ಡಾ. ಜಾನಪದ ಬಾಲಾಜಿ ಅವರಿಗೆ ಮೇರಾ ಯುವ‌ ಭಾರತ್ ಗೌರವ

ಬೆಂಗಳೂರು: 17 ನೇ ಬುಡಕಟ್ಟು ವಿನಯ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿ ಅವರನ್ನು
ಮೇರಾ ಯುವ‌ ಭಾರತ್ ಗೌರವ‌ ನೀಡಿ ಸನ್ಮಾನಿಸಲಾಯಿತು.

ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಡಾ ಜಾನಪದ ಬಾಲಾಜಿ ಅವರನ್ನು ಗೌರವಿಸಿದರು.

ಬೆಂಗಳೂರಿನ ಪದ್ಮನಾಭನಗರದ ರೀಜಿನಲ್ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ಭಾರತ ಸರ್ಕಾರ ಗೃಹ ಮಂತ್ರಾಲಯ, ಯುವ ಕಾರ್ಯ ಹಾಗೂ ಕ್ರೀಡಾ ಮಂತ್ರಾಲಯ ಸಿ ಆರ್ ಪಿ ಎಫ್, ಬಿಎಸ್ಎಫ್, ಮೈ ಭಾರತ, ಮೇರಾ ಯುವ ಭಾರತ್ ಸಂಯುಕ್ತ ಆಶ್ರಯದಲ್ಲಿ 17 ನೇ ಬುಡಕಟ್ಟು ವಿನಿಮಯ ಕಾರ್ಯಕ್ರಮ ಸಮಾರೋಪ ಸಮಾರಂಭ
ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಆರ್ ಅಶೋಕ್ ಅವರು ಡಾ ಜಾನಪದ ಬಾಲಾಜಿ ಅವರನ್ನು ಗೌರವಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ ನವೀನ್ ರಾಜ್ ಸಿಂಗ್, ಮೇರಾ ಯುವ ಭಾರತ್ ಪ್ರಾಂತಿಯ ನಿರ್ದೇಶಕ ಅಶೋಕ್ ದಾಸ್, ನೆಹರು ಯುವ ಕೇಂದ್ರದ ನಿವೃತ್ತ ನಿರ್ದೇಶಕ ಎಂ ಎನ್ ನಟರಾಜ್, ಮೈ ಭಾರತ ಬೆಂಗಳೂರು ನಗರ ಜಿಲ್ಲೆಯ ಯುವ ಅಧಿಕಾರಿ ನಾಗಲಕ್ಷ್ಮಿ, ರೀಜನಲ್ ಸೆಂಟರ್ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಡಾ. ಜಾನಪದ ಬಾಲಾಜಿ ಅವರಿಗೆ ಮೇರಾ ಯುವ‌ ಭಾರತ್ ಗೌರವ Read More

ಬೆಂಗಳೂರಲ್ಲಿ ಟನಲ್ ರಸ್ತೆ ಯೋಜನೆ ಮುಂದುವರಿಸಿ:ಐಐಇ ಆಗ್ರಹ

ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ ಅಗತ್ಯವಿದ್ದು, ಈ ಯೋಜನೆಯನ್ನು ಮುಂದುವರಿಸಬೇಕು ಎಂದು ಭಾರತೀಯ ಇಂಜಿನಿಯರ್ ಗಳ ಸಂಸ್ಥೆ ಸರ್ಕಾರವನ್ನು (ಐಐಇ)ಆಗ್ರಹಿಸಿದೆ.

ಅಲಿ ಆಸ್ಕರ್ ರಸ್ತೆಯಲ್ಲಿ ಬುಧವಾರ ನಡೆದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಕ್ರಮದ ವೇಳೆ ಭಾರತೀಯ ಇಂಜಿನಿಯರ್ ಗಳ ಸಂಸ್ಥೆ ಕಾರ್ಯದರ್ಶಿ ಎಂ. ಲಕ್ಷ್ಮಣ್ ಹಾಗೂ ಇತರ ಪದಾಧಿಕಾರಿಗಳು ಟನಲ್ ರಸ್ತೆಯಿಂದ ಬೆಂಗಳೂರಿಗೆ ಆಗಲಿರುವ ಅನುಕೂಲತೆಗಳ ಕುರಿತು ವರದಿಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿದರು.

ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣ ಮಾಡಬೇಕು ಎಂಬ ಉಪಮುಖ್ಯಮಂತ್ರಿಗಳ ನಿರ್ಧಾರ ಅತ್ಯುತ್ತಮವಾಗಿದೆ. ಈ ಯೋಜನೆ ಜಾರಿ ಹೊರತಾಗಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲು ಸಾಧ್ಯವಿಲ್ಲ. ಈ ಟನಲ್ ರಸ್ತೆಗೆ ಬಿಜೆಪಿಯವರು ಹೇಳುತ್ತಿರುವಂತೆ ಪ್ರತಿ ಕಿ.ಮೀ.ಗೆ 1500 ಕೋಟಿ ರೂ. ವೆಚ್ಚವಾಗುವುದಿಲ್ಲ. ಪ್ರತಿ ಕಿ.ಮೀ.ಗೆ ಸುಮಾರು 440 ಕೋಟಿ ವೆಚ್ಚ ತಗುಲಲಿದೆ ಎಂದು ಹೇಳಿದರು.

ಈ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ವಿವಿಧ ಬ್ಯಾಂಕುಗಳಿಂದ ಆರ್ಥಿಕ ನೆರವು ಸಿಗಲಿದೆ. ಈ ವಿಚಾರದಲ್ಲಿ ಭಾರತೀಯ ಇಂಜಿನಿಯರ್ ಗಳ ಸಂಸ್ಥೆ ಸರ್ಕಾರದ ಪರವಾಗಿ ನಿಲ್ಲಲಿದೆ. ಯಾವಾಗ ಕರೆದರೂ ನಾವು ಸಲಹೆ ನೀಡಲು ಸಿದ್ಧ ಎಂದು ಲಕ್ಷ್ಮಣ್ ಅವರು ತಿಳಿಸಿದರು.

ಬೆಂಗಳೂರಲ್ಲಿ ಟನಲ್ ರಸ್ತೆ ಯೋಜನೆ ಮುಂದುವರಿಸಿ:ಐಐಇ ಆಗ್ರಹ Read More

ಕ ಜಾ ಪ‌ ಪದ್ಮನಾಭನಗರ ಮಹಿಳಾ ಘಟಕ

ಬೆಂಗಳೂರು: ಕನ್ನಡ ಜಾನಪದ ಪರಿಷತ್ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಮಹಿಳಾ ಘಟಕವನ್ನು ಉದ್ಘಾಟಿಸಲಾಯಿತು.

ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಡಾ ರಿಯಾಜ್ ಪಾಷಾ ವಹಿಸಿದ್ದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷರಾಗಿ ನಾಗರತ್ನ ಹಿರೇಮಠ ಹಾಗೂ ಹನ್ನೆರಡು ಜನಪದ ಅಧಿಕಾರಿಗಳಿಗೆ ಪದ ಪ್ರದಾನ ಮಾಡಲಾಯಿತು.

ಬೆಂಗಳೂರು ನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಅಂಬಿಕಾ ಉಪಸ್ಥಿತರಿದ್ದರು.

ಕ ಜಾ ಪ‌ ಪದ್ಮನಾಭನಗರ ಮಹಿಳಾ ಘಟಕ Read More

ಸುರಂಗ ರಸ್ತೆ ಮೂಲಕ ಪರಿಸರ ನಾಶ:ಸರ್ಕಾರದ ‌ವಿರುದ್ಧ ಅಶೋಕ ಆಕ್ರೋಶ

ಬೆಂಗಳೂರು: ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಪರಿಸರವನ್ನು ಹಾಳುಗೆಡವುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು

ಸ್ಯಾಂಕಿ ಕೆರೆ ಬಳಿ ನಡೆದ ಸಹಿ ಸಂಗ್ರಹ ಹಾಗೂ ಪರಿಶೀಲನೆ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸುರಂಗ ರಸ್ತೆಗಾಗಿ ಸ್ಯಾಂಕಿ ಕೆರೆಗೆ ಧಕ್ಕೆ ತರಲಾಗುತ್ತಿದೆ. ನಾವ್ಯಾರೂ ಅಭಿವೃದ್ಧಿಯ ವಿರೋಧಿಗಳಲ್ಲ, ಆದರೆ ಯಾವುದೇ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಂದರೂ ಪರಿಸರವನ್ನು ಹಾಳು ಮಾಡಲು ನೋಡುತ್ತದೆ. ಪರಿಸರ ಇಲಾಖೆ, ಪುರಾತತ್ವ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳ ಅನುಮತಿಯನ್ನೂ ಪಡೆದಿಲ್ಲ ಎಂದು ಆರೋಪಿಸಿದರು.

