ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಟಿಪ್ಪು, ಔರಂಗಜೇಬನ ಸಂತತಿ ಜನನ:ತೇಜಸ್ವಿ‌ ಕಿಡಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದಾಗ ಟಿಪ್ಪು, ಔರಂಗಜೇಬನ ಸಂತತಿ ಹುಟ್ಟುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ಗಲಭೆಯನ್ನು ಗೃಹ ಸಚಿವ ಪರಮೇಶ್ವರ್ ಸಣ್ಣ ಘಟನೆ ಎಂದು ಹೇಳುತ್ತಾರೆ. ನಿಮ್ಮ ಮನೆ ರೋಡ್‍ನಲ್ಲಿ ಯಾರಾದರೂ ಗಣೇಶ ಕೂರಿಸಿದಾಗ ಅಲ್ಲಿ ಯಾರಾದ್ರೂ ಕಲ್ಲು ಹೊಡೆದ್ರೆ, ಬೆಂಕಿ ಹಾಕಿದ್ರೆ ಸಣ್ಣ ಘಟನೆ ಎಂದು ಹೇಳುತ್ತೀರಾ ನಿಮ್ಮ ಮನೆಗೆ ಬೆಂಕಿ ಬೀಳುವವರೆಗೂ ನಿಮಗೆ ಘಟನೆ ಬಗ್ಗೆ ಗೊತ್ತಾಗೊದಿಲ್ಲ ಅಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ, ಕರ್ನಾಟಕದಲ್ಲಿ ಸಂವಿಧಾನದ ಪ್ರಕಾರ ಕಾನೂನು ನಡೆಯುತ್ತಿದೆಯಾ,ಇಲ್ಲಾ ಷರಿಯಾ ಪ್ರಕಾರ ಕಾನೂನು ನಡೆಯುತ್ತಿದೆಯಾ ಎಂದು ಪ್ರಶ್ನಿಸಿದರು.

ಗಣೇಶ ಕೂರಿಸೋಕು ಕರ್ನಾಟಕದಲ್ಲಿ ಸಾಧ್ಯವಿಲ್ಲವಾ, ಬಾಂಗ್ಲಾ ಸರ್ಕಾರ, ಕರ್ನಾಟಕ ಸರ್ಕಾರಕ್ಕೆ ಇರೋ ವ್ಯತ್ಯಾಸ ಏನು ನೀವು ತುಷ್ಟೀಕರಣ ನೀತಿ ಮಾಡಿ, ಗಣೇಶ ಕೂರಿಸಿದರೆ ನೀವು ಬೆಂಕಿ ಹಾಕಿಸಿ ಕಲ್ಲು ಹೊಡೆಸುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದರು.

ಬೆಂಕಿ ಹಾಕಿದ ಟೆರರಿಸ್ಟ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಿಂದೂ ಯುವಕರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು. ಇದೇ ರೀತಿ ಅಮಾಯಕರ ಮೇಲೆ ಕ್ರಮಕ್ಕೆ ಮುಂದಾದರೆ ಬಿಜೆಪಿ ಹಳ್ಳಿ ಹಳ್ಳಿಯಲ್ಲಿ ಹೋರಾಟ ಮಾಡಲಿದೆ ಎಂದು ತೇಜಸ್ವಿ ಸೂರ್ಯ ಎಚ್ಚರಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಟಿಪ್ಪು, ಔರಂಗಜೇಬನ ಸಂತತಿ ಜನನ:ತೇಜಸ್ವಿ‌ ಕಿಡಿ Read More

ದುರುಳರು ಯಾವುದೇ ಜಾತಿ, ಧರ್ಮದವರಾದರೂ ಕಠಿಣ ಕ್ರಮ: ಸಿಎಂ

ಬೆಂಗಳೂರು: ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯ ಜಿಲ್ಲೆ, ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಡಿರುವುದು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ ಎಂದು ಸಿಎಂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಈಗಾಗಲೇ 50ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಬರೆದಿದ್ದಾರೆ.

ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಗಲಭೆ, ಗಲಾಟೆ, ಹಿಂಸಾಚಾರಗಳು ನಡೆಯದೆ ಸರ್ವಜನಾಂಗದ ಶಾಂತಿಯ ತೋಟದಂತಿದ್ದ ನಾಡನ್ನು, ಧಾರ್ಮಿಕ ನೆಲೆಗಟ್ಟಿನಲ್ಲಿ ವಿಭಜಿಸಲು ಯತ್ನಿಸುವ ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಾರ್ವಜನಿಕರು ಪ್ರಚೋದನೆಗಳಿಗೆ ಒಳಗಾಗದೇ ಶಾಂತಿ, ಸಂಯಮ ಕಾಪಾಡಿಕೊಳ್ಳುವ ಮೂಲಕ ನಮ್ಮೊಂದಿಗೆ ಸಹಕರಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ದುರುಳರು ಯಾವುದೇ ಜಾತಿ, ಧರ್ಮದವರಾದರೂ ಕಠಿಣ ಕ್ರಮ: ಸಿಎಂ Read More

1.50 ಕೋಟಿ ಹಣ ಪಡೆದನಾಲ್ವರು ಜಿ ಎಸ್ ಟಿ ಅಧಿಕಾರಿಗಳ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ನಾಲ್ವರು ಜಿಎಸ್ ಟಿ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೇಸ್ ಒಂದನ್ನು ಮುಚ್ಚಿ ಹಾಕಲು 1.50 ಕೋಟಿ ಹಣ ಪಡೆದಿದ್ದ ಜಿಎಸ್ ಟಿ ಅಧಿಕಾರಿಗಳು ನಂತರ ನಾಪತ್ತೆ ಆಗಿದ್ದರು. ಉದ್ಯಮಿ ಕೇಶವ್ ತಕ್ ಈ ಬಗ್ಗೆ ಬೈಯ್ಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದರು.

ಕಾರ್ಯಾಚರಣೆ ನಡೆಸಿದ ಪೊಲೀಸರು, ಮಹಿಳಾ ಅಧಿಕಾರಿ ಸೇರಿದಂತೆ ನಾಲ್ವರು ಜಿಎಸ್ ಟಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಕೇಂದ್ರ ಗುಪ್ತದಳದ ಮಹಿಳಾ ಅಧಿಕಾರಿ ಸೇರಿದಂತೆ, ಸೀನಿಯರ್ ಇಂಟಲಿಜನ್ಸ್ ಆಫೀಸರ್ ಮನೋಜ್ ಸೈನಿ, ಅಧೀಕ್ಷಕ ಅಭಿಷೇಕ್, ಸಿನೀಯರ್ ಇಂಟಲಿಜನ್ಸ್ ಆಫೀಸರ್ ನಾಗೇಶ್ ಬಂಧಿತ ಅಧಿಕಾರಿಗಳು.

ಸುಮಾರು ನಾಲ್ಕೈದು ಮಂದಿ ತನ್ನನ್ನು ಕರೆದುಕೊಂಡು ಹೋಗಿ ಅಪಾರ ಪ್ರಮಾಣದ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದ ಉದ್ಯಮಿ 1.5 ಕೋಟಿ ರೂ.ಗಳನ್ನು ಪಡೆದು ಬಿಟ್ಟುಕಳಿಸಿದರೆಂದು ಹೇಳಿದ್ದಾರೆ.

1.50 ಕೋಟಿ ಹಣ ಪಡೆದನಾಲ್ವರು ಜಿ ಎಸ್ ಟಿ ಅಧಿಕಾರಿಗಳ ಬಂಧನ Read More

ಬಿಜೆಪಿ ಸರ್ಕಾರದ ಹಗರಣಗಳ ತನಿಖೆ: ಸಚಿವಸಂಪುಟ ಉಪ ಸಮಿತಿ ರಚನೆ- ಸಿಎಂ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸುಮಾರು 21 ಹಗರಣಗಳು ನಡೆದಿದ್ದು, ಎಲ್ಲ ಹಗರಣಗಳ ತನಿಖೆಗೆ ತ್ವರಿತವಾಗಿ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಈ ಬಗ್ಗೆ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಸಲಹೆ ನೀಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಅರಣ್ಯಭವನದಲ್ಲಿ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಕುರಿತ ತನಿಖೆಗಳ ಪ್ರಗತಿ ಹಾಗೂ ಸಮನ್ವಯ ಸಂಬಂಧ ಕ್ರಮ ವಹಿಸುವ ನಿಟ್ಟಿನಲ್ಲಿ ರಚಿಸಿರುವ ಸಮಿತಿಯಲ್ಲಿ ಸಚಿವರಾದ ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಹಾಗೂ ಎಚ್.ಕೆ.ಪಾಟೀಲ್ ರವರು ಸದಸ್ಯರಾಗಿದ್ದಾರೆ ಎಂದು ಹೇಳಿದರು.

