ದಲಿತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್‌ಗೆ ಸೀಮಿತವಾಗಿಸಿದೆ: ನಾರಾಯಣಸ್ವಾಮಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬಿಜೆಪಿಯ ಯಾರೋ ಒಬ್ಬರು ತಲೆ ಕೆಟ್ಟು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದನ್ನೇ ಕಾಂಗ್ರೆಸ್‌ನವರು ಇನ್ನೂ ಜನತೆ ಮುಂದೆ ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟಾಂಗ್ ನೀಡಿದರು

ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸಂವಿಧಾನ ಸಮರ್ಪಣಾ ದಿನ, ಸಂವಿಧಾನ ಜಾಗೃತಿಗಾಗಿ ಭೀಮ ನಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ನಾಯಕ ಎಂಬುದನ್ನು ಇಡೀ ದೇಶದ ಜನರೇ ಒಪ್ಪಿದ್ದಾರೆ. ಹಿಂದೆ ದೇಶದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿತ್ತು. ಆದರೆ ಈಗ ಕಾಂಗ್ರೆಸ್ ತನ್ನ ಆಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ  ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್‌ಗೆ ಮಾತ್ರ ಸೀಮಿತವಾಗಿಸಿದೆ. 75 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ದಲಿತರನ್ನು ಗುಲಾಮರನ್ನಾಗಿಸಿಕೊಂಡಿದೆ. ದೇಶದಲ್ಲಿ ಎಲ್ಲಿಯೂ ಕೂಡ ದಲಿತರಿಗೆ ಮುಖ್ಯಮಂತ್ರಿಸ್ಥಾನ ನೀಡಲಿಲ್ಲ ಎಂದು ಆರೋಪಿಸಿದರು.

ಬಿಜೆಪಿಯನ್ನು ಮೀಸಲಾತಿ ವಿರೋಧಿ ಪಕ್ಷ ಎಂದು ಹೇಳುವ ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ಎಸ್ಸಿಗೆ ಶೇ.15 ರಿಂದ ಶೇ.18 ಗೆ, ಎಸ್ ಟಿಗೆ 3 ರಿಂದ 7 ರಷ್ಟು ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ‌ತಿರುಗೇಟು ನೀಡಿದರು.

ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರೋವರೆಗೂ ಸಂವಿಧಾನ ಬದಲಾವಣೆ ಮಾತೇ ಇಲ್ಲ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದ ಜಮ್ಮು-ಕಾಶ್ಮೀರದ ಜನರಿಗೆ 370 ನೇ ವಿಧಿಯನ್ನು ರದ್ದುಗೊಳಿಸಿ, ಎಲ್ಲಾ ಮೂಲಭೂತ ಸೌಕರ್ಯ ಸಿಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.

ಡಿಕೆಶಿ ಯಾವತ್ತೂ ಸಿಎಂ ಸಿದ್ದರಾಮಯ್ಯ ಮನೆಗೆ ಹೋದವರಲ್ಲ, ಸಿದ್ದರಾಮಯ್ಯ ಕೂಡ ಯಾವತ್ತೂ ಡಿಕೆಶಿ ಮನೆ ಹೋಗಿಲ್ಲ. ಅಧಿಕಾರದ ಆಸೆ, ಸಿಎಂ ಸ್ಥಾನ ಉಳಿಸಿಕೊಳ್ಳಬೇಕೆಂಬ ಹಪಾಹಪಿಯಿಂದ ಅವರ ಮನೆಗೆ ಹೋಗಿದ್ದಾರೆ. ಮನಸ್ಸುಗಳೇ ಬ್ರೇಕ್ ಆಗಿರುವಾಗ ಬ್ರೇಕ್ ಫಾಸ್ಟ್ ತೇಪೆ ಹಚ್ಚುತ್ತಾರೆ ಎಂದು ‌ಟೀಕಾಪ್ರಹಾರ ನಡೆಸಿದರು ‌

ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸಲು ಸೇರಿದ್ದಾರಾ, ದಲಿತರ ಸಮಸ್ಯೆ, ರೈತರ ಸಮಸ್ಯೆ ಬಗೆಹರಿಸಲು ಏನಾದ್ರೂ ಸೇರಿದ್ದಾರಾ ಬ್ರೇಕ್ ಫಾಸ್ಟ್, ಪಾರ್ಟಿ ಮಾಡಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ದಲಿತರಿಗೆ ಕುರ್ಚಿ ಇಲ್ಲ ಅಂತಾ ಸಾಬೀತಾಗಿದೆ. ಸಂಪುಟ ಪುನರ್ ರಚನೆಯಾದರೆ ಸಂಪುಟದಿಂದ ಪರಮೇಶ್ವರ್, ಮಹದೇವಪ್ಪ ಹಾಗೂ ಮುನಿಯಪ್ಪ ಔಟ್ ಆಗುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಇನ್ನೊಬ್ಬ ದಲಿತರನ್ನು ಸಿಎಂ ಆಗಲೂ ಬಿಡಲ್ಲ, ಸಿಎಂ ಆದ್ರೆ ಪ್ರಿಯಾಂಕ ಖರ್ಗೆಗೆ ಮಾತ್ರ ಅವಕಾಶ,ಅವರನ್ನ ಸಿಎಂ ಅಥವಾ ಡಿಸಿಎಂ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕ ಎನ್ ಮಹೇಶ್ ಮಾತನಾಡಿ,
ಬಿಜೆಪಿರವರು ಸಂವಿಧಾನದ ವಿರೋಧಿಗಳು ಅವರು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ನವರು ಆರೋಪಿಸುತ್ತಾರೆ, ಕೇಂದ್ರದಲ್ಲಿ 12 ವರ್ಷ ಬಿಜೆಪಿ ಅಧಿಕಾರದಲ್ಲಿದೆ ಮತ್ತು ಅಟಲ್ ಬಿಹಾರಿ ವಾಜಪೇಯಿ ರವರ ಕಾಲದಲ್ಲಿ 5 ವರ್ಷ ಅಧಿಕಾರದಲ್ಲಿತ್ತು ನಾವು ಸಂವಿಧಾನವನ್ನು ಬದಲಾಯಿಸಿದ್ದಿವಾ ಎಂದು ಪ್ರಶ್ನಿಸಿದರು.

