ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ:ದೇವಿಗೆ ಪುಷ್ಪ ನಮನ‌ ಸಲ್ಲಿಸಿದ ಬಾನು

ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 10 ರಿಂದ 10.40 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಿತು.

ನವವಧುವಿನಂತೆ ಶೃಂಗಾರಗೊಂಡಿದ್ದ ಚಾಮುಂಡಿ ಬೆಟ್ಟದ ಸಮೀಪದ ಬೃಹತ್ ವೇದಿಕೆಯಲ್ಲಿ ನಾಡಹಬ್ಬ 415ನೇ ದಸರಾ ಮಹೋತ್ಸವಕ್ಕೆ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತರಾದ ಭಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಉದ್ಘಾಟನಾ ಭಾಷಣ ಮಾಡಿದ ಬಾನು ಮುಷ್ತಾಕ್ ಅವರು,ದಸರಾ ಕೇವಲ ಹಬ್ಬವಲ್ಲ ಅದು ಶಾಂತಿಯ ಸಂಕೇತ, ಹೃದಯಗಳನ್ನು ಒಂದು ಮಾಡುವ ಸೌಹಾರ್ದತೆಯ ಸಾಂಸ್ಕೃತಿಕ‌ ಹಬ್ಬವಾಗಿದೆ ಎಂದು ಹೇಳಿದರು.

ಸಂಸ್ಕೃತಿಯೇ ನಮ್ಮ ಬೇರು, ನೂರಾರು ದೀಪಗಳನ್ನು ಬೆಳಗಿಸಿದ್ದೇನೆ, ಮಂಗಳಾರತಿ ಸ್ವೀಕರಿಸಿದ್ದೇನೆ, ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಹೇಳುವ ಮೂಲಕ ತಮ್ಮನ್ನು ವಿರೋಧಿಸಿದವರಿಗೆ ಅವರು ಟಾಂಗ್ ನೀಡಿದರು.

ಈ ನೆಲದ ಪರಂಪರೆ ಸರ್ವಜನಾಂಗದ ಶಾಂತಿಯ ತೋಟ ಅಂತ ಹೇಳುತ್ತದೆ,ಪ್ರತಿ ಹೂ ತನ್ನ ತೋಟದಲ್ಲಿ ಅರಳಲಿ, ಒಟ್ಟಿಗೆ ಸೇರಿದಾಗ ಎಲ್ಲರೂ ಒಂದಾಗಲಿ, ನಾವೆಲ್ಲರೂ ಒಂದೇ ಗಗನದ ಪಯಣಿಗರು, ಭೂಮಿ ಯಾರನ್ನು ಹೊರ ತಳ್ಳೋದಿಲ್ಲ, ಮನುಷ್ಯ ಮಾತ್ರ ಗಡಿ ಹಾಕುತ್ತಾನೆ, ಇದನ್ನು ನಾವೇ ಅಳಿಸಬೇಕು, ಅಕ್ಷರಗಳಿಂದ ನಾವು ಗೆಲ್ಲಬೇಕು ಎಂದು ವಿರೋಧ ಮಾಡಿದವರಿಗೆ ಭಾಷಣದ ಮೂಲಕ ಬಾನು ಮುಷ್ತಾಕ್ ಟಾಂಗ್ ಕೊಟ್ಟರು.

ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ನ್ಯಾಯದ ದೊರೆ ಆಗಿದ್ದರು. ಭೇದ ಭಾವ ತೋರಲಿಲ್ಲ. ಶಕ್ತಿಯನ್ನು ಹಂಚಿಕೊಂಡರೆ ಧೀರ್ಘ ಕಾಲ ಉಳಿಯುತ್ತೆ ಅಂತ ಹೇಳಿದ್ದಾರೆ ಎಂದು ಸ್ಮರಿಸಿದರು.

ನಾನು ಒಬ್ಬ ಸಾಹಿತಿ, ಲೇಖಕಿ. ಸಾಹಿತ್ಯದ ಮೂಲಕ ಸಂದೇಶ ಸಾರುತ್ತೇನೆ. 10 ವರ್ಷದ ಹಿಂದೆ ಬರೆದಿದ್ದ ಪ್ರಕಟಣೆ ಆಗಿದೆ, ಬಾಗಿನ ಅಂತ ಅದರ ಹೆಸರು. ಪ್ರೀತಿಯ ಸಮಾಜವ ಕಟ್ಟೋಣ ಎಲ್ಲರಿಗೂ ಸಮಪಾಲು ಸಮಬಾಳು ಇರಲಿ ಎಂದು ಬಾನು ಮುಷ್ತಾಕ್ ಹಾರೈಸಿದರು.

