ಬಿಬಿಎಂಪಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ-ಆಪ್ ಖಂಡನೆ

ಬೆಂಗಳೂರು: ಬೆಂಗಳೂರು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ ಮಾಡುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಮ್ ಆದ್ಮಿ ಪಾರ್ಟಿ ಕಿಡಿಕಾರಿದೆ.

ಬೆಳಗಾವಿ ವಿಧಾನಸಭೆಯಲ್ಲಿ ಮಂಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ 2025 ರಲ್ಲಿ ಸರ್ಕಾರಕ್ಕೆ ಬೆಂಗಳೂರಿನ 5 ನಗರ ಪಾಲಿಕೆಗಳಿಗೆ ನಾಮ ನಿರ್ದೇಶನ ಮಾಡುವ ಅಧಿಕಾರ ಪಡೆದುಕೊಳ್ಳಲು ಹೊರಟಿರುವುದು ನಿಜಕ್ಕೂ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಕಟುವಾಗಿ ಖಂಡಿಸಿದರು.

ಕಳೆದ ಐದು ವರ್ಷಗಳಿಂದ ಚುನಾವಣೆಗಳನ್ನು ನಡೆಸಲು ಹೆದರಿ ಬೆಂಗಳೂರಿನ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಈಗಾಗಲೇ ನುಂಗಿ ನೀರು ಕುಡಿದಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆಯನ್ನು ಮತ್ತಷ್ಟು ಅವಧಿಯ ಕಾಲ ಮುಂದುವರಿಸಲು ಈ ರೀತಿಯ ಕರಾಳ ಮಸೂದೆಯನ್ನು ಮಂಡಿಸುತ್ತಿದ್ದಾರೆ. ಇದು ಬೆಂಗಳೂರಿಗರಿಗೆ ಮಾಡುತ್ತಿರುವ ಅನ್ಯಾಯ ಎಂದು ಹೇಳಿದರು.
ಬೆಂಗಳೂರಿನ ಜನತೆಗೆ ಈ ರಾಷ್ಟ್ರದ ಸಂವಿಧಾನ ಕೊಡ ಮಾಡಿರುವ ಹಕ್ಕಿನಂತೆ ಚುನಾವಣೆಯನ್ನು ನಡೆಸಿ ತಮ್ಮ ತಮ್ಮ ನಗರ ಪಾಲಿಕೆ ಸದಸ್ಯರುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲ ಅವಕಾಶವನ್ನು ತಪ್ಪಿಸುವುದೇ ಇವರ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರವು ಈ ಮೂಲಕ ಕಾನೂನನ್ನೇ ತಿರುಚಲು ಹೊರಟಿರುವುದನ್ನು ಬೆಂಗಳೂರಿನ ಪ್ರತಿ ಮನೆಮನೆಗಳಿಗೆ ತಿಳಿಸಿ ಸರ್ಕಾರದ ವಿರುದ್ಧ ಆಂದೋಲನವನ್ನು ರೂಪಿಸುತ್ತೇವೆ ಎಂದು ಸೀತಾರಾಮ್ ಗುಂಡಪ್ಪ ತಿಳಿಸಿದರು.

ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರುಗಳನ್ನು ಜೀತದಾಳುಗಳಂತೆ ದುಡಿಸಿಕೊಂಡು ಪಕ್ಷದ ವಿರುದ್ಧ ತಿರುಗಿ ಬೀಳುವ ಸಮಯದಲ್ಲಿ ಇವರೆಲ್ಲರಿಗೂ ಬೆಂಗಳೂರಿನ ಎಲ್ಲಾ ಐದು ಪಾಲಿಕೆಗಳಲ್ಲಿಯ ಆಡಳಿತದಲ್ಲಿ ಮೂಗು ತೂರಿಸಿ, ಭ್ರಷ್ಟ ದುಷ್ಟ ಕೂಟಗಳನ್ನು ತಯಾರು ಮಾಡುವ ಹುನ್ನಾರವೇ ಈ ಮಸೂದೆಯ ಮೂಲ ಉದ್ದೇಶವಾಗಿದೆ. ಆಮ್ ಆದ್ಮಿ ಪಕ್ಷವು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ. ಬೆಂಗಳೂರಿಗರನ್ನು ಒಟ್ಟುಗೂಡಿಸಿ ಈ ಕರಾಳ ಮಸೂದೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಸೀತಾರಾಮ್ ಗುಂಡಪ್ಪ ಎಚ್ಚರಿಸಿದರು.

ಬಿಬಿಎಂಪಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ-ಆಪ್ ಖಂಡನೆ Read More

ಆಟೋ ಟಿಪ್ಪರ್ ಕಾಂಪ್ಯಾಕ್ಟರ್ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ನಿಲ್ಲಿಸಿ: ಎಎಪಿ

ಬೆಂಗಳೂರು: ಪೌರಕಾರ್ಮಿಕರು, ಆಟೋ ಟಿಪ್ಪರ್,ಕಾಂಪ್ಯಾಕ್ಟರ್ ಗಳ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ನಿಲ್ಲಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

ಬಿಬಿಎಂಪಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಅವರು,
ಬೆಂಗಳೂರಿನಲ್ಲಿ ಕಸ ನಿರ್ವಹಣೆ ಹೆಸರಿನಲ್ಲಿ ಪ್ರತಿ ವಾರ್ಡ್ ಗಳಲ್ಲಿ ನಿಗದಿಯಾಗಿರುವ ಸಂಖ್ಯೆಯಲ್ಲಿ ಪೌರಕಾರ್ಮಿಕರು, ಆಟೋ ಟಿಪ್ಪರ್ ಮತ್ತು ಕಾಂಪ್ಯಾಕ್ಟರ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಗುತ್ತಿಗೆದಾರರು ಇವುಗಳ ಹೆಸರಿನಲ್ಲಿ ನಡೆಸುತ್ತಿರುವ ಕೋಟ್ಯಾಂತರ ಬಿಲ್ ಲೂಟಿಯನ್ನು ತಡೆಗಟ್ಟಿದಲ್ಲಿ ಮಾತ್ರ ಬೆಂಗಳೂರು ನಗರವನ್ನು ಕಸಮುಕ್ತವನ್ನಾಗಿಸಬಹುದು ಎಂದು ಹೇಳಿದರು.

