ಸಮೀಕ್ಷೆಯಲ್ಲಿ ಕುಂಚಿಟಿಗ ಜನಾಂಗಸ್ವತಂತ್ರ ಜಾತಿ: ಬರೆಸಲು ತೀರ್ಮಾನ

ಮೈಸೂರು: ಸೆ.22 ರಿಂದ ನಡೆಯಲಿರುವ ಜಾತಿಗಣತಿ ಕುರಿತು ಕುಂಚಿಟಿಗರ ಸಂಘದಿಂದ ಕುಂಚಿಟಿಗ ಸಮುದಾಯದವರಿಗೆ ಜಾಗೃತಿ ಮಂಡಿಸಲಾಯಿತು.

ಮೈಸೂರಿನಲ್ಲಿ ನಡೆದ ಕುಂಚಿಟಿಗರ ಸಂಘದ ಸಭೆಯಲ್ಲಿ ಕರ್ನಾಟಕ ರಾಜ್ಯದ್ಯಂತ ಇರುವ ಕುಂಚಿಟಿಗರ ಸಂಘಗಳ ಪದಾಧಿಕಾರಿಗಳು ಭಾಗವಹಿಸಿ ಸಮೀಕ್ಷೆಯಲ್ಲಿ ಕುಂಚಿಟಿಗ ಜನಾಂಗ ಸ್ವತಂತ್ರ ಜಾತಿ‌ ಎಂದು ಬರೆಸಲು
ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಮೈಸೂರು ಕುಂಚಿಟಿಗರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕುಂಚಿಟಿಗರ ಸಂಘದ ಮಹಾಮಂಡಲದ ಅಧ್ಯಕ್ಷರು ಹಾಸನ ಜಿಲ್ಲಾ ಕುಂಚಿಟಿಗರ ಸಂಘದ ಅಧ್ಯಕ್ಷರು,ಚಾಮರಾಜನಗರ, ಕೊಳ್ಳೇಗಾಲ ತಾಲೂಕು,ಪಿರಿಯಾಪಟ್ಟಣ,ತುಮಕೂರು, ಶಿರಾ, ಚಿತ್ರದುರ್ಗ, ಹಿರಿಯೂರು, ಮಡಕಸಿರ, ಕನಕಪುರ ಕುಂಚಿಟಿಗರ ಸಂಘಗಳ ಪದಾಧಿಕಾರಿಗಳು ಭಾಗವಹಿಸಿ ಕುಂಚಿಟಿಗ ಜನಾಂಗವನ್ನು ಸ್ವತಂತ್ರ ಜಾತಿಯೆಂದು ಸರ್ಕಾರ ಕೊಟ್ಟಿರುವ ಕೋಡ್ ನಂಬರ್ A-0795 ಎಂದು ಬರಸಬೇಕೆಂದು ಸಭೆಯಲ್ಲಿ ಒಮ್ಮತದಿಂದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು‌

ಕುಂಚಿಟಿಗ ಜಾತಿಯಲ್ಲಿ ಯಾವುದೇ ಉಪ ಜಾತಿ ಇರುವುದಿಲ್ಲ ಎಂದು ಮುಖಂಡರು ನಿರ್ಣಯ ತೆಗೆದುಕೊಂಡರು.

ಸಮೀಕ್ಷೆಯಲ್ಲಿ ಕುಂಚಿಟಿಗ ಜನಾಂಗಸ್ವತಂತ್ರ ಜಾತಿ: ಬರೆಸಲು ತೀರ್ಮಾನ Read More

ಜಾತಿ ಜನಗಣತಿಯಲ್ಲಿ ಜವಾಬ್ದಾರಿಯಿಂದ ಭಾಗವಹಿಸಿ-ಎಚ್ ವಿ ರಾಜೀವ್ ಸಲಹೆ

ಮೈಸೂರು: ಸರ್ಕಾರ ಸೆ.22 ರಿಂದ ಆರಂಭಿಸಲಿರುವ ಜಾತಿ ಜನಗಣತಿಯಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿಯೊಬ್ಬರು ಜವಾಬ್ದಾರಿಯಿಂದ ಭಾಗವಹಿಸಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಎಚ್. ವಿ ರಾಜೀವ್ ತಿಳಿಸಿದರು.

ನಗರದ ಚಾಮುಂಡಿಪುರಂನಲ್ಲಿರುವ ಶಾರದಾ ನಿಕೇತನ ವಿದ್ಯಾರ್ಥಿ ನಿಲಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವಿಪ್ರ ಸಮುದಾಯದವರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಹಮ್ಮಿಕೊಂಡಿದ್ದ ಜಾತಿ ಗಣತಿ ಅರಿವು ಕಾರ್ಯಗಾರದ ಸಮುದಾಯದ ಸಭೆಯನ್ನು ಉದ್ದೇಶಿಸಿ ರಾಜೀವ್ ಮಾತನಾಡಿದರು.

ಹಲವು ದಶಕಗಳ ನಂತರ ಜಾತಿ ಗಣತಿಯನ್ನು ಮಾಡಲಾಗುತ್ತಿದ್ದು, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಮೀಸಲು ವಿಷಯದಲ್ಲಿ ಜಾತಿ ಗಣತಿ ಪ್ರಮುಖ ಪಾತ್ರ ವಹಿಸಲಿದೆ,ಹೀಗಾಗಿ ಪ್ರತಿಯೊಬ್ಬರೂ ಈ ಜಾತಿ ಗಣತಿಯಲ್ಲಿ ಪಾಲ್ಗೊಳ್ಳಬೇಕು,ಯಾವುದೇ ಗೊಂದಲಕ್ಕೆ ಒಳಗಾಗದೆ ನೈಜ್ಯ ಮಾಹಿತಿಯನ್ನು ನೀಡಬೇಕು ಎಂದು ಸಲಹೆ ನೀಡಿದರು.

