ಚಾಮರಾಜನಗರ: ನಿಮ್ಮ ಡಿಜಿಟಲ್ ಸುರಕ್ಷತೆ ನಮ್ಮ ಆದ್ಯತೆ ಎಂಬ ಕೇಂದ್ರ ಸರ್ಕಾರದ ದೂರಸಂಪರ್ಕದ ಆಶಯದೊಂದಿಗೆ ಚಾ.ನಗರದ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ಸ್ ವಿಭಾಗದ ೮ ವಿದ್ಯಾರ್ಥಿಗಳು ಜಾಗೃತಿ ಅರಿವಿಗಾಗಿ ಆಯ್ಕೆಗೊಂಡು ಸ್ವಯಂ ಪ್ರೇರಿತವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.
ಪಟ್ಟಣದ ಜನನಿಬಿಡ ಪ್ರದೇಶಗಳಾದ ಬಸ್ ನಿಲ್ದಾಣ , ಉದ್ಯಾನವನ,ಶಾಲಾ ಕಾಲೇಜುಗಳು, ಅಷ್ಟೆ ಅಲ್ಲ ಮೈಸೂರಿನ ದಸರದಲ್ಲೂ ಭಾಗವಹಿಸಿ ಸಂಚಾರ ಮಿತ್ರ ಸ್ಕೀಂ.೨.೦ ನ ಸಂಚಾರ ಸಾಥಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ
ಸಂಚಾರ ಸಾಥಿಯಲ್ಲಿ ಮೊಬೈಲ್ ಕಳವು , ಬಿದ್ದು ಹೋದಾಗ ಅನುಸರಿಸಬೇಕಾದ ಮಾರ್ಗಗಳು, ಅದರೊಳಗೆ ಬಳಸಬಯಸಿದ ಸಿಮ್ ಹಾಗೂ ಮಾಲೀಕತ್ವ,ಮಾಲೀಕತ್ವದ ಹೆಸರಲ್ಲಿ ಇರದ ಸಿಮ್ ರದ್ದು ಮಾಡುವ , ವರದಿ ಮಾಡುವ ಬಗ್ಗೆ ತಿಳುವಳಿಕೆ ಮೂಡಿಸಿದರು.
ಚಾಮರಾಜನಗರ ಇಂಜಿನಿಯರಿಂಗ್ ಕಾಲೇಜು ಸಮೀಪ ಇರುವ ಇಂಜಿನಿಯರಿಂಗ್ ಕಾಲೇಜಿನ E&C ವಿಭಾಗದ ಮುಖ್ಯಸ್ಥರಾಗಿರುವ ಇಮ್ರಾನ್ ಅವರ ನೇತೃತ್ವದ ಈ ತಂಡದಲ್ಲಿ ಐಶ್ವರ್ಯ, ಪಲ್ಲವಿ,ಸುಸ್ಮಿತಾ, ಕೀರ್ತನಾ, ಭಾವನಾ,ಐಶ್ವರ್ಯ, ತೇಜಸ್ವಿನಿ,ಯಶಸ್ವಿನಿ ಎಂಬ ಎಂಟು ಮಕ್ಕಳು ಆಯ್ಕೆಗೊಂಡು ಸ್ವಯಂ ಪ್ರೇರಿತವಾಗಿ ಯಾವುದೆ ಪ್ರತಿಪಲಾಪೇಕ್ಷೆ ಇಲ್ಲದೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ.
ಚಾಮರಾಜನಗರ: ಈ ಬಾರಿಯ ಲೋಕ್ ಅದಾಲತ್‍ನಲ್ಲಿ 1,04,649 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ವಾಜ್ಯಪೂರ್ವ ಪರಿಹಾರ (ಎ.ಡಿ.ಆರ್) ಕೇಂದ್ರದಲ್ಲಿ ಈ ವಿಷಯ ತಿಳಿಸಿದ ಅವರು ಕಳೆದ ಬಾರಿಯ ಲೋಕ್ ಅದಾಲತ್‍ನಲ್ಲಿ 1,01,431 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿತ್ತು ಎಂದು ಹೇಳಿದರು.