ಮುಖ್ಯ ಆಯುಕ್ತರು ಪ್ರತಿ ವಾರ್ಡ್ ಗಳಲ್ಲಿ ಇವುಗಳ ಹೆಸರಿನಲ್ಲಿ ನಡೆಯುತ್ತಿರುವ ಲೂಟಿಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಅನವಶ್ಯಕವಾಗಿ ತೆರಿಗೆದಾರರ ಹಣ ಅಕ್ರಮವಾಗಿ ನಗರದ ಶಾಸಕರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರುಗಳ ಜೇಬಿಗೆ ಸೇರುತ್ತಿದೆ. ಅದನ್ನು ಬಿಟ್ಟು ಹೆಚ್ಚುವರಿ ಯಾಗಿ ಮತ್ತಷ್ಟು ವಾಹನಗಳನ್ನು ಪಡೆದುಕೊಂಡಲ್ಲಿ ಮತ್ತಷ್ಟು ಲೂಟಿ ಹೆಚ್ಚಾಗುತ್ತದೆಯೇ ಹೊರತು ಬೇರೇನೂ ಆಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.

ಆಯುಕ್ತರು ತಮ್ಮ ವಿಚಕ್ಷಣ ದಳವನ್ನು ಉಪಯೋಗಿಸಿಕೊಂಡು ಇವುಗಳ ಬಗ್ಗೆ ರಹಸ್ಯ ತನಿಖೆ ನಡೆಸಿ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಂಡಲ್ಲಿ ತೆರಿಗೆದಾರರ ನೂರಾರು ಕೋಟಿ ಹಣ ಲೂಟಿ ಆಗುವುದು ನಿಲ್ಲುತ್ತದೆ. ಬೆಂಗಳೂರು ಕಸಮುಕ್ತವಾಗುತ್ತದೆ. ಪ್ರತಿ ದಿವಸ ಪೌರಕಾರ್ಮಿಕರು ಹಾಗೂ ವಾಹನಗಳ ಹಾಜರಾತಿಯನ್ನು ಖಾತ್ರಿಪಡಿಸಿಕೊಳ್ಳಲು ಸ್ಥಳೀಯ ನಾಗರಿಕರ ಸಮಿತಿಯನ್ನು ರಚಿಸಿ ಇವುಗಳಿಗೆ ದೆಹಲಿ ರಾಜ್ಯದ ಮಾದರಿಯಲ್ಲಿ ಸಾಂವಿಧಾನಿಕ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು.

ಅದನ್ನು ಬಿಟ್ಟು ಒಂದೆರಡು ಕಿಲೋಮೀಟರ್ ಪಾದಯಾತ್ರೆ ನಡೆಸುವುದು ಕೇವಲ ಪ್ರದರ್ಶನ ಹಾಗೂ ಜನತೆಯ ಕಣ್ಣೊರೆಸುವ ತಂತ್ರವೇ ಹೊರತು ಬೇರೇನೂ ಅಲ್ಲ. ಇಂತಹ ಕ್ರಮಗಳ ಮೂಲಕ ನಗರದಲ್ಲಿ ಅನೇಕ ವರ್ಷಗಳಿಂದ ಬೇರು ಬಿಟ್ಟಿರುವ ಕಸದ ಮಾಫಿಯಾವನ್ನು ತಡೆಗಟ್ಟದಿದ್ದಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರು ನಗರವನ್ನು ಕಸಮುಕ್ತ ಮಾಡಲು ಸಾಧ್ಯವಿಲ್ಲ. ಬೇಕಾಬಿಟ್ಟಿಯಾಗಿ ಜನತೆಯ ಹಣ ಅನ್ಯರ ಪಾಲಾಗುತ್ತಿರುವುದನ್ನು ತಡೆಗಟ್ಟುವ ದಿಸೆಯಲ್ಲಿ ಸರ್ಕಾರ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಗದೀಶ್ ವಿ.ಸದಂ ಆಗ್ರಹಿಸಿದರು.

ಆಟೋ ಟಿಪ್ಪರ್ ಕಾಂಪ್ಯಾಕ್ಟರ್ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ನಿಲ್ಲಿಸಿ: ಎಎಪಿ Read More

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾ ದಾಳಿ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರಿಗೆ ಬೆಳ್ಳಂಬೆಳಿಗ್ಗೆ ಚಳಿ ಬಿಡಿಸಿದ್ದಾರೆ.

ಬೆಂಗಳೂರು, ಚಿಕ್ಕಮಗಳೂರು,ಶಿವಮೊಗ್ಗ,
ಬೆಳಗಾವಿ ಜಿಲ್ಲೆಗಳಲ್ಲಿ ಲೋಕಾಯುಕ್ತರು ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ,ದಾಳಿ ವೇಳೆ ಸಿಕ್ಕ ಹಣ,ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.‌

ಚಿಕ್ಕಮಗಳೂರು ನಗರಸಭೆ ನಗರಸಭೆ ಲೆಕ್ಕಾಧಿಕಾರಿ ಲತಾಮಣಿ ನಿವಾಸದ ಮೇಲೆ ದಾಳಿ ನಡೆಸಿದ್ದು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಚಿಕ್ಕಮಗಳೂರು ನಗರದ ಜಯನಗರದಲ್ಲಿ ಲತಾಮಣಿ ಮನೆ ಇದ್ದು ಅವರ ಪತಿ ಚಂದ್ರಶೇಖರ್ ನಿರ್ಮಿತಿ ಕೇಂದ್ರದ ಇಂಜಿನಿಯರ್ ಆಗಿದ್ದಾರೆ.
ಎರಡು ತಂಡಗಳು ದಾಖಲೆ ಪರಿಶೀಲನೆ ಮಾಡುವ ಕಾರ್ಯದಲ್ಲಿ ತೊಡಗಿದೆ.

ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟು ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗೋವಿಂದರಾಜನಗರ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಅವರ ನಾಗರಬಾವಿ, ಗೋವಿಂದರಾಜನಗರ, ಯಲಹಂಕದಲ್ಲಿ ದಾಳಿ ನಡೆಸಲಾಗಿದೆ

ಬೆಳಗಾವಿಯಲ್ಲಿ ಇಂಜಿನಿಯರ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಮನೆ ಮೇಲೆ ಲೋಕಾ ದಾಳಿಯಾಗಿದ್ದು,ವಜ್ರಾಭರಣ, ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ಒಂದೂವರೆ ಲಕ್ಷ ನಗದು ಸಿಕ್ಕಿದೆ.

ಕೆಎ‌ನ್‌ಎನ್ಎಲ್ ಧಾರವಾಡ ವಿಭಾಗದ
ಮುಖ್ಯ ಇಂಜಿನಿಯರ್ ಅಶೋಕ ವಾಸನದ್ ಅವರ ಬೆಳಗಾವಿಯ ರಾಮತೀರ್ಥ‌ ನಗರದಲ್ಲಿರುವ ಮನೆ ಹಾಗೂ ಧಾರವಾಡ ಕಚೇರಿ ಮೇಲೆ‌ ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾ ದಾಳಿ Read More

ಬಿಬಿಎಂಪಿ ಅರಣ್ಯಾಧಿಕಾರಿಗಳ ಅಮಾನತಿಗೆ ಆಪ್ ಆಗ್ರಹ

ಬೆಂಗಳೂರು: ಬೆಂಗಳೂರಿನಲ್ಲಿ ಮರಗಳು ಬಿದ್ದು ಸಾವು,ನೋವು ಉಂಟಾಗುವುದು ಹೆಚ್ಚುತ್ತಲೇ ಇದ್ದು,ಇದಕ್ಕೆ ಬಿಬಿಎಂಪಿ ಅರಣ್ಯಾಧಿಕಾರಿಗಳೆ ಹೊಣೆ ಎಂದು ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.

ಮರ ಬಿದ್ದು ಅನಾಹುತವಾಗುವ ಮೊದಲೇ ಎಚ್ಚೆತ್ತುಕೊಂಡು‌ ಒಣಗಿದ ಹಾಗೂ ಶಿಥಿಲವಾದ ಮರಗಳನ್ನು ಕತ್ತರಿಸಬೇಕಿತ್ತು.ಹಾಗೆ ಮಾಡದೆ ಜನರ ಪ್ರಾಣದ ಜತೆ ಚೆಲ್ಲಾಟವಾಡುವ ಅರಣ್ಯಾಧಿಕಾರಿಗಳನ್ನು ತಕ್ಷಣ ಅಮಾನತು ಪಡಿಸಬೇಕೆಂದು ಆಪ್ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಒತ್ತಾಯಿಸಿದರು.

ನಿನ್ನೆ ಬೆಂಗಳೂರಿನ ಶ್ರೀನಗರದಲ್ಲಿ ಮರದ ಕೊಂಬೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿರುವ ಯುವಕ ಅಕ್ಷಯ್ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿ ಆರೋಗ್ಯ ವಿಚಾರಿಸಿದ ನಂತರ ಸೀತಾರಾಮ್ ಗುಂಡಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ದುರ್ಘಟನೆಗೆ ಕಾರಣವಾಗಿರುವ ಬಿಬಿಎಂಪಿಯ ಅರಣ್ಯ ವಿಭಾಗದ ಉನ್ನತ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ನಮ್ಮ ಪಕ್ಷದ ಕಾರ್ಯಕರ್ತರು ಹಲವು ಬಾರಿ ಹಳೆಯ ಮರಗಳು ಹಾಗೂ ಕೊಂಬೆಗಳನ್ನು ತೆಗೆಯುವಂತೆ ದೂರು ನೀಡುತ್ತಲೇ ಬಂದಿದ್ದಾರೆ. ಆದರೆ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಬಿಬಿಎಂಪಿಯ ಅರಣ್ಯ ವಲಯದ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಈ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಅಕ್ಷಯ್ ನಂತಹ ಹಕವಾರು ನಾಗರಿಕರ ಪ್ರಾಣಕ್ಕೆ ಸಂಚಕಾರ ಬಂದಿದೆ ಎಂದು ಸೀತಾರಾಮ್ ಗುಂಡಪ್ಪ ಆತಂಕ ವ್ಯಕ್ತಪಡಿಸಿದರು.

ಇಂತಹ ಅನೇಕ ದುರ್ಘಟನೆಗಳು ಪದೇಪದೇ ಸಂಭವಿಸಿದ್ದರೂ ಸಹ ಎಚ್ಚೆತ್ತುಕೊಳ್ಳುವಲ್ಲಿ ಅಧಿಕಾರಯ ವಿಫಲರಾಗುತ್ತಿದ್ದಾರೆ,
ಸರ್ಕಾರ ಅಧಿಕಾರಿಗಳ
ಉತ್ತರದಾಯಿತ್ವವನ್ನು ಪ್ರಶ್ನಿಸುವ ತಾಕತ್ತು ಹೊಂದಿದ್ದಲ್ಲಿ ಕೂಡಲೇ ಈ ವಿಭಾಗದ ಉನ್ನತ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.

