ಬಿಹಾರಕ್ಕೆ ರಾಜ್ಯದಿಂದ ಕಪ್ಪು ಹಣ: ಇಡಿ ಸ್ವಯಂ ಪ್ರೇರಿತ ತನಿಖೆ ಕೈಗೊಳ್ಳಲಿ-ಎಎಪಿ

ಬೆಂಗಳೂರು: ಬಿಹಾರಕ್ಕೆ ರಾಜ್ಯದಿಂದ ಕಪ್ಪು ಹಣ ಹೋಗುತ್ತಿದ್ದು ಇಡಿ ಸ್ವಯಂ ಪ್ರೇರಿತ ತನಿಖೆ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಬಿಹಾರ ಚುನಾವಣೆಗೆ 400 ಕೋಟಿ ಹಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಟಾರ್ಗೆಟ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಔತಣಕೂಟ ಏರ್ಪಡಿಸಿ ಸಚಿವರಿಗೆ ಇಲಾಖಾವಾರು ಕಪ್ಪವನ್ನು ನಿಗದಿಪಡಿಸಿದ್ದಾರೆ ಎಂದು ಹೇಳಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆಯನ್ನು ಆಧರಿಸಿ ಜಾರಿ ನಿರ್ದೇಶನಾಲಯ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿ ತನಿಖೆ ನಡೆಸಬೇಕೆಂದು ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಮೃತ್ಯುಂಜಯ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಸರ್ಕಾರದ ವಿರೋಧಪಕ್ಷದ ನಾಯಕರ ಬಳಿ ನಿಖರವಾದ ಮಾಹಿತಿ ಇರುವುದಾದರೆ ಅವರನ್ನು ಸಾಕ್ಷಿಯನ್ನಾಗಿ ಮಾಡಿಕೊಂಡು ಈ ಬೃಹತ್ ಮೊತ್ತದ ಕನ್ನಡಿಗರ ತೆರಿಗೆ ಹಣವನ್ನು ಬಿಹಾರ ಚುನಾವಣೆಗಾಗಿ ಅಕ್ರಮವಾಗಿ ಹೇಗೆ ಸಾಗಣೆ ಮಾಡಿದ್ದಾರೆ ಹಾಗೂ ಚುನಾವಣಾ ಅಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷವು ಬಳಸಿಕೊಳ್ಳುತ್ತಿರುವುದನ್ನು ಕೂಡಲೇ ಜಾರಿ ನಿರ್ದೇಶನಲಯ ಪತ್ತೆ ಹಚ್ಚಬೇಕು ಹಾಗೂ ತಪಿತಸ್ತರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅಶೋಕ್ ಮೃತ್ಯುಂಜಯ ತಮ್ಮ ಟ್ವೀಟ್ ಮಾಡಿ ಅಗ್ರಹಿಸಿದ್ದಾರೆ.

ಮುಂದಿನ ಮಂತ್ರಿಮಂಡಲ ವಿಸ್ತರಣೆಗಾಗಿ ನೂರಾರು ಕೋಟಿ ರೂಪಾಯಿಗಳ ಕಪ್ಪ ಕಾಣಿಕೆಗಳನ್ನು ಒಪ್ಪಿಸಬೇಕು ಎಂದು ಪದೇ ಪದೇ ಹೇಳುತ್ತಿರುವ ವಿರೋಧ ಪಕ್ಷದ ನಾಯಕನ ಹೇಳಿಕೆಯಲ್ಲಿ ಸಾಚಾತನ ಇಲ್ಲದಿದ್ದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಸ್ವತಹ ತಾವೇ ಮುಂದಾಗಿ ಇಡಿ ತನಿಖೆಗೆ ಒಪ್ಪಿಸಿ ರಾಜ್ಯದ ಜನತೆಗೆ ನೈಜ ಚಿತ್ರಣವನ್ನು ನೀಡಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ಬಿಹಾರಕ್ಕೆ ರಾಜ್ಯದಿಂದ ಕಪ್ಪು ಹಣ: ಇಡಿ ಸ್ವಯಂ ಪ್ರೇರಿತ ತನಿಖೆ ಕೈಗೊಳ್ಳಲಿ-ಎಎಪಿ Read More

ಇನ್ಸ್ಪೆಕ್ಟರ್‌ ವಿರುದ್ಧ ಅತ್ಯಾಚಾರ ಆರೋಪ!

ಬೆಂಗಳೂರು: ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸರೆ ಅತ್ಯಾಚಾರದಂತಹ ಹೀನ ಕೃತ್ಯ ಎಸಗಿದರೆ ಜನ‌ ಠಾಣೆಗಳಿಗೆ ಹೋಗುವುದಾದರು ಯಾವ ದೈರ್ಯದ ಮೇಲೆ?

ಇಂತಹ ಕೆಟ್ಟ ಆರೋಪ‌ ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್‌ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಕೇಳಿ ಬಂದಿದೆ.

ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ
ಅತ್ಯಾಚಾರ ಮತ್ತು ವಂಚನೆ ಆರೋಪ ಮಾಡಲಾಗಿದೆ.

ಮಹಿಳೆಯೊಬ್ಬರು ಈ‌ ಕುರಿತು ದೂರು ನೀಡಿದ್ದು, ಮದುವೆಯಾಗುವುದಾಗಿ ನಂಬಿಸಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ,ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಡಿಜಿ ಮತ್ತು ಐಜಿಪಿ ಕಚೇರಿಗೆ ದೂರು ನೀಡಿದ್ದಾರೆ.

ತನಗೆ ಹಣದ ಮೋಸವಾಗಿದೆ ಎಂದು ದೂರು ಕೊಡಲು ಠಾಣೆಗೆ ಬಂದಿದ್ದ 36 ವರ್ಷದ ಮಹಿಳೆಯನ್ನು ಇನ್ಸ್ಪೆಕ್ಟರ್‌ ವಿಶ್ವಾಸದಿಂದ ಮಾತನಾಡಿಸಿ ಸ್ನೇಹ ಬೆಳೆಸಿದ್ದಾರೆ. ನಂತರ ಮದುವೆಯಾಗುವುದಾಗಿ ನಂಬಿಸಿದ್ದಲ್ಲದೆ ರಿಜಿಸ್ಟರ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಮನೆ ಕೊಡಿಸುತ್ತೇನೆ,ಬ್ಯೂಟಿ ಪಾರ್ಲರ್ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಕೆಲವು ಬಾರಿ ನಂಬಿಸಿ ತಮ್ಮ ಮನೆ ಹಾಗೂ ಹೋಟೆಲ್ ಗೆ ಕರೆಸಿಕೊಂಡು ಹೋಗಿದ್ದರು.ಆಗ ಕೆಲ ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಇನ್ಸ್ಪೆಕ್ಟರ್‌ ವಿರುದ್ಧ ದೂರು ನೀಡಿದ್ದಾರೆ.