ಡಾ. ಅಂಬೇಡ್ಕರ್ ಅವರು ಸಂವಿಧಾನವನ್ನು ಆಯಾ ಕಾಲಕ್ಕೆ ಅನುಗುಣವಾಗಿ ಸರ್ಕಾರಗಳು ಮಾಡಿಕೊಡಲು ಅವಕಾಶ ಇತ್ತು. ಕಾಂಗ್ರೆಸ್, ಬಿಜೆಪಿ ಹಾಗೂ ಜನತಾ ಪಕ್ಷಗಳು ಸೇರಿ ಇಲ್ಲಿವರೆಗೂ 106 ಭಾರಿ ಸಂವಿಧಾನ ತಿದ್ದುಪಡಿ ಮಾಡಿವೆ. ಇದರ ಬಗ್ಗೆ ಜನರು ಸರಿಯಾಗಿ ಗಮನ ಹರಿಸಬೇಕು ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಸಂಗ್ರಹ ಮಾಡಿ 4,700 ತಿದ್ದುಪಡಿಗಳನ್ನು ಮಾಡಿ 1949 ರ ನವಂಬರ್ 26 ರಂದು ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ.1949 ರಲ್ಲಿ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆಯಿತು. 1951 ರಿಂದ 2025 ವರೆಗೆ ವಿವಿಧ ಸರ್ಕಾರಗಳು 106 ತಿದ್ದುಪಡಿಗಳನ್ನು ಮಾಡಿವೆ. ಈ 106 ತಿದ್ದುಪಡಿಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲೇ 75 ತಿದ್ದುಪಡಿಗಳು ಆಗಿವೆ. ಕಾಂಗ್ರೆಸ್ಸೇತರ ಸರ್ಕಾರಗಳು 31 ತಿದ್ದುಪಡಿಗಳನ್ನು ಮಾತ್ರ ಮಾಡಿವೆ ಎಂದು ಮಹೇಶ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಸಿ.ಎಸ್ ನಿರಂಜನ್ ಕುಮಾರ್, ಮಾಜಿ ಶಾಸಕರಾದ ಎಸ್ ಬಾಲರಾಜ್, ಪ್ರೊ ಮಲ್ಲಿಕಾರ್ಜುನಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಕೊಡ ಪ್ರಕಾಶ್, ಹೊನ್ನೂರು ಮಹಾದೇವಸ್ವಾಮಿ, ಮಾಜಿ ನಿಗಮ ಮಂಡಳಿ ಅಧ್ಯಕ್ಷ ಎಂ ರಾಮಚಂದ್ರ, ಹಿಂದುಳಿದ ಮೋರ್ಚಾಗಳ ಅಧ್ಯಕ್ಷ ಹನೂರು ವೆಂಕಟೇಶ್, ನೂರೊಂದಶೆಟ್ಟಿ, ಜಯ ಸುಂದರ, ಆರ್ ಸುಂದರ ಮೂರ್ತಿ, ಚಂದ್ರು, ಜಿಲ್ಲಾ  ಉಪಾಧ್ಯಕ್ಷ ಅರಕಲವಾಡಿ ನಾಗೇಂದ್ರ, ನಟರಾಜ್ ಗೌಡ, ರೇವಣ್ಣ, ಬೂದಿ ತಿಟ್ಟು ಶಿವಕುಮಾರ್,ಮಹೇಶ್, ಮಂಡಲ ಅಧ್ಯಕ್ಷರುಗಳಾದ ಚಿಂತು ಪರಮೇಶ್, ಅನಿಲ್, ವೃಷಬೇಂದ್ರೆ, ಸಾಹಿತಿ ಕೋಡಿ ಉಗನೇ ಮಂಜು, ಶ್ರೀ ಧರ್ ಎಸ್.ಸಿ ಮೋರ್ಚಾ ಮಂಡಲ್ ಸಿದ್ದಪ್ಪ ವಿವಿಧ ಮೋರ್ಚಾಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.

ದಲಿತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್‌ಗೆ ಸೀಮಿತವಾಗಿಸಿದೆ: ನಾರಾಯಣಸ್ವಾಮಿ Read More