ಮೆಟ್ರೋ ಯೋಜನೆಯಿಂದಾಗಿ ನಗರದಲ್ಲಿ ಟ್ರಾಫಿಕ್ ಕಡಿಮೆಯಾಗಿದೆ. ಲಕ್ಷಾಂತರ ಜನರು ಮೆಟ್ರೊ ಬಳಸುತ್ತಿದ್ದಾರೆ. ಇದನ್ನೇ ಸುಧಾರಣೆ ಮಾಡಿ ಬೇಗ ಯೋಜನೆ ಪೂರ್ಣಗೊಳಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಸುರಂಗ ಕೊರೆದರೆ ಉಂಟಾಗುವ ಹೂಳನ್ನು ಎಲ್ಲಿಗೆ ಸಾಗಿಸುತ್ತಾರೆ ಎಂಬ ಬಗ್ಗೆ ಖಾತರಿಯಿಲ್ಲ. ಕಾಸು ಹೊಡೆಯುವ ಯೋಜನೆ ನಗರಕ್ಕೆ ಬೇಕಿಲ್ಲ. ಈಗಾಗಲೇ ಬಿಹಾರ ಚುನಾವಣೆಗೆ ಹಣ ಕಳುಹಿಸಿದ್ದಾರೆ. ಈ ರೀತಿ ಹಣ ಮಾಡಲು ಯೋಜನೆ ಮಾಡಬಾರದು ಎಂದು ಟೀಕಿಸಿದರು.

ತೆರಿಗೆಗಳ ಭಾರದಿಂದ ಬೆಂಗಳೂರಿನ ಜನರಿಗೆ ಚಿತ್ರಹಿಂಸೆಯಾಗಿದೆ. ತ್ಯಾಜ್ಯ, ನೀರು ಎಲ್ಲ ದರ ಏರಿಕೆಯಾಗಿದೆ. ಸುರಂಗ ರಸ್ತೆ ನಿರ್ಮಾಣವಾದರೆ ಅದಕ್ಕೆ 20 ಸಾವಿರ ರೂ. ನಷ್ಟು ಟೋಲ್ ಪಾವತಿಸಬೇಕಾಗುತ್ತದೆ. ಸರ್ಕಾರ ಈ ಬಗ್ಗೆ ಚಿಂತನೆ ಮಾಡಲಿ ಎಂದು ‌ಸಲಹೆ ನೀಡಿದರು.

ಕಾಂಗ್ರೆಸ್ ಸೋಲು ಕಂಡಾಗಲೆಲ್ಲ ಮತಗಳ್ಳತನ ಹಾಗೂ ಇವಿಎಂ ಸರಿ ಇಲ್ಲ ಎಂಬ ಆರೋಪ ಬರುತ್ತದೆ. ಬಿಹಾರದಲ್ಲೇ ವೋಟ್ ಚೋರಿ ಬಗ್ಗೆ ಅಭಿಯಾನ ಮಾಡಿದ್ದು, ಅದನ್ನು ಮತದಾರರು ತಿರಸ್ಕರಿಸಿದ್ದಾರೆ. ಮತಪಟ್ಟಿ ಪರಿಷ್ಕರಣೆ ವೇಳೆ ಅನ್ಯದೇಶಗಳ ಜನರ ಹೆಸರು, ಸತ್ತವರ ಹೆಸರು ರದ್ದಾಗಿದೆ. ವಿಶೇಷ ಪರಿಷ್ಕರಣೆ ಸರಿ ಇಲ್ಲ ಎಂದರೆ ಯಾರೂ ನಂಬಲ್ಲ. ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಮಕಾಡೆ ಮಲಗಿದ್ದು, ಕರ್ನಾಟಕದಲ್ಲೂ ಆಡಳಿತ ಕೊನೆಯಾಗಲಿದೆ. ವೋಟ್ ಚೋರಿ ಎಂದು ಹೇಳಿ ಬಿಹಾರದ ಜನತೆಗೆ ಅಪಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಅಶೋಕ ಒತ್ತಾಯಿಸಿದರು.

ಬಿಹಾರದ ಚುನಾವಣೆಯಲ್ಲಿ ಗೆದ್ದಿದ್ದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಅವಕಾಶ ಬರುತ್ತಿತ್ತು. ಈಗ ಸಿಎಂ ಸಿದ್ದರಾಮಯ್ಯ ಬಲಿಷ್ಠವಾಗಿದ್ದಾರೆ. ರಾಹುಲ್ ಗಾಂಧಿಯ ಮಾತನ್ನು ಇನ್ನು ಯಾರೂ ಕೇಳುವುದಿಲ್ಲ. ಸಿದ್ದರಾಮಯ್ಯನವರ ಮಾತನ್ನು ರಾಹುಲ್ ಗಾಂಧಿ‌‌ ಕೇಳಬೇಕಾಗುತ್ತದೆ ಎಂದು ವ್ಯಂಗ್ಯವಾಗಿ ನುಡಿದರು.

