ಡಿ.ಕೆ.ಶಿ ಭೇಟಿಯಾದ ಖ್ಯಾತ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್

ಬೆಳಗಾವಿ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖ್ಯಾತ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದರು.

ವೆಂಕಟೇಶ್ ಪ್ರಸಾದ್ ಅವರು ಡಿ.ಕೆ.ಶಿವಕುಮಾರ್ ಅವರನ್ನು
ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಬುಧವಾರ ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಈ ವೇಳೆ ಕಾರ್ಯದರ್ಶಿ ಸಂತೋಷ್ ಮೆನನ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಮತ್ತಿತರರು ವೆಂಕಟೇಶ್ ಪ್ರಸಾದ್ ಗೆ ಸಾಥ್ ನೀಡಿದರು.

ಡಿ.ಕೆ.ಶಿ ಭೇಟಿಯಾದ ಖ್ಯಾತ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ Read More

ಸುವರ್ಣಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಪೊಲೀಸ್ ವಶಕ್ಕೆ

ಬೆಳಗಾವಿ: ರಾಜ್ಯ ಸರಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿಗರು ಬೃಹತ್ ಪ್ರತಿಭಟನೆ ನಡೆಸಿದರು.
ಮೊದಲಿಗೆ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಬೃಹತ್ ಸಮಾವೇಶ ನಡೆಸಿದ ಬಿಜೆಪಿ ನಾಯಕರು ನಂತರ ಬೃಹತ್ ರ‌್ಯಾಲಿ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಬಿಗಿ ಪೊಲೀಸ್ ಬಂದೊಬಸ್ತ್ ಮಾಡಿರುವುದರಿಂದ ಮುತ್ತಿಗೆ ಯತ್ನ ವಿಫಲವಾಯಿತು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ,ಅಶೋಕ ಸೇರಿದಂತೆ ನೂರಾರು ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈತ ವಿರೋಧಿ ಸರಕಾರ ಎಂದು ದಿಕ್ಕಾರ ಕೂಗುತ್ತಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ವೇಳೆ ಹೈಡ್ರಾಮಾನೆ ಸೃಷ್ಟಿಯಾಯಿತು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಬಿಜೆಪಿ ನಾಯಕರ ನಡುವೆ ತೀವ್ರ ವಾಗ್ವಾದ ನಡೆಯಿತು.
ಶಾಸಕರಾದ ಚಲವಾದಿ ರವಿಕುಮಾರ್, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ ಸೇರಿ 50ಕ್ಕೂ ಹೆಚ್ಚು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಸುವರ್ಣಸೌಧ ಮುತ್ತಿಗೆ ಹಾಕುವ ಮುನ್ನ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅತೀವೃಷ್ಟಿ, ಬೆಳೆ ಹಾನಿಗೆ ರಾಜ್ಯ ಸರಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಬೆಳೆ ಪರಿಹಾರವನ್ನು ತಕ್ಷಣ ರೈತರಿಗೆ ಕೊಡಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರಿಗೆ ಹೆಚ್ಚು ದರ ಕೊಡಿ ಕಬ್ಬು ಬೆಳೆಗೆ ಎಫ್‌ಆರ್‌ಪಿ ನಿಗದಿ ಮಾಡಿದ್ದರೂ, ಆ ದರಕ್ಕಿಂತ ಹೆಚ್ಚಿನ ದರ ನೀಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇದೆ. ಕಬ್ಬು ಬೆಳೆಗಾರರಿಗೆ ಹೆಚ್ಚು ದರ ಕೊಡಲು ನಿಮಗೆ ಏನು ಕಷ್ಟ ಎಂದು ಆಕ್ರೋಶದಿಂದ ವಿಜಯೇಂದ್ರ ಪ್ರಶ್ನಿಸಿದರು.

ಈ ಹಿಂದೆ ಯಡಿಯೂರಪ್ಪ ಅವರು ರೈತರು ಸಂಕಷ್ಟದಲ್ಲಿದ್ದಾಗ ಅವರೊಂದಿಗೆ ಇರುತ್ತಿದ್ದರು. ಅದೇ ರೀತಿ ನಾನು ಹಾಗೂ ನಮ್ಮ ಪಕ್ಷವು ಯಾವಾಗಲೂ ರೈತರ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.

