ಜನರ ತೀರ್ಪಿಗೆ ತಲೆ ಬಾಗುವೆ; ಕಾರ್ಯಕರ್ತರ ಜತೆ ನಿಲ್ಲುವೆ- ನಿಖಿಲ್

ಬಿಡದಿ: ಚನ್ನಪಟ್ಟಣದ ಜನತೆ ನೀಡಿದ ತೀರ್ಪಿಗೆ ನಾನು ತಲೆಬಾಗಿದ್ದೇನೆ, ಅವರ ಅದೇಶವನ್ನು ಒಪ್ಪಿಕೊಳ್ಳುತ್ತೇನೆ, ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟು ಪಲಾಯನ ಮಾಡುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಚನ್ನಪಟ್ಟಣ ಚುನಾವಣೆ ಫಲಿತಾಂಶದ ಬಳಿಕ
ಬಿಡದಿಯ ತೋಟದ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್,ಸೋತೆನೆಂದು ಎದೆಗುಂದುವ ಪ್ರಶೆ ಇಲ್ಲ,ಹಾಗೆಂದು ಸುಮ್ಮನೇ ಕೂರುವುದಿಲ್ಲ, ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಜನರ ಆದೇಶವೇ ಅಂತಿಮ. ಅವರ ತೀರ್ಪಿಗೆ ತಲೆಬಾಗುತ್ತೇನೆ. ಇದು ನನಗೆ ಮೂರನೇ ಸೋಲು. ಈ ಸೋಲನ್ನು ವಿನಮ್ರವಾಗಿ ಸ್ವೀಕಾರ ಮಾಡುತ್ತೇನೆ. ಕ್ಷೇತ್ರದ ಜನತೆ ಜತೆ ನಿರಂತರವಾಗಿ ಇರುತ್ತೇನೆ, ಅವರ ಸೇವೆ ಮಾಡುತ್ತೇನೆ. ನನ್ನ ಪರವಾಗಿ ಚುನಾವಣೆಯಲ್ಲಿ ಹಗಲು ರಾತ್ರಿ ಅವಿರತವಾಗಿ ಕೆಲಸ ಮಾಡಿದ ಜೆಡಿಎಸ್ ಬಿಜೆಪಿಯ ಎಲ್ಲಾ ಕಾರ್ಯಕರ್ತರು, ಮುಖಂಡರು ಸೇರಿದಂತೆ ಎಲ್ಲರಿಗೂ ಶಿರಬಾಗಿ ನಮಿಸುತ್ತೇನೆ ಎಂದು ತಿಳಿಸಿದರು.

ಇದು ನಾನು ಬಯಸದೇ ಬಂದ ಉಪ ಚುನಾವಣೆ. ಕಡೆ ಗಳಿಗೆಯಲ್ಲಿ ತೆಗೆದುಕೊಂಡ ನಿರ್ಧಾರ. ಪಕ್ಷ ಕಷ್ಟಕಾಲದಲ್ಲಿ ಇದ್ದಾಗ ತಲೆಬಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೇನೆ. 87,031 ಜನರು ನನ್ನ ಪರವಾಗಿ ಮತ ಹಾಕಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿ ಮಾಡಲಾರೆ. ಚುನಾವಣೆ ಸಂದರ್ಭದಲ್ಲಿ ಜನತೆಗೆ ನಾನು ಕೆಲ ಮಾತು ಕೊಟ್ಟಿದ್ದೇನೆ. ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಹೇಳಿದರು.

