ಕೊಳ್ಳೇಗಾಲ ನಗರಸಭೆ ಉಳಿತಾಯ ಬಜೆಟ್ ಮಂಡಿಸಿದ ರೇಖಾ ರಮೇಶ್

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆಯ 2025-26 ನೇ ಸಾಲಿನ 1,32,41,667 ರೂ.ಗಳ ಉಳಿತಾಯ ಬಜೆಟ್ ಆನ್ನು ನಗರಸಭಾಧ್ಯಕ್ಷೆ ರೇಖಾ ರಮೇಶ್ ಮಂಡಿಸಿದರು.

ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ನಡೆದ 2025-26 ನೇ ಸಾಲಿನ ಆಯ-ವ್ಯಯ ಮಂಡನಾ ಸಭೆಯಲ್ಲಿ ಬಜೆಟ್ ಪ್ರತಿ ಓದಿದ ರೇಖಾ ರಮೇಶ್ ಅವರು, ಪ್ರಾರಂಭಿಕ ಶಿಲ್ಕು 14,66,33,667 ರೂ. ಹಾಗೂ ಜಮೆ 36, 89,65,000 ರೂ. ಒಳಗೊಂಡಂತೆ 51,55, 98, 667 ರೂಗಳ ಆಯ-ವ್ಯಯವನ್ನು ಮಂಡಿಸಿದರು.

ಸ್ವಂತ ಮೂಲಗಳಿಂದ 11.55, 03,000 ರೂ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ 25,34,62,000 ರೂ.ಸೇರಿದಂತೆ ಒಟ್ಟು 36,89,65,000 ರೂ ಆದಾಯ ನಿರೀಕ್ಷಿಸಲಾಗಿದ್ದು. ಇದರಲ್ಲಿ 50,23, 57,000 ರೂ. ವೆಚ್ಚ ಮಾಡಲಾಗಿದೆ.

2025-26 ನೇ ಸಾಲಿಗೆ ಸ್ವಲ್ಪ ಮೂಲಗಳಿಂದ ಕ್ರೂಢೀಕರಿಸಲು ಉದ್ದೇಶಿಸಿರುವ ಪ್ರಮುಖ ಆದಾಯಗಳು:
ಆಸ್ತಿ ತೆರಿಗೆಯಿಂದ 3 ಕೋಟಿ, ಕರಗಳಿಂದ 1 ಕೋಟಿ, ಅಭಿವೃದ್ಧಿ ಶುಲ್ಕದಿಂದ 50 ಲಕ್ಷ, ಕಟ್ಟಡ ಪರವಾನಿಗೆಯಿಂದ 15 ಲಕ್ಷ, ಉದ್ದಿಮೆ ಪರವಾನಿಗೆಯಿಂದ 25 ಲಕ್ಷ, ನೆಲ ಬಾಡಿಗೆಯಿಂದ 15 ಲಕ್ಷ, ಶುದ್ಧ ಕುಡಿಯುವ ನೀರಿನ ಘಟಕಗಳ ಶುಲ್ಕಗಳಿಂದ 25 ಲಕ್ಷ, ನೀರು ಸರಬರಾಜು ಶುಲ್ಕಗಳಿಂದ 90 ಲಕ್ಷ, ಬ್ಯಾಂಕ್ ಬಡ್ಡಿ 45 ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆಯಿಂದ 25 ಲಕ್ಷ, ಕೆ ಎಸ್ ಆರ್ ಟಿ ಸಿ ಮಳಿಗೆ ಬಾಡಿಗೆ 30 ಲಕ್ಷ, ಸುಧಾರಣೆ ಶುಲ್ಕಗಳು 10 ಲಕ್ಷ, ಸ್ಟಾಂಪ್ ಶುಲ್ಕ 10 ಲಕ್ಷ, ಘನ ತ್ಯಾಜ್ಯ ನಿರ್ವಹನ ಶುಲ್ಕ 30 ಲಕ್ಷ, ಆಸ್ತಿ ತೆರಿಗೆ ಮೇಲಿನ ದಂಡಗಳು 1 ಕೋಟಿ, ಠೇವಣಿ ಕಡಿತಗಳು ಮತ್ತು ಇತರೆ 2 ಕೋಟಿ 25 ಲಕ್ಷ 60, ಸಾವಿರ, ಕಡಿತಗಳು ಮತ್ತು ಇತರೆ ಆದಾಯ 59.43 ಲಕ್ಷ ಸೇರಿದಂತೆ ಒಟ್ಟು 11.55.03 000 ರೂ.ಗಳು

