಕೃಷ್ಣಪ್ಪ, ಪ್ರಭುಶಂಕರ್, ಪ್ರಜೀಶ್, ಶಿವಲಿಂಗಯ್ಯ, ನೇಹಾ, ವರಕೂಡು ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಸುನೀಲ್ ಕುಮಾರ್, ಎಳನೀರು ರಾಮಣ್ಣ, ಬಸವರಾಜು, ಮಂಜುಳಾ, ನಾಗರಾಜು, ಕುಮಾರ್ ಗೌಡ, ರಘು ಅರಸ್, ಗೀತಾ ಗೌಡ, ದರ್ಶನ್ ಗೌಡ, ಪ್ರಭಾಕರ್, ಸುಬ್ಬೇಗೌಡ, ಅಕ್ಬರ್, ಸ್ವಾಮಿ ಗೌಡ, ಭಾಗ್ಯಮ್ಮ, ರವೀಶ್, ಪರಿಸರ ಚಂದ್ರು, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.

ಚಾಮುಂಡಿ ಬೆಟ್ಟದಲ್ಲಿ ಅರಣ್ಯ ನಾಶ:ಕರ್ನಾಟಕ ಸೇನಾ ಪಡೆ ಪ್ರತಿಭಟನೆ Read More

ಚಾಮುಂಡಿ ಬೆಟ್ಟದಲ್ಲಿ ಖಾಸಗಿ ವಾಹನ ನಿರ್ಬಂಧ ಅವೈಜ್ಞಾನಿಕ- ತೇಜಸ್ವಿ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ವಾಹನ ನಿಲುಗಡೆ ಸಮಸ್ಯೆ ತಡೆಗಟ್ಟಲು ಜಿಲ್ಲಾಡಳಿತ ಖಾಸಗಿ ವಾಹನಗಳಿಗೆ ನಿರ್ಬಂಧದ ಬಗ್ಗೆ ಚಿಂತನೆ ನಡೆಸಿರುವುದು ಅವೈಜ್ಞಾನಿಕ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.

ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ವಾಹನಗಳ ನಿಲುಗಡೆಗಾಗಿ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಪಾರ್ಕಿಂಗ್ ಲಾಟ್ ನಿರ್ಮಿಸಲಾಗಿದೆ,ಈಗ ಜಿಲ್ಲಾಡಳಿತ ಖಾಸಗಿ ವಾಹನಗಳಿಗೆ ನಿರ್ಬಂಧದ ಚಿಂತನೆ ಎಷ್ಟರ ಮಟ್ಟಿಗೆ ಸರಿ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಸ್ಥಳೀಯ ವ್ಯಾಪಾರಿಗಳ ಮೇಲೂ ಈ ಚಿಂತನೆಯಿಂದ ಹೊಡೆತ ಬೀಳುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜಿಲ್ಲಾಡಳಿತ ಮೊದಲು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಿ 24/7 ತುರ್ತು ಚಿಕಿತ್ಸಾ ವಾಹನದ ವ್ಯವಸ್ಥೆ ಕಲ್ಪಿಸಲಿ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ನಂದಿ ರಸ್ತೆ ಕುಸಿದುಬಿದ್ದು ವರ್ಷಗಳೇ ಕಳೆದರೂ ಇದುವರೆಗೂ ದುರಸ್ತಿ ಕಾರ್ಯ ಆರಂಭವಾಗಿಲ್ಲ ಮೊದಲು ರಸ್ತೆ ದುರಸ್ತಿ ಕಾರ್ಯ ಆರಂಭಿಸಲಿ ಎಂದು ಆಗ್ರಹಿಸಿದ್ದಾರೆ.

ಚಾಮುಂಡಿ ಬೆಟ್ಟದ ನಿವಾಸಿಗಳಿಗೆ ಮತ್ತು ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಒಂದು ವೇಳೆ ಆರೋಗ್ಯದಲ್ಲಿ ಏರು ಪೇರು ಉಂಟಾದಲ್ಲಿ ಚಿಕಿತ್ಸೆ ನೀಡಲು ಸುಸಜ್ಜಿತ ಆಸ್ಪತ್ರೆ ಇಲ್ಲ ಈಗಿರುವ ಆಸ್ಪತ್ರೆಯಲ್ಲಿ ಸುಸಜ್ಜಿತ ವಾದ ವ್ಯವಸ್ಥೆ ಇಲ್ಲ ಎಂದು ಅವರು ಆರೋಪಿಸಿದ್ದಾರೆ‌