ಸುವರ್ಣಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಪೊಲೀಸ್ ವಶಕ್ಕೆ Read More

ಡಿಕೆಶಿಯನ್ನು ಸಿಎಂ ಎಂದು ಬರೆದಚನ್ನರಾಜ ಹಟ್ಟಿಹೊಳಿ!

ಬೆಳಗಾವಿ: ಡಿ ಕೆ.ಶಿವಕುಮಾರ್ ಮುಖ್ಯ ಮಂತ್ರಿ ಆಗ್ತಾರೋ ಬಿಡ್ತಾರೊ ಗೊತ್ತಿಲ್ಲ.ಆದರೆ ಬಗೆಗೆ ದಿನಕ್ಕೊಂದು ಹೇಳಿಕೆಗಳು ಚರ್ಚೆ ಹುಟ್ಟು ಹಾಕುತ್ತಿರುವುದಂತೂ ಸತ್ಯ.

ಬೆಳಗಾವಿ ಅಧಿವೇಶನದ ಎರಡನೇ ದಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿಸಿಎಂ ಡಿ.‌ಕೆ. ಶಿವಕುಮಾರ್ ಅವರ ಕುರಿತು ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮುಖ್ಯಮಂತ್ರಿ ಎಂದು ಹೇಳಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

ಚನ್ನರಾಜ ಹಟ್ಟಿಹೊಳಿ ಜಾಲತಾಣದಲ್ಲಿ ಈ ರೀತಿ ಬರೆದುಕೊಂಡಿದ್ದು ಆಕಸ್ಮಿಕವಾಗಿ ಏನಲ್ಲ, ಜಾಣತನ ತೋರಿದ್ದಾರೆ ಎಂದು ರಾಜಕೀಯ ನಾಯಕರು ಮಾತನಾಡುತ್ತಿದ್ದಾರೆ.

ಡಿ.‌ಕೆ. ಶಿವಕುಮಾರ್ ಬಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಅವರ ಸಹೋದರ ಗುರುತಿಸಿಕೊಂಡು ಡಿಕೆಶಿ ಮುಖ್ಯಮಂತ್ರಿ ಗಾದಿಗೆ ಸಪೋರ್ಟ್ ನೀಡುತಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣದ ತಮ್ಮ ಬರಹವನ್ನು ನಂತರ ಬದಲಾಯಿಸಿರುವ ಚನ್ನರಾಜ ಹಟ್ಟಿಹೊಳಿ ನಂತರ ಉಪ ಮುಖ್ಯಮಂತ್ರಿ ಎಂದು ಬರೆದುಕೊಂಡು ತೇಪೆ ಹಾಕಿದ್ದಾರೆ.
ಆದರೆ ಅವರು ಒಮ್ಮೆ ಬರೆದದ್ದು ವೈರಲ್ ಆಗಿಬಿಟ್ಟಿದೆ!