ಸೆ.13 ರಂದು ನಡೆದ ಅದಾಲತ್‍ನಲ್ಲಿ 2672 ನ್ಯಾಯಾಲಯ ಪ್ರಕರಣಗಳು ಹಾಗೂ 1,01,977 ವ್ಯಾಜ್ಯಪೂರ್ವ ಸೇರಿದಂತೆ ಒಟ್ಟು 1,04,649 ಪ್ರಕರಣಗಳು ಇತ್ಯರ್ಥವಾಗಿವೆ. ಹೆಚ್ಚುವರಿಯಾಗಿ 3218 ಪ್ರಕರಣಗಳನ್ನು ಪರಿಹರಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ‘ಸರ್ವರಿಗೂ ನ್ಯಾಯ’ ಪರಿಕಲ್ಪನೆಯಡಿ ಜನಸಾಮಾನ್ಯರ ಅನುಕೂಲಕ್ಕಾಗಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ಜಿಲ್ಲೆಯ ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಎಲ್ಲಾ ರೀತಿಯ ಸಿವಿಲ್, ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳು, ಇತರೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಲು ಮೆಗಾ-ಲೋಕ್ ಅದಾಲತ್ ಏರ್ಪಡಿಸಲಾಗಿತ್ತು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಈ ಬಾರಿಯ ಲೋಕ್ ಅದಾಲತ್‍ನಲ್ಲಿ ಚಾಮರಾಜನಗರದ 440, ಯಳಂದೂರು 308, ಕೊಳ್ಳೇಗಾಲ 1405 ಹಾಗೂ ಗುಂಡ್ಲುಪೇಟೆಯ 519 ಸೇರಿದಂತೆ ಬಾಕಿ ಇದ್ದ 2672 ನ್ಯಾಯಾಲಯದ ಪ್ರಕರಣಗಳು ಮತ್ತು ಚಾಮರಾಜನಗರದ 56268, ಯಳಂದೂರಿನ 2849, ಕೊಳ್ಳೆಗಾಲ 17931 ಹಾಗೂ ಗುಂಡ್ಲುಪೇಟೆಯ 24929 ಸೇರಿದಂತೆ ಒಟ್ಟು 1,01,977 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದ ಒಟ್ಟು 1,04,649 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಚೆಕ್ಕು ಅಮಾನ್ಯ ಪ್ರಕರಣಗಳು, ಎಂ.ಇ.ಸಿ ಹಾಗೂ ಕಕ್ಷಿದಾರರಿಗೆ ಪರಿಹಾರ ರೂಪದಲ್ಲಿ ಒಟ್ಟು 12,72,69,860 ರೂ. ಗಳನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು
ರಾಜಿ ಯೋಗ್ಯ ಪ್ರಕರಣಗಳ ಇತ್ಯರ್ಥಕ್ಕಾಗಿ ಜನಸಾಮಾನ್ಯರು ಲೋಕ್ ಅದಾಲತ್‍ಗಾಗಿ ಕಾಯುವ ಅವಶ್ಯವಿಲ್ಲ. ಇದಕ್ಕಾಗಿ ನ್ಯಾಯಾಲಯದಲ್ಲಿ ಇದೇ ಮೊದಲಬಾರಿಗೆ ಮಧ್ಯಸ್ಥಿಕೆ ಶಿಬಿರ ಏರ್ಪಡಿಸಲಾಗಿದೆ. ಮಧ್ಯಸ್ಥಿಕೆ ಶಿಬಿರವು ಉಭಯ ಪಕ್ಷಾಕಾರರಿಗೂ ನ್ಯಾಯ ದೊರೆಯಲು ನಿರಂತರವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಅದಾಲತ್ ಯಶಸ್ಸಿಗೆ ಕಾರಣರಾದ ಜಿಲ್ಲಾಡಳಿತ, ವಿವಿಧ ಇಲಾಖೆಗಳು, ಬ್ಯಾಂಕ್‍ಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಜಿಲ್ಲಾ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ತಿಳಿಸಿದರು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್, ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಿ.ಡಿ. ಪ್ರಕಾಶ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಚಾಮರಾಜನಗರ: ನಗರದ ವ್ಯಕ್ತಿಯೊಬ್ಬರು HPIN , IPO ಆ್ಯಪ್ ನಲ್ಲಿ ಹಣಕಾಸು ಚೈನ್ ಲಿಂಕ್ ನ ಆನ್ ಲೈನ್ ವಂಚನೆಗೆ ಒಳಗಾಗಿದ್ದಾರೆ.
