ಅನುದಾನ ತಾರತಮ್ಯ: ನಿಖಿಲ್ ಟೀಕೆ

ಬೆಂಗಳೂರು: ಎರಡು ವರ್ಷಗಳಿಂದ ಶಾಸಕರಿಗೆ ಅಭಿವೃದ್ಧಿ ನಿಧಿ ಇಲ್ಲ,ಈಗ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 50 ಕೋಟಿ ಮತ್ತು ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಬರೀ 25 ಕೋಟಿ ನೀಡಲಾಗುತ್ತಿದೆ ಎಂದು ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.

ತಾರತಮ್ಯದ ವಿರುದ್ಧ, ನಮ್ಮ ಶಾಸಕರಾದ ಶ್ರೀ ವೆಂಕಟಶಿವರೆಡ್ಡಿ ಅವರು ಎಲ್ಲಾ ಕ್ಷೇತ್ರಗಳಿಗೂ ಸಮಾನ ನಿಧಿಯನ್ನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು x ಖಾತೆಯಲ್ಲಿ ನಿಖಿಲ್ ಬರೆದಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಈ ವರ್ಷ ಕೇವಲ 5 ಗ್ಯಾರಂಟಿ ಯೋಜನೆಗಳಿಗೆ 56,000 ಕೋಟಿ ಖರ್ಚು ಮಾಡುತ್ತಿದೆ ಮತ್ತು ರಾಜ್ಯದಲ್ಲಿ 5,229 ಕೋಟಿ ಮೂಲಸೌಕರ್ಯ ವೆಚ್ಚವನ್ನು ಕಡಿತಗೊಳಿಸುತ್ತಿದೆ ಎಂದು ಸಿಎಜಿ ವರದಿ ಹೇಳುತ್ತದೆ.

ಕಾಂಗ್ರೆಸ್ ನಾಯಕರು ಗಳಲ್ಲಿ ರ್‍ಯಾಲಿಗಳಲ್ಲಿ ಸಂವಿಧಾನವನ್ನು ಬೀಸುತ್ತ “ನ್ಯಾಯ ಮತ್ತು ಸಮಾನತೆ” ಎಂದು ಕೂಗುತ್ತಾರೆ, ಆದರೆ ಅವರ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಅದನ್ನು ಮರೆತೇ ಬಿಡುತ್ತಾರೆ ಎಂದು ನಿಖಿಲ್ ವ್ಯಂಗ್ಯವಾಡಿದ್ದಾರೆ.

ಅನುದಾನ ತಾರತಮ್ಯ: ನಿಖಿಲ್ ಟೀಕೆ Read More

ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ಗುಡುಗು

ಬೆಂಗಳೂರು: ಗುಲ್ಬರ್ಗದಿಂದ ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ ಬಾಲಕಿಯ ಅಪಹರಿಸಿ ಅತ್ಯಾಚಾರ ಕೊಲೆ ನಡೆದು 5 ದಿನಗಳಾದರೂ ಸರ್ಕಾರ ಪರಿಹಾರ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕ ಕಿಡಿಕಾರಿದರು.

ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ಅಪ್ರಾಪ್ತ ಬಾಲಕಿಗೆ ಆದ ಈ ಅನ್ಯಾಯಕ್ಕೆ ಸಿಎಂ‌ ಸಿದ್ದರಾಮಯ್ಯ ಸರ್ಕಾರ ಈವರೆಗೂ ಪರಿಹಾರವನ್ನೂ ನೀಡಿಲ್ಲ, ಕನಿಷ್ಠ ಪಕ್ಷ ಸೌಜನ್ಯಕ್ಕೂ ಬಾಲಕಿಯ ತಂದೆತಾಯಿಯನ್ನು ಭೇಟಿಯಾಗಿ ಸಾಂತ್ವನ ಹೇಳಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು,
ಸ್ವಾಮಿ ಸಿದ್ದರಾಮಯ್ಯ ನವರೇ, ನಾವು ದಲಿತರು, ಹಿಂದುಳಿದವರ ಪರವಾಗಿದ್ದೇವೆ ಎಂದು ಬೊಗಳೆ ಭಾಷಣ ಮಾಡುತ್ತೀರಲ್ಲ, ನಿಮ್ಮ ತವರು ಜಿಲ್ಲೆಯಲ್ಲಿ, ಮೈಸೂರಿನ ಹೃದಯ ಭಾಗದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಗೆ ಆದ ಘೋರ ಅನ್ಯಾಯ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಕಾರವಾಗಿ ಪ್ರಶ್ನಿಸಿದರು.

ಒಂದು ಕಡೆ ಮೈಸೂರು ಜಿಲ್ಲೆಯನ್ನ ಸಂಪೂರ್ಣವಾಗಿ ನಿಮ್ಮ ಪುತ್ರನಿಗೆ ಬಿಟ್ಟುಕೊಟ್ಟು ವರ್ಗಾವಣೆ, ಕಮಿಷನ್ ದಂಧೆಯಲ್ಲಿ ತೊಡಗಿಸಿದ್ದೀರಿ. ಇನ್ನೊಂದು ಕಡೆ ತಾವು ಬೆಂಗಳೂರಿನಲ್ಲಿ ಡಿನ್ನರ್ ಮೀಟಿಂಗ್, ಕಲೆಕ್ಷನ್ ಟಾರ್ಗೆಟ್ ಮೀಟಿಂಗ್ ಎಂದು ಬಿಹಾರ ಚುನಾವಣೆಗೆ ಫಂಡಿಂಗ್ ಕಳುಹಿಸಲು ಪೈಪೋಟಿಗೆ ಬಿದ್ದಂತೆ ಸಚಿವರಿಗೆ ವಸೂಲಿ ಟಾರ್ಗೆಟ್ ನೀಡಿ ಅಕ್ಟೋಬರ್ ಕ್ರಾಂತಿಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವಲ್ಲಿ ಬ್ಯುಸಿ ಆಗಿದ್ದೀರಿ ಎಂದು ವ್ಯಂಗ್ಯವಾಗಿ ಟೀಕಿಸಿದರು.

ಹೀಗಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯದೇ ಇನ್ನೇನಾಗುತ್ತೆ, ಒಬ್ಬ ದಲಿತ ಬಾಲಕಿಯ ಕೊಲೆಯ ರಕ್ತ ನಿಮ್ಮ ಕೈಗಂಟಿದೆ. ಈ ಪಾಪದ ಶಾಪ ನಿಮ್ಮನ್ನ ತಟ್ಟದೇ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಕಲಬುರ್ಗಿಯ ಗ್ರಂಥಾಲಯದ ನೌಕರಿಯಲ್ಲಿದ್ದ ಮಹಿಳೆಯದು ಆತ್ಮಹತ್ಯೆಯಲ್ಲ; ಅದು ಸರಕಾರಿ ಪ್ರಾಯೋಜಿತ ಕೊಲೆ ಎಂದು ಆರ್. ಅಶೋಕ್ ಇದೇ ವೇಳೆ ಆರೋಪಿಸಿದರು.

ಈ ಅತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿದರು.

