ಶಿಕ್ಷಣದಲ್ಲಿ ಹೆಣ್ಣು ಮಕ್ಕಳೇ ಮುಂದು: ಸಿದ್ದರಾಮಯ್ಯ ಶ್ಲಾಘನೆ

ಬೆಂಗಳೂರು: ಶೇ100 ರಷ್ಟು ಅಂಕಗಳನ್ನು ಪಡೆಯುವುದರಲ್ಲಿ ಹೆಣ್ಣುಮಕ್ಕಳೇ ಮುಂದಿದ್ದು, ಸೈನ್ಯ,ಅಂತರಿಕ್ಷದಲ್ಲೂ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿರುವುದು ಮಹಿಳಾ ಕುಲದ ಪ್ರಗತಿಯ ಪ್ರತೀಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು.

ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ,ಯಾವುದೇ ಸಂಘಟನೆ 25 ವರ್ಷ ಪೂರೈಸಿದರೆ ಅದು ದೊಡ್ಡ ಯಶಸ್ಸು. ಕರ್ನಾಟಕ ರಾಜ್ಯ ಅಹಲ್ಯಾ ಬಾಯಿ ಹೋಳ್ಕರ್ ಮಹಿಳಾ ಸಂಘ ಅತ್ಯಂತ ಯಶಸ್ವಿ ಆಗಿದೆ. ಇದಕ್ಕಾಗಿ ಶ್ರಮಿಸಿದ ಯಲ್ಲಮ್ಮ ಮತ್ತು ಜೊತೆಗಿರುವ ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು.

ಶಿಕ್ಷಣ-ಸಂಘಟನೆ-ಹೋರಾಟ ಅಂಬೇಡ್ಕರ್ ಅವರು ಶೋಷಿತ ಜಾತಿ-ಸಮುದಾಯಗಳಿಗೆ ಕೊಟ್ಟಿರುವ ಮಂತ್ರ. ಶೂದ್ರರು ಮತ್ತು ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಆದರೆ ಅಂಬೇಡ್ಕರ್ ಅವರ ಕಾರಣದಿಂದ ಶೂದ್ರ ಮತ್ತು ಮಹಿಳಾ ಕುಲಕ್ಕೆ ಶಿಕ್ಷಣ ಕಲಿಯುವ ಅವಕಾಶ ಒದಗಿ ಬಂತು. ಇದಕ್ಕೆ ನಮ್ಮ ಸಂವಿಧಾನ ನೀಡಿದ ಕಡ್ಡಾಯ ಶಿಕ್ಷಣ ಕಾನೂನು ನೆರವಾಯಿತು ಎಂದು ಸಿದ್ದು ಹೇಳಿದರು.

ಕುರುಬರಿಗೆ ಅಕ್ಷರ ಹತ್ತಲ್ಲ, ಶಿಕ್ಷಣ ಏಕೆ ಎಂದು ನಮ್ಮ ಅಜ್ಜಿ ಹೇಳುತ್ತಿದ್ದರು. ಆದರೆ, ನಾನು ಶಾಲೆಗೆ ಹೋಗಿ ಕಾನೂನು ಪದವಿ ಪಡೆದು ಮುಖ್ಯಮಂತ್ರಿಯೂ ಆದೆ. ನಾನು ಶಾಲೆಗೆ ಹೋಗಿ ಶಿಕ್ಷಣ ಕಲಿಯುವ ಅವಕಾಶ ಉಪಯೋಗಿಸಿಕೊಳ್ಳದಿದ್ದರೆ ನಾನೂ ಹಸು, ಕುರಿ ಕಾಯುತ್ತಾ ಇರಬೇಕಾಗಿತ್ತು. ಆದ್ದರಿಂದ ರಾಣಿ ಅಹಲ್ಯಾ ಬಾಯಿ ಅವರ ಶಿಕ್ಷಣ ಕ್ರಾಂತಿ ಎಲ್ಲರಿಗೂ ಈ ಮಹಿಳಾ ಸಂಘಟನೆಗೂ ಪ್ರೇರಣೆ ಆಯಿತು. ಇತಿಹಾಸ ಗೊತ್ತಿಲ್ಲದವರು ಭವಿಷ್ಯ ರೂಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು.

