ನಾಯಕತ್ವ ಬದಲಾವಣೆ ಮಾಡಿದರೆ ರಾಜ್ಯದಲ್ಲೂ ಬಿಹಾರ ಪರಿಸ್ಥಿತಿ: ಸುಬ್ರಹ್ಮಣ್ಯ ಎಚ್ಚರಿಕೆ

ಮೈಸೂರು: ನುಡಿದಂತೆ ನಡೆದು ಸುಭಿಕ್ಷ ಆಡಳಿತ ನಡೆಸತ್ತಿರುವ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾಯಿಸಿದರೆ ಕರ್ನಾಟಕದಲ್ಲೂ ಮುಂದೆ ಬಿಹಾರದ ಪರಿಸ್ಥಿತಿ ಬರಬಹುದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಎಚ್ಚರಿಸಿದ್ದಾರೆ.

ಒಂದು‌ ವೇಳೆ ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಅಹಿಂದ ವರ್ಗ ಕೈ ಬಿಡಬಹುದು ಎಂದು ಬಿ.ಸುಬ್ರಹ್ಮಣ್ಯ ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನ ಕೇವಲ ಎರಡೂವರೆ ವರ್ಷಕ್ಕೆ ಮುಖ್ಯ ಮಂತ್ರಿ ಎಂದು ಹೈಕಮಾಂಡ್ ಆಯ್ಕೆ ಮಾಡಿಲ್ಲ. ಆದರೂ ಕೆಲ ನಾಯಕರು ಈ ಬಗ್ಗೆ ಇಲ್ಲ ಸಲ್ಲದ್ದನ್ನ ಚರ್ಚಿಸುತ್ತಿದ್ದಾರೆ.ಇದು ಮುಂದೆ ಗ್ರೇಟರ್ ಬೆಂಗಳೂರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ.

ಹಿಂದಿನ ಸರ್ಕಾರದ ದುರಾಡಳಿತದಿಂದ ಕರ್ನಾಟಕದ ಹಣಕಾಸು ಪರಿಸ್ಥಿತಿ ಹೀನಾಯವಾಗಿತ್ತು. ಅದಕ್ಕೆ 2023ರ ಚುನಾವಣೆಯಲ್ಲಿ ಜನ ಬುದ್ದಿ ಕಲಿಸಿದ್ದಾರೆ, ಈಗ ಸಿದ್ದರಾಮಯ್ಯ ಅವರು 5 ಗ್ಯಾರಂಟಿಗಳನ್ನ ಕರ್ನಾಟಕದ ಜನತೆಗೆ ಪೂರೈಸಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸದೃಢ ಸರ್ಕಾರ ನಡೆಸುತ್ತಿದ್ದಾರೆ.ಇದೀಗ ನಾಯಕತ್ವದಿಂದ ಬದಲಾವಣೆ ಮಾಡಿದರೆ ಅಹಿಂದ ವರ್ಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಜೊತೆಗೆ ಕರ್ನಾಟಕದಲ್ಲೂ ಬಿಹಾರದ ಪರಿಸ್ಥಿತಿ ಎದುರಾಗುತ್ತದೆ ಎಂದು ಸುಬ್ರಮಣ್ಯ ಭವಿಷ್ಯ ನುಡಿದಿದ್ದಾರೆ

ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರಿಬ್ಬರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತ ಹೇಳಿದ್ದಾರೆ. ನಾಯಕತ್ವ ಬದಲಾವಣೆಯನ್ನ ಬೆರಳೆಣಿಕೆಯಷ್ಟು ನಾಯಕರು ಮಾತ್ರ ಬಯಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಕೈ ಹಿಡಿದಿರೋದು ಅಹಿಂದ ವರ್ಗ ಅನ್ನೋದನ್ನ ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ಸಿದ್ದರಾಮಯ್ಯ ಅವರನ್ನ ಬದಲಾವಣೆ ಮಾಡಿದ್ರೆ ಅಹಿಂದ ವರ್ಗ ಕೈ ಬಿಡುವ ಸಾಧ್ಯತೆ ಇದೆ. ಮುಂದೆ ಇದರ ಪಶ್ಚಾತಾಪ ಎದುರಿಸಬೇಕಾಗುತ್ತದೆ ಸುಬ್ರಮಣ್ಯ ಸೂಚ್ಯವಾಗಿ ಹೇಳಿದ್ದಾರೆ.