ಒಂದು ನಿರ್ದಿಷ್ಟ ಸಮುದಾಯದ ಮತಗಳು ಕಾಂಗ್ರೆಸ್ ಪರವಾಗಿ ಕ್ರೋಢೀಕರಣ ಆಗಿವೆ. ಆ ಸಮುದಾಯದ ಪರವಾಗಿಯೂ ನಮ್ಮ ಪಕ್ಷ ಹೋರಾಟ ನಡೆಸಿತ್ತು.ದೇವೇಗೌಡರು ಮೀಸಲಾತಿ ನೀಡಿದ್ದರು. ಅವರಿಗೆ ದೇವೇಗೌಡರು, ಕುಮಾರಸ್ವಾಮಿ ಅವರು ಸಾಕಷ್ಟು ಒಳ್ಳೆಯದು ಮಾಡಿದ್ದಾರೆ. ಆದರೂ ಆ ಸಮುದಾಯ ನಮ್ಮ ಪರ ಮತ ಹಾಕಿಲ್ಲ, ಈ ಬಗ್ಗೆ ಹೆಚ್ಚು ಚರ್ಚೆ ಮಾಡಲು ನಾನು ಬಯಸುವುದಿಲ್ಲ ಎಂದು ನಿಖಿಲ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜನರ ತೀರ್ಪಿಗೆ ತಲೆ ಬಾಗುವೆ; ಕಾರ್ಯಕರ್ತರ ಜತೆ ನಿಲ್ಲುವೆ- ನಿಖಿಲ್ Read More

ಮಹಾರಾಷ್ಟ್ರದ ಜನರನ್ನು ಬಿಜೆಪಿ ಸುಳ್ಳುಗಳ ಮೂಲಕ ವಂಚಿಸುತ್ತಿದೆ: ಸಿ.ಎಂ

ಸಂಡೂರು: ಮಹಾರಾಷ್ಟ್ರದ ಜನರನ್ನು ಬಿಜೆಪಿ ಸರಣಿ ಸುಳ್ಳುಗಳ ಮೂಲಕ ವಂಚಿಸುತ್ತಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಂಡೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿಎಂ,ಮಹಾರಾಷ್ಟ್ರದ ಬಿಜೆಪಿಯು ಕರ್ನಾಟಕ ಸರ್ಕಾರ ವಾದಾ ಕಿಯಾ: ಧೋಖಾ ದಿಯಾ ಎಂದು ಸುಳ್ಳು ಜಾಹಿರಾತು ನೀಡಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಭರವಸೆ ಈಡೇರಿಸದೇ, ಯೋಜನೆಯನ್ನೇ ಇನ್ನೂ ಆರಂಭಿಸದೆ ವಂಚಿಸಿದೆ ಎಂಬ ಅರ್ಥದ ಪರಮ ಸುಳ್ಳಿನ ಜಾಹಿರಾತುಗಳನ್ನು ಪುಟಗಟ್ಟಲೆ ನೀಡಿದೆ ಎಂದು ಕಿಡಿಕಾರಿದರು.

ಸುಳ್ಳಿನ ಜಾಹಿರಾತನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ ಅವರು ಅವರದೇ ಶೈಲಿಯಲ್ಲಿ ವಾದಾ ದಿಯಾ ಪೂರಾ ಕಿಯಾ ಎಂದು ತಿರುಗೇಟು ನೀಡಿದರು.

ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಗೃಹಲಕ್ಷ್ಮಿಯ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆ ಕೂಡ ಆಗುತ್ತದೆ. ಆದರೆ ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾ, ಸುಳ್ಳುಗಳನ್ನು ಹರಡುವುದಕ್ಕೇ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಕೊಡ್ತೀವಿ ಅಂತ ಹೇಳಿದ್ರಲ್ಲಾ ಮೋದಿಯವರೇ ಕೊಟ್ರಾ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲಾ ಉದ್ಯೋಗ ಸೃಷ್ಟಿ ಮಾಡಿದ್ರಾ ಎಲ್ರೀ ಸ್ವಾಮಿ ನಿಮ್ಮ ಅಚ್ಚೆ ದಿನ್, ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮಾಡಿದ್ರಾ ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ. ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಚೆ ದಿನ್ ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದರು.

ಮಹಾರಾಷ್ಟ್ರದ ಜನರನ್ನು ಬಿಜೆಪಿ ಸುಳ್ಳುಗಳ ಮೂಲಕ ವಂಚಿಸುತ್ತಿದೆ: ಸಿ.ಎಂ Read More