ಲೋಕ್ ಅದಾಲತ್‍ನಲ್ಲಿ 1,20,045 ಪ್ರಕರಣಗಳು ಇತ್ಯರ್ಥ: ನ್ಯಾ.ಜಿ. ಪ್ರಭಾವತಿ

ಚಾಮರಾಜನಗರ: ಈ ಬಾರಿಯ ಲೋಕ್ ಅದಾಲತ್‍ನಲ್ಲಿ 1,20,045 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ವಾಜ್ಯಪೂರ್ವ ಪರಿಹಾರ ಕೇಂದ್ರದಲ್ಲಿ ಈ ವಿಷಯ ತಿಳಿಸಿದ ಅವರು ಕಳೆದ ಬಾರಿಯ ಲೋಕ್ ಅದಾಲತ್‍ನಲ್ಲಿ 1,04,649 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿತ್ತು. ಇತ್ತೀಚೆಗೆ ಅಂದರೆ ಡಿ.13ರಂದು ನಡೆದ ಅದಾಲತ್‍ನಲ್ಲಿ 2642 ನ್ಯಾಯಾಲಯ ಪ್ರಕರಣಗಳು ಹಾಗೂ 1,17,403 ವ್ಯಾಜ್ಯಪೂರ್ವ ಸೇರಿದಂತೆ ಒಟ್ಟು 1,20,045 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಹೇಳಿದರು.

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ‘ಸರ್ವರಿಗೂ ನ್ಯಾಯ’ ಪರಿಕಲ್ಪನೆಯಡಿ ಜನಸಾಮಾನ್ಯರ ಅನುಕೂಲಕ್ಕಾಗಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ಜಿಲ್ಲೆಯ ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಎಲ್ಲಾ ರೀತಿಯ ಸಿವಿಲ್, ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳು, ಇತರೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಲು ಮೆಗಾ-ಲೋಕ್ ಅದಾಲತ್ ಏರ್ಪಡಿಸಲಾಗಿತ್ತು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಈ ಬಾರಿಯ ಲೋಕ್ ಅದಾಲತ್‍ನಲ್ಲಿ ಚಾಮರಾಜನಗರದ 665, ಯಳಂದೂರು 230, ಕೊಳ್ಳೇಗಾಲ 1089 ಹಾಗೂ ಗುಂಡ್ಲುಪೇಟೆಯ 658 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದ ಒಟ್ಟು 1,17,403 ಸೇರಿದಂತೆ 1,20,045 ಪ್ರಕರಣಗಳು ಇತ್ಯರ್ಥಗೊಂಡಿದೆ ಎಂದರು.ಒಟ್ಟು 2642 ಪ್ರಕರಣಗಳಲ್ಲಿ 10,89,73,167 ರೂ.ಗಳು ಹಾಗೂ 1,17,403 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 4,91,38,228 ರೂಪಾಯಿ ಒಟ್ಟು 15,81,11,395 ಮೊತ್ತವನ್ನ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೌಟುಂಬಿಕವಾಗಿ ವಿವಾಹ ವಿಚ್ಛೇಧನ, ಪತಿ ಅಥವಾ ಪತ್ನಿಯಿಂದ ಜೀವನಾಂಶ ಕೋರಿಕೆ ಹಾಗೂ ವಿಚ್ಚೇಧನಾ ಪ್ರಕರಣ ದಾಖಲಾಗುವ ದೂರುಗಳು ಸೇರಿದಂತೆ ಒಟ್ಟು ೧೧ ಪ್ರಕರಣಗಳನ್ನು ಇತ್ಯರ್ಥಪಡಿಸಿ ಪತಿ-ಪತ್ನಿಯರನ್ನು ಒಂದುಗೂಡಿಸಲಾಗಿದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿದ್ದ ಬಾಕಿ ರಾಜಿಯೋಗ್ಯ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳ ಕಕ್ಷಿದಾರರು ನ್ಯಾಯಾಧೀಶರು, ವಕೀಲರು, ಸಂಧಾನಕಾರರಿಂದ ಲೋಕ್ ಅದಾಲತ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ 10-15 ವರ್ಷಗಳಿಂದ ಬಾಕಿ ಇದ್ದ 7 ಪ್ರಕರಣಗಳನ್ನು ರಾಜಿ ಮೂಲಕ ಹಾಗೂ ಅಪಘಾತ ವಿಮಾ ಪರಿಹಾರ ಸೇರಿದಂತೆ ಪ್ರಕರಣ ಇತ್ಯರ್ಥಪಡಿಸಲಾಗಿದೆ.
ಅಲ್ಲದೆ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗುವ ಮೊದಲೆ ಸಾಕಷ್ಟು ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥವಾಗಿರುವುದು ಹರ್ಷದಾಯವಾಗಿದೆ. ಇದರಿಂದ ಕಕ್ಷಿದಾರರ ಸಮಯ, ಹಣ, ಉಳಿತಾಯವಾಗಿದೆ. ನ್ಯಾಯಾಲಯದ ಹೊರೆಯೂ ತಗ್ಗಿದೆ. ಅದಾಲತ್ ಯಶಸ್ಸಿಗೆ ಕಾರಣರಾದ ಜಿಲ್ಲಾಡಳಿತ, ವಿವಿಧ ಇಲಾಖೆಗಳು, ಬ್ಯಾಂಕ್‍ಗಳಿಗೆ ಅಭಿನಂದನೆಗಳನ್ನು ಜಿ. ಪ್ರಭಾವತಿ ಅವರು ತಿಳಿಸಿದರು.

ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಸಕ್ತ (2025) ವರ್ಷದಲ್ಲಿ ನಾಲ್ಕು ಲೋಕಾ ಅದಾಲತ್ ನಡೆದಿತ್ತು ನ್ಯಾಯಾಲಯದ ಒಟ್ಟು ಪ್ರಕರಣ10,183, ಪೂರ್ವ ವ್ಯಾಜ್ಯದ 3,90,249 ಒಟ್ಟು 400432 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಇದೇ ‌ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ. ಪ್ರಭಾವತಿ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್, ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಿ.ಡಿ. ಪ್ರಕಾಶ್ ಹಾಜರಿದ್ದರು.

ಲೋಕ್ ಅದಾಲತ್‍ನಲ್ಲಿ 1,20,045 ಪ್ರಕರಣಗಳು ಇತ್ಯರ್ಥ: ನ್ಯಾ.ಜಿ. ಪ್ರಭಾವತಿ Read More

ಮೌಢ್ಯ ಹೋಗಲಾಡಿಸಲು ಚಾ.ನಗರಕ್ಕೆ ಬರುತ್ತಿದ್ದೇನೆ:ಸಿದ್ದರಾಮಯ್ಯ

ಚಾಮರಾಜನಗರ: ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ. ಐದು ವರ್ಷಗಳಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚಾಮರಾಜನಗರದಲ್ಲಿ ಅಖಿಲ ಭಾರತ ಸಹಕಾರಿ ಸಂಘದ ಸಮಾರೋಪ ಸನಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ವೇಳೆ
ಮಾತನಾಡಿದ ಸಿಎಂ,
ಮೂಢನಂಬಿಕೆ ಮತ್ತು ಕಂದಾಚಾರಗಳಲ್ಲಿ ನನಗೆ ನಂಬಿಕೆ ಇಲ್ಲ,ಹಾಗಾಗಿಯೇ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುತ್ತೇನೆ ಎಂದು ಹೇಳಿದರು.

ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಮಾನವಾಗಿ ಕಾಣುವೆ, ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ. ಆ ಮೌಢ್ಯವನ್ನು ಹೋಗಲಾಡಿಸಲು ಇಲ್ಲಿಗೆ ಭೇಟಿ ನೀಡುತ್ತಲೇ ಇದ್ದೇನೆ, ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ ಎಂದು ವಿಶ್ವಾಸದಿಂದ ನುಡಿದರು.

ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ನವೆಂಬರ್ ಕ್ರಾಂತಿ ಎಂಬ ವಿಷಯವನ್ನು ಮಾಧ್ಯಮದವರೇ ಸೃಷ್ಟಿಸಿದರು. ಜನರ ಆಸೆಯಂತೆ ಐದು ವರ್ಷ ಸರ್ಕಾರ ನಡೆಸಿ ನಂತರವೂ ಪುನ: ಕಾಂಗ್ರೆಸ್ ಪಕ್ಷವೇ ಆಯ್ಕೆಯಾಗಿ ಬರಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಂಪುಟ ಪುನರ್ರಚನೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಬೇಕಿದೆ. ಒಟ್ಟು 34 ಸಚಿವರ ಸ್ಥಾನವಿದ್ದು, ಅದರಲ್ಲಿ ಎರಡು ಸ್ಥಾನಗಳು ಖಾಲಿಯಿದೆ. ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಈ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆದ ಬ್ಯಾಂಕ್ ದರೋಡೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಳುವಿನ ಬಗ್ಗೆ ಸುಳಿವು ಸಿಕ್ಕಿದೆ, ಘಟನೆಗೆ ಬಳಸಿದ ಕಾರು ಪೊಲೀಸರಿಗೆ ದೊರಕಿದೆ. ಬ್ಯಾಂಕ್ ದರೋಡೆಯ ಅಪರಾಧಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದರು.

ಮೌಢ್ಯ ಹೋಗಲಾಡಿಸಲು ಚಾ.ನಗರಕ್ಕೆ ಬರುತ್ತಿದ್ದೇನೆ:ಸಿದ್ದರಾಮಯ್ಯ Read More

ಅಪರಿಚಿತ ವಾಹನ ಡಿಕ್ಕಿ ಇಬ್ಬರು ಯುವಕರ ದುರ್ಮರಣ

ಚಾಮರಾಜನಗರ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಬಸವಣ್ಣ ಅವರ ಪುತ್ರ ಅಭಿ(24) ಮತ್ತು ಸಿದ್ದರಾಜು ಮಗ ಅಭಿಷೇಕ್(24) ಮೃತಪಟ್ಟವರು. ಸಿದ್ದರಾಜು ಅವರ ಎರಡನೇ ಮಗ ಗಾಯಾಳು ಮಾದೇಶ್(23) ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಅಪರಿಚಿತ ವಾಹನ ಡಿಕ್ಕಿ ಇಬ್ಬರು ಯುವಕರ ದುರ್ಮರಣ Read More

ವಿದ್ಯುತ್ ತಂತಿ ತಗುಲಿ ಇಬ್ಬರ ದುರ್ಮರಣ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ತಾಲ್ಲೂಕಿ ಅಯ್ಯನಪುರ ಗ್ರಾಮದ ಸಮೀಪವಿರುವ ಕೋಟೆತಿಟ್ಟು ಬಳಿ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವನ್ಬಪ್ಪಿರುವ ಘಟನೆ ನಡೆದಿದೆ.

ಮಲ್ಲೇಶ್ (40) ನಾಗೇಂದ್ರ (48) ಮೃತಪಟ್ಟ ದುದೈವಿಗಳು.

ರಾತ್ರಿ ವೇಳೆ ಜಮೀನಿಗೆ ಹೋಗಿ ನೀರು ಹಾಯಿಸಿ ಬೈಕ್ ನಲ್ಲಿ ಬರುವಾಗ ಜೋತು ಬಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿದ್ದಾರೆ.

ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸ್ಥಳಕ್ಕೆ ಡಿವೈಸ್ಪಿ, ಎಸ್ಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ‌.

ಸ್ಥಳಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬರಬೇಕು ಎಂದು ಅಯ್ಯನಪುರ ಗ್ರಾಮಸ್ಥರು ಪ್ರತಿಭಟನೆ ಕೂಡಾ ನಡೆಸಿದರು.

ವಿದ್ಯುತ್ ತಂತಿ ತಗುಲಿ ಇಬ್ಬರ ದುರ್ಮರಣ Read More

27 ವರ್ಷ ಸೇವೆ ಸಲ್ಲಿಸಿ ಅದೇ ಶಾಲೆಯಲ್ಲಿ ನಿವೃತ್ತಿ ಪಡೆದ ಶಿಕ್ಷಕರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಚಾಮರಾಜನಗರ: ತಾವು ವೃತ್ತಿ ಆರಂಭಿಸಿದ ಶಾಲೆಯಲ್ಲಿ 27 ವರ್ಷ ಸೇವೆ ಸಲ್ಲಿಸಿ ಅದೇ ಶಾಲೆಯಲ್ಲಿ ನಿವೃತ್ತಿ ಪಡೆದ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಸೇರಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಚಾಮರಾಜನಗರ ತಾಲೂಕಿನ ಹಿರೇಬೇಗೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಿ. ಕಾಶಿ ಆರಾಧ್ಯ ಅವರು ಸೇವೆಯಿಂದ ನಿವೃತ್ತಿ ಹೊಂದಿದರು.