2024-25 ನೇ ಸಾಲಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ನಿರೀಕ್ಷಿಸಲಾಗಿರುವ ಅನುದಾನಗಳು:
ಎಸ್ ಎಫ್ ಸಿ ವೇತನ ಅನುದಾನ 6 ಕೋಟಿ 75 ಲಕ್ಷ, ಎಸ್ ಎಫ್ ಸಿ ಮುಕ್ತ ನಿಧಿ ಅನುದಾನ 1, 40 ಕೋಟಿ 62,ಸಾವಿರ, ಎಸ್ ಎಫ್ ಸಿ ವಿದ್ಯುತ್ ಅನುದಾನ 5,79 ಕೋಟಿ, ಕುಡಿಯುವ ನೀರಿನ ಅನುದಾನ 10 ಲಕ್ಷ , ಸ್ವಚ್ಛ ಭಾರತ್ ಮಿಷನ್ ಅನುದಾನ 80 ಲಕ್ಷ, 15ನೇ ಹಣಕಾಸು ಅನುದಾನ 3,95 ಕೋಟಿ, ನರ್ಮ್ ಅನುದಾನ 20 ಲಕ್ಷ ಎಸ್ ಎಫ್ ಸಿ ವಿಶೇಷ ಅನುದಾನ 6 ಕೋಟಿ ಗೃಹಭಾಗ್ಯ ಯೋಜನೆಯ ಅನುದಾನ 15 ಲಕ್ಷ ಎನ್ ಪಿ ಎಸ್ ಅನುದಾನ ಸೇರಿದಂತೆ ಒಟ್ಟು 25,34,66,000,ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ.

2024-25 ನೇ ಸಾಲಿಗೆ ಪ್ರಮುಖ ವೆಚ್ಚಗಳು:
ರಸ್ತೆಗಳು ಮತ್ತು ಪಾದಯಾತ್ರೆ ಮಾರ್ಗಗಳಿಗೆ 3,50 ಕೋಟಿ, ರಸ್ತೆ ಬದಿ ಚರಂಡಿಗಳಿಗೆ 1,65 ಕೋಟಿ, ಘನ ತ್ಯಾಜ್ಯ ವಸ್ತು ನಿರ್ವಹಣೆಗೆ ಸಂಬಂಧಿಸಿದಂತೆ ಯಂತ್ರೋಪಕರಣಗಳು ಮತ್ತು ವಾಹನ ಖರೀದಿಗಾಗಿ 3,60 ಕೋಟಿ, ಕ್ರೀಡಾಂಗಣ ನಿರ್ಮಾಣ 3,50 ಕೋಟಿ, ನೀರು ಸರಬರಾಜು ಕಾಮಗಾರಿ ಮತ್ತು ಯಂತ್ರೋಪಕರಣಗಳ ಖರೀದಿಗೆ 3,95 ಕೋಟಿ, ಯುಜಿಡಿ ಕಾಮಗಾರಿಗೆ 1,45 ಕೋಟಿ, ನೌಕರರ ವೇತನ 7.13 ಕೋಟಿ, ಬೀದಿ ದೀಪಗಳು ಮತ್ತು ನೀರು ಸರಬರಾಜು ವಿದ್ಯುತ್ ಬಿಲ್ 5.79 ಕೋಟಿ, ಬೀದಿ ದೀಪಗಳ ದುರಸ್ತಿ ಮತ್ತು ನಿರ್ವಹಣೆ 91 ಲಕ್ಷ, ನೀರು ಸರಬರಾಜು ದುರಸ್ತಿ ಮತ್ತು ನಿರ್ವಹಣೆ 2, 58 ಕೋಟಿ, ಯುಜಿಡಿ ದುರಸ್ತಿ ಮತ್ತು ನಿರ್ವಹಣೆ 1.5 ಕೋಟಿ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ದುರಸ್ತಿ 80 ಲಕ್ಷ, ವಿದ್ಯುತ್ ಠೇವಣಿ ಕಡಿತಗಳ ಪಾವತಿ ಹಾಗೂ ಠೇವಣಿಗಳ ಮರುಪಾವತಿ 3.11 ಕೋಟಿ 60 ಸಾವಿರ, ಇತರೆ ವೆಚ್ಚಗಳು ಹಾಗೂ ಸಮೂಹ ಅಭಿವೃದ್ಧಿಗಾಗಿ 2, 96. ಕೋಟಿ 95 ಸಾವಿರ ರೂಪಾಯಿ ಗಳ ಪ್ರಮುಖ ವೆಚ್ಚವನ್ನು ಪ್ರಸಕ್ತ ಬಜೆಟ್ ನಲ್ಲಿ ತೋರಿಸಲಾಗಿದೆ

2025-26 ನೇ ಸಾಲಿನ ಆಯ-ವ್ಯಯದಲ್ಲಿ  ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯಕ್ರಮಗಳು:

