ಮಾಜಿ ಸಚಿವ, ದಾವಣಗೆರೆ‌ ಧಣಿ ಶಾಮನೂರು ಶಿವಶಂಕರಪ್ಪ ವಿಧಿವಶ

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ವಿಧಿವಶರಾಗಿದ್ದಾರೆ.

ಅವರಿಗೆ‌ 95 ವರ್ಷಗಳಾಗಿತ್ತು,ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಭಾನುವಾರ ಸುಮಾರು 6.45 ರ ಸಮಯದಲ್ಲಿ ವಿಧಿವಶರಾಗಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರು ಭಾರತದಲ್ಲೇ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಶಿವಶಂಕರಪ್ಪ ಅವರ ಆರೋಗ್ಯ ವಿಚಾರಿಸಿದ್ದರು.

ಶಾಮನೂರ್ ಶಿವಶಂಕರಪ್ಪ ಅವರು 1931 ಜೂನ್‌ 16ರಂದು ಶಾಮನೂರು ಕಲ್ಲಪ್ಪ – ಶಾಮನೂರು ಸಾವಿತ್ರಮ್ಮ ದಂಪತಿ ಪುತ್ರನಾಗಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು.
ಅವರು ಪತ್ನಿ ಪಾರ್ವತಮ್ಮ, ನಾಲ್ವರು ಪುತ್ರಿಯರಾ ಡಾ. ಮಂಜುಳಾ ಶಿವಶಂಕರ್, ಸುಧಾ ಪಾಟೀಲ್, ಡಾ. ಶೈಲಜಾ ಭಟ್ಟಾಚಾರ್ಯ, ಮೀನಾ ಡಾ. ಶರಣ್‌ ಪಾಟೀಲ್ ಹಾಗೂ ಮೂವರು ಗಂಡು ಮಕ್ಕಳಾದ ಎಸ್.ಎಸ್ ಬಕ್ಕೇಶ್, ಎಸ್.ಎಸ್ ಗಣೇಶ್, ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಬಂಧು ಬಳಗ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಶಾಮನೂರು ಶಿವಶಂಕರಪ್ಪನವರು 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. 1971 ರಿಂದ 1973ರ ವರೆಗೆ ಅವಿಭಜಿತ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1980ರಲ್ಲಿ ಲೋಕಸಭಾ ಚುನಾವಣೆಗೆ ಅರಸು ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇಂದಿರಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಟಿ.ವಿ ಚಂದ್ರಶೇಖರಪ್ಪರ ವಿರುದ್ಧ ಪರಾಭವಗೊಂಡರು.

ಇದಾದ ಬಳಿಕ 1994ರಲ್ಲಿ ನಡೆದ 10ನೇ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಖಾಡಕ್ಕಿಳಿದ ಅವರು ಬಿಜೆಪಿ ಅಭ್ಯರ್ಥಿ ಕೆ.ಬಿ ಶಂಕರನಾರಾಯಣರನ್ನ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

1997 ರಲ್ಲಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿದ ಶಿವಶಂಕರಪ್ಪ, ಬಿಜೆಪಿ ಅಭ್ಯರ್ಥಿ ಜಿ.ಮಲ್ಲಿಕಾರ್ಜುನಪ್ಪ ಅವರನ್ನ ಸೋಲಿಸಿ ಸಂಸದರಾದರು. 2004 ರಲ್ಲಿ ಶಿವಶಂಕರಪ್ಪ 2ನೇ ಬಾರಿ ಶಾಸಕರಾಗಿ ಆಯ್ಕೆಯಾದರು. ಆ ನಂತರ 2008 ರಲ್ಲಿ 3ನೇ ಬಾರಿಗೆ. 2013 ರಲ್ಲಿ 4ನೇ ಬಾರಿಗೆ, 2018ರಲ್ಲಿ 5ನೇ ಬಾರಿಗೆ ಹಾಗೂ 2023ರಲ್ಲಿ 6ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಶಾಮನೂರು ಅವರು 2013 ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಸಂಪುಟದಲ್ಲಿ ಎರಡೂವರೆ ವರ್ಷ ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಸಂತಾಪ: ಮುಖ್ಯ ಮಂತ್ರಿ ಸಿದ್ದ ರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್,ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್,ಬಸವರಾಜ ಬೊಮ್ಮಾಯಿ,ಪ್ರತಿಪಕ್ಷ ನಾಯಕ ಆರ್.ಅಶೋಕ,ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಸೇರಿದಂತೆ ರಾಜಕೀಯ ನಾಯಕರು ಪಕ್ಷಾತೀತವಾಗಿ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ, ದಾವಣಗೆರೆ‌ ಧಣಿ ಶಾಮನೂರು ಶಿವಶಂಕರಪ್ಪ ವಿಧಿವಶ Read More