ವೇತನ ಸಿಗದೇ ಗ್ರಂಥಪಾಲಕರ ಆತ್ಮಹತ್ಯೆ, ಬಿಲ್ ಪಾವತಿ ಆಗದೇ ಗುತ್ತಿಗೆದಾರರ ಆತ್ಮಹತ್ಯೆ, ವರ್ಗಾವಣೆ ಕಮಿಷನ್ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ, ನಿಗಮಗಳಲ್ಲಿ ಸರಕಾರಿ ಸಾಲ ಸಿಗದೇ ಮೈಕ್ರೋ ಫೈನಾನ್ಸ್ ಕಿರುಕುಳದಲ್ಲಿ ಬಡವರ ಆತ್ಮಹತ್ಯೆ, ಬರ ಮತ್ತು ಅತಿವೃಷ್ಟಿಯಿಂದ ಪರಿಹಾರ ಸಿಗದೇ 300ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಇದು ಮನೆಹಾಳರ ಸರಕಾರ,
ದಿವಾಳಿ ಮಾಡಿ ಜನಸಾಮಾನ್ಯರಿಗೆ ಆತ್ಮಹತ್ಯೆ ಭಾಗ್ಯವನ್ನು ಆರನೇ ಗ್ಯಾರಂಟಿಯಾಗಿ ನೀಡಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಇವರು ಕಾಂಗ್ರೆಸ್ಸಿನ ಸಚಿವರಲ್ಲ; ಯಮ ಕಿಂಕರರು,ಸಾವಿನ ಗ್ಯಾರಂಟಿ ಕೊಡುತ್ತಿದ್ದಾರೆ, ಇದೊಂದು ಕೊಲೆಗಡುಕರ ಸರಕಾರ ಎಂದು ಆರೋಪಿಸಿದರು.

ಕೋಟಿ ಕೋಟಿ ಕೊಟ್ಟರೆ
ಸಿದ್ದರಾಮಯ್ಯ ಟಾರ್ಗೆಟ್ ಫಿಕ್ಸ್ ಆಗಿದೆ; ಕರ್ನಾಟಕದ ಬೊಕ್ಕಸ ಬರಿದಾಗಿದೆ. ಇದು ಡಿನ್ನರ್ ರಾಜಕೀಯದ ಕಾರ್ಯಸೂಚಿ ಎಂದು ಆರ್. ಅಶೋಕ್ ಟೀಕಿಸಿದರು.

ಬಿಹಾರಕ್ಕೆ 300 ಕೋಟಿಗೆ ಸಂಬಂಧಿಸಿ 300 ಚಿನ್ನದ ಗಟ್ಟಿಗಳು ಹೋಗಬೇಕಿತ್ತು. ಈಗ ಸಿದ್ದರಾಮಯ್ಯನವರು ಎಲ್ಲ ಸಚಿವರಿಗೆ ಒಂದೊಂದು ಚಿನ್ನದ ಗಟ್ಟಿ ಫಿಕ್ಸ್ ಮಾಡಿದ್ದಾರೆ. ಇಲಾಖೆ ಭಾರದನ್ವಯ ಕೋಟಿ ಕೋಟಿ ಕೊಟ್ಟರೆ ನೀವು ಡಿಸೆಂಬರ್‍ನಲ್ಲಿ ಸಚಿವರಾಗಿ ಇರುತ್ತೀರಿ; ಇಲ್ಲವಾದರೆ, ಜನವರಿಯಲ್ಲಿ ನೀವು ಇರುವುದಿಲ್ಲ ಎಂದು ತಿಳಿಸಿದ್ದಾರೆ, 300 ರೂ. ಊಟ ಕೊಟ್ಟು 300 ಕೋಟಿ ವಸೂಲಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಕಿರಣ್ ಮಜುಂದಾರ್ ಅವರು ಬೆಂಗಳೂರು ಕುರಿತು ಟ್ವೀಟ್ ಮಾಡಿದ್ದಾರೆ. ಇದು ಸರ್ಕಾರದ ಮುಖಕ್ಕೆ ಮಂಗಳಾರತಿ ಎತ್ತಿದಂತಲ್ಲವೇ ಎಂದು ಪ್ರತಿ ಪಕ್ಷದ ನಾಯಕ ಪ್ರಶ್ನಿಸಿದರು.

ಮಾಲೂರಿನ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ಸತ್ಯ ಹೊರಬರಲಿ; ಮತಗಳ್ಳರು ಯಾರೆಂದು ಗೊತ್ತಾಗಲಿ ಎಂದು ಸುದ್ದಿಗಾರರ ಪ್ರಶ್ನೆಗೆ ಅಶೋಕ್ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಉಪಸ್ಥಿತರಿದ್ದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ಗುಡುಗು Read More

ಡಿಜಿಟಲ್ ಅರೆಸ್ಟ್ ಮೂಲಕ ಸಾರ್ವಜನಿಕರಿಗೆವಂಚನೆ -16 ಮಂದಿ ಅರೆಸ್ಟ್

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಡಿಜಿಟಲ್ ಅರೆಸ್ಟ್ ಮೂಲಕ ಸಾರ್ವಜನಿಕರಿಗೆ ಕರೆ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿದ್ದ 16 ಮಂದಿಯನ್ನು ಎಚ್‌ ಎಸ್‌ ಆ‌ರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಅವರಲ್ಲಿ ನಾಲ್ವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ. ಈ ಎಲ್ಲಾ ಆರೋಪಿಗಳು ಎಚ್‌ಎಸ್‌ಆರ್‌ ಲೇಔಟ್ 27ನೇ ಮುಖ್ಯರಸ್ತೆಯಲ್ಲಿ ನಕಲಿ ಬಿಪಿಒ ಕಂಪನಿ ತೆರೆದು ಅಮಾಯಕರನ್ನು ತಮ್ಮ ಸಿಬ್ಬಂದಿ ಮೂಲಕ ಕರೆ ಮಾಡಿಸಿ ವಂಚಿಸುತ್ತಿದ್ದರು.

ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಇನ್ಸ್ಪೆಕ್ಟರ್‌ ಹರೀಶ್ ಕುಮಾರ್‌ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು 16 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅಲ್ಲದೆ, ಕಚೇರಿಯಲ್ಲಿದ್ದ 40ಕ್ಕಿಂತ ಹೆಚ್ಚು ಕಂಪ್ಯೂಟರ್‌ ಮತ್ತಿತರ ಉಪಕರಣಗಳನ್ನ ವಶಕ್ಕೆ ಪಡೆದಿದ್ದಾರೆ.ಈಗ ತನಿಖೆಯನ್ನು ಆಗ್ನೆಯ ವಿಭಾಗ ಸೈಬರ್ ಕ್ರೈಂ ಠಾಣೆಗೆ ವರ್ಗಾಯಿಸಲಾಗಿದೆ.

