ಮಾಜಿ ಸಚಿವ ಎಚ್.ವೈ. ಮೇಟಿ‌ ವಿಧಿವಶ

ಬೆಂಗಳೂರು: ಕಾಂಗ್ರಸ್ ಮುಖಂಡ, ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.

ಅವರಿಗೆ 79 ವರ್ಷ ವಯಸ್ಸಾಗಿತ್ತು, ಅವರು ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆ ಹಾಗೂ ಇತರ ವಯೋಸಹಜ ಕಾಯಿಲೆಯಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಎಂ.ವೈ.ಮೇಟಿ ಅವರು ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. 1989ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು.

1994ರಲ್ಲಿಯೂ ಆಯ್ಕೆಯಾಗಿದ್ದ ಅವರು, ಅರಣ್ಯ ಇಲಾಖೆ ಸಚಿವರಾಗಿದ್ದರು. 1996 ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಕ್ಷೇತ್ರ ವಿಂಗಡಣೆ ಸಂದರ್ಭದಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರ ರದ್ದಾಗಿದ್ದರಿಂದ 2008ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಬಾಗಲಕೋಟೆ ವಿಧಸನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು.

2013ರಲ್ಲಿ ಗೆಲುವು ಸಾಧಿಸಿ, ಅಬಕಾರಿ ಸಚಿವರಾಗಿದ್ದರು. 2018ರಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

2023ರ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಗೆದ್ದು ಶಾಸಕರಾದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಮೇಟಿ ಅವರು ಇಬ್ಬರು ಪುತ್ರತು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗ ಮತ್ತು ‌ಅಭಿಮಾನಿಗಳನ್ನು ಅಗಲಿದ್ದಾರೆ.

ಅನಾರೋಗ್ಯದ ವಿಷಯ ತಿಳಿಯುತ್ತಿದ್ದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತಿತರರು‌ ಆಸ್ಪತ್ರೆಗೆ ‌ಭೇಟಿ ನೀಡಿ ಆರೋಗ್ಯ‌‌‌ ವಿಚಾರಿಸಿದ್ದರು.

ಚಿಕಿತ್ಸೆ ‌ಫಲಕಾರಿಯಾಗದೆ ಇಂದು ಮೇಟಿ ಇಹಲೋಕ ತೆಜಿಸಿದ್ದಾರೆ.

ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಎಚ್.ವೈ. ಮೇಟಿ‌ ವಿಧಿವಶ Read More

ನದಿಯಲ್ಲಿ ಸೈನಿಕ,ಬಾಲಕ ಜಲ ಸಮಾಧಿ

ಬಾಗಲಕೋಟ: ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಬಾಲಕನ ರಕ್ಷಣೆಗೆ ಮುಂದಾದ ಸೈನಿಕ ಹಾಗೂ ಬಾಲಕ ಇಬ್ಬರೂ ಜಲಸಮಾಧಿಯಾದ ದಾರುಣ ಘಟನೆ ‌ಬಾಗಕಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಮಣೇರಿ ಗ್ರಾಮದ ಮಲಪ್ರಭಾ ನದಿಯಲ್ಲಿ ಹಂಸನೂರ ಗ್ರಾಮದ ಶೇಖಪ್ಪ ಮುತ್ತಪ್ಪ ಮೂಲಿಮನಿ(15) ಎಂಬಾತ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಈ ಈ ವೇಳೆ ಈಜು ಬಾರದೆ ಪರದಾಡಿದ್ದಾನೆ.

ಈ ವೇಳೆ ಅದೇ ಮಾರ್ಗದಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ (25) ಸಾಗುತ್ತಿದ್ದರು. ಬಾಲಕನ ಕಿರುಚಾಟ ಕೇಳಿ ರಕ್ಷಣೆಗೆಂದು ನದಿಗೆ ಹಾರಿದ್ದಾರೆ.

ಆಗ ಈಜು ಬಾರದ ಶೇಖಪ್ಪ ಭಯದಿಂದ ಮಹಾಂತೇಶ ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಇದರಿಂದ ಮಹಾಂತೇಶಗೆ ಕೂಡ ಈಜಲು ಸಾಧ್ಯವಾಗದೇ ಇಬ್ಬರು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಎರಡು ಮೃತದೇಹವನ್ನು ಹೊರ ತೆಗೆದಿದ್ದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನದಿಯಲ್ಲಿ ಸೈನಿಕ,ಬಾಲಕ ಜಲ ಸಮಾಧಿ Read More