ದರ್ಶನ್ ನಟನೆಯ ಡೆವಿಲ್ ಚಿತ್ರ ಬಿಡುಗಡೆ-ಭರ್ಜರಿ ರೆಸ್ಪಾನ್ಸ್

ಬೆಂಗಳೂರು: ನಟ ದರ್ಶನ್ ತೂಗುದೀಪ ಅಭಿನಯದ ದಿ ಡೆವಿಲ್ ಚಿತ್ರ ಗುರುವಾರ ತೆರೆ ಕಂಡಿದ್ದು,ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಅಭಿಮಾನಿಗಳು ಚಿತ್ರಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ದಿ ಡೆವಿಲ್’ ನ ರೇಟಿಂಗ್ ಮತ್ತು ವಿಮರ್ಶೆಗಳನ್ನು ಬುಕ್ ಮೈ ಶೊ ನಂತಹ ಕೆಲ ವೇದಿಕೆಗಳಲ್ಲಿ ತಿಳಿಸುವಂತಿಲ್ಲ.
ಅಭಿಮಾನಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಕುರಿತು ಚಿತ್ರ ವೀಕ್ಷಿಸಿದ ಬಳಿಕ ದರ್ಶನ್ ಸಹೋದರ, ನಿರ್ದೇಶಕ ದಿನಕರ್ ತೂಗುದೀಪ ಮಾತನಾಡಿ, ನೆಗೆಟಿವ್ ವಿಮರ್ಶೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ಆಫ್ ಮಾಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ದುಡ್ಡು ಕೊಟ್ಟು ರೇಟಿಂಗ್ ಮಾಡಿಸೋ ಕೆಲಸ ಆಗುತ್ತಿದೆ. ಈ ಮೂಲಕ ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವ ಕೆಲಸ ಮಾಡಲಾಗುತ್ತಿದೆ ನನ್ನ ರಾಯಲ್ ಸಿನಿಮಾಗೂ ಇದೇ ಅನುಭವ ಆಗಿದೆ ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ದರ್ಶನ್ ನಟನೆಯ ಡೆವಿಲ್ ಚಿತ್ರ ಬಿಡುಗಡೆ-ಭರ್ಜರಿ ರೆಸ್ಪಾನ್ಸ್ Read More

ಅಂಬೇಡ್ಕರ್ ದೇಶ ಕಂಡ ಅಪರೂಪದ ನಾಯಕ- ಸಿಎಂ ಬಣ್ಣನೆ

ಬೆಂಗಳೂರು: ಅಂಬೇಡ್ಕರ್ ಅವರು ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಅಪರೂಪದ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ ಗೌರವ ತಂದುಕೊಡಲು ಪ್ರಯತ್ನಿಸಿದರಲ್ಲದೇ, ದೇಶದಲ್ಲಿ ಸಮಾಜಿಕ ನ್ಯಾಯ ಸಿಗದವರ ಪರವಾಗಿ ಹೋರಾಟ ಮಾಡಿದವರು ಅಂಬೇಡ್ಕರ್ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಮಹಾ ಮಾನವತಾವಾದಿ ಬಾಬಾ ಸಾಹೇಬ ಡಾ ll ಬಿ ಆರ್ ಅಂಬೇಡ್ಕರ್ ರವರ 69 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಿಎಂ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಸಂವಿಧಾನ ಶಿಲ್ಪಿ. ಅವರು ದೇಶಕ್ಕೆ ಎಂಥ ಸಂವಿಧಾನದ ಅಗತ್ಯವಿದೆ ಎಂದು ಚಿಂತಿಸಿ , ಇತರೆ ದೇಶಗಳ ಸಂವಿಧಾನವನ್ನು ಅಭ್ಯಾಸಿಸಿ,ದೇಶಕ್ಕೆ ಅಗತ್ಯವಿರುವ ಸಂವಿಧಾನವನ್ನು ಕೊಟ್ಟಿದ್ದಾರೆ.ನಮ್ಮ ಸಾಮಾಜಿಕ ವ್ಯವಸ್ಥೆ ಬದಲಾವಣೆಯಾಗಬೇಕು, ಎಲ್ಲರಿಗೂ ಸಮಾನ ಅವಕಾಶಗಳು ದೊರಕಬೇಕು ಹಾಗೂ ಸಾಮಾಜಿಕ ನ್ಯಾಯ ಸ್ಥಾಪನೆಯಾಗಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ನಮ್ಮ ಸರ್ಕಾರ ಶಾಲಾ ಕಾಲೇಜು ಮಕ್ಕಳಿಗೆ ಇದರ ಅರಿವು ಮೂಡಿಸಲು ಸಂವಿಧಾನ ಪೀಠಿಕೆಯನ್ನು ಬೋಧಿಸಲಾಗುತ್ತಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕು ಮತ್ತು ಬಾಧ್ಯತೆಗಳನ್ನು ನೀಡಿದೆ. ಸಂವಿಧಾನದ ಧ್ಯೇಯೋದ್ದೇಶಗಳು ಎಲ್ಲರಿಗೂ ಅರ್ಥವಾಗಬೇಕು ಎಂಬ ಕಾರಣದಿಂದ ಸರ್ಕಾರ ಇದನ್ನು ಜಾರಿ ಮಾಡಿದೆ ಎಂದು ಹೇಳಿದರು.
ಪರಿನಿರ್ವಾಣ ದಿನದಂದು ನಾವು ಅಂಬೇಡ್ಕರ್ ಅವರನ್ನು ಸ್ಮರಿಸುವ ಕೆಲಸವನ್ನು ಮಾಡಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಕೊನೆಯ ದಿನಗಳಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಹುಟ್ಟುವಾಗ ಹಿಂದೂವಾಗಿದ್ದೆ, ಸಾಯುವಾಗ ಹಿಂದೂವಾಗಿ ಸಾಯಲಾರೆ. ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಪಟ್ಟು, ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದೇನೆ ಎಂದು ಹೇಳಿದ್ದರು, ಹಿಂದೂ ಧರ್ಮದಲ್ಲಿರುವ ಸಾಮಾಜಿಕ ವ್ಯವಸ್ಥೆಗೆ ರೋಸಿಹೋಗಿ ಹೀಗೆ ಮಾಡಿದ್ದರು ಎಂದು ಸಿದ್ದರಾಮಯ್ಯ ನುಡಿದರು.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ಭಗವದ್ಗೀತೆಯನ್ನು ಪಠ್ಯಕ್ಕೆ ಸೇರಿಸಬೇಕೆಂದು ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಮನುವಾದಿಗಳಾಗಿದ್ದಾರೆ ಎಂದು ಛೇಡಿಸಿದರು.