ಡಿಕೆಶಿಯನ್ನು ಸಿಎಂ ಎಂದು ಬರೆದಚನ್ನರಾಜ ಹಟ್ಟಿಹೊಳಿ! Read More

ಏನ್‌ ಸಣ್ಣ ಅಗಿದ್ಯಾ; ಅಶೋಕ್ ಗೆ ಕಿಚಾಯಿಸಿದ ಸಿದ್ದರಾಮಯ್ಯ

ಬೆಳಗಾವಿ: ಏನ್‌ ಅಶೋಕ ಸಣ್ಣ ಅಗಿದಿಯಲ್ಲಾ…ಹೀಗೆ ಕಿಚಾಯಿಸಿದ್ದು ಸಿಎಂ ಸಿದ್ದರಾಮಯ್ಯ.
ಚಳಿಗಾಲದ ಅಧಿವೇಶನ ಆರಂಭಕ್ಕೂ ಮೊದಲು ಸ್ಪೀಕರ್ ಕೊಠಡಿಯಲ್ಲಿ ಸಿದ್ದರಾಮಯ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಅಶೋಕ್, ಸುನೀಲ್ ‌ಕುಮಾರ್ ಮುಖಾಮುಖಿಯಾದ ವೇಳೆ ಮುಖ್ಯ ಮಂತ್ರಿಗಳು ರೇಗಿಸಿದರು.
ಸಿಎಂ ಬರುವ ಮುಂಚೆಯೇ ಸ್ಪೀಕರ್ ಖಾದರ್‌ ಅವರನ್ನು ಅಶೋಕ್, ಸುನೀಲ್ ‌ಕುಮಾರ್ ಭೇಟಿಯಾಗಿದ್ದರು. ಈ ವೇಳೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಕೈಕುಲುಕಿ ವಿಪಕ್ಷ ನಾಯಕರು ಶುಭ ಕೋರಿದರು.
ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ ಎಂದು ನಗುನಗುತ್ತಲೇ ಸಿಎಂ ರೇಗಿಸಿದರು.ಆಗ ಇಬ್ಬರು ನಾಯಕರು ಉತ್ತರ ನೀಡದೇ ನಕ್ಕಿದರು.
ಅಶೋಕ್‌ ಅವರಿಗೆ ಸಿದ್ದರಾಮಯ್ಯ, ಏನ್ ಸಣ್ಣ ಆಗಿದ್ದೀಯಾ ಅಶೋಕ್ ಎಂದು ಕಿಚಾಯಿಸಿದರು. ಅದಕ್ಕೆ ನಿಮ್ಮ ಥರ ನಾಟಿ ಕೋಳಿ ತಿನ್ನಲ್ಲ ಸರ್, ನಾನು ಎಲ್ಲವನ್ನು ಬಿಟ್ಟಿದ್ದೀನಿ ಎಂದು ನಗುತ್ತಲೇ ಟಾಂಗ್ ನೀಡಿದರು.
ಅದಕ್ಕೆ ಸಿಎಂ, ಹೇ.. ತಿನ್ನು ಏನೂ ಆಗಲ್ಲ. ಬಾ ತಿನ್ನೋಣ ಎಂದು ಕರೆದರು. ಇದಕ್ಕೆ ಅಶೋಕ್‌ ನಗುತ್ತಾ ಮುಂದೆ ಸಾಗಿದರು.

ಏನ್‌ ಸಣ್ಣ ಅಗಿದ್ಯಾ; ಅಶೋಕ್ ಗೆ ಕಿಚಾಯಿಸಿದ ಸಿದ್ದರಾಮಯ್ಯ Read More

ಬೆಳಗಾವಿ ವಿಧಾನ ಮಂಡಲ ಅಧಿವೇಶನ:ಮಾಧ್ಯಮ ಕೇಂದ್ರ ಸ್ಥಾಪನೆ

ಬೆಳಗಾವಿ: ಸೋಮವಾರ ದಿಂದ ಡಿ.19 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಮಾಧ್ಯಮ ಪ್ರತಿನಿಧಿಗಳ ಕರ್ತವ್ಯ ನಿರ್ವಹಣೆಗಾಗಿ ಸುವರ್ಣ ವಿಧಾನಸೌಧದ 2ನೇ ಮಹಡಿಯಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ಸ್ಥಾಪನೆ ಮಾಡಲಾಗಿದೆ.
80 ಕ್ಕೂ ಅಧಿಕ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಹೈ ಸ್ಪೀಡ್ ಇಂಟರ್ನೆಟ್ ಹಾಗೂ ವೈ ಫೈ ಸೌಲಭ್ಯ ಕಲ್ಪಿಸಲಾಗಿದೆ.
ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಕಾರ್ಯ ಕಲಾಪಗಳ ನೇರಪ್ರಸಾರಕ್ಕೆ ಕೂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ರಾಷ್ಟ್ರ ಮತ್ತು ರಾಜ್ಯಮಟ್ಟದ ಮಾಧ್ಯಮ ಸಂಸ್ಥೆಗಳು ಸೇರಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಅರ್ಹ ಮಾಧ್ಯಮ ಸಂಸ್ಥೆಗಳ ನೋಂದಾಯಿತ ಪ್ರತಿನಿಧಿಗಳಿಗೆ ಜಿಲ್ಲಾಡಳಿತದ ಸಹಯೋಗದಲ್ಲಿ ವಸತಿ,ಉಟೋಪಹಾರ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ತಿಳಿಸಿದ್ದಾರೆ