ವಂಚಕರು ಕಳೆದ 2 ವರ್ಷಗಳ ಹಿಂದೆ ಸೈಬಿಟ್ಸ್ ಸಲ್ಯೂಷನ್ ಪ್ರವೇಟ್ ಲಿಮಿಡೆಟ್ ಹೆಸರಿನಲ್ಲಿ ಬಿಪಿಒ ಕಂಪನಿ ತೆರೆದಿದ್ದರು. ಕಟ್ಟಡದ 2 ಮಹಡಿಗಳಲ್ಲಿ ಒಟ್ಟು 20 ರಿಂದ 25 ಮಂದಿ ನೌಕರರು ಕೆಲಸ ಮಾಡುತ್ತಿದ್ದರು.
ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಆನ್‌ಲೈನ್‌ನಲ್ಲಿ ಕೆಲಸವೆಂದು ಹೇಳಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡು ಸಾರ್ವಜನಿಕರಿಗೆ ಹೇಗೆ ವಂಚಿಸಬೇಕೆಂದು ತರಬೇತಿ ನೀಡುತ್ತಿದ್ದರು. ನಂತರ ಯುಎಸ್‌ಎ ಮತ್ತಿತರ ದೇಶಗಳ ಪ್ರಜೆಗಳಿಗೆ ರಾತ್ರಿ ವೇಳೆ ಪೊಲೀಸರು ಸೇರಿ ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಮಾದಕ ವಸ್ತು ಮಾರಾಟ ಹಾಗೂ ಇತರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ, ಡಿಜಿಟಲ್ ಅರೆಸ್ಟ್ ಮಾಡುವುದಾಗಿ ನಂಬಿಸಿ ವಂಚಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಹಣ ವಸೂಲು ಮಾಡುತ್ತಿದ್ದರು,ಖಚಿತ ಮಾಹಿತಿ ಆಧರಿಸಿ ಕಂಪನಿ ಮೇಲೆ ದಾಳಿ ನಡೆಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಡಿಜಿಟಲ್ ಅರೆಸ್ಟ್ ಮೂಲಕ ಸಾರ್ವಜನಿಕರಿಗೆವಂಚನೆ -16 ಮಂದಿ ಅರೆಸ್ಟ್ Read More

ವಿದ್ಯೆ, ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ ಅವಕಾಶ ಸಿಗಬೇಕು ಅಷ್ಟೆ – ಸಿಎಂ

ಬೆಂಗಳೂರು: ವಿದ್ಯೆ ಹಾಗೂ ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ, ಅವಕಾಶ ಸಿಗಬೇಕು ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನೃಪತುಂಗ ವಿಶ್ವ ವಿದ್ಯಾಲಯದಲ್ಲಿ ರೂಸಾ ಯೋಜನೆಯಡಿ ನಿರ್ಮಿಸಿರುವ ನೂತನ ಶೈಕ್ಷಣಿಕ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ರಾಮಾಯಣ ಬರೆದ ವಾಲ್ಮೀಕಿ ಬೇಡರ ಜಾತಿಯವರಾದರೆ, ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ಹೀಗಾಗಿ ವಿದ್ಯೆ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶಗಳು ಬೇಕು ಅಷ್ಟೆ ಎಂದು ಹೇಳಿದರು.

ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಂಡರೆ ನಿಮ್ಮ‌ ಹಾಗೂ ಸಮಾಜದ ಪ್ರಗತಿ ಸಾಧ್ಯ, ಈ ದಿಕ್ಕಿನಲ್ಲಿ ವಿಜ್ಞಾನ ವಿದ್ಯಾರ್ಥಿಗಳು ಸಮಾಜವನ್ನು ಮುನ್ನಡೆಸಬೇಕು ಎಂದು ಸಿಎಂ ಸಲಹೆ ನೀಡಿದರು.

ವಿಜ್ಞಾನ ಓದುವವರು ಮತ್ತು ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಅಪಾಯದ ಸಂಗತಿ‌. ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಶಿಕ್ಷಣ ಸಮಾಜದ ಮತ್ತು ದೇಶದ ಪ್ರಗತಿಗೆ ಅತ್ಯಗತ್ಯ ಎಂದು ಮುಖ್ಯ ಮಂತ್ರಿಗಳು ಒತ್ತಿ ಹೇಳಿದರು.

ವಿಜ್ಞಾನ ಓದಿದವರೂ ಮೂಢನಂಬಿಕೆ ಮತ್ತು ಕಂದಾಚಾರಕ್ಕೆ ಗಂಟು ಬೀಳುವುದು ಶಿಕ್ಷಣ ಕಲಿಕೆಯಲ್ಲಿನ ಕೊರತೆಯಾಗಿದೆ‌ ಎಂದು ಬೇಸರ ವ್ಯಕ್ತಪಡಿಸಿದರು.

ಬಹಳ ಹಿಂದೆಯೇ ಬಸವಾದಿ ಶರಣರು ಮೌಡ್ಯ, ಕಂದಾಚಾರಗಳ ವಿರುದ್ಧ ಕರೆ ನೀಡಿದರು ಆದರೆ, ಇವತ್ತಿಗೂ ಮೌಡ್ಯ ಹೋಗಿಲ್ಲ. ಏಕೆಂದರೆ ನಮ್ಮದು ಜಾತಿ ತಾರತಮ್ಯದ ಸಮಾಜ ಆಗಿರುವುದರಿಂದ ಇದಕ್ಕೆ ಚಲನೆ ಇಲ್ಲ. ಪಟ್ಟಭದ್ರರು ತಾರತಮ್ಯವನ್ನು ಗಟ್ಟಿಗೊಳಿಸುವ ಸಲುವಾಗಿಯೇ ಮೌಡ್ಯವನ್ನು ಬಿತ್ತುತ್ತಾರೆ ಎಂದು ವಿಷಾದಿಸಿದರು.

ನಾನು ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಮೌಡ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಅಷ್ಟರಮಟ್ಟಿಗೆ ಮೌಡ್ಯ ಮತ್ತು ಮೌಡ್ಯ ಹಂಚುವ ಪಟ್ಟಭದ್ರರು ಆಳವಾಗಿ ಬೇರು ಬಿಟ್ಟಿದ್ದಾರೆ ಎಂದು ಸಿಎಂ ಹೇಳಿದರು.

ವಿಜ್ಞಾನ ಓದಿದವರಿಗೆಲ್ಲಾ ವೈಜ್ಞಾನಿಕ‌ ಮನೋಭಾವ ಇಲ್ಲದಿರುವುದು ದುರಂತ. ವಿಜ್ಞಾನ ಓದಿಯೂ ಹಣೆಬರಹ ಮತ್ತು ಕರ್ಮ ಸಿದ್ದಾಂತ, ಗ್ರಹಚಾರಗಳನ್ನೆಲ್ಲಾ ನಂಬುತ್ತಾರೆ ಎಂದರೆ ಇವರು ವಿಜ್ಞಾನ ಓದಿದ್ದೇ ದಂಡ ಎಂದು ತಿಳಿಸಿದರು.

