ಮುಮ್ತಾಜ್ ಅಲಿ ನಾಪತ್ತೆ:ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ-ಪರಮೇಶ್ವರ್

ಬೆಂಗಳೂರು: ಮಾಜಿ ಶಾಸಕ ಮೊಯುದ್ದೀನ್ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ಅವರ ಬಿಎಂಡಬ್ಲೂ ಕಾರು ಮಂಗಳೂರಿನ ಕುಳೂರು ಸೇತುವೆ ಮೇಲೆ ಪತ್ತೆ ಆಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೆರಶ್ವರ್ ತಿಳಿಸಿದ್ದರೆ.

ಮುಮ್ತಾಜ್ ಅಲಿ ಅವರು ನಾಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್,ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದರು.

ಕಾರು ಅಪಘಾತವಾಗಿದೆಯಾ ಅಥವಾ ಬೇರೆ ದುರ್ಘಟನೆ ಆಗಿದೆಯಾ ಎಂಬ ಬಗ್ಗೆ ಪೊಲೀಸರು ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದರು.

ಈಗಾಗಲೇ ಸ್ಥಳಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಮತ್ತು ಕುಟುಂಬದವರು ಭೇಟಿ ನೀಡಿದ್ದಾರೆ, ಮಂಗಳೂರು ಕಮಿಷನರ್ ಅನುಪಮ್ ಅಗರ್ ವಾಲ್ ಪ್ರಕರಣದ ತನಿಖೆ ಬಗ್ಗೆ ವಿವರಣೆ ನೀಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಮುಮ್ತಾಜ್ ಅಲಿ ನಾಪತ್ತೆ:ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ-ಪರಮೇಶ್ವರ್ Read More

ಜಾತಿಗಣತಿ ಜಾರಿ ಮಾಡಲೇಬೇಕು: ಬಿ.ಕೆ.ಹರಿಪ್ರಸಾದ್‌ ಆಗ್ರಹ

ಬೆಂಗಳೂರು: ಜಾತಿಗಣತಿ ಜಾರಿಯನ್ನು ಸರ್ಕಾರ ಜಾರಿ ಮಾಡಲೇಬೇಕೆಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಮ್ಮದೇ ಪಕ್ಷದ‌ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮೀಸಲಾತಿಯ ಒಳಮುಖ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮೀಸಲಾತಿಯನ್ನು ಉಳಿಸುವುದು, ಜಾತಿ ಹಾಗೂ ಜನಗಣತಿಯನ್ನು ನಡೆಸುವುದು ನಮ್ಮ ಪಕ್ಷದ ಆದ್ಯ ಕರ್ತವ್ಯ.ಅಧಿಕಾರಕ್ಕಾಗಿ ಮೀಸಲಾತಿ ವಿಷಯದಲ್ಲಿ ರಾಜಿಯಾಗಲು ಎಂದೂ ಸಾಧ್ಯವಿಲ್ಲ ಎಂದು ಹೇಳಿದರು.

ಚುಣಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಜಾತಿಗಣತಿ ಜಾರಿ ವಿಚಾರ
ಇರುವುದರಿಂದ ಕೂಡಲೇ ಜಾರಿ‌ ಮಾಡಬೇಕೆಂದು ಹೇಳಿದರು.

ಜಾತಿಗಣತಿ ಜಾರಿ ಮಾಡಿದರೆ ಸರ್ಕಾರ ಬಿದ್ದು ಹೋಗಲಿದೆ ಎಂಬ ಭಯ ಏಕೆ,ಯಾವುದಕ್ಕೂ ಅಂಜದೆ ಜಾತಿಗಣತಿ ಜಾರಿಯಾಗಲೇಬೇಕು ಎಂದು ಹೇಳಿದ್ದಾರೆ.

ಜಾತಿಗಣತಿ ಜಾರಿಗೆ ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆಯೊ ಗೊತ್ತಿಲ್ಲ,
ಜಾತಿಗಣತಿಯಿಂದ ಎಲ್ಲಾ ಸಮುದಾಯಗಳಿಗೂ ಅನುಕೂಲ ಆಗಲಿದೆ ಹಾಗಾಗಿ ಜಾತಿಗಣತಿ ಜಾರಿಯಾಗಲೇಬೇಕು ಎಂದು ಹರಿಪ್ರಸಾದ್ ಕಡಕ್ಕಾಗೇ ಹೇಳಿದರು.

ಜಾತಿಗಣತಿ ಜಾರಿ ಮಾಡಲೇಬೇಕು: ಬಿ.ಕೆ.ಹರಿಪ್ರಸಾದ್‌ ಆಗ್ರಹ Read More

ಇಂದು ಕೂಡ ದರ್ಶನ್​ಗೆ ಸಿಗಲಿಲ್ಲ ಬೇಲ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು,
ಶನಿವಾರ ಕೋರ್ಟ್​​ನಲ್ಲಿ ಬೇಲ್ ಅರ್ಜಿ ವಿಚಾರಣೆ ನಡೆಯಿತು.

ಆದರೆ ಸತತ ನಾಲ್ಕು ಗಂಟೆಗಳ ಕಾಲ ಹಿರಿಯ ವಕೀಲ ಸಿ.ವಿ ನಾಗೇಶ್​ ವಾದ ಮಂಡಿಸಿದರೂ ಕೂಡಾ ನಟ ದರ್ಶನ್​ಗೆ ಬೇಲ್ ಸಿಗಲಿಲ್ಲ.

ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಅವರು, ತನಿಖೆಯಲ್ಲಿ ಪೊಲೀಸರು ಮಾಡಿದ ತಪ್ಪುಗಳನ್ನು ಪ್ರಶ್ನೆ ಮಾಡಿದ್ದು, ತನಿಖೆ ತಡವಾಗಿದ್ದು ಯಾಕೆ, ದರ್ಶನ್ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ವಾದ ಮಂಡಿಸಿದರು.ಜತೆಗೆ ಕೇಸ್​ ತನಿಖೆಯ
ತಪ್ಪುಗಳ ಪಟ್ಟಿಯನ್ನು ಕೋರ್ಟ್​​ಗೆ ನೀಡಿದರು.

ಸಿ.ವಿ. ನಾಗೇಶ್ ಅವರು ವಾದ ಮುಗಿಸುತ್ತಿದ್ದಂತೆ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಅ.8ಕ್ಕೆ ಮುಂದೂಡಿದರು.

ಇಂದು ಬೇಲ್ ಸಿಗಬಹುದೆಂದು ಕಾಯುತ್ತಿದ್ದ ದರ್ಶನ್​ಗೆ ನಿರಾಸೆ ಆಗಿದೆ,ಜೈಲಿನಲ್ಲೇ ಇರಬೇಕಿದೆ. ಇನ್ನು ಪವಿತ್ರಾ ಗೌಡಗೂ ಬೇಲ್ ಸಿಕ್ಕಿಲ್ಲ. ಸಿಟಿ ಸಿವಿಲ್ ಕೋರ್ಟ್, ಪವಿತ್ರಾಗೌಡ ಜಾಮೀನು ಅರ್ಜಿಯನ್ನು ಸಹ ಅಕ್ಟೋಬರ್ 8 ಕ್ಕೆ ಮುಂದೂಡಿದೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ ಆಗಿದ್ದು,ಅಂದು ಎಸ್ ಪಿಪಿ ಪ್ರಸನ್ನ ಕುಮಾರ್ ಅವರು ಪ್ರತಿವಾದ ಮಂಡಿಸಲಿದ್ದಾರೆ.

ಇಂದು ಕೂಡ ದರ್ಶನ್​ಗೆ ಸಿಗಲಿಲ್ಲ ಬೇಲ್ Read More

ಕುಮಾರಸ್ವಾಮಿ ಹೆದರುವುದು ದೇವರಿಗೆ, ಜನರಿಗೆ ಮಾತ್ರ: ಸಿದ್ದುಗೆ ಹೆಚ್ ಡಿ ಕೆ ಟಾಂಗ್

ಬೆಂಗಳೂರು: ಈ‌ ಕುಮಾರಸ್ವಾಮಿ ಹೆದರುವುದು ದೇವರಿಗೆ ಮತ್ತು ನಾಡಿನ ಜನರಿಗೆ ಮಾತ್ರ,ಸಿದ್ದರಾಮಯ್ಯ ನವರಿಗಲ್ಲ ತಿಳಿದುಕೊಳ್ಳಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕುಮಾರಸ್ವಾಮಿಗೆ ನನ್ನ ಕಂಡರೆ ಭಯ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಹೆಚ್ ಡಿಕೆ,ಯಾರನ್ನು ಕಂಡರೆ ಯಾರಿಗೆ ಭಯ, ನಾನು ಭಯ ಪಡೋಕೆ ಸಿಎಂ ಏನಾದರೂ ದೆವ್ವವೇ ಅವರೇನು ದೆವ್ವ ಅಲ್ಲವಲ್ಲಾ, ಅವರಂದ್ರೆ ನಾನು ಯಾಕೆ ಭಯಪಡಲಿ.ಅಷ್ಟಕ್ಕೂ ನಾನು ದೆವ್ವಕ್ಕೂ ಹೆದರಲ್ಲ, ಇದು ಸಿದ್ದರಾಮಯ್ಯಗೆ ಗೊತ್ತಿರಲಿ ಎಂದು ಟಾಂಗ್ ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ‌ಹೆದರಿಸೋಕೆ ಯಾರಿಂದಲೂ ಆಗಲ್ಲ, ಸಿದ್ದರಾಮಯ್ಯನಂಥವರು ಲಕ್ಷ ಜನ ಬರಲಿ, ನಾನು ಹೆದರಲ್ಲ. ಹೆದರೋದು ನನ್ನ‌ ಬೆಳೆಸಿರುವ ನಾಡಿನ‌ ಜನಕ್ಕೆ ಎಂದು ಹೇಳಿದರು.

ನಾನೇನು ರಾಜಕೀಯದಲ್ಲಿ ಸಿದ್ದರಾಮಯ್ಯ ನೆರಳಲ್ಲಿ ಬಂದಿದ್ದೀನಾ, ಸ್ವತಃ ದುಡಿಮೆ ಮೇಲೆ‌, ಕಾರ್ಯಕರ್ತರು, ಜನರ ಆಶೀರ್ವಾದದಿಂದ ಬಂದಿದ್ದೇನೆ. ಸಿದ್ದರಾಮಯ್ಯ ಹೆಸರಲ್ಲಿ ನಾನು ರಾಜಕೀಯ ಮಾಡಿಲ್ಲ, ಹಾಗೆ ನೋಡಿದರೆ ಸಿಎಂ ಸಿದ್ದರಾಮಯ್ಯನವರು ನನ್ನ ಪಕ್ಷದ ಕಾರ್ಯಕರ್ತರು ಮತ್ತು ದೇವೇಗೌಡರ ನೆರಳಿನಲ್ಲಿ ಬಂದವರು‌ ಅದನ್ನು ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು

ಅದು ಯಾವುದೋ ಕೇಸ್ ಹಾಕಿಕೊಂಡು ನನ್ನ ಹೆದರಿಸೋಕೆ ಆಗುತ್ತಾ, ಕುಮಾರಸ್ವಾಮಿಗೆ ಬಂಧನದ ಭೀತಿ ಅಂತ ಹೇಳುತ್ತಿದ್ದಾರೆ ನನಗೆ ಯಾವುದೇ ಭೀತಿಯೋ ಇಲ್ಲ ಎಂದು ಹೇಳಿದರು.