20 ವರ್ಷ ಅಧಿಕಾರದಲ್ಲಿದ್ದರೂ ತನ್ನ ಸಾಮ್ರಾಜ್ಯ ಉಳಿಸಲು ಅಗತ್ಯವಾದ ಎಲ್ಲಾ ಅರ್ಹತೆಗಳನ್ನು ಬೆಳೆಸಿಕೊಂಡಿದ್ದರೂ ಸಾಮ್ರಾಜ್ಯ ವಿಸ್ತರಿಸುವ ಹಪಾಹಪಿ ಇರಲಿಲ್ಲ. ಖಜಾನೆ ತುಂಬಿದ್ದರೂ ಸರಳ ಜೀವನ ನಡೆಸುತ್ತಾ, ಸುಸ್ಥಿರ ಆಡಳಿತ, ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಿದ್ದ ರಾಣಿ ಅಹಲ್ಯಾ ಬಾಯಿ ಅವರು ಬಾಲ್ಯ ವಿವಾಹ ನಿಲ್ಲಿಸುವ ಮೂಲಕ ಸಾಮಾಜಿಕ ಬದಲಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು,
ಜಾತ್ಯತೀತ ಮನೋಭಾವ ಹೊಂದಿದ್ದ ಅಹಲ್ಯಾ ಬಾಯಿ ಆಗಲೇ ಅಂತರ್ಜಾತಿ ವಿವಾಹ ಮಾಡಿಸಿದ್ದರು ಎಂದು ವಿವರಿಸಿದರು.

ಶಿಕ್ಷಣ ಪಡೆದು ಆರ್ಥಿಕವಾಗಿ ಸಾಮಾಜಿಕವಾಗಿ ಸಭಲರಾದರೆ ಮಾತ್ರ ಅಸಮಾನತೆ ಅಳಿಸಿ ಸಾಮಾಜಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ನಮ್ಮ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಂದ ಯಾರೂ ಸೋಮಾರಿಗಳಾಗುವುದಿಲ್ಲ. ಬದಲಿಗೆ ಸಾಮಾಜಿಕವಾಗಿ ಸಬಲರಾಗುತ್ತಾರೆ ಎಂದು ಸಮರ್ಥಿಸಿದರು.

ರಾಜ್ಯ ಅಹಲ್ಯಾಬಾಯಿ ಮಹಿಳಾ ಸಂಘಕ್ಕೆ ಬೆಂಗಳೂರಿನಲ್ಲಿ ಜಮೀನು ನೀಡಲಾಗುವುದು ಎಂದು ಇದೇ ವೇಳೆ ಸಿದ್ದರಾಮಯ್ಯ ಘೋಷಿಸಿದರು.

ಶಿಕ್ಷಣದಲ್ಲಿ ಹೆಣ್ಣು ಮಕ್ಕಳೇ ಮುಂದು: ಸಿದ್ದರಾಮಯ್ಯ ಶ್ಲಾಘನೆ Read More

ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ಮಾಡಿ:ಅಧಿಕಾರಿಗಳಿಗೆ ಸಿಎಂ ಕಡಕ್ ಸೂಚನೆ

ಬೆಂಗಳೂರು: ಅನಧಿಕೃತ ಬಡಾವಣೆಗಳು ನಗರ, ಪಟ್ಟಣ, ಪಾಲಿಕೆ ವ್ಯಾಪ್ತಿ ಮತ್ತು ಹಳ್ಳಿಗಳಲ್ಲೂ ಇದ್ದು ಇವೆಲ್ಲಕ್ಕೂ ಅಂತ್ಯ ಹಾಡಬೇಕು ಅಧಿಕಾರಿಗಳು ಸಿದ್ದರಾಗಿರಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ವಿಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಸ್ಪಷ್ಟ ಮತ್ತು ಖಚಿತವಾದ ಸೂಚನೆಗಳನ್ನು ನೀಡಿ ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ರಾಜ್ಯದಲ್ಲಿ ಕಿಂಚಿತ್ತೂ ಅವಕಾಶ ಇಲ್ಲ ಎಂದು ಕಡಕ್ಕಾಗಿ ಹೇಳಿದರು.

ಕಾಯ್ದೆ ಮೂಲಕ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡಿದ್ದೇವೆ, ಅಧಿಕಾರಿಗಳು ಇದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಿ ಎಂದು ಸಿಎಂ ಆದೇಶಿಸಿದರು.