ಹಿರಿಯ ಅಧಿಕಾರಿಗಳು ಏನು ಕ್ರಮ ತೆಗೆದುಕೊಳ್ಳುತ್ತಾರೆ,ದೂರು ನೀಡಿರುವ ಮಹಿಳೆಗೆ‌ ನ್ಯಾಯ ಕೊಡಿಸುತ್ತಾರಾ ಕಾದು ನೋಡಬೇಕಿದೆ.

ಇನ್ಸ್ಪೆಕ್ಟರ್‌ ವಿರುದ್ಧ ಅತ್ಯಾಚಾರ ಆರೋಪ! Read More

ಅನೈತಿಕ ಪೊಲೀಸ್‌ಗಿರಿಗೆ ಕಡಿವಾಣ:ಪಲೀಸರ ಕಾರ್ಯ ಶ್ಲಾಘನೀಯ – ಸಿಎಂ

ಬೆಂಗಳೂರು: ರಾಜ್ಯದ ಘನತೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕಂಟಕವಾಗಿದ್ದ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್‌ಗಿರಿಗೆ ರಾಜ್ಯದಲ್ಲಿ ಕಡಿವಾಣ ಬಿದ್ದಿದ್ದು ಅದರ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು.

ಮಂಗಳವಾರ ಬೆಂಗಳೂರಿನ ಪೊಲೀಸ್ ಹುತಾತ್ಮರ ಉದ್ಯಾನವನದಲ್ಲಿ ನಡೆದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ನಮನ ಸಲ್ಲಿಸಿ ಸಿಎಂ ಮಾತನಾಡಿದರು.

ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅವಿರತವಾಗಿ ಶ್ರಮಿಸುತ್ತಾ, ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳ ದಕ್ಷತೆ, ಕರ್ತವ್ಯನಿಷ್ಠೆಯನ್ನು ಈ ದಿನ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ.

ಕೋಟ್ಯಂತರ ಜನರಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಟ್ಟ ಇವರೆಲ್ಲರ ತ್ಯಾಗ – ಬಲಿದಾನವು ಶಾಶ್ವತವಾಗಿ ನೆನಪಿನಲ್ಲುಳಿಯುವಂತದ್ದು ಎಂದು ಮುಖ್ಯ ಮಂತ್ರಿಗಳು ಬಣ್ಣಿಸಿದರು.

ಪೊಲೀಸ್‌ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ಅನೈತಿಕ ಪೊಲೀಸ್‌ ಗಿರಿಗೆ ಕಡಿವಾಣ ಬಿದ್ದಿರುವುದು ಉತ್ತಮ ಕೆಲಸ. ಹಾಗೆಯೇ ಮಾದಕ ವಸ್ತು ಹಾವಳಿಗೂ ಬ್ರೇಕ್ ಬಿದ್ದಿದ್ದು ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪರಿಶಿಷ್ಠ ಜಾತಿ ಹಾಗೂ ವರ್ಗದವರ ಮೇಲಿನ ದೌರ್ಜನ್ಯ ತಡೆಗೆ ಡಿಸಿಆರ್‌ಇ ಪೊಲೀಸ್‌ ಠಾಣೆಗಳನ್ನು ಕಾರ್ಯೋನ್ಮುಖಗೊಳಿಸಿದ್ದೇವೆ. ಇವು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿ ದೇಶದಲ್ಲಿ 191 ಮಂದಿ ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ತ್ಯಾಗ ಮಾಡುವ ಮೂಲಕ ಹುತಾತ್ಮರಾಗಿದ್ದಾರೆ. ಅವರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲಾಗದು. ಅವರನ್ನೆಲ್ಲ ಸ್ಮರಿಸಿ, ನಮಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಿಎಂ ತಿಳಿಸಿದರು ‌

ನಿವೃತ್ತ ಪೊಲೀಸ್ ಆರೋಗ್ಯ ಯೋಜನೆಯ ವೈದ್ಯಕೀಯ ಮರು ಪಾವತಿ ವೆಚ್ಚವನ್ನು ವಾರ್ಷಿಕ 1 ಲಕ್ಷ ರೂ.ಗಳಿಂದ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣಾ ವೆಚ್ಚವನ್ನು 1,000 ರೂ.ಗಳಿಂದ 1,500 ರೂ.ಗೆ ಹೆಚ್ಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅನೈತಿಕ ಪೊಲೀಸ್‌ಗಿರಿಗೆ ಕಡಿವಾಣ:ಪಲೀಸರ ಕಾರ್ಯ ಶ್ಲಾಘನೀಯ – ಸಿಎಂ Read More

ಪತಿ ಮನೆಯವರ ಕಿರುಕುಳ:ಉಪನ್ಯಾಸಕಿ ಆತ್ಮಹತ್ಯೆ

ದೊಡ್ಡಬಳ್ಳಾಪುರ: ಪತಿ ಮನೆಯವರ ಕಿರುಕುಳದಿಂದ ಬೇಸತ್ತ ಉಪನ್ಯಾಸಕಿಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ತಾಲೂಕಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್​ನಲ್ಲಿ ಹಾರಿ ಉಒನ್ಯಾಸಕಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುಷ್ಪಾವತಿ (30) ಮೃತ ಉಪನ್ಯಾಸಕಿ, 11 ತಿಂಗಳ ಹಿಂದೆ ತಪಸ್ಸಿಹಳ್ಳಿಯ ವೇಣು ಎಂಬವರ ಜತೆ ಇವರು ವಿವಾಹವಾಗಿದ್ದರು, ಮದುವೆ ನಂತರ ಪತಿ ಮನೆಯಲ್ಲಿ ಪುಷ್ಪಾವತಿಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು,ಈ ಬಗ್ಗೆ ಆಕೆ ಆತ್ಮಹತ್ಯೆ ಗೂ ಮುಂಚೆ ವಿಡಿಯೋ ಮಾಡಿ ವಿವರ ನೀಡಿದ್ದಾರೆ.

