ಬೆಂಗಳೂರಿಗೆ ವಕ್ಕರಿಸಿದ ಘಜ್ನಿ, ಘೋರಿ:ಕುಮಾರಸ್ವಾಮಿ ಕಟು ಟೀಕೆ

ಬೆಂಗಳೂರು: ಬಿಬಿಎಂಪಿಯನ್ನು ಏಳು ಭಾಗ ಮಾಡುವುದಕ್ಕೆ ಹೊರೆಟಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಕಿಡಿಕಾರಿದ್ದಾರೆ.

ಸಂಪದ್ಭರಿತ ಬೆಂಗಳೂರು ನಗರವನ್ನು ಲೂಟಿ ಮಾಡಲು ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ ಅವನು ನಗರದ ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ ಎಂದು ಮಾರ್ಮಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕುಮಾರಸ್ವಾಮಿ,
ಹೋಳು ಮಾಡವುದು, ಒಡೆದು ಆಳುವುದರಲ್ಲಿ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಸಾಟಿ 75 ವರ್ಷದಿಂದ ಇದನ್ನೇ ಮಾಡಿದೆ ಎಂದು ಛೇಡಿಸಿದ್ದಾರೆ.

ಕಾಂಗ್ರೆಸ್ ನೀತಿಯೇ ಒಡೆದು ಅಳುವುದು. ಅಂದು ಅಖಂಡ ಭಾರತವನ್ನು ಹೋಳು ಮಾಡಿತು, ಇಂದು ಬೆಂಗಳೂರು ಮಹಾನಗರವನ್ನು ಹೋಳು ಮಾಡಲು ಹೊರಟಿದೆ ಎಂದು ಅವರು ಕಿಡಿಕಾರಿದ್ದಾರೆ.

ನಾಡಪ್ರಭು ಕೆಂಪೇಗೌಡರ ಪರಂಪರೆಯನ್ನು ಬೇರುಸಹಿತ ಹಾಳು ಮಾಡುವುದೇ ಕಾಂಗ್ರೆಸ್ ಸರಕಾರದ ದುರುದ್ದೇಶವಾಗಿದೆ. ಇವರಿಗೆ ಗ್ರೇಟರ್‌ ಬೆಂಗಳೂರು ಎನ್ನುವುದು ಹೆಸರಿಗಷ್ಟೇ ಕೊಳ್ಳೆ ಹೊಡೆಯುವುದಷ್ಟೇ ಉದ್ದೇಶ ಎಂದು ವ್ಯಂಗ್ಯ ವಾಡಿದ್ದಾರೆ.

ಬಿಬಿಎಂಪಿ ವಿಭಜನೆ ಅಧಿಕಾರ, ಅಭಿವೃದ್ಧಿ ವಿಕೇಂದ್ರೀಕರಣವಲ್ಲ, ಇದು ಲೂಟಿಯ ವಿಕೇಂದ್ರೀಕರಣ, ಲೂಟಿಕೋರರಾದ ಮಹಮ್ಮದ್ ಘಜ್ನಿ, ಮೊಹಮದ್‌ ಘೋರಿ ಸಂಪದ್ಭರಿತ ಭಾರತವನ್ನು ಲೂಟಿ ಮಾಡಿದರು. ಬೆಂಗಳೂರಿಗೆ ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ. ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ ಎಂದು ಯಾರ ಹೆಸರು ಹೇಳದೆ‌ ಕಠಿಣ ಶಬ್ದಗಳಲ್ಲಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಬೆಂಗಳೂರಿಗೆ ವಕ್ಕರಿಸಿದ ಘಜ್ನಿ, ಘೋರಿ:ಕುಮಾರಸ್ವಾಮಿ ಕಟು ಟೀಕೆ Read More

ಮೋದಿಯವರ ದೂರದೃಷ್ಟಿ; ರೈತಪರ ಆಲೋಚನೆಗೆ ಬಜೆಟ್ ಕೈಗನ್ನಡಿ:ಹೆಚ್ ಡಿ ಕೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ರೈತಪರ ಆಲೋಚನೆಗಳಿಗೆ 2025ನೇ ಸಾಲಿನ ಬಜೆಟ್ ಕೈಗನ್ನಡಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಣ್ಣಿಸಿದ್ದಾರೆ.

ಕೇಂದ್ರ ಬಜೆಟ್‌ ಬಗ್ಗೆ ಪ್ರತಿಕ್ರಿಯಿಸಿರುವ ಅವರು,ಸಾವಯವ ಕೃಷಿಗೆ ಉತ್ತೇಜನ, ಕೃಷಿಯಲ್ಲಿ ಸುಸ್ಥಿರತೆಗೆ ಒತ್ತು, ಬೆಳೆ ತೆಗೆಯಲು ರೈತ ಮಾಡುತ್ತಿರುವ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ರೈತರು ಸಶಕ್ತಗೊಂಡು ಉತ್ತಮ ಆದಾಯ ಗಳಿಸುವ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಭವಿಷ್ಯದ ಸವಾಲುಗಳಿಗೆ ಭಾರತೀಯ ಕೃಷಿಯನ್ನು ಸಜ್ಜುಗೊಳಿಸುವ ಆಯವ್ಯಯ ಇದಾಗಿದೆ ಎಂದಿದ್ದಾರೆ.

