ರೇಖಾ ಶ್ರೀನಿವಾಸ್ ಗೆ ತಿಮ್ಮಕ್ಕ ನ್ಯಾಷನಲ್ ಗ್ರೀನ್ ರಿ ಅವಾರ್ಡ್

ಮೈಸೂರು: ಮೈಸೂರಿನ ಕುವೆಂಪು ನಗರದ ನಿವಾಸಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಅವರಿಗೆ ತಿಮ್ಮಕ್ಕ ನ್ಯಾಷನಲ್ ಗ್ರೀನ್ ರಿ ಅವಾರ್ಡ್ ನೀಡಿ ಗೌರವಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ, ಶ್ರೀ ಸಿದ್ಧಾರ್ಥ ಎಜುಕೇಶನ್ ಸೊಸೈಟಿ, ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಾಲುಮರದ ತಿಮ್ಮಕ್ಕ ಅಭಿನಂದನಾ ಸಮಿತಿ ವತಿಯಿಂದ ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ವೃಕ್ಷ ಮಾತೆ ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ ರವರ 113ನೇ ಜನ್ಮದಿನದ ಸಂಭ್ರಮ ಹಮ್ಮಿಕೊಳ್ಳಲಾಯಿತು.

ಈ ವೇಳೆ ತಿಮ್ಮಕ್ಕ ನ್ಯಾಷನಲ್ ಗ್ರೀನ್ ರಿ
ರಾಜ್ಯಮಟ್ಟದ ಪ್ರಶಸ್ತಿಯನ್ನು ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಲು ಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್ ಅಧ್ಯಕ್ಷ ಉಮೇಶ್ (ಸಾಲುಮರದ ತಿಮ್ಮಕ್ಕನ ದತ್ತು ಪುತ್ರ), ಪ್ರಧಾನ ಕಾರ್ಯದರ್ಶಿ
ಎಲ್. ಪಿ.ಪ್ರಭಾಕರ್,ಸಾಲು ಮತದ ತಿಮ್ಮಕ್ಕ ಅಭಿನಂದನಾ ಸಮಿತಿ ಅಧ್ಯಕ್ಷ ಡಾ. ಹೇಮಂತ್ ಗೌಡ, ಶ್ರೀ ಸಿದ್ದಾರ್ಥ ಎಜುಕೇಷನ್‌ ಸೊಸೈಟಿ ಸದಸ್ಯರರಾದ ಪ್ರಭುವನ್, ಮನೋಜ್, ಅಭಿಶೇಕ್ ಮತ್ತಿತ್ತರು ಹಾಜರಿದ್ದರು.