ವರದಕ್ಷಿಣೆ, ನಿವೇಶನ ಕೊಡಿಸುವಂತೆ ಪೀಡಿಸುತ್ತಿದ್ದರು ಎಂದು ಪುಷ್ಪಾವತಿ ಆರೋಪಿಸಿದ್ದಾರೆ. ಪುಷ್ಪಾವತಿ ನಾಪತ್ತೆ ಆಗಿರುವ ಬಗ್ಗೆ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಕುಟುಂಬಸ್ಥರು ಕೇಸ್​ ದಾಖಲಿಸಿದ್ದರು.

ನಾನು ಮದುವೆಯಾಗಿ ಗಂಡನ ಮನೆಗೆ ಹೋದ ದಿನದಿಂದ ನನ್ನ ಗಂಡ ನನ್ನ ಜೊತೆ ಸರಿಯಾಗಿ ಸಂಸಾರ ಮಾಡದೆ, ನನ್ನಿಂದ ದೂರ ಉಳಿಯುತ್ತಿದ್ದರು. ಸಂಸಾರ ಮಾಡಬೇಕೆಂದು ಎಷ್ಟು ಪ್ರಯತ್ನ ಪಟ್ಟರು ನನ್ನ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಈ ವಿಚಾರವನ್ನು ನಮ್ಮ ಅತ್ತೆ ಮಾವನಿಗೆ ತಿಳಿಸಿದರೆ ಎಲ್ಲಾ ಸರಿ ಹೋಗುತ್ತೆ ಸುಮ್ಮನಿರು ಎಂದು ಆರಂಭದಲ್ಲಿ ಹೇಳುತ್ತಿದ್ದರು.

ಗಂಡನಿಗೆ ನಾವು ಮಗು ಮಾಡಿಕೊಳ್ಳೋಣ ಎಂದು ಕೇಳಿದರೆ, ಈಗ ಮಗು ಬೇಡ 1-2 ವರ್ಷ ಹೋಗಲಿ ನಂತರ ಮಗು ಮಾಡಿಕೊಳ್ಳೋಣ. ಈವಾಗ ಯಾಕೆ ಅರ್ಜೆಂಟ್ ಎಂದು ನನಗೆ ಬೈಯುತ್ತಿದ್ದರು. ನನಗೆ ಅನುಮಾನ ಬಂದು, ನಿನಗೇನಾದರೂ ತೊಂದರೆ ಇದ್ದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳೋಣ ಎಂದು ಗಂಡನಿಗೆ ತಿಳಿಸಿದ್ದೆ. ಆಗ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಅವರನ್ನು ಮುಟ್ಟಿದರೆ ಕಾಲಿನಿಂದ ನನ್ನ ಎದೆಗೆ ಒದೆಯುತ್ತಿದ್ದರು. ಮಗು ಬೇಕು ಎಂದರೆ ನನ್ನ ಚಿಕ್ಕ ಮಗನ ಬಳಿ ಹೋಗು ಎಂದು ಅತ್ತೆ-ಮಾವ ಹೇಳುತ್ತಿದ್ದರು. ಮೈದುನನೂ ಅದೇ ರೀತಿ ಮಾತಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ನನ್ನ ಹೆತ್ತವರಿಗೆ ತಿಳಿಸಿದ್ದು, ಅವರು ಬಂದು ಹೇಳಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಪುಷ್ಪಾವತಿ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌.

ಪತಿ ಮನೆಯವರ ಕಿರುಕುಳ:ಉಪನ್ಯಾಸಕಿ ಆತ್ಮಹತ್ಯೆ Read More

ಜೈಲಿನಲ್ಲಿ ದರ್ಶನ್​ಗೆ ವಾಕಿಂಗ್​ ಹೊರತು ಎಲ್ಲ ನಿಯಮ ಪಾಲನೆ

ಬೆಂಗಳೂರು: ಜೈಲಿನಲ್ಲಿರುವ ನಟ ದರ್ಶನ್​ಗೆ ಬಿಸಿಲಿನಲ್ಲಿ ವಾಕ್ ಮಾಡಲು ಅವಕಾಶ ಹೊರತುಪಡಿಸಿ ಜೈಲಿನ ಎಲ್ಲಾ ನಿಯಮಗಳ ಪಾಲನೆಯಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಕೋರ್ಟ್​ಗೆ ನೀಡಿದ ವರದಿಯಲ್ಲಿ ತಿಳಿಸಲಾಗಿದೆ.

ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​​ ಗೆ ಮೂಲಸೌಕರ್ಯ ಒದಗಿಸದ ಆರೋಪ ಸಂಬಂಧ ಖುದ್ದು ತೆರಳಿ ಪರಿಶೀಲಿಸುವಂತೆ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ,
ಕಾನೂನು ಸೇವಾ ಪ್ರಾಧಿಕಾರವು
ಸ್ಥಳ ಪರಿಶೀಲನೆ ನಡೆಸಿತು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಆರೋಗ್ಯ ದೃಷ್ಠಿಯಿಂದ ಬಿಸಿಲಿನಲ್ಲಿ ವಾಕ್ ಮಾಡಲು ಅವಕಾಶ ಕಲ್ಪಿಸಬೇಕು ಅದು ಬಿಟ್ಟರೆ, ಜೈಲಿನ ಕೈಪಿಡಿ ಅನುಸಾರ ಎಲ್ಲ ನಿಯಮ ಪಾಲನೆಯಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ದರ್ಶನ್​​ಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ನಗರದ 57ನೇ ಸಿಸಿಹೆಚ್ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

ಜೈಲಿನ ಕೈಪಿಡಿ ಅನುಸಾರ ಸೌಲಭ್ಯ ಒದಗಿಸಬೇಕೆಂದು ಕೋರ್ಟ್ ಹೇಳಿತ್ತು. ಆದರೂ ಜೈಲಾಧಿಕಾರಿಗಳು ನ್ಯಾಯಾಲಯ ಆದೇಶವನ್ನ ಧಿಕ್ಕರಿಸಿದ್ಧಾರೆ ಎಂದು ದರ್ಶನ್ ಪರ ವಕೀಲರು ಆರೋಪಿಸಿದ್ದರು.

ಈ ಬಗ್ಗೆ ಖುದ್ದು ಜೈಲಿಗೆ ಬಂದು ಪರಿಶೀಲಿಸುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ್ದ ನ್ಯಾಯಾಲಯವು ಕಾನೂನು ಸೇವಾ ಪ್ರಾಧಿಕಾರಕ್ಕೆ ಜೈಲಿಗೆ ಭೇಟಿ ನೀಡಿ ಅ.18ರೊಳಗೆ ವರದಿ ನೀಡುವಂತೆ ಸೂಚಿಸಿತ್ತು.

