ಅ.18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ:ಸಿದ್ದರಾಮಯ್ಯ

ಬೆಂಗಳೂರು: ಸೆಪ್ಟೆಂಬರ್ 2 ರಿಂದ ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಶುರುವಾಗಿದೆ,ಸಮೀಕ್ಷೆ ಇಂದಿಗೆ ಮುಗಿಯಬೇಕಿತ್ತು,ಕೆಲವು ಜಿಲ್ಲೆಗಳಲ್ಲಿ ಪೂರ್ತಿ ಆಗಿಲ್ಲ,ಹಾಗಾಗಿ ಅಕ್ಟೋಬರ್ 18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಮೀಕ್ಷೆಯ ಸ್ಥಿತಿ ಗತಿ ಕುರಿತು ಅಧಿಕಾರಿಗಳ ಜೊತೆ ಸಿಎಂ ವಿಡಿಯೊ ಕಾನ್ಷರೆನ್ಸ್ ನಡೆಸಿ ಮಾತನಾಡಿ,ಪಿಯುಸಿ ಉಪನ್ಯಾಸಕರಿಗೆ ಸಮೀಕ್ಷೆಯಿಂದ ವಿನಾಯ್ತಿ ನೀಡಲಾಗಿದೆ,

ವಿಧಾನ‌ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು
ಶಿಕ್ಷಕರ ಸಂಘದ ಹೆಚ್ಚುವರಿಯಾಗಿ 10 ದಿನಗಳ‌ ಕಾಲಾವಕಾಶ ಕೇಳಿ ಮನವಿ ಮಾಡಿದ್ದಾರೆ,ಅವರ ಮನವಿ ಮೇರೆಗೆ ರಜೆ ವಿಸ್ತರಣೆ ಮಾಡಲಾಗಿದ್ದು, ಅ19 ರೊಳಗೆ ಸಮೀಕ್ಷೆ ಮುಗಿಯುತ್ತದೆ ಎಂದು ಹೇಳಿದರು ‌

ವಿಶೇಷ ಬೋಧನಾ ತರಗತಿಗಳ ಮೂಲಕ ಶಿಕ್ಷಕರು ಪಠ್ಯ ಪೂರ್ಣಗೊಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ 12ನೇ ತಾರೀಕಿನಿಂದ ದ್ವಿತೀಯ ಪಿಯು ಮಧ್ಯಂತರ ಪರೀಕ್ಷೆ ನಡೆಯುತ್ತಿರುವುದರಿಂದ ಸಮೀಕ್ಷೆ ಕಾರ್ಯದಿಂದ ಪಿಯುಸಿ ಉಪನ್ಯಾಸಕರಿಗೆ ವಿನಾಯ್ತಿ ನೀಡಲಾಗಿದೆ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ 6700 ಜನ ಶಿಕ್ಷಕರು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 46 ಲಕ್ಷ ಮನೆಗಳಿವೆ. ದಿನಕ್ಕೆ 10-15 ಮನೆಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ. ಬೆಂಗಳೂರಿನಲ್ಲಿ ನರಕ ಚತುರ್ದಷಿ ಒಳಗೆ ಸಮೀಕ್ಷೆ ಮುಗಿಸಲು ಸೂಚಿಸಲಾಗಿದೆ. ಶಿಕ್ಷಕರು ಕೂಡ ಇಷ್ಟರೊಳಗೆ ಸಮೀಕ್ಷೆ ಮುಗಿಸುವ ಭರವಸೆ ನೀಡಿದ್ದಾರೆ.
ಸಮೀಕ್ಷೆ ನಡೆಯುವಾಗ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಇವರಿಗೆ ತಲಾ 20 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಪ್ರಕಟಿಸಿದರು.

