ಭ್ರಷ್ಟಾಚಾರ ಮುಕ್ತ- ಪಾರದರ್ಶಕ ಆಯ್ಕೆಗೆಬ್ಯಾಂಕಿಂಗ್ ಉದ್ಯೋಗ ಬೆಸ್ಟ್:ಕಲ್ಯಾಣ್

ಮೈಸೂರು: ಪ್ರಸ್ತುತ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗವು ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಯ್ಕೆಗೆ ದೇಶದಲ್ಲೇ ಹೆಸರಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕಲ್ಯಾಣ್ ಕುಮಾರ್ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ 50 ದಿನಗಳ ಕಾಲ ಏರ್ಪಡಿಸಿರುವ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಉದ್ಯೋಗಗಳ ಅಯ್ಕೆ ಪ್ರಕ್ರಿಯೆಯು ಹಲವಾರು ವಿವಾದಗಳಿಗೆ ಒಳಗಾಗಿ ನಾಲೈದು ವರ್ಷಗಳು ಹಿಡಿಯುತ್ತಿವೆ. ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೇವಲ ಆರು ತಿಂಗಳೊಳಗಾಗಿ ಅರ್ಜಿಯಿಂದ ಆಯ್ಕೆ ಪ್ರಕ್ರಿಯೆ ಮುಗಿದಿರುತ್ತದೆ, ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳಿಗೆ ಅತ್ಯುತ್ತಮ ಸಂಬಳ ಮತ್ತು ಇತರೆ ಆಕರ್ಷಕ ಭತ್ಯೆಗಳಿರುವುದರಿಂದ ಗೌರವಯುತ ಜೀವನ ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.

ಕರ್ನಾಟಕದ ಬಹುತೇಕ ಬ್ಯಾಂಕುಗಳಲ್ಲಿ ಉತ್ತರ ಭಾರತದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ನಮ್ಮ ಕನ್ನಡಿಗರಲ್ಲಿ ಈ ಕುರಿತು ತಿಳುವಳಿಕೆ ಇಲ್ಲ, ಜೊತೆಗೆ ಬ್ಯಾಂಕ್ ಪರೀಕ್ಷೆಗಳು ಕಷ್ಟ ಎನ್ನುವ ತಪ್ಪು ಮನೋಭಾವ ಇದಕ್ಕೆ ಕಾರಣ. ಇತ್ತೀಚೆಗೆ ಕರ್ನಾಟಕ ಸರ್ಕಾರ ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಕೇಂದ್ರದ ಮೇಲೆ ಒತ್ತಡ ಹೇರಿ ಸಫಲರಾಗಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ವಿದ್ಯಾರ್ಥಿ ಜೀವನದಲ್ಲಿ 15 ವರ್ಷ ಓದಿದವರು ಕೇವಲ 6 ತಿಂಗಳು ಛಲಬಿಡದೆ ನಿರಂತರ ಅಧ್ಯಯನ ಮಾಡಿದರೆ, ನಿಮ್ಮ ಜೀವನ ಕಟ್ಟಿಕೊಂಡು, ಮನೆ ಮಂದಿ ಮತ್ತು ನಂಬಿದವರ ಬದುಕನ್ನು ಕಟ್ಟಿಕೊಳ್ಳಲು ನೆರವಾಗಬಹುದು ಎಂದು ಸಲಹೆ ನೀಡಿದರು.

ಇಂದಿನ ಪೋಷಕರು ಮಕ್ಕಳಿಗೆ ಕಷ್ಟಗಳನ್ನು ತೋರಿಸಿ ಬೆಳೆಸಿದರೆ ಮಾತ್ರ ಅವರ ಅಭಿವೃದ್ಧಿ ಸಾಧ್ಯ. ಆದರೆ ಇಂದಿನ ಪೋಷಕರು ಇದನ್ನು ಮಾಡುತ್ತಿಲ್ಲ. ಹೀಗಾಗಿ ಯುವ ಸಮುದಾಯ ದಾರಿ ತಪ್ಪುತ್ತಿದೆ ಎಂದು ಕಲ್ಯಾಣ್ ಕುಮಾರ್ ವುಷಾದಿಸಿದರು.

ಕರ್ನಾಟಕ ಸರ್ಕಾರದ ಸೂಪರ್‌ ಟೈಮ್ಸ್ ಸ್ಕೆಲ್ ಕೆಎಎಸ್ ಅಧಿಕಾರಿ, ರಾಜ್ಯ ಪುರಾತತ್ವ ವಸ್ತು ಸಂಗ್ರಾಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಎ. ದೇವರಾಜು ಮಾತನಾಡಿ ಕರಾಮುವಿ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗೆ ನೀವು ಸೇರಿದರೆ ಅರ್ಧ ಯಶಸ್ಸು ಪಡೆದಂತೆಯೇ, ಅಸಂಖ್ಯಾತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಜೀವನ ರೂಪಿಸಿಕೊಂಡಿದ್ದಾರೆ.ಸಿದ್ಧತೆಯ ಹಾದಿ ಜಟಿಲವಿದ್ದರೂ ಗುರಿ ತಲುಪಬೇಕು ಎಂದು ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರು, ಕೆ.ಜಿ. ಕೊಪ್ಪಲ್ ಗಣೇಶ್, ಸಹಾಯಕ ಪ್ರಾಧ್ಯಾಪಕ ಡಾ.ಬೀರಪ್ಪ, ಡಾ. ನಾಗೇಶ್, ಸ್ಟುಡಿಯೋ ನಿರ್ದೇಶಕ ಸಿದ್ದೇಗೌಡ ಮತ್ತಿತರರು ಹಾಜರಿದ್ದರು.