ಸಮಿತಿಯು ವರದಿಯನ್ನು ನೀಡಲು ಒಂದರಿಂದ ಎರಡು ತಿಂಗಳ ಅವಧಿಯನ್ನು ನೀಡಲಾಗಿದೆ. ಪಿಎಸ್ ಐ ಹಗರಣ, ಶೇ.40 ಕಮಿಷನ್ ಹಗರಣ, ಕೋವಿಡ್ 19, ಬಿಟ್ ಕಾಯಿನ್ ಹಗರಣಗಳಿಗೆ ಮಾತ್ರ ತನಿಖಾ ಆಯೋಗಗಳನ್ನು ರಚಿಸಲಾಗಿದೆ. ಅದರಲ್ಲಿ ಕೋವಿಡ್ 19 ಬಗ್ಗೆ ತನಿಖಾ ಆಯೋಗ ಪೂರ್ವಭಾವಿ ವರದಿಯನ್ನು ನೀಡಿದ್ದು, ಅಧಿಕಾರಿಗಳ ಪರಿಶೀಲನೆಯ ನಂತರ ಈ ಬಗ್ಗೆ ಸಚಿವ ಸಂಪುಟದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ಸರ್ಕಾರ ತನಿಖೆಗೆ ಸೂಚಿಸುವ ಮೂಲಕ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದಿಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದು, ಬಿಜೆಪಿಯವರು ನನ್ನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ, ನಮ್ಮ ಸರ್ಕಾರ ದ್ವೇಷದ ರಾಜಕಾರಣ ಮಾಡುವುದಿಲ್ಲ, ಆದರೆ ತಪ್ಪು ಮಾಡಿದವರ ಮೇಲೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಕಡಕ್ಕಾಗಿ ಹೇಳಿದರು.

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಹಾಗೂ ಕೇಂದ್ರ ಜಾರಿ ನಿರ್ದೇಶನಾಲಯದ ತನಿಖೆಗಳು ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ,ಈ ಪ್ರಕರಣದ ಬಗ್ಗೆ ಎಸ್ ಐ ಟಿಯವರೂ ತನಿಖೆ ಮಾಡಿ ಚಾರ್ಜ್ ಶೀಟ್ ಸಲ್ಲಿಸಿದ್ದು, ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ಇತರ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರಲ್ಲಾ ಎಂದು ಕೇಳಿದ್ದಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲದಿರುವಾಗ ಆ ಪ್ರಶ್ನೆ ಉದ್ಭವಿಸುವುದಿಲ್ಲ, ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿ ಸರ್ಕಾರದ ಹಗರಣಗಳ ತನಿಖೆ: ಸಚಿವಸಂಪುಟ ಉಪ ಸಮಿತಿ ರಚನೆ- ಸಿಎಂ Read More

ಕುವೆಂಪು,ಅಂಬೇಡ್ಕರ್,ಬಸವಣ್ಣನವರ ಮಾನವೀಯ ಮೌಲ್ಯದ ನೆಲೆ ಕರ್ನಾಟಕ- ಸಿಎಂ

ಬೆಂಗಳೂರು: ಕರ್ನಾಟಕ ರಾಜ್ಯ ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಬೆಂಗಳೂರಿನ ಶಿವಾಜಿನಗರದ ಐತಿಹಾಸಿಕ ಬೆಸಿಲಿಕಾ ಚರ್ಚ್ ನಲ್ಲಿ ನಡೆದ ಸೇಂಟ್ ಮೇರಿ ಅಮ್ಮನವರ ಹುಟ್ಟು ಹಬ್ಬದ ಆಚರಣೆಗೆ ಚಾಲನೆ ನೀಡಿ ಸಿಎಂ ಮಾತನಾಡಿದರು.

ಕಪಟಿಗಳ ದ್ವೇಷದ ಪಿತೂರಿಗೆ ಮಹನೀಯರ ಮಾನವೀಯ ಆಶಯಗಳು ಬಲಿಯಾಗಬಾರದು, ಪರಸ್ಪರ ಸಹಬಾಳ್ವೆ, ಸೌಹಾರ್ದದ ಬೆಸುಗೆಯನ್ನು ನಾವೆಲ್ಲರೂ ಗಟ್ಟಿಗೊಳಿಸಬೇಕು ಎಂದು ಹೇಳಿದರು.