ಈ ಸಂಬಂದ ಸೆನ್ ಪೊಲಿಸ್ ಠಾಣೆಗೆ ದೂರು ದಾಖಲಿಸಿರುವ ವ್ಯಕ್ತಿ, 3,20,920 ಹಣ ಕಳೆದುಕೊಂಡಿದ್ದು ತಾವು ಕಳೆದುಕೊಂಡ ಹಣವನ್ನ ದೊರಕಿಸಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಆ್ಯಪ್ ಇನ್ಸ್ ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡಿ,ವಿವಿದ ಖಾತೆಗಳಲ್ಲಿ 88,925,76 ಹಾಗು ಮತ್ತೊಂದು ಖಾತೆಯಲ್ಲಿ 5,39,150,78 ಎಂದು ವ್ಯಾಲೆಟ್ ನಲ್ಲಿ ತೋರಿಸುತ್ತಿದ್ದು,ಹಣ ಡ್ರಾ ಮಾಡಲು ಹೋದಾಗ ವೈಫಲ್ಯ ಕಂಡು ಬಂದಿದೆ.
ಅಡ್ಮಿನ್ ಜೊತೆ ಚರ್ಚಿಸಲಾಗಿ ವರ್ಷದವರೆಗೆ ಹಣ ತೆಗೆಯಲಾಗುವುದಿಲ್ಲ ಎಂಬ ಸಂದೇಶದ ಜೊತೆಗೆ ಮತ್ತೆ 5 ಲಕ್ಷ ಪಾವತಿಸುವಂತೆ ಸೂಚಿಸಿದ್ದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ವಂಚನೆಗೊಳ ಗಾಗಿರುವುದು ಗೊತ್ತಾಗಿದೆ.
ಈ ಸಂಬಂದ ತಕ್ಷಣ ದೂರು ದಾಖಲಿಸಿ ಕಳೆದುಕೊಂಡ ಹಣ ಭರಿಸಿಕೊಡುವಂತೆ ವ್ಯಕ್ತಿ ದೂರು ಸಲ್ಲಿಸಿದ್ದಾರೆ.
ಈ ರೀತಿಯ ಹೂಡಿಕೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡವರಿದ್ದು, ಈ ರೀತಿಯ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಸೆನ್ ಪೊಲಿಸ್ ಇನ್ಸ್ ಪೆಕ್ಟರ್ ಸಾಗರ್ ಮನವಿ ಮಾಡಿದ್ದಾರೆ.
ಹಣ ಕಳೆದುಕೊಂಡವರ ಪೈಕಿ ಸರ್ಕಾರಿ ನೌಕರರು.ಇಂಜಿನಿಯರಿಂಗ್ ಪದವೀಧರರು ,ವಕೀಲರು ಉದ್ಯಮಿ ಗಳೇ ಹೆಚ್ಚಾಗಿದ್ದಾರೆಂದು ತಿಳಿದುಬಂದಿದೆ.
ಚಾಮರಾಜನಗರ: ನನ್ನ ಸಾವಿಗೆ ಸೆನ್ ಡಿವೈಎಸ್ ಪಿ ಪವನ್ ಕುಮಾರ್ ಕಾರಣ ಎಂದು ಆರೋಪಿಸಿ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು,ಇದು ಚರ್ಚೆಗೆ ಗ್ರಾಸ ಒದಗಿಸಿದೆ.
ಬೆಂಗಳೂರು ಮೂಲದ ಬ್ಯಾಡ್ಮಿಂಟನ್ ಕೋಚ್ ಆಗಿರುವ ಚಂದನ್ ಗಂಭೀರ ಆರೋಪ ಮಾಡಿ ವಿಡಿಯೊ ಹರಿಯಬಿಟ್ಟಿದ್ದು ಇದು ಮಾನವೀಯತೆಗೆ ಬೆಂಕಿ ಇಟ್ಟ ಕಥೆಯಾಗಿದೆ.