ರೇಖಾ ಶ್ರೀನಿವಾಸ್ ಗೆ ತಿಮ್ಮಕ್ಕ ನ್ಯಾಷನಲ್ ಗ್ರೀನ್ ರಿ ಅವಾರ್ಡ್ Read More

ಬಿಜೆಪಿಯದ್ದು ಮನೆಯೊಂದು, ನೂರು ಬಾಗಿಲು-ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು: ಪ್ರಧಾನಿ ಮೋದಿಯವರು ನಮ್ಮ ಪಕ್ಷದ ಅಂತರ್‌ಕಲಹದ ಬಗ್ಗೆ ಭಾಷಣ ಮಾಡುವ ಹೊತ್ತಲ್ಲೇ, ಬಿಜೆಪಿಯ ಬಂಡಾಯ ನಾಯಕರು ಕುಮಾರ್ ಬಂಗಾರಪ್ಪನವರ ಮನೆಯಲ್ಲಿ ಸಭೆ ಸೇರಿ, ವಿಜಯೇಂದ್ರ ಪದಚ್ಯುತಿಗೆ ತಂತ್ರ ರೂಪಿಸುತ್ತಿರುವುದು ವಿಪರ್ಯಾಸ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೇ, ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಲು ಹೋಗಬೇಡಿ,ಬಿಜೆಪಿಯ ರಕ್ತದಲ್ಲಿ ಹೇಗೆ ಕೋಮುವಾದ ಸೇರಿಕೊಂಡಿದೆಯೋ,ಅದೇ ರೀತಿ ಅಂತರ್‌ಕಲಹವೂ ಸೇರಿಕೊಂಡಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ, ಪ್ರಧಾನಿ ಮೋದಿ ಅವರು ಕರ್ನಾಟಕದ ಕಾಂಗ್ರೆಸ್ ನಲ್ಲಿ ಅಂತರ್‌ಕಲಹ ನಡೆಯುತ್ತಿದೆ ಎಂದು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಬಹುಶಃ ಪ್ರಧಾನಿಯವರು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಲ್ಲಿ ಉಲ್ಲೇಖಗೊಳ್ಳುತ್ತಲಿರುವ ಪಕ್ಷಗಳ ಹೆಸರಲ್ಲಿ ಗೊಂದಲ ಮಾಡಿಕೊಂಡು, ಬಿಜೆಪಿ ಬದಲಿಗೆ ಕಾಂಗ್ರೆಸ್ ಎಂದು ತಿಳಿದುಕೊಂಡು ಈ ಅಭಿಪ್ರಾಯ ವ್ಯಕ್ತಪಡಿಸಿರಬಹುದು,ಈ ಗೊಂದಲ ನಿವಾರಣೆಗಾಗಿ ಅವರು ತಕ್ಷಣ ಸ್ಪಷ್ಟೀಕರಣ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಬರೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳದ ದಿನವೇ ಇಲ್ಲ, ಪ್ರತಿನಿತ್ಯ ಆರೋಪ – ಪ್ರತ್ಯಾರೋಪ, ಪರಸ್ಪರ ದೂಷಣೆ – ನಿಂದನೆಯ ಧಾರವಾಹಿ ಮೂಲಕ ಜನರನ್ನು ರಂಜಿಸುತ್ತಿದ್ದಾರೆ ಎಂದು ಸಿದ್ದು ಟೀಕಿಸಿದ್ದಾರೆ.

ಸನ್ಮಾನ್ಯ ನರೇಂದ್ರ ಮೋದಿ ಅವರೇ, ದಯವಿಟ್ಟು ತಾವು ಬೆಳಿಗ್ಗೆ ಎದ್ದು ಕರ್ನಾಟಕದಿಂದ ಪ್ರಕಟವಾಗುವ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ನಿಮ್ಮ ಪಕ್ಷದಲ್ಲಿ ನಡೆಯುವ ಅಂತರ್‌ಕಲಹದ ಒಂದು ಅಂದಾಜು ಸಿಗಬಹುದು,ಆಗ ನಿಮ್ಮ ಪಕ್ಷದ ಅಂತರ್‌ಕಲಹದ ಬೆಂಕಿಯನ್ನು ಶಮನ ಮಾಡಲು ಪ್ರಯತ್ನ ನಡೆಸಬಹುದು ಎಂದು ಸಲಹೆ ನೀಡಿದ್ದಾರೆ.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬೆಳಿಗ್ಗೆ ಎದ್ದ ಕೂಡಲೇ ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಇವರ ಆರೋಪಗಳಿಗೆ ಶಾಸಕರಾದ ರಮೇಶ್ ಜಾರಕಿಹೊಳಿ, ಸಿ.ಟಿ.ರವಿ ಮೊದಲಾದವರು ದನಿಗೂಡಿಸಿ ಅಪ್ಪ-ಮಕ್ಕಳ ವಿರುದ್ದ ಬಗೆಬಗೆಯ ಆರೋಪಗಳನ್ನು ಮಾಡಿದ್ದಾರೆ. ಇದೀಗ ಉಚ್ಚಾಟಿತ ಬಿಜೆಪಿ ನಾಯಕ ಈಶ್ವರಪ್ಪನವರ ಮನೆಯಲ್ಲಿಯೇ ಕೂತು ಭಿನ್ನಮತೀಯ ಶಾಸಕರು ಸಭೆ ನಡೆಸಿದ್ದಾರೆ. ಇದನ್ನು ಅಂತರ್‌ಕಲಹ ಎಂದು ಕರೆಯದೆ ಪ್ರೇಮಸಲ್ಲಾಪ ಎನ್ನೋಣವೇ ಎಂದು ಸಿದ್ದರಾಮಯ್ಯ ವ್ಯಂಗ್ಯ ವಾಡಿದ್ದಾರೆ.

