ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಪೂರ್ಣ ಸಹಕಾರ:ಎಂ.ಬಿ.ಪಾಗೆ ಹೆಚ್ ಡಿ ಕೆ ಭರವಸೆ

ನವದೆಹಲಿ: ಕರ್ನಾಟಕದ ಕೈಗಾರಿಕೆ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವುದಾಗಿ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ರಾಜ್ಯದ ಕೈಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನವದೆಹಲಿಯ ಉದ್ಯೋಗ ಭವನದಲ್ಲಿರುವ ಭಾರೀ ಕೈಗಾರಿಕೆ ಸಚಿವಾಲಯದ ಕಚೇರಿಯಲ್ಲಿ ಭೇಟಿಯಾದ ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಈ ಭರವಸೆ ಸಿಕ್ಕುದೆ.

ಕೈಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಅಗತ್ಯ ಸಹಕಾರ ಬೇಕೆಂದು ಎಂ.ಬಿ.ಪಾಟೀಲ್ ಮನವಿ ಮಾಡಿದರು. ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಹೆಚ್ ಡಿ ಕೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

ಕರ್ನಾಟಕದಲ್ಲಿ ಕೈಗಾರಿಕಾ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ಪಾಟೀಲ್ ಅವರಿಂದ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಕೆಲ ಕೈಗಾರಿಕೆಗಳ ಬಗ್ಗೆ ಮನವಿ ಸಲ್ಲಿಸಿದ ಅವರು; ಕೇಂದ್ರ ಸರ್ಕಾರದಿಂದ ಸಿಗಬೇಕಿರುವ ಒಪ್ಪಿಗೆಯ ಬಗ್ಗೆ ಪ್ರಸ್ತಾವನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡುವ ಅಗತ್ಯವಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ಪಷ್ಟ ನಿರ್ದೇಶನವಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಅವರು ಎಂ.ಬಿ.ಪಾಟೀಲ್ ಅವರಿಗೆ ಹೇಳಿದರು.

ರಾಜ್ಯದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಬೇಕು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೆಚ್ ಎಂ ಟಿ ಭೂಮಿ ವಿವಾದ ಹಾಗೂ ದೇವದಾರಿ ಗಣಿಗಾರಿಕೆ ಯೋಜನೆಗಳ ಬಗ್ಗೆಯೂ ಕೇಂದ್ರ ಸಚಿವರು ಪಾಟೀಲ್ ಅವರ ಜತೆ ಚರ್ಚೆ ನಡೆಸಿದರು.

ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಸಂಘರ್ಷ ಬೇಡ. ರಾಜಕೀಯ ಮೀರಿ ಅಭಿವೃದ್ಧಿ ಪರವಾಗಿ ಕೆಲಸ ಮಾಡಲು ನಾನು ಮುಕ್ತ ಮನಸ್ಸು ಹೊಂದಿದ್ದೇನೆ, ರಾಜ್ಯದ ಒಳಿತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.

ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಪೂರ್ಣ ಸಹಕಾರ:ಎಂ.ಬಿ.ಪಾಗೆ ಹೆಚ್ ಡಿ ಕೆ ಭರವಸೆ Read More

ಹಗರಣ ವಿಷಯ ಮುಚ್ಚಲು ಸರ್ಕಾರದಿಂದ ದರ್ಶನ್ ರಾಜಾತಿಥ್ಯ ಫೋಟೋ ವೈರಲ್:ಜೋಶಿ

ಹುಬ್ಬಳ್ಳಿ: ಹಗರಣ ವಿಷಯ ಮುಚ್ಚಿ ಹಾಕಲು ಸರ್ಕಾರವೇ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಫೋಟೋ ವೈರಲ್ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರೇಣುಕಾಸ್ವಾಮಿ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಆದರೆ ಸರ್ಕಾರ ಮುಡಾ ಮತ್ತು ವಾಲ್ಮೀಕಿ ಹಗರಣದಲ್ಲಿ ತನ್ನ ತಪ್ಪನ್ನು ಮುಚ್ಚಿ ಹಾಕಲು ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ದರ್ಶನ್‌ ಪ್ರಕರಣ ಬಳಸಿಕೊಳ್ಳುತ್ತಿದೆ ಎಂದು ದೂರಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಾಲ್ಮೀಕಿ ಹಾಗೂ ಮುಡಾ ಹಗರಣಗಳ ವಿಷಯಾಂತರ ಮಾಡಲು ನಟ ದರ್ಶನ್‌ ಕೇಸ್‌ ಮುನ್ನೆಲೆಗೆ ತಂದು ಸಂಕುಚಿತ ಷಡ್ಯಂತ್ರ ನಡೆಸಿದೆ.

ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿರುವ ಫೋಟೋಗಳನ್ನು ವೈರಲ್‌ ಮಾಡಿರುವ ಬಗ್ಗೆ ನ್ಯಾಯಾಲಯವೂ ಪರಿಗಣನೆಗೆ ತೆಗೆದುಕೊಂಡು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸಿಗುತ್ತಿದ್ದ ಫೋಟೋ ವೈರಲ್‌ ಆಗಿದ್ದು ಹೇಗೆ, ಇದಕ್ಕೆ ಪ್ರಮುಖ ಸೂತ್ರದಾರರು ಯಾರು ಎಂದು ಜೋಶಿ ಪ್ರಶ್ನಿಸಿದರು.

ರಾಜ್ಯ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ನಡೆದಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿದ ವರದಿ ಇಟ್ಟುಕೊಂಡು ತನಿಖೆಗೆ ಮುಂದಾಗಿರುವುದು ಅಚ್ಚರಿ ಉಂಟು ಮಾಡಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಒಂದೂವರೆ ವರ್ಷದಿಂದ ಸುಮ್ಮನಿದ್ದ ಸರಕಾರ ಈಗ ಹಗರಣದ ಬಗ್ಗೆ ಮಾತನಾಡುತ್ತಿದೆ. ಸರಕಾರ ಕಳ್ಳತನ ಮಾಡಿ ಸಿಕ್ಕಿಬಿದ್ದಾಗ ಇನ್ನೊಬ್ಬರು ಕೂಡ ಕಳ್ಳತನ ಮಾಡಿದ್ದಾರೆ ಎಂದು ತೋರಿಸುತ್ತ ಬಚಾವಾಗುವ ತಂತ್ರವೇ ಎಂದು ಟೀಕಿಸಿದರು.

ಹಗರಣ ವಿಷಯ ಮುಚ್ಚಲು ಸರ್ಕಾರದಿಂದ ದರ್ಶನ್ ರಾಜಾತಿಥ್ಯ ಫೋಟೋ ವೈರಲ್:ಜೋಶಿ Read More

ಹಾಲಿನ ಖರೀದಿ ದರ ಕಡಿತ- ಹೆಚ್.ಡಿ.ಕೆ‌ ಕಿಡಿ

ಬೆಂಗಳೂರು: ಹಾಲಿನ ಖರೀದಿ ದರದಲ್ಲಿ 1.50 ರೂ ಕಡಿತ ಮಾಡಿರುವ ಕುರಿತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೂಡಲೇ ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ವಹಿಸಿ ಹಾಲು ಖರೀದಿ ದರ ಕಡಿತಕ್ಕೆ ತಡೆ ಒಡ್ಡಬೇಕು ಎಂದು ಒತ್ತಾಯಿಸಿದ್ದಾರೆ.

ಅಧಿಕಾರ ದರ್ಪದ ಅಮಲಿನಿಂದ ಕೊಬ್ಬಿರುವ ರಾಜ್ಯ ಕಾಂಗ್ರೆಸ್ ಸರಕಾರ ಅನ್ನದಾತನ ಮೇಲೆ ಬರೆಯ ಮೇಲೆ ಬರೆ ಎಳೆಯುತ್ತಿದೆ. ರೈತನ ಜೀವನಾಧಾರವಾಗಿರುವ ಹಾಲಿನ ಮೇಲೆ ಕಾಂಗ್ರೆಸ್ ಆಡಳಿತದ ಕಾಕದೃಷ್ಟಿ ಬಿದ್ದಿದೆ ಎಂದು ಟೀಕಿಸಿದ್ದಾರೆ.

ಕೆಲ ಹಾಲು ಒಕ್ಕೂಟಗಳು ಏಕಪಕ್ಷೀಯವಾಗಿ ಹಾಲಿನ ಖರೀದಿ ದರದಲ್ಲಿ 1.50 ರೂ ಕಡಿತ ಮಾಡಿವೆ. ಹೊಸ ಖರೀದಿ ದರ 30.50 ರಿಂದ 29 ರೂಗೆ ಕುಸಿದಿದೆ.ಇದರಿಂದ ಕಾಮಧೇನುವನ್ನೇ ನಂಬಿದ್ದ ರೈತನ ಕರುಳಿಗೆ ಕೊಳ್ಳಿ ಬಿದ್ದಿದೆ. ನಮ್ಮದು ರೈತಪರ ಸರಕಾರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತ ಗಮನ ಹರಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಹಾಲಿನ ಖರೀದಿ ದರ ಕಡಿತ- ಹೆಚ್.ಡಿ.ಕೆ‌ ಕಿಡಿ Read More