ಎಸ್.ಎಫ್.ಸಿ ಅನುದಾನದಲ್ಲಿ ಶ್ರೀ ಮಹದೇಶ್ವರ ಸರ್ಕಾರಿ ಕಾಲೇಜಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಉದ್ಯಾನವನ ಅಭಿವೃದ್ಧಿ, 40 ಲಕ್ಷ ರೂ.ವೆಚ್ಚದಲ್ಲಿ ನಗರದ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಿ ಅಲಂಕಾರಿಕ ದೀಪಗಳನ್ನು, ಜಿಮ್ ಮತ್ತು ವ್ಯಾಯಾಮ ಪರಿಕರಗಳನ್ನು ಅಳವಡಿಸುವುದು, ಘನತ್ಯಾಜ್ಯ ವಿಲೇವಾರಿ ಘಟಕ ಜಮೀನು ಅಭಿವೃದ್ಧಿ, ಜಮೀನಿನಲ್ಲಿ ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ ಕಸ ವಿಲೇವಾರಿ ಶೆಡ್, ಸರ್ವಿಸ್ ಸ್ಟೇಷನ್ ವಾಹನ ಹಾಗೂ ಯಂತ್ರೋಪಕರಣಗಳ ಖರೀದಿಗಾಗಿ 448.00 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ.

ಶೇ 24.10 ರ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗೆ 2024 25 ಸಾಲಿನ ಆರ್ಥಿಕ ವರ್ಷದಲ್ಲಿ ನಗರಸಭೆ ನಿಧಿಯಿಂದ ಹಾಗೂ ಎಸ್.ಎಫ್. ಸಿ ಮುಕ್ತ ನಿಧಿಯಿಂದ 61.02 ಲಕ್ಷ ರೂ.ಗಳನ್ನು, ಶೇ 7.25 ರ ಇತರೆ ಬಡ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ20.00 ಲಕ್ಷ ರೂ.ಗಳನ್ನು , ಶೇ 5 ರ ವಿಶೇಷ ಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ 20.00 ಲಕ್ಷ ರೂ.ಗಳನ್ನು  ನಿಗದಿಪಡಿಸಲು ಉದ್ದೇಶಿಸಲಾಗಿದೆ. ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ
ಸುಸಜ್ಜಿತ ವಿದ್ಯುತ್ ಚಿತಗಾರ ನಿರ್ಮಿಸಲು 50.00 ಲಕ್ಷ ರೂ., ನಗರದ ಎಲ್ಲಾ ವಾರ್ಡ್ ಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ 2 ಕೋಟಿ ರೂ.‌ಗಳನ್ನು ಮೀಸಲಿಡಲಾಗಿದೆ.

ನಗರಸಭೆ ವ್ಯಾಪ್ತಿಯ ಕೆರೆಗಳನ್ನು ಬಾಹ್ಯ ನೆರವಿನಿಂದ ಅಭಿವೃದ್ಧಿ ಪಡಿಸಲು ಯೋಜಿಸ ಲಾಗಿದೆ ಎಂದು ಆಯ-ವ್ಯಯದಲ್ಲಿ ರೇಖಾ ತಿಳಿಸಿದರು.

ಬಜೆಟ್ ಅನ್ನು ಉಪಾಧ್ಯಕ್ಷರು, ಸ್ತಾಯಿ ಸಮಿತಿ ಅಧ್ಯಕ್ಷರು,ಪೌರಾಯುಕ್ತರು ಸೇರಿದಂತೆ ನಗರಸಭೆಯ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಅನುಮೋದಿಸಿದರು.

ಈ ವೇಳೆ ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್,ಸ್ತಾಯಿ ಸಮಿತಿ ಅಧ್ಯಕ್ಷ ಸುರೇಶ್ ಹಾಗೂ ನಗರಸಭೆ ಸದಸ್ಯರು, ಪೌರಾ ಯುಕ್ತ ಎ.ರಮೇಶ್ ಎ.ಇ. ಸುರೇಶ್, ಜೆ ಇ ನಾಗೇಂದ್ರ ಸಮೂದಾಯ ಘಟಕಾಧಿಕಾರಿ ಪರಶಿವಮೂರ್ತಿ, ಕಂದಾಯ ಅಧಿಕಾರಿ ನಂಜುಂಡಸ್ವಾಮಿ, ರಾಘವೇಂದ್ರ, ಆರೋಗ್ಯ ನಿರೀಕ್ಷಕ ಚೇತನ್, ಲಕ್ಷ್ಮೀ ಮತ್ತುತರರು ಹಾಜರಿದ್ದರು.