ಕೋಚರ್ ಚಂದನ್ ಹೇಳುವಂತೆ, ನಾನು ಅವರಿಗೆ ಫ್ರೀ ಕೋಚಿಂಗ್ ಕೊಟ್ಟಿದ್ದೇನೆ, ಅವರ ಬಳಿ ಹಣ ಕೂಡ ಪಡೆದಿದ್ದೇನೆ. ನನಗೆ ತುಂಬಾ ಕಿರುಕುಳ ಕೊಡ್ತಿದ್ದಾರೆ, ನಾನು ಸತ್ತ ಮೇಲೆ ನಮ್ಮ ತಾಯಿನಾ ನೀವೆ ನೊಡ್ಕೊಳ್ಳಿ. ನನ್ನ ಬಿಟ್ಟರೆ ಯಾರೂ ನೋಡಿಕೊಳ್ಳುವವರು ಇಲ್ಲ, ಮುಂದಿನ ಜನ್ಮದಲ್ಲಿ ನಾನು ನಿಮ್ಮ ಸಾಲ ತಿರೀಸ್ತೀನಿ ಎಂದು ಹೇಳಿದ್ದಾನೆ.
ನಮ್ಮ ಅತ್ತೆ ಮನೆಗೆ ಹೇಳ್ತೀನಿ ಅಂತೀರಾ, ಇದೆಲ್ಲಾ ಬೇಡ ಸರ್. ನಾನು ಸತ್ತರೆ ಹೆಂಡ್ತಿ ಮಕ್ಕಳನ್ನು ನೀವು ಸಾಕುತ್ತಿರಾ, 23 ಜನ ಪೊಲೀಸರಿಗೆ ಒಂದು ರೂಪಾಯಿ ಪಡೆಯದೆ ಕೋಚಿಂಗ್ ಕೊಟ್ಟಿದ್ದೇನೆ ಎಂದು ಬೆಂಗಳೂರು ಮೂಲದ ಬ್ಯಾಡ್ಮಿಂಟನ್ ಕೋಚ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ.
ನಿಗದಿತ ಅವಧಿ ಯೊಳಗೆ ಕೊಡುತ್ತೇನೆಂದು ಹಣ ಪಡೆದು ಕೊಡದೆ ಸತಾಯಿಸುತ್ತಿರೋದು ನೋಡಿದರೆ ಕೊಟ್ಟ ಹಣ ವಾಪಸ್ ಕೇಳೊದ್ ತಪ್ಪಾ ಎಂಬಂತೆ ಈಗ ಅದಿಕಾರಿಗೆ ತಲೆ ನೋವಾಗಿ ಪರಿಣಮಿಸಿದ್ದು ಎಷ್ಟರ ಮಟ್ಟಿಗೆ ಪ್ರಕರಣ ಸುಖಾಂತ್ಯಗೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ.
ಚಾಮರಾಜನಗರ: ಅಖಿಲ ಕರ್ನಾಟಕ ಕನ್ನಡ ಮಹಾ ಸಭಾ ರಾಜ್ಯ ಘಟಕದ ವತಿಯಿಂದ ಚಾಮರಾಜನಗರದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯನ್ನು ಯಶಸ್ವಿಯಾಗಿ ಆಚರಿಸಲಾಯಿತು.
ಚಾಮರಾಜನಗರದ ವರನಟ ಡಾ. ರಾಜ್ ಕುಮಾರ್ ಸಭಾಂಗಣದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಕೊಳ್ಳೇಗಾಲ ಶಾಸಕರಾದ ಎ ಆರ್ ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜನಗರ ಶಾಸಕರಾದ ಪುಟ್ಟ ರಂಗ ಶೆಟ್ಟಿ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹನೂರು ಮಾಜಿ ಶಾಸಕರಾದ ನರೇಂದ್ರ ಅವರನ್ನು ವಿಶೇಷ ಸನ್ಮಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಜವರೇಗೌಡ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಸುರೇಶ್ ನಾಯ್ಕ, ಪುಣ್ಯದ ಹುಂಡಿ ರಾಜು, ಸುಶೀಲ ನಂಜಪ್ಪ, ಎಸ್ ಪಿ ಶಿವು, ನಂಜುಂಡಸ್ವಾಮಿ, ಹನುಮಂತಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜುಲೈ ೧೨ರಂದು ಹಮ್ಮಿಕೊಳ್ಳಲಾಗಿದೆ.