ಸುರಂಗ ರಸ್ತೆ ಮೂಲಕ ಪರಿಸರ ನಾಶ:ಸರ್ಕಾರದ ‌ವಿರುದ್ಧ ಅಶೋಕ ಆಕ್ರೋಶ Read More

ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿದ್ದರಾಮಯ್ಯ ಕರೆ

ಬೆಂಗಳೂರು: ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವಜನತೆಗೆ ಕರೆ ನೀಡಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ವತಿಯಿಂದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಆವರಣದಲ್ಲಿ ಆಯೋಜಿಸಲಾಗಿದ್ದ ಬಿ.ಎಸ್. ವಿಶ್ವನಾಥ್ ಅವರ ಪುತ್ತಳಿ ಅನಾವರಣಗೊಳಿಸಿ ಮಾತನಾಡಿದ ಸಿಎಂ,ಬಿ.ಎಸ್.ವಿಶ್ವನಾಥ್ ಅವರ ಆದರ್ಶಗಳನ್ನು ಪಾಲಿಸುವಂತೆ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬಿ.ಎಸ್.ವಿಶ್ವನಾಥ್ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಹಕಾರಿ ಮುಖಂಡರು. ವಿವಿಧ ಸಹಕಾರ ಸಂಘಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ಸಹಕಾರ ಕ್ಷೇತ್ರದಲ್ಲಿ ಅಪ್ರತಿಮ ಕೊಡುಗೆ ನೀಡಿರುವ ಬಿ.ಎಸ್.ವಿಶ್ವನಾಥ್ ಅವರ ಪ್ರತಿಮೆಯನ್ನು ಇಂದು ಅತ್ಯಂತ ಸಂತೋಷದಿಂದ ಅನಾವರಣಗೊಳಿಸಿದ್ದೇನೆ ಎಂದು ಹೇಳಿದರು.

ಇಂದಿನ ಯುವಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಬಿ.ಎಸ್.ವಿಶ್ವನಾಥ್ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಸಹಕಾರಿ ಧುರೀಣರಾದ ಜಿ.ಟಿ.ದೇವೇಗೌಡರು, ಸೋಮಶೇಖರ್ , ಷಡಕ್ಷರಿ , ರೇವಣ್ಣನವರು ಸೇರಿದಂತೆ ಎಲ್ಲ ಸಹಕಾರಿಗಳನ್ನು ಸಿದ್ದರಾಮಯ್ಯ ಅವರು ಅಭಿನಂದಿಸಿ, ಅವರ ಕುಟುಂಬ ವರ್ಗದವರಿಗೆ ಶುಭಕೋರಿದರು.

ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ- ಯುವಜನರಿಗೆ ಸಿದ್ದರಾಮಯ್ಯ ಕರೆ Read More