ಪಿಎಂ ಧನ್ ಧಾನ್ಯ ಯೋಜನೆ ಭಾರತೀಯ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ. ದೇಶೀಯ ಕೃಷಿಗೆ ವಿಶ್ವದರ್ಜೆಯ ಮೂಲಸೌಕರ್ಯ, ಕೃಷಿ ಉತ್ಪನ್ನಗಳ ದಾಸ್ತಾನಿಗೆ ಅತ್ಯುತ್ತಮ ವ್ಯವಸ್ಥೆ, ರಫ್ತಿಗೆ ಉತ್ತೇಜನ, ರೈತರಿಗೆ ಹೆಚ್ಚು ಆದಾಯ ಮತ್ತು ಗ್ರಾಮ ಭಾರತಕ್ಕೆ ಬಲ ತಂದಿದೆ,ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ ಹೈನುಗಾರರು, ಮೀನುಗಾರರು ಸೇರಿ ಎಲ್ಲಾ ಕೃಷಿಕರಿಗೆ ಸುಲಭ ಸಾಲ,
ಕೃಷಿ ತಂತ್ರಜ್ಞಾನ ಹಾಗೂ ಕೃಷಿ ಆಧಾರಿತ ಸ್ಟಾರ್ಟಪ್ಪ್ ಗಳ ಉತ್ತೇಜನಕ್ಕೆ 1 ಲಕ್ಷ ಕೋಟಿ ಮೀಸಲು,ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಅತ್ಯಾಧುನಿಕ ನೀರಾವರಿ ಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮೂಲಸೌಕರ್ಯ ಉತ್ತಮಪಡಿಸಲು ಕ್ರಮ, ಅತ್ಯುತ್ತಮ ಶೀತಲೀಕರಣ ಕೇಂದ್ರಗಳ ಸ್ಥಾಪನೆ, ಸುಲಭ-ಪರಿಣಾಮಕಾರಿ ಸಂಪರ್ಕ ವ್ಯವಸ್ಥೆ, ಅತ್ಯುತ್ತಮ ಪೂರೈಕೆ ಸರಪಳಿ,
ಪಿಎಂ ಫಸಲ್ ಭೀಮಾ ಯೋಜನೆ ವ್ಯಾಪ್ತಿಗೆ ಇನ್ನೂ ಹೆಚ್ಚಿನ ರೈತರು. ಶೀಘ್ರಗತಿಯಲ್ಲಿ ವಿಮಾ ಸೌಲಭ್ಯ ಸಿಗುವಂತೆ ಮಾಡುವುದು ಹಾಗೂ ಅನ್ನದಾತನ ಸುರಕ್ಷತೆಗೆ ಅತಿಹೆಚ್ಚು ಒತ್ತು,ಸಹಜ ಹಾಗೂ ನಿಸರ್ಗಕ್ಕೆ ಪೂರಕವಾದ ಕೃಷಿಗೆ ಮನ್ನಣೆ ನೀಡಿ ರೈತರಿಗೆ ಎಲ್ಲಾ ರೀತಿಯ ಉತ್ತೇಜನ ನೀಡಲಾಗಿದೆ.

ಪ್ರಧಾನಿಗಳ ಕನಸು ವಿಕಸಿತಭಾರತ 2047 ಸಾಕಾರಕ್ಕೆ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಆಯವ್ಯಯ ಮಹತ್ವದ ಕೊಡುಗೆ ನೀಡಲಿದೆ. ಭವಿಷ್ಯದಲ್ಲಿ ಭಾರತೀಯ ಕೃಷಿ ಕ್ಷೇತ್ರ ಮತ್ತಷ್ಟು ಸಮೃದ್ಧಿಯಾಗಲಿದೆ ಎಂದು ಹೆಚ್ ಡಿ.ಕುಮಾರಸ್ವಾಮಿ ಬಣ್ಣಿಸಿದ್ದಾರೆ.

ಮೋದಿಯವರ ದೂರದೃಷ್ಟಿ; ರೈತಪರ ಆಲೋಚನೆಗೆ ಬಜೆಟ್ ಕೈಗನ್ನಡಿ:ಹೆಚ್ ಡಿ ಕೆ Read More

ಮಧ್ಯಮ ವರ್ಗ, ವೇತನದಾರರಿಗೆ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್ ನಲ್ಲಿ ಮಧ್ಯಮ ವರ್ಗ ಮತ್ತು ವೇತನದಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಶನಿವಾರ ಕೇಂದ್ರ ಬಜೆಟ್ ಮಂಡನೆ ಮಾಡಿದ ಸಚಿವರು, 12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯ್ತಿ ಘೋಷಣೆ ಮಾಡಿದ್ದಾರೆ. ವಾರ್ಷಿಕ ಆದಾಯ 12 ಲಕ್ಷದವರೆಗೂ ತೆರಿಗೆ ವಿನಾಯಿತಿ ನೀಡಿದ್ದಾರೆ.

ಹಾಗಾಗಿ ಇದು ಮಧ್ಯಮವರ್ಗಕ್ಕೆ ಗಿಫ್ಟ್ ನೀಡಿದಂತಾಗಿದೆ‌, ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ ಮಾಡುವುದಾಗಿ ನಿರ್ಮಲಾ ತಿಳಿಸಿದ್ದಾರೆ.

ಮಧ್ಯಮ ವರ್ಗ, ವೇತನದಾರರಿಗೆ ಗುಡ್ ನ್ಯೂಸ್ Read More

ಮೈಕ್ರೋ ಫೈನಾನ್ಸ್ ಗಳಿಗೆ ಧಾರಾಳವಾಗಿ ಅವಕಾಶ ಕೊಟ್ಟ ಸರ್ಕಾರ: ಕುಮಾರಸ್ವಾಮಿ

ಮೈಸೂರು: ಮಹಿಳೆಯರಿಗೆ 2000 ಗೃಹಲಕ್ಷ್ಮಿ ಹಣ ಕೊಟ್ಟು ಸಬಲೀಕರಣ ಮಾಡುತ್ತೇವೆ ಎನ್ನುವ ರಾಜ್ಯ ಸರಕಾರ; ಅದೇ ಮಹಿಳೆಯರ ಜೀವ ಹರಣ ಮಾಡಲು ಮೈಕ್ರೋ ಫೈನಾನ್ಸ್ ಗಳಿಗೆ ಧಾರಾಳವಾಗಿ ಅವಕಾಶ ಕೊಟ್ಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಕೆ ಆರ್ ನಗರದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತಮ ಆಡಳಿತಕ್ಕೆ ಕರ್ನಾಟಕ ಮಾದರಿ ಆಗಿತ್ತು,ಅದನ್ನು ಸರ್ವನಾಶ ಮಾಡಲು ಇವರು ಹೊರಟಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.

