ವೈಮಾನಿಕ ಪ್ರದರ್ಶನದಲ್ಲಿ ಸಾರಂಗ್ ಚಮತ್ಕಾರ

ಮೈಸೂರು: ಕೆಂಪು ಮತ್ತು ಬಿಳಿ ಬಣ್ಣದ ಚಿತ್ತಾರದ ಜೊತೆಗೆ ಬೆಂಕಿಯ ಉಂಡೆಗಳನ್ನು ಉಗುಳುತ್ತಾ ನಾ ಮುಂದೆ, ನೀ‌ ನನ್ನ ಹಿಂದೆ ಎಂಬಂತೆ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಕಂಡ‌ ಜನ ದಿಗ್ಮೂಢರಾದರು.

ವೈಮಾನಿಕ ಹಾರಾಟದ ಮೂಲಕ ಸಾರಂಗ್ ತನ್ನ ಯಶಸ್ಸು ಮತ್ತು ಧೈರ್ಯವನ್ನು ಪ್ರದರ್ಶಿಸುತ್ತಿದ್ದರೆ, ಇತ್ತ ಮೈಸೂರಿನ ಜನತೆ ಶಿಳ್ಳೆ, ಚಪ್ಪಾಳೆ ಚೀತ್ಕಾರದೊಂದಿಗೆ ಬೆರಗಿನಿಂದ ವೀಕ್ಷಿಸಿದರು.

ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು‌ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಭಾರತೀಯ ವಾಯುಪಡೆ ಸಾರ‌ಂಗ ತಂಡದಿಂದ ನಡೆದ ವೈಮಾನಿಕ ಪ್ರದರ್ಶನದಲ್ಲಿ ನವಿಲಿನ ಚಿತ್ತಾರವಿರುವ ಲೋಹದ ಹಕ್ಕಿಗಳ ಚಮತ್ಕಾರಿ ಪ್ರದರ್ಶನಕ್ಕೆ ಮಾರುಹೋದರು.

ಸುಮಾರು 22 ರಿಂದ‌ 25 ನಿಮಿಷಗಳ‌ ಕಾಲ‌ ಶರವೇಗದಲ್ಲಿ ನಡೆದ ವೈಮಾನಿಕ ಹಾರಾಟದಲ್ಲಿ ಡಾಲ್ಫೀನ್ ಸ್ಲೀಪ್, ಸಾರಂಗ್ ಸ್ಪ್ಲೀಟ್, ಹಾರ್ಟ್ ಫಾರ್ಮೇಷನ್, ಡಿವೈನ್ ಗ್ಲಾಸ್, ಡಬಲ್ ಏರೋ ಕ್ರಾಸ್ ಸೇರಿದಂತೆ ಒಟ್ಟು 16 ರೀತಿಯ ಮಾದರಿಗಳನ್ನು ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು.

ಇದಕ್ಕಾಗಿ ಒಟ್ಟು 70 ಸಿಬ್ಬಂದಿಗಳು ಶ್ರಮಿಸಿದ್ದು, ಐದು ಸಾರಂಗಗಳು ಅತ್ಯದ್ಭುತವಾದ ಪ್ರದರ್ಶನ‌ ನೀಡುವ ಮೂಲಕ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿಯ ಮನಸ್ಸನ್ನು ಸೂರೆಗೊಂಡರು.

ವೈಮಾನಿಕ ಪ್ರದರ್ಶನದಲ್ಲಿ ಸಾರಂಗ್ ಚಮತ್ಕಾರ Read More

ದಸರಾ ಡ್ರೋನ್ ಶೋ ಅನಧಿಕೃತ ಚಿತ್ರೀಕರಣ ಮಾಡಿದರೆ ಕ್ರಮ: ಸೆಸ್ಕ್ ಎಚ್ಚರಿಕೆ

ಮೈಸೂರು: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅತಿದೊಡ್ಡ ಡ್ರೋನ್ ಪ್ರದರ್ಶನ ನಡೆಸಲಾಗುತ್ತಿದ್ದು, ಕೆಲವರು ಇದನ್ನು ‌ದುರುಪಯೋಗ ಮಾಡಿದ್ದಾರೆ.