2011ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಜೈಲಿಗೆ ಹೋಗಲು ಪಕ್ಷದೊಳಗಿನ ಅಂತರ್‌ಕಲಹವೂ ಕಾರಣ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮರೆತುಬಿಟ್ಟಿದ್ದಾರೆ. ಅದರ ನಂತರ ಬಿಜೆಪಿ ತೊರೆದು ಸ್ವಂತ ಪಕ್ಷ ಕಟ್ಟಿದ್ದ ಯಡಿಯೂರಪ್ಪನವರು ವಾಜಪೇಯಿ – ಅಡ್ವಾಣಿಯವರನ್ನು ಸೇರಿದಂತೆ ಯಾರನ್ನೂ ಬಿಡದೆ ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಿದ್ದಾರೆ. ಕೊನೆಗೆ ಅವರನ್ನೇ ಕರೆತಂದು ಮುಖ್ಯಮಂತ್ರಿ ಮಾಡಿದ್ದಾಯಿತು, ನಂತರ ಅವರನ್ನು ಪದಚ್ಯುತಿಗೊಳಿಸಿಯೂ ಆಯಿತು. ಇವೆಲ್ಲದರ ಹಿಂದೆ ಪಕ್ಷದ ಅಂತರ್‌ಕಲಹ ಕಾರಣ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ ಸಿಎಂ.

ದೇವರಾಜ ಅರಸು ನಂತರ ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಾನು ಇದೀಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಮ್ಮೊಳಗೆ ಜಗಳ ಹುಟ್ಟುಹಾಕುವ ನಿಮ್ಮೆಲ್ಲರ ನಿರಂತರ ಪ್ರಯತ್ನದ ಹೊರತಾಗಿಯೂ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸಿದ್ದು ತಿಳಿಸಿದ್ದಾರೆ.

ಬಿಜೆಪಿಯದ್ದು ಮನೆಯೊಂದು, ನೂರು ಬಾಗಿಲು-ಸಿದ್ದರಾಮಯ್ಯ ವ್ಯಂಗ್ಯ Read More

ಸಿಎಂ ರಾಜೀನಾಮೆ ನೀಡದಿದ್ದರೆ ಅವರ ಪಕ್ಷದವರೇ ದಂಗೆ‌ ಏಳುತ್ತಾರೆ:ಅಶೋಕ್ ವ್ಯಂಗ್ಯ

ಬೆಂಗಳೂರು: ಸಿಎಂ ಯಾರಾಗಬೇಕೆಂದು ಕಾಂಗ್ರೆಸ್‌ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ ಸಿದ್ದರಾಮಯ್ಯ ಈಗ ರಾಜೀನಾಮೆ ನೀಡದಿದ್ದರೆ ಅವರ ಪಕ್ಷದವರೇ ದಂಗೆ‌ ಏಳುತ್ತಾರೆ ಎಂದು ಪ್ರತಿಪಕ್ಷ ನಾಯಕ ಅಶೋಕ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

ಹೈಕೋರ್ಟ್‌ನಿಂದ ತೀರ್ಪು ಬಂದ ನಂತರವೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿಲ್ಲ, ಬಿ.ಎಸ್‌.ಯಡಿಯೂರಪ್ಪನವರ ಮೇಲೆ ಆರೋಪ ಬಂದಾಗ ಇವರೇ ರಾಜೀನಾಮೆಗೆ ಒತ್ತಾಯಿಸಿದ್ದರು. ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದೂ ಹೇಳಿದ್ದರು. ಹಾಗೆಯೇ ಈಗ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕೆ.ಎಸ್‌.ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗಲೂ ಇದೇ ರೀತಿ ವಿಧಾನಸಭೆಯಲ್ಲಿ ಪ್ರತಿಭಟಿಸಿದ್ದರು. ಸಚಿವರಾಗಿದ್ದ ಬಿ.ನಾಗೇಂದ್ರ ಮೇಲೆ ಆರೋಪ ಬಂದು ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಸಿಎಂ ಮಾತ್ರ ರಾಜೀನಾಮೆ ನೀಡುತ್ತಿಲ್ಲ ಎಂದು ವ್ಯಂಗ್ಯ ವಾಡಿದರು.