ಜಿಲ್ಲಾಡಳಿತ ಖಾಸಗಿ ವಾಹನಗಳಿಗೆ ನಿರ್ಬಂಧದ ಬಗ್ಗೆ ಚಿಂತನೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಕೋರಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಖಾಸಗಿ ವಾಹನ ನಿರ್ಬಂಧ ಅವೈಜ್ಞಾನಿಕ- ತೇಜಸ್ವಿ Read More

ಯದುವೀರ್ ದ್ವಿತೀಯ ಪುತ್ರನಿಗೆ ತೊಟ್ಟಿಲು ಶಾಸ್ತ್ರ

ಮೈಸೂರು: ಮೈಸೂರು ರಾಜ ವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ‌ ದ್ವಿತೀಯ ಪುತ್ರನಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸಲಾಯಿತು.

ಬುಧವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಯದುವೀರ್ ಒಡೆಯರ್ ಮತ್ತು ಪತ್ನಿ ತ್ರಿಷಿಕಾ ಅವರು ತೊಟ್ಟಿಲು ಶಾಸ್ತ್ರ ನೆರವೇರಿಸಿದರು.

ರಾಜಮಾತೆ ಪ್ರಮೋದಾದೇವಿ ಒಡೆಯರ್, ಯದುವೀರ್ ಅವರ ಮೊದಲ ಪುತ್ರ ಆಧ್ಯ ಮತ್ತಿತರರು ಉಪಸ್ಥಿತರಿದ್ದರು.

ಆದ್ಯವೀರ್ ಒಡೆಯರ್ ತೊಟ್ಟಿಲು ಹಿಡಿದು ಸಹೋದರನ ನೋಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

ತಾಯಿ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ತೊಟ್ಟಿಲು ಶಾಸ್ತ್ರ ನಡೆಯಿತು.

ಯದುವೀರ್ ದ್ವಿತೀಯ ಪುತ್ರನಿಗೆ ತೊಟ್ಟಿಲು ಶಾಸ್ತ್ರ Read More

ಕನ್ನಡ ಪರ ಸಂಘಟನೆಗಳಿಂದ ಚಾಮುಂಡಿ ಬೆಟ್ಟ ಉಳಿವಿಗಾಗಿ ಪಾದಯಾತ್ರೆ

ಮೈಸೂರು: ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಸಧ್ಯದಲ್ಲೇ ವಿವಿಧ ಕನ್ನಡ ಪರ ಸಂಘಟನೆಗಳ ಜೊತೆ ಗೂಡಿ ಬೃಹತ್ ಪಾದಯಾತ್ರೆ ಮಾಡುವುದಾಗಿ ಕನ್ನಡ ಚುಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.

ಕಳೆದ ಎರಡು,ಮೂರು ವರ್ಷಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ಮಾರ್ಗ ಕುಸಿದು ಬಿದ್ದಿತ್ತು.
ಅದಾಗಿ ಮೂರು ವರ್ಷಗಳೇ ಕಳೆದರೂ ಸರಿಪಡಿಸುವ ಕಾರ್ಯ ಆರಂಭವಾಗಿಲ್ಲ ಎಂದು ಅವರು ಅಸಮಾಧಾನ ‌ವ್ಯಕ್ತಪಡಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಅನೇಕ ಕುಟುಂಬಗಳು ವಾಸವಾಗಿವೆ,ಅಲ್ಲದೆ ದೇಶ ವಿದೇಶಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಾರೆ.

ಯಾರಿಗಾದರೂ ಆರೋಗ್ಯದಲ್ಲಿ ಏರು ಪೇರು ಉಂಟಾದರೆ ಪ್ರಥಮ ಚಿಕಿತ್ಸೆ ಮಾಡಲು ಬೆಟ್ಟದಲ್ಲಿ ಸುಸಜ್ಜಿತವಾದ ಆಸ್ಪತ್ರೆ ಇಲ್ಲ,ಅಷ್ಟೇ ಏಕೆ ತುರ್ತು ಚಿಕಿತ್ಸಾ ವಾಹನ ವ್ಯವಸ್ಥೆ ಕೂಡ ಇಲ್ಲದಿರುವುದು ದುರಂತದ ಸಂಗತಿ ಎಂದು ತೇಜಸ್ವಿ ‌ಬೇಸರ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಆಡಳಿತಾಧಿಕಾರಿಗಳಿಗೆ ತುರ್ತು ಚಿಕಿತ್ಸಾ ವಾಹನ (ಅಂಬುಲೆನ್ಸ್) ವಾಹನ 24/7 ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ದೂರಿದ್ದಾರೆ.