ಜಾತಿ ವಿಷಯದಲ್ಲಿ ಹಿಂದು ಬ್ರಾಹ್ಮಣ ಎಂದಷ್ಟೇ ನಮೋದಿಸಬೇಕು ಎಂದು ರಾಜೀವ್ ಹೇಳಿದರು.

ಇದೇ ವೇಳೆ ಹಲವರು ಸಮೀಕ್ಷೆ ಬಗೆಗಿದ್ದ ಗೊಂದಲಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಗೊಂದಕ ಪರಿಹರಿಸುವ ಕೆಲಸವನ್ನು ಹೆಚ್.ವಿ.ರಾಜೀವ್ ಮಾಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ ಮೈಸೂರಿನ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್ ಮಾತನಾಡಿ, ಹಿಂದು ಬ್ರಾಹ್ಮಣ ಎಂದು ವಿಪ್ರ ಸಮುದಾಯದ ಎಲ್ಲಾ ಮುಖಂಡರು ತಮ್ಮ ವ್ಯಾಪ್ತಿಯಲ್ಲಿ ಸಮುದಾಯದವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು, ಬ್ರಾಹ್ಮಣ ಸಮುದಾಯದಲ್ಲೂ ಬಡವರಿದ್ದಾರೆ ಅವರಿಗೆ ಸರಕಾರದಿಂದ ಸೂಕ್ತ ಮೀಸಲು ಜೊತೆಗೆ ಸೌಲಭ್ಯ ಸಿಗಬೇಕಾದರೆ ಪ್ರತಿಯೊಬ್ಬರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು,

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನಂ ಶ್ರೀಕಂಠಕುಮಾರ್ ಅವರು ಪಿಪಿಟಿ ಮೂಲಕ
ಸಮೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಬರಲಿವೆ ಅದಕ್ಕೆ ಹೇಗೆಲ್ಲ ಉತ್ತರಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು,

ಸಭೆಯಲ್ಲಿ ವಿವಿಧ ಬ್ರಾಹ್ಮಣ ಸಮುದಾಯದ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ವಿಶ್ವನಾಥಯ್ಯ, ಜಿಲ್ಲಾ ಪ್ರತಿನಿಧಿ ಡಾ.ಲಕ್ಷ್ಮಿ ದೇವಿ ಮತ್ತಿತರರು ಉಪಸ್ಥಿತರಿದ್ದರು.

ಜಾತಿ ಜನಗಣತಿಯಲ್ಲಿ ಜವಾಬ್ದಾರಿಯಿಂದ ಭಾಗವಹಿಸಿ-ಎಚ್ ವಿ ರಾಜೀವ್ ಸಲಹೆ Read More

ರಾಜ್ಯದ ಜನತೆ ಯಾರೂ ತಪ್ಪಿಸಿಕೊಳ್ಳದೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ-ಸಿಎಂ ಮನವಿ

ಬೆಂಗಳೂರು: ರಾಜ್ಯದ ಜನತೆ ಒಬ್ಬರೂ ತಪ್ಪಿಸಿಕೊಳ್ಳದೆ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ಮನವಿ ಮಾಡಿದ ಸಿಎಂ,ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಕೂಡ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಆನ್ಲೈನ್ ಹಾಗೂ ವೆಬ್‌ಸೈಟ್ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ,
ಆಶಾ ಕಾರ್ಯಕರ್ತೆಯರು ನಾಳೆಯಿಂದಲೇ ಮನೆ ಮನೆಗೆ ಹೋಗಿ 60 ಪ್ರಶ್ನೆಗಳ ನಮೂನೆಯನ್ನು ತಲುಪಿಸುತ್ತಾರೆ,ನಂತರ ಶಿಕ್ಷಕರು ಮನೆ,ಮನೆಗೆ ಹೋಗುತ್ತಾರೆ ಎಂದು ಹೇಳಿದರು.

ಯಾರೂ ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ,ಜಾತಿ ಹೇಳಿಕೊಳ್ಳಲು ಕಷ್ಟ ಆದವರು ಸಹಾಯವಾಣಿಗೆ ಕರೆ ಮಾಡಿ ತಮ್ಮ ಜಾತಿ ಹೇಳಬಹುದು ಎಂದು ಮುಖ್ಯ ಮಂತ್ರಿ ಗಳು ಸಲಹೆ ನೀಡಿದರು.