ಅ.18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ:ಸಿದ್ದರಾಮಯ್ಯ Read More

ಸಮೀಕ್ಷೆ‌ ವೇಳೆ ಜನರು ವೈಯಕ್ತಿಕ ಮಾಹಿತಿ ನೀಡಬೇಕಿಲ್ಲ:ಆರ್‌.ಅಶೋಕ್ ಸಲಹೆ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಜನರು ವೈಯಕ್ತಿಕ ಮಾಹಿತಿಗಳನ್ನು ನೀಡಲೇಬೇಕು ಎಂದೇನಿಲ್ಲ, ಸೂಕ್ತ ಎನಿಸಿದ ಪ್ರಶ್ನೆಗಳಿಗೆ ಮಾತ್ರ ಜನರು ಉತ್ತರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾಡುತ್ತಿರುವ ಜಾತಿ ಸಮೀಕ್ಷೆಯಲ್ಲಿ ಜನರು ಎಲ್ಲ ವಿವರವನ್ನು ಬಹಿರಂಗೊಳಿಸಬಾರದು. ಜನರ ಬಳಿ ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ. ಇದನ್ನು ಕಾಂಗ್ರೆಸ್‌ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಖಜಾನೆಯಲ್ಲಿ ಹಣವಿಲ್ಲದೆ, ರೇಷನ್‌ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಅದಕ್ಕಾಗಿ ಮಾನದಂಡ ಬೇಕಾಗುತ್ತದೆ.ಈ ಕಾರಣಕ್ಕಾಗಿ ಹಾಗೂ ಯೋಜನೆಗಳಿಗೆ ಕತ್ತರಿ ಹಾಕಲು ಜಾತಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಮುಂದಿನ ಬಜೆಟ್‌ ರಚನೆ ಸಿಎಂ ಸಿದ್ದರಾಮಯ್ಯನವರಿಗೆ ಕಗ್ಗಂಟಾಗಿದೆ. ಅದಕ್ಕಾಗಿ ಹಣ ಉಳಿಸಬೇಕಿದೆ. ಇದು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಅಲ್ಲ, ಸಿದ್ದರಾಮಯ್ಯನವರ ಜಾತಿ ಸಮೀಕ್ಷೆ ಜನರಿಗೆ ಪಂಗನಾಮ ಹಾಕುವ ಸಮೀಕ್ಷೆ ಎಂದು ಕಿಡಿಕಾರಿದರು.

ಯಾರೂ ವೈಯಕ್ತಿಕ ದಾಖಲೆಗಳನ್ನು ನೀಡಬಾರದು, ಯಾವ್ಯಾವ ಪ್ರಶ್ನೆಗೆ ಉತ್ತರ ಕೊಡಬಹುದೋ ಅಷ್ಟನ್ನು ಮಾತ್ರ ನೀಡಿದರೆ ಸಾಕು. ಹೈಕೋರ್ಟ್‌ ಕೂಡ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಿಲ್ಲ ಎಂದಿದೆ ಎಂದು ಅಶೋಕ್ ತಿಳಿಸಿದರು.

ತಮಿಳುನಾಡಿನ ಕರೂರಿನಲ್ಲಾದ ಕಾಲ್ತುಳಿತದ ಘಟನೆಯಿಂದ ಇಡೀ ದೇಶ ಬೆಚ್ಚಿಬಿದ್ದಿದೆ. ವಿಧಾನಸೌಧದ ಮುಂಭಾಗ ಕಾಂಗ್ರೆಸ್‌ ಸರ್ಕಾರದಿಂದ ನಡೆದಿದ್ದ ಆರ್‌ಸಿಬಿ ಸಂಭ್ರಮಾಚರಣೆಯಲ್ಲಾದ ಕಾಲ್ತುಳಿತ ಘಟನೆಯಿಂದಲೇ ನಾವೆಲ್ಲ ದುಃಖಕ್ಕೊಳಗಾಗಿದ್ದೆವು. ತಮಿಳುನಾಡಿನಲ್ಲಿ ನಡೆದಿರುವ ದುರ್ಘಟನೆ ಇದಕ್ಕಿಂತಲೂ ದೊಡ್ಡದಾಗಿದೆ. ತಮಿಳುನಾಡಿನ ಡಿಎಂಕೆ ಸರ್ಕಾರ ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದೆ. ಡಿಎಂಕೆ ಸರ್ಕಾರ 10 ಸಾವಿರ ಜನರಿಗೆ ಅನುಮತಿ ನೀಡಿದೆ. ಆದರೆ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಿಲ್ಲ. ಈ ಹಿಂದೆಯೇ ಸರ್ಕಾರಕ್ಕೆ ಕೋರ್ಟ್‌ ಸೂಚನೆ ನೀಡಿದ್ದರೂ, ಅದನ್ನು ಸರ್ಕಾರ ಧಿಕ್ಕರಿಸಿದೆ. ಈ ಅನಾಹುತಕ್ಕೆ ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದರು.