ದೇಶದ ಪ್ರಧಾನಿ ಆಗಿದ್ದ ಜವಾಹರಲಾಲ್ ನೆಹರೂ ಅವರು ದೇಶದ ಯುವ ಜನತೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲಿ ಎನ್ನುವ ದೂರದೃಷ್ಟಿ ಹೊಂದಿದ್ದರು. ಇದಕ್ಕೆ ಅಗತ್ಯವಾದ ಶೈಕ್ಷಣಿಕ ಸಾಧನೆಗಳಿಗೆ ಕಾರಣರಾಗಿದ್ದರು ಎಂದು ಸಿದ್ದರಾಮಯ್ಯ‌ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ವಿದ್ಯೆ, ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ ಅವಕಾಶ ಸಿಗಬೇಕು ಅಷ್ಟೆ – ಸಿಎಂ Read More

ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ ಹಂಪನಾ – ಸಿಎಂ

ಬೆಂಗಳೂರು: ಹಂಪನಾ ಅವರು ಕೇವಲ ಸಾಹಿತ್ಯ ರಚನೆಗಾಗಿ ಸಾಹಿತಿಯಾದವರಲ್ಲ, ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು.

ಗಾಂಧಿ ಭವನದಲ್ಲಿ ನಡೆದ “ಹಂಪನಾ 90” ಸಾಹಿತ್ಯ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ,
ಹಂಪನಾ ಅವರು ಸಮಾಜಮುಖಿ ಆಗುವ ಮೂಲಕ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ,ಅವರು ಕನ್ನಡಿಗರ ಹೆಮ್ಮೆಯ ನಾಗರಾಜಯ್ಯ ಎಂದು ಕೊಂಡಾಡಿದರು.

ನಾಗರಾಜಯ್ಯ ಅವರ ಸಾಹಿತ್ಯ ಮತ್ತು ಬದುಕಿಗೆ ನಾನು ಸಾಕ್ಷಿ ಆಗಿರುವುದು ನನ್ನ ಜೀವನದ ಸೌಭಾಗ್ಯ,ಅವರ ಬದುಕು ಮತ್ತು ಬರಹ ಹಾಗೂ ಸಾರ್ಥಕತೆ ಇಡೀ ಸಮಾಜಕ್ಕೆ ಮಾರ್ಗದರ್ಶನ ಎಂದು ಸಿಎಂ ಹೇಳಿದರು.

ಸಾಹಿತ್ಯ ಕೃಷಿಯಲ್ಲಿ ಮಾತ್ರವಲ್ಲದೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ.ಅವರ ಕೆಲಸ ಕನ್ನಡ ಜಗತ್ತಿಗೆ ತಲುಪಿರುವುದು ಅತ್ಯಂತ ಮಹತ್ವದ ಸಂಗತಿ ಎಂದು ಸಿಎಂ ನುಡಿದರು.

ಭಾಷಾ ಶಾಸ್ತ್ರ, ಸಂಶೋಧನೆ, ಮಕ್ಕಳ ಸಾಹಿತ್ಯ, ವಿಮರ್ಷೆ ಸೇರಿ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿ ಬೆರಗು ಮೂಡಿಸುವ ಕೆಲಸ ಮಾಡಿದ್ದಾರೆ,ಹಂಪನಾ ಅವರು ಒಳ್ಳೆ ವಾಗ್ಮಿ. ಅಧ್ಯಾಪಕರೂ ಆಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರೂ ಆಗಿದ್ದರು. ನಾನು ಸಾಹಿತ್ಯದ ವಿದ್ಯಾರ್ಥಿ ಅಲ್ಲ. ಆದರೂ ಸಾಹಿತ್ಯ ವಲಯದ ಒಡನಾಟ ಹೆಚ್ಚಾಗಿದ್ದು ನಾನು ಹಂಪನಾ ಅವರ ಅಭಿಮಾನಿ ಎಂದು ಸಿದ್ದರಾಮಯ್ಯ ಹೇಳಿದರು.

ಕಮಲಾ ಮತ್ತು ಹಂಪನಾ ಅವರು ಅದ್ಭುತ ದಂಪತಿ. ಇಬ್ಬರೂ ಸಾಹಿತ್ಯ ಕೃಷಿಯಲ್ಲಿ ಸಾಧನೆ ಮಾಡಿದವರು. ಇಬ್ಬರೂ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ ಮುಖ್ಯ ಮಂತ್ರಿಗಳು,ಹಂಪನಾ ಅವರು ಇನ್ನೂ ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕಲಿ ಎಂದು ಹಾರೈಸಿದರು.

ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ ಹಂಪನಾ – ಸಿಎಂ Read More

ಬೆಂಗಳೂರು ನಗರ ಸಮಗ್ರ ಬದಲಾವಣೆ:ಬಿ ಪ್ಯಾಕ್ ನಿಂದ‌ ಸಮಾವೇಶ

ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ)ಯು ಬೆಂಗಳೂರು ನಗರ ಆಡಳಿತವನ್ನು ಬಲಪಡಿಸಲು ಮತ್ತು ನಗರದ ಸಮಗ್ರ ಬದಲಾವಣೆಗೆ ಚಾಲನೆ ನೀಡುವ ಮುನ್ನುಡಿ ಬರೆದಿದೆ.

ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪ್ಯಾಕ್), ಬೆಂಗಳೂರು ಮೌಂಟ್ ಕಾರ್ಮೆಲ್ ಕಾಲೇಜಿನ ಸಹಯೋಗದೊಂದಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ – ನಮ್ಮ ಬೆಂಗಳೂರಿನ ಉತ್ತಮ ಆಡಳಿತಕ್ಕೆ ಮಾರ್ಗ ಎಂಬ ಶೀರ್ಷಿಕೆಯಡಿ ಒಂದು ದಿನದ ಸಮಾವೇಶವನ್ನು ಆಯೋಜಿಸಿತ್ತು.

ಈ ಸಮಾವೇಶವು ಶಾಸಕರು, ಹಿರಿಯ ಆಡಳಿತಗಾರರು, ನಗರ ಯೋಜಕರು, ನೀತಿ ತಜ್ಞರು ಮತ್ತು ನಾಗರಿಕರನ್ನು ಒಟ್ಟುಗೂಡಿಸಿ, ಬೆಂಗಳೂರಿನ ಆಡಳಿತ ಮಾದರಿಯನ್ನು ಮರುಕಲ್ಪನೆ ಮಾಡಲು ಮತ್ತು ಹೆಚ್ಚು ಸಮರ್ಥನೀಯವಾದ, ಕಾರ್ಯಕ್ರಮ, ನಾಗರಿಕ ಕೇಂದ್ರಿತ ನಗರಕ್ಕೆ ರೂಪರೇಷೆ ರೂಪಿಸಲು ವೇದಿಕೆಯನ್ನು ಒದಗಿಸಿತು.

ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್, ಜಿಬಿಎ ಚೌಕಟ್ಟಿನಡಿ ಕರ್ನಾಟಕ ಸರ್ಕಾರದ ಏಕೀಕೃತ ಮತ್ತು ಕಾರ್ಯಕ್ಷಮ ಆಡಳಿತ ರಚನೆಯ ದೃಷ್ಟಿಕೋನವನ್ನು ತಿಳಿಸಿದರು.

ಹಿರಿಯ ಪತ್ರಕರ್ತೆ ಮಾಯಾ ಶರ್ಮಾ ಅವರೊಂದಿಗಿನ ಸಂವಾದದಲ್ಲಿ ಸರ್ಕಾರದ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆ, ಸಂಚಾರ ಮತ್ತು ಸೇವಾ ಸುಧಾರಣೆಗಳ ಬದ್ಧತೆಯ ಕುರಿತು ಪುನರುಚ್ಚರಿಸಿದರು.

ನಾವು ಹೆಚ್ಚುವರಿ ವಾರ್ಡ್ ಸೇರಿಸಿ 369 ವಾರ್ಡ್‌ಗಳನ್ನಾಗಿ ಮಾಡುತ್ತೇವೆ, 104 ಕಿ.ಮೀ ಬೆಂಗಳೂರು ವ್ಯಾಪಾರ ಕಾರಿಡಾರ್ ಕಾಮಗಾರಿಗೆ ವೇಗವನ್ನು ಹೆಚ್ಚಿಸಲಾಗುತ್ತದೆ. ಪ್ರಸ್ತಾವಿತ ಎಲಿವೇಟೆಡ್ ಕಾರಿಡಾರ್‌ಗಳು, ಸುರಂಗಗಳು ಮತ್ತು ನಗರದಾದ್ಯಂತ ರಸ್ತೆ ಯೋಜನೆಗಳು ಸಂಚಾರವನ್ನು ಸುಗಮಗೊಳಿಸುತ್ತವೆ ಎಂದು ತಿಳಿಸಿದರು.

ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ರವಿಚಂದ್ರನ್ ವಿ, ಬ್ರಾಂಡ್ ಬೆಂಗಳೂರು ಸಮಿತಿ ಸದಸ್ಯ, ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತೆ ನಿತ್ಯ ಮಂದ್ಯಂ ಅವರೊಂದಿಗೆ ಈ ಬಿಲ್‌ನ ಕಾನೂನಾತ್ಮಕ ಉದ್ದೇಶ ಮತ್ತು ನಾಗರಿಕರ ಮೇಲಿನ ಪರಿಣಾಮವನ್ನು ಕುರಿತು ಚರ್ಚಿಸಲಾಯಿತು.

ಈ ವೇಳೆ ರಿಜ್ವಾನ್ ಅರ್ಷದ್ ನಾಗರಿಕ ಕೇಂದ್ರಿತ ನಗರಕ್ಕೆ ವಿಕೇಂದ್ರೀಕರಣದ ಮಹತ್ವವನ್ನು ಒತ್ತಿ ಹೇಳಿದರು.

ಬೆಂಗಳೂರು ಮುನ್ಸಿಪಾಲಿಟಿಯು ನಾಗರಿಕ ಕೇಂದ್ರಿತವಾಗಿರಬೇಕಾದರೆ, ಅದು ವಿಕೇಂದ್ರೀಕೃತವಾಗಿರಬೇಕು. ಬೆಂಗಳೂರಿನ ಪ್ರತಿಯೊಂದು ಭಾಗವೂ ವಿಭಿನ್ನ ಸಮಸ್ಯೆಯನ್ನು ಹೊಂದಿದೆ. ಆಡಳಿತವು ಜನರಿಗೆ ಸಮೀಪವಾಗಿರಬೇಕು. ಆಡಳಿತವನ್ನು ಹತ್ತಿರವಾಗಿ ಮತ್ತು ಹೆಚ್ಚು ಜವಾಬ್ದಾರಿಯುತವಾಗಿಸಲು ನಾವು ಹೆಚ್ಚು ಕಾರ್ಪೊರೇಷನ್‌ಗಳನ್ನು ರಚಿಸಿದ್ದೇವೆ ಎಂದು ಹೇಳಿದರು.

ಮಹೇಶ್ವರ ರಾವ್. ಎಂ, ಐಎಎಸ್, ಮುಖ್ಯ ಆಯುಕ್ತ, ಜಿಬಿಎ; ಡಾ. ರವಿಶಂಕರ್ ಜೆ, ಐಎಎಸ್, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್, ಕಾರೀ ಗೌಡ, ಸಿಇಒ, ಬಿಎಸ್‌ಡಬ್ಲ್ಯೂಎಂಎಲ್; ಡಾ. ಅನೂಪ್ ಶೆಟ್ಟಿ, ಡಿಸಿಪಿ ವೆಸ್ಟ್; ಡಾ. ರಾಜೇಂದ್ರ ಕೆವಿ, ಕಮಿಷನರ್ ವೆಸ್ಟ್ ಸಿಟಿ ಕಾರ್ಪೊರೇಷನ್; ಪ್ರಭಾಕರ್ ಮತ್ತಿತರರು ಮಾತನಾಡಿದರು.

ರೇವತಿ ಅಶೋಕ್ ಅವರು ಜಿಬಿಎಯಲ್ಲಿ ಕ್ರಿಯಾತ್ಮಕತೆ ಕುರಿತು ಒಂದು ಅಧ್ಯಾಯವಿಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಆರೋಗ್ಯ, ಶಿಕ್ಷಣ, ಬಡತನ ನಿವಾರಣೆ, ಸಾಮಾಜಿಕ ನ್ಯಾಯ, ತ್ಯಾಜ್ಯ ನಿರ್ವಹಣೆ ಇತ್ಯಾದಿಗಳಿಗೆ ನಿರ್ದಿಷ್ಟ ಅಧ್ಯಾಯಗಳಿವೆ. ಸಂಚಾರವನ್ನು ಬಲಪಡಿಸಲು ಜಿಬಿಎ ಹೇಗೆ ಖಚಿತಪಡಿಸುತ್ತದೆ ಎಂದು ಪ್ರಶ್ನಿಸಿದರು.

ಅದಕ್ಕೆ ಮಹೇಶ್ವರ ರಾವ್ ಉತ್ತರಿಸಿ, ನಗರದಲ್ಲಿ ಸಂಚಾರ ಸಮಸ್ಯೆ ಇರುವುದನ್ನು ಒಪ್ಪಿಕೊಂಡರು. ಪಾದಚಾರಿಗಳಿಗೆ ಉತ್ತಮ ಗುಣಮಟ್ಟದ ನಡಿಗೆಯನ್ನು ಒದಗಿಸಲು ಫುಟ್‌ಪಾತ್‌ಗಳನ್ನು ಸುಧಾರಿಸುವುದು, ಅಡೆತಡೆಗಳನ್ನು ತೆಗೆದುಹಾಕುವುದು ಮತ್ತು ಸಕ್ರಿಯ ಚಲನಶೀಲತೆಯನ್ನು ಉತ್ತೇಜಿಸುವುದು ತಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.