ವಾಲ್ಮೀಕಿ ನಿಗಮದ ಪರಿಶಿಷ್ಟ ಪಂಗಡದವರ ಹಣ ದುರ್ಬಳಕೆಯಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ, ಅಭಿವೃದ್ಧಿಗೆ ಕಾಸಿಲ್ಲ, ಆದರೆ ಲೂಟಿಗೆ ಮಾತ್ರ ಹಣ ದೊರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂತೋಷ್‌ ಹೆಗ್ಡೆಯವರು ಈ ಹಿಂದೆ ಯಡಿಯೂರಪ್ಪನವರ ರಾಜೀನಾಮೆ ಕೇಳಿದ್ದರು. ಈಗ ಸಿದ್ದರಾಮಯ್ಯನವರ ರಾಜೀನಾಮೆ ಕೇಳಿದ್ದಾರೆ. ಹಿರಿಯ ರಾಜಕಾರಣಿ ಕೆ.ಬಿ.ಕೋಳಿವಾಡ ಕೂಡ ರಾಜೀನಾಮೆ ನೀಡುವುದು ಸೂಕ್ತ ಎಂದಿದ್ದಾರೆ. ಈ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ಕೊಡಿ ಸಿದ್ದರಾಮಯ್ಯನವರೇ ಎಂದು ಅಶೋಕ್ ಆಗ್ರಹಿಸಿದರು.

ಇದು ರಾಜಕೀಯ ಪ್ರೇರಿತವಾಗಿದ್ದರೆ ಕೋರ್ಟ್‌ಗಳು ಏಕೆ ತೀರ್ಪು ನೀಡುತ್ತಿದ್ದವು, ಈ ರೀತಿ ಕಾಂಗ್ರೆಸ್‌ ಆರೋಪ ಮಾಡುವುದು ದೊಂಬರಾಟವಾಗಿದೆ ಎಂದು ವ್ಯಂಗ್ಯ ವಾಡಿದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಮೊದಲಿಂದಲೂ ಸಮಸ್ಯೆ ಇದೆ. ಅನೇಕ ಬಾರಿ ಭಿನ್ನಮತ ಉಂಟಾಗಿದೆ. ಯಾರು ಸಿಎಂ ಆಗಬೇಕೆಂಬ ಚರ್ಚೆ ಕೂಡ ಕಾಂಗ್ರೆಸ್‌ನೊಳಗೆ ನಡೆಯುತ್ತಿದೆ,ಇಂತಹ ಸಮಯದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದೇ ಸೂಕ್ತ ಎಂದು ಹೇಳಿದರು.

ಸಿಎಂ ರಾಜೀನಾಮೆ ನೀಡದಿದ್ದರೆ ಅವರ ಪಕ್ಷದವರೇ ದಂಗೆ‌ ಏಳುತ್ತಾರೆ:ಅಶೋಕ್ ವ್ಯಂಗ್ಯ Read More

ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಹಂಪನಾಗೆ ಆಹ್ವಾನ

ಮೈಸೂರು: ಮೈಸೂರು ಜಿಲ್ಲಾಡಳಿತ ವತಿಯಿಂದ ಸಂಶೋಧಕರು, ಸಾಹಿತಿಗಳಾದ ಪ್ರೊ.ಹಂ.ಪ. ನಾಗರಾಜಯ್ಯ ಅವರನ್ನು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಆಹ್ವಾನಿಸಲಾಯಿತು.

ಬೆಂಗಳೂರಿನ ಕ್ರಸೆಂಟ್ ರಸ್ತೆಯ ಅಮೇರಿಕನ್ ಕಾಲೋನಿಯಲ್ಲಿರುವ ಹಂಪನಾ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಆಹ್ವಾನಿಸಲಾಯಿತು.

ಮೈಸೂರು ಪೇಟ ತೋಡಿಸಿ, ಫಲಫುಷ್ಪ ನೀಡಿ ಸಾಂಪ್ರದಾಯಿಕವಾಗಿ ಆಮಂತ್ರಣ ನೀಡಲಾಯಿತು.

ಈ‌ ವೇಳೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ‌ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಎಸ್ ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್, ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಮತ್ತು ಸ್ವಾಗತ ಸಮಿತಿಯ ಅಧಿಕಾರಿಗಳು ಹಾಜರಿದ್ದರು.

ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಹಂಪನಾಗೆ ಆಹ್ವಾನ Read More

ಮುಖ್ಯ ಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

ಬೆಂಗಳೂರು: ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜೆಡಿಎಸ್ ಕಾರ್ಯಕರ್ತರು ಪಕ್ಷದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ರಾಜ್ಯಪಾಲರು ನೀಡಿರುವ ಅನುಮತಿಗೆ ರಾಜ್ಯ ಹೈಕೋರ್ಟ್ ಒಪ್ಪಿಗೆ ನೀಡಿದೆ.