ನಂದಿ ರಸ್ತೆ ದುರಸ್ತಿ, ಸುಸಜ್ಜಿತವಾದ ಆಸ್ಪತ್ರೆಯ ನಿರ್ಮಾಣ, ತುರ್ತು ಚಿಕಿತ್ಸಾ ವಾಹನ ನೀಡುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ
ಇದೇ ಡಿಸೆಂಬರ್ ನಲ್ಲಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ಕನ್ನಡಪರ ಸಂಘಟನೆಗಳ‌ ಜೊತೆಗೂಡಿ ನೂರೊಂದು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಗ್ರಹಾರ ವೃತ್ತದಿಂದ ಚಾಮುಂಡಿ ಬೆಟ್ಟದ ದೇವಸ್ಥಾನದ ವರೆಗೂ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.

ಕನ್ನಡ ಪರ ಸಂಘಟನೆಗಳಿಂದ ಚಾಮುಂಡಿ ಬೆಟ್ಟ ಉಳಿವಿಗಾಗಿ ಪಾದಯಾತ್ರೆ Read More

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚನೆ:ಪ್ರಮೋದಾದೇವಿ ವಿರೋಧ

ಮೈಸೂರು:ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚನೆ ಸಂಬಂಧ ಸರ್ಕಾರ ಮತ್ತು ರಾಜಮನೆತನ ನಡುವೆ ಜಟಾಪಟಿ ಮುಂದುವರೆದಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಾಧಿಕಾರ ರಚನೆ ಕುರಿತ ಸಭೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಚಾಮುಂಡಿ‌ ಬೆಟ್ಟದಲ್ಲಿ ಮಂಗಳವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸಭೆ ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಮೇಲ್ ಮೂಲಕ ರಾಜವಂಶಸ್ಥೆ ಪ್ರಮೋದಾದೇವಿ ಅವರಿಗೆ ಪತ್ರ ಬರೆದು ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು.

ಅದಕ್ಕೆ ಮೇಲ್ ಮೂಲಕವೇ ಪ್ರತ್ಯುತ್ತರ ನೀಡಿರುವ ಪ್ರಮೋದಾದೇವಿ ಒಡೆಯರ್, ಸಭೆ ಕಾನೂನು ಬಾಹಿರವಾಗಿ ನಡೆಯುತ್ತಿದೆ. ನ್ಯಾಯಾಲಯದ ವಿರುದ್ಧ ಸಭೆ ನಡೆಸುತ್ತಿರುವುದು ಸರಿಯಲ್ಲ, ಕಾನೂನು ಉಲ್ಲಂಘನೆ ಆಗಲಿದೆ ಎಂದ ಸೂಕ್ಷ್ಮ ಎಚ್ಚರಿಕೆ ನೀಡಿದ್ದಾರೆ.

ಸೆ. 5ಕ್ಕೆ ನ್ಯಾಯಾಲಯದಲ್ಲಿ ಮುಂದುವರಿದ ವಿಚಾರಣೆ ಇದೆ, ಹೀಗಿರುವಾಗ ಸಭೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಮೋದಾದೇವಿ ಪ್ರಶ್ನೆ ಮಾಡಿದ್ದು, ಸಭೆಗೆ ಗೈರಾಗಲು ನಿರ್ಧಾರ ಮಾಡಿದ್ದಾರೆ.

ಪ್ರಾಧಿಕಾರ ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ರಮೋದಾ ದೇವಿ ಅವರು ಚಾಮುಂಡೇಶ್ವರಿ ಬೆಟ್ಟ ನಮ್ಮ ಆಸ್ತಿ ಎಂದು ಪ್ರತಿಪಾದಿಸಿದ್ದಾರೆ.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚನೆ:ಪ್ರಮೋದಾದೇವಿ ವಿರೋಧ Read More