ಯಾವುದೇ ನ್ಯೂನ್ಯತೆಗಳು ಇಲ್ಲದಂತೆ, ಹಿಂದಿನ ಸಮೀಕ್ಷೆಗಳಲ್ಲಿ ಎದುರಾದ ಯಾವುದೇ ತಾಂತ್ರಿಕ ಸಮಸ್ಯೆ ಈ ಬಾರಿ ಇಲ್ಲದಂತೆ ಸಿದ್ಧತೆ ಮಾಡಿಕೊಂಡಿದ್ದೇವೆ,
ಮತಾಂತರಗೊಂಡವರು ಅಥವಾ ಜಾತಿ ಗೊಂದಲ ಇದ್ದದ್ದನ್ನು ಆಯೋಗದ ತಜ್ಞರ ತಂಡ ವಿಶ್ಲೇಷಣೆ ಮಾಡಿ ತೀರ್ಮಾನಿಸುತ್ತಾರೆ
ಮಧುಸೂದನ್ ಅವರ ಸಮಿತಿ ಮತ್ತು ಹಿಂದುಳಿದ ವರ್ಗಗಳ ಆಯೋಗ ವೈಜ್ಞಾನಿಕ‌ ಮಾನದಂಡದಲ್ಲಿ ಸಮೀಕ್ಷೆ ನಡೆಸಿ ಡಿಸೆಂಬರ್ ಒಳಗೆ ವರದಿ ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಎಲ್ಲಾ ಜಾತಿ-ಧರ್ಮದವರ ದತ್ತಾಂಶ ಅಂಗೈಯಲ್ಲಿದ್ದರೆ ಮಾತ್ರ ಸಾಮಾಜಿಕ ನ್ಯಾಯದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ,ನಾವು ಬಡತನ, ನಿರುದ್ಯೋಗ, ಅನಕ್ಷರತೆ ಹೋಗಲಾಡಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ,ಹೊಸದಾಗಿ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಗತಿ ಅರಿಯಲು ಈ ಸಮೀಕ್ಷೆ ನಡಸಲಾಗುತ್ತಿದೆ,ಆದಷ್ಟೂ ಜಾಗ್ರತೆಯಿಂದ ಸಮೀಕ್ಷೆ ನಡೆಸಿ ವರದಿ ಕೊಡಲು ಸೂಚನೆ ನೀಡಿದ್ದೇವೆ,ಹಿಂದುಳಿದ ಆಯೋಗದವರು ಡಿಸೆಂಬರ್ ಒಳಗೆ ವರದಿ ಕೊಡುವ ನಿರೀಕ್ಷೆಯಲ್ಲಿದ್ದಾರೆ, ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೊಳಗೆ ಸಮೀಕ್ಷೆ ಮುಗಿಸಲು ತೀರ್ಮಾನಿಸಿದ್ದಾರೆ,
175000 ಸರ್ಕಾರಿ ಶಾಲಾ ಶಿಕ್ಷಕರುಗಳನ್ನು ವಿಶೇಷ ಭತ್ಯೆ ನೀಡಿ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ ಎಂದು ಸಿಎಂ ವಿವರಿಸಿದರು.

ರಾಜ್ಯದ ಜನತೆ ಯಾರೂ ತಪ್ಪಿಸಿಕೊಳ್ಳದೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ-ಸಿಎಂ ಮನವಿ Read More

ಜಾತಿ ಸಮೀಕ್ಷೆಯಲ್ಲಿ ಎಲ್ಲಾ ಬ್ರಾಹ್ಮಣರನ್ನು ಒಂದೆಂದು ಪರಿಗಣಿಸಿ-ಸಚ್ಚಿದಾನಂದಮೂರ್ತಿ

ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದಿಂದ ಕೈಗೊಳ್ಳಲಾಗುತ್ತಿರುವ ಜಾತಿ ಸಮೀಕ್ಷೆಯಲ್ಲಿ ಬ್ರಾಹ್ಮಣರೆಲ್ಲರನ್ನೂ ಒಂದೇ ಜಾತಿಯೆಂದು ಪರಿಗಣಿಸಬೇಕೆಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್‌‌ ಅಧ್ಯಕ್ಷ ಹೆಚ್.ಎಸ್.
ಸಚ್ಚಿದಾನಂದಮೂರ್ತಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬ್ರಾಹ್ಮಣರನ್ನು 45 ಕ್ಕೂ ಹೆಚ್ಚು ಉಪಜಾತಿಗಳನ್ನಾಗಿ ವರ್ಗೀಕರಿಸಿ ದತ್ತಾಂಶ ಸಂಗ್ರಹಣೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.ಆದರೆ ಇದು ಸರಿಯಲ್ಲ ಎಂದು ಹೇಳಿದರು.

ಶ್ರೀಗಾಯತ್ರಿ ಮಂತ್ರದ ಸೂತ್ರದಡಿ ಬರುವ ಎಲ್ಲ ಬ್ರಾಹ್ಮಣರನ್ನು ‘ಬ್ರಾಹ್ಮಣ’ ಎಂದು ಮಾತ್ರ ವರ್ಗೀಕರಿಸಬೇಕು. ಅದರಲ್ಲಿ ಮುಸ್ಲಿಮ್ ಬ್ರಾಹ್ಮಣ, ಕ್ರಿಶ್ಚಿಯನ್ ಬ್ರಾಹ್ಮಣ ಮುಂತಾದವರನ್ನು ಸೇರಿಸಬಾರದು ಎಂದು ಆಗ್ರಹಿಸಿದರು.

ಸಮೀಕ್ಷೆಯಲ್ಲಿ ಬ್ರಾಹ್ಮಣರಲ್ಲಿಯ ಉಪಜಾತಿಗಳನ್ನು ಬೇರೆ ಬೇರೆಯೆಂದು ಪರಿಗಣಿಸಿ, ಅವುಗಳನ್ನು ವಿಭಾಗಿಸದೆ, ಪ್ರತಿಯೊಂದು ಉಪಜಾತಿಗೆ ಪ್ರತ್ಯೇಕ ಗಣಕಚಿಹ್ನೆ ನೀಡದೆ, ಸಮಗ್ರ ಬ್ರಾಹ್ಮಣ ಜಾತಿಯನ್ನು ಒಂದೇ ಎಂದು ಪರಿಗಣಿಸಿ, ಎಲ್ಲಾ ಉಪಜಾತಿಗಳಿಗೆ ಒಂದೇ ಗಣ ಗಣಕಚಿಹ್ನೆ ನೀಡಬೇಕೆಂದು ಅವರು ಕೋರಿದರು.

