ಬೆಂಗಳೂರು: ಕರ್ನಾಟಕ ಮೂಲಸೌಕರ್ಯ ಅಭಿವದ್ಧಿ ನಿಗಮದ ಕೊಪ್ಪಳ ವಿಭಾಗದಲ್ಲಿ 93ಕ್ಕೂ ಹೆಚ್ಚು ಕಾಮಗಾರಿಗಳ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸಿ 62 ಕೋಟಿ ರೂಪಾಯಿ ಗೋಲ್ಮಾಲ್ ನಡೆದಿರುವ ಹಗರಣ ಬೆಳಕಿಗೆ ಬಂದಿದ್ದು ಕಾಂಗ್ರೆಸ್ ಸರ್ಕಾರದ ಮತ್ತೊಂದು ಭ್ರಷ್ಟಾಚಾರ ಬಯಲಿಗೆ ಬಂದಿದೆ ಎಂದು ಆರ್.ಅಶೋಕ್ ದೂರಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ, ಅಕ್ರಮ, ಲೂಟಿ, ಅವ್ಯವಹಾರ ನಡೆಯದ ಒಂದಾದರೂ ಇಲಾಖೆ, ನಿಗಮ, ಮಂಡಳಿ ಇದೆಯೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಾರವಾಗಿ ಪ್ರಶ್ನಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಆಯ್ತು ಮೂಡಾ ಆಯ್ತು, ಈಗ ಕೆಆರ್ ಐಡಿಎಲ್ ನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ನಿಮ್ಮ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿ ಎಂದು ಅವರು ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ
ಬೆಂಗಳೂರು: ಮೂಡಾ ಹಗರಣದಿಂದ ಬಚಾವಾಗಲು, ಅಧಿಕಾರ ಹಂಚಿಕೆಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ರಣತಂತ್ರ ಹಣೆಯುವಲ್ಲಿ ಬಿಸಿ ಆಗಿರುವ ಸಿಎಂಗೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಪಾವತಿ ಆಗದುರುವುದು ಗೊತ್ತಿಲ್ಲವಂತೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಕಯರಿತು ಟ್ವೀಟ್ ಮಾಡುರುವ ಅಶೋಕ್ ಔಟ್ ಗೋಯಿಂಗ್ ಸುಎಂ ಸಿದ್ದರಾಮಯ್ಯನವರೇ,ತಮಗೆ ಗೊತ್ತಿಲ್ಲದೆ ತಮ್ಮ ಸರ್ಕಾರದಲ್ಲಿ ಇನ್ನೂ ಏನೇನು ಕರ್ಮಕಾಂಡ ನಡೆಯುತ್ತಿದೆಯೋ ಆ ಪರಮಾತ್ಮನಿಗೆ ಗೊತ್ತು ಎಂದು ಕಾಲೆಳೆದಿದ್ದಾರೆ.
ತಮಗೆ ಗೊತ್ತಿಲ್ಲದೆ ಯಾವ್ಯಾವ ಮಂತ್ರಿಗಳು, ಯಾವ್ಯಾವ ಶಾಸಕರು ಅದೆಷ್ಟು ಲೂಟಿ ಹೊಡೆಯುತ್ತಿದ್ದಾರೋ ಆ ದೇವರೇ ಬಲ್ಲ.
ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವುದಕ್ಕಿಂತ ಈಗಲಾದರೂ ರಾಜೀನಾಮೆ ಕೊಟ್ಟು ಗೌರವದಿಂದ ನಿರ್ಗಮಿಸಿ. ತಾವು ಕುರ್ಚಿಗೆ ಅಂಟಿಕೊಂಡು ಕೂತಷ್ಟೂ ತಮ್ಮ ಗೌರವ, ವರ್ಚಸ್ಸು ಮತ್ತಷ್ಟು ಕಡಿಮೆ ಆಗುವುದಂತೂ ಗ್ಯಾರೆಂಟಿ ಎಂದು ಅಶೋಕ್ ಎಚ್ಚರಿಸಿದ್ದಾರೆ.