ಬೆಳಗಾವಿ ವಿಧಾನ ಮಂಡಲ ಅಧಿವೇಶನ:ಮಾಧ್ಯಮ ಕೇಂದ್ರ ಸ್ಥಾಪನೆ Read More

ಚಳಿಗಾಲದ ಅಧಿವೇಶನ:ಸರ್ಕಾರಕ್ಕೆ ಪ್ರತಿಭಟನೆ ಬಿಸಿ-ಸ್ಥಳ ವೀಕ್ಷಿಸಿದ ಪೊಲೀಸರು

ಬೆಳಗಾವಿ: ಸೋಮವಾರದಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದ ವೇಳೆ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.
ಸುವರ್ಣಸೌಧದ ಬಳಿ
ಡಿಸೆಂಬರ್ 9 ರಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದ್ದು, ನಗರ ಪೊಲೀಸರು ಬಿಜೆಪಿ‌ ಮುಖಂಡರೊಂದಿಗೆ ಸ್ಥಳ ಪರಿಶೀಲಿಸಿದರು.
ರೈತರ ಜಟಿಲ ಸಮಸ್ಯೆಗಳು ಹಾಗೂ ಉತ್ತರ ಕರ್ನಾಟಕ ಭಾಗದ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ಬಿಜೆಪಿ ಒತ್ತಾಯಿಸಿ ಸುವರ್ಣಸೌಧ ಮುತ್ತಿಗೆ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ.
ಪ್ರತಿಭಟನೆ ನಡೆಯಲಿರುವ ಸ್ಥಳಕ್ಕೆ ಬೆಳಗಾವಿ ನಗರ ಡಿಸಿಪಿ ಬಾರಾಯಣ ಭರಮನಿ ಹಾಗೂ ಹಿರಿಯ ಅಧಿಕಾರಿಗಳು ಮತ್ತು
ಬಿಜೆಪಿ ನಾಯಕರು ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು.
ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬೆಳಗಾವಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ ಹಾಜರಿದ್ದರು.

ಚಳಿಗಾಲದ ಅಧಿವೇಶನ:ಸರ್ಕಾರಕ್ಕೆ ಪ್ರತಿಭಟನೆ ಬಿಸಿ-ಸ್ಥಳ ವೀಕ್ಷಿಸಿದ ಪೊಲೀಸರು Read More

ಉಸಿರುಗಟ್ಟಿ ಮೂವರು ಯುವಕರು ಸಾವು

ಬೆಳಗಾವಿ: ಹೊಗೆಯಿಂದ ಉಸಿರುಗಟ್ಟಿ
ಮೂವರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ
ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ.

ರಾತ್ರಿ ರೂಮ್​​ನಲ್ಲಿ ಮಲಗಿದ್ದ ನಾಲ್ವರು ಯುವಕರಲ್ಲಿ ಮೂವರು ಯುವಕರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ರಿಹಾನ್ ಮತ್ತಿ(22), ಸರ್ಫರಾಜ್(22), ಮೊಯಿನ್‌ ನಲಬಂದ್‌(22) ಮೃತಪಟ್ಟ‌ ದುರ್ದೈವಿಗಳು.

ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಶವ ಪರೀಕ್ಷೆ ನಡೆಸಿ,ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ರಾತ್ರಿ ನಾಮಕರಣ ಕಾರ್ಯಕ್ರಮ ಮುಗಿಸಿಕೊಂಡು ನಾಲ್ವರು ಯುವಕರು ಬಂದಿದ್ದಾರೆ. ಬಹಳ ಚಳಿ ಇದ್ದ ಕಾರಣ ರೂಮ್‌ನಲ್ಲಿ ಬೆಂಕಿ ಹಾಕಿಕೊಂಡು ಮಲಗಿದ್ದಾರೆ.ಜತೆಗೆ ಸೊಳ್ಳೆ ಕಾಟ‌ ತಪ್ಪಿಸಲು ನಾಲ್ಕೈದು ಮಸ್ಕಿಟೋ ಕಾಯಿಲ್ ಹಾಕಿ ಮಲಗಿದ್ದಾರೆ.