ಕೊಳ್ಳೇಗಾಲ ನಗರಸಭೆ ಉಳಿತಾಯ ಬಜೆಟ್ ಮಂಡಿಸಿದ ರೇಖಾ ರಮೇಶ್ Read More

ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಶೂನ್ಯ : ಬಸವರಾಜ ಬೊಮ್ಮಾಯಿ ಟೀಕೆ

ಹುಬ್ಬಳ್ಳಿ,ಮಾ.8: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳದ ಕೇವಲ ಬೆಂಗಳೂರು ಮೈಸೂರು ಭಾಗಕ್ಕೆ ಸೀಮಿತವಾದ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ5 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ, ಆದರೆ ಖರ್ಚು ಮಾಡಿಲ್ಲ‌, ಎಸ್‌ ಸಿ ಪಿ ಟಿಎಸ್ ಪಿ ಹಣವನ್ನೂ ಖರ್ಚು ಮಾಡುವುದಿಲ್ಲ. ಕಳೆದ ವರ್ಷ ಆದಾಯ ಸಂಗ್ರಹದಲ್ಲಿ 10 ಸಾವಿರ ಕೋಟಿ ಕಡಿಮೆ ಸಂಗ್ರಹ ಮಾಡಿದ್ದಾರೆ. ಬಂಡವಾಳ ವೆಚ್ಚ ಕೂಡ ಕಡಿಮೆ ಮಾಡಿದ್ದಾರೆ ಎಂದು ಟೀಕಿಸಿದರು.

ಈ ವರ್ಷ ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಯಾವುದೇ ದಿಟ್ಟ ಕ್ರಮ ಇಲ್ಲ. ಹೀಗಾಗಿ ಹೆಚ್ಚಿನ ಸಾಲ ತೆಗೆದುಕೊಳ್ಳುವುದೇ ಇವರ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.

ಈ ಬಜೆಟ್ ಕರ್ನಾಟಕವನ್ನು ಇನ್ನಷ್ಟು ಸಾಲದ ಕೂಪಕ್ಕೆ ನೂಕಿದೆ, ಹಾಗಾಗಿ ಇದೊಂದು ಜನ ವಿರೋಧಿ ಮತ್ತು ಅಭಿವೃದ್ಧಿ ವಿರೋಧಿ ಬಜೆಟ್ ಇದಾಗಿದೆ ಎಂದು ಆರೋಪಿಸಿದರು.

ಕಿತ್ತೂರು ಕರ್ನಾಟಕ ಭಾಗಕ್ಕೆ ಶೂನ್ಯ ಕೊಡುಗೆ ನೀಡಿದ್ದು, ಇದು ಬೆಂಗಳೂರು ಮೈಸೂರು ಭಾಗಕ್ಕೆ ಸೀಮಿತವಾದ ಬಜೆಟ್ ಎಂದು ಬಸವರಾಜ ಬೊಮ್ಮಾಯಿ ದೂರಿದರು.

ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಶೂನ್ಯ : ಬಸವರಾಜ ಬೊಮ್ಮಾಯಿ ಟೀಕೆ Read More

ಅಭಿವೃದ್ಧಿ ಶೂನ್ಯ,ಬೋಗಸ್ ಬಜೆಟ್:ಅಶೋಕ್ ಟೀಕೆ

ಬೆಂಗಳೂರು, ಮಾ.7: ಮುಖ್ಯಮಂತ್ರಿ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕ, ಅಭಿವೃದ್ಧಿ ಶೂನ್ಯ,ಬೋಗಸ್ ಬಜೆಟ್ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಸಿದ್ದರಾಮಯ್ಯನವರು ಔಟ್ ಗೋಯಿಂಗ್ ಸಿಎಂ ಎಂದು ಜನಸಾಮಾನ್ಯರ ಮನಸ್ಸಿನಲ್ಲಿ ಗಟ್ಟಿಯಾದ ಅಭಿಪ್ರಾಯ ಮೂಡಿದೆ,ಈ ಬಜೆಟ್ ನಿಂದ ಕನ್ನಡಿಗರಿಗೆ ಹೆಚ್ಚಿನ ನಿರೀಕ್ಷೆಗಳೇನೂ ಇರಲಿಲ್ಲ. ಆದರೂ ತಮ್ಮ ಕಡೆಯ ಬಜೆಟ್ ನಲ್ಲಿ ಒಂದಿಷ್ಟಾದರೂ ಜನಪರ ಯೋಜನೆಗಳನ್ನ ಘೋಷಿಸುತ್ತಾರೆ ಎಂದು ಎದುರು ನೋಡುತ್ತಿದ್ದರು,ಆದರೆ ಈ ಬಜೆಟ್ ಸಂಪೂರ್ಣ ನಿರಾಸೆ ಮೂಡಿಸಿದೆ. ಇದು‌‌ ಕೇವಲ ‘ಬೊಗಳೆರಾಮಯ್ಯ ಬಜೆಟ್’ ಎಂದು ವ್ಯಂಗ್ಯವಾಡಿದರು.

ಸಾಧನೆಯ ಬಲದಿಂದಾಗಲಿ, ದಿಟ್ಟ ನಾಯಕತ್ವದಿಂದಾಗಲಿ, ಅಹಿಂದ ನಾಮ ಜಪದಿಂದಾಗಲಿ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ಗೊತ್ತಾದಾಗ ಅವಸರದಲ್ಲಿ ಐದು ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು.