ಪಕ್ಷದ ಮುಖಂಡರುಗಳಾದ ಸರವಣ, ಇರ್ತಾದ್, ವೀಣಾ ಸರಾವ್, ಮಣಿಕಂಠ ಸೇರಿದಂತೆ ಅನೇಕ ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ಅರಣ್ಯಾಧಿಕಾರಿಗಳ ಅಮಾನತಿಗೆ ಆಪ್ ಆಗ್ರಹ Read More

ಬೆಂಗಳೂರು ಕಸದ ಮಾಫಿಯಾ ಹಿಂದಿರುವ ಡಾನ್ ಯಾರು:ಡಿಕೆಶಿ ಉತ್ತರಿಸಲಿ ಎಎಪಿ

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ಮಾಫಿಯಾ ಇದೆ ಎಂಬುದನ್ನು ಒಪ್ಪಿಕೊಂಡಿದ್ದು ಇದರ ಹಿಂದಿನ ಡಾನ್ ಯಾರೆಂಬುದನ್ನು ತಿಳಿಸಲಿ ಎಂದು ಎಎಪಿ ಸವಾಲು ಹಾಕಿದೆ.

ಬೆಂಗಳೂರಿನ ಕಸದ ವಿಲೇವಾರಿ
ಬಿಗಡಾಯಿಸಿರುವ ಬಗ್ಗೆ ನಿನ್ನೆ ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಬೆಂಗಳೂರು
ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಸ ವಿಲೇವಾರಿ ದೊಡ್ಡ ಮಾಫಿಯಾ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.ಹಾಗಾದರೆ ಅನೇಕ ವರ್ಷಗಳಿಂದ ನಗರದಲ್ಲಿ ಬೀಡು ಬಿಟ್ಟಿರುವ ಈ ಕಸದ ಮಾಫಿಯಾ ಹಿಂದಿರುವ ಡಾನ್ ಯಾರೆಂಬುದನ್ನು ಶಿವಕುಮಾರ್ ಕೂಡಲೇ ಬಹಿರಂಗಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ವಿಭಾಗದ ಮುಖ್ಯಸ್ಥ ಜಗದೀಶ್ ವಿ. ಸದಂ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕಸದ ಸಮಸ್ಯೆಯು ಅನೇಕ ವರ್ಷಗಳಿಂದ ಬಿಗಡಾಯಿಸುತ್ತಲೆ ಬರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಯಾವ ಸರ್ಕಾರಗಳಿಗೂ ಇಚ್ಛಾಶಕ್ತಿ ಇಲ್ಲ ಎಂದು ಟೀಕಿಸಿದರು.

ಕಸದ ಮಾಫಿಯಾ ಹಿಂದಿನ ಕೋಟ್ಯಾಂತರ ರೂಪಾಯಿಗಳ ಆಮದನಿಗಳ ಹಿಂದೆಯೇ ಬೆಂಗಳೂರು ನಗರ ಶಾಸಕರ ಕಣ್ಣು ನಿರಂತರವಾಗಿದೆ. ಬಿಬಿಎಂಪಿ ಚುನಾವಣೆ ನಡೆಸದೆ ಸ್ಥಳೀಯ ಜನಪ್ರತಿನಿಧಿಗಳು ಇಲ್ಲ. ಯಾರಿಗೂ ಸಹ ಬೆಂಗಳೂರನ್ನು ಗಾರ್ಬೇಜ್ ಮುಕ್ತ ನಗರವನ್ನಾಗಿಸುವ ಇಚ್ಛಾಶಕ್ತಿಯೂ ಇಲ್ಲವೆಂಬುದು ಇದರಿಂದ ಬಹಿರಂಗವಾಗುತ್ತಿದೆ ಎಂದು ಹೇಳಿದರು.

ಕಸ ವಿಲೇ ವಾರಿಗಾಗಿಯೇ ಪ್ರತ್ಯೇಕ ಕಂಪನಿಯನ್ನು ಮಾಡಿ ಪ್ರತಿ ವರ್ಷ 3000 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದರೂ ಸಹ ಬೆಂಗಳೂರು ಕಸದ ಬ್ಲಾಕ್ ಸ್ಪಾಟ್ ಗಳಾಗಿ ಪರಿವರ್ತಿತವಾಗಿದೆ. ಬೆಂಗಳೂರಿಗರು ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಕಟ್ಟುವಲ್ಲಿ ಎರಡನೇ ಸ್ಥಾನ ಹೊಂದಿದ್ದರೂ ಸಹ ಬೆಂಗಳೂರಿಗರು ತೃತೀಯ ದರ್ಜೆಯ ನಾಗರೀಕರ ರೀತಿಯಲ್ಲಿ ವಾಸಿಸುತ್ತಿರುವುದು ನಿಜಕ್ಕೂ ದುರಂತವೇ ಸರಿ ಎಂದು ಜಗದೀಶ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಬೆಂಗಳೂರಿನ ಪ್ರತಿ ದಿವಸದ ಸಾವಿರಾರು ಟನ್ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ , ಬೆಂಗಳೂರು ಸುತ್ತಮುತ್ತ ಡಂಪಿಂಗ್ ಯಾರ್ಡ್ ಗಳಲ್ಲಿ ಸುರಿದು ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಹಗಲು ದರೋಡೆ ಮಾಡುತ್ತಿರುವ ಮಾಫಿಯಗಳ ಹೆಡೆಮುರಿ ಕಟ್ಟಿ ಶಾಶ್ವತ ಪರಿಹಾರವನ್ನು ನೀಡುವ ಇಚ್ಛಾಶಕ್ತಿ ತೋರಿಸದ ಡಿ.ಕೆ. ಶಿವಕುಮಾರ್,ಈ ನಗರವನ್ನು ದೇವರೇ ಕಾಪಾಡಬೇಕೆಂದು ನಿಸ್ಸಹಾಯಕರಾಗಿ ಕೈ ಚೆಲ್ಲಿ ಕೂರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.