ಅಲ್ಲದೆ, ಜನ ಪ್ರತಿನಿಧಿಗಳ ನ್ಯಾಯಾಲಯ ಸಿಎಂ ವಿರುದ್ಧ ಎಫ್ ಐ ಆರ್ ದಾಖಲಿಸಿ, ಮೂರು ತಿಂಗಳ ಒಳಗಾಗಿ ತನಿಖೆ ಮುಗಿಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದೆ.ಆದ್ದರಿಂದ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ರಮೇಶ್ ಗೌಡ ಒತ್ತಾಯಿಸಿದರು.

ಸಿದ್ದರಾಮಯ್ಯ ಅವರು ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಅವರು ರಾಜೀನಾಮೆ ಕೊಡದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತಮ್ಮ ಕುಟುಂಬಕ್ಕೆ ಅನುಕೂಲ ಮಾಡಿಕೊಳ್ಳಲು ಸಿಎಂ ಅವರು ಅಧಿಕಾರ ದುರ್ಬಳಕೆ ಜತೆಗೆ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಅವರು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯರಾದ ಕೆ ಎನ್ ತಿಪ್ಪೇಸ್ವಾಮಿ, ಟಿ.ಎ.ಶರವಣ ಸೇರಿದಂತೆ ಜೆಡಿಎಸ್ ನಗರ ಘಟಕದ ಪದಾಧಿಕಾರಿಗಳು, ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರು ಮತ್ತಿತರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಖ್ಯ ಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ Read More

ಯಾವುದೇ ತನಿಖೆಗೂ ಸಿದ್ದ:ಸಿದ್ದರಾಮಯ್ಯ

ಬೆಂಗಳೂರು: ಮುಡಾ‌ ಹಗರಣ ಸಂಬಂಧ ಯಾವುದೇ‌ ತನಿಖೆ ಎದುರಿಸಲು ಸಿದ್ದ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವಂತೆ ಸೂಚಿಸಿದೆ.ನಾನು ಕೋರ್ಟ್ ಪ್ರತಿಯನ್ನು ಇನ್ನೂ ಓದಿಲ್ಲ.ಪ್ರತಿ ಸಿಕ್ಕಿದ ನಂತರ ಪೂರ್ಣ ಓದಿ ನಂತರ ಮಾಧ್ಯಮಗಳಿಗೆ‌ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

ಆದೇಶದ ಪ್ರತಿ‌ ಸಿಕ್ಕ ಕೂಡಲೇ ಓದಿ,ನಮ್ಮ ವಕೀಲರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈಗ ನಾನು ಕೇರಳಕ್ಕೆ ಹೋಗುತ್ತಿದ್ದೇನೆ,ರಾತ್ರಿ ವೇಳೆಗೆ ಕೋರ್ಟ್ ಪ್ರತಿ ಸಿಗಲಿದೆ,ದೂರುದಾರರು ಮೈಸೂರಿನವರು,ಹಾಗಾಗಿ ತನಿಖೆ ಕೂಡಾ ಮೈಸೂರು ಲೋಕಾಯುಕ್ತದಲ್ಲೇ ನಡೆಯಲಿದೆ.ತನಿಖೆಗೆ ನಾನು ಸಿದ್ದವಾಗಿದ್ದೇನೆ ಎಂದು ಸಿಎಂ‌ ಸ್ಪಷ್ಟಪಡಿಸಿದರು.

ಯಾವುದೇ ತನಿಖೆಗೂ ಸಿದ್ದ:ಸಿದ್ದರಾಮಯ್ಯ Read More

ಸಿದ್ದರಾಮಯ್ಯ ರಾಜೀನಾಮೆಗೆ‌ ಅಶೋಕ್ ಆಗ್ರಹ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ‌ ಸಿದ್ದರಾಮಯ್ಯ ನವರ ವಿರುದ್ಧ ರಾಜ್ಯಪಾಲರ ನಿರ್ಧಾರವನ್ನ ಹೈಕೋರ್ಟ್ ಎತ್ತಿಹಿಡಿದಿದ್ದು, ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಾಗಿನಿಂದ ಮುಖ್ಯಮಂತ್ರಿ ಆದಿಯಾಗಿ, ಸಚಿವರು, ಶಾಸಕರು ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರು ಮತ್ತು ರಾಜಭವನವನ್ನ ನಿಂದಿಸುತ್ತಾ ಬಂದಿದ್ದು, ಹೈಕೋರ್ಟ್ ತೀರ್ಪು ಇಡೀ ಕಾಂಗ್ರೆಸ್ ಪಕ್ಷಕ್ಕೆ ಛಡಿ ಏಟು ಕೊಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನಾದರೂ ಅನಗತ್ಯವಾಗಿ ರಾಜ್ಯಪಾಲರನ್ನ ನಿಂದಿಸುವುದು ಬಿಟ್ಟು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆಗೆ‌ ಅಶೋಕ್ ಆಗ್ರಹ Read More

