ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಿಎಂ ಗೆ ಮನವಿ
ಮೈಸೂರು: ಈ ಬಾರಿಯ ಜನಗಣತಿಯಲ್ಲಿ ಮಡಿವಾಳ ಸಮುದಾಯದ ಬೇರೆ,ಬೇರೆ ಉಪ ಹೆಸರಿರುವವರೆಲ್ಲರೂ ಮಡಿವಾಳ ಎಂದೇ ನಮೂದಿಸಬೇಕೆಂದು ಮೈಸೂರು ತಾಲೂಕು ಶ್ರೀ ವೀರ ಮಡಿವಾಳ ಸಂಘದ ಅಧ್ಯಕ್ಷ ಸಂತೋಷ್ ಕಿರಾಳು ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ ಎರಡು ಎ ಯಲ್ಲಿ ಗುರುತಿಸಿಕೊಂಡಿರುವ ಮಡಿವಾಳ ಸಮುದಾಯವು ವಿವಿಧ ಜಿಲ್ಲೆಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸಲ್ಪಡುತ್ತಿದೆ,ಹಾಗಾಗಿ ಈ ಬಾರಿಯ ಜನಗಣತಿಯಲ್ಲಿ ಸಮುದಾಯದ ಎಲ್ಲರೂ ಮಡಿವಾಳ ಎಂದೇ ನಮೂದಿಸಬೇಕು ಎಂದು ಅವರು ಕೋರಿದ್ದಾರೆ.
ಈ ರೀತಿಯ ಲೆಕ್ಕಾಚಾರವು ಒಟ್ಟಾರೆ ಜನಸಂಖ್ಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆದ್ದರಿಂದ ನಾವುಗಳೆಲ್ಲರೂ ಒಗ್ಗಟ್ಟಾಗಿ ಒಂದೇ ರೀತಿಯ ಗುರುತಿಸುವಿಕೆಯಿಂದ ಈ ಬಾರಿಯ ಜನಗಣತಿಯಲ್ಲಿ ಮಡಿವಾಳ ಎಂದೇ ನಮೂದಿಸಬೇಕು ಎಂದು ಹೇಳಿದ್ದಾರೆ.
ಮಡಿವಾಳ ಜನಾಂಗವು ದೇಶದ 18 ರಾಜ್ಯ ಹಾಗೂ ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಪರಿಶಿಷ್ಟ ಜಾತಿಯಲ್ಲಿದ್ದು, ಸಿದ್ದರಾಮಯ್ಯ ಅವರ ನೇತೃತ್ವವನ್ನು – ಹಿಂಬಾಲಿಸಿಕೊಂಡು ಬಂದಿರುವ ಮಡಿವಾಳರನ್ನು ಮೊದಲು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಸಿಎಂ ಅವರಲ್ಲಿ ಸಂತೋಷ್ ಕಿರಾಳು ಕೋರಿದ್ದಾರೆ.
ಈ ಹಿಂದೆ ರಚನೆಯಾಗಿದ್ದ ಆಯೋಗದಲ್ಲಿ ಮೈಸೂರಿನ ಡಾಕ್ಟರ್ ಅನ್ನಪೂರ್ಣಮ್ಮ ಅವರು ಮಡಿವಾಳರ ಸ್ಥಿತಿಗತಿಯನ್ನು ಕುಲಶಾಸ್ತ್ರಅಧ್ಯಯನ ಮಾಡಿ ಇವರನ್ನು ಪರಿಶಿಷ್ಟ ಜಾತಿಗೆ ಸೇರಿಸಬಹುದು ಎಂದು ವರದಿ ನೀಡಿದ್ದಾರೆ.
ರಾಜ್ಯ ಸರ್ಕಾರ ಇದನ್ನು ಪರಿಗಣಿಸಿ ಕೇಂದ್ರಕ್ಕೆ ರವಾನಿಸಿ ನಮ್ಮ – ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ರಾಜ್ಯ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸಿಎಂ ಗೆ ಮನವಿ Read More