ನನ್ನ ಹಿಂದೂ ಧರ್ಮದ ಸಂಬಂಧ ನನ್ನ ಆತ್ಮಕಥೆಯಲ್ಲಿ ಬರೆದಿದ್ದೇನೆ. ಅದು ನಾಳೆ ಪ್ರಕಟ ಆಗತ್ತಿದೆ, ಎಷ್ಟೇ ಸವಾಲು ಬಂದರೂ ದಿಟ್ಟವಾಗಿ ನನ್ನನ್ನು ಆಹ್ವಾನ ನೀಡಿ ನೈತಿಕ ಬೆಂಬಲ ನೀಡಿದ ಮುಖ್ಯ ಮಂತ್ರಿಗಳು ಮತ್ತು ಜಿಲ್ಲಾಡಳಿತಕ್ಕೆ ನನ್ನ ಧನ್ಯವಾದಗಳು ಎಂದು ಬಾನು ಮುಸ್ತಾಕ್ ತಿಳಿಸಿದರು.

ಇದೇ ವೇಳೆ ಬಾನು ಮುಸ್ತಾಕ್ ಅವರು ರಚಿಸಿದ್ದ 10 ವರ್ಷ ಹಿಂದಿನ ಕವನ ಒಂದನ್ನು ವಾಚಿಸಿದರು.

ನನ್ನ ಸ್ನೇಹಿತೆ ಬೂಕರ್ ಪ್ರಶಸ್ತಿ ಸಂದರ್ಭದಲ್ಲಿ ನನ್ನನ್ನು ಚಾಮುಂಡಿ ಬೆಟ್ಟಕ್ಕೆ ಕರೆ ತರುತ್ತೇನೆ ಎಂದು ಹರಕೆ ಹೊತ್ತಿದ್ದಳು,ಆದರೆ ಬರಲಾ ಗಿರಲಿಲ್ಲ,ಆದರೆ ಈಗ ಚಾಮುಂಡೇಶ್ವರಿ ದೇವತೆಯೇ ನನ್ನನ್ನು ಆಕೆಯ ದರ್ಶನಕ್ಕೆ ಕರೆಸಿಕೊಂಡಿದ್ದಾಳೆ ಎಂದು ಭಾನು ಮಷ್ತಾಕ್ ಹೇಳಿದರು.

ಇಲ್ಲಿಗೆ ಬರಲು ನನಗೆ ಹಲವು ಅಡೆತಡೆಗಳು ಆಗಿತ್ತು ಆದರೆ ಅದೆಲ್ಲವನ್ನು ಕಳೆದು ದೇವಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ ಎಂದು ಪುನರುಚ್ಛರಿಸಿದರು.

ನನ್ನ ಮಾವ ಮೊಹಮ್ಮದ್ ಘೋಷ್ ಅವರು ಮೈಸೂರು ಅರಸರ ಅಂಗರಕ್ಷಕ ಪಡೆಯ ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ, ಮಹಾರಾಜರು ಒಬ್ಬ ಮುಸ್ಲಿಮನನ್ನು ನಂಬಿ ಆತನನ್ನು ತಮ್ಮ ರಕ್ಷಣಾ ಪಡೆಯಲ್ಲಿ ಇಟ್ಟುಕೊಂಡಿದ್ದು ವಿಶೇಷವಾಗಿತ್ತು ಎಂದು ಅವರು ಸ್ಮರಿಸಿದರು.

ದಸರಾ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ, ಸಚಿವರುಗಳಾದ ಹೆಚ್.ಸಿ. ಮಹದೇವಪ್ಪ, ಶಿವರಾಜ್ ತಂಗಡಗಿ,ಹೆಚ್.ಕೆ ಪಾಟೀಲ್,ಕೆ.ಹೆಚ್. ಮುನಿಯಪ್ಪ,ಕೆ. ವೆಂಕಟೇಶ್, ಶಾಸಕರುಗಳಾದ ಜಿ ಟಿ ದೇವೇಗೌಡ,ಟಿ.ಎಸ್. ಶ್ರೀವತ್ಸ, ತನ್ವೀರ್ ಸೇಟ್, ಶಿವಕುಮಾರ್, ಹರೀಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ:ದೇವಿಗೆ ಪುಷ್ಪ ನಮನ‌ ಸಲ್ಲಿಸಿದ ಬಾನು Read More

