ಜೈಲುಗಳನ್ನು ಐಷಾರಾಮಿ ಲಾಡ್ಜ್ ಗಳಾಗಿಸಿದೆ:ಸರ್ಕಾರದ ವಿರುದ್ಧ ರಾಕೇಶ್ ಗೌಡ ಕಿಡಿ
ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿದ ಕಾಂಗ್ರೆಸ್ ಸರ್ಕಾರ ಜೈಲುಗಳನ್ನು ಐಷಾರಾಮಿ ಲಾಡ್ಜ್ ಗಳನ್ನಾಗಿಸಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲ್ ಉಗ್ರರಿಗೆ, ಕೊಲೆಗಡುಕರಿಗೆ, ಅತ್ಯಾಚಾರಿಗಳಿಗೆ ಸ್ಲೀಪರ್ ಸೆಲ್ ಆಗಿ, ಮೋಜು ಮಸ್ತಿಯ ತಾಣವಾಗಿರುವುದು ಗಾಢ ನಿದ್ರೆಯಲ್ಲಿರುವ ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಪರಪ್ಪನ ಅಗ್ರಹಾರದ ಜೈಲು ಇಂದು ಕಾನೂನು ಬಾಹಿರ ಚಟುವಟಿಕೆಗಳ ಕೇಂದ್ರವಾಗಿದೆ. ದೇಶದ್ರೋಹಿಗಳು, ಉಗ್ರಗಾಮಿಗಳು, ರೇಪಿಸ್ಟ್‌ಗಳು, ಸ್ಮಗ್ಲರ್‌ಗಳು ಎಲ್ಲರೂ ಅಲ್ಲಿ ಐಷಾರಾಮಿ ಸೌಲಭ್ಯಗಳನ್ನು ಪಡೆದು ನೆಮ್ಮದಿಯಿಂದ ಬಾಳುತ್ತಿದ್ದಾರೆ. ಮನಃಪರಿವರ್ತನ ಕೇಂದ್ರಗಳಾಗಬೇಕಾಗಿದ್ದ ಕಾರಾಗೃಹಗಳು, ಉಗ್ರರಿಗೆ ಕ್ಲಬ್ ಗಳಾಗಿ ಪರಿವರ್ತನೆಯಾಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಎಲ್ಲಾದಕ್ಕೂ ಗೊತ್ತಿಲ್ಲ, ತನಿಖೆ ಮಾಡ್ತೀವಿ, ವರದಿ ತರಿಸಿಕೊಳ್ತೀವಿ ಎನ್ನುವ ಗೃಹ ಸಚಿವರು ಜಾಣ ಮೌನ ವಹಿಸಿದ್ದಾರೆ. ಅದ್ಯಾವುದೂ ಪರಿವೇ ಇಲ್ಲ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖುರ್ಚಿಗಾಗಿ ಜಗಳ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಕುಂಬಕರ್ಣ ನಿದ್ರೆಯಿಂದ ಎಚ್ಚೆತ್ತು ಈಗಲಾದರೂ ಪರಪನ ಅಗ್ರಹಾರದಲ್ಲಿ ನಡೆಯುತ್ತಿರುವ ಮೋಜು ಮಸ್ತಿಗೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ರಾಕೇಶ್ ಗೌಡ ಆಗ್ರಹಿಸಿದ್ದಾರೆ.
ಜೈಲುಗಳನ್ನು ಐಷಾರಾಮಿ ಲಾಡ್ಜ್ ಗಳಾಗಿಸಿದೆ:ಸರ್ಕಾರದ ವಿರುದ್ಧ ರಾಕೇಶ್ ಗೌಡ ಕಿಡಿ Read More