ಬೆಂಗಳೂರು: ಮುಡಾ ಕೇಸ್ ತನಿಖೆಯನ್ನ ಹೈಕೋರ್ಟ್, ಸಿಬಿಐಗೆ ಕೊಡೋದು ಬೇಡ ಅಂತ ಹೇಳಿದೆಯೇ ಹೊರತು ಸಿದ್ದರಾಮಯ್ಯ ಮತ್ತು ಅವರ ಕುಟುಂಬ ನಿರಪರಾಧಿ ಅಂತ ಹೇಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಮುಡಾ ಕೇಸನ್ನು ಸಿಬಿಐ ತನಿಖೆಗೆ ಕೊಡಬೇಕು ಎಂಬ ಅರ್ಜಿಯನ್ನ ಹೈಕೋರ್ಟ್ ವಜಾ ಮಾಡಿದ ವಿಚಾರಕ್ಕೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಸ್ನೇಹಮಯಿ ಕೃಷ್ಣ ಹೈಕೋರ್ಟ್‌ನಲ್ಲಿ ಮುಡಾ ಕೇಸನ್ನು ಸಿಬಿಐ ತನಿಖೆಗೆ ವಹಿಸಬೇಕು ಅಂತ ಅರ್ಜಿ ಹಾಕಿದ್ದರು ಕೋರ್ಟ್ ಅವರ ಅರ್ಜಿ ವಜಾ ಮಾಡಿದೆ. ಸಿಬಿಐಗೆ ಕೊಡೋ ಅರ್ಜಿ ಮಾತ್ರ ಕೋರ್ಟ್ ವಜಾ ಮಾಡಿದೆ. ಆದರೆ, ಸಿದ್ದರಾಮಯ್ಯ ನಿರಪರಾಧಿ ಅಂತ ಹೇಳಿಲ್ಲ ಎಂದು ತಿಳಿಸಿದರು.
ಬಿಜೆಪಿ ಮುಡಾ ಅಕ್ರಮದ ವಿರುದ್ದ ಹೋರಾಟ ಮಾಡಿತ್ತು. ಪಾದಯಾತ್ರೆ ಕೂಡಾ ಮಾಡಿತ್ತು, ಕೋರ್ಟ್ ತೀರ್ಪಿನಿಂದ ನಮ್ಮ ಹೋರಾಟಕ್ಕೆ ಹಿನ್ನಡೆ ಆಗಿಲ್ಲ,ಮುಡಾ ಅಕ್ರಮದ ಬಗ್ಗೆ ಇಡಿ, ಲೋಕಾಯುಕ್ತ ತನಿಖೆ ನಡೆಯುತ್ತಿದೆ,ಮುಂದೇನಾಗಲಿದೆ ನೋಡೋಣ ಎಂದು ಹೇಳಿದರು.
ನಾವು ಹೋರಾಟ ಮಾಡಿದ್ದು ಸಿಎಂ ಮತ್ತು ಅವರ ಕುಟುಂಬ ಮುಡಾ ಅಕ್ರಮದಲ್ಲಿ ಭಾಗಿಯಾಗಿದೆ ಅಂತ,ನಮ್ಮ ಆರೋಪಕ್ಕೆ ನಾವು ಈಗಲೂ ಬದ್ಧ ಎಂದು ವಿಜಯೇಂದ್ರ ತಿಳಿಸಿದರು.
ಬೆಂಗಳೂರು: ಕೆರೆಗಳ ಉಳಿವಿಗೆ ಹೋರಾಟ ಮಾಡಯೇ ಮಾಡುತ್ತೇವೆ, ಸರ್ಕಾರ ಎಷ್ಟೇ ಕೇಸುಗಳನ್ನು ಹಾಕಿದರು ನಾವು ಬಗ್ಗುವುದಿಲ್ಲ ಜಗ್ಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದರು.