ಅಧಿಕಾರಕ್ಕಾಗಿ ಕಚ್ಚಾಡುತ್ತಿರುವ ಇವರು ಜನರಿಗೆ ಏನು ಮಾಡಿದ್ದಾರೆ. ಒಂದು ತಿಂಗಳ ಹಿಂದೆಯೇ ಚಾಮರಾಜನಗರದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಶುರುವಾಯಿತು. ಜನರು ಊರು ಬಿಟ್ಟು ಹೋದರು. ಸಮಸ್ಯೆ ಶುರುವಾಗಿ ಇಷ್ಟು ದಿನವಾದರೂ ಈಗ ಇವರು ನಾಳೆ ಸಭೆ ಕರೆದಿದ್ದಾರೆ ಎಂದು ಟೀಕಿಸಿದರು.

ಮೈಕ್ರೋ ಫೈನಾನ್ಸ್ ಕಂಪನಿಗಳು ರಾಜ್ಯದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ. ಕಾನೂನುಬಾಹಿರವಾಗಿ ಚಟುವಟಿಕೆಗಳನ್ನು ನಡೆಸುತ್ತಿವೆ ಕಾನೂನು ನಿಯಂತ್ರಣ ಇಲ್ಲ ಎಂದು ಹೇಳಿದರು.

ದೇವರಾಜ ಅರಸು ಅವರಿಗೆ ಸರಿಸಮಾನವಾದ ಅಧಿಕಾರ ಮಾಡಿದವರು ಎಂದು ಹೇಳುತ್ತಿದ್ದೀರಿ.. ಈ ಐದು ವರ್ಷ ಅಲ್ಲ, ಮುಂದಿನ ಐದು ವರ್ಷವೂ ನೀವೇ ಅದ್ಇಕಾರಕ್ಕೆ ಬನ್ನಿ. ಆದರೆ, ಜನಕ್ಕೆ ಏನು ಒಳ್ಳೆಯದು ಮಾಡಿದ್ದೀರಿ ಎಂಬುದನ್ನು ಹೇಳಿ ಎಂದು ಅವರು ಪ್ರಶ್ನಿಸಿದರು.

ಸಿಎಂ ಅವರು ನಾಳೆ ಸಭೆ ಕರೆದಿದ್ದಾರೆ. ಸಭೆ ಕರೆದು ಏನು ಮಾಡುತ್ತೀರಿ,ಎಷ್ಟು ಜನ ಜೀವ ಕಳೆದುಕೊಂಡಿದ್ದಾರೆ, ಎಷ್ಟು ಜನರು ಮನೆ ಊರು ಬಿಟ್ಟು ಹೋಗಿದ್ದಾರೆ, ನಾನು ಮಂಡ್ಯ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದೆ. ಈ ಜಿಲ್ಲೆ ಒಂದರಲ್ಲಿಯೇ 60 ಮೈಕ್ರೋ ಫೈನಾನ್ಸ್ ಗಳಿವೆ. ಅದರಲ್ಲಿ 14-15 ಫೈನಾನ್ಸ್ ಗಳು ಪರವಾನಗಿ ಪಡೆದಿವೆ. ಉಳಿದವು ಕಾನೂನು ಬಾಹಿರವಾಗಿ ಎಂದು ಹೆಚ್‌ಡಿ ಕೆ ಹೇಳಿದರು.

ರಾಜ್ಯಕ್ಕೆ ಒಳ್ಳೆಯದು ಮಾಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟರು. ಆದರೆ, ಅವರು ಅಧಿಕಾರಕ್ಕೆ ಬಂದಾಗಿನಿಂದ ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ ಕಾಂಗ್ರೆಸ್. ಆದರೂ ತನ್ನೊಳಗಿನ ಬಿಕ್ಕಟ್ಟು ಬಗೆಹರಿಸಿಕೊಳ್ಳುವ ಶಕ್ತಿ ಆ ಪಕ್ಷಕ್ಕೆ ಇದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಮೈಕ್ರೋ ಫೈನಾನ್ಸ್ ಗಳಿಗೆ ಧಾರಾಳವಾಗಿ ಅವಕಾಶ ಕೊಟ್ಟ ಸರ್ಕಾರ: ಕುಮಾರಸ್ವಾಮಿ Read More

ಜನರ ರಕ್ತ ಹೀರುವ ಮೈಕ್ರೋ ಫೈನಾನ್ಸ್ ಹಾವಳಿ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಿ: ಹೆಚ್.ಡಿಕೆ

ಬೆಂಗಳೂರು: ರಾಜ್ಯದಲ್ಲಿ ಬಡ, ಮಧ್ಯಮ ವರ್ಗದ ಜನರ ರಕ್ತ ಹಿಂಡುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿಯನ್ನು ನಿರ್ದಯವಾಗಿ ಹತ್ತಿಕ್ಕಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು; ಈ ಕೆಲಸಾನ ಅಧಿಕಾರಿಗಳು ಅಥವಾ ಜಿಲ್ಲಾಧಿಕಾರಿ ಮಾಡಲು ಸಾಧ್ಯವಿಲ್ಲ, ಸರಕಾರವೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ರಾಜ್ಯದಲ್ಲಿ ನಾಗರಿಕ ಸರಕಾರ, ಗೃಹ ಸಚಿವರು ಇದ್ದಾರೆಯೇ ಎಂದು ಹೆಚ್ ಡಿ ಕೆ ಕಾರವಾಗಿ ಪ್ರಶ್ನಿಸಿದರು.