ಬ್ರಾಹ್ಮಣ ಜಾತಿಯ ಸಮಗ್ರತೆಯ ಕುರಿತು ಆಯೋಗದ ಅಂದಿನ ಅಧ್ಯಕ್ಷರಾದ ಜಯಪ್ರಕಾಶ ಹೆಗಡೆಯವರನ್ನು ಹಲವು ಬಾರಿ ಭೇಟಿಮಾಡಿ ಮನವಿ ನೀಡಿ ಚರ್ಚಿಸಲಾಗಿತ್ತು. ಆದರೂ, ಸರ್ಕಾರದ ಈ ಬಾರಿಯ ಉದ್ದೇಶಿತ ಸಮೀಕ್ಷೆಯಲ್ಲಿ ನಮ್ಮ ಮನವಿಯನ್ನು ಪರಿಗಣಿಸದೆ, ಒಂದು ಜಾತಿಯ ಪ್ರತಿಯೊಂದು ಉಪಜಾತಿಗೆ ಪ್ರತ್ಯೇಕವಾದ ಗಣಕ ಚಿಹ್ನೆ ನೀಡುತ್ತಿರುವುದು ಸರಿಯಲ್ಲ,ಕೂಡಲೇ‌ ಇದನ್ನು ಕೈಬಿಡಬೇಕು. ಮತ್ತು ಎಲ್ಲಾ ಉಪಜಾತಿಗಳನ್ನು ಒಳಗೊಂಡ ಸಮಗ್ರ ಬ್ರಾಹ್ಮಣ ಜಾತಿಗೆ, ಒಂದೇ ಗಣಕ ಚಿಹ್ನೆ ನೀಡಬೇಕೆಂದು ಮನವಿ ಮಾಡಿದರು.

ರಾಜ್ಯದ ಒಟ್ಟೂ ಜನಸಂಖ್ಯೆಯಲ್ಲಿ ಬ್ರಾಹ್ಮಣರ ಜನಸಂಖ್ಯೆಯ ಪಾಲು ಎಷ್ಟು ಎನ್ನುವುದು ಹೆಚ್ಚು ಸ್ಪಷ್ಟವಾಗುತ್ತದೆ. ಇದರಿಂದ ಕಳೆದ 75 ವರ್ಷಗಳಿಂದ ಸರ್ಕಾರದ ಮೀಸಲಾತಿಯಿಂದ ವಂಚಿತರಾದ ಮತ್ತು ಸಂವಿಧಾನದತ್ತ ಧನಾತ್ಮಕ ತಾರತಮ್ಯದಿಂದ ಸಂಕಷ್ಟಕ್ಕೆ ಒಳಗಾಗಿರುವ ಬ್ರಾಹ್ಮಣ ಜಾತಿಯ ಬಡವರಿಗೆ ಕಾನೂನು ಬದ್ಧವಾಗಿ ದಕ್ಕಬೇಕಾದ ಸೌಲಭ್ಯಗಳನ್ನು ನೀಡಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದರು.

ಉಲ್ಲೇಖದಲ್ಲಿ ಓದಲಾದ ಮಾನ್ಯಸರ್ಕಾರದ ಆದೇಶದಲ್ಲಿ, ಜಾತಿ ಮತ್ತು ಉಪಜಾತಿಗಳ ಹೆಸರುಗಳನ್ನು ತಪ್ಪಾಗಿ ಪ್ರಕಟಿಸಲಾಗಿದೆ. ಬ್ರಾಹ್ಮಣ ಎಂಬುದನ್ನು ಬ್ರಾಹ್ಮಣ್ ಎಂಬ ಅಕ್ಷರ ದೋಷಗಳನ್ನು ಸರಿಪಡಿಸಬೇಕೆಂದು
ಹೆಚ್.ಎಸ್.ಸಚ್ಚಿದಾನಂದಮೂರ್ತಿ ವಿನಂತಿಸಿದರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ವತಿಯಿಂದ ನಡೆದ ಪತ್ರಿಕಾಗೋಷ್ಠಿ

ಪತ್ರಿಕಾಗೋಷ್ಠಿಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಮೈಸೂರು ಜಿಲ್ಲಾಧ್ಯಕ್ಷ ಕಡಕೋಳ ಜಗದೀಶ್,ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್,ಮಹಿಳಾ ವಿಪ್ರ ಮುಖಂಡರಾದ ವತ್ಸಲ ನಾಗರಾಜ್ ಉಪಸ್ಥಿತರಿದ್ದರು.

ಜಾತಿ ಸಮೀಕ್ಷೆಯಲ್ಲಿ ಎಲ್ಲಾ ಬ್ರಾಹ್ಮಣರನ್ನು ಒಂದೆಂದು ಪರಿಗಣಿಸಿ-ಸಚ್ಚಿದಾನಂದಮೂರ್ತಿ Read More

ಕಾಂಗ್ರೆಸ್ ಸರ್ಕಾರದಿಂದ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ -ವಿಜಯೇಂದ್ರ

ಬೆಂಗಳೂರು: ರಾಜ್ಯ ಸರ್ಕಾರಗಳಿಗೆ ಜಾತಿ ಜನಗಣತಿ ಮಾಡುವ ಅಧಿಕಾರ ಇಲ್ಲ,ಅದು ಗೊತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಮುಂದಾಗಿದೆ ಎಂದು ವಿಜಯೇಂದ್ರ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಜನಗಣತಿ ಜತೆಗೆ ಜಾತಿ ಜನಗಣತಿಯೂ ಮಾಡುವ ನಿರ್ಧಾರ ಬಹಳ ಉತ್ತಮ ನಿರ್ಧಾರ ಎಂದು ಹೇಳಿದರು.

1931 ರ ನಂತರ ದೇಶದಲ್ಲಿ ಜಾತಿ ಜನಗಣತಿ ನಡೆದಿರಲಿಲ್ಲ. ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಬೇಕು ಎಂಬುದು ಮೋದಿಯವರ ಉದ್ದೇಶ. ಎಲ್ಲರೂ ಈ ನಿರ್ಧಾರ ಸ್ವಾಗತ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು.