ರಸ್ತೆಬದಿಯಲ್ಲಿ ದೊಡ್ಡ ಪ್ರಮಾಣದ ಕಸ, ಶಿಥಿಲಗಳು, ಸೋಫಾ ಸೆಟ್‌ಗಳು ಮತ್ತು ಸ್ಯಾನಿಟರಿ ವೇರ್‌ನಂತಹ ತ್ಯಜಿಸಲಾದ ವಸ್ತುಗಳ ಕುರಿತು ಕೇಳಿದ ಪ್ರಶ್ನೆಗೆ ಕಾರೀಗೌಡ ಉತ್ತರಿಸಿ ನಗರದಾದ್ಯಂತ ಶೀಘ್ರದಲ್ಲೇ ಇಂತಹ ತ್ಯಜಿಸಲಾದ ವಸ್ತುಗಳಿಗಾಗಿ ಸಾಪ್ತಾಹಿಕ ಸಂಗ್ರಹ ಡ್ರೈವ್ ಆಯೋಜಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ನಗರ ಸಮಗ್ರ ಬದಲಾವಣೆ:ಬಿ ಪ್ಯಾಕ್ ನಿಂದ‌ ಸಮಾವೇಶ Read More

ಪ್ರಾಣಿ ಸಂಪತ್ತು ನಾಶಪಡಿಸುವವರ ವಿರುದ್ಧ ಕಠಿಣ ಕ್ರಮ-ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು: ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ, ಹಾಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪರಿಸರ, ಅರಣ್ಯ ಸಂರಕ್ಷಕರಿಗೆ ಮುಖ್ಯಮಂತ್ರಿ ಪದಕ ವಿತರಿಸಿ ಸಿಎಂ ಮಾತನಾಡಿದರು.

ಸಾಕಿದ ಹಸುವನ್ನು ತಿಂದಿದೆ ಎಂಬ ಕಾರಣಕ್ಕೆ ಹುಲಿಗಳಿಗೆ ವಿಷ ಹಾಕುವುದನ್ನು ಸಹಿಸಲು ಸಾಧ್ಯವಿಲ್ಲ. ಯಾರೇ ಅರಣ್ಯ ಮತ್ತು ಪ್ರಾಣಿ ಸಂಪತ್ತನ್ನು ಕೊಲ್ಲಲು ಮುಂದಾದರೆ ಅವರು ಎಷ್ಟೇ ದೊಡ್ಡವರಾಗಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದರು.

ಅರಣ್ಯ ಪರಿಸರ ಆರೋಗ್ಯಕರವಾಗಿ ವಿಸ್ತರಣೆ ಆದಷ್ಟೂ ಮನುಷ್ಯ ಪರಿಸರ ಹೆಚ್ಚು ಆರೋಗ್ಯಕರವಾಗಿರುತ್ತದೆ. ಅರಣ್ಯದ ಉಳಿವು ಭೂಮಿಯ ಉಳಿವು ಎನ್ನುವುದನ್ನು ಮರೆಯಬಾರದು ಎಂದು ತಿಳಿಹೇಳಿದರು.

ಆನೆ ಮತ್ತು ಹುಲಿ ಸಂಪತ್ತಿನಲ್ಲಿ ನಮ್ಮ ರಾಜ್ಯ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ. ಇದರ ಜೊತೆಗೆ ಪ್ರಾಣಿ ಮತ್ತು ಮನುಷ್ಯರ ಸಂಘರ್ಷ ತಪ್ಪಬೇಕು, ಪ್ರಾಣಿಗಳು ಕಾಡು ಬಿಟ್ಟು ಹೊರಗೆ ಏಕೆ ಬರುತ್ತಿವೆ ಎಂಬ ಬಗ್ಗೆ ಅಧ್ಯಯನಗಳು ನಡೆದು ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ ಎಂದು ಮುಖ್ಯ ಮಂತ್ರಿಗಳು ಹೇಳಿದರು.

ದಿನೇ ದಿನೇ ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದರೆ ಮನುಷ್ಯ ಕುಲ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಅರಣ್ಯದ ಉಳಿವು ಮನುಷ್ಯನ ಉಳಿವು ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ, ಅರಣ್ಯ ರಾಯಬಾರಿ ಅನಿಲ್ ಕುಂಬ್ಳೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಾಣಿ ಸಂಪತ್ತು ನಾಶಪಡಿಸುವವರ ವಿರುದ್ಧ ಕಠಿಣ ಕ್ರಮ-ಸಿದ್ದರಾಮಯ್ಯ ಎಚ್ಚರಿಕೆ Read More

ಕುರುಬರನ್ನು ಎಸ್ ಟಿ ಗೆ ಸೇರಿಸಿದರೆ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಸಿಎಂ

ಬೆಂಗಳೂರು: ಅಧಿಕಾರದಲ್ಲಿದ್ದಾಗ ನಿಮ್ಮ ಪರವಾಗಿ ಕೆಲಸ ಮಾಡಿ, ನಿಮ್ಮ ಸಮುದಾಯದ ಬದುಕಿನ ಅವಕಾಶಗಳನ್ನು ಹೆಚ್ಚಿಸಿದವರ ಪರವಾಗಿ ನೀವುಗಳು ಗಟ್ಟಿಯಾಗಿ ನಿಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಸಮುದಾಯಕ್ಕೆ ಕರೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಪ್ರಶಸ್ತಿಗಳನ್ನು ವಿತರಿಸಿ ಸಿಎಂ ಮಾತನಾಡಿದರು.

ಎಸ್ ಸಿ,ಎಸ್ ಟಿ ಸಮುದಾಯಗಳಿಗೆ ಜನಸಂಖ್ಯೆ ಪ್ರಮಾಣದಷ್ಟೇ ಅಭಿವೃದ್ಧಿ ಬಜೆಟ್ ನಲ್ಲೂ ಹಣ ಮೀಸಲಿಡಲು ಕಾಯ್ದೆ ಮಾಡಿದ್ದು ಇದೇ ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ. ಎಸ್ ಸಿ,ಎಸ್ ಟಿ ಸಮುದಾಯಗಳಿಗೆ ಹೋಬಳಿಗೊಂದರಂತೆ ವಸತಿ ಶಾಲೆ, ಮೊರಾರ್ಜಿ ಶಾಲೆಗಳನ್ನು ಮಾಡಿದ್ದು ಇದೇ ಸಿದ್ದರಾಮಯ್ಯ. ಹೀಗಾಗಿ ಈ ಇತಿಹಾಸವನ್ನೆಲ್ಲಾ ಚೆನ್ನಾಗಿ ತಿಳಿದುಕೊಳ್ಳಿ. ಅಧಿಕಾರದಲ್ಲಿದ್ದಾಗ ಯಾರು ನಿಮ್ಮ ಪರವಾಗಿ ಇದ್ದಾರೋ ಅವರ ಪರವಾಗಿ ಸಮುದಾಯ ನಿಲ್ಲಬೇಕು ಎಂದು ಹೇಳಿದರು.

ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು ಎಸ್ ಟಿ ಗೆ ಸೇರಿಸಲು ನಾನು ಮತ್ತು ಉಗ್ರಪ್ಪ ಅವರು ರಾಮಕೃಷ್ಣ ಹೆಗಡೆಯವರಿಗೆ ಮನವಿ ಮಾಡಿದ್ದೆವು. ಹೆಗಡೆಯವರು ನಮ್ಮ ಮನವಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೂ ಆಗ ಸೇರಿಸಲು ಆಗಲಿಲ್ಲ. ಆದರೆ, ಉಗ್ರಪ್ಪ ಅವರು ಸುಮ್ಮನೆ ಕೂರಲಿಲ್ಲ. ಉಗ್ರಪ್ಪ ಮತ್ತು ದೇವೇಗೌಡರ ನಡುವಿನ‌ ಒಡನಾಟ ಆಗಲೂ ಚೆನ್ನಾಗಿತ್ತು. ಈಗಲೂ ಚನ್ನಾಗಿದೆ. ದೇವೇಗೌಡರು ಮತ್ತು ಚಂದ್ರಶೇಖರ್ ಅವರ ಒಡನಾಡ ಚನ್ನಾಗಿತ್ತು. ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದಾಗ ಅವರನ್ನು ದೇವೇಗೌಡರ ಮೂಲಕ ಒಪ್ಪಿಸಿ ವಾಲ್ಮೀಕಿ ಸಮುದಾಯವನ್ನು ಎಸ್ ಟಿ ಗೆ ಸೇರಿಸಿದರು ಎಂದು ಸ್ಮರಿಸಿದರು.

ವಾಲ್ಮೀಕಿ, ಬೇಡ ಮತ್ತು ನಾಯಕ‌ ಸಮುದಾಯಕ್ಕೆ ಮೀಸಲಾತಿ ದೊರಕಲು ಉಗ್ರಪ್ಪನವರೇ ಕಾರಣ ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.

ಈಗ ಕುರುಬರನ್ನು ಎಸ್ ಟಿ ಗೆ ಸೇರಿಸಲು ಹೋರಾಟ ಮಾಡಿದವರು ನಾವಲ್ಲ. ಬಿಜೆಪಿಯ ಈಶ್ವರಪ್ಪ ಹೋರಾಟ ಮಾಡಿದರು. ಸಿಎಂ ಆಗಿದ್ದ ಬೊಮ್ಮಾಯಿ ಅವರು ಈಶ್ವರಪ್ಪ ಅವರ ಮನವಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ. ಅದು ನಮ್ಮೆದುರಿಗಿದೆ ಎಂದು ಸ್ಪಷ್ಟಪಡಿಸಿದರು.

ಕುರುಬರನ್ನು ಎಸ್ ಟಿ ಗೆ ಸೇರಿಸಿದರೆ ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಎನ್ನುವುದಕ್ಕೆ ನನ್ನ ಬೆಂಬಲ, ಸಹಮತ ಇದೆ. ಯಾರೂ ಯಾರ ಅನ್ನದ ತಟ್ಟೆಗೆ ಕೈ ಹಾಕಬಾರದು. ಯಾರೂ ಯಾರ ಅವಕಾಶಗಳನ್ನೂ ಕಿತ್ತುಕೊಳ್ಳಬಾರದು ಎನ್ನುವುದು ನನ್ನ ಬದ್ಧತೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಜೆ.ಹೆಚ್.ಪಟೇಲರು ಸಿಎಂ ಆಗಿದ್ದಾಗ ಬೆಸ್ತರು ಸೇರಿ ಹಲವು ಸಮುದಾಯಗಳನ್ನು ಎಸ್ ಟಿ ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಹೋಗಿದೆ. ಇವತ್ತಿನವರೆಗೂ ಇದು ಸಾಧ್ಯವಾಗಿಲ್ಲ ಎಂದು ಹೇಳಿದರು.

ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ವಾಲ್ಮೀಕಿ ಸಮುದಾಯದ ವಾಲ್ಮೀಕಿ ಅವರು ವಿಶ್ವ ಮಾನವರಾಗಿ ಶ್ರೇಷ್ಠವಾದ ರಾಮಾಯಣ ಮಹಾ ಕಾವ್ಯವನ್ನು ರಚಿಸಿದರು. ಹೀಗಾಗಿ ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣವನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಸಿಎಂ ತಿಳಿಸಿದರು.

ವಾಲ್ಮೀಕಿ ಅವರ ಬಗ್ಗೆ ಮತ್ತು ರಾಮಾಯಣವನ್ನು ಪಠ್ಯದಲ್ಲಿ ಸೇರಿಸಬೇಕು ಎನ್ನುವ ಉಗ್ರಪ್ಪ ಅವರ ಬೇಡಿಕೆ ಬಗ್ಗೆಯೂ ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದರು.

ಕುರುಬರನ್ನು ಎಸ್ ಟಿ ಗೆ ಸೇರಿಸಿದರೆ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಸಿಎಂ Read More

ಅ.18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ:ಸಿದ್ದರಾಮಯ್ಯ

ಬೆಂಗಳೂರು: ಸೆಪ್ಟೆಂಬರ್ 2 ರಿಂದ ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಶುರುವಾಗಿದೆ,ಸಮೀಕ್ಷೆ ಇಂದಿಗೆ ಮುಗಿಯಬೇಕಿತ್ತು,ಕೆಲವು ಜಿಲ್ಲೆಗಳಲ್ಲಿ ಪೂರ್ತಿ ಆಗಿಲ್ಲ,ಹಾಗಾಗಿ ಅಕ್ಟೋಬರ್ 18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಮೀಕ್ಷೆಯ ಸ್ಥಿತಿ ಗತಿ ಕುರಿತು ಅಧಿಕಾರಿಗಳ ಜೊತೆ ಸಿಎಂ ವಿಡಿಯೊ ಕಾನ್ಷರೆನ್ಸ್ ನಡೆಸಿ ಮಾತನಾಡಿ,ಪಿಯುಸಿ ಉಪನ್ಯಾಸಕರಿಗೆ ಸಮೀಕ್ಷೆಯಿಂದ ವಿನಾಯ್ತಿ ನೀಡಲಾಗಿದೆ,

ವಿಧಾನ‌ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು
ಶಿಕ್ಷಕರ ಸಂಘದ ಹೆಚ್ಚುವರಿಯಾಗಿ 10 ದಿನಗಳ‌ ಕಾಲಾವಕಾಶ ಕೇಳಿ ಮನವಿ ಮಾಡಿದ್ದಾರೆ,ಅವರ ಮನವಿ ಮೇರೆಗೆ ರಜೆ ವಿಸ್ತರಣೆ ಮಾಡಲಾಗಿದ್ದು, ಅ19 ರೊಳಗೆ ಸಮೀಕ್ಷೆ ಮುಗಿಯುತ್ತದೆ ಎಂದು ಹೇಳಿದರು ‌

ವಿಶೇಷ ಬೋಧನಾ ತರಗತಿಗಳ ಮೂಲಕ ಶಿಕ್ಷಕರು ಪಠ್ಯ ಪೂರ್ಣಗೊಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ 12ನೇ ತಾರೀಕಿನಿಂದ ದ್ವಿತೀಯ ಪಿಯು ಮಧ್ಯಂತರ ಪರೀಕ್ಷೆ ನಡೆಯುತ್ತಿರುವುದರಿಂದ ಸಮೀಕ್ಷೆ ಕಾರ್ಯದಿಂದ ಪಿಯುಸಿ ಉಪನ್ಯಾಸಕರಿಗೆ ವಿನಾಯ್ತಿ ನೀಡಲಾಗಿದೆ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ 6700 ಜನ ಶಿಕ್ಷಕರು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 46 ಲಕ್ಷ ಮನೆಗಳಿವೆ. ದಿನಕ್ಕೆ 10-15 ಮನೆಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ. ಬೆಂಗಳೂರಿನಲ್ಲಿ ನರಕ ಚತುರ್ದಷಿ ಒಳಗೆ ಸಮೀಕ್ಷೆ ಮುಗಿಸಲು ಸೂಚಿಸಲಾಗಿದೆ. ಶಿಕ್ಷಕರು ಕೂಡ ಇಷ್ಟರೊಳಗೆ ಸಮೀಕ್ಷೆ ಮುಗಿಸುವ ಭರವಸೆ ನೀಡಿದ್ದಾರೆ.
ಸಮೀಕ್ಷೆ ನಡೆಯುವಾಗ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಇವರಿಗೆ ತಲಾ 20 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಪ್ರಕಟಿಸಿದರು.