ಅದರಂತೆ ಬೆಂಗಳೂರು ನಗರ ಜಿಲ್ಲಾ ವಿಭಾಗದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಿ.ವರದರಾಜು ಅವರು ಕಳೆದ ಮಂಗಳವಾರ ತೆರಳಿ ಪರಿಶೀಲಿಸಿ, ಕೋರ್ಟ್​​ಗೆ ವರದಿ ನೀಡಿದ್ಧಾರೆ.

ನ್ಯಾಯಾಲಯದ ಆದೇಶದ ಅನುಸಾರ ಕಳೆದ ಮಂಗಳವಾರ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದ ವರದರಾಜು ಅವರು ದರ್ಶನ್ ಆರೋಗ್ಯ ವಿಚಾರಿಸಿ,ನಂತರ ಅವರು ಇರುವ ಬ್ಯಾರಕ್​ನ್ನು ಪರಿಶೀಲಿಸಿದ್ದರು. ಅಲ್ಲದೇ, ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳ ಬಗ್ಗೆ ತಕರಾರು ಎತ್ತಿರುವ ಅಂಶಗಳ ಬಗ್ಗೆ ದರ್ಶನ್ ಜೊತೆ ಖುದ್ದು ಚರ್ಚಿಸಿದ್ದರು.

ದರ್ಶನ್ ಇರುವ ಬ್ಯಾರಕ್​​ನಲ್ಲಿ ಇಂಡಿಯನ್ ಹಾಗೂ ವೆಸ್ಟರ್ನ್ ಶೈಲಿಯ ಎರಡು ಶೌಚಾಲಯಗಳಿವೆ. ಹಾಸಿಗೆ, ದಿಂಬು ಕೊಟ್ಟಿಲ್ಲವೆಂಬ ಆರೋಪ ಸಂಬಂಧ ವಿಚಾರಣಾಧೀನ ಕೈದಿಗೆ ಹಾಸಿಗೆ, ದಿಂಬಿಗೆ ಅವಕಾಶವಿಲ್ಲ. ಇತರೆ ಕೈದಿಗಳಂತೆ ಬಿಸಿಲಿನಲ್ಲಿ ದರ್ಶನ್ ನಡೆದಾಡಲು ಬಿಟ್ಟಿಲ್ಲವೆಂಬ ತಕರಾರಿಗೆ ನಿಯಮದಂತೆ 1 ಗಂಟೆ ವಾಕಿಂಗ್ ಹಾಗೂ ಆಟವಾಡಲು ಅವಕಾಶ ನೀಡಬಹುದು. ಆದರೆ, ದರ್ಶನ್ ಸೆಲೆಬ್ರಿಟಿ ಆಗಿರುವುದರಿಂದ ಓಡಾಡಿದರೆ ಇತರ ಬ್ಯಾರಕ್​ನವರು ಕಿರುಚುತ್ತಾರೆ. ಅಕ್ಕಪಕ್ಕದ ಅಪಾರ್ಟ್​​​​​ ಮೆಂಟ್​​ಗಳಿಂದ ಫೋಟೋ ತೆಗೆಯುತ್ತಾರೆಂದು ಜೈಲಾಧಿಕಾರಿಗಳು ಆಕ್ಷೇಪಿಸಿದ್ದಾರೆ. ಜೈಲಿನ ಶಿಸ್ತುಪಾಲನೆ ಹಾಗೂ ನಿರ್ವಹಣೆ ಹೊರತುಪಡಿಸಿ, ವಾಕಿಂಗ್ ಮಾಡಲು ಹಾಗೂ ಆಟಕ್ಕೆ ‌ಅವಕಾಶ ನೀಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ಟಿ.ವಿ ನೀಡಿಲ್ಲವೆಂದು ದರ್ಶನ್ ತಕರಾರು ಸಂಬಂಧ. ಕೈದಿಗಳಿಗೆ ಟಿ.ವಿ ನೋಡಲು ಅವಕಾಶ ನೀಡಬಹುದು. ಆದರೆ, ಪ್ರತಿ ಬ್ಯಾರಕ್​ಗೆ ಟಿ.ವಿ ನೀಡಬೇಕು ಎಂಬ ನಿಯಮವಿಲ್ಲ. ಫೋನ್​ನಲ್ಲಿ ಮಾತನಾಡುವಾಗ ಸ್ಪೀಕರ್ ಆನ್ ಮಾಡಿಸುತ್ತಾರೆ ಎಂದು ದರ್ಶನ್ ಆಪಾದನೆಗೆ ಆರೋಪಿಗಳ ಮೇಲೆ ನಿಗಾ ಇಡುವ ದೃಷ್ಡಿಯಿಂದ ಕಾನೂನಿನಲ್ಲಿ ಅವಕಾಶವಿದೆ. ಆರೋಪಿಗಳಿಗೆ ತಿಳಿಸಿ ಫೋನ್ ಕಾಲ್ ರೆಕಾರ್ಡ್​​ಗೆ ನಿಯಮದಲ್ಲಿ ಅವಕಾಶವಿದೆ. ಈ ಬಗ್ಗೆ ಜೈಲಧಿಕಾರಿಗಳು ನಿಯಮ ರೂಪಿಸಿದ್ದಾರೆ ಎಂದು ವರದರಾಜು ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಸೂರ್ಯನ ಬೆಳಕಿಲ್ಲದೇ ಕಾಲಿಗೆ ಫಂಗಸ್ ಬಂದಿದೆ ಎಂಬ ದರ್ಶನ್ ಹೇಳಿದ್ದರು. ಪರಿಶೀಲನೆ ವೇಳೆ ಕಾಲಿನಲ್ಲಿ ಫಂಗಸ್ ಬಂದಿಲ್ಲ, ಹಿಮ್ಮಡಿಯಲ್ಲಿ ಬಿರುಕಿದೆ. ಈ ಬಗ್ಗೆ ಚರ್ಮರೋಗ ತಜ್ಞರು ಪರಿಶೀಲಿಸಿದ್ದಾರೆ. ಜೈಲಿನ ವೈದ್ಯಾಧಿಕಾರಿಗಳು ಎರಡು ದಿನಕ್ಕೊಮ್ಮೆ ಬ್ಯಾರಕ್​​ಗೆ ಭೇಟಿ ನೀಡುತ್ತಿದ್ದಾರೆ. ದರ್ಶನ್​ಗೆ ಫಿಸಿಯೋಥೆರಪಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸೊಳ್ಳೆ ಬತ್ತಿ, ಕನ್ನಡಿ, ಬಾಚಣಿಗೆ ನೀಡಿಲ್ಲವೆಂಬ ಆಪಾದನೆಗೆ, ಸಜಾ ಬಂಧಿಗಳಿಗೆ ಮಾತ್ರ ಇವುಗಳನ್ನು ಕೊಡಬಹುದು. ವಿಚಾರಣಾಧೀನ ಕೈದಿಗೆ ಕೊಡಲು ಜೈಲು ನಿಯಮದಲ್ಲಿ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.ಹೀಗೆ ದರ್ಶನ್ ಗೆ ಸೌಲಭ್ಯಗಳನ್ನು ಹೆಚ್ಚುಕಡಿಮೆ ನಿರಾಕರಿಸಿ,ನಿರಾಸೆ ಉಂಟಾಗುವಂತಾಗಿದೆ.