ಶಿವಾಜಿನಗರದ ಬೆಸಿಲಿಕಾ ಮಂದಿರ ಚಾರಿತ್ರಿಕವಾಗಿ ಸೌಹಾರ್ದ ಮಂದಿರವಾಗಿದೆ. ಎಲ್ಲಾ ಜಾತಿ, ಧರ್ಮದವರು ಈ ಪ್ರಾರ್ಥನಾ ಮಂದಿರಕ್ಕೆ ನಿರಂತರವಾಗಿ ಬಂದು ಹೋಗುತ್ತಿರುವುದೇ ಈ ಮಂದಿರದ ಸೌಹಾರ್ದ ಪರಂಪರೆಗೆ ಸಾಕ್ಷಿ ಎಂದು ನುಡಿದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಧರ್ಮ ಗುರುಗಳ ಮತ್ತು ಸಂಸ್ಥೆಗಳ ಕೊಡುಗೆಯನ್ನು ಪ್ರತಿಯೊಬ್ಬರೂ ಮೆಚ್ಚಿಕೊಳ್ಳುತ್ತಾರೆ, ಇವರ ಸಾಮಾಜಿಕ‌ ಕಾರ್ಯ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.

ಬೆಸಿಲಿಕಾ ಚರ್ಚ್ ಅಭಿವೃದ್ಧಿಗೆ ಐದು ಕೋಟಿ ನೆರವು ನೀಡುವುದಾಗಿ ಎಂದು ಸಿಎಂ ಭರವಸೆ ನೀಡಿದರು.

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ರು. ಆರ್ಚ್ ಬಿಷಪ್ ಡಾ.ಪೀಟರ್ ಮಚಾಡೊ ಅವರು ದಿವ್ಯ ಸಾನಿದ್ಯ ವಹಿಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತಿತರರು ಪಾಲ್ಗೊಂಡಿದ್ದರು.

ಕುವೆಂಪು,ಅಂಬೇಡ್ಕರ್,ಬಸವಣ್ಣನವರ ಮಾನವೀಯ ಮೌಲ್ಯದ ನೆಲೆ ಕರ್ನಾಟಕ- ಸಿಎಂ Read More

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ದುನಿಯಾ ವಿಜಯ್‌ ಎರಡನೇ ಪುತ್ರಿ ಮೋನೀಷಾ

ಬೆಂಗಳೂರು: ನಟ ದುನಿಯಾ ವಿಜಯ್‌ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾಗೆ ವಿಜಯ್ ಅವರ ಎರಡನೇ ಮಗಳು ಮೋನಿಷಾ ನಾಯಕಿಯಾಗುವ ಮೂಲಕ
ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ತಂದೆಯ ಸಿನಿಮಾ ಮೂಲಕವೇ ಮೋನಿಷಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವುದು ವಿಶೇಷ, ವಿಜಯ್ ಅವರ ಮೊದಲ ಪುತ್ರಿ ರಿತನ್ಯಾ ಈಗಾಗಲೇ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದು,ಈಗ ಎರಡನೇ ಮಗಳು ಮೋನಿಷಾ ಕೂಡ ಬೆಳ್ಳಿತೆರೆಗೆ ಪ್ರವೇಶಿಸಿದ್ದಾರೆ.

ಮೋನಿಷಾ ನಟನೆಯ ಮೊದಲ ಸಿನಿಮಾ ಹಾಗೂ ದುನಿಯಾ ವಿಜಯ್‌ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾದ ಹೆಸರನ್ನು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬಹಿರಂಗ ಪಡಿಸಲಾಗಿದೆ.

ಮೋನಿಷಾ ಅವರ ಮೊದಲ ಚಿತ್ರಕ್ಕೆ ‘ಸಿಟಿ ಲೈಟ್ಸ್’ ಎಂದು ಹೆಸರಿಡಲಾಗಿದ್ದು, ಜವಾಬ್ದಾರಿ ದೀಪಗಳು ಎಂಬ ಟ್ಯಾಗ್‌ ಲೈನ್‌ ನೀಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊದಲ ಸಿನಿಮಾದ ಸಂತಸವನ್ನು ಹಂಚಿಕೊಂಡಿರುವ ಮೋನಿಷಾ, ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಶುಭದಿನದಂದು ನಿಮ್ಮೊಂದಿಗೆ ನನ್ನ ಮೊದಲನೆಯ ಚಿತ್ರ ‘ಸಿಟಿ ಲೈಟ್ಸ್’ ನ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದೇನೆ. ಇಂತಹ ಅದ್ಭುತ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಮತ್ತು ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ದುನಿಯಾ ವಿಜಯ್‌ ಎರಡನೇ ಪುತ್ರಿ ಮೋನೀಷಾ Read More