ನಾಳೆಯಿಂದ ಬಾವಲತ್ತಿಯ ಶ್ರೀ ಲಕ್ಷ್ಮೀ ರಂಗನಾಥ ಜಾತ್ರೆ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾವಲತ್ತಿ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

ಈ ವರ್ಷದ ಕ್ಯಾಲೆಂಡರ್ ಪ್ರಕಾರ ಜಾತ್ರೆಗೆ 9 ಪೂಜೆಗಳು ಬಂದಿವೆ.ಎಂಟು ದಿನ ಪ್ರತಿ ಸಾಯಂಕಾಲ ಚಿಕ್ಕ ರಥೋತ್ಸವ ಜರುಗಿದರೆ ಒಂಭತ್ತನೆಯ ದಿನ ಮಹಾ ರಥೋತ್ಸವ ಜರುಗಲಿದೆ.

ಗರುಡ ಪಟ್ಟ ,ಸಮರಾಜ್ಞೆಯಂತಹ ವಿಶೇಷ ಪೂಜಾ ಕೈಂಕರ್ಯಗಳು ಕೂಡ ನಡೆಯುತ್ತವೆ.ಸೊಗಸಾಗಿ ಮೆಟ್ಟಿನ ಪದಗಳನ್ನು ಹಾಡಲಾಗುತ್ತದೆ.

ಶ್ರೀ ಲಕ್ಷ್ಮೀ ರಂಗನಾಥನ ದೇವಸ್ಥಾನದ ಸೇವಕಾರರು ಅತ್ಯಂತ ಶ್ರದ್ಧಾ,ಭಕ್ತಿ,ನಿಷ್ಠೆಯಿಂದ ಸ್ವಾಮಿಯ ಸೇವೆ ಮಾಡುತ್ತಾರೆ. ಗ್ರಾಮದ ಸಮಸ್ತ ಗುರು ಹಿರಿಯರು ಮುಂದೆ ನಿಂತು ಜಾತ್ರೆ ಅಚ್ಚುಕಟ್ಟಾಗಿ ನೆರವೇರುವಂತೆ ಮಾಡುತ್ತಾರೆ.

ನಾಳೆ ಶನಿವಾರ ರಥೋತ್ಸವ ಜರುಗುತ್ತದೆ. ಎರಡನೆಯ ದಿನ ಅಂದರೆ ರವಿವಾರ ಶ್ರೀ ಲಕ್ಷ್ಮೀ ರಂಗನಾಥನ ನೀರೊಕಳಿ ನಡೆಯಲಿದೆ. ಅಂದೇ ಮದ್ಯಾಹ್ನ ಆಲದ ಮರದ ಕೆಳಗೆ ಮೆಟ್ಟಿನ ಪದಗಳನ್ನೂ ಕೂಡ ಎಲ್ಲರೂ ಕೇಳಿ ಮನತುಂಬಿಕೊಳ್ಳಬಹುದು.

ಮೂರನೆಯ ಹಾಗೂ ಕೊನೆ ದಿನ ಅಂದರೆ ಸೋಮವಾರ ಏ.೧೪ ರಂದು ಶ್ರೀ ಗುಡ್ಡದ ತಿಮ್ಮಯ್ಯನ ಸನ್ನಿಧಾನದಲ್ಲಿ ಸಾಮೂಹಿಕ ದಿಂಡರಕಿ ಹಾಗೂ ಹರಿಸ್ಯಾವಿಗೆ ಪದ್ದತಿ ನೆರವೇರಲಿದೆ.

ಜತೆಗೆ ಇನ್ನೂ ಹತ್ತು ಹಲವಾರು ಪೂಜಾ ಕೈಂಕರ್ಯಗಳು ಜಾತ್ರಾ ಸಮಯದಲ್ಲಿ ನೆರವೇರಲಿವೆ.

ಸಕಲ ಸದ್ಭಕ್ತರು ಜಾತ್ರೆಗೆ ಆಗಮಿಸಿ ಭಗವಂತನ ಕೃಪಾಶೀರ್ವಾದ ಪಡೆಯಬೇಕೆಂದು ಬಾವಲತ್ತಿ ಗ್ರಾಮದ ಯುವ ಸಾಹಿತಿ ರಾ.ಹ ಕೊಂಡಕೇರ ಮನವಿ ಮಾಡಿದ್ದಾರೆ.