ಈ ಲೋಕ್ ಅದಾಲತ್ ಪ್ರಯೋಜನವನ್ನು ಪಡೆಯುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಧೀಶರಾದ ಜಿ. ಪ್ರಭಾವತಿ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲದ ನ್ಯಾಯಾಲಯಗಳಲ್ಲಿ ಬೈಟಕ್ ಗಳನ್ನು ಏರ್ಪಡಿಸಿ ಸಂಧಾನಕಾರರನ್ನು ನೇಮಿಸಿ ರಾಜೀ ಯೋಗ್ಯ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಲೋಕ್ ಅದಾಲತ್ ನಲ್ಲಿ ಇತ್ಯರ್ಥ ಮಾಡಲಾಗುತ್ತದೆ. ಆಯಾ ನ್ಯಾಯಾಲಯಗಳಲ್ಲಿ ನಡೆಯುವ ಲೋಕ್ ಅದಾಲತ್ ಅನ್ನು ಜನತೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಲೋಕ್ ಆದಾಲತ್ ನಲ್ಲಿ ಸಂಧಾನಕಾರರು ನೀಡುವ ಸಲಹೆಗಳನ್ನು ಆಲಿಸಿ, ಪರಸ್ಪರ ಒಪ್ಪಿಗೆಯಾದಲ್ಲಿ ಪ್ರಕರಣವನ್ನು ಲೋಕ್ ಅದಾಲತ್‌ನಲ್ಲೇ ಬಗೆಹರಿಸಿಕೊಳ್ಳಬಹುದು. ಇದರಿಂದ ಕಕ್ಷಿದಾರರ ಸಮಯದ ಜೊತೆಗೆ ಹಣ ಉಳಿತಾಯವಾಗಲಿದೆ. ಪಕ್ಷಕಾರರ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ ಎಂದು ಪ್ರಭಾವತಿ ವಿವರಿಸಿದರು.
ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿ, ಇತರೆ ಯಾವುದೇ ರೀತಿಯ ಸಿವಿಲ್ ಪ್ರಕರಣಗಳು, ದಾಂಪತ್ಯ ಹಕ್ಕುಗಳ ಪುನರ್ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆ, ಮೋಟಾರ್ ವಾಹನ ಅಪಘಾತ, ಕೈಗಾರಿಕಾ ವಿವಾದ ಕಾಯ್ದೆಯಂತಹ ಪ್ರಕರಣಗಳು, ರಾಜೀ ಯೋಗ್ಯ ಕ್ರಿಮಿನಲ್ ಪ್ರಕರಣಗಳು, ಚೆಕ್ಕು ಅಮಾನ್ಯ, ಕಾರ್ಮಿಕ ಕಾಯ್ದೆಯಡಿಯಲ್ಲಿ ಬರುವ ಪ್ರಕರಣಗಳು, ವಿದ್ಯುತ್ ಕಳವು ಪ್ರಕರಣಗಳು, ಅಕ್ರಮ ಕಲ್ಲು, ಮರಳು ಸಾಗಾಣಿಕೆ, ಇತರೆ ಯಾವುದೇ ರಾಜೀ ಯೋಗ್ಯ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ರಾಜೀ ಮಾಡಿಕೊಳ್ಳಬಹುದಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ಲೋಕ್ ಅದಾಲತ್ ನಲ್ಲಿ ರಾಜಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಿರುವುದರಿಂದ ನ್ಯಾಯಾಲಯಕ್ಕೆ ದಾಖಲಿಸುವ ಪೂರ್ವದಲ್ಲಿ ವ್ಯಾಜ್ಯಗಳ ಪೂರ್ವಭಾವಿ ಸಮಾಲೋಚನೆಯಲ್ಲಿ ರಾಜಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಜುಲೈ ೧೨ರಂದು ನಡೆಯಲಿರುವ ಲೋಕ್ ಅದಾಲತ್‌ನಲ್ಲಿ ಕಳೆದ ಲೋಕ್ ಅದಾಲತ್‌ಕ್ಕಿಂತಲೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗುವ ನಿರೀಕ್ಷೆ ಹೊಂದಲಾಗಿದೆ. ಈ ಬಗ್ಗೆ ಪೂರ್ವಭಾವಿ ಸಮಾಲೋಚನೆ ಪ್ರತಿ ನ್ಯಾಯಾಲಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ನಡೆಯುತ್ತಿದೆ. ಯಾವುದೇ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ರಾಜೀ ಯೋಗ್ಯ ಪ್ರಕರಣಗಳಲ್ಲಿ ಪಕ್ಷಕಾರರು ಸಂಬಂಧಪಟ್ಟ ನ್ಯಾಯಾಲಯಕ್ಕೆ ಲೋಕ್ ಅದಾಲತ್ ಗೆ ಪ್ರಕರಣವನ್ನು ವರ್ಗಾಯಿಸಲು ಮನವಿ ಸಲ್ಲಿಸಿದ್ದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ್ ಅದಾಲತ್ ನ ಮುಂದೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್ ಮತ್ತು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ಉಪಸ್ಥಿತರಿದ್ದರು.
ಕೊಳ್ಳೇಗಾಲ: ಚಾಮರಾಜನಗರ ತಾಲೂಕಿನ ಕೋಡಿ ಉಗ್ಗನೆ ಗ್ರಾಮದ ಕೆ ಎಸ್. ತನ್ಮಯ್ ಅವರು ಜೀ ಅಡ್ವಾನ್ಸ್ 2025 ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 131 ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಉಗ್ಗನೆ ಗ್ರಾಮದ ಸರ್ವೆಶ್ ಸಿದ್ದಯ್ಯ ಅವರ ಮಗ ಎಸ್ ಶ್ರೀಧರ್ ಮತ್ತು ಮಂಜುಳಾ ದಂಪತಿಗಳ ಪುತ್ರ ಕೆ ಎಸ್. ತನ್ಮಯ್ ಇತ್ತೀಚಿಗೆ ನಡೆದ ಜೀ ಅಡ್ವಾನ್ಸ್ 2025 ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 131 ರ‍್ಯಾಂಕ್ ಪಡೆದಿದ್ದಾರೆ.
ಕೇರಳದ ಕೊಟ್ಟಾಯಮ್ ನ ಪಿ ಎಂ ಶ್ರೀ ಜವಹರ್ ನವೋದಯ ವಿದ್ಯಾಲಯದಲ್ಲಿ ಐ ಐ ಟಿ ಸಿ ಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದು ಜಿಲ್ಲೆಗೆ ಕೀರ್ತಿ ತಂದಿರುವ ತನ್ಮಯ್ ಅವರ ಸಾಧನೆಯನ್ನು ನಾಗರಿಕರು ಹಾಗೂ ಕುಟುಂಬದವರು ಬಂಧು ಬಳಗದವರು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಚಾಮರಾಜನಗರ (ಗುಂಡ್ಲುಪೇಟೆ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೈಸೂರು-ಊಟಿ ಹೆದ್ದಾರಿಯಲ್ಲಿ ಆನೆ ಕಂಡ ಯುವಕ ಕಾರಿಂದಿಳಿದು ಆನೆ ಸಮೀಪ ಫೋಟೋ ತೆಗೆದುಕೊಳ್ಳಲು ಹೋಗಿ ಸಿಕ್ಕಿ ಬಿದ್ದು ದಂಡ ಕಟ್ಟಿದ ಪ್ರಸಂಗ ನಡೆದಿದೆ.