ಸಿಎಂ ಸಿದ್ದರಾಮಯ್ಯಗೆ ಅಮಂಗಳವಾರ:ಹೈಕೋರ್ಟ್ ನಲ್ಲಿ ಬಿಗ್ ಶಾಕ್

ಬೆಂಗಳೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ‌ ಹೈಕೋರ್ಟ್ ನಲ್ಲಿ ಬಿಗ್ ಶಾಕ್ ಉಂಟಾಗಿದ್ದು,ಮಂಗಳವಾರ ಅಮಂಗಳವಾಗಿದೆ.

ಮುಡಾ‌ ಹಗರಣದಲ್ಲಿ ರಾಜ್ಯಪಾಲರ‌ ಪ್ರಾಸಿಕ್ಯೂಶನ್ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿ ಹೈಕೋರ್ಟ್ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದೆ.

ಸಿದ್ದರಾಮಯ್ಯ ಅವರ‌‌ ವಿರುದ್ಧ ತನಿಖೆ ನಡೆಸಬಹುದು ಎಂದು ನ್ಯಾ. ನಾಗಪ್ರಸನ್ನ ಅವರು ಆದೇಶಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಅಮಂಗಳವಾರ:ಹೈಕೋರ್ಟ್ ನಲ್ಲಿ ಬಿಗ್ ಶಾಕ್ Read More

ಅಪಘಾತಕ್ಕೀಡಾದವರ ಜೀವ ಉಳಿಸುವಲ್ಲಿ ಅತ್ಯಾಧುನಿಕ ಆಂಬುಲೆನ್ಸ್ ಸಹಕಾರಿ:ಸಿಎಂ

ಬೆಂಗಳೂರು: ಅತ್ಯಾಧುನಿಕ ಆಂಬ್ಯುಲೆನ್ಸ್ ಗಳ ಸೇವೆಗಳು ಅಪಘಾತಕ್ಕೊಳಗಾದವರ ಜೀವ ಉಳಿಸುವಲ್ಲಿ ಆಪತ್ಕಾಲ ಯಾನ ಸೇವೆ ಸಹಕಾರಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಬಳಿ 65 ಅತ್ಯಾಧುನಿಕ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಿ ನಂತರ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿರು.

26 ಸುಧಾರಿತ ಹಾಗೂ 39 ಬೇಸಿಕ್ ಲೈಫ್ ಸಪೋರ್ಟ್ ಅಂಬ್ಯುಲೆನ್ಸ್ ಗಳನ್ನು ಇಂದು ಜನರ ಸೇವೆಗೆ ಮುಕ್ತಗೊಳಿಸಲಾಗಿದ್ದು, ಇವುಗಳನ್ನು ರಾಜ್ಯದ ವಿವಿದ ಜಿಲ್ಲೆಗಳಿಗೆ ಕಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯಪಾಲರು ಅರ್ಕಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದು, ಬಿಜೆಪಿಯವರು ಹಿಂದೆ ನಾಲ್ಕು ವರ್ಷ ಅವಧಿಯಲ್ಲಿದ್ದಾಗ ವಿಷಯವನ್ನು ಏಕೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿಲ್ಲ ಎಂದು ಪ್ರಶ್ನಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಿ.ಟಿ.ರವಿಯವರು ರಾಜ್ಯಪಾಲರಿಗೆ ಈಗ ಪತ್ರ ಬರೆದಿದ್ದಾರಲ್ಲಾ, ಹಿಂದೆ ಅವರು ಸಚಿವರಾಗಿದ್ದಾಗ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯಪಾಲರ ಪತ್ರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯಪಾಲರ ನಡೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ದೂರು ಕೊಡುವಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ರಾಜ್ಯಪಾಲರು ಸಣ್ಣ ವಿಷಯಗಳ ಬಗ್ಗೆ ಗಮನ ಕೊಡುತ್ತಿದ್ದಾರೆ ಎಂದು ಬೇಸರ ಪಟ್ಟರು.