ಕೂಡಲೇ ಬಿಗಡಾಯಿಸಿರುವ ಬೆಂಗಳೂರಿನ
ಕಸದ ಸಮಸ್ಯೆಯನ್ನು ಪರಿಹರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಗದೀಶ್ ವಿ. ಸದಂ ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರು ಕಸದ ಮಾಫಿಯಾ ಹಿಂದಿರುವ ಡಾನ್ ಯಾರು:ಡಿಕೆಶಿ ಉತ್ತರಿಸಲಿ ಎಎಪಿ Read More

ಪ್ರತ್ಯೇಕ ಕಂಪನಿಗಳ ಮಾಡಿ ಬಿಬಿಎಂಪಿಯ ಕತ್ತು ಹಿಸುಕಬೇಡಿ- ಜಗದೀಶ್ ವಿ.ಸದಂ

ಬೆಂಗಳೂರು: ಸುರಂಗ ಮಾರ್ಗ, ರಸ್ತೆ ಅಭಿವೃದ್ಧಿ ಮುಂತಾದ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲು ಪ್ರತ್ಯೇಕ ಕಂಪನಿಯನ್ನು ಸ್ಥಾಪಿಸಿ ಬಿಬಿಎಂಪಿಯನ್ನು ಕತ್ತು ಹಿಸುಕಿ ಸಾಯಿಸಬೇಡಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಗರಂ ಆಗಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಬಿಬಿಎಂಪಿಯನ್ನು ಸಾಯಿಸಲು ಆಮ್ ಆದ್ಮಿ ಪಕ್ಷ ಎಂದಿಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಕಳೆದ ಬಜೆಟ್ ನಲ್ಲಿ 7 ಸಾವಿರ ಕೋಟಿಗಳನ್ನು ಬೆಂಗಳೂರು ಅಭಿವೃದ್ಧಿಗಾಗಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಸ್ಪೆಷಲ್ ಪರ್ಪಸ್ ವೆಹಿಕಲ್ ಎಂಬ ನೆಪದಲ್ಲಿ ಪ್ರತ್ಯೇಕ ಲಿಮಿಟೆಡ್ ಕಂಪನಿಯನ್ನು ಮಾಡಲು ಹೊರಟಿರುವುದು ಸಂಪೂರ್ಣ ಭ್ರಷ್ಟಾಚಾರ ಮಾಡಲು ಹೂಡಿರುವ ಕುತಂತ್ರ ಎಂದು ಆರೋಪಿಸಿದರು.

ಈಗಾಗಲೇ ಬಿಬಿಎಂಪಿಯಿಂದ ಕಸ ನಿರ್ವಹಣೆ, ರಸ್ತೆ ಅಭಿವೃದ್ಧಿ ಯಂತಹ ಕೆಲಸಗಳಿಗೆ ಪ್ರತ್ಯೇಕ ಸ್ಮಾರ್ಟ್ ಸಿಟಿ ಲಿಮಿಟೆಡ್ ಮಾಡಿ ಬೆಂಗಳೂರನ್ನು ಅಭಿವೃದ್ಧಿ ಮಾಡಿರುವುದು ಅಷ್ಟರಲ್ಲಿಯೇ ಇದೆ.ಎಲ್ಲೂ ಸಹ ಪಾರದರ್ಶಕತೆ ಕಂಡುಬಂದಿಲ್ಲ. ಈ ಕಂಪನಿಗಳು ಸಂಪೂರ್ಣ ಭ್ರಷ್ಟಾಚಾರಿಗಳ
ಕೂಪವಾಗಿದೆಯೇ ಹೊರತು ಮತ್ತೇನು ಸಾಧಿಸಿಲ್ಲ ಎಂದು ಟೀಕಿಸಿದರು.

ಬಿಬಿಎಂಪಿಯು ಬೆಂಗಳೂರಿನ ಅಭಿವೃದ್ಧಿಯನ್ನು ಮಾಡಲು ಸಂಪೂರ್ಣ ಸ್ವಶಕ್ತವಾಗಿದೆ. ಇಲ್ಲಿನ 500ಕ್ಕೂ ಹೆಚ್ಚು ಇಂಜಿನಿಯರ್ ಗಳು ಇಂತಹ ಬೃಹತ್ ಕಾಮಗಾರಿಗಳನ್ನು ನಿರ್ವಹಿಸಲು ಪರಿಣಿತಿಯನ್ನು ಹೊಂದಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಬಿಬಿಎಂಪಿಯ ಮೂಲಕ ಈ ಬೃಹತ್ ಕಾಮಗಾರಿಗಳನ್ನು ಮಾಡಲು ಅನುವು ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಆಮ್ ಆದ್ಮಿ ಪಕ್ಷ ಉಗ್ರ ಹೋರಾಟಕ್ಕೆ ಇಳಿಯುತ್ತದೆ ಎಂದು ಜಗದೀಶ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಶಶಿಧರ ಆರಾಧ್ಯ, ಬೆಂಗಳೂರು ಯುವ ಘಟಕದ ಅಧ್ಯಕ್ಷ ಉಮೇಶ್ ಪಿಳ್ಳೆ ಗೌಡ ಉಪಸ್ಥಿತರಿದ್ದರು.