ಜೈಲಿನಲ್ಲಿ ದರ್ಶನ್​ಗೆ ವಾಕಿಂಗ್​ ಹೊರತು ಎಲ್ಲ ನಿಯಮ ಪಾಲನೆ Read More

ಡಿಕೆಶಿ ದುರ್ವರ್ತನೆ; ಬೆಂಗಳೂರು ಐಟಿ ಸಿಟಿ ಪಟ್ಟ ಕಳೆದುಕೊಳ್ಳಲಿದೆ-ಎಎಪಿ‌ ಕಳವಳ

ಬೆಂಗಳೂರು: ಉಪ ಮುಖ್ಯ ಮಂತ್ರಿ‌ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್ ಅವರ ದುರ್ವರ್ತನೆಯಿಂದ ಬೆಂಗಳೂರು ನಗರ ಐಟಿ ಸಿಟಿ ಪಟ್ಟ ಕಳೆದುಕೊಳ್ಳಲಿದೆ ಎಂದು ಎಎಪಿ ಆರೋಪಿಸಿದೆ.

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಬಗ್ಗೆ ಡಿ.ಕೆ. ಶಿವಕುಮಾರ್ ವಾಗ್ದಾಳಿ ಕುರಿತು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಪ್ರತಿಕ್ರಿಯಿಸಿದ್ದು,ಬೆಂಗಳೂರು ಸಿಲಿಕಾನ್ ನಗರ ವೆಂದು ಖ್ಯಾತಿಗೊಳ್ಳಲು ಇಲ್ಲಿನ ಐಟಿ ಉದ್ಯಮಿಗಳ ಕೊಡುಗೆ ಸಾಕಷ್ಟು ಮಟ್ಟದಲ್ಲಿದೆ ಎಂದು ಹೇಳಿದರು.

ದೇಶಕ್ಕೆ ಎರಡನೇ ಅತಿ ದೊಡ್ಡ ತೆರಿಗೆಯನ್ನು ನೀಡುವ ಹಾಗೂ ದೇಶದ ಆರ್ಥಿಕ ಇಂಜಿನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಐಟಿ ಉದ್ಯಮಗಳು, ಇಲ್ಲಿನ ಉದ್ಯೋಗಿಗಳು ಹಾಗೂ ಅವರಿಗೆ ಪೂರಕವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಅನೇಕ ಕಂಪನಿಗಳು ಪ್ರಮುಖ ಕಾರಣವಾಗಿವೆ ಎಂದು ತಿಳಿಸಿದರು.

ಈ ಬಗ್ಗೆ ಕನಿಷ್ಠ ಜ್ಞಾನವು ಇಲ್ಲದ ಬೆಂಗಳೂರು ನಗರಾಭಿವೃದ್ಧಿಯ ಹೊಣೆಯನ್ನು ಹೊತ್ತಿರುವ ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ದುರ್ವರ್ತನಕಾರಿ ಹೇಳಿಕೆಗಳಿಂದಾಗಿ ಏಷ್ಯಾದ ಅತಿ ದೊಡ್ಡ ಹೂಡಿಕೆಯಾದ ಗೂಗಲ್ ಸಂಸ್ಥೆಯ ಕೃತಕ ಬುದ್ಧಿಮತ್ತೆಯ ಡೇಟಾ ಮೈನಿಂಗ್ ಕೇಂದ್ರವು ವಿಶಾಖಪಟ್ಟಣದ ಪಾಲಾಗಿದೆ.ಅವರ ಈ ರೀತಿಯ ನಡೆಯಿಂದಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕುಂಠಿತಗೊಳ್ಳುವುದು ನಿಸ್ಸಂದೇಹ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ ಎರಡು ದಶಕಗಳಿಂದ ಆಳಿರುವ ಮೂರೂ ಪಕ್ಷಗಳು ಬೆಂಗಳೂರಿಗರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ನೀಡಲು ವಿಫಲವಾಗಿವೆ ಎಂದು ಸೀತಾರಾಮ್ ಗುಂಡಪ್ಪ ಗಂಭೀರ ಆರೋಪ ಮಾಡಿದರು.

ಬೆಂಗಳೂರಿನ ಮೂಲಭೂತ ಸೌಕರ್ಯದ ನೆಪದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಕೊಳ್ಳೆಹೊಡೆಯುವ ಮಾರ್ಗಗಳನ್ನು ಕಾಂಗ್ರೆಸ್ ನವರು ಹುಡುಕಿಕೊಂಡಿದ್ದಾರೆ. ಇತ್ತೀಚೆಗೆ ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪ ಮಾಡಿಕೊಂಡೆ ಬಂದ ಕಾಂಗ್ರೆಸ್ ಪಕ್ಷ ಸಹ ಯಾವುದೇ ತನಿಖೆಯನ್ನು ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡುವುದನ್ನು ಬಿಟ್ಟು ತಾವೇ 60% ಕಮಿಷನ್ ದಂಧೆಗೆ ಇಳಿದಿರುವುದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣಗಳಾಗಿವೆ ಎಂದು ದೂರಿದರು.