ಮುಡಾ‌ ವಿಚಾರ ಡೈವರ್ಟ್ ಮಾಡಲು ಎಫ್ಐಆರ್ ಹಾಕಲಾಗಿದೀಯಾ ಎಂಬ ಪ್ರಶ್ನೆಗೆ ಪ್ರತಿಯೊಂದು ಕೂಡಾ ಡೈವರ್ಟ್ ಮಾಡೋದಕ್ಕೇನೆ ನಡೆಯುತ್ತಿರೋದು. ಈ ಸರ್ಕಾರ ಎಲ್ಲವನ್ನೂ ಬಿಟ್ಟಿರುವ ಸರ್ಕಾರ. ಯಾವ ಭಯ ಭಕ್ತಿಯೂ ಇಲ್ಲ, ಗೌರವವೂ ಇಲ್ಲ. ಭಂಡ ಸರ್ಕಾರ ಇದು ಎಂದು ಕಮಾರಸ್ವಾಮಿ ಕುಟುಕಿದರು.

ಕುಮಾರಸ್ವಾಮಿ ಹೆದರುವುದು ದೇವರಿಗೆ, ಜನರಿಗೆ ಮಾತ್ರ: ಸಿದ್ದುಗೆ ಹೆಚ್ ಡಿ ಕೆ ಟಾಂಗ್ Read More

ನ್ಯಾಯಾಲಯಕ್ಕಿಂತ ದೊಡ್ಡದಾಗಲು ಕಾಂಗ್ರೆಸ್‌ ಯತ್ನ:ಅಶೋಕ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಪಕ್ಷ ನ್ಯಾಯಾಲಯಕ್ಕಿಂತ ದೊಡ್ಡದಾಗಲು ಯತ್ನಿಸಿ ತೀರ್ಪು ನೀಡಲು ಮುಂದಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ನನ್ನನ್ನು ಭೂ ಕಬಳಿಕೆದಾರ ಎಂದು ಕರೆದಿರುವ ಕಾಂಗ್ರೆಸ್‌ನ ನಾಲ್ಕು ಸಚಿವರು ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಆದರೆ ಇದೇ ಕಾಂಗ್ರೆಸ್‌ನ ಕೇಂದ್ರ ಸರ್ಕಾರ ಅಂದು ನೇಮಿಸಿದ್ದ ರಾಜ್ಯಪಾಲರು ಮತ್ತು ನ್ಯಾಯಾಲಯ ನಾನು ತಪ್ಪಿತಸ್ಥ ಅಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೂ ಕಾಂಗ್ರೆಸ್‌ ನವರು ರಾಜೀನಾಮೆ ಕೇಳಿದ್ದಾರೆ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದಲ್ಲಿ ಅರಿಶಿನ-ಕುಂಕುಮದ ಮೂಲಕ ಭೂಮಿ ಬಂದಿದೆ. ಆದರೆ ನಾನು ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದೇನೆ. ಈ ಪ್ರಕರಣದ ಬಗ್ಗೆ ಆರೋಪ ಬಂದಾಗ ರಾಜ್ಯದಲ್ಲಿ ಕಾಂಗ್ರೆಸ್‌ನ ಕೇಂದ್ರ ಸರ್ಕಾರವೇ ನೇಮಿಸಿದ ರಾಜ್ಯಪಾಲ ಹಂಸರಾಜ್‌ ಭಾರಧ್ವಾಜ್‌ ಇದ್ದರು. ಅವರು ಕೂಡ ಈ ಪ್ರಕರಣವನ್ನು ತನಿಖೆಗೆ ವಹಿಸಿಲ್ಲ. ಅಷ್ಟೇ ಅಲ್ಲದೆ ನ್ಯಾಯಾಲಯ ಕೂಡ ಇದರ ವಿರುದ್ಧ ತನಿಖೆ ಮಾಡಿಸಲು ಮುಂದಾಗಲಿಲ್ಲ,ಆದರೆ ಕಾಂಗ್ರೆಸ್‌ ಪಕ್ಷ ಮಾತ್ರ ಇದರಲ್ಲಿ ತೀರ್ಪು ನೀಡಲು ಮುಂದಾಗಿದೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣ ತನಿಖೆಯಾಗಬೇಕಾದ ಪ್ರಕರಣ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ತೀರ್ಪು ಬಂದ ಬಳಿಕ ಮುಖ್ಯಮಂತ್ರಿಯವರು ಭಯಗೊಂಡು ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ಆದರೆ ನಾನು ಕೋರ್ಟ್‌ ಆದೇಶ ಬರುವ ಮುನ್ನವೇ ನಿವೇಶನ ಹಿಂದಿರುಗಿಸಿದ್ದೆ. ಕೋರ್ಟ್‌ನಲ್ಲಿ ನಾನು ಆಪಾದಿತ ಎಂದು ಹೇಳಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಕೂಡ ನನ್ನನ್ನು ಆರೋಪ ಮುಕ್ತ ಮಾಡಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಇನ್ನೂ ಆರೋಪ ಮುಕ್ತವಾಗಿಲ್ಲ,ಈ ದೇಶದಲ್ಲಿ ಕೋರ್ಟ್‌ ದೊಡ್ಡದೋ, ಕಾಂಗ್ರೆಸ್‌ ದೊಡ್ಡದೋ ಎಂದು ಪ್ರಶ್ನಿಸಿದರು ಅಶೋಕ್.