ಕನ್ನಡದಲ್ಲಿ ಸಹಿ ಮಾಡುತ್ತಿಲ್ಲವೆಂಬ ಸಣ್ಣ ವಿಷಯದ ಬಗ್ಗೆಯೂ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದು ವರದಿ ಕೇಳುತ್ರಾರೆ ಕನ್ನಡದಲ್ಲಿರುವ ಪತ್ರಗಳಿಗೆ ಕನ್ನಡದಲ್ಲಿ ಹಾಗೂ ಆಂಗ್ಲದಲ್ಲಿರುವ ಪತ್ರಗಳಿಗೆ ಆಂಗ್ಲದಲ್ಲಿ ಸಹಿ ಮಾಡುವುದು ತಪ್ಪೇನಲ್ಲ, ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ರಾಜ್ಯಪಾಲರು ಉತ್ತರ ಕೇಳುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

ಅಪಘಾತಕ್ಕೀಡಾದವರ ಜೀವ ಉಳಿಸುವಲ್ಲಿ ಅತ್ಯಾಧುನಿಕ ಆಂಬುಲೆನ್ಸ್ ಸಹಕಾರಿ:ಸಿಎಂ Read More

ಅತ್ಯಾಚಾರ ಪ್ರಕರಣದಲ್ಲಿ ಮತ್ತೆ‌ ಮುನಿರತ್ನ ಬಂಧನ

ಬೆಂಗಳೂರು: ಜಾತಿನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನಿರತ್ನ ಅವರನ್ನು ತನಿಖೆಗೆ ಒಳಪಡಿಸಲಾಗುತ್ತದೆ.

ಜಾತಿನಿಂದನೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಗುರುವಾರ ಜಾಮೀನು ಮಂಜೂರು ಮಾಡಿತ್ತು,ಆದರೆ ಎಲ್ಲ ಪ್ರಕ್ರಿಯೆ ಮುಗಿಸಿ ಶುಕ್ರವಾರ ಮುನಿರತ್ನ ಜೈಲಿನಿಂದ ಹೊರಬಂದ ತಕ್ಷಣ ಕಗ್ಗಲಿಪುರ ಪೊಲೀಸರು ಬಂಧಿಸಿ ಕರೆದೊಯ್ದರು.

ಮಾಗಡಿ ಡಿವೈಎಸ್ಪಿ ಪ್ರವೀಣ್ ಹಾಗೂ ರಾಮನಗರ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ ಬಿಗಿ ಭದ್ರತೆಯಲ್ಲಿ ಶಾಸಕ ಮುನಿರತ್ನ ಅವರನ್ನ ಬಂಧಿಸಿತು.

7 ಜೀಪುಗಳು, ಒಂದು ಮೀಸಲು ಪಡೆಯ ವಾಹನ ಭದ್ರತೆಯೊಂದಿಗೆ ಪರಪ್ಪನ ಅಗ್ರಹಾರದಲ್ಲಿ ಬಂಧಿಸಲಾಯಿತು.

ಮಾರ್ಗಮಧ್ಯೆಯೇ ವೈದ್ಯಕೀಯ ತಪಾಸಣೆ ಮುಗಿದ ಬಳಿಕ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ.

ಶಾಸಕ ಮುನಿರತ್ನ ಸೇರಿದಂತೆ ಒಟ್ಟು 7 ಆರೋಪಿಗಳ ವಿರುದ್ಧ ಬುಧವಾರ ಸಂಜೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಕೇಸ್‌ ದಾಖಲಾಗಿತ್ತು.

ಕಗ್ಗಲೀಪುರದ ಖಾಸಗಿ ರೆಸಾರ್ಟ್‌ನಲ್ಲಿ ಅತ್ಯಾಚಾರ ನಡೆದಿರುವುದಾಗಿ 40 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು.

ಸಂತ್ರಸ್ತೆಯ ದೂರಿನ ಅನ್ವಯ ಪೊಲೀಸರು ಮುನಿರತ್ನ ನಾಯ್ಡು, ವಿಜಯ್‌ ಕುಮಾರ್‌, ಸುಧಾಕರ, ಕಿರಣ್‌ ಕುಮಾರ್‌, ಲೋಹಿತ್‌ ಗೌಡ, ಮಂಜುನಾಥ , ಲೋಕಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಮತ್ತೆ‌ ಮುನಿರತ್ನ ಬಂಧನ Read More