2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಇಂಥ ಕಿಡಿಗೇಡಿ ಫೈನಾನ್ಸ್ ಗಳಿಂದ ಜನರನ್ನು ರಕ್ಷಣೆ ಮಾಡಬೇಕು ಎಂದು ಋಣಮುಕ್ತ ಕಾಯ್ದೆ ಜಾರಿಗೆ ತಂದೆ,ಅಷ್ಟೇ ಅಲ್ಲ, ಜನರು ಪಡೆದ ಸಾಲವನ್ನು ತೀರಿಸಲಾಗದ ಪರಿಸ್ಥಿತಿ ಸೃಷ್ಟಿಯಾದರೆ ಅದಕ್ಕೆ ಪರಿಹಾರ ಏನೆಂಬ ಬಗ್ಗೆ ನಾನು ಆಲೋಚನೆ ಮಾಡಿದ್ದೆ, ಆ ಸಂದರ್ಭದಲ್ಲಿ ಕೇರಳ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಒಂದು ಆಯೋಗವನ್ನು ರಚನೆ ಮಾಡಿತ್ತು. ಆ ಮಾಹಿತಿ ನನಗಿತ್ತು. ಕೇರಳಕ್ಕೆ ತೆರಳಿ ಖುದ್ದು ಅಧ್ಯಯನ ಮಾಡುವ ಉದ್ದೇಶದಿಂದ ನಾನು ಅಂದಿನ ನನ್ನ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪೂರ್ ನೇತೃತ್ವದ ನಿಯೋಗವನ್ನು ಕೇರಳಕ್ಕೆ ಕಳಿಸಿದ್ದೆ. ಅದನ್ನು ಆಧಾರವಾಗಿ ಇಟ್ಟುಕೊಂಡು ನಾನು ಇಲ್ಲಿ ಋಣಮುಕ್ತ ಕಾಯ್ದೆಯನ್ನು ಜಾರಿಗೆ ತಂದಿದ್ದೆ ಆಮೇಲೆ ನನ್ನ ಸರ್ಕಾರ ಹೋಯಿತು,ಅದು ಕಸದ ಬುಟ್ಟಿಗೆ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಅದರ ಪರಿಣಾಮವೇ ಮೈಕ್ರೋ ಫೈನಾನ್ಸ್ ಗಳ ಉಪಟಳ ಜಾಸ್ತಿ ಆಗಿರುವುದು. ಖಾಸಗಿ ಹಣಕಾಸು ಸಂಸ್ಥೆಗಳು ಯಾವುದೇ ಪರವಾನಗಿ ಪಡೆಯದೇ ಕಾನೂನುಬಾಹಿರವಾಗಿ ಈ ರೀತಿ ಹೆಚ್ಚಿನ ಬಡ್ಡಿಗೆ ಸಾಲ ನೀಡಿ ಜನರಿಗೆ ಕಿರುಕುಳ ನೀಡುತ್ತಿವೆ. ಇದನ್ನು ತಾಳಲಾರದೆ ಜನರು ಆತ್ಮಹತ್ಯೆ ಮಾಡಿಕೊಳ್ಳುವ, ಊರನ್ನೇ ಖಾಲಿ ಮಾಡುವ ದುಸ್ಥಿತಿ ಸೃಷ್ಟಿಯಾಗಿದೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಾನು ಎಷ್ಟೋ‌ ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದೇನೆ. ನನ್ನ ಅಧಿಕಾರ ಹೋಗಿಲ್ಲ, ಗಟ್ಟಿಯಾಗಿದ್ದೇನೆ ಎಂದು ಸಿಎಂ ಹೇಳುತ್ತಾರೆ. ಅವರೇನೋ ಗಟ್ಟಿಯಾಗಿದ್ದಾರೆ. ಆದರೆ, ನಿಮ್ಮನ್ನು ಮುಖ್ಯಮಂತ್ರಿ ಜಾಗದಲ್ಲಿ ಕೂರಿಸಿರುವ ಆ ಜನ ಏನಾಗಿದ್ದಾರೆ, ಅವರನ್ನು ಗಟ್ಟಿ ಮಾಡೋಕೆ ಏನು ಮಾಡಿದ್ದೀರಿ ಎಂದು ಹೆಚ್ ಡಿ ಕೆ ಕಿಡಿಕಾರಿದರು.

ಕಾನೂನುಬಾಹಿರವಾಗಿ ಮೈಕ್ರೋ ಫೈನಾನ್ಸ್ ಮಾಡಲು ಖಾಸಗಿ ಕಂಪನಿಗಳಿಗೆ ಅನುಮತಿ ಕೊಟ್ಟವರು ಯಾರು, ಸರಕಾರ ಅನುಮತಿ ಕೊಟ್ಟಿತ್ತಾ, ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಸರಿಯಾದ ರೀತಿಯಲ್ಲಿ ಸಾಲ ಸೌಲಭ್ಯ ನೀಡಿದರೆ ಮೈಕ್ರೋ ಫೈನಾನ್ಸ್ ಗಳ ಬಳಿಗೆ ಸಾಲಕ್ಕೆ ಯಾಕೆ ಹೋಗುತ್ತಾರೆ‌ ಎಂದು ಕುಮಾರಸ್ವಾಮಿ ಸರಕಾರವನ್ನು ಪ್ರಶ್ನಿಸಿದರು.

ಜನರ ರಕ್ತ ಹೀರುವ ಮೈಕ್ರೋ ಫೈನಾನ್ಸ್ ಹಾವಳಿ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಿ: ಹೆಚ್.ಡಿಕೆ Read More

ಕಿಯೋನಿಕ್ಸ್ ವೆಂಡರ್ಸ್ ಬಿಲ್ ಬಾಕಿ; ಹೆಚ್.ಡಿ.ಕೆ ಟೀಕೆ

ಬೆಂಗಳೂರು: ಬಾಕಿ ಬಿಲ್ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಿಯೋನಿಕ್ಸ್ ವೆಂಡರ್ಸ್ ಪತ್ರ ಬರೆದಿರುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಉಡಾಫೆ ಮಾತನ್ನಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉಡಾಫೆ ಮಾತುಗಳನ್ನಾಡುವುದು ಬಿಟ್ಟು ಮೊದಲು ಕಿಯೋನಿಕ್ಸ್ ವೆಂಡರ್ಸ್ ಗಳ ಬಾಕಿ ಬಿಲ್ ಚುಕ್ತಾ ಮಾಡಲಿ ಎಂದು ಒತ್ತಾಯಿಸಿದರು.