ನಟ ವಿಜಯ್‌ ಕೂಡಲೇ ಕ್ಷಮಾಪಣೆ ಕೇಳಿ, ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು. ಅದನ್ನು ವಿಜಯ್‌ ಮಾಡಿಲ್ಲ. ಈ ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ತನಿಖೆಗೆ ನೀಡಬೇಕೆಂದು ಕರ್ನಾಟಕದ ಬಿಜೆಪಿ ಘಟಕ ಆಗ್ರಹಿಸುತ್ತಿದೆ ಎಂದು ಹೇಳಿದರು.

ಬೆಳಗಾವಿ, ರಾಯಚೂರು, ವಿಜಯಪುರ ಮೊದಲಾದ ಭಾಗಗಳಲ್ಲಿ ಪ್ರವಾಸ ಮಾಡಿ ಮಳೆ ಹಾನಿ ಪರಿಶೀಲನೆ ಮಾಡುತ್ತೇನೆ. ಹಿಂದೆ ಬಿಜೆಪಿ ಇದ್ದಾಗ ಜನರಿಗೆ ಉತ್ತಮ ಪರಿಹಾರ ನೀಡಲಾಗಿತ್ತು. ಈಗ ಕಾಂಗ್ರೆಸ್‌ ಏನೂ ನೀಡುತ್ತಿಲ್ಲ ಎಂದು ಅಶೋಕ್‌ ಗಂಭೀರ ಆರೋಪ ಮಾಡಿದರು.

ಸಮೀಕ್ಷೆ‌ ವೇಳೆ ಜನರು ವೈಯಕ್ತಿಕ ಮಾಹಿತಿ ನೀಡಬೇಕಿಲ್ಲ:ಆರ್‌.ಅಶೋಕ್ ಸಲಹೆ Read More

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಚುರುಕುಗೊಳಿಸಿ- ಸಿಎಂ ತಾಕೀತು.

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದ್ದು, ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆಗಳ ಕಾರಣ ಸಮೀಕ್ಷೆ ನಿಧಾನವಾಗಿತ್ತು. ಈಗ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025ರ ಪ್ರಗತಿ ಕುರಿತ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ‌ ಅಧಿಕಾರಿಗಳಿಗೆ ಸಿಎಂ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಸೂಚಿಸಿದರು.

ಸಮೀಕ್ಷೆ ಕಾರ್ಯಕ್ಕೆ ಮುಂದೆಯೂ ಯಾವುದೇ ತಾಂತ್ರಿಕ ತೊಂದರೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ತಾಂತ್ರಿಕ ತೊಂದರೆಗಳು ಎದುರಾದರೆ ತಕ್ಷಣ ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು,ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು ‌

ರಾಜ್ಯದಲ್ಲಿ ಒಟ್ಟು 1,43,81,702 ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ನಡೆಸಬೇಕಾಗಿದ್ದು, ಇದುವರೆಗೆ 2,76,016 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ.

ಸಮೀಕ್ಷೆ ಕಾರ್ಯಕ್ಕೆ ಒಟ್ಟು 1,20,728 ಗಣತಿದಾರರನ್ನು ನಿಯೋಜಿಸಲಾಗಿದೆ. ಒಟ್ಟು 1,22,085 ಗಣತಿ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಅಕ್ಟೋಬರ್‌ 7ರ ಒಳಗಾಗಿ ಗಣತಿ ಕಾರ್ಯ ಪೂರ್ಣಗೊಳ್ಳಬೇಕು ಎಂದು ಸಿಎಂ ಹೇಳಿದರು.

ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಶಿಕ್ಷಕರು ತಮಗೆ ವಹಿಸಲಾಗಿರುವ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಯಾವುದೇ ಶಿಕ್ಷಕರು ಗಣತಿ ಕಾರ್ಯಕ್ಕೆ ಅಸಹಕಾರ ತೋರಿಸಬಾರದು,ನಿರ್ಲಕ್ಷ್ಯ ತೋರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿಗಳು ಎಚ್ಚರಿಸಿದರು.

ಶಿಕ್ಷಕರಿಗೆ ಗೌರವಧನದ ಬಗ್ಗೆ ಯಾವುದೇ ಅನುಮಾನ ಬೇಡ. ಈಗಾಗಲೇ ಗೌರವಧನವನ್ನು ಬಿಡುಗಡೆ ಮಾಡಿದ್ದೇವೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಇದು ಕೇವಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಮೀಕ್ಷೆಯಲ್ಲ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿಗದಿತ ಗುರಿಯ ಪ್ರಗತಿ ಬಗ್ಗೆ ಪ್ರತಿ ದಿನ ಪರಿಶೀಲನೆ ನಡೆಸಬೇಕು. ಕಂದಾಯ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಿಎಂ ಆದೇಶಿಸಿದರು.

ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಿಧಾನಗತಿಯಲ್ಲಿದ್ದು, ಚುರುಕುಗೊಳಿಸಬೇಕು. ಅಗತ್ಯವಿರುವ ಕಡೆ ಅನುದಾನಿತ ಶಾಲೆಗಳ ಶಿಕ್ಷಕರ ಸೇವೆಯನ್ನು ಪಡೆದುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ ಈ ಕುರಿತು ಸಂಪರ್ಕದಲ್ಲಿರಬೇಕು ಎಂದು ಹೇಳಿದರು.

ಸಮೀಕ್ಷೆ ಕಾರ್ಯದ ಮೇಲ್ವಿಚಾರಣೆ ನಡೆಸಲು ಪ್ರತಿ ತಾಲೂಕಿಗೆ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯಾಗಿ ನೇಮಕ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಚುರುಕುಗೊಳಿಸಿ- ಸಿಎಂ ತಾಕೀತು. Read More

ಜಾತಿ ಜನಗಣತಿಗೆ ಕೈಜೋಡಿಸಿ:ಬಿ. ಸುಬ್ರಹ್ಮಣ್ಯ ಮನವಿ

ಮೈಸೂರು: ರಾಜ್ಯ ಸರ್ಕಾರ ಕೈಗೊಂಡಿರುವ ಹಿಂದುಳಿದ ವರ್ಗಗಳ ಸಮುದಾಯದ ಜಾತಿಜನಗಣತಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಸಮುದಾಯದವರು ಕೈ ಜೋಡಿಸಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಮನವಿ ಮಾಡಿದರು.

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಕೈಗೊಂಡಿರುವ ಜಾತಿ ಜನಗಣತಿ ಹಾಗೂ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ
ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಕನಕ ಸಮುದಾಯ ಭವನದಲ್ಲಿ ಮಾಜಿ ರಾಜ್ಯಾಧ್ಯಕ್ಷ ಬಿ. ಸುಬ್ರಹ್ಮಣ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿ. ಸುಬ್ರಹ್ಮಣ್ಯ ಅವರು, ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಸಮುದಾಯದ ಜಾತಿಜನಗಣತಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ. ಈ ಸಮೀಕ್ಷೆಯಲ್ಲಿ ಸಮುದಾಯದ ಪ್ರತಿಯೊಬ್ಬರು ಕೂಡ ಭಾಗವಹಿಸುವ ಮೂಲಕ ತಮ್ಮ ಜಾತಿ ಹಾಗೂ ಜನಸಂಖ್ಯೆಯನ್ನ ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲದೇ ಕುರುಬ ಸಮುದಾಯದ ಜನ ಜಾತಿ ಕಾಲಂ ನಲ್ಲಿ ಕುರುಬ ಸಮಾಜ ಎಂದೇ ಬರೆಸಬೇಕು ಎಂದು ಮನವಿ ಮಾಡಿದರು.