ಸಚಿವರಾದ ಕೃಷ್ಣ ಭೈರೇಗೌಡರ ಕೋಲಾರದ ಆಸ್ತಿಗಳೆಲ್ಲವೂ ಕುಟುಂಬದಿಂದ ಅವರಿಗೆ ಬಂದಿದೆ. ಅದೇ ರೀತಿ ಮುನಿವೆಂಕಟಪ್ಪ ಅವರು ವಿಲ್‌ ತಯಾರಿಸಿ ಅವರ ಮಕ್ಕಳಿಗೆ ಆಸ್ತಿ ಕೊಟ್ಟಿದ್ದಾರೆ. ಆ ಕುಟುಂಬದಲ್ಲಿ ಸುಮಾರು 20 ಜನರಿದ್ದು, ನನ್ನ ಹೆಸರಿಗೆ ನೋಂದಣಿಯಾದಾಗ ಆ 20 ಜನರು ಕೂಡ ಸಹಿ ಹಾಕಿದ್ದಾರೆ. ಇದು ಹೇಗೆ ಬೇನಾಮಿಯಾಗುತ್ತದೆ ಎಂದು ಪ್ರಶ್ನಿಸಿದರು.

1995 ರಲ್ಲಿ ಆಗಿರುವ ಪಹಣಿಯಲ್ಲಿ ಇಡೀ ಕುಟುಂಬದವರ ಹೆಸರಿದೆ. ಆದರೆ ಇದು ಬಿಡಿಎ ಭೂಮಿ ಎಂದು ಸಚಿವರು ಸುಳ್ಳು ಹೇಳಿದ್ದಾರೆ. ಇದನ್ನು ಬಿ.ಎಸ್‌.ಯಡಿಯೂರಪ್ಪ ಅಕ್ರಮವಾಗಿ ಡಿ ನೋಟಿಫೈ ಮಾಡಿದ್ದಾರೆ ಎಂದು ಕೂಡ ಸುಳ್ಳು ಆರೋಪ ಮಾಡಿದ್ದಾರೆ. ಸುಮಾರು 1 ಎಕರೆ ವ್ಯಾಪ್ತಿಯ ಈ ಜಾಗ, ಹೊರವರ್ತುಲ ರಸ್ತೆಯ ಪಕ್ಕವಿದೆ. ರಸ್ತೆಗೆ ಅಗತ್ಯವಿರುವ ಭೂಮಿ ಪಡೆದು, ಉಳಿದಿದ್ದನ್ನು ಡಿನೋಟಿಫೈ ಮಾಡಲು ತೀರ್ಮಾನಿಸಲಾಗಿತ್ತು ಎಂದೇ ಅಂದು ಸಿಎಂ ಆಗಿದ್ದ ಎಸ್‌.ಎಂ.ಕೃಷ್ಣ ಹೇಳಿದ್ದರು. ಈ ಭೂಮಿ 70:30 ಅನುಪಾತದಲ್ಲಿ ಹಂಚಿಕೆಯಾಗಿದೆ. ಅಂದರೆ ಶೇ70 ಸರ್ಕಾರಕ್ಕೆ ಹಾಗೂ ಶೇ 30 ಮಾಲೀಕರಿಗೆ ನೀಡಲಾಗಿದೆ. ಅಂದರೆ ಬಿಡಿಎಗೆ ಹೆಚ್ಚು ಲಾಭವಾಗಿದೆ. ಉಳಿದ ಜಮೀನು ಅಗತ್ಯವಿಲ್ಲವೆಂದು ಸರ್ಕಾರವೇ ವಾಪಸ್‌ ನೀಡಿದೆ. ಬಿಡಿಎ ದಿಂದಲೇ ಭೂ ಮಾಲೀಕರಿಗೆ ಪತ್ರ ಬರೆದಿದ್ದು, ಅದರಂತೆ ಭೂಮಿಯನ್ನು ಬಿಟ್ಟುಕೊಡಲಾಗಿದೆ. ಇಲ್ಲಿ ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ. ನನ್ನ ವಿರುದ್ಧ ತನಿಖೆ ನಡೆಸಲು ಅನುಮತಿ ಕೊಡುವಂತೆ ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರಧ್ವಾಜ್‌ ಅವರನ್ನು ಕೋರಲಾಗಿತ್ತು. ಆದರೆ ರಾಜ್ಯಪಾಲರು ಕೂಡ ನನ್ನ ವಿರುದ್ಧ ತನಿಖೆಗೆ ಅವಕಾಶ ನೀಡಲಿಲ್ಲ. ಆದರೂ ನನ್ನನ್ನು ಕಾಂಗ್ರೆಸ್‌ ಸಚಿವರು ಭೂ ಕಬಳಿಕೆದಾರ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನ ರಾಜ್ಯಪಾಲರಾಗಲೀ, ನ್ಯಾಯಾಲಯವಾಗಲೀ ನನ್ನನ್ನು ತಪ್ಪಿತಸ್ಥ ಎಂದು ಭಾವಿಸಿಲ್ಲ. ಆದರೆ ಈಗ ಸಿದ್ದರಾಮಯ್ಯನವರಿಗೆ ನನ್ನನ್ನು ಹೋಲಿಸಲಾಗುತ್ತಿದೆ ಎಂದು ವಿವರಣೆ ಸಹಿತ ಅಶೋಕ್ ಗುಡುಗಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡರ ಬಳಿ ಅಧಿಕಾರವಿದೆ. ಎಚ್‌.ಕೆ.ಪಾಟೀಲ್‌ ಹಾಗೂ ಡಾ.ಜಿ.ಪರಮೇಶ್ವರ್‌ ಹಿರಿಯರು. ಸತೀಶ್‌ ಜಾರಕಿಹೊಳಿ ಮಾತ್ರ ಈ ಬಗ್ಗೆ ಮಾತಾಡಿಲ್ಲ. ಏಕೆಂದರೆ ಇದು ಬುರುಡೆ ಕೇಸ್‌ ಎಂದು ಅವರಿಗೂ ಗೊತ್ತಿತ್ತು. ಈ ನಾಲ್ಕು ಸಚಿವರು ನನಗೆ ಆದರ್ಶವಾಗಿದ್ದಾರೆ. ಕೃಷ್ಣ ಬೈರೇಗೌಡರು ಈ ಹಿಂದೆ ವಿಧಾನಸಭೆಯಲ್ಲಿ ಅಶೋಕ್‌ ನಮ್ಮ ಬಂಧುಗಳು ಎಂದು ಹೇಳಿದ್ದರು. ನಾನು ಕನ್ನಡ ಶಾಲೆಯಲ್ಲಿ ಓದಿದವನು. ಆದರೆ ರಾಜ್ಯಪಾಲರಿಗೆ ಇಂಗ್ಲಿಷ್‌ನಲ್ಲಿ ಪತ್ರ ಬರೆಯಬೇಕಾಗುತ್ತದೆ. ಸ್ಪೀಕರ್‌ಗೂ ಇಂಗ್ಲಿಷ್‌ನಲ್ಲೇ ಪತ್ರ ಬರೆಯಬೇಕಾಗುತ್ತದೆ. ನಾನೀಗ ಏನು ಮಾಡಬೇಕು ಹಾಗೂ ಯಾರಿಗೆ ಪತ್ರ ಬರೆಯಬೇಕೆಂದು ಕೃಷ್ಣ ಬೈರೇಗೌಡರು ತಿಳಿಸಿದರೆ ನಾನು ಹಾಗೆಯೇ ನಡೆದುಕೊಳ್ಳುತ್ತೇನೆ. ನಾನು ಯಾವುದೇ ಸಚಿವರಿಗೆ ಸವಾಲು ಹಾಕುತ್ತಿಲ್ಲ. ನನಗೆ ಯಾವುದೇ ಆಯ್ಕೆ ಇಲ್ಲ. ಈ ನಾಲ್ಕು ಸಚಿವರು ನೈತಿಕತೆಯ ಆಧಾರದಲ್ಲಿ ಏನು ಹೇಳುತ್ತಾರೋ, ಅದನ್ನೇ ಪಾಲನೆ ಮಾಡುತ್ತೇನೆ ಎಂದರು.