ನಾಳೆಯಿಂದ ಬಾವಲತ್ತಿಯ ಶ್ರೀ ಲಕ್ಷ್ಮೀ ರಂಗನಾಥ ಜಾತ್ರೆ Read More

ಸಿ.ಟಿ ರವಿ ಅವರನ್ನ ಮುಗಿಸೊ ಯೋಚನೆ ಇತ್ತೇನೊ:ಜೋಶಿ ವಿವಾದಾತ್ಮಕ ನುಡಿ

ಬಾಗಲಕೋಟೆ: ಮಾಧ್ಯಮದವರು ಇಲ್ಲದೇ ಇದ್ದಿದ್ದರೆ ಸಿ.ಟಿ ರವಿ ಅವರನ್ನ ಫೇಕ್‌ ಎನ್‌ಕೌಂಟರ್‌ ಮಾಡುವ ವಿಚಾರ ಅಲ್ಲಿನ ಪೊಲೀಸ್‌ ತಂಡಕ್ಕೆ ಇತ್ತೇನೊ ಅನ್ನಸ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿವಾದಾತ್ಮಕವಾಗಿ ನುಡಿದಿದ್ದಾರೆ.

ಸಿ.ಟಿ ರವಿ ಅವರನ್ನು ಬಂಧಿಸಿದ್ದ ವಿಚಾರ ಕುರಿತು ಬಾಗಲಕೋಟೆಯಲ್ಲಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು, ಅವಕಾಶ ಸಿಕ್ಕಿದ್ದರೆ ಸಿ.ಟಿ ರವಿ ಅವರನ್ನು ಮುಗಿಸಬೇಕು ಅಂತಾ ಯೋಚನೆ ಮಾಡಿದ್ದರೇನೊ ಅನ್ನಿಸ್ತಿದೆ, ಆದರೆ ಅವರಿಗೆ ಸರಿಯಾದ ಅವಕಾಶ ಸಿಕ್ಕಿಲ್ಲ,ಏಕೆಂದರೆ ಆಗ ನಮ್ಮ ಮತ್ತೊಬ್ಬರು ಎಂಎಲ್‌ಸಿ ಕೇಶವ್‌ ಪ್ರಸಾದ್‌ ಜೊತೆಯಲ್ಲಿದ್ದರು. ಮಾಧ್ಯಮದವರಿಂದ ನಮಗೆ ಲೈವ್‌ ಲೊಕೇಶನ್‌ ಸಿಗ್ತಾ ಇತ್ತು ಎಂದು ಹೇಳಿದ್ದಾರೆ.

ನಿಜ ಹೇಳಬೇಕಂದರೆ ನಾವು ಮಾಧ್ಯಮದವರಿಗೆ ಧನ್ಯವಾದ ಹೇಳಬೇಕು. ಅಷ್ಟು ರಾತ್ರಿಯಲ್ಲೂ ಪೊಲೀಸರ ಬೆನ್ನತ್ತಿ, ವಿಡಿಯೋ ಮಾಡಿ, ಲೈವ್‌ ಲೊಕೇಶನ್‌ ಹಾಕ್ತಾ ಇದ್ರು ಹಾಗಾಗಿ ಸಿ.ಟಿ ರವಿ ಅವರನ್ನ ಮುಗಿಸಲು ಅವಕಾಶ ಸಿಕ್ಕಿರಲಿಲ್ಲ ಎಂದು ತಿಳಿಸಿದ್ದಾರೆ.

ಇದು ಸಂಪೂರ್ಣವಾಗಿ ಗೃಹ ಇಲಾಖೆಯ ವೈಫಲ್ಯ, ಹಾಗಾಗಿ ನಾವು ಈ ವಿಷಯವನ್ನ ಇಲ್ಲಿಗೆ ಬಿಡುವುದಿಲ್ಲ,ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಜೋಶಿ ಹೇಳಿದರು.

ಈಗಾಗಲೇ ನಾನು, ಸಿ.ಟಿ ರವಿ ಅವರಿಗೆ ಸೂಕ್ತ ಕಾನೂನು ಸಲಹೆ ಪಡೆಯುವಂತೆ ಹೇಳಿದ್ದೇನೆ. ಈ ಕುತಂತ್ರದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕು,ಅದಕ್ಕಾಗಿ ನಾವು ಕೋರ್ಟ್‌ಗೆ ಹೋಗುತ್ತೇವೆ ಎಂದು ತಿಳಿಸಿದರು.