ಅಂಬೇಡ್ಕರ್ ದೇಶ ಕಂಡ ಅಪರೂಪದ ನಾಯಕ- ಸಿಎಂ ಬಣ್ಣನೆ Read More

ಕೆಐಎಡಿಬಿ ಹೊಸ ಬಹುಮಹಡಿ ಕಟ್ಟಡ ಉದ್ಘಾಟನೆ

ಬೆಂಗಳೂರು: ನಗರದ ಗಾಂಧಿನಗರದಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಹೊಸ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಉದ್ಘಾಟಿಸಿದರು.
ಗಾಂಧಿನಗರದ ಆಚಾರ್ಯ ತುಳಸಿ ಮಾರ್ಗದಲ್ಲಿ 32 ಕೋಟಿ ವೆಚ್ಚದಲ್ಲಿ ಈ ಬಹುಮಹಡಿ ಕಟ್ಟಡವನ್ನು ನಿರ್ಮಿಸಲಾಗಿದೆ.
ಒಟ್ಟು 2,618 ಚದರ ಮೀಟರ್ ಅಳತೆಯ ನಿವೇಶನದಲ್ಲಿ ತಲೆ ಎತ್ತಿರುವ ಈ ಕಟ್ಟಡವು ಎರಡು ನೆಲ ಅಂತಸ್ತುಗಳು, ನೆಲ ಅಂತಸ್ತು, ಐದು ಮಹಡಿಗಳು ಹಾಗೂ ತಾರಸಿ ಮಹಡಿಯನ್ನು ಒಳಗೊಂಡಿದೆ.
ಲೋಯರ್ ಬೇಸ್ ಮೆಂಟ್ ನಲ್ಲಿ 58 ಕಾರುಗಳು ಹಾಗೂ ಅಪ್ಪರ್ ಬೇಸ್ ಮೆಂಟ್ ನಲ್ಲಿ 38 ಕಾರುಗಳ ನಿಲುಗಡೆಗೆ ಜಾಗ ಕಲ್ಪಿಸಲಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಜರಿದ್ದರು.
ಇದೇ ವೇಳೆ, ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ ಅವರು ಕೆ.ಐ.ಎ.ಡಿ.ಬಿ.ಯ 2 ಕೋಟಿ ರೂ ಲಾಭಾಂಶವನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಹಸ್ತಾಂತರಿಸಿದರು.
ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಈ ಕಟ್ಟಡ ಕಟ್ಟಲು ಶಾಸಕ ಆರ್.ವಿ.ದೇಶಪಾಂಡೆ ಅವರು ತೀರ್ಮಾನ ತೆಗೆದುಕೊಂಡಿದ್ದರು.ಹಾಗಾಗಿ ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ ಮತ್ತಿತರರು ಉಪಸ್ಥಿತರಿದ್ದರು