ಅ.18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ:ಸಿದ್ದರಾಮಯ್ಯ Read More

ನಾವೆಲ್ಲರೂ ಶೂದ್ರರು: ಜಾತಿ ಯಾವುದಾದರೂ ಶೂದ್ರರೆಲ್ಲ ಒಂದೇ-ಸಿಎಂ

ಬೆಂಗಳೂರು: ನಾವೆಲ್ಲರೂ ಶೂದ್ರರು, ಜಾತಿ ಯಾವುದಾದರೂ ಶೂದ್ರರೆಲ್ಲರೂ ಒಂದೇ,
ಚಲನೆ ಇಲ್ಲದ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಬಸವಣ್ಣ ಹೊಸ ಧರ್ಮವನ್ನೇ ಸ್ಥಾಪಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭವಾಗಿ ಆಯೋಜಿಸಿದ್ದ ‘ಬಸವ ಸಂಸ್ಕೃತಿ ಅಭಿಯಾನ-2025’ ರ ಸಮಾರೋಪ ಸಮಾರಂಭದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿದ್ಯದಲ್ಲಿ ಸಮುದಾಯದವರ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿ ಸಿಎಂ ಮಾತನಾಡಿದರು.

ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ‌ ನಂಬಿಕೆ-ಬದ್ದತೆ ಇಟ್ಟುಕೊಂಡಿದ್ದೀನಿ.
ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ, ಸಹಬಾಳ್ವೆ ಮತ್ತು ಸಹಿಷ್ಣುತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು,ನಾನೂ ಇದನ್ನು ಪಾಲಿಸುತ್ತೇನೆ ಎಂದು ಹೇಳಿದರು.

ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು ಅದೇ ದಿನ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳನ್ನು ಕಲ್ಪಿಸುವ ಬಸವಣ್ಣನವರ ಆಶಯಗಳನ್ನು ಈಡೇರಿಸುವ ತೀರ್ಮಾನ ಮಾಡಿ ಹತ್ತು ಹಲವು ಭಾಗ್ಯಗಳು, ಗ್ಯಾರಂಟಿಗಳ ಮೂಲಕ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿಗೆ ಅವಕಾಶಗಳನ್ನು ಕಲ್ಪಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯ ಮಾಡಿದ್ದು ಇದೇ ಕಾರಣಕ್ಕಾಗಿ ಎಂದು ತಿಳಿಸಿದರು.

ಜಾತಿಯಿಂದ ಯಾರೂ ಶ್ರೇಷ್ಠರಲ್ಲ. ಹಾಗೆಯೇ ಪ್ರತಿಭೆ, ಜ್ಞಾನ ಕೂಡ ಯಾವುದೇ ಒಂದು ಜಾತಿಯ ಸ್ವತ್ತು ಅಲ್ಲ, ನಾನು ಅರ್ಜಿ ಹಾಕಿಕೊಂಡು ಕುರುಬ ಜಾತಿಯಲ್ಲಿ ಹುಟ್ಟಿಲ್ಲ, ಶೂದ್ರ ಎನ್ನುವ ಕಾರಣಕ್ಕೆ ಶಿಕ್ಷಣ ಪಡೆಯುವ ಅರ್ಹತೆ ಇಲ್ಲ ಎನ್ನುವುದು ಪಟ್ಟಭದ್ರರ ಷಡ್ಯಂತ್ರ ಎಂದು ಅಸಮಾಧಾನ ದಿಂದ ಸಿಎಂ ನುಡಿದರು.

ಜಾತಿ-ವರ್ಗ ರಹಿತ ಮಾನವ ಸಮಾಜದ ನಿರ್ಮಾಣ ಬಸವಣ್ಣನವರ ಕನಸಾಗಿತ್ತು. ನಾವೆಲ್ಲರೂ ಮೊದಲು ಮನುಷ್ಯರು, ಬಳಿಕ ಭಾರತೀಯರು. ಹೀಗಾಗಿ ನಾವು ಮನುಷ್ಯ ನಿರ್ಮಿತ ಜಾತಿ, ಧರ್ಮದ, ಅಸಮಾನತೆಯ ತಾರತಮ್ಯಗಳನ್ನು ಸಹಿಸಬಾರದು, ಆಚರಿಸಬಾರದು ಎಂದು ಮುಖ್ಯ ಮಂತ್ರಿಗಳು ಕರೆ ನೀಡಿದರು.

ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯ ಆದರೆ ಬಸವಣ್ಣನವರೂ ಜಾತಿ ರಹಿತ, ವರ್ಗ ರಹಿತ ಬ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಹೀಗಾಗಿ ಬಸವಣ್ಣನವರು ಯಾವತ್ತಿಗೂ ಪ್ರಸ್ತುತ ಎಂದರು‌.

ವಚನ ವಿಶ್ವ ವಿದ್ಯಾಲಯ ಸ್ಥಾಪಿಸುವ ಬೇಡಿಕೆ ಬಗ್ಗೆ ಸರ್ಕಾರದ ಒಪ್ಪಿಗೆ ಇದ್ದು, ಮುಂದಿನ ವರ್ಷ ವಚನ ವಿವಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಿದ್ದರಾಮಯ್ಯ ಪ್ರಕಟಿಸಿದರು

ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ ಬಸವ ಮೆಟ್ರೋ ಎಂದು ಘೋಷಿಸಿ ಬಿಡುತ್ತಿದ್ದೆ ಎಂದು ಸಿಎಂ ಹೇಳಿದರು.

ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಚಳವಳಿಯ ಪ್ರಮುಖರು, ಪ್ರಗತಿಪರ ಚಿಂತಕರು, ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶರಣ ಸಂಸ್ಕೃತಿ ಬಗೆಗಿನ ಬದ್ಧತೆಯನ್ನು ಶ್ಲಾಘಿಸಿ ಅಭಿನಂದಿಸಿದರು.

ನಾವೆಲ್ಲರೂ ಶೂದ್ರರು: ಜಾತಿ ಯಾವುದಾದರೂ ಶೂದ್ರರೆಲ್ಲ ಒಂದೇ-ಸಿಎಂ Read More