ಕೇಂದ್ರದ ನಿರ್ಧಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಅಚ್ಚರಿ ತಂದಿದೆ ಎಂದರು.

ಖರ್ಗೆಯವರೇ ಹೇಳಿದ್ದಾರೆ ಇದು ಔಟ್‌ಡೇಟೆಡ್ ವರದಿ ಅಂತಾ. ಈಗಲಾದರೂ ರಾಜ್ಯದ ಜಾತಿ ಜನಗಣತಿಗೆ ಅಂತ್ಯ ಹಾಡಲಿ ಎಂದು ವಿಜಯೇಂದ್ರ ಒತ್ತಾಯಿಸಿದರು.

ಸಿದ್ದರಾಮಯ್ಯ‌ ಅವರಿಗೆ ಭಗವಂತ ಬುದ್ಧಿ ಕೊಡಲಿ, ಕೇಂದ್ರದ ಪರ ಸಿದ್ದರಾಮಯ್ಯ ನಿಲ್ಲಲಿ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದಿಂದ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ -ವಿಜಯೇಂದ್ರ Read More

ಜಾತಿ ಗಣತಿಗೆ ಕರ್ನಾಟಕದ ಮಾದರಿ ಅಳವಡಿಸಿ;ಸಿಎಂ ಹೇಳಿಕೆಗೆ ಅಶೋಕ್ ಕಿಡಿ

ಬೆಂಗಳೂರು,ಮೇ.1: ಜಾತಿ ಗಣತಿಗೆ ಕರ್ನಾಟಕದ ಮಾದರಿ ಅಳವಡಿಸಿ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿ ಹಾಸ್ಯಾಸ್ಪದ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಶೋಕ್,ಮೂಲ ಪ್ರತಿ ಕಳೆದು ಹೋಗಿರುವ, ಕಾರ್ಯದರ್ಶಿಗಳ ಸಹಿಯೇ ಇಲ್ಲದ, ಪುಟಕ್ಕೆ 5-10 ರೂಪಾಯಿ ನೀಡಿ ಶಾಲಾ ಮಕ್ಕಳ ಕೈಯಲ್ಲಿ ಅರ್ಜಿ ಭರ್ತಿ ಮಾಡಿಸಿರುವ, ನಾಯಿಗಳಿರುವ ಮನೆಯಲ್ಲಿ ಜಾತಿ ಗಣತಿ ಮಾಡಲು ಹೋಗದ ನಿಮ್ಮ ಜಾತಿ ಗಣತಿ ವರದಿಯು ಜಾತಿ ಜನಗಣತಿಯನ್ನು ಹೇಗೆ ಮಾಡಬಾರದು ಎನ್ನುವುದಕ್ಕೆ ಮಾದರಿಯಾಗಿದೆ ವ್ಯಂಗ್ಯ ವಾಡಿದ್ದಾರೆ.

ಜಾತಿ ಜನಗಣತಿಯನ್ನ ಬಿಜೆಪಿ ವಿರೋಧಿಸುತ್ತಲೇ ಬಂದಿದೆ ಎಂದು ತಾವು ಹೇಳಿರುವುದು ಸುಳ್ಳು. 2010ರಲ್ಲಿ ಅಂದಿನ ಲೋಕಸಭೆಯ ವಿಪಕ್ಷ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರು 2011ರ ಜನಗಣತಿಯಲ್ಲಿ ಜಾತಿ ಜನಗಣತಿಯನ್ನು ಸೇರಿಸಲು ಬಿಜೆಪಿ ಬೆಂಬಲಿಸುತ್ತದೆ ಎಂದು ಲಿಖಿತ ರೂಪದಲ್ಲಿ ಯುಪಿಎ ಸರ್ಕಾರಕ್ಕೆ ತಿಳಿಸಿದ್ದರು. ಸಂಸತ್ತಿನಲ್ಲಿ ಅಂಗೀಕರಿಸಲಾದ ಸರ್ವಾನುಮತದ ನಿರ್ಣಯವನ್ನೂ ಬಿಜೆಪಿ ಬೆಂಬಲಿಸಿತ್ತು ಎಂದು ಸಿಎಂ ಗೆ ಅಶೋಕ ಟಾಂಗ್ ನೀಡಿದ್ದಾರೆ.

ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ ಜಾತಿ ಜನಗಣತಿಯ ಬದಲು ಕಾಟಾಚಾರಕ್ಕೆ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ ಸಮೀಕ್ಷೆ ನಡೆಸಿತು. ಕರ್ನಾಟಕದ ಜಾತಿ ಗಣತಿಯಂತೆ ಕಳಪೆ ಯೋಜನೆ ಮತ್ತು ಅಸಮರ್ಥ ಅನುಷ್ಠಾನದಿಂದಾಗಿ ಅದು ಸಂಪೂರ್ಣವಾಗಿ ವಿಫಲವಾಯಿತು. ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ ನಂತರವೂ ಅದರ ಫಲಿತಾಂಶಗಳನ್ನು ಬಿಡುಗಡೆ ಮಾಡಲೇ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಜಾತಿ ಗಣತಿ ಬಗ್ಗೆ ಇರುವ ನಿಜವಾದ ಬದ್ಧತೆ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿಗೆ ಜಾತಿ ಗಣತಿಯನ್ನ ಎಂದಿಗೂ ಚುನಾವಣಾ ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳಲಿಲ್ಲ. ಅಧಿಕಾರವಿದ್ದಾಗ ಜಾತಿ ಜನಗಣತಿ ಮಾಡುವ ನಿರ್ಧಾರ ಕೈಗೊಂಡು ಬದ್ಧತೆ ಪ್ರದರ್ಶನ ಮಾಡಿದ್ದೇವೆಯೇ ಹೊರತು ವಿಪಕ್ಷದಲ್ಲಿದಾಗ ಮೊಸಳೆ ಕಣ್ಣೀರು ಸುರಿಸಿ, ಅಧಿಕಾರ ಇದ್ದಾಗ ನಿರ್ಲಕ್ಷ್ಯ ಮಾಡುವ ಕೀಳು ರಾಜಕೀಯ ಮಾಡಿಲ್ಲ. ಇದು ಸಾಮಾಜಿಕ ನ್ಯಾಯದ ಬಗ್ಗೆ ನಮಗಿರುವ ನೈಜವಾದ ಬದ್ಧತೆ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಈಗ ನಡೆಸಲಿರುವ ಜಾತಿ ಗಣತಿ ಅತ್ಯಂತ ಪಾರದರ್ಶಕವಾಗಿ, ವೈಜ್ಞಾನಿಕವಾಗಿ, ಸದುದ್ದೇಶದಿಂದ ನಡೆಯಲಿದೆಯೇ ಹೊರತು ನಿಮ್ಮ ಕಾಂಗ್ರೆಸ್ ಸರ್ಕಾರ ಮಾಡಿದಂತೆ ರಾಜಕೀಯ ಅನುಕೂಲಕ್ಕಾಗಿ ಮೂಗಿನ ನೇರಕ್ಕೆ ದತ್ತಾಂಶವನ್ನು ತಿರುಚುವ ದುರುದ್ದೇಶದಿಂದ ಮಾಡುವುದಿಲ್ಲ ಎಂದು ಅಶೋಕ್ ತಿಳಿಸಿದ್ದಾರೆ.

ಜಾತಿ ಗಣತಿಗೆ ಕರ್ನಾಟಕದ ಮಾದರಿ ಅಳವಡಿಸಿ;ಸಿಎಂ ಹೇಳಿಕೆಗೆ ಅಶೋಕ್ ಕಿಡಿ Read More

ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚಿಸದೆ ಸಿಎಂ ಜಾತಿ ಗಣತಿ ವರದಿ ಬಿಡುಗಡೆ ಮಾಡುತ್ತಿದ್ದಾರೆ:ಅಶೋಕ್

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಬರೆದ ಪತ್ರದ ಪ್ರಕಾರ, ಜಾತಿ ಗಣತಿ ವರದಿಯ ಮೂಲ ಪ್ರತಿ ಲಭ್ಯವಾಗಿಲ್ಲ, ಈಗ ಇರುವುದು ನಕಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚಿಸದೆ ಜಾತಿ ಗಣತಿ ವರದಿ ಬಿಡುಗಡೆ ಮಾಡುತ್ತಿದ್ದಾರೆ, ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಸಾಯುತ್ತಿದ್ದಾರೆ, ಒಂದು ರಸ್ತೆ ಕೂಡ ನಿರ್ಮಾಣವಾಗಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್‌ ಸಚಿವರೇ ಇದನ್ನು ವೈಜ್ಞಾನಿಕ ಹಾಗೂ ಅಸಲಿ ಎಂದು ಹೇಳುತ್ತಿದ್ದಾರೆ. ಜಯಪ್ರಕಾಶ್‌ ಹೆಗ್ಡೆ ವರದಿ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 26-08-2021 ರಂದು ಸೀಲ್‌ ಮಾಡಿದ ಬಾಕ್ಸ್‌ ತೆರೆದಾಗ ವರದಿಯಲ್ಲಿ ಆಯೋಗದ ಹಿಂದಿನ ಅಧ್ಯಕ್ಷರ ಸಹಿ ಇಲ್ಲ ಎಂಬುದನ್ನು ಗಮನಿಸಲಾಗಿದೆ. ಹಸ್ತಪ್ರತಿ ಅಥವಾ ಮೂಲ ವರದಿ ಲಭ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಿಂದಿನ ಅಧ್ಯಕ್ಷ ಕಾಂತರಾಜು ಸಹಿ ಹಾಕದೆ ಓಡಿಹೋಗಿದ್ದಾರೆ. ಮೂಲ ವರದಿ ಸಿಎಂ ಸಿದ್ದರಾಮಯ್ಯನವರ ಮನೆಯಲ್ಲಿದೆ. ಬೇಕಾದ ಜಾತಿಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಸಚಿವ ಸಂಪುಟದಲ್ಲಿ ಗಲಾಟೆಯಾಗಿದೆ. ಯಾರ ಮನೆಗೂ ಹೋಗದೆ ಸಮೀಕ್ಷೆ ಮಾಡಲಾಗಿದೆ. ಎಲ್ಲರೂ ಸಿದ್ದರಾಮಯ್ಯನವರ ಮನೆ, ಕಚೇರಿಯಲ್ಲಿ ಕುಳಿತು ವರದಿ ತಯಾರಿಸಿದ್ದಾರೆ.150 ಕೋಟಿ ರೂ. ಎಲ್ಲಿ ಹೋಗಿದೆ ಎಂದು ಸರ್ಕಾರ ತಿಳಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಗಾಂಧಿ ಕುಟುಂಬದವರು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು 2008 ರಲ್ಲಿ ಮುಚ್ಚಿಹಾಕಿದ್ದರು. ಆ ಸಂಸ್ಥೆಗೆ ವಿವಿಧೆಡೆ ಎರಡೂವರೆ ಸಾವಿರ ಕೋಟಿ ರೂ. ಆಸ್ತಿ ಇತ್ತು. ಆ ಸಂಸ್ಥೆಯನ್ನೇ ಯಂಗ್‌ ಇಂಡಿಯಾ ಸಂಸ್ಥೆಯಾಗಿ ಬದಲಿಸಿ ಚಾರಿಟೇಬಲ್‌ ಉದ್ದೇಶ ಎಂದು ತೋರಿಸಲಾಯಿತು. ಆದರೆ ಯಾವುದೇ ಸಾಮಾಜಿಕ ಕಾರ್ಯ ಮಾಡಲಿಲ್ಲ. ಗಾಂಧಿ ಕುಟುಂಬದಲ್ಲೇ ಎರಡು ಷೇರಿನಂತೆ ಒಟ್ಟು ಶೇ.38 ರಷ್ಟು ಷೇರು ಪಡೆಯಲಾಯಿತು. ಕೇವಲ 50 ಲಕ್ಷ ರೂ. ಹೂಡಿಕೆ ಮಾಡಿ ಎರಡೂವರೆ ಸಾವಿರ ಕೋಟಿ ರೂ. ಆಸ್ತಿಯನ್ನು ಗಾಂಧಿ ಕುಟುಂಬ ಪಡೆದಿದೆ. ಒಟ್ಟು 5,000 ಜನರು ಷೇರುದಾರರು ಇದ್ದರೂ, ಅವರು ಯಾರು ಎಂದು ಪತ್ತೆಯಾಗಿಲ್ಲ ಎಂದು ಆರೋಪಿಸಿದರು ‌