ನಾನು 24 ಗಂಟೆ ಗಡುವು ನೀಡುತ್ತೇನೆ. ನೈತಿಕತೆಯ ಆಧಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಸಚಿವ ಸಂಪುಟದ ಎಲ್ಲ ಸಚಿವರು ಮುಖ್ಯಮಂತ್ರಿಗಾಗಿ ಪ್ರಾಣಕ್ಕೆ ಪ್ರಾಣ ಕೊಡುತ್ತೇವೆ, ಬಂಡೆಯಂತೆ ನಿಂತಿದ್ದೇವೆ ಎಂದು ಹೇಳಿದ್ದಾರೆ. ಆಂಜನೇಯ ಎದೆ ಬಗೆದು ಶ್ರೀರಾಮನನ್ನು ತೋರಿಸಿದಂತೆ ನಮ್ಮ ಎದೆಯಲ್ಲೂ ಸಿದ್ದರಾಮಯ್ಯ ಇದ್ದಾರೆ ಎಂಬಂತೆ ಈ ಸಚಿವರು ಹೇಳಿದ್ದಾರೆ. ಈಗ ಎಲ್ಲ ಸಚಿವರಿಗೆ ರಾಜೀನಾಮೆ ಕೊಡುವ ಅವಕಾಶವಿದೆ. ಮೊದಲು ಈ ನಾಲ್ಕು ಸಚಿವರು ಸಿದ್ದರಾಮಯ್ಯನವರಿಗಾಗಿ ರಾಜೀನಾಮೆ ನೀಡಲಿ. ಈ ಮೂಲಕ ಅವರ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆಯೇ? ಡಿ.ಕೆ.ಶಿವಕುಮಾರ್‌ ಅಥವಾ ಮಲ್ಲಿಕಾರ್ಜುನ ಖರ್ಗೆ ಇದ್ದಾರೆಯೇ ಎಂದು ಗೊತ್ತಾಗಲಿ. ಅವರೆಲ್ಲರೂ ರಾಜೀನಾಮೆ ನೀಡುವುದಾದರೆ ನಾನು ಕೂಡ ರಾಜೀನಾಮೆ ನೀಡುತ್ತೇನೆ ಎಂದು ಅಶೋಕ್ ಪಾಟೀ ಸವಾಲು ಹಾಕಿದರು.