ಈ ವೇಳೆ ತಮ್ಮ ಪ್ರೀತಿಯ ಗುರುವಿಗೆ ಹಳೇ ವಿದ್ಯಾರ್ಥಿಗಳು ಚಿನ್ನದುಂಗುರ ತೊಡಿಸಿ ಅಭಿಮಾನ ಮೆರೆದರು.

ಕಾಶಿ ಆರಾಧ್ಯ ಅವರು ತಮ್ಮ ಶಾಲೆಯ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಸ್ವಂತ ಹಣದಿಂದ ಸಮವಸ್ತ್ರ ವಿತರಿಸಿದ್ದು ವಿಶೇಷವಾಗಿತ್ತು.

ಜೊತೆಗೆ, ಬಿಸಿಯೂಟ ತಯಾರಿಸುವ 8 ಮಹಿಳಾ ಸಿಬ್ಬಂದಿಗೆ ಸೀರೆ ವಿತರಿಸಿ ಶಾಲೆ ಮತ್ತು ಅಲ್ಲಿನ ಸಿಬ್ಬಂದಿ ಸೇರಿದಂತೆ ಎಲ್ಲರ ಪ್ರೀತಿ, ಗೌರವವನ್ನು ಸ್ಮರಿಸಿದರು.

ಕಾಶಿ ಆರಾಧ್ಯ ಅವರು ಮೂಲತಃ ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದವರಾಗಿದ್ದು,ಅಲ್ಲಿಂದ ಹಿರೇಬೇಗೂರಿಗೆ 27 ವರ್ಷ ನಿತ್ಯ 8 ಕಿ.ಮೀ ಕಾಲ್ನಡಿಗೆಯಲ್ಲೇ ಬರುತ್ತಿದ್ದುದು ವಿಶೇಷ.

ಅವರ ಬಳಿ ಸೈಕಲ್, ಸ್ಕೂಟರ್ ಯಾವುದೂ ಇಲ್ಲ. ಬಸ್ ಮತ್ತು ಇತರೆ ವಾಹನಕ್ಕಾಗಿ ಕಾಯದೇ ಸಮಯಕ್ಕೆ ಸರಿಯಾಗಿ ಶಾಲೆಗೆ ಆಗಮಿಸಿ ಮಕ್ಕಳಲ್ಲೂ ಶಿಸ್ತು ಮೂಡಿಸಿದ್ದರು.

ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರ ಮನ ಗೆದ್ದಿದ್ದ ಕಾಶಿ ಆರಾಧ್ಯರಿಗೆ ಜನರು ತುಂಬು ಪ್ರೀತಿ, ಭಾರದ ಮನಸ್ಸಿನಿಂದ ಬೀಳ್ಕೊಟ್ಟರು.

ನೆಚ್ಚಿನ ಶಿಕ್ಷಕರ ಕುರಿತು ಶಾಲೆಯ ವಿದ್ಯಾರ್ಥಿ ಮಧು ಮಾತನಾಡಿ, ಕಾಶಿ ಗುರುಗಳು ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರು, ಅವರು ಕೇವಲ ಪಾಠ ಮಾತ್ರ ಮಾಡುತ್ತಿರಲಿಲ್ಲ, ವಿದ್ಯಾರ್ಥಿಗಳ ಕಷ್ಟಕ್ಕೂ ಸ್ಪಂದಿಸುತ್ತಿದ್ದರು,ಶಾಲೆಯ ಮೇಲೆ ಅವರ ಅಭಿಮಾನ ಹೇಳತೀರದು, ಅವರ ನಿವೃತ್ತಿ ಜೀವನ ಸುಖವಾಗಿರಲಿ ಎಂದು ಪ್ರಾರ್ಥಿಸಿದರು.

27 ವರ್ಷ ಸೇವೆ ಸಲ್ಲಿಸಿ ಅದೇ ಶಾಲೆಯಲ್ಲಿ ನಿವೃತ್ತಿ ಪಡೆದ ಶಿಕ್ಷಕರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ Read More