ರಾಜ್ಯ ಸರ್ಕಾರ ರೈತರನ್ನು ಪೂರ್ಣವಾಗಿ ನಿರ್ಲಕ್ಷಿಸಿದೆ:ಅಶೋಕ್

ಬೆಂಗಳೂರು: ಅಧಿಕಾರ ಹಸ್ತಾಂತರ, ಸಂಪುಟ ವಿಸ್ತರಣೆ, ಆರ್ ಎಸ್ಎಸ್ ನಿಷೇಧ, ಬುರುಡೆ ಪ್ರಕರಣ ಹೀಗೆ ಅನವಶ್ಯಕ ಗೊಂದಲಗಳಲ್ಲೇ ಮುಳುಗಿ ಕಾಲಹರಣ ಮಾಡುತ್ತಾ‌ ರಾಜ್ಯ ಸರ್ಕಾರ ರೈತರನ್ನು ಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ಮಾಡಿ 30 ದಿನಗಳೊಳಗೆ ನೆರೆ ಪರಿಹಾರ ಕೊಡುತ್ತೇವೆ ಎಂದು ಹೇಳಿದಿರಲ್ಲ ಸಿದ್ದರಾಮಯ್ಯ ನವರೇ, ಎಲ್ಲಿ ಹೋಯಿತು ನಿಮ್ಮ ನುಡಿಯಂತೆ ನಡೆಯುವ ಸರ್ಕಾರದ ಬದ್ಧತೆ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಪಾಪ ನೀವು ತಾನೇ ಏನು ಮಾಡುತ್ತೀರಿ ಬಿಡಿ. ಅತ್ತ ರಾಹುಲ್ ಗಾಂಧಿ ಅವರು ಭೇಟಿ ಮಾಡುವುದಕ್ಕೂ ಸಮಯ ಕೊಡುತ್ತಿಲ್ಲ. ಇತ್ತ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಡೆಡ್ ಲೈನ್ ಮೇಲೆ ಡೆಡ್ ಲೈನ್ ಕೊಟ್ಟರೂ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇನ್ನು ನೆರೆ ಪರಿಹಾರ, ಕಬ್ಬು, ಜೋಳ ಬೆಳೆಗಾರರಿಗೆ ಹೆಚ್ಚುವರಿ ಬೆಂಬಲ ಬೆಲೆ ಕೊಡಬೇಕು ಅಂದರೆ ನಿಮ್ಮ ಮಾತು ಯಾರು ಕೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಅಯ್ಯೋ ಸಿಎಂ ಸಿದ್ದರಾಮಯ್ಯನವರ ಅಸಹಾಯಕತೆ ನೋಡಿದರೆ ನಿಜಕ್ಕೂ ಕನಿಕರ ಮೂಡುತ್ತಿದೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

ರಾಜ್ಯ ಸರ್ಕಾರ ರೈತರನ್ನು ಪೂರ್ಣವಾಗಿ ನಿರ್ಲಕ್ಷಿಸಿದೆ:ಅಶೋಕ್ Read More

ರೈತರ ಬಗ್ಗೆ ಕಾಳಜಿ ಇದ್ದರೆ ಟಿಟಿಡಿಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲಿ:ತೇಜಸ್ವಿಗೆ‌ ಆಪ್ ಸವಾಲು

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರಿಗೆ ರಾಜ್ಯದ ರೈತರ ಬಗ್ಗೆ ನಿಜಕ್ಕೂ ಕಾಳಜಿ ಇದ್ದಲ್ಲಿ ಕೂಡಲೇ ಟಿಟಿಡಿಯಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಮ್ ಆದ್ಮಿ ಪಕ್ಷ ಸವಾಲು ಹಾಕಿದೆ.

ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟ್ ಅನೇಕ ವರ್ಷಗಳಿಂದ ಶುದ್ಧ ತುಪ್ಪವನ್ನು ಪೂರೈಸುತ್ತಿದ್ದ ರಾಜ್ಯದ ಕೆಎಂಎಫ್ ಅನ್ನು ಕಪ್ಪುಪಟ್ಟಿಗೆ ಸೇರಿಸಿ, 250 ಕೋಟಿಗೂ ಹೆಚ್ಚು ಮೊತ್ತದ ನಕಲಿ ತುಪ್ಪವನ್ನು ಉತ್ತರಕಾಂಡದ ವ್ಯಕ್ತಿಯೊಬ್ಬನಿಂದ ಪಡೆದು ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಶೋಕ್ ಮೃತ್ಯುಂಜಯ ಅವರು ಕೇವಲ ಕಾಂಗ್ರೆಸ್ ಸರ್ಕಾರ ಇರುವಾಗ ಅನೇಕ ಕೋಮು ಪ್ರಚೋದಿತ ವಿಷಯಗಳ ಬಗ್ಗೆ ಮಾತನಾಡುವ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರಿಗೆ ನಿಜಕ್ಕೂ ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ಕೂಡಲೇ ಎನ್ ಡಿ ಎ ಮೈತ್ರಿಕೂಟದ ಆಂಧ್ರ ಪ್ರದೇಶ ಸರ್ಕಾರದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರೊಂದಿಗೆ ಮಾತನಾಡಿ ಮತ್ತೆ ಕೆಎಂಎಫ್ ಸಂಸ್ಥೆಯಿಂದ ತುಪ್ಪವನ್ನು ಪೂರೈಸುವ ಮರುಗುತ್ತಿಗೆಯನ್ನು ಕೊಡಿಸಲಿ ಎಂದು ಸವಾಲು ಹಾಕಿದರು.

ಅನೇಕ ವರ್ಷಗಳಿಂದ ಪೂರೈಸಿಕೊಂಡು ಬರುತ್ತಿದ್ದ ಕೆಎಂಎಫ್ ಸಂಸ್ಥೆಗೆ ನೀಡಬೇಕಿದ್ದ ಗುತ್ತಿಗೆ ರದ್ದಾದ ಕಾರಣದಿಂದ ರಾಜ್ಯದ ಬಡ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಅವರ ಕೂಗನ್ನು ಯಾರೂ ಕೇಳುವವರಿಲ್ಲದಂತಾಗಿದೆ.