ಕೆಐಎಡಿಬಿ ಹೊಸ ಬಹುಮಹಡಿ ಕಟ್ಟಡ ಉದ್ಘಾಟನೆ Read More

ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ-ಸಿಎಂ ಗೆ ಅಶೋಕ್ ಟಾಂಗ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನವರೇ,
ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸುಮಾರು 20 ವರ್ಷಗಳಾದ ಮೇಲೆ ಮೊಟ್ಟಮೊದಲ ಬಾರಿಗೆ ಡಿಸಿಎಂ ಡಿ‌.ಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ, ನಾಟಿಕೋಳಿ ತಿಂಡಿ ತಿಂದು ಹೋಮ್ ಟೂರ್ ಮಾಡಿಕೊಂಡು ಬಂದಿದ್ದೀರಿ.ಮುಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ಎಲ್ಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಛೇಡಿಸಿದ್ದಾರೆ.
ಯಾರ ಜೊತೆ ಅಂತ ನಿಮ್ಮ ಹೈಕಮಾಂಡ್ ಏಜೆಂಟ್ ವೇಣುಗೋಪಾಲ್ ಅವರು ಆದೇಶ ಕೊಡುವುದಕ್ಕೂ ಮುಂಚೆ ಒಮ್ಮೆ ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ ಎಂದು ಟ್ವೀಟ್ ಮಾಡಿ‌ ಸಿಎಂ ಕಾಲೆಳೆದಿದ್ದಾರೆ.
ಶೌಚಾಲಯಗಳೇ ಇಲ್ಲದ ಶಾಲೆಗಳು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳು, ಬಿದ್ದು ಹೋಗುತ್ತಿರುವ ಗೋಡೆಗಳು, ಶಿಕ್ಷಕರಿಲ್ಲದ ತರಗತಿಗಳನ್ನು ಒಮ್ಮೆ ಕಣ್ತುಂಬಿಕೊಂಡು ಬನ್ನಿ ಸಿದ್ದರಾಮಯ್ಯನವರೇ.
ಇಂತಹ ಲಜ್ಜೆಗೆಟ್ಟ ಸರ್ಕಾರವನ್ನ ಇಡೀ ಪ್ರಪಂಚದ ಇತಿಹಾಸದಲ್ಲೇ ಕಾಣಲು ಸಾಧ್ಯವಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.

ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ-ಸಿಎಂ ಗೆ ಅಶೋಕ್ ಟಾಂಗ್ Read More

ಬೆಳಗಾವಿ ಅಧಿವೇಶದಲ್ಲಿ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸುತ್ತೇವೆ-ಸಿಎಂ

ಬೆಂಗಳೂರು: ಬೆಳಗಾವಿ ಅಧಿವೇಶದಲ್ಲಿ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ‌ ಸಿಎಂ,ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿವೇಶನ ಕರೆಯಲಾಗಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಬೆಳಗಿನ ಉಪಹಾರಕ್ಕಾಗಿ ಅವರ ನಿವಾಸಕ್ಕೆ ಭೇಟಿ ನೀಡಿದೆ.ನಮ್ಮ ಪಕ್ಷದ ವಿಚಾರಗಳನ್ನು ಈ ವೇಳೆ ಚರ್ಚಿಸಲಾಗಿದೆ. ಡಿಸೆಂಬರ್ 8 ರಂದು ಬೆಳಗಾವಿ ಅಧಿವೇಶನ ಪ್ರಾರಂಭವಾಗಲಿದ್ದು, ವಿಪಕ್ಷಗಳನ್ನು ಎದುರಿಸಲು ಸರ್ಕಾರದ ರಣನೀತಿಗಳ ಬಗ್ಗೆ ಚರ್ಚಿಸಲಾಯಿತು ಎಂದು ‌ತಿಳಿಸಿದರು.

ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿರುವ ಮಾಹಿತಿ ಪತ್ರಿಕೆಗಳಿಂದ ತಿಳಿದು ಬಂದಿದೆ.ಅಲ್ಲದೇ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ. ಕಬ್ಬು, ಮೆಕ್ಕೆಜೋಳದ ಸಮಸ್ಯೆ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಪ್ರಯತ್ನಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.

ನಮ್ಮ ಸರ್ಕಾರ ರೈತಪರ ನಿಲುವನ್ನು ಹೊಂದಿದೆ. ಮೆಕ್ಕೆ ಜೋಳ ಖರೀದಿ ಬಗ್ಗೆ ರೈತರು, ಡಿಸ್ಟಲರಿ ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2,400 ರೂ ಬೆಂಬಲ ಬೆಲೆ ನಿಗದಿಪಡಿಸಿದೆ ಆದರೆ ಮಾರುಕಟ್ಟೆ ದರ 1900 ರಿಂದ 2100 ರೂ.ವೆರೆಗೆ ಇರುವುದರಿಂದ ಡಿಸ್ಟಲರಿ ಕಂಪನಿಗಳು , ಎಂಎಸ್ ಪಿ ದರದಲ್ಲಿಯೇ ರೈತರಿಂದ ಮೆಕ್ಕೆಜೋಳವನ್ನು ಖರೀದಿಸಬೇಕೆಂದು ಮನವೊಲಿಸಲಾಗುತ್ತಿದೆ. ಅಂತೆಯೇ ಪೌಲ್ಟ್ರಿ ಫಾರಂಗಳು , ಪಶು ಆಹಾರಗಳಿಗಾಗಿ ಮೆಕ್ಕೆ ಜೋಳವನ್ನು ಬಳಸಲಾಗುತ್ತದೆ ಎಂದು ಸಿಎಂ‌ ತಿಳಿಸಿದರು.

