ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗಳ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ:ಡಿಸಿ
ಮೈಸೂರು: ಅಲ್ಪಸಂಖ್ಯಾತರ ಸಮುದಾಯ ವಾಸಿಸುವ ಸ್ಥಳಗಳಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಸಭೆಯಲ್ಲಿ ಹಾಜರಿದ್ದ ನಾಮ ನಿರ್ದೇಶಿತ ಸದಸ್ಯರಾದ ಸುರೇಶ್ ಕುಮಾರ್ ಜೈನ್ ಹಾಗೂ ಸುಬಾನ್ ಅವರು ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಜಿಲ್ಲಾಧಿಕಾರಿಗಳು ಸಮಸ್ಯೆಗಳನ್ನು ಆಲಿಸಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮುದಾಯದವರು ವಾಸಿಸುವ ಸ್ಥಳಗಳಲ್ಲಿ ಕಾರ್ಮಿಕ ಇಲಾಖೆಯವರು ದಾಳಿ ನಡೆಸಿ ಬಾಲಕಾರ್ಮಿಕರು ಕಂಡು ಬಂದಲ್ಲಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಇದರೊಂದಿಗೆ ಮಾದಕ ವಸ್ತುಗಳ ಮಾರಾಟ, ಸಂಚಾರಿ ನಿಯಮ ಪಾಲನೆ ಮಾಡದೆ ವಾಹನ ಚಾಲನೆ ಮಾಡುವುದು, ವೀಲಿಂಗ್ ಮಾಡಿ ವಾಹನ ಚಾಲನೆ ಮಾಡುವುದರ ಕುರಿತು ಪರಿಶೀಲನೆ ನಡೆಸಲು ಪೊಲೀಸ್ ಅಯುಕ್ತರಿಗೆ ಪತ್ರ ಬರೆಯುವಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಜೈನ್ ಸಮುದಾಯ ವಾಸಿಸುವ ಸ್ಥಳದಲ್ಲಿ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ವಿವಿಧ ಇಲಾಖೆಗಳಿಂದ ದೊರಕುವ ಸೌಲಭ್ಯಗಳ ಬಗ್ಗೆ ತಿಳಿಸಿ, ಸರ್ಕಾರದ ಯೋಜನೆ ಪಡೆದುಕೊಳ್ಳಲು ಅನುವಾಗುವಂತೆ ಶಿಬಿರ ಆಯೋಜಿಸಿ ಅರ್ಹರಿಗೆ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ಸಲಹೆ ನೀಡಿ ಎಂದು ಡಿಸಿ ತಿಳಿಸಿದರು.
ಮೈಸೂರು ನಗರದಲ್ಲಿ ಜೈನ್ ಸಮುದಾಯದವರಿಗೆ ಸ್ಮಾಶನಕ್ಕೆ ಸ್ಥಳದ ಬಗ್ಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಮೈಸೂರು ತಹಶೀಲ್ದಾರ್ ಅವರಿಗೆ ಪತ್ರ ಬರೆಯುವಂತೆ ಹಾಗೂ ಬನುಮಯ್ಯ ಕಾಲೇಜು ಬಳಿ ಇರುವ ಜೈನ್ ದೇವಾಲಯದ ಸುತ್ತಳತೆ ಗುರುತಿಸಿಕೊಡಲು ಜಿಲ್ಲೆಯ ಭೂ ದಾಖಲೆಗಳ ಉಪನಿರ್ದೇಶಕರಿಗೆ ಪತ್ರ ಬರೆಯುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿಲ್ಪ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.