ಇದು ಸ್ವಾತಂತ್ರ್ಯ ಹೋರಾಟಗಾರರು ಆರಂಭಿಸಿದ ಪತ್ರಿಕೆಯೇ ಹೊರತು ಕಾಂಗ್ರೆಸ್‌ ಪಕ್ಷದ ಪತ್ರಿಕೆಯಲ್ಲ. ಜನದ ಧ್ವನಿಯಾಗಬೇಕಾದ ಪತ್ರಿಕೆ ಒಂದು ಕುಟುಂಬದ ಸ್ವತ್ತಾಗಿದೆ. ಕೋರ್ಟ್‌ ಕೂಡ ಈ ಪ್ರಕರಣವನ್ನು ವಜಾ ಮಾಡಿಲ್ಲ. ಇದು ಸರ್ಕಾರದ ಆಸ್ತಿಯೇ ಹೊರತು ಕಾಂಗ್ರೆಸ್‌ ನಾಯಕರ ಆಸ್ತಿಯಲ್ಲ. ಕಾಂಗ್ರೆಸ್‌ ಇದರ ವಿರುದ್ಧ ಹೋರಾಟ ಮಾಡುವುದು ಬೂಟಾಟಿಕೆ ಎಂದು ವ್ಯಂಗ್ಯವಾಡಿದರು.

ಪಿಎಸ್‌ಐ ಪರಶುರಾಮ್‌ ಅವರ ಪತ್ನಿ ಈಗ ಸಂಕಷ್ಟಲ್ಲಿದ್ದಾರೆ. ಸರ್ಕಾರಿ ಕೆಲಸ ಕೊಡುತ್ತೇವೆಂದು ಹೇಳಿ ಸರ್ಕಾರ ಇನ್ನೂ ಕೊಟ್ಟಿಲ್ಲ, ಈಗ ಆ ಪ್ರಕರಣಕ್ಕೆ ಬಿ ರಿಪೋರ್ಟ್‌ ನೀಡಲಾಗಿದೆ. ವರ್ಗಾವಣೆಯ ಕಿರುಕುಳದಿಂದಲೇ ಅವರು ಸತ್ತಿದ್ದರು. ಆದರೆ ಸರ್ಕಾರ ಈ ಸಾವಿಗೆ ನ್ಯಾಯ ನೀಡಿಲ್ಲ ಎಂದು ಅಶೋಕ್ ಕಿಡಿಕಾರಿದರು.

ಸಿಇಟಿ ಪರೀಕ್ಷೆಯಲ್ಲಿ ಒಬ್ಬ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಬಿಸಾಡಲಾಗಿದೆ. ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದ ನಂಬಿಕೆಯನ್ನೇ ಸರ್ಕಾರ ಕಿತ್ತುಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚಿಸದೆ ಸಿಎಂ ಜಾತಿ ಗಣತಿ ವರದಿ ಬಿಡುಗಡೆ ಮಾಡುತ್ತಿದ್ದಾರೆ:ಅಶೋಕ್ Read More

ಜಾತಿ ಜನಗಣತಿ ವರದಿ:ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ:ಅಶೋಕ್

ಬೆಂಗಳೂರು: ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಜಾತಿ ಜನಗಣತಿ ವರದಿ ಎಂಬ ಮಂಕು ಬೂದಿ ಎರಚಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಾರೆ ಎಂದು ಪ್ರತಿಪಕ್ಷ ನಾಯಕ ಅಶೋಕ್ ಟೀಕಿಸಿದ್ದಾರೆ.

ಇತೀಚೆಗೆ ನಡೆದ ಎಐಸಿಸಿ ಅಧಿವೇಶನದ ಸಂದರ್ಭದಲ್ಲಿ, ದೆಹಲಿ ಪ್ರವಾಸದ ವೇಳೆ ಸಿಎಂ ಸಿದ್ದರಾಮಯ್ಯನವರಿಗೆ ಭಾರಿ ಹಿನ್ನೆಡೆ ಆಗಿದೆ. ಹನಿಟ್ರಾಪ್ ಸೇರಿದಂತೆ ಸರ್ಕಾರದ ಸಾಲು ಸಾಲು ವೈಫಲ್ಯಗಳ ಬಗ್ಗೆ, ಎಡವಟ್ಟುಗಳ ವಿಚಾರವಾಗಿ ಹೈಕಮಾಂಡ್ ಸಿದ್ದರಾಮಯ್ಯನವರ ಬಣದ ಕಿವಿ ಹಿಂಡಿದೆ ಎಂದು ಟ್ವೀಟ್ ಮಾಡಿ‌ ವ್ಯಂಗ್ಯವಾಡಿದ್ದಾರೆ.