ಅನಧಿಕೃತ ಬಡಾವಣೆಗಳಿಂದ ಕಂದಾಯ ಬರುತ್ತಿಲ್ಲ, ಪರಿಣಾಮ‌ ಜನರಿಗೆ ನಾಗರಿಕ ಸವಲತ್ತುಗಳೂ ಸಿಗುತ್ತಿಲ್ಲ, ಸ್ಥಳೀಯ ಸಂಸ್ಥೆಗಳಿಗೆ ಆದಾಯವೂ ಬಂದ್ ಆಗಿದೆ. ಇವೆಲ್ಲಾ ಅನಾನುಕೂಲಗಳಿಗೂ ಅಂತ್ಯ ಹಾಡಬೇಕು ಎಂದು ತಿಳಿಸಿದರು ‌

ಕಂದಾಯ ಕಟ್ಟದಿರುವುದರಿಂದ ಇಷ್ಟೆಲ್ಲಾ ಸಮಸ್ಯೆಗಳಾಗಿವೆ,ಹಾಗಾಗಿ ಇದೊಂದು ಬಾರಿ, ಬಿ ಖಾತಾ ಕೊಟ್ಟು ಅಂತ್ಯ ಹಾಡಬೇಕು ಎಂದು ಹೇಳಿದರು.

ನಿಮಗೆ 3 ತಿಂಗಳು ಮಾತ್ರ ಟೈಮ್ ಕೊಟ್ಟಿದ್ದೇವೆ ಅಷ್ಟರೊಳಗೆ ಅಭಿಯಾನ ನಡೆಸಿ ಪೂರ್ಣಗೊಳಿಸಿ.ಯಾವುದೇ ರಾಜಿ ಇಲ್ಲ ಅಧಿಕಾರಿಗಳೇನಾದರೂ ರಾಜಿ ಮಾಡಿಕೊಂಡರೆ ಸಹಿಸಲ್ಲ ಎಂದು ಮುಖ್ಯ ಮಂತ್ರಿಗಳು ಕಠಿಣ ಎಚ್ಚರಿಕೆ ನೀಡಿದರು.

ಅನಧಿಕೃತ ಬಡಾವಣೆಗಳು ಮತ್ತೆ ತಲೆ ಎತ್ತಿದರೆ ಜಿಲ್ಲಾಧಿಕಾರಿ, ಮುಖ್ಯ ಅಧಿಕಾರಿ, ನಗರ ಯೋಜನಾ ಅಧಿಕಾರಿಗಳು ಜವಾಬ್ದಾರಿ ಆಗ್ತೀರಿ.ನಿಮ್ಮ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಡಕ್ಕಾಗಿ ಸಿದ್ದರಾಮಯ್ಯ ತಿಳಿಸಿದರು.

ಮಧ್ಯವರ್ತಿಗಳಿಗೆ, ಬ್ರೋಕರ್ ಗಳಿಗೆ ತಕ್ಷಣ ಗೇಟ್ ಪಾಸ್ ಕೊಡಿ ಇದನ್ನು ಮತ್ತು ಕಾಯ್ದೆಯ ದೂರದೃಷ್ಟಿಯನ್ನು ನೀವೆಲ್ಲರೂ ಸ್ಪಷ್ಟವಾಗಿ, ಖಚಿತವಾಗಿ ಅರ್ಥ ಮಾಡಿಕೊಳ್ಳಿ.
ರಾಜ್ಯದಲ್ಲಿ ಇನ್ನೆಲ್ಲೂ ಅನಧಿಕೃತ ಬಡಾವಣೆಗಳು, ರೆವಿನ್ಯೂ ಬಡಾವಣೆಗಳು ತಲೆ ಎತ್ತಬಾರದು ಎಂದು ಸಿಎಂ ಆದೇಶ ನೀಡಿದರು.

ಅನಧಿಕೃತ, ರೆವಿನ್ಯೂ ಬಡಾವಣೆಗಳಲ್ಲಿ ಸೈಟು, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು.ಒಟ್ಟಾರೆ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಒನ್ ಟೈಮ್ ಸಲ್ಯೂಷನ್ ಕೊಟ್ಟಿದ್ದೀವಿ. 3 ತಿಂಗಳಲ್ಲಿ ಎಲ್ಲರಿಗೂ ಖಾತಾ ನೀಡಿ ಅಂತ್ಯ ಹಾಡಿ ಅನಧಿತ ಬಡಾವಣೆ ಮತ್ತೆ ಬರದಂತೆ ನೋಡಿಕೊಳ್ಳಿ,ಬಿ ಖಾತಾ ಈಗಿನಿಂದಲೇ ಕೊಡಲು ಶುರು ಮಾಡಿ ಎಂದು ಸಿದ್ದರಾಮಯ್ಯ ಸೂಚಿಸಿದರು.

ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ಮಾಡಿ:ಅಧಿಕಾರಿಗಳಿಗೆ ಸಿಎಂ ಕಡಕ್ ಸೂಚನೆ Read More

ಬಸ್ ದರ ಏರಿಕೆ ವಿರುದ್ಧ ವಿಶಿಷ್ಟ ಪ್ರತಿಭಟನೆ ಮಾಡಿದ ಆಮ್ ಆದ್ಮಿ ಪಕ್ಷ

ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ಬಸ್ ದರ ಶೇ 15 ರಷ್ಟು ಏರಿಕೆ ಮಾಡಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ವಿಶಿಷ್ಯ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಪ್ ನೂರಾರು ಕಾರ್ಯಕರ್ತರು ಎತ್ತಿನ ಬಂಡಿ ಎಳೆಯುವ ಮೂಲಕ ತೀವ್ರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಸರ್ಕಾರದ ಎತ್ತಿನ ಬಂಡಿ ಗ್ಯಾರಂಟಿ , ಸರ್ಕಾರ ಜಾಲಿ ಜಾಲಿ, ಜನರ ಜೇಬು ಖಾಲಿ ಖಾಲಿ ಎಂದು ಚಪ್ಪಾಳೆ ತಟ್ಟುತ್ತಾ ಹಾಡುತ್ತಾ ಘೋಷಣೆ ಕೂಗಿ ವಿಶಿಷ್ಟ ವಾಗಿ ಹೋರಾಟ ನಡೆಸಿ ಸರ್ಕಾರದ ಕ್ರಮವನ್ನು ವಿರೋಧಿಸಿದರು.

ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಆಮ್ ಆದ್ಮಿ ಪಕ್ಷದ ಗ್ಯಾರೆಂಟಿಗಳನ್ನು ನಕಲು ಮಾಡಿ ಅಧಿಕಾರ ಹಿಡಿದಿದೆ ಎಂದು ಟೀಕಿಸಿದರು.

ಈ ಸರ್ಕಾರಕ್ಕೆ ಭ್ರಷ್ಟಾಚಾರ ನಿಲ್ಲಿಸದೆ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡಲಾಗುತ್ತಿಲ್ಲ.ಅದಕ್ಕಾಗಿ ದರ ಏರಿಕೆ ಮಾಡುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಎರಡು ಬಜೆಟ್ ಗಳಲ್ಲಿ 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ.ಈ ದುಡ್ಡು ಯಾರ ಜೇಬು ಸೇರುತ್ತಿದೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಸ್ಟ್ಯಾಂಪ್ ಡ್ಯೂಟಿ, ಅಬಕಾರಿ ಸುಂಕ, ವಿದ್ಯುತ್ ದರ, ಹಾಲಿನ ದರ ಎಲ್ಲವನ್ನು ಗಗನಕ್ಕೆ ಮುಟ್ಟಿಸಿದ್ದಾರೆ. ಈಗ ಬಸ್ ದರ ಏರಿಸಿದ್ದಾರೆ, ಮುಂದಿನ ದಿನಗಳಲ್ಲಿ ನೀರಿನ ದರವನ್ನು ಏರಿಸಲಿದ್ದಾರೆ, ಜನ ಪರ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರವು ಆರ್ಥಿಕ ದಿವಾಳಿಯಾಗುವ ಹಂತಕ್ಕೆ ತಲುಪಿರುವ ಅನುಮಾನ ಜನತೆಯಲ್ಲಿ ಕಾಡುತ್ತಿದೆ ಎಂದು‌ ತಿಳಿಸಿದರು.

ಬಸ್ ದರ ಏರಿಕೆಯನ್ನು ಕೂಡಲೇ ಹಿಂಪಡೆಯದಿದ್ದಲ್ಲಿ ಪಕ್ಷವು ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತದೆ ಎಂದು ಚಂದ್ರಶೇಖರ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರುಗಳಾದ ನಂಜಪ್ಪ ಕಾಳೇಗೌಡ, ಲೋಹಿತ್, ಗೋಪಾಲ್ ,ಸುರೇಶ್ ,
ಡಾ. ಕೇಶವ್, ವೀಣಾ , ಭಾನುಪ್ರಿಯ, ಪುಷ್ಪ ಕೇಶವ್, ಶಶಿಧರ ಆರಾಧ್ಯ, ಅಶೋಕ್ ಮೃತ್ಯುಂಜಯ, ನವೀನ್,ಪುಟ್ಟಣ್ಣ, ಮುನೇಶ್ ಸರವಣ , ಶಾಶವಲಿ ಸೇರಿದಂತೆ ‌ಪಕ್ಷದ ಅನೇಕ ನಾಯಕರು ಭಾಗವಹಿಸಿದ್ದರು.

ಬಸ್ ದರ ಏರಿಕೆ ವಿರುದ್ಧ ವಿಶಿಷ್ಟ ಪ್ರತಿಭಟನೆ ಮಾಡಿದ ಆಮ್ ಆದ್ಮಿ ಪಕ್ಷ Read More