ಈ ಗ್ಯಾರೆಂಟಿಗಳು ಬಡವರ ಮೇಲಿನ ಪ್ರೀತಿ ಇಲ್ಲವೇ ಕಾಳಜಿಯಿಂದ ಘೋಷಿಸಿದ್ದಲ್ಲ, ಇದರ ಹಿಂದಿನ ದುರುದ್ದೇಶ ಜನರನ್ನ ದಿಕ್ಕು ತಪ್ಪಿಸಿ, ಮತಗಳಿಸಿ ಅಧಿಕಾರಕ್ಕೆ ಏರುವುದು ಮಾತ್ರ ಆಗಿತ್ತು ಎಂದು ಜರಿದಿದ್ದಾರೆ.

ಆದರೆ ಅಧಿಕಾರಕ್ಕೆ ಬಂದ ಮೇಲೆ ಬಿಸಿ ತುಪ್ಪದಂತಾಗಿರುವ ಗ್ಯಾರೆಂಟಿಗಳನ್ನು ಮುಂದುವರೆಸಲು ಆಗದೆ ನಿಲ್ಲಿಸಲೂ ಆಗದೆ ಕಾಂಗ್ರೆಸ್ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ.

ಕೆಡಿಪಿ ಅಂಕಿ-ಅಂಶದ ಪ್ರಕಾರ, ಕಳೆದ ವರ್ಷದ ಅಂದರೆ 2024-25 ನೇ ಬಜೆಟ್ ವರ್ಷದ 10 ತಿಂಗಳಲ್ಲಿ ಶೇ.62 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಕಳೆದ ವರ್ಷದ ಅನುದಾನವೇ ಖರ್ಚಾಗದೆ ಇರುವಾಗ ಈಗ ಇನ್ನೊಂದು ಬಜೆಟ್ ಮಂಡಿಸಿದರೆ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.

ಇದು ಕೇವಲ ನಾಮಕಾವಸ್ತೆ ಬಜೆಟ್, ಪಾಪರ್ ಸರ್ಕಾರದ ಪಾಪರ್ ಬಜೆಟ್, ನಿವೃತ್ತಿ ಆಗುತ್ತಿರುವ ಮುಖ್ಯಮಂತ್ರಿಗಳ ನಿರ್ಗಮನದ ಬಜೆಟ್, ಇದರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ ನಯಾಪೈಸೆ ಉಪಯೋಗವಿಲ್ಲ ಇದು
ಬೊಗಳೆರಾಮಯ್ಯ ಬಜೆಟ್ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

ಅಭಿವೃದ್ಧಿ ಶೂನ್ಯ,ಬೋಗಸ್ ಬಜೆಟ್:ಅಶೋಕ್ ಟೀಕೆ Read More

ಎಲ್ಲಾ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಲ್ಲಿ ಟಿಕೆಟ್ ದರ 200 ರೂ ಫಿಕ್ಸ್

ಬೆಂಗಳೂರು,ಮಾ.7: ಈ ಬಾರಿಯ ಬಜೆಟ್ ‌ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಿನಿ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಸಿನಿಮಾ ಪ್ರೇಮಿಗಳು ಬಹು ವರ್ಷಗಳಿಂದ ಮಲ್ಟಿಪ್ಲೆಕ್ಸ್​ ಟಿಕೆಟ್ ದರ ನಿಯಂತ್ರಣ ಮಾಡುವಂತೆ ಒತ್ತಾಯುಸುತ್ತಲೇ ಇದ್ದರು,ಕಡೆಗೂ ಈ ಬೇಡಿಕೆ ಈಡೇರಿದೆ. ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್​ನಲ್ಲಿ ಮಲ್ಟಿಪ್ಲೆಕ್ಸ್​ ಟಿಕೆಟ್ ದರಗಳನ್ನು 200 ರೂಗೆ ನಿಗದಿಪಡಿಸಿದ್ದಾರೆ.

ನೆರೆ ರಾಜ್ಯಗಳಾದ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್​ ಟಿಕೆಟ್ ದರ ಬಹುತೇಕ ಎರಡರಷ್ಟಿತ್ತು.

ಕೆಲ ತಿಂಗಳ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಸಹ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಲ್ಟಿಪ್ಲೆಕ್ಸ್​ ಟಿಕೆಟ್ ದರ ನಿಯಂತ್ರಣ ಮಾಡುವಂತೆ ಮನವಿ ಮಾಡಿದ್ದನ್ನು ಸ್ಮರಿಸಬಹುದಾಗಿದೆ.