ಪ್ರತ್ಯೇಕ ಕಂಪನಿಗಳ ಮಾಡಿ ಬಿಬಿಎಂಪಿಯ ಕತ್ತು ಹಿಸುಕಬೇಡಿ- ಜಗದೀಶ್ ವಿ.ಸದಂ Read More

110 ಹಳ್ಳಿಗಳಿಗೆ ನೀರು ಕೊಡುವ ಯೋಜನೆ ಕ್ರೆಡಿಟ್ ಬಿಜೆಪಿಗೇ ಸಲ್ಲಬೇಕು:ಅಶೋಕ

ಬೆಂಗಳೂರು: ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಕೊಡುವ ಯೋಜನೆಯ ಕ್ರೆಡಿಟ್ ಬಿಜೆಪಿಗೇ ಸಲ್ಲಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ನಗರದ ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ.ಕೆ.ಹಳ್ಳಿಯಲ್ಲಿ ಇವತ್ತು ಸಿಎಂ,ಡಿಸಿಎಂ ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಕೊಡುವ ಯೋಜನೆಯನ್ನು ಉದ್ಘಾಟಿಸಿದ್ದಾರೆ. ತಾವೇ ಮುತುವರ್ಜಿ ವಹಿಸಿ ಹಣ ಬಿಡುಗಡೆ ಮಾಡಿ, ಕ್ರಿಯಾ ಯೋಜನೆ ಮಾಡಿ ಕೆಲಸ ಅನುಷ್ಠಾನಕ್ಕೆ ತಂದಿರುವುದಾಗಿ ಜಂಬ ಕೊಚ್ಚಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅವರೇನೇ ಹೇಳಿದರೂ ಸರ್ಕಾರಿ ದಾಖಲೆಗಳು ಮಾತನಾಡುತ್ತವೆ. 2018 ಜನವರಿ 24ರಂದು ಬಿಜೆಪಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ 5,500 ಕೋಟಿ ಮೊತ್ತದ ಸಾಲದ ಒಪ್ಪಂದಕ್ಕೆ ಸಹಿ ಹಾಕಿದ್ದರು. 90 ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿತ್ತು. ಓರಿಯೆಂಟಲ್ ಕನ್ಸಲ್ಟೇಶನ್ ಮೊದಲಾದ ಕಂಪನಿಗಳಿಗೆ ಯೋಜನೆ ನಿರ್ವಹಿಸಲು ನೀಡಲಾಗಿತ್ತು ಎಂದು ಹೇಳಿದರು.

ಯೋಜನೆ ಪ್ರಾರಂಭವಾದ ದಿನ 2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಗುತ್ತಿಗೆ ಪ್ಯಾಕೇಜ್ ಮಾಡಿದ್ದು, ಪ್ಯಾಕೇಜ್ 2ರಲ್ಲಿ ನಿತ್ಯ 77.5 ಕೋಟಿ ಲೀಟರ್ ನೀರು ಶುದ್ಧೀಕರಣ ಘಟಕ, ಪ್ಯಾಕೇಜ್ 3ರಲ್ಲಿ ಟಿ.ಕೆ ಹಳ್ಳಿ ಪಂಪಿಂಗ್ ಸ್ಟೇಶನ್, ಪ್ಯಾಕೇಜ್ 4ರಲ್ಲಿ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ 2 ಪಂಪಿಂಗ್ ಸ್ಟೇಶನ್ ನಿರ್ಮಾಣಕ್ಕೆ, ಟಿಕೆಹಳ್ಳಿ, ಹಾರೋಹಳ್ಳಿವರೆಗೂ ಪೈಪ್‌ಲೈನ್, ಹಾರೋಹಳ್ಳಿಯಿಂದ ವಾಜರಹಳ್ಳಿವರೆಗೂ ಪೈಪ್‌ಲೈನ್, ನಗರದ ಪಶ್ಚಿಮ ಭಾಗದಲ್ಲಿ ಪೈಪ್‌ಲೈನ್, ನೆಲಮಟ್ಟದ ಜಲಾಗಾರ, 13ನೆಯದು ಪಶ್ಚಿಮ ಭಾಗದಲ್ಲಿ ನೆಲಮಟ್ಟದ ಜಲಾಗಾರ ನಿರ್ಮಿಸಲು ಉದ್ದೇಶಿಸಲಾಗಿತ್ತು ಎಂದು ವಿವರಿಸಿದರು.

ಇಷ್ಟಕ್ಕೂ ಹಣ ಪಡೆದು, ಸಾಲ ಪಡೆದು ಜಪಾನ್‌ನ ಕಂಪನಿ, ಓರಿಯೆಂಟಲ್ ಮೊದಲಾದ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಯೋಜನೆಗಳನ್ನು ಕೂಡ ಪ್ರಾರಂಭ ಮಾಡಿದ್ದೆವು ಎಂದು ತಿಳಿಸಿದರು.

ಬಳಿಕ ಬಸವರಾಜ ಬೊಮ್ಮಾಯಿಯವರ ಸರ್ಕಾರ ಬಂತು. ನಾನು ಅದರಲ್ಲಿ ಸಚಿವನಾಗಿದ್ದೆ. ಶೇ 80ರಷ್ಟು ಕೆಲಸವನ್ನು ನಾವೇ ಮಾಡಿದ್ದು.ಕಾಂಗ್ರೆಸ್ ಬಂದು ಒಂದು ವರ್ಷ ಆಗಿದೆ. ಅಲ್ಲಿ ನೆರೆ ಬಂದಾಗ ನಾನು, ಬೊಮ್ಮಾಯಿಯವರು ಭೇಟಿ ಕೊಟ್ಟಿದ್ದೆವು. ಪ್ಯಾಕೇಜ್‌ಗೆ ಡಿಪಿಆರ್ ಮಾಡಿದ್ದು ಯಾರು, ಹಣ ಹೊಂದಿಸಿ ಕೊಟ್ಟದ್ದು ಯಾರು, ಯಾರ ಸರ್ಕಾರದಲ್ಲಿ ಕೆಲಸ ಆರಂಭವಾಯಿತು ಎಂಬುದನ್ನೆಲ್ಲ ಮುಚ್ಚಿಟ್ಟಿದ್ದಾರೆ. ದೇವರನ್ನು ಕೂರಿಸಿದ್ದು ನಾವು. ಹೋಮ ಹವನ ಮಾಡಿದ್ದು ನಾವು. ಮಂಗಳಾರತಿ ಟೈಮಿನಲ್ಲಿ ಇವರು ಬಂದು ನಮ್ಮದು ಎಂದಿದ್ದಾರೆ ಎಂದು ಅಶೋಕ ಟೀಕಾಪ್ರಹಾರ ನಡೆಸಿದರು.