ಬಂಡೀಪುರ ಹೆದ್ದಾರಿಯಲ್ಲಿ ನಿಂತ ಆನೆ ಮುಂದೆ ಪಟ್ಟಣದ ಯುವಕ ಸಾಹುಲ್ ಆನೆ ಜೊತೆ ಫೋಟೋಗಾಗಿ ಹುಚ್ಚಾಟ ಮೆರೆದು ಅರಣ್ಯ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟು ದಂಡ ಕಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಶನಿವಾರ ಬಂಡೀಪುರ ಹೆದ್ದಾರಿಯಲ್ಲಿ ಸ್ನೇಹಿತರೊಂದಿಗೆ ಕಾರಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ನಿಂತಿದ್ದ ಕಾಡಾನೆ ಕಂಡು ಗುಂಡ್ಲುಪೇಟೆ ನಿವಾಸಿ ಸಾಹುಲ್ ರಸ್ತೆಗಿಳಿದು ಫೋಟೋ ತೆಗೆಸಿಕೊಳ್ಳುತ್ತಿದ್ದಾಗ ಕಾರಲ್ಲಿದ್ದ ಸ್ನೇಹಿತ ಆನೆ ಜೊತೆ ಕೀಟಲೆ ಮಾಡುವ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಆತನನ್ನು ಕರೆಯಿಸಿ ವಿಚಾರಣೆ ನಡೆಸಿ ಬುದ್ದಿವಾದ ಹೇಳಿ 25 ಸಾವಿರ ದಂಡ ಪೀಕಿಸಿದ್ದಾರೆ.
ಪ್ರವಾಸಿಗರು ಇತ್ತೀಚೆ ಅರಣ್ಯ ಹಾಗೂ ಕಾಡುಪ್ರಾಣಿಗಳೊಂದಿಗೆ ಪೊಟೊ ವಿಡಿಯೊ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿದ್ದು ಅರಣ್ಯ ಇಲಾಖೆಯವರ ಗಸ್ತು ನಿರ್ಲಕ್ಷ್ಯವೆ ಇದಕ್ಕೆ ಕಾರಣವಾಗಿದೆ.
ಇದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾದ ಮೇಲೆ ಇಲಾಖೆ ಎಚ್ಚೆತ್ತುಕೊಂಡಿರುವುದು ವಿಪರ್ಯಾಸ.
ಚಾಮರಾಜನಗರ: ಜಾತಿಯಿಂದ ಯಾರೂ ಪ್ರತಿಭಾವಂತರಾಗುವುದಿಲ್ಲ, ಎಲ್ಲರಲ್ಲಿಯೂ ಪ್ರತಿಭೆ ಇರುತ್ತದೆ ಅದು ಹೊರಬರಲು ಅವಕಾಶಗಳು ಸಿಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸತ್ತೇಗಾಲದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮಮ್ಮ ಸೋಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.
ಎರಡು ಕೋಟಿ ರೂ ವೆಚ್ಚ ಮಾಡಿ ನಿರ್ಮಾಣವಾಗಿರುವ ಶಾಲೆಯಲ್ಲಿ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯಗಳನ್ನು ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರಕುವಂತೆ ಮಾಡಿದ್ದಾರೆ. ಸ್ವಾತಂತ್ಯ್ರಕ್ಕೂ ಮುನ್ನ ಶೂದ್ರರು, ದಲಿತರಿಗೆ ಅವಕಾಶಗಳೇ ಇರಲಿಲ್ಲ. ಅಂಬೇಡ್ಕರ್ ಅವರು ಕಷ್ಟಪಟ್ಟು ವಿದ್ಯಾವಂತರಾದರು. ಶಿಕ್ಷಣ ಪ್ರಬಲವಾದ ಅಸ್ತ, ಶಿಕ್ಷಣದಿಂದ ವಂಚಿತರಾದವರು ಸ್ವಾಭಿಮಾನದಿಂದ, ಗೌರವದಿಂದ ಬದುಕುವುದು ಕಷ್ಟವಾಗುತ್ತದೆ. ಅದಕ್ಕಾಗಿ ಎಲ್ಲರೂ ವಿದ್ಯಾವಂತ ರಾಗಲೇಬೇಕು ಎಂದು ಸಿಎಂ ಕರೆ ನೀಡಿದರು.