ಶೋಷಿತ ಸಮುದಾಯದ ಸಂಚಾಲಕರಾದ ರಾಮಚಂದ್ರಪ್ಪ ಮಾತನಾಡಿ ಸಮೀಕ್ಷೆಗೆ ಹಲವರು ವಿರೋಧ ಮಾಡಬಹುದು. ಆದರೆ ಹಿಂದುಳಿದ ಸಮುದಾಯಗಳಿಗೆ ಈ ಸಮೀಕ್ಷೆಯಿಂದ ಒಳಿತಾಗಲಿದೆ. ಹಾಗಾಗಿ ಗಣತಿಗೆ ಬರುವ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಸೋಮಶೇಖರ್ ಮಾತನಾಡಿ ಪ್ರತಿಯೊಂದು ಗ್ರಾಮದಲ್ಲಿರುವ ಕುರುಬ ಸಮುದಾಯದ ಕುಟುಂಬಗಳು ಈ ಸಮೀಕ್ಷೆಗೆ ಸಹಕಾರ ಕೊಡಬೇಕು. ಯುವ ಸಮೂಹದ ಜನ ಕೂಡ ಇದಕ್ಕೆ ಕೈಜೋಡಿಸಿ ನಮ್ಮ ಸಮುದಾಯದ ಜನರನ್ನ ಜಾಗೃತರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಮೈಸೂರು ನಗರ ಮತ್ತು ಗ್ರಾಮಾಂತರ ಭಾಗದ ಮುಖಂಡರು, ಸಮುದಾಯದ ಹಿರಿಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಣ್ಣ, ಖಜಾಂಜಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಶಿವಪ್ಪ ಕೋಟೆ, ಸಮಾಜದ ಮುಖಂಡರುಗಳಾದ ಅಮಿತ್, ಚಿಕ್ಕಣ್ಣ, ದೊಳ್ಳೇಗೌಡ, ರಂಗರಾಜು, ಬಸವರಾಜು, ರವಿ, ರಾಮಕೃಷ್ಣಪ್ಪ, ರೇಖಾ, ಚಾಯ, ರಾಜೇಶ್ವರಿ, ತಾಲೂಕು ಅಧ್ಯಕ್ಷರುಗಳಾದ, ಕುನ್ನೆಗೌಡ, ಆನಂದ್, ಕೆಂಪಣ್ಣ,ಮಹೇಶ್, ಸುನಿಲ್, ಬಸವರಾಜ್ ಸೇರಿದಂತೆ ಮೈಸೂರು ಜಿಲ್ಲಾ ಮತ್ತು ತಾಲ್ಲೂಕು ಕುರುಬ ಸಂಘದ ಪದಾಧಿಕಾರಿಗಳು, ಸಮಾಜದ ಯುವಕರು ಕನಕದಾಸ ಹಾಗೂ ರಾಯಣ್ಣ ಸಂಘದ ಸದಸ್ಯರು,ಮುಖಂಡರುಗಳು ಉಪಸ್ಥಿತರಿದ್ದರು.

ಜಾತಿ ಜನಗಣತಿಗೆ ಕೈಜೋಡಿಸಿ:ಬಿ. ಸುಬ್ರಹ್ಮಣ್ಯ ಮನವಿ Read More

ಜಾತಿಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯೂ ಆಗಲಿ:ಸಿಎಂ

ಬೆಂಗಳೂರು, ಮೇ 01: ಜನಗಣತಿ ಯೊಂದಿಗೆ ಜಾತಿಗಣತಿ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ.
ಆದರೆ ಸಾಮಾಜಿಕ, ಶೈಕ್ಷಣಿಕ,ಆರ್ಥಿಕ ಸಮೀಕ್ಷೆಯೂ ಆಗಬೇಕೆಂದು ಸಿಎಂ ಸಿದ್ದರಾಮಯ್ಯ ಕೇಂದ್ರವನ್ನು ಆಗ್ರಹಿಸಿದರು.

ಕಾವೇರಿ ನಿವಾಸದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಿಎಂ,
ದೇಶದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿ ಗಣತಿ ಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಮೀಸಲಾತಿಯಲ್ಲಿ ಶೇ.50 ರಷ್ಟು ಗರಿಷ್ಠ ಪರಿಮಿತಿಯನ್ನು ಸಡಿಲಗೊಳಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು,ಜಾತಿ ಗಣತಿಗೆ ಕೂಡಲೇ ದಿನಾಂಕ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.

ರಾಹುಲ್ ಗಾಂಧಿಯವರು ಕೂಡಾ ಇದನ್ನೇ ಆಗ್ರಹಿಸಿದ್ದು, ಜಾತಿ ಗಣತಿ ವೇಳೆ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು,
ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನ ಹೇಳುತ್ತದೆ. ಜಾತಿ ಗಣತಿ ಯೊಂದಿಗೆ ಸಾಮಾಜಿಕ, ಆರ್ಥಿಕ,ಶೈಕ್ಷಣಿಕ ಸಮೀಕ್ಷೆ ಮಾಡಿದರೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡಲು ಅನುಕೂಲವಾಗುತ್ತದೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

2015 ರಲ್ಲಿಯೇ ನಮ್ಮ ಸರ್ಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ 192 ಕೋಟಿ ವೆಚ್ಚ ಮಾಡಿ 1. 33 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ ಇದರಿಂದ ಪ್ರೇರಿತವಾಗಿ ಮತ್ತು ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು
ಕೇಂದ್ರ ಸರ್ಕಾರ ಈಗ ಸಮೀಕ್ಷೆಗೆ ಮುಂದಾಗಿದೆ ಎಂದು ಟೀಕಿಸಿದರು.