110 ಹಳ್ಳಿಗಳನ್ನು ಪಾಲಿಕೆಗೆ ನಾವೇ ಸೇರಿಸಿದ್ದು, ಕಾಂಗ್ರೆಸ್ಸಿಗರು ಸೇರಿಸಿದ್ದಲ್ಲ ಎಂದು ‌ತಿಳಿಸಿದರು.

110 ಹಳ್ಳಿಗಳಿಗೆ ನೀರು ಕೊಡುವ ಯೋಜನೆ ಕ್ರೆಡಿಟ್ ಬಿಜೆಪಿಗೇ ಸಲ್ಲಬೇಕು:ಅಶೋಕ Read More

ಬೆಂಗಳೂರು ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ- ಆರ್‌.ಅಶೋಕ್

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಭಜನೆಯಾಗ
ಬಾರದು, ಈ ನಗರ ಕನ್ನಡಿಗರಿಗಾಗಿಯೇ ಇರಬೇಕೆಂಬ ಕಾರಣಕ್ಕೆ ಸರ್ಕಾರದ ಬೆಂಗಳೂರು ವಿಭಜನೆ ತೀರ್ಮಾನವನ್ನು ವಿರೋಧಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ರಾಜ್ಯ ಸರ್ಕಾರದಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸ್ಥಾಪನೆಗೆ ಸಂಬಂಧಿಸಿದಂತೆ ಸಾಧಕ-ಬಾಧಕ ಚರ್ಚಿಸಲು ಆಯೋಜಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಬ್ಭಾಗವಾಗದೆ ಹೀಗೆಯೇ ಉಳಿಯಬೇಕು. ಇಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದು, ಇದು ಕನ್ನಡಿಗರಿಗಾಗಿಯೇ ಉಳಿಯಬೇಕು. ಇಲ್ಲಿ ಕನ್ನಡದವರೇ ಮೇಯರ್‌ ಆಗಬೇಕು. ಇದಕ್ಕಾಗಿ ಬೆಂಗಳೂರು ವಿಭಜನೆಯನ್ನು ಬಿಜೆಪಿ ಮತ್ತು ಜೆಡಿಎಸ್‌ ವಿರೋಧಿಸುತ್ತವೆ ಎಂದು ತಿಳಿಸಿದರು.

ಬಿಬಿಎಂಪಿ ಅಡಿಯಲ್ಲಿ ಸ್ಲಂ ಬೋರ್ಡ್‌, ಜಲಮಂಡಳಿ, ಬಿಎಂಟಿಸಿ ಬರುವುದಿಲ್ಲ. ಇವೆಲ್ಲವೂ ಒಂದೇ ಕಡೆ ಬಂದು, ಬಿಬಿಎಂಪಿಯೇ ನಿರ್ವಹಣೆ ಮಾಡಿದರೆ ಪ್ರತ್ಯೇಕವಾಗಿ ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡುವುದು ತಪ್ಪುತ್ತದೆ. ಸರ್ಕಾರಕ್ಕೆ ಖರ್ಚು ಕಡಿಮೆಯಾಗುವುದರ ಜೊತೆಗೆ, ಜನರು ಒಂದೇ ಕಡೆ ಸೇವೆಗಳನ್ನು ಪಡೆಯಬಹುದು. ಬೇರೆ ನಗರಗಳಲ್ಲೂ ಇದೇ ರೀತಿಯಿದ್ದು, ಬೆಂಗಳೂರಿಗೂ ಇಂತಹ ವ್ಯವಸ್ಥೆ ತರಬೇಕಿದೆ ಎಂದರು.

ಇಡೀ ದೇಶಕ್ಕೆ ಒಬ್ಬ ಪ್ರಧಾನಿ, ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಇರುವಂತೆ ಬೆಂಗಳೂರು ನಗರಕ್ಕೆ ಒಬ್ಬ ಮೇಯರ್ ಇರಲಿ. ಅವರ ಅಧಿಕಾರಾವಧಿ ಎರಡೂವರೆ ವರ್ಷ ಅಥವಾ ಐದು ವರ್ಷ ನಿಗದಿಪಡಿಸಿದರೂ ಅಡ್ಡಿಯಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ತಜ್ಞರು ನೀಡಿರುವ ವರದಿಯ ಶೇಕಡಾ ಇಪ್ಪತ್ತರಿಂದ ಮುವತ್ತರಷ್ಟನ್ನು ಮಾತ್ರ ವಿಧೇಯಕದಲ್ಲಿ ಅಳವಡಿಸಿಕೊಂಡಿದೆ ಎಂಬುದನ್ನು ವಿ.ರವಿಚಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಜತೆಗೆ ಯಾರಾದರೂ ಕೊಟ್೯ನಲ್ಲಿ ಪ್ರಶ್ನೆ ಮಾಡಿದರೆ ಬಿದ್ದು ಹೋಗುತ್ತದೆ ಎಂದೂ ತಿಳಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಅದರಲ್ಲಿರುವ ಲೋಪಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರು ಸಂಗೊಳ್ಳಿ ರಾಯಣ್ಣನವರ ಉದಾಹರಣೆ ಮೂಲಕ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ ಎಂದು ಎರಡು ಸಲ ಹೇಳಿಕೆ ನೀಡಿದ್ದಾರೆ. ಅವರ ಪಕ್ಷದವರೇ ಅವರಿಗೆ ಮೋಸ ಮಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ನಾವ್ಯಾರೂ ಆರ್‌ಟಿಐ ಅರ್ಜಿ ಹಾಕಿಲ್ಲ, ಅವರ ಪಕ್ಷದವರೇ ಎಲ್ಲ ದಾಖಲೆಗಳನ್ನು ಹೊರಗೆ ತಂದಿದ್ದಾರೆ ಅಶೋಕ್ ತಿಳಿಸಿದರು.