ಅಂದು ಅವರಿಗೆ ಭರವಸೆ ನೀಡಿದ್ದಂತೆಯೇ ಸಿಎಂ‌ ಮಲ್ಟಿಪ್ಲೆಕ್ಸ್​ ಟಿಕೆಟ್ ದರಗಳನ್ನು 200 ರೂಗೆ ನಿಗದಿಪಡಿಸಿದ್ದಾರೆ.

ಎಲ್ಲಾ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಲ್ಲಿ ಟಿಕೆಟ್ ದರ 200 ರೂ ಫಿಕ್ಸ್ Read More

ಎಸ್ ​ಸಿಪಿ, ಟಿಎಸ್ ​ಪಿ ಯೋಜನೆಗೆ 42,018 ಕೋಟಿ ರೂ. ಮೀಸಲು

ಬೆಂಗಳೂರು,ಮಾ.7: ಎಸ್ ​ಸಿಪಿ ಟಿಎಸ್ ​ಪಿ ಯೋಜನೆಗೆ 42, 018 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಎಸ್​ಸಿ, ಎಸ್​ಟಿ ಸಮುದಾಯಕ್ಕೆ 2 ಕೋಟಿ ರೂವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗುವುದು. ಎಸ್ ​ಸಿಪಿ ಟಿಎಸ್​ಪಿ ಯೋಜನೆಗೆ 42018 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಸರ್ಕಾರದ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ 2 ಕೋಟಿವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗುವುದು. 2ಎ, 2ಬಿ ಪ್ರವರ್ಗದ ಗುತ್ತಿಗೆದಾರರಿಗೂ ಮೀಸಲಾತಿ ಇರಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಎಸ್ ​ಸಿಪಿ, ಟಿಎಸ್ ​ಪಿ ಯೋಜನೆಗೆ 42,018 ಕೋಟಿ ರೂ. ಮೀಸಲು Read More

ಅಬಕಾರಿ ಇಲಾಖೆಗೆ 40,000 ಕೋಟಿ ತೆರಿಗೆ ಸಂಗ್ರಹ ಗುರಿ ನೀಡಿದ ಸಿಎಂ

ಬೆಂಗಳೂರು,ಮಾ.7: ಪ್ರಸಕ್ತ ಸಾಲಿನಲ್ಲಿ 40,000 ಕೋಟಿ ರೂ ತೆರಿಗೆ ಸಂಗ್ರಹ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

2025-26ನೆ ಸಾಲಿನ ಬಜೆಟ್ ಮಂಡಿಸಿದ ಸಿಎಂ, 2024-25ರ ಪರಿಷ್ಕೃತ ಅಂದಾಜಿನಲ್ಲಿ ಅಬಕಾರಿ ತೆರಿಗೆಯಿಂದ ಒಟ್ಟು 36,500 ಕೋಟಿ ರೂರಾಜಸ್ವ ನಿರೀಕ್ಷಿಸಲಾಗಿದೆ. ಅದರಂತೆ 2025-26ನೇ ಸಾಲಿಗೆ 40,000 ಕೋಟಿ ರೂ ಸಂಗ್ರಹಣಾ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದೆ ಎಂದು ಹೇಳಿದರು.

ಪ್ರೀಮಿಯಂ ಮದ್ಯದ ಬೆಲೆಗಳನ್ನು ನೆರೆಯ ರಾಜ್ಯಗಳಲ್ಲಿ ವಿಧಿಸುತ್ತಿರುವ ಬೆಲೆಗಳಿಗೆ ಅನುಸಾರವಾಗಿ ಪರಿಷ್ಕರಿಸುವುದರೊಂದಿಗೆ ಸರ್ಕಾರವು ಅಬಕಾರಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸಿದೆ. 2025-26ರಲ್ಲೂ ಅಬಕಾರಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಸಿಎಂ ತಿಳಿಸಿದರು.

ಅಬಕಾರಿ ಇಲಾಖೆಗೆ 40,000 ಕೋಟಿ ತೆರಿಗೆ ಸಂಗ್ರಹ ಗುರಿ ನೀಡಿದ ಸಿಎಂ Read More

ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆಗಳು – ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆಗಳು ನಿರರ್ತಕ ಎಂದು
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ ‌