ಮರಿಸ್ವಾಮಿಯವರು ಈ ಊರಿನಲ್ಲಿ ಹುಟ್ಟಿ ಐಪಿಎಸ್ ಅಧಿಕಾರಿಯಾಗಿ, ಪೊಲೀಸ್ ಮಹಾನಿರ್ದೇಶಕರಾಗಿ ಈ ಊರಿಗೆ ಹಾಗೂ ಈ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಈ ಊರಿನ ಜನ ಹೆಮ್ಮೆ ಪಡುವಂತೆ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರು ಸತ್ತೇಗಾಲ ಗ್ರಾಮದ ಗ್ರಾಮಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಈ ಶಾಲೆಯ ನಿರ್ಮಾಣಕ್ಕೆ ಆಸಕ್ತಿ ತಳೆದು ಇತರರ ಸಹಾಯವನ್ನು ಪಡೆದು ಶಾಲೆಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ನಾವು ವಿದ್ಯಾರ್ಥಿಗಳಾಗಿದ್ದಾಗ ಬರಿಗಾಲಿನಲ್ಲಿ ಶಾಲೆಗೆ ತರಳುತ್ತಿದ್ದೆವು. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯೂ ಶೂ, ಸಾಕ್ಸ್ ಹಾಗೂ ಸಮವಸ್ತ್ರ ಹಾಕಿಕೊಳ್ಳಬೇಕೆಂದು ಶೂಭಾಗ್ಯ ಕಾರ್ಯಕ್ರಮವನ್ನು ಜಾರಿ ಮಾಡಿದ್ದೆ. ಈಗ ಹಾಲು, ರಾಗಿ ಮಾಲ್ಟ್, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು, ಸಮವಸ್ತ್ರ, ಪುಸ್ತಕವನ್ನು ಕೊಡುತ್ತಿದ್ದೇವೆ. ಹಾಗಾಗಿ ಮಕ್ಕಳು ಎಲ್ಲಾ ಸೌಲಭ್ಯ ಪಡೆದು ಚೆನ್ನಾಗಿ ಓದಬೇಕು, ವಿದ್ಯೆಯಿಂದ ವಂಚಿತರಾಗಬಾರದು ಎಂದು ಸಿಎಂ ಸಲಹೆ ನೀಡಿದರು.
ನಮ್ಮ ಬಜೆಟ್ 3 ಲಕ್ಷದ 71 ಸಾವಿರ ಕೋಟಿ. ಅದರಲ್ಲಿ 1.20 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಸತ್ತೇಗಾಲದಲ್ಲಿ 14 ಮತಗಟ್ಟೆಗಳಿದ್ದು ಪಟ್ಟಣ ಪಂಚಾಯಿತಿ ಮಾಡಲು ಮನವಿ ಸಲ್ಲಿಸಿದ್ದಾರೆ. ಅದನ್ನು ಈಡೇರಿಸುತ್ತೇನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಧನಗೆರೆ ಜಾಗೀರ್‌ದಾರ್ ಅಣೆಕಟ್ಟೆಗೆ ನೀರು ಒದಗಿಸುವ ಜೊತೆಗೆ ಬೇಸಿಗೆ ಬೆಳೆಗೆ ನೀರು ಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ನೀರಿದ್ದರೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾ ಉಸ್ತುವರಿ ಸಚಿವ ಕೆ.ವೆಂಕಟೇಶ್, ಸಚಿವರಾದ ಡಾ:ಹೆಚ್.ಸಿ ಮಹದೇವಪ್ಪ, ಮಧು ಬಂಗಾರಪ್ಪ. ಶಾಸಕ ಎಂ.ಆರ್.ಮಂಜುನಾಥ್, ಎಂಎಸ್‌ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಶಾಸಕರಾದ ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಮಾಜಿ ಶಾಸಕರಾದ ನರೇಂದ್ರ, ನಂಜುಂಡಸ್ವಾಮಿ, ಮಾಜಿ ಸಚಿವ ಲಿಂಗಯ್ಯ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಶಾಲಾ ಕಟ್ಟಡದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ದಾನಿಗಳು ಹಾಗೂ ನಿವೃತ್ತ ಪೋಲೀಸ್ ಮಹಾನಿರ್ದೇಶಕರಾದ ಎಸ್ ಮರಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.