ನಾನು ಈಗಾಗಲೇ ಹಲವಾರು ಬಾರಿ ಹೇಳಿರುವಂತೆ ನಮ್ಮ ಸಮಾಜದಲ್ಲಿರುವ ತಳಸಮುದಾಯಗಳ ಅಭ್ಯುದಯಕ್ಕೆ ಯಾವುದೇ ಸಕಾರಾತ್ಮಕ ಹೆಜ್ಜೆ ಇಟ್ಟರೂ ಅದಕ್ಕೆ ನಮ್ಮ ಪಕ್ಷದ ಬೆಂಬಲವಿದೆ. ಆದರೆ ರಾಜಕೀಯ ಹಾವು ಏಣಿ ಆಟದಲ್ಲಿ ಕೆಳಗೆ ಬಿದ್ದಾಗಲೆಲ್ಲ, ಅಧಿಕಾರದ ಚದುರಂಗದಾಟದಲ್ಲಿ ಮುಗ್ಗರಿಸಿದಾಗಲೆಲ್ಲ ಮೇಲೇಳುವುದಕ್ಕೆ ತಳಸಮುದಾಯಗಳನ್ನ ದಾಳವಾಗಿ ಬಳಸುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.

ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ, ಅವಾಸ್ತವಿಕ ಹಾಗು ಅಪ್ರಸ್ತುತ ಎನ್ನುವುದು ಬಹುತೇಕರ ಅಭಿಪ್ರಾಯ. ಇದಕ್ಕೆ ಅನೇಕ ಕಾರಣಗಳೂ ಇವೆ. ಈ ಹಿನ್ನಲೆಯಲ್ಲಿ ರಾಜ್ಯದ ಜನತೆಯ ಪರವಾಗಿ ಸಿಎಂ ಸಿದ್ದರಾಮಯ್ಯನವರ ಮುಂದೆ ಕೆಲವು ಗಂಭೀರವಾದ ಪ್ರಶ್ನೆಗಳನ್ನು ಇಡುತ್ತಿದ್ದೇನೆ ಎಂದು ತಿಳಿಸಿದ್ದಾರೆ‌

ಜಾತಿ ಜನಗಣತಿ ವರದಿಗೆ ಆಯೋಗದ ಕಾರ್ಯದರ್ಶಿ ಸಹಿ ಮಾಡಿಲ್ಲ ಎನ್ನುವ ಅನುಮಾನವಿದೆ. ಇದು ನಿಜವೇ ಒಂದು ವೇಳೆ ಸಹಿ ಮಾಡಿಲ್ಲವಾದರೆ ಯಾಕೆ ಮಾಡಿಲ್ಲ

ಸೀಲ್ಡ್ ಬಾಕ್ಸ್ನಲ್ಲಿದ್ದ ಮೂಲ ಪ್ರತಿ ಅಥವಾ ಹಸ್ತಪ್ರತಿ ಲಭ್ಯವಿಲ್ಲವೆಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರು ಹೇಳಿದ್ದರು. ಇದರ ಸತ್ಯಾಸತ್ಯತೆ ಏನು?

ತಮಗೆ ನಿಜವಾಗಿಯೂ ಜಾತಿಗಣತಿಯ ಬಗ್ಗೆ ಬದ್ಧತೆ ಇದ್ದಿದ್ದರೆ, 2018ರಲ್ಲೇ ಕಾಂತರಾಜು ವರದಿಯನ್ನ ಏಕೆ ಸ್ವೀಕರಿಸಿ ಜಾರಿ ಮಾಡಲಿಲ್ಲ

ಹತ್ತು ವರ್ಷಗಳ ಹಿಂದೆ ಕೈಗೊಂಡ ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ, ಅನೇಕ ಜನರ ಮನೆಗಳಿಗೆ ಭೇಟಿಯೇ ನೀಡಿಲ್ಲ ಎಂಬ ದೂರುಗಳಿವೆ. ಹೀಗಿರುವಾಗ ಈ ವರದಿಯನ್ನ ಈಗ ಮುನ್ನೆಲೆಗೆ ತರುವ ತರಾತುರಿ ಏಕೆ.

ಈ ಅವೈಜ್ಞಾನಿಕ ಜಾತಿ ಜನಗಣತಿ ವರದಿ ಸ್ವೀಕರಿಸದಂತೆ ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ. ಇದನ್ನ ಬೆಂಬಲಿಸಿ ಸ್ವತಃ ಉಪಮುಖ್ಯಮಂತ್ರಿಗಳು ಹಾಗು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ‌ ಶಿಬಕುಮಾರ್ ಅವರೇ ಸಹಿ ಮಾಡಿದ್ದಾರೆ. ತಮ್ಮದೇ ಪಕ್ಷದ ಹಿರಿಯ ನಾಯಕರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರೂ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅನೇಕ ಮಠಾಧೀಶರು, ಧಾರ್ಮಿಕ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಕಳೆದ 22 ತಿಂಗಳಿನಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸರ್ವಸಮ್ಮತವಾದ ನಿಲುವಿಗೆ ಬರುವ ಬದಲು ಈಗ ದಿಢೀರನೆ ಏಕಾಏಕಿ ವರದಿಯನ್ನ ಸಂಪುಟ ಸಭೆಯಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತಿರುವುದು ಯಾವ ಕಾರಣಕ್ಕೆ‌ ಈ ಪ್ರಶ್ನೆಗಳಿಗೆ‌ ಉತ್ತರ ಕೊಡಿ ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಜಾತಿ ಜನಗಣತಿ ವರದಿ:ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ:ಅಶೋಕ್ Read More