ಡಿಕೆಶಿಯವರ ದುರಹಂಕಾರದ ಹೇಳಿಕೆಗಳು ಇಲ್ಲಿನ ಐಟಿ ಉದ್ಯಮಿಗಳು ಬೆಂಗಳೂರನ್ನು ಬಿಡುವಂತೆ ಪ್ರಚೋದಿಸುತ್ತದೆ. ಉದ್ಯಮಿಗಳಿಗೆ ಪೂರಕವಾದ ಉತ್ತಮ ರಸ್ತೆ , ನೀರು, ಒಳಚರಂಡಿ, ಸಂಚಾರ ವ್ಯವಸ್ಥೆಯಂತಹ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವುದನ್ನು ಬಿಟ್ಟು ಪ್ರತಿದಿನವೂ ಈ ರೀತಿಯ ಅಹಂಕಾರದ ಮಾತುಗಳನ್ನು ಬೆಂಗಳೂರಿಗರು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಅದರಲ್ಲೂ ಕನ್ನಡಿಗ ಐಟಿ ಉದ್ಯೋಗಿಗಳಿಗೆ ಆತಂಕದ ಪರಿಸ್ಥಿತಿ ಇದೆ. ಇಂಥ ಸೂಕ್ಷ್ಮಗಳನ್ನು ಅರಿತು ಮುಖ್ಯಮಂತ್ರಿಗಳು ಡಿಕೆಶಿಯವರ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸೀತಾರಾಮ್ ಗುಂಡಪ್ಪ ಅಗ್ರಹಿಸಿದರು.

ಡಿಕೆಶಿ ದುರ್ವರ್ತನೆ; ಬೆಂಗಳೂರು ಐಟಿ ಸಿಟಿ ಪಟ್ಟ ಕಳೆದುಕೊಳ್ಳಲಿದೆ-ಎಎಪಿ‌ ಕಳವಳ Read More

ಬೆಂಗಳೂರು ಒಂದರಲ್ಲೇ ವರ್ಷಕ್ಕೆ 943 ಟನ್ ಅನ್ನ ವೇಸ್ಟ್ ಆಗುತ್ತಿದೆ-ಸಿಎಂ ಕಳವಳ

ಬೆಂಗಳೂರು: ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು, ಅದಕ್ಕೇ ಅನ್ನಭಾಗ್ಯಯೋಜನೆ ಜಾರಿಗೆ ತಂದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಆಹಾರ ಮತ್ತು ನಾಗರಿಕ‌ ಸರಬರಾಜು ಇಲಾಖೆ ಗುರುವಾರ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ವಿಶ್ವ ಆಹಾರ ದಿನ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಮಾತನಾಡಿದರು.

ಕವಿ ಬೇಂದ್ರೆಯವರು ರೈತರನ್ನು ಅನ್ನಬ್ರಹ್ಮ ಎಂದು ಕರೆದಿದ್ದಾರೆ. ಆದ್ದರಿಂದ ಅನ್ನ ವ್ಯರ್ಥ ಮಾಡುವುದು, ಬಿಸಾಡುವುದು ಅನ್ನಬ್ರಹ್ಮನಿಗೆ ಮಾಡುವ ಅವಮಾನ ಎಂದು ಹೇಳಿದರು.

ನಾವು ಒಂದು ಕಾಲದಲ್ಲಿ ಅನ್ನಕ್ಕಾಗಿ ಅಮೆರಿಕದ ಮೇಲೆ ಅವಲಂಭಿತರಾಗಿದ್ದೆವು. ಈಗ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ.ಇದರ ಜೊತೆಗೆ ಊಟ ವ್ಯರ್ಥ ಮಾಡುವ ಪ್ರಮಾಣವೂ ಹೆಚ್ಚಾಗುತ್ತಿರುವುದು ಬೇಸರ ತರುತ್ತಿದೆ ಎಂದು
ವಿಷಾದಿಸಿದರು.

ಬೆಂಗಳೂರು ಒಂದರಲ್ಲೇ ಪ್ರತೀ ವರ್ಷ 943 ಟನ್ ಆಹಾರ ವೇಸ್ಟ್ ಆಗುತ್ತಿದೆ. ಹೆಚ್ಚೂ ಕಡಿಮೆ 360 ಕೋಟಿ ಮೌಲ್ಯದ ಆಹಾರ ವೇಸ್ಟ್ ಮಾಡುತ್ತಿದ್ದೇವೆ ಎಂದು ಜಿಕೆವಿಕೆ ಅಧ್ಯಯನವನ್ನು ಉಲ್ಲೇಖಿಸಿದರು.
ಗೊತ್ತಿದ್ದೂ ಗೊತ್ತಿದ್ದೂ ಆಹಾರ ವೇಸ್ಟ್ ಮಾಡುವುದು ಅನ್ನಕ್ಕೆ ತೋರಿಸುವ ಅಹಂಕಾರ ಎಂದು ಸಿದ್ದು ಗರಂ ಆಗಿಯೇ ನುಡಿದರು.

ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಕಾಂಗ್ರೆಸ್ ಬದ್ದತೆ. ಹೀಗಾಗಿ ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪ್ರಧಾನಿ ಮನ ಮೋಹನ್ ಸಿಂಗ್. ಆಹಾರ ಭದ್ರತೆ ಕಾಯ್ದೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಬಡವರ ವಿರೋಧಿ ನೀತಿ ಬಿಜೆಪಿಯ ಸಿದ್ಧಾಂತ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಆ ಕಡೆ ಬಿಜೆಪಿಗೂ ಚಪ್ಪಾಳೆ ತಟ್ಟೋದು, ಈ ಕಡೆ ಬಡವರ ಪರ ಕಾರ್ಯಕ್ರಮ ಕೊಟ್ಟ ಕಾಂಗ್ರೆಸ್ಸಿಗೂ ಚಪ್ಪಾಳೆ ತಟ್ಟೋದು ಮಾಡಬೇಡಿ. ಅನ್ನದ ಪರವಾಗಿ ಇರುವ ಕಾಂಗ್ರೆಸ್ ಬದ್ಧತೆಯನ್ನು ಅರ್ಥ ಮಾಡಿಕೊಳ್ಳಿ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಅನ್ನಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಳ ಸಂತೆ ಮಾರಾಟ ತಪ್ಪಿಸಲು 5 ಕೆಜಿ ಅಕ್ಕಿ ಕೊಟ್ಟು ಉಳಿದ ಐದು ಕೆಜಿ ಕಾಳು, ಬೇಳೆ ವಿತರಿಸಲು ತೀರ್ಮಾನಿಸಿದ್ದೇವೆ ಎಂದು ಇದೇ‌ ವೇಳೆ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಒಂದರಲ್ಲೇ ವರ್ಷಕ್ಕೆ 943 ಟನ್ ಅನ್ನ ವೇಸ್ಟ್ ಆಗುತ್ತಿದೆ-ಸಿಎಂ ಕಳವಳ Read More

ಮತ್ತೆ ಬರುತ್ತಿದೆ ಅವಳ ಹೆಜ್ಜೆ ಕಿರುಚಿತ್ರೋತ್ಸವ

ಬೆಂಗಳೂರು: ಈ ವರ್ಷ ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ ಅವಳ ಹೆಜ್ಜೆ ಕಿರುಚಿತ್ರೋತ್ಸವದ ಮೊದಲ ಆವೃತ್ತಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, 2026 ರ ಕಿರುಚಿತ್ರೋತ್ಸವಕ್ಕೆ ತಯಾರಿ ನಡೆದಿದೆ.