ನ್ಯಾಯಾಲಯಕ್ಕಿಂತ ದೊಡ್ಡದಾಗಲು ಕಾಂಗ್ರೆಸ್‌ ಯತ್ನ:ಅಶೋಕ್ ವಾಗ್ದಾಳಿ Read More

ಸಾಕ್ಷ್ಯ ನಾಶ ಮಾಡಿ ಹಗರಣ ಮುಚ್ಚಿ ಹಾಕಲು ವ್ಯವಸ್ಥಿತ ಸಂಚು-ಹೆಚ್ ಡಿ ಕೆ

ಬೆಂಗಳೂರು: ಸಾಕ್ಷ್ಯ ನಾಶ ಮಾಡಿ ಮುಡಾ ಹಗರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ನ್ಯಾಯಾಲಯಗಳ ಆದೇಶ ಉಲ್ಲಘಿಸಿ ಸಿಎಂ ಪತ್ನಿ ಅವರಿಂದ ನಿವೇಶನಗಳನ್ನು ವಾಪಸ್ ಪಡೆದಿರುವ ಮೂಡಾ ಆಯುಕ್ತರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸಗವಾಮಿ,ಮುಡಾ ಹಗರಣವನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಲೋಕಾಯುಕ್ತ ಮತ್ತು ಮುಡಾ ಅಧಿಕಾರಿಗಳು ವ್ಯವಸ್ಥಿತವಾಗಿ ಶಾಮೀಲಾಗಿದ್ದಾರೆ ಎಂದು ದೂರಿದರು.

ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರ ಪತ್ನಿ 14 ನಿವೇಶನಗಳನ್ನು ವಾಪಸ್ ನೀಡಿರುವ ಕ್ರಮದ ಬಗ್ಗೆಯೂ ಕೇಂದ್ರ ಸಚಿವರು ಅನುಮಾನ ವ್ಯಕ್ತಪಡಿಸಿದರು.

ನಿವೇಶನಗಳನ್ನು ಹಿಂದಕ್ಕೆ ಕೊಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರುವ ಅವರು ತಮ್ಮ ಅಧಿಕಾರದ ಪ್ರಭಾವದಿಂದ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ದೂರಿದರು.

ಮೂಡಾ ತನಿಖೆಯನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಂಡು ಇಸಿಐಆರ್ ದಾಖಲು ಮಾಡಿದ ಕೂಡಲೇ ಬಿರುಸಿನ ಬೆಳವಣಿಗೆಗಳು ನಡೆದಿವೆ. ಮಂಗಳವಾರ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರೇ ಖುದ್ದು ಮುಡಾ ಕಚೇರಿಗೆ ಬಂದು ನಿವೇಶನ ವಾಪಸ್ ನೀಡುವುದಾಗಿ ಹೇಳಿದ್ದರು. ಈ ಹೇಳಿಕೆ ಹೊರಬಿದ್ದ ನಂತರ ಎಲ್ಲಾ ನಿವೇಶನಗಳು ಮುಡಾ ವಶಕ್ಕೆ ಹೋಗಿವೆ. ಹದಿನಾಲ್ಕು ನಿವೇಶನಗಳ ಕ್ರಯಪತ್ರಗಳು ರದ್ದಾಗಿವೆ ಎಂದು ಮುಡಾ ಆಯುಕ್ತರೇ ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲಾ ರಾಕೆಟ್ ವೇಗದಲ್ಲಿ ಆಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಇದೆಲ್ಲವೂ ಸಂಶಯಾಸ್ಪದವಾಗಿ ಕಾಣುತ್ತಿದೆ, ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಯಾಲಗಳ ಆದೇಶಗಳಿವೆ. ಹೀಗಿದ್ದೂ ಮೂಡಾ ಆಯುಕ್ತರು ನಿವೇಶನಗಳನ್ನು ವಾಪಸ್ ಪಡೆದಿದ್ದಾರೆ, ಅವರಿಗೆ ಈ ಅಧಿಕಾರ ಇಲ್ಲ. ಇಲ್ಲಿ ಸಿಎಂ ಅಧಿಕಾರ ದುರುಪಯೋಗ ಮಾಡಿದ್ದಾರೆ, ಮುಡಾ ಆಯುಕ್ತರು ತಮ್ಮ ಅಧಿಕಾರ ಮೀರಿ ವರ್ತಿಸಿದ್ದಾರೆ ಆದ್ದರಿಂದ ಕೂಡಲೇ ಅವರನ್ನು ಬಂಧಿಸಬೇಕು ಎಂದು ಹೆಚ್ ಡಿ ಕೆ ಆಗ್ರಹಿಸಿದರು.

ಮುಖ್ಯಮಂತ್ರಿಗಳು ಲೋಕಾಯುಕ್ತ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ತನಿಖೆಯಲ್ಲಿ ಸಿಎಂ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ಯಾರ ಆಸ್ತಿ ಇದು. ಎಲ್ಲವನ್ನೂ ನಕಲಿ ದಾಖಲೆ ಸೃಷ್ಟಿ ಮಾಡಿ ಜನರನ್ನು ಯಾಮಾರಿಸಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸಾಕ್ಷ್ಯ ನಾಶ ಮಾಡಿ ಹಗರಣ ಮುಚ್ಚಿ ಹಾಕಲು ವ್ಯವಸ್ಥಿತ ಸಂಚು-ಹೆಚ್ ಡಿ ಕೆ Read More

ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು-ಸಿಎಂ

ಬೆಂಗಳೂರು:ನ್ಯಾಯಾಲಯಗಳಲ್ಲಿ ನ್ಯಾಯ ಸಿಗದೇ ಹೋಗದರೂ ನಾವು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು ಅದೇ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ‌ ಹೇಳಿದರು.

ಕರ್ನಾಟಕ ಗಾಂಧೀ ಸ್ಮಾರಕ ನಿಧಿ‌ ವತಿಯಿಂದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಮಾತನಾಡಿದರು.

ಎಲ್ಲಾ ನ್ಯಾಯಾಲಯಗಳಿಗಿಂತ ಮೇಲೆ ಅತ್ಯುನ್ನತವಾದ ಆತ್ಮಸಾಕ್ಷಿಯ ನ್ಯಾಯಾಲಯವಿದೆ‌ ಅವರು ಮಹಾತ್ಮ ಗಾಂಧಿ ಅವರ ಮಾತನ್ನು ಸ್ಮರಿಸಿದರು.