ಕಿಟಕಿಗಳನ್ನು ಬಂದ್ ಮಾಡಿದ್ದರಿಂದ‌ ಹೊಗೆ ಹೊರಹೋಗಲು ಸಾಧ್ಯವಾಗದೆ ಇಡೀ ಕೊಠಡಿ ತುಂಬಾ ಹೊಗೆ ಆವರಿಸಿ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಉಸಿರುಗಟ್ಟಿ ಮೂವರು ಯುವಕರು ಸಾವು Read More

ಪೊಲೀಸರ ಮೇಲೆ ಹಲ್ಲೆ:11 ಮಂದಿ ವಿರುದ್ಧ ‌ಎಫ್ಐಆರ್

ಬೆಳಗಾವಿ: ಕಬ್ಬು ಬೆಳೆಗಾರರು ಬೆಳಗಾವಿಯ ಹತ್ತರಗಿ, ರಾಷ್ಟ್ರೀಯ ಹೆದ್ದಾರಿ 4ರ ಟೋಲ್ ನಾಕಾ ಬಳಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪಿಎಸ್ಐ ಆರ್.ವಿ.ಪಾಟೀಲ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನೆ ವೇಳೆ ಪೊಲೀಸರ ಮೇಲೆ ದುರುದ್ದೇಶದಿಂದ ಕಲ್ಲು ತೂರಾಟ ನಡೆಸಿ, ಪೊಲೀಸರನ್ನು ಒದ್ದು ಹಲ್ಲೆ ನಡೆಸಲಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಯಮಕನಮರಡಿ ಠಾಣೆಯಲ್ಲಿ 11 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪೊಲೀಸರ ಮೇಲೆ ಹಲ್ಲೆ:11 ಮಂದಿ ವಿರುದ್ಧ ‌ಎಫ್ಐಆರ್ Read More

ಹೆದ್ದಾರಿ ತಡೆದು ತೀವ್ರ ಆಕ್ರೋಶ‌ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರು

ಬೆಳಗಾವಿ: ಪ್ರತಿ ಟನ್‌ ಕಬ್ಬಿಗೆ 3,500 ರೂ. ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಬೆಳಗಾವಿ ಸಮೀಪದಲ್ಲಿರುವ ಹತ್ತರಗಿ ಹೆದ್ದಾರಿ ತಡೆದು ತೀವ್ರ ಆಕ್ರೋಶ‌ ವ್ಯಕ್ತಪಡಿಸಿದರು.

ಹೆದ್ದಾರಿಯನ್ನು ಬಂದ್ ಮಾಡಿ ಘೋಷಣೆ ಕೂಗಲಾರಂಭಿಸಿದ ಕಬ್ಬು ಬೆಳೆಗಾರರು ಸಾವಿರಾರು ಸಂಖ್ಯೆಯಲ್ಲಿ ಇಡೀ ರಸ್ತೆಯನ್ನು ಆವರಿಸಿಕೊಂಡಿದ್ದರು.

ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಸವಾರರು ಕೂಡಾ ಪರದಾಡಬೇಕಾಯಿತು.
ಪೊಲೀಸರು ಬೆಳೆಗಾರರನ್ನು ತೆರವುಗೊಳಿಸಲು ಹರಸಾಹಸ‌ ಪಡಬೇಕಾಯಿತು.

ನ್ಯಾಯಯುತವಾದ ದರ ಸಿಗದೆ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಕೂಡ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಶೀಘ್ರ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ನಾವು ಹೋರಾಟ ಮಾಡುತ್ತಿದ್ದರೂ ಕೂಡ ಯಾವೊಬ್ಬ ಜನಪ್ರತಿನಿಧಿ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿ ತಡೆದು ತೀವ್ರ ಆಕ್ರೋಶ‌ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರು Read More

ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರಿಗೆ ಆತಂಕ-ಸಿಎಂ‌ ಟಾಂಗ್

ಬೆಳಗಾವಿ: ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರನ್ನು ಆತಂಕಗೊಳಿಸಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದರು.