ರಾಜ್ಯದಲ್ಲಿ 60 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲು ತಯಾರಿ ನಡೆದಿದೆ. ಇದರಿಂದ ಸರ್ಕಾರಕ್ಕೆ ಹಣ ಉಳಿತಾಯವಾಗಲಿದೆ. ಈಗಾಗಲೇ ಬಿಪಿಎಲ್‌ ಕಾರ್ಡುದಾರರಿಗೆ ಅಧಿಕಾರಿಗಳು ಕಿರುಕುಳ ನೀಡಲಾರಂಭಿಸಿದ್ದಾರೆ,ಇದಕ್ಕಾಗಿ ಖಾಸಗಿ ಏಜೆನ್ಸಿ ನೇಮಕ ಮಾಡಿ, ಆ ಮೂಲಕ ಕಾರ್ಡ್‌ ರದ್ದುಪಡಿಸಿ ಗ್ಯಾರಂಟಿಗೆ ಹಣ ಉಳಿಸಲಾಗುತ್ತಿದೆ ಎಂದು ಅಶೋಕ್ ದೂರಿದರು.

ರವಿಚಂದ್ರ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕಕ್ಕೆ ಸಂಬಂಧಿಸಿದಂತೆ ತಮ್ಮ ಸಮಿತಿ ನೀಡಿದ್ದ ವರದಿಗೂ ರಾಜ್ಯ ಸರ್ಕಾರ ಮಂಡಿಸಿರುವ ವಿಧೇಯಕಕ್ಕೂ ಸಾಕಷ್ಟು ವೆತ್ಯಾಸವಿದೆ. ಶೇ.20 ರಷ್ಟು ಶಿಫಾರಸು ಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಹೇಳಿದರು.

ಬಿಜೆಪಿ, ಜೆಡಿಎಸ್ ನ ಶಾಸಕರು, ಮಾಜಿ ಕಾರ್ಪೊರೇಟರ್ ಗಳು, ಪಕ್ಷದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರು ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ- ಆರ್‌.ಅಶೋಕ್ Read More

15 ದಿನದೊಳಗೆ ರಸ್ತೆ ಗುಂಡಿ ಮುಚ್ಚದಿದ್ದರೆ ಕಠಿಣ ಕ್ರಮ-ಡಿಸಿಎಂ ಕಡಕ್ ಎಚ್ಚರಿಕೆ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಗುಂಡಿಮಯವಾಗಿದ್ದು ಇನ್ನ 15 ದಿನದೊಳಗೆ ಗುಂಡಿಗಳನ್ನು ಮುಚ್ಚದಿದ್ದರೆ ಕಠಿಣ ಕ್ರಮ ಖಂಡಿತಾ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದಾಗಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ಎಂಜಿನೀಯರ್‌ಗಳು, ಬಿಬಿಎಂಪಿ ಅಧಿಕಾರಿಗಳ ಜೊತೆ ಡಿಸಿಎಂ ಡಿ.ಕೆ ಶಿವಕುಮಾರ್ ಸಭೆ ನಡೆಸಿದರು.

ನಂತನ‌ ಮಾಧ್ಯಮದೊಂದಿಗೆ ಮಾತನಾಡಿದ ಡಿಕೆಶಿ,ಹಿರಿಯ ಅಧಿಕಾರಿಗಳು, ಮುಖ್ಯ ಎಂಜಿನೀಯರ್‌ಗಳು, ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. 15 ದಿನಗಳ ಕಾಲ ಗಡುವುದು ನೀಡಿದ್ದೇನೆ, ಎಲ್ಲಾ ಕೆಲಸಗಳನ್ನು ಬಿಟ್ಟು ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಒಂದು ವೇಳೆ ಈ ಕೆಲಸ ಮಾಡದೇ ಇದ್ದರೆ ಸಂಬಂಧಪಟ್ಟವರ ಮೇಲೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ,ಯಾರು ಸಸ್ಪೆಂಡ್ ಆಗುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.

ಸೆಪ್ಟೆಂಬರ್‌ನಲ್ಲೂ ಮಳೆ ಬರುವ ಸಾಧ್ಯತೆ ಇದೆ, ಕಂಟ್ರೋಲ್ ರೂಂ ಪ್ರತಿಯೊಂದನ್ನು ಗಮನಿಸುತ್ತಾ ಇರಬೇಕು ನೀರು ನುಗ್ಗುವುದು, ಅವಾಂತರಗಳು ಆಗುವುದನ್ನು ತಡೆಯಬೇಕು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಡಿಕೆಶಿ ತಿಳಿಸಿದರು.

ಮಹಾತ್ಮ ಗಾಂಧೀಜಿ ಅವರು ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ನಾಯಕತ್ವ ವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರು ನಗರದ ಎಲ್ಲಾ ಶಾಲೆಗಳಲ್ಲಿ ನವೆಂಬರ್ 2 ರಂದು ಸ್ವಚ್ಛತೆ ಬಗ್ಗೆ ಪ್ರತಿಜ್ಞೆ ಮಾಡಬೇಕು. ಅವರವರ ಮನೆಗಳನ್ನು, ಏರಿಯಾಗಳನ್ನು ಸ್ವಚ್ಛವಾಗಿ ಇಡುವುದರ ಬಗ್ಗೆ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದ್ದೇನೆ ಎಂಬುದಾಗಿ ಡಿಸಿಎಂ ತಿಳಿಸಿದರು.

ರಸ್ತೆಗಳಿಗೆ ವಾಲಿದ ಮರಗಳ ಟೊಂಗೆಗಳನ್ನು ಟ್ರಿಮ್ಮಿಂಗ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಜತೆಗೆ ಒಣಗಿದ ಮರಗಳನ್ನು ‌ತೆರವು ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಸಭೆಯಲ್ಲಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

15 ದಿನದೊಳಗೆ ರಸ್ತೆ ಗುಂಡಿ ಮುಚ್ಚದಿದ್ದರೆ ಕಠಿಣ ಕ್ರಮ-ಡಿಸಿಎಂ ಕಡಕ್ ಎಚ್ಚರಿಕೆ Read More