ಮುಖ್ಯಮಂತ್ರಿಗಳು ನಡೆಸುತ್ತಿರುವ ಬಜೆಟ್ ಪೂರ್ವ ಸಭೆಗಳಿಗೆ ಅಲ್ಪಸಂಖ್ಯಾತರ ಮುಖಂಡರುಗಳೊಂದಿಗೆ ಇದುವರೆಗೂ ಸಭೆ ನಡೆಸದಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸಾಕಾರಕ್ಕೆ ಧಕ್ಕೆ ತರುವಂತಿದೆ ಎಂದು ಡಾ.ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ದಲಿತ ವರ್ಗ ಹಾಗೂ ಹಿಂದುಳಿದ ವರ್ಗಗಳ ಅನೇಕ ಸಂಘ ಸಂಸ್ಥೆಗಳು ಮತ್ತು ನಾಯಕರುಗಳ ಸಭೆಗಳನ್ನು ನಡೆಸಿ ಅವರುಗಳ ಅನೇಕ ಬೇಡಿಕೆಗಳನ್ನು ಆಲಿಸಿ ಬಜೆಟ್ ಪೂರ್ವ ತಯಾರಿಯನ್ನು ಮುಖ್ಯ ಮಂತ್ರಿಗಳು ನಡೆಸಿದ್ದಾರೆ,ಅದು ಶ್ಲಾಘನೀಯ,ಆದರೆ ಇದೇ ರೀತಿಯಲ್ಲಿ ರಾಜ್ಯದ ಅಲ್ಪಸಂಖ್ಯಾತರುಗಳ ಯಾವುದೇ ಸಭೆಯನ್ನು ಇದುವರೆಗೂ ನಡೆಸದೆ ಇರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಧಕ್ಕೆ ತರುವಂತಿದೆ. ಕೇವಲ ತಮ್ಮ ಮಂತ್ರಿಮಂಡಲದ ಪ್ರಮುಖ ಸಚಿವರೊಬ್ಬರೇ ಎಲ್ಲಾ ಅಲ್ಪಸಂಖ್ಯಾತರ ಧ್ವನಿ ಎಂಬಂತೆ ಭಾಸವಾಗುತ್ತಿರುವುದು ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಅಲ್ಪಸಂಖ್ಯಾತರುಗಳಲ್ಲಿ ಮುಸ್ಲಿಂ ಜನಾಂಗದೊಂದಿಗೆ ಕ್ರಿಶ್ಚಿಯನ್ ,ಜೈನ್, ಬೌದ್ಧ ,ಪಾರ್ಸಿ, ಸಿಖ್ ಸಮುದಾಯಗಳು ಸಹ ಸೇರಿರುವುದು ಇತ್ತೀಚಿನ ದಿನಗಳಲ್ಲಿ ಆಳುವವರು ಮರೆಯುತ್ತಿರುವಂತಿದೆ. ಆದುದರಿಂದ ಕೂಡಲೇ ಅಲ್ಪಸಂಖ್ಯಾತರ ಎಲ್ಲ ವರ್ಗಗಳ ಮುಖಂಡರುಗಳನ್ನು ಸಂಘ ಸಂಸ್ಥೆಗಳನ್ನು ತಮ್ಮ ಬಜೆಟ್ ಪೂರ್ವ ಸಭೆಗೆ ಕರೆದು ಅವರ ಅನೇಕ ವರ್ಷಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಹಾಗೂ ನೈಜ ಸಾಮಾಜಿಕ ಪರಿಕಲ್ಪನೆಯನ್ನು ಎತ್ತಿ ಹಿಡಿಯಬೇಕೆಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆಗಳು – ಮುಖ್ಯಮಂತ್ರಿ ಚಂದ್ರು Read More

ಜಾತಿ ಗಣತಿ ವರದಿ ಅನುಷ್ಠಾನ ಗ್ಯಾರಂಟಿ:ಸಿಎಂ

ಬೆಂಗಳೂರು: ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತಾ ಜಾರಿಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಇಂದು ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಾತಿ ಗಣತಿ ಅನುಷ್ಠಾನಕ್ಕೆ ಸಭೆಯಲ್ಲಿ ತೀವ್ರ ಒತ್ತಾಯ ಬಂದಾಗ ಪ್ರತಿಕ್ರಿಯಿಸಿದ ಸಿಎಂ,
ಸರ್ಕಾರ ಜಾತಿ ಗಣತಿ ಪರವಾಗಿದೆ, ವರದಿಯನ್ನು ಸ್ವೀಕರಿಸಲಾಗಿದೆ,ಖಂಡಿತಾ ಜಾರಿ ಮಾಡಲಾಗುತ್ತದೆ ಅದರ ಬಗ್ಗೆ ಅನುಮಾನವೇ ಬೇಡ ಎಂದು ತಿಳಿಸಿದರು.

ತಮಿಳು ನಾಡು ಮಾದರಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸಭೆ ಆಗ್ರಹಿಸಿದಾಗ 1992 ರ ಇಂದಿರಾ ಸಹಾನಿ ಕೇಸನ್ನು ಉಲ್ಲೇಖಿಸಿ ಮೀಸಲಾತಿ ಶೇಕಡ 50ರಷ್ಟು ಮೀರಬಾರದು ಎಂಬ ಅಂಶವನ್ನು ವಿವರಿಸಿದರು.