ಗುರುವಾರ ಹೇರೋಹಳ್ಳಿ ಕೆರೆ ವೀಕ್ಷಣೆ ಮಾಡಿ ಸ್ಥಳೀಯ ಶಾಸಕರು ಕೆರೆ ಅಭಿವೃದ್ಧಿಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೆರೆ ವೀಕ್ಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರು ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಕೆರೆಗಳ ಉಳಿವಿಗಾಗಿ ಆಮ್ ಆದ್ಮಿ ಪಕ್ಷ ಎಲ್ಲಾ ರೀತಿಯ ಹೋರಾಟಗಳಿಗೂ ಸರ್ವಸನ್ನದ್ಧವಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಹೇರೋಹಳ್ಳಿ ಕೆರೆ ಹೋರಾಟದ ಸಂದರ್ಭದಲ್ಲಿ ಪಕ್ಷದ ನಾಯಕರುಗಳ ಮೇಲೆ ಸ್ಥಳೀಯ ಶಾಸಕ ಎಸ್ ಟಿ ಸೋಮಶೇಖರ್ ಒತ್ತಡದ ಮೇಲೆ ಪೊಲೀಸರು ಕ್ರಿಮಿನಲ್ ಮೊಕದ್ದಮೆಯನ್ನು ಹಾಕಿದ್ದಾರೆ.ಆದರೆ ಇಂತಹ ಎಷ್ಟೇ ಕೇಸುಗಳನ್ನು ಹಾಕಿದರೂ ನಾವು ಜಗ್ಗುವುದಿಲ್ಲ ಎಂದು ತಿಳಿಸಿದರು.
ಕೆರೆಗಳನ್ನು ಒತ್ತುವರಿ ಮಾಡಿರುವ ರಿಯಲ್ ಎಸ್ಟೇಟ್ ಮಾಫಿಯಾ ಗಳ ವಿರುದ್ಧ ಪಕ್ಷ ಹೋರಾಟ ಮಾಡುತ್ತದೆ. ಎಲ್ಲಾ ಕೆರೆಗಳಲ್ಲಿ ಎಸ್ ಟಿ ಪಿ ಘಟಕಗಳನ್ನು ತೆರೆಯಬೇಕು , ನಾಗರಿಕ ಸೌಲಭ್ಯಕ್ಕಾಗಿ ಶೌಚಾಲಯ ಉತ್ತಮ ಟ್ರ್ಯಾಕ್ ಗಳು ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಅವರು ಮಾತನಾಡಿ,ಇಂದು ಯಶವಂತಪುರ ಕ್ಷೇತ್ರಕ್ಕೆ ಬರಲು ಶಾಸಕರ ವೀಸಾ ಅಗತ್ಯವಾಗಿದೆ ಎಂದು ವ್ಯಂಗ್ಯ ವಾಡಿದರು.
ಸ್ಥಳೀಯ ಸಮಸ್ಯೆಗಳ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ಅವರುಗಳ ಮೇಲೆ ಪೊಲೀಸ್ ಕೇಸುಗಳನ್ನು ಹಾಕಿಸುವ ಮೂಲಕ ಶಾಸಕರು ನಡೆಸುತ್ತಿರುವ ದಬ್ಬಾಳಿಕೆ – ದೌರ್ಜನ್ಯಗಳನ್ನು ಪಕ್ಷವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ,ಜನ ಸಾಮಾನ್ಯರ ಹಿತಕ್ಕಾಗಿ ಪಕ್ಷದ ಕಾರ್ಯಕರ್ತರು ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದಾರೆ ಯಶವಂತಪುರ ರಿಪಬ್ಲಿಕ್ ಮಾಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್, ಜಗದೀಶ್ ಚಂದ್ರ, ಶಶಿಧರ್ ಆರಾಧ್ಯ , ಡಾ. ದಿನೇಶ್ ಕುಮಾರ್ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.