ಕೇವಲ ಭಾಷಣದಿಂದ ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಅವರ ಆಶಯಗಳು ಈಡೇರುವುದಿಲ.ಅವರಿಬ್ಬರ ಬದುಕಿನ ಮೌಲ್ಯ ಮತ್ತು ಸಂದೇಶಗಳನ್ನು ಜನ ಮಾನಸದಲ್ಲಿ ವಿಸ್ತರಿಸುತ್ತಲೇ ಸರ್ಕಾರ ಸಮ ಸಮಾಜ ನಿರ್ಮಿಸಲು ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ನಾನು ಮತ್ತು ನಮ್ಮ ಸರ್ಕಾರ ಅದೇ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ತಿಳಿಸಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅತ್ಯಂತ ಪ್ರಾಮಾಣಿಕ ನಾಯಕರು ಮತ್ತು ಪ್ರಬುದ್ಧ ರಾಜಕಾರಣಿ. ಇವರುಗಳ ಬದುಕಿನ ಸಂದೇಶಗಳು ನಮಗೆ ಮಾರ್ಗದರ್ಶನ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಸಿಎಂ ಹೇಳಿದರು.

ಗಾಂಧೀಜಿ ಅವರ ಹೋರಾಟದಿಂದಾಗಿ ನಾವು ಸ್ವಾತಂತ್ರ್ಯದ ಗಾಳಿ ಸೇವಿಸುತ್ತಿದ್ದೇವೆ. ಗಾಂಧಿ ಇಡೀ ಜಗತ್ತಿನ ನಾಯಕರು ಎಂಬ ಗೌರವ ಸಿಕ್ಕಿರುವುದು ಭಾರತೀಯರಿಗೆ ಸಿಕ್ಕ ಹೆಗ್ಗಳಿಕೆ ಎಂದು ‌ಸಿದ್ದು‌ ಬಣ್ಣಿಸಿದರು.

ಕಾನೂನು ಸಚಿವ ಎಚ್.ಕೆ.ಪಾಟೀಲ್, ಗಾಂಧಿ ಸ್ಮಾರಕ‌‌ ನಿಧಿಯ ಊಡೆ ಪ.ಕೃಷ್ಣ,ಗಾಂಧಿ ಭವನ‌ ಕಾರ್ಯದರ್ಶಿ ವಿಶುಕುಮಾರ್ ಲೇಖಕ ನಟರಾಜ್ ಹುಳಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು-ಸಿಎಂ Read More

ಗಾಂಧಿಯವರ ಸರ್ವೋದಯ, ಅಂಬೇಡ್ಕರ್ ಅವರ ಅಂತ್ಯೋದಯ ನಮ್ಮ ಧ್ಯೇಯ: ಸಿಎಂ

ಬೆಂಗಳೂರು: ಗಾಂಧಿಯವರ ಸರ್ವೋದಯ, ಅಂಬೇಡ್ಕರ್ ಅವರ ಅಂತ್ಯೋದಯ ನಮ್ಮ ಸರ್ಕಾರದ ಧ್ಯೇಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಿಬಿಎಂಪಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜನ್ಮ ದಿನಾಚರಣೆ ಮತ್ತು ಸ್ವಚ್ಚತಾ ಆಂದೋಲನಾ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಮಾತನಾಡಿದರು.

ಮಹಾತ್ಮಗಾಂಧಿ ಮೊದಲು ಇಡೀ ಗ್ರಾಮೀಣ ಭಾರತವನ್ನು ಸುತ್ತಾಡಿ ನಮ್ಮ ಜನರ ಬದುಕು ಮತ್ತು ಬವಣೆಯನ್ನು ಅರ್ಥ ಮಾಡಿಕೊಂಡು ನಂತರ ಅದಕ್ಕೆ ತಕ್ಕಂತೆ ಸ್ವಾತಂತ್ರ್ಯ ಹೋರಾಟ ಸಂಘಟಿಸಿ ಸ್ವತಃ ಜೈಲು ಸೇರಿ ಹೋರಾಟ ಮುಂದುವರೆಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು ಎಂದು ಹೇಳಿದರು.

ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಿ 1947 ರಲ್ಲಿ ಬ್ರಿಟೀಷರು ಭಾರತದಿಂದ ತೊಲಗುವಂತೆ ಮಾಡಿದರು ಎಂದು ಸ್ಮರಿಸಿದರು.

ಸ್ವಾತಂತ್ರ್ಯ ಭಾರತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯಗಳನ್ನು ಈಡೇರಿಸುವ ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡಿದ್ದೇವೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳೂ ಕೂಡ ಬಡವರಿಗೆ ಆರ್ಥಿಕ‌ ಸ್ವಾತಂತ್ರ್ಯ ಒದಗಿಸಿಕೊಡುವುದಾಗಿದೆ ಎಂದು ಸಿಎಂ ತಿಳಿಸಿದರು.

ಗ್ರಾಮಗಳ ಉದ್ದಾರ ಆಗದೆ ದೇಶ ಉದ್ದಾರ ಆಗಲು ಸಾಧ್ಯವಿಲ್ಲ ಎಂದು ನಾವು ಗ್ರಾಮಗಳ ಪ್ರಗತಿಗೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.