ಅ.6 ಮತ್ತು 7ರಂದು ನಡೆದ ಡ್ರೋನ್ ಪ್ರದರ್ಶನ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.

ಆದರೆ ಡ್ರೋನ್ ಪ್ರದರ್ಶನ ನಡೆಯುವ ವೇಳೆ ಕೆಲವು ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಡ್ರೋನ್ ಗಳನ್ನು ಹಾರಿಸಿ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಸೆರೆಹಿಡಿಯುತ್ತಿರುವುದು ಹಾಗೂ ಡ್ರೋನ್ ಗಳ ಮೂಲಕ ಚಿತ್ರೀಕರಿಸಿದ ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾದ್ಯಮದಲ್ಲಿ ಹರಿಯಬಿಡುತ್ತಿರುವುದು ಕಂಡು ಬಂದಿದೆ.

ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಡ್ರೋನ್‌ಗಳನ್ನು ಹಾರಿಸಿ, ಸೆಸ್ಕ್ ವತಿಯಿಂದ ಅ.11 ಮತ್ತು 12 ರಂದು ನಡೆಸಲಾಗುವ ಡ್ರೋನ್ ಪ್ರದರ್ಶನದ ದೃಶ್ಯಗಳನ್ನು ಚಿತ್ರೀಕರಿಸುವುದು ಹಾಗೂ ಡ್ರೋನ್ ಗಳ ಮೂಲಕ ಚಿತ್ರೀಕರಿಸಿದ ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾದ್ಯಮದಲ್ಲಿ ಹರಿಯಬಿಡುವುದು ಕಂಡುಬಂದಲ್ಲಿ ಅವರುಗಳ ವಿರುದ್ಧ ಸೈಬರ್ ಅಪರಾಧಗಳಿಗೆ ಸಂಬಂದಿಸಿದ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸೆಸ್ಕ್ ‌ಎಚ್ಚರಿಸಿದೆ.

ಈಗಾಗಲೇ ಯಾರು ಅನಧಿಕೃತವಾಗಿ ಡ್ರೋನ್ ಪ್ರದರ್ಶನವನ್ನು ಖಾಸಗಿಯಾಗಿ ಡ್ರೋನ್ ಮೂಲಕ ಚಿತ್ರೀಕರಿಸಿದ್ದಾರೆ ಅವರುಗಳ ವಿರುದ್ಧವೂ ಪ್ರಕರಣ ದಾಖಲಿಸಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸೆಸ್ಕ್ ಅಧಿಕಾರಿಗಳು ಹೇಳಿದ್ದಾರೆ.

ಕೇವಲ ಡ್ರೋನ್ ಪ್ರದರ್ಶನ ಮಾತ್ರವಲ್ಲದೆ ದಸರಾ ಅಂಗವಾಗಿ ಮೈಸೂರು ನಗರದಾದ್ಯಂತ ಸೆಸ್ಕ್ ವತಿಯಿಂದ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರದ ದೃಶ್ಯಗಳನ್ನು ಸಹ ಡ್ರೋನ್ ಮೂಲಕ ಅನಧಿಕೃತವಾಗಿ ಚಿತ್ರೀಕರಿಸುವುದು ಕೂಡ ಅಪರಾಧವಾಗಿದೆ.

ಹಾಗಾಗಿ, ಯಾವುದೇ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸೆಸ್ಕ್ ವತಿಯಿಂದ ನಡೆಸಲಾಗುತ್ತಿರುವ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಡ್ರೋನ್ ಗಳ ಮೂಲಕ ಅನಧಿಕೃತ ಚಿತ್ರೀಕರಣ ಮಾಡದಂತೆ ಕಡಕ್ ಎಚ್ಚರಿಸಲಾಗಿದೆ.