ದಲಿತ ಮಹಾಸಭಾದ ಚಾಮುಂಡಿ ನಡಿಗೆಗೆ ಅನುಮತಿ ನಿರಾಕರಣೆ

ಮೈಸೂರು: ದಸರಾ ಉದ್ಘಾಟನೆಗೆ‌ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಆಯ್ಕೆ‌ ಸ್ವಾಗತಿಸಿ‌ ದಲಿತ ಮಹಾಸಭಾ ದವರು
ಚಾಮುಂಡಿ ನಡಿಗೆ ಹಮ್ಮಿಕೊಳ್ಳಲು ಮುಂದಾದರು ಆದರೆ ಪೊಲೀಸರು ಅನುಮತಿ‌ ನೀಡಲಿಲ್ಲ.

ದಲಿತ ಮಹಾಸಭಾ ದಿಂದ ನೂರಾರು ಮಂದಿ ಚಾಮುಂಡಿ ನಡಿಗೆ ಹೆಸರಲ್ಲಿ ಬೆಟ್ಟದ ಕಡೆಗೆ ಹೊರಟಿದ್ದರು.

ದಸರಾ ಮಹೋತ್ಸವ ವೇಳೆ ಪರ-ವಿರೋಧ ಮೆರವಣಿಗೆಯಿಂದ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.

ಬಿಜೆಪಿ ಹಾಗೂ ಹಿಂದೂ ಜಾಗರಣಾ ವೇದಿಕೆಯವರನ್ನು ತಡೆದಂತೆಯೇ ಪೊಲೀಸರು ದಲಿತ ಮಹಾಸಭಾದವರನ್ನೂ ವಶಕ್ಕೆ ಪಡೆದರು.

ದಲಿತ ಮಹಾಸಭಾದ ಚಾಮುಂಡಿ ನಡಿಗೆಗೆ ಅನುಮತಿ ನಿರಾಕರಣೆ Read More

ಮೈಸೂರು ದಸರಾ ಉದ್ಘಾಟನೆ: ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ

ಹಾಸನ: ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರಿಗೆ ಜಿಲ್ಲಾಡಳಿತದಿಂದ ಅಧಿಕೃತವಾಗಿ ಆಮಂತ್ರಣ ನೀಡಲಾಯಿತು.

ಹಾಸನದ ಅವರ ನಿವಾಸಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮುಷ್ತಾಕ್ ಅವರಿಗೆ ಮೈಸೂರು ಪೇಟ ತೊಡಿಸಿ, ಫಲಫುಷ್ಪ ನೀಡಿ ಸಾಂಪ್ರದಾಯಿಕವಾಗಿ ಆಹ್ವಾನ ನೀಡಿದರು.

ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಮತ್ತು ಸ್ವಾಗತ ಸಮಿತಿಯವರು ಮುಷ್ತಕ್ ಅವರನ್ನು ಆಹ್ವನಿಸಿದರು.

ಮೈಸೂರು ದಸರಾ ಉದ್ಘಾಟನೆ: ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ Read More

ದಸರಾ ಉತ್ಸವ ಉದ್ಘಾಟನೆಗೆ ಭಾನು ಮುಸ್ತಾಕ್ ಹೆಸರು ಸ್ವಾಗತಿಸಿ ಸಿಹಿ ವಿತರಣೆ

ಮೈಸೂರು: ದಸರಾ ಉತ್ಸವ ಉದ್ಘಾಟನೆಗೆ ಭಾನು ಮುಸ್ತಾಕ್ ಹೆಸರನ್ನು ಸ್ವಾಗತಿಸಿ ಮೈಸೂರಿನಲ್ಲಿ ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಜನರಿಗೆ ಸಿಹಿ ವಿತರಣೆ ಮಾಡಿ ಸಂಭ್ರಮಿಸಲಾಯಿತು.

ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್,
ನಾಡ ಹಬ್ಬವು ನಮ್ಮ ಸಂಸ್ಕೃತಿಯ ಪರಂಪರೆಯ ಪ್ರತಿರೂಪ, ಇಂತಹ ಸಂದರ್ಭಗಳಲ್ಲಿ ಜಾತಿ ಧರ್ಮದ ಭೇದ ಭಾವದ ಬೀಜ ಬಿತ್ತುವ ಬಿಜೆಪಿ ನಿಲುವು ಖಂಡನೀಯ ಎಂದು ಹೇಳಿದರು.