ಈ ಸರಕಾರ ಗುತ್ತಿಗೆದಾರರು ಹಾಗೂ ವೆಂಡರ್ಸ್ ಗಳ ಬಿಲ್ ಪಾವತಿಸಲು ಮೀನಮೇಷ ಎಣಿಸುತ್ತಿದೆ. ಸರಕಾರದ ಆಂತರ್ಯ ಏನೆಂಬುದು ಎಲ್ಲರೂ ಬಲ್ಲ ವಿಷಯ. ತಮಗೆ ಬಿಡುಗಡೆ ಆಗಬೇಕಿರುವ ಬಿಲ್ ಗಳನ್ನು ಪಾವತಿಸಿ ಎಂದು ಗುತ್ತಿಗೆದಾರರು ಧೈರ್ಯದಿಂದ ಕೇಳಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಅವರೇನೂ ಭಿಕ್ಷುಕರಲ್ಲ, ಸಣ್ಣ ಪ್ರಮಾಣದ ಗುತ್ತಿಗೆದಾರರು ತಮ್ಮ ಮನೆ ಹೆಣ್ಣುಮಕ್ಕಳ ಒಡವೆಗಳನ್ನು ಒತ್ತೆ ಇಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಮಾಡಿರುವ ಸಾಲಗಳನ್ನು ತೀರಿಸಲಾಗದೆ ಬೀದಿಗೆ ಬಂದಿದ್ದಾರೆ ಎಂದು ಬೇಸರ ಪಟ್ಟರು.

ಈವರೆಗೆ ಗುತ್ತಿಗೆದಾರರ ಎಲ್ ಓಸಿಗಳನ್ನು ಬಿಡುಗಡೆ ಮಾಡುವುದಕ್ಕೆ ಈ ಸರಕಾರಕ್ಕೆ ಸಾಧ್ಯವಾಗಿಲ್ಲ. ಸಚಿವರು ಹಿಂದಿನ ಸರಕಾರದ ಮೇಲೆ ಗೂಬೆ ಕೂರಿಸುವ ಬದಲು ಗುತ್ತಿಗೆದಾರರ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಯಾರೇ ಆಗಲಿ ಧೃತಿಗೆಡುವ ಅಗತ್ಯವಿಲ್ಲ, ಸರ್ಕಾರ ನಿಮ್ಮ ಹಣ ನಿಮಗೆ ಕೊಡಲೇಬೇಕು. ಆತ್ಮಹತ್ಯೆಗೆ ಶರಣಾಗಬೇಡಿ. ದಯಾಮರಣಕ್ಕೆ ಯಾಕೆ ಅರ್ಜಿ ಹಾಕಿಕೊಳ್ಳುತ್ತೀರಾ, ನೀವು ತಪ್ಪು ಮಾಡಿಲ್ಲ, ತಪ್ಪು ಮಾಡಿರುವುದು ಸರ್ಕಾರ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಧೈರ್ಯ ಮಾಡಿ. ನೀವು ಭಿಕ್ಷುಕರಲ್ಲ ಎಂದು ಗುತ್ತಿಗೆದಾರರಿಗೆ ಹೆಚ್ ಡಿ ಕೆ
ಧೈರ್ಯ ಹೇಳಿದರು.

ನಿನಗೆ ಸಿಕ್ಕಿರುವ ಕಾಮಗಾರಿಯನ್ನು ಪ್ರಾಮಾಣಿಕವಾಗಿ ಮಾಡಿ. ದಯಾಮರಣಕ್ಕೆ ಯಾಕೆ ಅರ್ಜಿ ಹಾಕುತ್ತೀರಿ. ಅಂತಹ ಮನಸ್ಥಿತಿಯಿಂದ ಹೊರಬನ್ನಿ. ಕೆಲಸವನ್ನೇ ಮಾಡದೆ ಬಿಲ್ ತೆಗೆದುಕೊಂಡು ಹಣ ಹೊಡೆದ ಎಷ್ಟೋ ಅಧಿಕಾರಿಗಳು, ದೊಡ್ಡ ದೊಡ್ಡ ಗುತ್ತಿಗೆದಾರರು ಇದ್ದಾರೆ. ಸರಿಯಾದ ಕೆಲಸ ಮಾಡಿದ್ದರೆ ನೀವು ಯಾಕೆ ಹೆದರಬೇಕು ಎಂದು ಸಚಿವರು ತಿಳಿಸಿದರು.

ಕಿಯೋನಿಕ್ಸ್ ವೆಂಡರ್ಸ್ ಬಿಲ್ ಬಾಕಿ; ಹೆಚ್.ಡಿ.ಕೆ ಟೀಕೆ Read More

ಸಿ.ಟಿ ರವಿ ಅವರನ್ನ ಮುಗಿಸೊ ಯೋಚನೆ ಇತ್ತೇನೊ:ಜೋಶಿ ವಿವಾದಾತ್ಮಕ ನುಡಿ

ಬಾಗಲಕೋಟೆ: ಮಾಧ್ಯಮದವರು ಇಲ್ಲದೇ ಇದ್ದಿದ್ದರೆ ಸಿ.ಟಿ ರವಿ ಅವರನ್ನ ಫೇಕ್‌ ಎನ್‌ಕೌಂಟರ್‌ ಮಾಡುವ ವಿಚಾರ ಅಲ್ಲಿನ ಪೊಲೀಸ್‌ ತಂಡಕ್ಕೆ ಇತ್ತೇನೊ ಅನ್ನಸ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿವಾದಾತ್ಮಕವಾಗಿ ನುಡಿದಿದ್ದಾರೆ.