ತೇಜಸ್ವಿ ಸೂರ್ಯ ತನಗೆ ಸಂಬಂಧಪಡದ ಎಲ್ಲ ವಿಚಾರಗಳಲ್ಲಿಯೂ ಮೂಗು ತೂರಿಸುವುದನ್ನು ಬಿಟ್ಟು ಕೂಡಲೇ ರಾಜ್ಯದ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ತಮ್ಮ ಸಂಸದೀಯ ಪ್ರಭಾವವನ್ನು ಬಳಸಿಕೊಂಡು ಅನ್ಯಾಯವನ್ನು ಸರಿಪಡಿಸಿದರೆ ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಅಶೋಕ್ ಮೃತ್ಯುಂಜಯ ತಿಳಿಸಿದರು.

ರೈತರ ಬಗ್ಗೆ ಕಾಳಜಿ ಇದ್ದರೆ ಟಿಟಿಡಿಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲಿ:ತೇಜಸ್ವಿಗೆ‌ ಆಪ್ ಸವಾಲು Read More

ಪರಪ್ಪನ ಅಗ್ರಹಾರ ಜೈಲಲ್ಲಿ ಭಯೋತ್ಪಾದಕ ಮೊಬೈಲ್‌ ಬಳಸಿದ ಪ್ರಕರಣ- ಎನ್‌ಐಎ ತನಿಖೆಗೆ ಅಶೋಕ ಆಗ್ರಹ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಯೋತ್ಪಾದಕ ಮೊಬೈಲ್‌ ಬಳಸಿದ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವದೆಹಲಿಯಲ್ಲಿ ನಡೆದ ಘಟನೆ ಭಯೋತ್ಪಾದನಾ ಕೃತ್ಯ ಎಂಬ ಅನುಮಾನವಿದೆ. ಇದೇ ಸಮಯದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಬ್ಬ ಭಯೋತ್ಪಾದಕ ಮೊಬೈಲ್‌ ಬಳಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚು ತನಿಖೆ ಮಾಡಿದರೆ ಹೊಸ ವಿಚಾರಗಳು ಗೊತ್ತಾಗುತ್ತದೆ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಇದನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಡಾಕ್ಟರ್‌ಗಳು ಸೇರಿದಂತೆ ಹೆಚ್ಚು ಶಿಕ್ಷಣ ಪಡೆದ ಮುಸ್ಲಿಮರೇ ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಈ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕಿದೆ, ಅಧಿಕಾರಕ್ಕೆ ಬರಲು ಓಲೈಕೆ ಮಾಡುವುದರಿಂದ ಹೀಗೆಲ್ಲ ಆಗುತ್ತಿದೆ ಎಂದು ಟೀಕಿಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲೂ ಕಾಂಗ್ರೆಸ್‌ ತಪ್ಪಿನಿಂದಲೇ ಉಗ್ರವಾದಿಗಳು ಮೊಬೈಲ್‌ ಬಳಸುವಂತಾಗಿದೆ. ಇಂತಹ ವಿಫಲತೆಯನ್ನು ಒಪ್ಪಿಕೊಂಡು ಕಾಂಗ್ರೆಸ್‌ ನಾಯಕರು ರಾಜೀನಾಮೆ ನೀಡಬೇಕು ಎಂದು ಅಶೋಕ್ ಒತ್ತಾಯಿಸಿದರು.

ಇದು ಮನಮೋಹನ್‌ ಸಿಂಗ್‌ ಸರ್ಕಾರವಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಭಯೋತ್ಪಾದಕರಿಗೆ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಈ ಘಟನೆಯ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮ ವಹಿಸಲಿದೆ. ಕಾಂಗ್ರೆಸ್‌ ಇದ್ದಾಗ ನಕ್ಸಲ್‌ ಚಟುವಟಿಕೆ ಅಧಿಕವಾಗಿತ್ತು. ಅದನ್ನು ಗೃಹ ಸಚಿವ ಅಮಿತ್‌ ಶಾ ಬಹುತೇಕ ನಿರ್ಮೂಲನೆ ಮಾಡಿದ್ದಾರೆ. ಅದೇ ರೀತಿ ಭಯೋತ್ಪಾದನೆ ಕೂಡ ನಿರ್ಮೂಲನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕೇವಲ ಸುತ್ತೋಲೆ ಹೊರಡಿಸಿದರೆ ಸಾಲದು. ಗೃಹಸಚಿವರು ಹಾಗೂ ಪೊಲೀಸರು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಜನರಲ್ಲಿ ವಿಶ್ವಾಸ ತುಂಬಬೇಕು. ಸಾಧ್ಯವಾದಷ್ಟು ಬಿಗಿ ಭದ್ರತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಮೇಲೆ ಜನರಿಗೆ ನಂಬಿಕೆ ಇಲ್ಲ. ಪಾಕಿಸ್ತಾನವನ್ನು ಕಾಂಗ್ರೆಸ್‌ ಪ್ರೀತಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯ ಚಾಟಿ ಬೀಸಿದರು.