ಹೈ ಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿ ಮೊನ್ನೆ ಮತ್ತು ಇಂದೂ ಕೂಡ ಚರ್ಚಿಸಲಾಗಿದೆ,
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಒಗ್ಗಟ್ಟಿನಿಂದ ಇದ್ದೇವೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದು, ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ. 2028 ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ಮುಖ್ಯ ಮಂತ್ರಿಗಳು‌ ಸ್ಪಷ್ಟವಾಗಿ ಹೇಳಿದರು.

ಬೆಳಗಾವಿ ಅಧಿವೇಶದಲ್ಲಿ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸುತ್ತೇವೆ-ಸಿಎಂ Read More

ಅಪರಾಧ ಕೃತ್ಯಗಳ ತಡೆಗಟ್ಟಲು ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಆಪ್ ಆಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಅಪರಾಧ ಕೃತ್ಯಗಳ ಪ್ರಮಾಣ ದಿನೇ ದಿನೇ ಹೆಚ್ಚಾಗಿದ್ದು,ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಇವುಗಳನ್ನು ತಡೆಗಟ್ಟಲು ವಿಶೇಷ ಚರ್ಚೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಈ ಬಗ್ಗೆ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ಲಕ್ಷ್ಮಿಕಾಂತ ರಾವ್ ಮಾತನಾಡಿ ಪ್ರತಿ ದಿವಸ 10 ಪೋಕ್ಸೋ ಕೇಸುಗಳು ದಾಖಲಾಗುತ್ತಿದ್ದರೆ , ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.

ರಾಜ್ಯದಾದ್ಯಂತ ಸೈಬರ್ ಅಪರಾಧ ಕೃತ್ಯಗಳು ಕೂಡಾ ಏಗ್ಗಿಲ್ಲದೆ ನಡೆಯುತ್ತಿದ್ದು ಜನಸಾಮಾನ್ಯನ ದುಡಿಮೆಯ ಹಣ ಕಳ್ಳರ ಪಾಲಾಗುತ್ತಿದೆ. ಕೊರಿಯರ್ ಮತ್ತು ಆನ್ ಲೈನ್ ಬಂಡವಾಡ ಹೂಡಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಸಂಘಟಿತ ಅಪರಾಧಗಳು ದಿನೇ ದಿನೇ ಮುಗಿಲು ಮುಟ್ಟುತ್ತಿದೆ. ಜನಸಾಮಾನ್ಯನ ಹಣವನ್ನು ಮರಳಿ ಪಡೆದುಕೊಳ್ಳಲು ಪೊಲೀಸ್ ಇಲಾಖೆಯಿಂದ ಎಳ್ಳಷ್ಟು ಅನುಕೂಲಗಳು ಸಿಗುತ್ತಿಲ್ಲ. ಸಾಕಷ್ಟು ಪ್ರಭಾವ ಹಾಗೂ ಹಣ ಬಲವಿಲ್ಲದೆ ಯಾವುದೇ ಆರೋಪಿಗಳ ಮೇಲೆ ಎಫ್ಐಆರ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನೇಕ ಅಪರಾಧ ಕೃತ್ಯಗಳಲ್ಲಿ ಪೊಲೀಸರೇ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಂತಹ ಪೊಲೀಸರ ಮೇಲೆ ಯಾವುದೇ ಕ್ರಿಮಿನಲ್ ಮುಖದ್ದಮೆಯನ್ನು ದಾಖಲಿಸದೆ ಕೇವಲ ಇಲಾಖಾ ತನಿಖೆಗೆ ಶಿಫಾರಸು ಮಾಡುತ್ತಿರುವುದರಿಂದ ಪೊಲೀಸ್ ಸಿಬ್ಬಂದಿ ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.

ಪ್ರತಿಯೊಂದು ದೂರಿನಲ್ಲೂ ರಾಜಕಾರಣಿಗಳ ಹಾಗೂ ಅವರ ಬಂಟರುಗಳ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ನಗರದಾದ್ಯಂತ ಕೋಟಿಗಟ್ಟಲೆ ಹಣ ಸುರಿದು ವರ್ಗಾವಣೆ ಮಾಡಿಸಿಕೊಂಡು ಬಂದ ಅಧಿಕಾರಿಗಳಿಂದ ಯಾವುದೇ ಅಪರಾಧ ಕೃತ್ಯಗಳು ಹಾಗೂ ಶಿಕ್ಷೆಗಳು ತಕ್ಕ ಪ್ರಮಾಣದಲ್ಲಿ ಆಗದೆ ಪ್ರತಿಯೊಂದು ಪೊಲೀಸ್ ಠಾಣೆಗಳು ಸಹ ಪ್ರತಿ ದಿವಸ ಲಕ್ಷಾಂತರ ರೂಪಾಯಿಗಳನ್ನು ದುಡಿಯುವ ಎಟಿಎಂ ಗಳಾಗಿ ಪರಿವರ್ತನೆ ಆಗುತ್ತಿದೆ ಎಂದು ಕಿಡಿಕಾರಿದರು.

ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ರಸ್ತೆಯಲ್ಲಿ ಕಾಣಿಸಿಕೊಳ್ಳದೆ ತಮ್ಮ ವೃತ್ತಿಪರತೆಯಲ್ಲಿ ವಿಫಲರಾಗಿರುವ ಕಾರಣದಿಂದ ಅತಿಯಾದ ಸಂಚಾರ ಸಮಸ್ಯೆ ಎದುರಾಗುತ್ತಿದೆ.

ಹಗಲಲ್ಲೇ ಬ್ಯಾಂಕ್ ರಾಬರಿಗಳು, ದೊಂಬಿ ಗಲಾಟೆಗಳು, ಗಣೇಶ ವಿಸರ್ಜನೆ ಹೆಸರಿನಲ್ಲಿ ಮೂಲಭೂತವಾದಿಗಳ ಕೋಮು ಪ್ರಚೋದಿತ ವ್ಯವಸ್ಥಿತ ಶಾಂತಿಭಂಗ ಕೃತ್ಯಗಳು ನಡೆಯುತ್ತಿದ್ದು, ತಹಬದಿಗೆ ತರಲು ಗೃಹ ಇಲಾಖೆ ಸಂಪೂರ್ಣ ವಿಫಲಗೊಂಡಿದ್ದು ಗೃಹ ಸಚಿವರು ಪ್ರತಿಯೊಂದು ಹಂತದಲ್ಲಿಯೂ ವೈಫಲ್ಯತೆಯನ್ನು ಕಾಣುತ್ತಿದ್ದಾರೆ. ಈ ಬಗ್ಗೆ ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಬೇಕು ಎಂದು ಲಕ್ಷ್ಮಿಕಾಂತ ರಾವ್ ಆಗ್ರಹಿಸಿದರು.

ಅಪರಾಧ ಕೃತ್ಯಗಳ ತಡೆಗಟ್ಟಲು ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಆಪ್ ಆಗ್ರಹ Read More

ಜಾನಪದ ಒಂದು ಅಲೌಕಿಕ ಸಂವಿಧಾನ-ಡಾ ಜಾನಪದ ಬಾಲಾಜಿ

ಬೆಂಗಳೂರು: ಜಾನಪದ ಒಂದು ಅಲೌಕಿಕ ಸಂವಿಧಾನ ಇದ್ದಂತೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿ ಎಸ್ ತಿಳಿಸಿದರು.

ಬೆಂಗಳೂರಿನ ಪದ್ಮನಾಭನಗರ ಸಮುದಾಯ ಭವನದಲ್ಲಿ ಕನ್ನಡ ಜಾನಪದ ಪರಿಷತ್l ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರ ಮಹಿಳಾ ಘಟಕದ ಉದ್ಘಾಟನೆ ಹಾಗೂ ಪದ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.

ಜಾನಪದ ಮಹಿಳಾ ಪ್ರಧಾನವಾದದ್ದು, ಇದು ನಮ್ಮ ಪೂರ್ವಜರಿಂದ ಬಂದ ಬಳುವಳಿ, ಅದನ್ನು ಮುಂದಿನ ಪೀಳಿಗೆಗೆ ಕೊಂಡಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಜಾನಪದ ನಮ್ಮ ಸಂಸ್ಕೃತಿಯ ಮೂಲ ಬೇರು, ಇದನ್ನು ತರಬೇತಿ ಹಾಗೂ ದಾಖಲೀಕರಣದ ಮೂಲಕ ಉಳಿಸಿ ಬೆಳೆಸುವ ಕಾರ್ಯ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಮೂಲಕ ಆಗುತ್ತಿದೆ, ಕಲಾವಿದರ ಮಾಶಾಸನ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಡಾ.ಜನಪದ ಎಸ್ ಬಾಲಾಜಿ ಅಗ್ರಹಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಿಯಾಜ್ ಪಾಷಾ ಮಾತನಾಡಿ ಬೆಂಗಳೂರು ಗೋವಿಂದರಾಜ ನಗರ ಮಹಿಳಾ ಘಟಕದ ವತಿಯಿಂದ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ಪ್ರಥಮ ಮಹಿಳಾ ಜಾನಪದ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಕೇಂದ್ರ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರ ಮಹಿಳಾ ಘಟಕಗಳನ್ನು ಶೀಘ್ರದಲ್ಲಿ ಸ್ಥಾಪಿಸಲಾಗುವುದು ಹಾಗೂ ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಜನಪದ ಕಲಾ ಪ್ರಕಾರಗಳ ಕುರಿತು ತರಬೇತಿ ನೀಡಲಾಗುವುದು ಎಂದು ಹೇಳಿದರು.