ಹಾಲು ಕೆಟ್ಟರೂ ಹಾಲು ಮತ ಕೆಡುವುದಿಲ್ಲ ಎಂಬ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಮೊದಲು ಹಾಲುಮತದ ತತ್ವವನ್ನ ಅರ್ಥ ಅಳವಡಿಸಿಕೊಳ್ಳಿ ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ನಿಂದಲೇ ನೀವು ಸಂಸದರಾಗಿದ್ದು ಎಂಬುದನ್ನ ಮರೆತುಬಿಟ್ರಾ? ಕೊನೆಗೆ ಬಿಜೆಪಿ ಸೇರಿಕೊಂಡಿದ್ದೀರಿ, ಪಕ್ಷದ ವಿರುದ್ಧವೇ ಮಾತನಾಡಿದ್ರಿಂದ ಅವರೂ ನಿಮ್ಮನ್ನ ಬದಿಗಿಟ್ಟಿದ್ದಾರೆ ಎಂದು ವ್ಯಂಗ್ಯ ವಾಡಿದ್ದಾರೆ.

ಸಿದ್ದರಾಮಯ್ಯ ಅವರು ಯಾವುದೇ ಮೂಢನಂಬಿಕೆ ನಂಬುವುದಿಲ್ಲ ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ. ಆದರೂ ನೀವು ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದೀರಿ. ಸಿದ್ದರಾಮಯ್ಯ ಡಿ.ಕೆ ಬ್ರದರ್ಸ್ ತಲೆ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದ್ದಾರೆ ಅಂತ ಜನರ ಕಿವಿಗೆ ಹೂ ಇಡಲು ಹೊರಟಿದ್ದೀರಿ. ಇದು ನಿಮಗೆ ಶೋಭೆ ತರುವುದಿಲ್ಲ. ನಿಮ್ಮ ಹೇಳಿಕೆಗಳನ್ನ ನೋಡಿದರೆ ನೀವೇ ಹಾಲುಮತ ಸಮಾಜವನ್ನ ತುಳಿಯಲು ಹೊರಟಿದ್ದೀರಿ ಅನ್ನುವಂತೆ ಕಾಣುತ್ತದೆ ಎಂದು‌ ಬಿ ಸುಬ್ರಹ್ಮಣ್ಯ ವಾಗ್ದಾಳಿ ನಡೆಸಿದ್ದಾರೆ.

ನಾಯಕತ್ವ ಬದಲಾವಣೆ ಮಾಡಿದರೆ ರಾಜ್ಯದಲ್ಲೂ ಬಿಹಾರ ಪರಿಸ್ಥಿತಿ: ಸುಬ್ರಹ್ಮಣ್ಯ ಎಚ್ಚರಿಕೆ Read More

ಬಿಹಾರ ಕಳ್ಳಭಟ್ಟಿ ದುರಂತ: 25 ಮಂದಿ ದುರ್ಮರಣ

ಪಾಟ್ನಾ: ಬಿಹಾರದ ಸರನ್ ಮತ್ತು ಸಿವಾನ್ ಜಿಲ್ಲೆಗಳಲ್ಲಿ ಕಳ್ಳಭಟ್ಟಿ ಸೇವಿಸಿ 25 ಮಂದಿ ದುರ್ಮರಣ ಹೊಂದಿದ್ದಾರೆ.

ಈ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಸ್ಟ್ರಿಯಲ್ ಸ್ಪಿರಿಟ್‌ನೊಂದಿಗೆ ಮಿಥೈಲ್ ಆಲ್ಕೋಹಾಲ್ ಬೆರೆಸಿರುವ ಮದ್ಯವೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಪರಿಸ್ಥಿತಿಯ ತೀವ್ರತೆಯನ್ನರಿತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಡಿಜಿಪಿ ಅಲೋಕ್ ರಾಜ್ ಮತ್ತು ಅಬಕಾರಿ ಮತ್ತು ನಿಷೇಧ ಇಲಾಖೆಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಎಲ್ಲಾ ಉನ್ನತ ಅಧಿಕಾರಿಗಳಿಗೆ ಖುದ್ದು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವಂತೆ ತಿಳಿಸಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡಿಜಿಪಿಗೆ ಸೂಚನೆ ನೀಡಿದ್ದಾರೆ.

ಅಕ್ರಮ ಮದ್ಯ ಸೇವಿಸಿ ಒಟ್ಟು 25 ಮಂದಿ ಸಾವಿಗೀಡಾಗಿದ್ದಾರೆ,ಈ ದುರಂತದಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಅಲೋಕ್ ರಾಜ್‌ ತಿಳಿಸಿದ್ದಾರೆ.

49 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಸಿವಾನ್‌ನ ಭಗವಾನ್‌ಪುರ, ಮಧಾರ್, ಖೈರಾ ಮತ್ತು ಕೌಡಿಯಾದಲ್ಲಿ 20 ಜನರು ಸಾವಿಗೀಡಾಗಿದ್ದು, ಸರನ್‌ನಲ್ಲಿ ಐದು ಜನರು ಮೃತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬಿಹಾರ ಕಳ್ಳಭಟ್ಟಿ ದುರಂತ: 25 ಮಂದಿ ದುರ್ಮರಣ Read More