ಬಿಜೆಪಿಯಿಂದ ಜಿಬಿಎ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೀಗ ವಿಧಾನಸಭಾ ಚುನಾವಣೆ ನಡೆಯುವ ಸ್ಥಿತಿ ಬಂದಿದೆ. ಯಾವ ಚುನಾವಣೆ ಮೊದಲು ಬರಲಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಅಶೋಕ್ ಮಾರ್ಮಿಕವಾಗಿ ನುಡಿದರು.

ಪರಪ್ಪನ ಅಗ್ರಹಾರ ಜೈಲಲ್ಲಿ ಭಯೋತ್ಪಾದಕ ಮೊಬೈಲ್‌ ಬಳಸಿದ ಪ್ರಕರಣ- ಎನ್‌ಐಎ ತನಿಖೆಗೆ ಅಶೋಕ ಆಗ್ರಹ Read More

ರಾಜ್ಯದಲ್ಲೆ ಕಟ್ಟೆಚ್ಚರಕ್ಕೆ ಸಿಎಂ ಸೂಚನೆ

ಮೈಸೂರು: ದೆಹಲಿಯಲ್ಲಿ ಕಾರು ಸ್ಫೋಟ ಬೆನ್ನಲ್ಲೇ ಮೈಸೂರು,ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಆದೇಶಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,ದೆಹಲಿ ಸ್ಪೋಟದಲ್ಲಿ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿದರು.

ಸ್ಪೋಟದ ವಿಷಯ ತಿಳಿಯಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.ಸರಿಯಾದ ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯಾದಂತ ಕಟ್ಟೆಚ್ಚರ ವಹಿಸುವಂತೆ
ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಸೂಚುಸಿದ್ದೇನೆ ಎಂದು ಸಿಎಂ ತಿಳಿಸಿದರು.

ಸಿಎಂ ಮಾತನಾಡಿದ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು
ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಆದೇಶ ಹೊರಡಿಸಿದ್ದಾರೆ.

ಏರ್​ಪೋರ್ಟ್, ಬಂದರು, ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ, ಎಲ್ಲಾ ಜಿಲ್ಲೆಗಳಲ್ಲಿ ನಿಗಾವಹಿಸುವಂತೆ ಎಸ್​ಪಿಗಳಿಗೆ ಡಿಜಿ&ಐಜಿಪಿ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಹೈ ಅಲರ್ಟ್ ಗೆ ಪೊಲೀಸ್ ಕಮಿಷನರ್​​​ ಸೀಮಂತ್​ ಕುಮಾರ್ ಸಿಂಗ್​​
ಸೂಚಿಸಿದ್ದಾರೆ.

ಕೂಡಲೇ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಬೇಕು. ಲಾಡ್ಜ್​ಗಳನ್ನು ತಪಾಸಣೆ ಮಾಡಿ, ಲಾಡ್ಜ್‌ನಲ್ಲಿ ತಂಗಿರುವ ಹೊರ ರಾಜ್ಯದವರ ವಿಚಾರಣೆ ಮಾಡಬೇಕು. ರಾತ್ರಿ ವೇಳೆ ಗಸ್ತು ಹೆಚ್ಚಳ ಮಾಡುವಂತೆ ಡಿಸಿಪಿ, ಎಸಿಪಿ, ಇನ್ಸ್​ಪೆಕ್ಟರ್​ಗಳಿಗೆ ಆದೇಶಿಸಿದ್ದಾರೆ.