ಸಿ.ಟಿ ರವಿ ಅವರನ್ನು ಬಂಧಿಸಿದ್ದ ವಿಚಾರ ಕುರಿತು ಬಾಗಲಕೋಟೆಯಲ್ಲಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು, ಅವಕಾಶ ಸಿಕ್ಕಿದ್ದರೆ ಸಿ.ಟಿ ರವಿ ಅವರನ್ನು ಮುಗಿಸಬೇಕು ಅಂತಾ ಯೋಚನೆ ಮಾಡಿದ್ದರೇನೊ ಅನ್ನಿಸ್ತಿದೆ, ಆದರೆ ಅವರಿಗೆ ಸರಿಯಾದ ಅವಕಾಶ ಸಿಕ್ಕಿಲ್ಲ,ಏಕೆಂದರೆ ಆಗ ನಮ್ಮ ಮತ್ತೊಬ್ಬರು ಎಂಎಲ್‌ಸಿ ಕೇಶವ್‌ ಪ್ರಸಾದ್‌ ಜೊತೆಯಲ್ಲಿದ್ದರು. ಮಾಧ್ಯಮದವರಿಂದ ನಮಗೆ ಲೈವ್‌ ಲೊಕೇಶನ್‌ ಸಿಗ್ತಾ ಇತ್ತು ಎಂದು ಹೇಳಿದ್ದಾರೆ.

ನಿಜ ಹೇಳಬೇಕಂದರೆ ನಾವು ಮಾಧ್ಯಮದವರಿಗೆ ಧನ್ಯವಾದ ಹೇಳಬೇಕು. ಅಷ್ಟು ರಾತ್ರಿಯಲ್ಲೂ ಪೊಲೀಸರ ಬೆನ್ನತ್ತಿ, ವಿಡಿಯೋ ಮಾಡಿ, ಲೈವ್‌ ಲೊಕೇಶನ್‌ ಹಾಕ್ತಾ ಇದ್ರು ಹಾಗಾಗಿ ಸಿ.ಟಿ ರವಿ ಅವರನ್ನ ಮುಗಿಸಲು ಅವಕಾಶ ಸಿಕ್ಕಿರಲಿಲ್ಲ ಎಂದು ತಿಳಿಸಿದ್ದಾರೆ.

ಇದು ಸಂಪೂರ್ಣವಾಗಿ ಗೃಹ ಇಲಾಖೆಯ ವೈಫಲ್ಯ, ಹಾಗಾಗಿ ನಾವು ಈ ವಿಷಯವನ್ನ ಇಲ್ಲಿಗೆ ಬಿಡುವುದಿಲ್ಲ,ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಜೋಶಿ ಹೇಳಿದರು.

ಈಗಾಗಲೇ ನಾನು, ಸಿ.ಟಿ ರವಿ ಅವರಿಗೆ ಸೂಕ್ತ ಕಾನೂನು ಸಲಹೆ ಪಡೆಯುವಂತೆ ಹೇಳಿದ್ದೇನೆ. ಈ ಕುತಂತ್ರದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕು,ಅದಕ್ಕಾಗಿ ನಾವು ಕೋರ್ಟ್‌ಗೆ ಹೋಗುತ್ತೇವೆ ಎಂದು ತಿಳಿಸಿದರು.

ಸಿ.ಟಿ ರವಿ ಅವಹೇಳನಕಾರಿ ಶಬ್ದ ಬಳಸಿದಕ್ಕೆ ಎನ್ಕೌಂಟರ್ ಮಾಡಹೊರಟ್ಟಿದ್ದಾ ಎಂಬ ಪ್ರಶ್ನೆಗೆ, ಅದೊಂದೇ ಕಾರಣ ಅಂತ ಹೇಳೋದಿಲ್ಲ. ಈ ರೀತಿ ಒಬ್ಬರನ್ನ ಎನ್‌ಕೌಂಟರ್‌ ಮಾಡಿದರೆ ಬಿಜೆಪಿನೋರು ಮುಂದೆ ಯಾವುದೇ ಚಟುವಟಿಕೆ ಮಾಡದೆ ಹೆದರಿ ಮೂಲೆ ಸೇರುತ್ತಾರೆ ಅಂತ ಭಯ ಸೃಷ್ಟಿ ಮಾಡುವ ಪ್ರಯತ್ನ ಇರಬಹುದು ಎಂದು ಮಾರ್ಮಿಕವಾಗಿ ನುಡಿದರು.

ಪೊಲೀಸರು ರಾಜಕೀಯ ಕೈಗೊಂಬೆಗಳಾಗಿ ವರ್ತಿಸಬಾರದು,ಏಕೆಂದರೆ ಮುಂದೆ ಸರ್ಕಾರ ಬದಲಾಗುತ್ತೆ, ಅಧಿಕಾರಕ್ಕೆ ಯಾರು ಬರುತ್ತಾರೊ, ಚೇಂಜ್ ಆಗುತ್ತಾ ಇರುತ್ತೆ ಎಂಬುದನ್ನ ನೆನಪಿಟ್ಟುಕೊಳ್ಳಬೇಕು ಎಂದು ಕಟು ಎಚ್ವರಿಕೆ‌ ನೀಡಿದರು ಪ್ರಹ್ಲಾದ ಜೋಶಿ.

ಸಿ.ಟಿ ರವಿ ಅವರನ್ನ ಮುಗಿಸೊ ಯೋಚನೆ ಇತ್ತೇನೊ:ಜೋಶಿ ವಿವಾದಾತ್ಮಕ ನುಡಿ Read More

ಸಿ.ಟಿ.ರವಿ ಮೇಲೆ ಹಲ್ಲೆ ಯತ್ನ ಖಂಡನೀಯ; ಅಶ್ಲೀಲ ಪದ ಬಳಸಿದ್ದರೆ ಸಮರ್ಥಿಸಲ್ಲ:ಹೆಚ್ ಡಿ ಕೆ

ನವದೆಹಲಿ: ಬೆಳಗಾವಿಯ ಸುವರ್ಣಸೌಧದಲ್ಲಿಯೇ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಮೇಲೆ ನಡೆದಿರುವ ಹಲ್ಲೆ ಯತ್ನ ಹೇಯ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಖಂಡಿಸಿದ್ದಾರೆ.

ಸಚಿವೆ ಬಗ್ಗೆ ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಸಿದ್ದರೆ ಅದನ್ನು ನಾನು ಸಮರ್ಥಿಸುವುದಿಲ್ಲ, ಅದಕ್ಕೆ ಪ್ರತಿಯಾಗಿ ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಖ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ. ಪ್ರತಿಪಕ್ಷ ನಾಯಕರಿಗೇ ರಕ್ಷಣೆ ಇಲ್ಲ ಎಂದ ಮೇಲೆ ವಿಧಾನಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ ಎಂದು ಪ್ರಶ್ನಿಸಿದರು.