ದಸರಾ ಡ್ರೋನ್ ಶೋ ಅನಧಿಕೃತ ಚಿತ್ರೀಕರಣ ಮಾಡಿದರೆ ಕ್ರಮ: ಸೆಸ್ಕ್ ಎಚ್ಚರಿಕೆ Read More

ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಡ್ರೋನ್: ಸಂಭ್ರಮಿಸಿದ ಜನತೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಡ್ರೋನ್ ಪ್ರದರ್ಶನ ಬಾನಂಗಳದಲ್ಲಿ ಚಿತ್ತಾರ ಬಿಡಿಸುವ ಮೂಲಕ ಜನತೆಯ ಕಣ್ಮನ ಸೆಳೆಯಿತು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ವತಿಯಿಂದ ದಸರಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಪ್ರದರ್ಶನ ಆಯೋಜಿಸಲಾಗಿತ್ತು

ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.

ಬಳಿಕ ನಡೆದ ಡ್ರೋನ್ ಪ್ರದರ್ಶನದಲ್ಲಿ 1500 ಡ್ರೋನ್ ಗಳು ಏಕಕಾಲದಲ್ಲಿ ಆಗಸದ ಎತ್ತರಕ್ಕೆ ಹಾರಿ ಹಲವು ಬಗೆಯ ಕಲಾಕೃತಿಗಳನ್ನು ರಚಿಸಿದವು.

ಬಾಟ್ ಲ್ಯಾಬ್ ಡೈನಮಿಕ್ಸ್ ಸಂಸ್ಥೆ ಸಹಯೋಗದೊಂದಿಗೆ ಈ ಡ್ರೋನ್ ಪ್ರದರ್ಶನ ನಡೆಯಿತು. ರಾತ್ರಿ 8.45ರ ಸುಮಾರಿಗೆ ಆರಂಭವಾದ ಡ್ರೋನ್ ಪ್ರದರ್ಶನದಲ್ಲಿ ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ,ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸುವ ಮೂಲಕ ನೆರೆದಿದ್ದ ಜನರಿಗೆ ನಿರೀಕ್ಷೆಗೂ ಮೀರಿದ ಅನುಭವ ನೀಡಿತು.

ರಾಜೇಶ್ ಕೃಷ್ಣನ್ ಹಾಡಿನ ಮೋಡಿ:
ಡ್ರೋನ್ ಪ್ರದರ್ಶನ ಆರಂಭಕ್ಕೂ ಮುನ್ನ ಖ್ಯಾತ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ತಮ್ಮ ಸುಮಧುರ ಕಂಠದಿಂದ ರಾಜೇಶ್ ಕೃಷ್ಣನ್,ಉಸಿರೇ ಉಸಿರೇ, ಜೊತೆಯಲಿ ಜೊತೆ ಜೊತೆಯಲಿ, ಯಾರೋ ಕಣ್ಣಲ್ಲಿ ಕಣ್ಣನಿಟ್ಟು, ಕುಚಿಕ್ಕು ಕುಚ್ಚಿಕು, ಕೂರಕ್ ಕುಕ್ಕರಹಳ್ಳಿಕೆರೆ ಸೇರಿದಂತೆ ಹಲವು ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ನರೇಂದ್ರ ಸ್ವಾಮಿ, ಸೆಸ್ಕ್ ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕ ಎಂ.ಕೆ.‌ ಸೋಮಶೇಖರ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ತಾಂತ್ರಿಕ ‌ವಿಭಾಗದ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು, ದಸರಾ ದೀಪಾಲಂಕಾರ ಉಪ ಸಮಿತಿ(ಅಧಿಕಾರೇತರ) ಅಧ್ಯಕ್ಷ ಸೈಯದ್ ಇಕ್ಬಾಲ್, ಉಪಾಧ್ಯಕ್ಷರಾದ ಸುಹೇಲ್ ಬೇಗ್, ಕಾಂತರಾಜ್ ಮತ್ತಿತರರು ಹಾಜರಿದ್ದರು.

ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಡ್ರೋನ್: ಸಂಭ್ರಮಿಸಿದ ಜನತೆ Read More