ರಾಜ್ಯದಲ್ಲೆ ಕಟ್ಟೆಚ್ಚರಕ್ಕೆ ಸಿಎಂ ಸೂಚನೆ Read More

ಜನತೆಯನ್ನು ಕುಡುಕರಾಗಿಸುವ ಸರ್ಕಾರದ ನೀತಿ ಒಪ್ಪಲಾಗದು:ಮುಖ್ಯ ಮಂತ್ರಿ ಚಂದ್ರು

ಬೆಂಗಳೂರು: ಜನತೆಯನ್ನು ಕುಡುಕರನ್ನಾಗಿಸುವ ಸರ್ಕಾರದ ನೀತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಮ್ ಆದ್ಮಿ ಪಕ್ಷದ‌ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಮಧ್ಯ ಹಾಗೂ ಡ್ರಗ್ಸ್ ಹಾವಳಿಯಿಂದಾಗಿ ಯುವಜನತೆ ಮತ್ತು ಸಮಾಜ ನೈತಿಕ ಅಧಃಪತನಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಸರ್ಕಾರವು ಮತ್ತಷ್ಟು ಮಧ್ಯದ ಅಂಗಡಿಗಳನ್ನು ತೆರೆಯಲು ಅನುಮತಿಯನ್ನು ನೀಡುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಡಾ. ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.

ಪಕ್ಕದ ತಮಿಳುನಾಡು, ಕೇರಳ ಇನ್ನಿತರ ರಾಜ್ಯಗಳಲ್ಲಿ ಊರಾಚೆ ಮಧ್ಯದ ಅಂಗಡಿಗಳು ಇವೆ. ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಂಪೂರ್ಣ ಮದ್ಯಪಾನ ನಿಷಿದ್ಧವಾಗಿದೆ.ಈ ಹಿಂದೆ ಬಂಗಾರಪ್ಪ ಸರ್ಕಾರದ ಅವಧಿಯಲ್ಲಿ ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಲೈಸೆನ್ಸ್ ಗಳನ್ನು ನೀಡಿದ ಪರಿಣಾಮದಿಂದ ಈಗಾಗಲೇ ಸಮಾಜವು ದುಷ್ಪರಿಣಾಮವನ್ನು ಎದುರಿಸುವಂತಾಗಿದೆ ಎಂದು ಚಂದ್ರು‌ ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರವು ಯುವಜನತೆಯನ್ನು ನಶೆ ಮುಕ್ತರನ್ನಾಗಿಸಲು ಅಲ್ಲಲ್ಲಿ ಕೇಂದ್ರಗಳನ್ನು ತೆರೆಯುವುದನ್ನು ಬಿಟ್ಟು ಸರ್ಕಾರವೇ ಎಂ ಎಸ್ ಐ ಎಲ್ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಮಧ್ಯದ ಅಂಗಡಿಗಳನ್ನು ತೆರೆದು ಜನತೆಯನ್ನು ಮತ್ತಷ್ಟು ಕುಡುಕರನ್ನಾಗಿಸುತ್ತಿದೆ. ಅಲ್ಲದೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ವೈಫಲ್ಯಗಳಿಂದಾಗಿ ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಮಧ್ಯ ರಾಜಾರೋಶವಾಗಿ ಸರಬರಾಜಾಗುತ್ತಿದೆ. ಇವುಗಳನ್ನು ತಡೆಗಟ್ಟುವುದನ್ನು ಬಿಟ್ಟು ಮುಖ್ಯಮಂತ್ರಿಗಳೇ ಮುಂದೆ ನಿಂತು ತಮ್ಮ ಕಮಿಷನ್ ಧನದಾಹದಿಂದ ಮತ್ತಷ್ಟು ಲೈಸೆನ್ಸ್ ಗಳನ್ನು ವಿತರಿಸಲು ಹೊರಟಿರುವುದನ್ನು ರಾಜ್ಯದ ಮಹಿಳೆಯರು ಸೇರಿದಂತೆ ಯಾರು ಸಹ ಒಪ್ಪುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸಮಾಜವನ್ನು ಹಾಳು ಗೆಡವಿ ಅಬಕಾರಿ ಆದಾಯದಿಂದಲೇ ಸರ್ಕಾರವನ್ನು ನಡೆಸಲು ಹೊರಟಿರುವ ಮುಖ್ಯಮಂತ್ರಿಗಳ ಆರ್ಥಿಕ ನೀತಿಯ ವಿರುದ್ಧ ಆಮ್ ಆದ್ಮಿ ಪಕ್ಷವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.

ಜನತೆಯನ್ನು ಕುಡುಕರಾಗಿಸುವ ಸರ್ಕಾರದ ನೀತಿ ಒಪ್ಪಲಾಗದು:ಮುಖ್ಯ ಮಂತ್ರಿ ಚಂದ್ರು Read More