ಬೆಳಗಾವಿಯಲ್ಲಿ ಇಂದು ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಉದ್ಘಾಟನೆ ನೆರವೇರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ, ಗ್ಯಾರಂಟಿಗಳನ್ನು ತಪ್ಪದೇ ನೀಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಎನ್ ಡಿ ಆರ್ ಎಫ್ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಎನ್ ಡಿ ಆರ್ ಎಫ್ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರು ಕಾಮಾಲೆ ಕಣ್ಣಿನಿಂದ ಎಲ್ಲವನ್ನೂ ನೋಡುತ್ತಿದ್ದು, ಗ್ಯಾರಂಟಿ ಯೋಜನೆಗಳ ಯಶಸ್ಸು ಅವರಲ್ಲಿ ಆತಂಕವನ್ನುಂಟು ಮಾಡಿದೆ ಅದಕ್ಕೆ ಏನೇನೊ ಹೇಳುತ್ತಾರೆ ಎಂದು ಟಾಂಗ್ ನೀಡಿದರು.

ನಮ್ಮ ಗ್ಯಾರಂಟಿಗಳನ್ನು ಬಿಹಾರ , ದೆಹಲಿ, ಮಹಾರಾಷ್ಟ್ರ, ಮದ್ಯಪ್ರದೇಶ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳವರು ಅನುಕರಿಸಿದ್ದಾರೆ. ಪ್ರಧಾನಿ ಮೋದಿಯವರು , ಗ್ಯಾರಂಟಿಗಳ ಅನುಷ್ಠಾನ ಸಾಧ್ಯವೇ ಇಲ್ಲ ಎಂದಿದ್ದರು. ಆದರೆ ಕಾಂಗ್ರೆಸ್ ಸರ್ಕಾರ , ನುಡಿದಂತೆ ನಡೆದು ಗ್ಯಾರಂಟಿಗಳನ್ನು ತಪ್ಪದೇ ನೀಡುತ್ತಿದೆ ಎಂದು ತಿಳಿಸಿದರು.

ಬೆಳಗಾವಿಯ ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು 2017 ರಲ್ಲಿ ಶಂಕುಸ್ಥಾಪನೆ ಮಾಡಿ ಇಂದು ಉದ್ಘಾಟನೆ ನೆರವೇರಿಸಿರುವುದು ಸಂತಸ ತಂದಿದೆ. ಬಿಜೆಪಿ ಅವಧಿಯಲ್ಲಿ ಈ ಯೋಜನೆ ಕಾರ್ಯಗತವಾಗಿರಲಿಲ್ಲ. ಆಸ್ಪತ್ರೆಯ ನಿರ್ವಹಣೆಯನ್ನು ಯಾವುದೇ ಖಾಸಗಿ ಸಂಸ್ಥೆಗೆ ನೀಡಿಲ್ಲ ಎಂದು ಸಿಎಂ ಹೇಳಿದರು.

ಸರ್ಕಾರಿ ಆಸ್ಪತ್ರೆಗೆ ಬರುವವರೆಲ್ಲಾ ಬಡ-ಮಧ್ಯಮ ವರ್ಗದವರು. ಅವರಿಗೂ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸಲು ಪ್ರತೀ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು, ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ.
ಬರೀ ಆಸ್ಪತ್ರೆ ಕಟ್ಟಡ ಕಟ್ಟಿದರೆ ಸಾಲದು, ಅದಕ್ಕೆ ತಕ್ಕಂತೆ ತಜ್ಞ ವೈದ್ಯರನ್ನೂ ನೇಮಿಸುತ್ತೇವೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದ್ದೇವೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಪ್ರಭಾಕರ್ ಕೋರೆ ಅವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸರ್ಕಾರಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ಕೋರೆ ಅವರಿಗೆ ಅಭಿನಂದಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರಿಗೆ ಆತಂಕ-ಸಿಎಂ‌ ಟಾಂಗ್ Read More