ಎಲ್ಲದ್ದಕ್ಕೂ ಡಾ.ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ರೂಪಿತವಾದ ಕಾನೂನಿದೆ, ಸಭಾಪತಿಗಳೂ ರೂಲಿಂಗ್ ನೀಡಿದ್ದಾರೆ, ಆ ನಂತರವೂ ನಡೆಯುತ್ತಿರುವ ಘಟನಾವಳಿಗಳು, ಸಭಾಪತಿಗಳನ್ನೇ ನಿಂದಿಸುವ ಕೆಟ್ಟ ನಡವಳಿಕೆಗಳು ಆಘಾತಕಾರಿ ಎಂದು ತಿಳಿಸಿದ್ದಾರೆ.

ಮೀಸಲಾತಿಗಾಗಿ ಪಂಚಮಸಾಲಿ ಮುಖಂಡರು ಸುವರ್ಣಸೌಧದ ಮುಂದೆ ಪ್ರತಿಭಟಿಸಿದ್ದಕ್ಕೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಕಾಂಗ್ರೆಸ್ ಸರ್ಕಾರ ಪೌರುಷ ಮೆರೆದಿತ್ತು. ಅಂದು ಪೊಲೀಸರ ಪ್ರತಾಪ ಹೇಳತೀರದು,ಗೇಟಿನಲ್ಲಿಯೇ ತಡೆದು ಆ ಪಂಚಮಸಾಲಿ ಜನರಿಗೆ ರಕ್ತ ಬರುವಂತೆ ಲಾಠಿ ಬೀಸಿದ ಪೊಲೀಸರೇ, ಈ ಗೂಂಡಾಗಳು ಸುವರ್ಣಸೌಧದೊಳಕ್ಕೆ ಹೇಗೆ ಬಂದರು ಅಥವಾ ಇದರಲ್ಲೂ ಷಡ್ಯಂತ್ರ ಇದೆಯೇ ಎಂದು ‌ಕುಮಾರಸ್ವಾಮಿ ವ್ಯಂಗ್ಯ ವಾಗಿ ಪ್ರಶ್ನಿಸಿದ್ದಾರೆ.

ಸದನದ ಕಾರಿಡಾರಿನಲ್ಲಿಯೇ ಆ ಗೂಂಡಾಗಳು ಶಾಸಕರನ್ನು ಅಟ್ಟಾಡಿಸುತ್ತಾರೆ, ಕೊಲೆಗೆತ್ನಿಸುತ್ತಾರೆ, ಮಾರ್ಷಲ್’ಗಳನ್ನು ಕೆಳಕ್ಕೆ ಕೆಡವಿ ಕ್ರಿಮಿನಲ್ ಪ್ರವೃತ್ತಿ ಮೆರೆಯುತ್ತಾರೆಂದರೆ ಬಂಡೆ ಬೆಂಬಲವಿದೆ ಎಂದೇ ಅರ್ಥ ಎಂದು ಮಾರ್ಮಿಕವಾಗಿ ನುಡಿದರು.

ಸುವರ್ಣಸೌಧಕ್ಕೆ ನುಗ್ಗಿದ ಗೂಂಡಾಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ರೌಡಿಪಟ್ಟಿ ತೆರೆಯಬೇಕು ಸಮಾಜದ ಶಾಂತಿಗೆ ಬೆದರಿಕೆಯಾಗಿರುವ ಆ ಕಿಡಿಗೇಡಿಗಳನ್ನು ಸುವರ್ಣಸೌಧ, ವಿಧಾನಸೌಧದಿಂದ ಶಾಶ್ವತವಾಗಿ ನಿರ್ಬಂಧಿಸಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸಿ.ಟಿ.ರವಿ ಮೇಲೆ ಹಲ್ಲೆ ಯತ್ನ ಖಂಡನೀಯ; ಅಶ್ಲೀಲ ಪದ ಬಳಸಿದ್ದರೆ ಸಮರ್ಥಿಸಲ್ಲ:ಹೆಚ್ ಡಿ ಕೆ Read More

ಬಿಪಿಎಲ್ ಕಾರ್ಡ್‌; ಸರಕಾರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ-ಕುಮಾರಸ್ವಾಮಿ

ಬೆಂಗಳೂರು: ಕೇಂದ್ರದ ಮಾನದಂಡದ ಪ್ರಕಾರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಈಗ ಹೇಳುತ್ತಿದೆ, ಇಷ್ಟು ದಿನ ಅದನ್ನ ಯಾಕೆ ಹೇಳಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಇವತ್ತು ಬೆಳಗ್ಗೆ ಮಾಧ್ಯಮಗಳಲ್ಲಿ ಕೇಂದ್ರದ ಮಾನದಂಡ ಎಂದು ವರದಿ ಬಂದ ಮೇಲೆ ಸರಕಾರ ಭಿನ್ನರಾಗ ಎತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಪಿಎಲ್ ಕಾರ್ಡು ವಿಚಾರದಲ್ಲಿ ರಾಜ್ಯ ಸರ್ಕಾರ ಗೊಂದಲ ಉಂಟು ಮಾಡುತ್ತಿದೆ, ಜನತೆಗೆ ಉತ್ತರ ಕೊಡಲು ಸಾಧ್ಯ ಆಗುತ್ತಿಲ್ಲ ಎಂದು ಟೀಕಿಸಿದರು.