ಸಿ.ಟಿ ರವಿ ಅವಹೇಳನಕಾರಿ ಶಬ್ದ ಬಳಸಿದಕ್ಕೆ ಎನ್ಕೌಂಟರ್ ಮಾಡಹೊರಟ್ಟಿದ್ದಾ ಎಂಬ ಪ್ರಶ್ನೆಗೆ, ಅದೊಂದೇ ಕಾರಣ ಅಂತ ಹೇಳೋದಿಲ್ಲ. ಈ ರೀತಿ ಒಬ್ಬರನ್ನ ಎನ್‌ಕೌಂಟರ್‌ ಮಾಡಿದರೆ ಬಿಜೆಪಿನೋರು ಮುಂದೆ ಯಾವುದೇ ಚಟುವಟಿಕೆ ಮಾಡದೆ ಹೆದರಿ ಮೂಲೆ ಸೇರುತ್ತಾರೆ ಅಂತ ಭಯ ಸೃಷ್ಟಿ ಮಾಡುವ ಪ್ರಯತ್ನ ಇರಬಹುದು ಎಂದು ಮಾರ್ಮಿಕವಾಗಿ ನುಡಿದರು.

ಪೊಲೀಸರು ರಾಜಕೀಯ ಕೈಗೊಂಬೆಗಳಾಗಿ ವರ್ತಿಸಬಾರದು,ಏಕೆಂದರೆ ಮುಂದೆ ಸರ್ಕಾರ ಬದಲಾಗುತ್ತೆ, ಅಧಿಕಾರಕ್ಕೆ ಯಾರು ಬರುತ್ತಾರೊ, ಚೇಂಜ್ ಆಗುತ್ತಾ ಇರುತ್ತೆ ಎಂಬುದನ್ನ ನೆನಪಿಟ್ಟುಕೊಳ್ಳಬೇಕು ಎಂದು ಕಟು ಎಚ್ವರಿಕೆ‌ ನೀಡಿದರು ಪ್ರಹ್ಲಾದ ಜೋಶಿ.

ಸಿ.ಟಿ ರವಿ ಅವರನ್ನ ಮುಗಿಸೊ ಯೋಚನೆ ಇತ್ತೇನೊ:ಜೋಶಿ ವಿವಾದಾತ್ಮಕ ನುಡಿ Read More

ಕೋ ಆಪರೇಟೀವ್ ಮ್ಯಾನೇಜ್ ಮೆಂಟ್ ಪದವೀಧರರಿಗೆ ಉದ್ಯೋಗದಲ್ಲಿ ಮೀಸಲಾತಿ:ಪರಿಶೀಲಿಸಿ ಕ್ರಮ-ಸಿಎಂ

ಬಾಗಲಕೋಟೆ: ಕೋ ಆಪರೇಟೀವ್ ಮ್ಯಾನೇಜ್ ಮೆಂಟ್ ಪದವೀಧರರಿಗೆ ಉದ್ಯೋಗದಲ್ಲಿ ಮೀಸಲಾತಿ ತರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಆಯೋಜಿಸಿದ್ದ 71ನೇ ಅಖಿಲ‌ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ, 2024 ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ವಿತರಿಸಿ ಸಿಎಂ ಮಾತನಾಡಿದರು.

ನಾನು ಯಾವತ್ತೂ ಸಹಕಾರಿ ಚಳವಳಿ ಮತ್ತು ಸಹಕಾರಿ ತತ್ವದ ಪರವಾಗಿ ಇರುವವನು. ಈ ಕಾರಣಕ್ಕೆ ಸಹಕಾರ ಇಲಾಖೆಯ ನೇಮಕಾತಿಗಳಲ್ಲಿ ಕೋಆಪರೇಟೀವ್ ಮ್ಯಾನೇಜ್ ಮೆಂಟ್ ಪದವಿ, ಡಿಪ್ಲಮೋ ಪಡೆದವರಿಗೆ ಮೀಸಲಾತಿ ನೀಡುವ ಪರವಾಗಿದ್ದೀನಿ ಎಂದರು.

ರಾಜ್ಯದಲ್ಲಿ ಸಹಕಾರಿ ಚಳವಳಿ 1904 ರಲ್ಲೇ ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭವಾಗಿತ್ತು. 1905 ರಲ್ಲಿ ಸಹಕಾರಿ ನಿಯಮಗಳು ಜಾರಿಗೆ ಬಂದವು. ಸ್ವಾತಂತ್ರ್ಯಾ ನಂತರ ನೆಹರೂ ಅವರು ದೇಶದ ಪ್ರಧಾನಿಯಾಗಿ ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ಕೊಟ್ಟಿದ್ದರಿಂದ ಸಹಕಾರಿ ಚಳವಳಿ ದೇಶವ್ಯಾಪಿ ವ್ಯಾಪಿಸಲು ಸಹಕಾರಿಯಾಯ್ತು ಎಂದು ತಿಳಿಸಿದರು.

ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಹೆಚ್ಚೆಚ್ಚು ಸಹಕಾರಿ ಚಳವಳಿಯಲ್ಲಿ ತೊಡಗಿಸಿಕೊಳ್ಳಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ಸಂಘಗಳಿಗೆ ಈ ಸಮುದಾಯದ ಯುವಕ/ ಯುವತಿಯರನ್ನು ಉಚಿತವಾಗಿ ಸದಸ್ಯರನ್ನಾಗಿ ಮಾಡಿದ್ದೆ. ಈಗಲೂ ಇದು ಮುಂದುವರೆಯಬೇಕು ಎಂದು ಕರೆ ಸಿಎಂ ನೀಡಿದರು.

ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಮತ್ತು ಇವರಿಂದ ಹೆಚ್ಚೆಚ್ಚು ಹಾಲನ್ನು ಖರೀದಿಸಬೇಕು. ಸಹಕಾರ ಸಂಘಗಳ ಹಾಲಿಗೆ ಮಾರುಕಟ್ಟೆ ವಿಸ್ತರಿಸಬೇಕು.

ಪಂಚಾಯ್ತಿ, ಸೊಸೈಟಿ, ಶಾಲೆ ಈ ಮೂರೂ ಪ್ರತೀ ಗ್ರಾಮಗಳಲ್ಲಿ ಇರಲೇಬೇಕು. ಆಗಲೇ ಗ್ರಾಮಗಳ ಪ್ರಗತಿ ಸಾಧ್ಯ ಎನ್ನುವುದು ಮಹಾತ್ಮಗಾಂಧಿಯವರ ಆಶಯವಾಗಿತ್ತು‌ ಎಂದರು.

ರಾಜೀವ್ ಗಾಂಧಿಯವರು ಸಂವಿಧಾನಕ್ಕೆ ತಿದ್ದುಪಡಿ ತಂದು ಅಧಿಕಾರ ವಿಕೇಂದ್ರೀಕರಣ ಜಾರಿ ಮಾಡಿ ಮಹಿಳೆಯರು, ಹಿಂದುಳಿದವರು, ದಲಿತರ ಕೈಗೆ ಅಧಿಕಾರ ಸಿಗುವಂತೆ ಮಾಡಿದ್ದರು ಎಂದು ಸ್ಮರಿಸಿದರು.

ಸಹಕಾರ ಕ್ಷೇತ್ರ ರಾಜ್ಯ ವ್ಯಾಪ್ತಿಗೆ ಸೇರಿದ್ದು. ಆದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದಲ್ಲಿ ಸಹಕಾರ ಇಲಾಖೆ ಆರಂಭಿಸಿದರು. ಇದಕ್ಕೆ ಅಮಿತ್ ಶಾ ಅವರೇ ಸಚಿವರು‌. ಇದು ಕೇಂದ್ರದ ವ್ಯಾಪ್ತಿಗೆ ಬರುವ ವಿಷಯ ಅಲ್ಲ. ಇದರಿಂದಾಗಿ ನಮಗೆ ನಬಾರ್ಡ್ ನಿಂದ ಬರುವ ರೈತರ ಪಾಲಿನ ನೆರವು ಕಡಿತಗೊಂಡಿದೆ. ಒಮ್ಮೆಲೇ ಶೇ.58ರಷ್ಟು ನಬಾರ್ಡ್ ನೆರವು ಕಡಿತಗೊಂಡಿದೆ ಎಂದು ಸಿದ್ದರಾಮಯ್ಯ ಬೇಸರ‌ ವ್ಯಕ್ತಪಡಿಸಿದರು.

2013 ರಲ್ಲಿ 8165 ಕೋಟಿ ರೈತರ ಸಾಲವನ್ನು ನಾನು ಮೊದಲು ಬಾರಿ ಮುಖ್ಯಮಂತ್ರಿಯಾಗಿ ಮನ್ನಾ ಮಾಡಿದ್ದೆ. ಇದರಿಂದ ಸಹಸ್ರಾರು ರೈತರ ಬದುಕಿಗೆ ನೆರವಾಯಿತು ಎಂದರು.

ಸಹಕಾರ ಮಹಾಮಂಡಳದ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದ ನೆರವು ನೀಡಬೇಕೆಂಬ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದರು.‌

ಕೋ ಆಪರೇಟೀವ್ ಮ್ಯಾನೇಜ್ ಮೆಂಟ್ ಪದವೀಧರರಿಗೆ ಉದ್ಯೋಗದಲ್ಲಿ ಮೀಸಲಾತಿ:ಪರಿಶೀಲಿಸಿ ಕ್ರಮ-ಸಿಎಂ Read More