ಪದಾಪ್ರದಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷೆ ನಾಗರತ್ನ ಹಿರೇಮಠ್, ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಭರಾಟೆಯಿಂದ ನಮ್ಮ ಸಂಸ್ಕೃತಿ ಸಂಸ್ಕಾರಗಳು ಕುಸಿಯುತ್ತಿದೆ, ಇದನ್ನು ತಿಳಿಯುವ ಕೆಲಸ ಮಹಿಳಾ ಘಟಕದಿಂದ ಆಗಲಿ ಎಂದು ತಿಳಿಸಿದರು.

ಮಾರ್ಚ್ ತಿಂಗಳ ಒಳಗಾಗಿ
ಪದ್ಮನಾಭನಗರದ ಎಲ್ಲಾ ವಾರ್ಡ್ ಘಟಕಗಳನ್ನು ರಚಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ ಅಂಬಿಕಾ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಉದ್ದೇಶ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಪದಾಧಿಕಾರಿಗಳಿಗೆ ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷರು ಪದ ಪ್ರದಾನ ಮಾಡಿದರು.

ಮೂಲ ಜನಪದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಲಾವಿದರು, ಸಾಹಿತಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜಾನಪದ ಒಂದು ಅಲೌಕಿಕ ಸಂವಿಧಾನ-ಡಾ ಜಾನಪದ ಬಾಲಾಜಿ Read More

ಗುರುರಾಜ ಹೊಸಕೋಟೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಿ-ಡಾ.ಜಾನಪದ ಬಾಲಾಜಿ‌

 

ಬೆಂಗಳೂರು: ಗಾನ ಗಾರುಡಿಗ ಗುರುರಾಜ ಹೊಸಕೋಟೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಲಿ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷರಾದ ಡಾ ಜಾನಪದ ಎಸ್ ಬಾಲಾಜಿ‌ ಒತ್ತಾಯಿಸಿದರು.

ಗುರುವಾರ ಬೆಂಗಳೂರಿನ ಮುದ್ನಾಪಾಳ್ಯ ಹತ್ತಿರ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಸ್ಕಾರ ಪಡೆದ ಗುರುರಾಜ ಹೊಸಕೋಟೆ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಬಾಲಾಜಿ ಗುರುರಾಜ ಹೊಸಕೋಟೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಹಾಗೂ ರಾಜ್ಯ ಸರ್ಕಾರ ಜಾನಪದ ಶ್ರೀ ಪ್ರಶಸ್ತಿ ನೀಡಬೇಕೆಂದು ಅಗ್ರಹಿಸಿದರು.

ತಾಯಿ ಸತ್ತಮೇಲೆ ತವರಿಗೆ ಹೋಗಬಾರದು, ಕಲಿತ ಹುಡುಗಿ,ಹಾಡು ಬರೆದ ಪದ ಗಾರುಡಿಗ ಶ್ರೀ ಗುರುರಾಜ ಹೊಸಕೋಟೆ ಅವರ ಮನೆಗೆ ಡಾ ಜಾನಪದ ಎಸ್ ಬಾಲಾಜಿ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.

ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ನರಸಿಂಹ ಮೂರ್ತಿ, ಬ್ಯಾಟರಾಯನಪುರ ಅಧ್ಯಕ್ಷರಾದ ಮಹೇಂದ್ರ ಜಾದವ್ ಉಪಸ್ಥಿತರಿದ್ದರು.

ಗುರುರಾಜ ಹೊಸಕೋಟೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಿ-ಡಾ.ಜಾನಪದ ಬಾಲಾಜಿ‌ Read More

ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ:1033.60 ಕೋಟಿ ಇನ್ಪುಟ್ ಸಬ್ಸಿಡಿ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಮಾನ್ಸೂನ್ ಅವಧಿಯಲ್ಲಿ ಅತಿವೃಷ್ಟಿಯಿಂದ ಆದ ಬೆಳೆ ಹಾನಿಯಿಂದ ಕಂಗೆಟ್ಟಿದ್ದ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದೆ.

ಒಂದೇ ದಿನ ರೈತರಿಗೆ ಹೆಚ್ಚುವರಿಯಾಗಿ 1033.60 ಕೋಟಿ ಇನ್ಪುಟ್ ಸಬ್ಸಿಡಿಯನ್ನು ವಿತರಿಸಲು ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಚಾಲನೆ ನೀಡಿದರು.