ಸಿಎಂ ಒಂದು ಹೇಳಿಕೆ ‌ಕೊಡುತ್ತಾರೆ. ಸಚಿವರೇ ಇನ್ನೊಂದು ಹೇಳಿಕೆ ಕೊಡುತ್ತಾರೆ.
ಅವರುಗಳಲ್ಲೇ ಒಂದು ಕ್ಲ್ಯಾರಿಟಿ ಇಲ್ಲ. ಗ್ಯಾರಂಟಿ ಸ್ಕೀಮ್ ಗಳ ಬಗ್ಗೆ ನಾನು ಲಘುವಾಗಿ ಮಾತನಾಡಿಲ್ಲ. ಗ್ಯಾರಂಟಿ ಕೊಡಲು ಆರ್ಥಿಕವಾಗಿ ಸಮಸ್ಯೆ ಇಲ್ಲ ಎಂದು ಹೇಳಿದ್ದೇನೆ. ನಿರಂತರವಾಗಿ ತೆರಿಗೆ ಹೆಚ್ಚಳ ಮಾಡಿಕೊಂಡು ಖಜಾನೆ ತುಂಬಿಸಿಕೊಂಡಿದ್ದಾರೆ, ಆ ದುಡ್ಡು ಎಲ್ಲಿ ಹೋಗುತ್ತಿದೆ ಎಂದಷ್ಟೇ ಕೇಳಿದ್ದೇನೆ ಹಣಕಾಸು ನಿರ್ವಹಣೆಯಲ್ಲಿ ಸಮಸ್ಯೆಯಿದೆ. ಅದನ್ನು ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ‌್ ಗೆಲ್ಲುತ್ತಾರೆ ಎಂದು ಹೇಳಿದ ಸಚಿವರು; ನಾನೇ ಅಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದೇನೆ, ಜನತೆ ಭಾವನೆ ಎನು ಅಂತ ಗೊತ್ತಿದೆ,ಗೆಲುವಿನಲ್ಲಿ ಯಾವುದೇ ಅನುಮಾನ ಇಲ್ಲ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಬಿಪಿಎಲ್ ಕಾರ್ಡ್‌; ಸರಕಾರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ-ಕುಮಾರಸ್ವಾಮಿ Read More

ಜಮೀರ್ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಮೈಸೂರು: ಕರಿಯಾ, ಕುಳ್ಳ ಎಂದು ಮಾತಾಡಿಸಿ ಕೊಳ್ಳುವ ಸಂಸ್ಕೃತಿಯಿಂದ ನಾನು ಬಂದವನಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಚಿವ ಜಮೀರ್ ಗೆ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಜಮೀರ್ ಮಾತುಗಳು ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಹೇಳಿದರು.

ಹಿಂದೆ ಬಸವರಾಜ್ ಹೊರಟ್ಟಿ ಅವರು ನನ್ನನ್ನ ಕುಮಾರ ಎಂದಾಗ ಅವರನ್ನು ಹೊಡೆಯಲು ಹೋದ ಗಿರಾಕಿ ಇವರು,ಹೊರಟ್ಟಿ ಅವರು ಈಗಲೂ ಇದ್ದಾರಲ್ಲಾ ಅವರನ್ನೇ ಕೇಳಿ ಬೇಕಾದರೆ. ಅವತ್ತು ಅವರನ್ನು ಹೊಡೆಯಲು ಇವರು ಹೋಗಿರಲಿಲ್ವಾ ಅಂತಾ ಎಂದು ಹೆಚ್ ಡಿ ಕೆ ತಿಳಿಸಿದರು.

ಸಿಎಂ ಹಾಗೂ ಡಿಸಿಎಂ ಇಬ್ಬರು ಜಮೀರ್ ಮಾತಗಳನ್ನ ಸಮರ್ಥಿಸಿಕೊಂಡಿದ್ದಾರೆ.
ಇದು ನಾಗರೀಕ ಸರ್ಕಾರ ನಾ,ಇಂಥ ಮಾತು ಹೇಳಿದವರ ಮೇಲೆ ಎಷ್ಟು ಕೇಸ್ ಹಾಕಿ ಜೈಲಿಗೆ ಹಾಕಿಲ್ಲ ಈ ಸರಕಾರ ಈಗ ಯಾಕೆ ಸುಮ್ಮನೆ ಇದೆ ಎಂದು ಕಾರವಾಗಿ ಪ್ರಶ್ನಿಸಿದರು.

ಸಿಎಂ ಗೆ ದೇವೇಗೌಡರು
ಗರ್ವ ಭಂಗ ಮಾಡ್ತಿನಿ, ಸೊಕ್ಕು ಮುರಿತ್ತಿನಿ ಅನ್ನೋದು ಮಾನನಷ್ಟ ಹೇಳಿಕೆನಾ,
ನಾನು ಯಾವತ್ತೂ ಅವರನ್ನು ಕುಳ್ಳ ಎಂದು ಕರೆದಿಲ್ಲ, ನಮ್ಮ ಸ್ನೇಹ ಇದ್ದದ್ದು ರಾಜಕೀಯವಾಗಿ ಅಷ್ಟೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ದುಡ್ಡಿನ ಮದದಿಂದ ಈ ರೀತಿ ಮಾತಾಡುತ್ತಿದ್ದಾರೆ,ಆಡಲಿ ಎಂದರು.

ಸರ್ಕಾರ ಬೀಳಿಸಲು 50 ಕೋಟಿ ಆಫರ್ ವಿಚಾರ‌ಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿ ಕೆ,
ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಫೂನ್ ರೀತಿ ಇದೆ ಎಂದು ಗೇಲಿ ಮಾಡಿದರು.

50 ಕೋಟಿ 50 ಜನರಿಗೆ ಅಂಥ ನಿಖರವಾಗಿ ಹೇಳುತ್ತಿದ್ದಾರೆ.ಈ ಸರ್ಕಾರ ಪ್ರತಿಯೊಂದಕ್ಕು ಎಸ್ಐಟಿ ತನಿಖೆ ಮಾಡಿಸುತ್ತಿದ್ದಾರೆ.ಇದನ್ನೂ ಎಸ್ಐಟಿ ಕೊಟ್ಟು ತನಿಖೆ ಮಾಡಿಸಲಿಎಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದರು.

ಚನ್ನಪಟ್ಟಣದಲ್ಲಿ ಜನತೆಯ ಆಶೀರ್ವಾದ ಆಗಿದೆ,ನಿಖಿಲ್ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಜಮೀರ್ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ Read More