ಆತ್ಮ ಸಾಕ್ಷಿಯ ನ್ಯಾಯಾಲಯ ಎಲ್ಲಾ ನ್ಯಾಯಾಲಯಗಳಿಗಿಂತ ಮಿಗಿಲಾದದು. ಆದ್ದರಿಂದ ನಾವು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದೇ ಗಾಂಧಿಯವರಿಗೆ ನಾವು ಸಲ್ಲಿಸುವ ದೊಡ್ಡ ಗೌರವ ಎಂದು ಸಿದ್ದರಾಮಯ್ಯ ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಹೆಚ್.ಕೆ.ಪಾಟೀಲ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ವಿಧಾನ‌ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿಬಿಎಂಪಿ ಆಯುಕ್ತರಾದ ತುಷಾರ ಗಿರಿನಾಥ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಗಾಂಧಿಯವರ ಸರ್ವೋದಯ, ಅಂಬೇಡ್ಕರ್ ಅವರ ಅಂತ್ಯೋದಯ ನಮ್ಮ ಧ್ಯೇಯ: ಸಿಎಂ Read More

ಸಿಎಂ ತಪ್ಪು ಒಪ್ಪಿಕೊಂಡಂತಾಗಿದೆ:ಅಶೋಕ್

ಬೆಂಗಳೂರು: ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪನ್ನ ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟದ ಹಾದಿಯಲ್ಲಿ ಸಿಕ್ಕಿರುವ ಮತ್ತೊಂದು ಜಯ ಎಂದು ಪ್ರತಿಪಕ್ಷದ ನಾಯಕ‌ ಆರ. ಅಶೋಕ್ ಹೇಳಿದ್ದಾರೆ.

ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ
ಅವರು ತಮ್ಮ ಪತ್ನಿ ಹೆಸರಿನಲ್ಲಿ ಪಡೆದಿದ್ದ 14 ಸೈಟುಗಳನ್ನ ಹಿಂತಿರುಗಿಸುವ ನಿರ್ಧಾರ ಮಾಡಿದ್ದು, ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪನ್ನ ಒಪ್ಪಿಕೊಂಡಂತಾಗಿದೆ ಎಂದು ಅಶೋಕ್ ‌ಟ್ವೀಟ್ ಮಾಡಿದ್ದಾರೆ

ಆದರೆ ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ ಕದ್ದ ಮಾಲನ್ನು ವಾಪಸ್ಸು ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗಿಬಿಡುತ್ತದೆಯೇ

ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಈಗಲಾದರೂ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ ಎನ್ನುವುದು ಸಮಾಧಾನಕರ ವಿಷಯ ಎಂದು ಹೇಳಿದ್ದಾರೆ.

ಆದರೆ ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬರುವುದಿಲ್ಲ ಸಿಎಂ ಸಿದ್ದರಾಮಯ್ಯನವರೇ. ತಾವು ತನಿಖೆ ಎದುರಿಸಲೇ ಬೇಕು. ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.

ಸಿಎಂ ತಪ್ಪು ಒಪ್ಪಿಕೊಂಡಂತಾಗಿದೆ:ಅಶೋಕ್ Read More

ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಪೂರ್ತಿ:ಸಿಎಂ

ಬೆಂಗಳೂರು,ಅ.1: ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಪೂರ್ತಿದಾಯಕ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹಿರಿಯರ ಬದುಕನ್ನು ಕೇವಲ ಆದರ್ಶ ಎಂದುಕೊಳ್ಳದೆ, ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ಮಂಗಳವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಉದ್ಘಾಟಿಸಿ ಸಿಎಂ ಮಾತನಾಡಿದರು.

ಈ ಬಾರಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು, ಘನತೆಯ ಬಾಳಿನೊಂದಿಗೆ ವಯೋಪಕ್ವತೆ, ವಿಶ್ವದಾದ್ಯಂತ ಹಿರಿಯ ಜೀವಿಗಳಿಗೆ ಆರೈಕೆ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸದೃಢಗೊಳಿಸುವುದರ ಮಹತ್ವ’ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ಹೇಳಿದರು

ಹಿರಿಯನ್ನು ಗೌರವದಿಂದ ಕಾಣಬೇಕು. ಅವರ ಅನುಭವಗಳನ್ನು ಗೌರವರಿಸಿ ಪಾಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹಿರಿಯರ ಕೊಡುಗೆಗಳು ಹಾಗೂ ಅವರ ಮಾರ್ಗದರ್ಶನದಿಂದ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು ಎಂದು ಸಿಎಂ ತಿಳಿಸಿದರು.

ನಮ್ಮ ಆತ್ಮಸಾಕ್ಷಿಯೇ ನ್ಯಾಯಾಲಯ
ವಿದ್ದಂತೆ ಎಂದು ಮಹಾತ್ಮಾಗಾಂಧೀಜಿ
ಹೇಳಿದ್ದರು. ಸಮಾಜದಲ್ಲಿ ಇಂದೂ ಮೌಢ್ಯಗಳು, ಕಂದಾಚಾರಗಳಿವೆ. ಇವುಗಳಿಗೆ ಜೋತುಬೀಳದೇ ವೈಚಾರಿಕತೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಸುಮಾರು 57.91ಲಕ್ಷದಷ್ಟು ಹಿರಿಯ ನಾಗರಿಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣ, ಮಕ್ಕಳು ವಿದೇಶದಲ್ಲಿ ನೆಲಿಸಿ, ತಂದೆತಾಯಿಯನ್ನು ಪೋಷಿಸಲು ಸಾಧ್ಯವಾಗದೆ ವೃದ್ಧಾಶ್ರಮಗಳಿಗೆ ಸೇರಿಸುತ್ತಾರೆ. ಸುಮಾರು 50 ಲಕ್ಷ ಹಿರಿಯ ನಾಗರಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಈ ಮಾಸಾಶನದ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಪೂರ್ತಿ:ಸಿಎಂ Read More