ಭ್ರಷ್ಟಾಚಾರ ಮುಕ್ತ- ಪಾರದರ್ಶಕ ಆಯ್ಕೆಗೆಬ್ಯಾಂಕಿಂಗ್ ಉದ್ಯೋಗ ಬೆಸ್ಟ್:ಕಲ್ಯಾಣ್ Read More

ಸಾಧನೆಗೆ ಗುರಿ ಮುಖ್ಯ:ಎಸ್ ಪಿ ವಿಷ್ಣುವರ್ಧನ್ ಸಲಹೆ

ಮೈಸೂರು: ಸಾಧನೆಗೆ ಗುರಿ ಮುಖ್ಯ,ಈಗಿ ನಿಂದಲೇ ಗುರಿ ಇಟ್ಟುಕೊಂಡು ನಿಮ್ಮ ದಾರಿ ಸ್ಪಷ್ಟಪಡಿಸಿಕೊಳ್ಳಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಅವರು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಏರ್ಪಡಿಸಲಾಗಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುದ್ದೆಗಿಂತಲೂ ಮಾನವೀಯ ಮೌಲ್ಯ ಮುಖ್ಯ. ಹೀಗಾಗಿ ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ ಜೊತೆಗೆ ಶಿಸ್ತು, ಹಿರಿಯರ ಮೇಲೆ ಗೌರವ, ಪ್ರೀತಿ ಇಟ್ಟುಕೊಳ್ಳಬೇಕು ಆವಾಗಲೇ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಿಮ್ಮ ಬೌದ್ಧಿಕ ಬುದ್ಧಿ ಶಕ್ತಿ ಬಲವಾಗಿರುವುದರಿಂದ ಈ ನಿಟ್ಟಿನಲ್ಲಿ ನೀವು ಯಾವುದೇ ಹಾದಿಯನ್ನು ಸುಗಮವಾಗಿ ಸಾಧಿಸಬಹುದು. ಬ್ಯಾಂಕಿಂಗ್, ಯುಪಿಎಸ್ಸಿ, ಐಎಎಸ್ ಐಎಫ್ಎಸ್, ಕೆಎಎಸ್ ಸೇರಿದಂತೆ ಎಲ್ಲಾ ಪರೀಕ್ಷೆ ತೆಗೆದುಕೊಳ್ಳಿ ಪ್ರಯತ್ನಂ ಸರ್ವ ಸಾಧನಂ ಎನ್ನುವಂತೆ ಎಂದಾದರೂ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತದೆ ಎಂದು ಎಸ್ ಪಿ ಕಿವಿಮಾತು ಹೇಳಿದರು.

ಶಾಲೆಯಿಂದಲೇ ನಾನು ಗುರಿ ನಿಗದಿಪಡಿಸಿಕೊಂಡಿದ್ದೆ. ಅಂದಿನಿಂದಲೇ ಸತತ ಪ್ರಯತ್ನಿಸಿದೆ. ನಮ್ಮ ತಂದೆ ಕೂಡ ಪೊಲೀಸ್ ಇಲಾಖೆಯ ಅಧಿಕಾರಿಗಳಾಗಿದ್ದರು ಅವರೇ ನನಗೆ ಮಾದರಿ ಎಂದು ಹೇಳಿದರು.

ಹುದ್ದೆಗೆ ಸೇರಿದ ಮೇಲೆ ಪೋಷಕರನ್ನು ಮರೆಯಬಾರದು. ಸಾರ್ವಜನಿಕ ಸೇವೆಯೆ ನಮ್ಮ ಗುರಿ ಎನ್ನುವ ಅಂಶವನ್ನು ಮರೆಯಬಾರದು ಎಂದು ವಿಷ್ಣುವರ್ದನ್ ಹೇಳಿದರು.

ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಸಾಮರ್ಥ್ಯವನ್ನು ಗಟ್ಟಿಕೊಳಿಸಿ ಕೆಲಸಗಳನ್ನು ಚುರುಕುಗೊಳಿಸಬೇಕು ಎಂದು ಹೇಳಿದರು.

ಕುಲಸಚಿವ ಪ್ರೊ.ಕೆ. ಬಿ.ಪ್ರವೀಣ ಅವರು ಬ್ಯಾಂಕಿಂಗ್ ಹುದ್ದೆಗಳ ತರಬೇತಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅಧ್ಯಯನ ಕೇಂದ್ರದ ಡೀನ್ ಪ್ರೊ. ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿಗಳಾದ ಪ್ರೊ. ನಿರಂಜನ್ ರಾಜ್, ಸಂಯೋಜನಾಧಿಕಾರಿಗಳಾದ, ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ್ ಕೆ. ಜಿ ಕೊಪ್ಪಲ್ ಉಪಸ್ಥಿತರಿದ್ದರು.

ಸಾಧನೆಗೆ ಗುರಿ ಮುಖ್ಯ:ಎಸ್ ಪಿ ವಿಷ್ಣುವರ್ಧನ್ ಸಲಹೆ Read More