ನಂತರ ಮಾತನಾಡಿದ ಸಿಎಂ,ಪ್ರಸ್ತುತ ವರ್ಷದ ಮಾನ್ಸೂನ್ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ 1033.60 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದ್ದು,ಈಗ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ರೈತರ ಪರವಾಗಿದ್ದು, ಬೆಳೆ ಹಾನಿಗೊಳಗಾದ ರೈತರಿಗೆ ಹೆಚ್ಚಿನ ನೆರವು ಒದಗಿಸುವ ಉದ್ದೇಶದಿಂದ ಇನ್ಪುಟ್ ಸಬ್ಸಿಡಿಗಳ ದರಗಳನ್ನು ಹೆಚ್ಚಿಸಿದೆ. ಗರಿಷ್ಟ 2 ಹೆಕ್ಟೇರಿಗೆ ಸೀಮಿತವಾಗಿ, ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ 8500 ರೂ ರಿಂದ 17 ಸಾವಿರ ರೂ, ನೀರಾವರಿ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ 17ಸಾವಿರದಿಂದ 25,500 ರೂ ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ 22,500ರಿಂದ 31 ಸಾವಿರ ರೂ ಹೆಚ್ಚಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಮುಂಗಾರು ಅವಧಿಯಲ್ಲಿ ದಾಖಲೆಯ 82.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಜೂನ್ ನಿಂದ ಸೆಪ್ಟಂಬರ್ ಅವಧಿಯಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ 14.58 ಲಕ್ಷ ಹೆಕ್ಟೇರ್ ಗಿಂತ ಹೆಚ್ಚಿನ ಪ್ರದೇಶದ ಬೆಳೆ ಹಾನಿ ಉಂಟಾಗಿದ್ದು, ಇದರಿಂದ ಅಂದಾಜು 10,748 ಕೋಟಿ ಬೆಳೆ ಹಾನಿ ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಒಳ ಹರಿವು ಹೆಚ್ಚಳದಿಂದ ಕಲಬುರಗಿ, ಯಾದಗಿರಿ ಮತ್ತು ಬೀದರ ಜಿಲ್ಲೆಗಳಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಳಿಗೆ ವ್ಯಾಪಕ ಹಾನಿ ಉಂಟಾಗಿದೆ.
ಬೆಳೆ ಹಾನಿಯನ್ನು ನಿಖರವಾಗಿ ಖಚಿತಪಡಿಸಲು ಜಂಟಿ ಸಮೀಕ್ಷೆ ನಡೆಸಿ ಹಾನಿಯನ್ನು ಅಂದಾಜಿಸಲಾಗಿದೆ.

ಎಲ್ಲಾ ದತ್ತಾಂಶಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಭೂಮಿ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ಸಂಯೋಜಿಸಲಾಗಿದೆ.

ಬೆಳೆ ನಷ್ಟದ ಗ್ರಾಮವಾರು ಪಟ್ಟಿಯನ್ನು ಗ್ರಾಮ ಚಾವಡಿಗಳಲ್ಲಿ ಹಾಗೂ ಆನ್ಲೈನ್ನಲ್ಲಿ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ಬಳಿಕ ನಷ್ಟ ಅನುಭವಿಸಿದ ರೈತರ ಪಟ್ಟಿಯನ್ನು ಅಂತಿಮಗೊಳಿಸಿ ಬಳಿಕ ಇನ್ಪುಟ್ ಸಬ್ಸಿಡಿಯನ್ನು ನೇರವಾಗಿ ರೈತರಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ರಧಾನಮಂತ್ರಿ ಮೋದಿಯವರನ್ನು ನವೆಂಬರ್ 17ರಂದು ಭೇಟಿ ಮಾಡಿ, ಬೆಳೆ ಹಾನಿ ಇನ್ಪುಟ್ ಸಬ್ಸಿಡಿಗೆ ಪ್ರತಿಕ್ರಿಯೆ ಹಾಗೂ ಪರಿಹಾರ ಅಡಿಯಲ್ಲಿ ರೂ. 614.90 ಕೋಟಿ ಹಾಗೂ ಹಾನಿಗೊಳಗಾದ ಮೂಲಸೌಕರ್ಯಗಳನ್ನು ಸರಿಪಡಿಸಲು 1,521.67 ಕೋಟಿ ಪರಿಹಾರ ಒದಗಿಸಲು ಮನವಿ ಸಲ್ಲಿಸಲಾಗಿದೆ ಎಂದು ಸಿಎಂ ಹೇಳಿದರು.

ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರ ಅಂತರ ಸಚಿವಾಲಯದ ಕೇಂದ್ರ ತಂಡವನ್ನು ರಚಿಸಿದ್ದು,ತಂಡ ಶೀಘ್ರದಲ್ಲೇ ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.

ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ:1033.60 ಕೋಟಿ ಇನ್ಪುಟ್ ಸಬ್ಸಿಡಿ ಬಿಡುಗಡೆ Read More