ಪ್ರಸಕ್ತ ಸಚಿವ ಸಂಪುಟದಲ್ಲಿ ಮಂಡಿಸಿರುವ ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಯನ್ನು ಮೇ 9 ರಂದು ನಡೆಯುವ ಸಚಿವ ಸಂಪುಟದಲ್ಲಿ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ಶೇ.50 ರಷ್ಟು ಮೀಸಲಾತಿಯನ್ನು ಬದಲಾಯಿಸಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ 15 ವಿಧಿ, ಕಲಂ (5) ರಂತೆ ಮೀಸಲಾತಿಯನ್ನು ಕೊಡಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಇದನ್ನು ಪರಿಗಣಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ‌ ಎಂದು ಸಿಎಂ ತಿಳಿಸಿದರು.

ಕೇವಲ ಘೋಷಣೆ ಮಾಡಿದರೆ ಸಾಲದು, ಅದನ್ನು ಜಾರಿಗೆ ತರಬೇಕು. 73-74 ರ ತಿದ್ದುಪಡಿಗಳನ್ನು ಬಿಜೆಪಿ ವಿರೋಧಿಸಿತ್ತು. ಇತಿಹಾಸ ನೋಡಿದರೆ ಬಿಜೆಪಿ ಸಾಮಾಜಿಕ ನ್ಯಾಯದ ಪರ ಎಂದಿಗೂ ಇಲ್ಲ. ಕೂಡಲೇ ಯಾವ ದಿನಾಂಕದಿಂದ ಜನಗಣತಿ, ಜಾರಿ ಗಣತಿ ಮಾಡುತ್ತಾರೆ ಎಂದು ತಿಳಿಸಬೇಕು. ಜಾತಿ ಗಣತಿ ಮಾಡುವಾಗ ಸಾಮಾಜಿಕ ಆರ್ಥಿಕ ಸಮೀಕ್ಷೆ ಕೂಡ ಆಗಬೇಕು. ಇಲ್ಲಿಯವರೆಗೂ ಇದನ್ನು ವಿರೋಧಿಸುತ್ತಿದ್ದವರು ಈಗ ಸಮೀಕ್ಷೆ ನಡೆಸುವ ಘೋಷಣೆ ಮಾಡಿದ್ದಾರೆ ಎಂದು ಸಿದ್ದು ಹೇಳಿದರು.

ಸಮೀಕ್ಷೆಯ ಬಗ್ಗೆ ಈ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸಚಿವರು ಅಂತಿಮ ಅಭಿಪ್ರಾಯ ಕೊಟ್ಟ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಏರಿಕೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು. ಮೀಸಲಾತಿ ಏರಿಕೆಯಾಗಬೇಕಾದರೆ ಸಂವಿಧಾನಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕು. ರಾಜ್ಯ ಸರ್ಕಾರ ಕೇಂದ್ರಕ್ಕೆ ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಬೇಕೆಂದು ತಿಳಿಸಬಹುದು. ಆಗ ಸಂವಿಧಾನ ತಿದ್ದುಪಡಿ ಮಾಡಿ ಏರಿಕೆ ಮಾಡಬಹುದು ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಗಳ ಸಚಿವರಾಗಿದ್ದಾಗ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿ ಪಡೆಯಲು ದಿನಾಂಕ ನಿಗದಿ ಮಾಡಿದಾಗ ಅವರನ್ನು ಸಚಿವ ಸ್ಥಾನದಿಂದ ಅಮಾನತು ಮಾಡುವುದಾಗಿ ಹೆದರಿಸಿದ್ದ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೊನೆಗೂ ವರದಿಯನ್ನು ಪಡೆಯಲಿಲ್ಲ. ಈಗ ನೋಡಿದರೆ ಕೇಂದ್ರದ ನಿರ್ಧಾರವನ್ನು ಹೊಗಳುತ್ತಿದ್ದಾರೆ‌ ಇದು
ಇಬ್ಬಂದಿತನ ಎಂದು ಸಿಎಂ ಕುಟುಕಿದರು.

ಜಾತಿಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯೂ ಆಗಲಿ:ಸಿಎಂ Read More