ಕಳೆದ ಸರ್ಕಾರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಎಂದು ( EWS) ಮೀಸಲಾತಿ ಕಲ್ಪಿಸಿದ್ದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.
ಸಂವಿಧಾನದ ಆರ್ಟಿಕಲ್ ( 15)(16)ರ ಪ್ರಕಾರ ಮೀಸಲಾತಿ ನೀಡಬೇಕಾಗಿರುವುದು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಎಂದಿದೆ.

ಜಾತಿ ಗಣತಿಯ ವರದಿ ವೈಜ್ಞಾನಿಕವಾಗಿ ತಯಾರಾಗಿದ್ದು ಸಮಾಜದ ಎಲ್ಲಾ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಅನುಕೂಲ ವಾಗಿದೆ, ಕೆಲವರು ತಪ್ಪು ಗ್ರಹಿಕೆಯಿಂದ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಸಿಎಂ ಬೇಸರಪಟ್ಟರು‌

ಹಿಂದುಳಿದ ಜಾತಿಗಳಲ್ಲೂ ತಾರತಮ್ಯ ಅಸಮಾನತೆ ಇದೆ ಇದನ್ನು ಒಂದೇ ಬಾರಿಗೆ ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಅಲೆಮಾರಿ ಜನಾಂಗಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿ ಅಲೆಮಾರಿ ಆಯೋಗ ರಚನೆಗೆ ಉಂಟಾಗಿರುವ ಸಮಸ್ಯೆಗಳಿಂದಾಗಿ ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಜಾತಿ ಗಣತಿ ವರದಿ ಅನುಷ್ಠಾನ ಗ್ಯಾರಂಟಿ:ಸಿಎಂ Read More

ದಲಿತ ಮುಖಂಡರೊಂದಿಗೆ ಬಜೆಟ್ ಪೂರ್ವ ಸಭೆ ನಡೆಸಿದ ಸಿಎಂ

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ದಲಿತ ಮುಖಂಡರೊಂದಿಗೆ ಬಜೆಟ್ ಪೂರ್ವ ಸಭೆ ನಡೆಸಿ ಚರ್ಚಿಸಿದರು.

ಶೋಷಿತರ, ದಲಿತ ಸಮಯದಾಯಗಳ ಬೇಡಿಕೆಗಳನ್ನು ನಾನು ಮುಖ್ಯಮಂತ್ರಿ ಆದ ಬಳಿಕ ನಿರಂತರವಾಗಿ ಈಡೇರಿಸುತ್ತಲೇ ಇದ್ದೇನೆ ಎಂದು ಸಿಎಂ ಸಭೆಯಲ್ಲಿ ತಿಳಿಸಿದರು.

ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನ ಅಭಿವೃದ್ಧಿ ಹಣದಲ್ಲಿ ಶೇ24 ರಷ್ಟು ಹಣ ಮೀಸಲಾಗಿಡುವ ಕಾಯ್ದೆ ಜಾರಿ ಮಾಡಿದ್ದು ನಾವು,ಈ ಕಾಯ್ದೆಯನ್ನು ಕೇಂದ್ರದ ಬಿಜೆಪಿ ಸರ್ಕಾರವಾಗಲಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಜಾರಿ ಮಾಡಿಲ್ಲ ಎಂದು ಹೇಳಿದರು.

ದಲಿತ ಸಮುದಾಯದ ಗುತ್ತಿಗೆದಾರರಿಗೆ ಒಂದು ಕೋಟಿ ರೂಪಾಯಿ ವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಾವು ಮಾತ್ರ. ಇದನ್ನು 2 ಕೋಟಿಗೆ ವಿಸ್ತರಿಸಬೇಕು ಎಂಬ ಬೇಡಿಕೆ ಇಟ್ಟಿದ್ದೀರಿ,ಆ ಬಗ್ಗೆ ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದರು.

ಬಡ್ತಿಯಲ್ಲೂ ಮೀಸಲಾತಿ ತಂದಿದ್ದು ನಾವು ಮಾತ್ರ,ಪಿಟಿಸಿಎಲ್ ಕಾಯ್ದೆ ಮಾಡಿದ್ದು ನಾವು,ಹೊಸದಾಗಿ ಕೈಗಾರಿಕೆ ಆರಂಭಿಸುವವರಿಗೆ ಸಾಕಷ್ಟು ಸವಲತ್ತುಗಳನ್ನು ಕಲ್ಪಿಸಿದ್ದೇವೆ,
ಇಡೀ ದೇಶಕ್ಕೆ ಮಾದರಿಯಾದ ಕಾಯ್ದೆ, ಕಾನೂನು, ನಿಯಮಗಳನ್ನು ಮಾಡಿರುವ ದಾಖಲೆ ನಮ್ಮ ಸರ್ಕಾರದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ದಲಿತ ಮುಖಂಡರೊಂದಿಗೆ ಬಜೆಟ್ ಪೂರ್ವ ಸಭೆ ನಡೆಸಿದ ಸಿಎಂ Read More