ಈ ಬಾರಿ ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟ ಕಥಾವಸ್ತು ಇದ್ದು, ಮಹಿಳೆಯರು ನಿರ್ದೇಶಿಸಿದ ಕನ್ನಡ ಕಿರುಚಿತ್ರಗಳ ಸ್ಪರ್ಧೆಯನ್ನು ಮತ್ತೊಮ್ಮೆ ಏರ್ಪಡಿಸಿದ್ದೇವೆ ಎಂದು ಗುಬ್ಬಿವಾಣಿ ಟ್ರಸ್ಟ್‌ ಮಹಿಳಾ ಸಬಲೀಕರಣ ವಿಭಾಗವಾದ ಅವಳ ಹೆಜ್ಜೆಯ ನಿರ್ದೇಶಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

ಅತ್ಯುತ್ತಮ ಕಿರುಚಿತ್ರಕ್ಕೆ ಅವಳ ಹೆಜ್ಜೆ ಪ್ರಶಸ್ತಿಯಾಗಿ 1,00,000 ನಗದು ಬಹುಮಾನ ಮತ್ತು ಹಲವಾರು ವಿಶೇಷ ವರ್ಗಗಳಲ್ಲಿ ತಲಾ 10,000 ನಗದು ಬಹುಮಾನ ಇರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವುದು ಮತ್ತು ಕನ್ನಡ ನಿರ್ದೇಶಕಿಯರನ್ನು ಪ್ರೋತ್ಸಾಹಿಸುವುದು ಈ ಚಿತ್ರೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

2025 ರ ನವಂಬರ್ 30 ರೊಳಗೆ ಅರ್ಜಿ ಸಲ್ಲಿಸಿದರೆ ಪ್ರವೇಶ ಶುಲ್ಕವಿರುವುದಿಲ್ಲ ಎಂದು ಶಾಂತಲಾ ದಾಮ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ್ತೆ ಬರುತ್ತಿದೆ ಅವಳ ಹೆಜ್ಜೆ ಕಿರುಚಿತ್ರೋತ್ಸವ Read More

ವೈದ್ಯ ಪತಿಯಿಂದ ಕೃತ್ಯ;ಅರಿವಳಿಕೆ ಮದ್ದು ನೀಡಿ ವೈದ್ಯೆ ಪತ್ನಿ ಕೊಲೆ:

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಗೆ ಅನಸ್ತೇಶಿಯಾ ನೀಡಿ ಕೊಂದು, ಸಹಜ ಸಾವು ಎಂದು ಬಿಂಬಿಸಿದ್ದ
ಡಾಕ್ಟರ್ ಮಹಾಶಯ ಈಗ ಕಂಬಿ ಎಣಿಸುತ್ತಿದ್ದಾರೆ

ವಿಕ್ಟೋರಿಯಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ರೆಡ್ಡಿಯನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುನೇನಕೊಳಲು ಅಯ್ಯಪ್ಪಸ್ವಾಮಿ ಲೇಔಟ್‌ ನಿವಾಸಿ ಡಾ.ಕೃತಿಕಾ ರೆಡ್ಡಿ(30) ಅವರು ಕೊಲೆಯಾದ ನತದೃಷ್ಟೆ.

ಮೃತರ ತಂದೆ ಕೆ.ಮುನಿರೆಡ್ಡಿ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಈಕೆಯ ಪತಿ ವರ್ತೂರಿನ ಗುಂಜೂರು ನಿವಾಸಿ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಲಾಗಿದೆ.

ಪ್ರಕರಣ ಬಹಳ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಆರು ತಿಂಗಳ ಹಿಂದೆ ಪತ್ನಿ ಕೃತಿಕಾ ರೆಡ್ಡಿ ಅವರಿಗೆ ಅನಸ್ತೇಶಿಯಾ ಕೊಟ್ಟು ಕೊಲೆ ಮಾಡಿ ಏನೂ ಆಗೇ ಇಲ್ಲಾ,ಸಹಜ ಸಾವು ಎಂದು ಬಿಂಬಿಸಿದ್ದ.

ಇದೀಗ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ಆರೋಪಿ ಮಹೇಂದ್ರ ರೆಡ್ಡಿಯನ್ನು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಬಂಧಿಸಲಾಗಿದೆ.

2024ರ ಮೇ 24ರಂದು ಮಹೇಂದ್ರ ರೆಡ್ಡಿ ಮತ್ತು ಕೃತಿಕಾ ರೆಡ್ಡಿ ಹಿರಿಯರ ಸಮ್ಮುಖದಲ್ಲೇ ಮದುವೆಯಾಗಿದ್ದರು. ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿದ್ದರು, ಮಹೇಂದ್ರ ರೆಡ್ಡಿ ಅದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಈ ಮಧ್ಯೆ ಕೃತಿಕಾ ರೆಡ್ಡಿ ಅಜೀರ್ಣ, ಗ್ಯಾಸ್ಟ್ರಿಕ್‌ ಮತ್ತು ಲೋ ಶುಗರ್‌ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ, ಪತಿಗೆ ಗೊತ್ತಾಗದಂತೆ ಔಷಧ ತೆಗೆದುಕೊಳ್ಳುತ್ತಿದ್ದರು.

ಮದುವೆಯಾದ ಕೆಲ ತಿಂಗಳ ಬಳಿಕ ಅವರ ಆರೋಗ್ಯ ಸಮಸ್ಯೆ ಹೆಚ್ಚಾಗಿತ್ತು. ಹೀಗಾಗಿ ಅವರು ತವರು ಮನೆಗೆ ಬಂದಿದ್ದರು.

ಅಲ್ಲಿಗೆ ಹೋಗಿ ಪತ್ನಿಗೆ ಆರೋಪಿಯೇ ಚಿಕಿತ್ಸೆ ನೀಡುತ್ತಿದ್ದರು. 2024ರ ಏಪ‍್ರಿಲ್ 23ರಂದು ಪತ್ನಿ ಕೃತಿಕಾಗೆ ಹೆಚ್ಚುವರಿ ಅನಸ್ತೇಶಿಯಾ ನೀಡಿದ್ದು, ಅವರು ಕೋಮಾ ಸ್ಥಿತಿ ತಲುಪಿದ್ದಾರೆ.

ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಲ್ಲಿ ಮೃತಪಟ್ಟಿದ್ದರು. ಹೀಗಾಗಿ ಮೃತರ ಪೋಷಕರು ಯಾವುದೇ ಅನುಮಾನ ಇಲ್ಲ ಎಂದು ದೂರು ನೀಡಿದ್ದರಿಂದ ಯುಡಿಆರ್‌ ದಾಖಲಾಗಿತ್ತು.

ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಜತೆಗೆ ಘಟನಾ ಸ್ಥಳದಲ್ಲಿ ದೊರೆತಿದ್ದ ಕೆನಾಲ್‌, ಇಂಜೆಕ್ಷನ್‌ಗಳು ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಅಲ್ಲದೇ, ಮೃತದೇಹದ ಕೆಲ ಮಾದರಿಗಳನ್ನು ಎಫ್ಎಸ್ಎಲ್‌ಗೆ ಕಳಿಸಲಾಗಿತ್ತು. ಎಫ್‌ಎಸ್‌ಎಲ್‌ ವರದಿಯಲ್ಲಿ ಅನಸ್ತೇಶಿಯಾ ಅಂಶಗಳು ಹೆಚ್ಚಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ದೃಢವಾಗಿತ್ತು.

ಹಾಗಾಗಿ ಕೃತಿಕಾ ಅವರ ತಂದೆಯಿಂದ ದೂರು ಪಡೆದು, ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಂದ್ರ ರೆಡ್ಡಿ ಅವರನ್ನು ಬಂಧಿಸಿ, ಒಂಬತ್ತು ದಿನ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯ ನಂತರ ಕೃತಿಕಾಳನ್ನು ಅಳಿಯ ನಿರ್ಲಕ್ಷಿಸಲು ಪ್ರಾರಂಭಿಸಿದ್ದ. ಮನೆಯ ಸಣ್ಣ ನಿರ್ಧಾರಗಳಿಗೂ ತನ್ನ ತಂದೆಯ ಒಪ್ಪಿಗೆಯನ್ನು ಪಡೆಯಬೇಕೆಂದು ಮತ್ತು ವೈಯಕ್ತಿಕ ಖರ್ಚುಗಳನ್ನು ಆಕೆಯೇ ಭರಿಸಬೇಕೆಂದು ಒತ್ತಾಯಿಸುತ್ತಿದ್ದ ಎಂದು ಕೃತಿಕಾ ತಂದೆ‌ ದೂರಿದ್ದಾರೆ.

ಅಳಿಯ ದೊಡ್ಡ ಆಸ್ಪತ್ರೆಯ ನಿರ್ಮಾಣಕ್ಕೆ ಹಣಕಾಸು ನೆರವು ಒದಗಿಸುವಂತೆ ಕೇಳಿದ್ದ. ಆಸ್ಪತ್ರೆ ನಿರ್ಮಾಣಕ್ಕೆ ಬೇಕಾಗುವಷ್ಟು ಹಣ ಇಲ್ಲ ಎಂದು ಹೇಳಿ ವೈದ್ಯಕೀಯ ಅಭ್ಯಾಸಕ್ಕಾಗಿ ಮಾರತಹಳ್ಳಿಯಲ್ಲಿರುವ ಸ್ವಂತ ಕಟ್ಟಡದಲ್ಲಿ ಕ್ಲಿನಿಕ್ ಮಾಡಿಕೊಟ್ಟಿದ್ದೇನೆ ಎಂದು ಮುನಿರೆಡ್ಡಿ ಆರೋಪಿಸಿದ್ದಾರೆ.

ವೈದ್ಯ ಪತಿಯಿಂದ ಕೃತ್ಯ;ಅರಿವಳಿಕೆ ಮದ್ದು ನೀಡಿ ವೈದ್ಯೆ ಪತ್ನಿ ಕೊಲೆ: Read More

ಅನುದಾನ ತಾರತಮ್ಯ: ನಿಖಿಲ್ ಟೀಕೆ

ಬೆಂಗಳೂರು: ಎರಡು ವರ್ಷಗಳಿಂದ ಶಾಸಕರಿಗೆ ಅಭಿವೃದ್ಧಿ ನಿಧಿ ಇಲ್ಲ,ಈಗ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 50 ಕೋಟಿ ಮತ್ತು ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಬರೀ 25 ಕೋಟಿ ನೀಡಲಾಗುತ್ತಿದೆ ಎಂದು ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.

ತಾರತಮ್ಯದ ವಿರುದ್ಧ, ನಮ್ಮ ಶಾಸಕರಾದ ಶ್ರೀ ವೆಂಕಟಶಿವರೆಡ್ಡಿ ಅವರು ಎಲ್ಲಾ ಕ್ಷೇತ್ರಗಳಿಗೂ ಸಮಾನ ನಿಧಿಯನ್ನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು x ಖಾತೆಯಲ್ಲಿ ನಿಖಿಲ್ ಬರೆದಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಈ ವರ್ಷ ಕೇವಲ 5 ಗ್ಯಾರಂಟಿ ಯೋಜನೆಗಳಿಗೆ 56,000 ಕೋಟಿ ಖರ್ಚು ಮಾಡುತ್ತಿದೆ ಮತ್ತು ರಾಜ್ಯದಲ್ಲಿ 5,229 ಕೋಟಿ ಮೂಲಸೌಕರ್ಯ ವೆಚ್ಚವನ್ನು ಕಡಿತಗೊಳಿಸುತ್ತಿದೆ ಎಂದು ಸಿಎಜಿ ವರದಿ ಹೇಳುತ್ತದೆ.

ಕಾಂಗ್ರೆಸ್ ನಾಯಕರು ಗಳಲ್ಲಿ ರ್‍ಯಾಲಿಗಳಲ್ಲಿ ಸಂವಿಧಾನವನ್ನು ಬೀಸುತ್ತ “ನ್ಯಾಯ ಮತ್ತು ಸಮಾನತೆ” ಎಂದು ಕೂಗುತ್ತಾರೆ, ಆದರೆ ಅವರ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಅದನ್ನು ಮರೆತೇ ಬಿಡುತ್ತಾರೆ ಎಂದು ನಿಖಿಲ್ ವ್ಯಂಗ್ಯವಾಡಿದ್ದಾರೆ.

ಅನುದಾನ ತಾರತಮ್ಯ: ನಿಖಿಲ್ ಟೀಕೆ Read More