ನಗರದ ಅರಮನೆಯ ಮುಂಭಾಗ ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಸಾರ್ವಜನಿಕರಿಗೆ ಸಿಹಿ ವಿತರಿಸಿ
ವಿಶ್ವ ವಿಖ್ಯಾತ 2025ರ ದಸರಾ ಉದ್ಘಾಟನೆ ಆಯ್ಕೆಯಾಗಿರುವ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಭಾನು ಮುಸ್ತಾಕ್ ಅವರಿಗೆ ಸ್ವಾಗತಾರ್ಹ ಎಂದು ಪೋಸ್ಟರ್ ಹಿಡಿದು ಸಿಹಿ ಹಂಚಿ ಸ್ವಾಗತಿಸಿ ಅವರು ಮಾತನಾಡಿದರು.

ನಾಡಹಬ್ಬ ದಸರಾ ಉತ್ಸವಕ್ಕೆ ಬಾನು ಮುಸ್ತಾಕ್ ಅವರನ್ನು ಸರ್ಕಾರ ಆಹ್ವಾನಿಸಿರುವುದು ಹಾಗೂ ಅವರು ಅದನ್ನು ಒಪ್ಪಿಕೊಂಡಿರುವುದು ಅತ್ಯಂತ
ಸ್ವಾಗತಾರ್ಹ ಎಂದು ಹೇಳಿದರು.

ಭಾನು ಮುಸ್ತಾಕ್ ಅವರು ಜಾಗತಿಕ ಮಟ್ಟದಲ್ಲಿ ಬೂಕರ್ ಪ್ರಶಸ್ತಿ ಗಳಿಸಿ, ಕರ್ನಾಟಕದ ಗೌರವವನ್ನು ಜಗತ್ತಿನ ವೇದಿಕೆಯಲ್ಲಿ ಎತ್ತಿ ಹಿಡಿದಿದ್ದಾರೆ, ಆದರೂ ಬಿಜೆಪಿ ಯಾವತ್ತೂ ಶಾಂತಿ ಸೌಹಾರ್ದತೆ ಬಯಸದೆ, ಅನವಶ್ಯಕ ಧಾರ್ಮಿಕ ವಿಷಯಗಳನ್ನು ಎಳೆದು ತಂದು ಒಂದು ಸಮುದಾಯಕ್ಕೆ ಅವಮಾನ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಬೇಸರದಿಂದ ನುಡಿದರು.

ಪ್ರತಿಯೊಬ್ಬರಿಗೂ ತಮ್ಮ ನಂಬಿಕೆ ಆಚಾರಗಳನ್ನು ಪಾಲಿಸುವ ಹಕ್ಕು ಸಂವಿಧಾನದಲ್ಲೇ ಇದೆ, ಈ ಹಿಂದೆ ನಾಡಿನ ಖ್ಯಾತ ಕವಿ ನಿಸಾರ್ ಅಹ್ಮದ್ ಅವರು ದಸರಾ ಉತ್ಸವ ಉದ್ಘಾ ಟಿಸಿದ್ದು ಇವರಿಗೆ ನೆನಪಿಲ್ಲವೆ ಎಂದು ನಜರಬಾದ್ ನಟರಾಜ್ ಪ್ರಶ್ನಿಸಿದರು.

ಬಿಜೆಪಿಗರ ಇಂತಹ ಹೇಳಿಕೆಗಳಿಂದ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಅವಮಾನವಾಗುತ್ತದೆ. ನಾಡಿನಲ್ಲಿ ಮಳೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ, ಬಡ ಮಕ್ಕಳ ಶಿಕ್ಷಣ, ದಲಿತರು, ಕಾರ್ಮಿಕರು ಹಾಗೂ ಹಿಂದುಳಿದವರ ಸಮಸ್ಯೆಗಳ ಬಗ್ಗೆ ಮೌನವಾಗಿರುವ ಬಿಜೆಪಿ, ಜಾತಿ-ಧರ್ಮದ ರಾಜಕೀಯದ ಸುತ್ತ ಮಾತ್ರ ತಿರುಗಾಡುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಇದನ್ನು ಸಾರ್ವಜನಿಕರು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ರಾಮಪ್ಪ, ಮೈಸೂರು ನಗರ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಅಭಿ, ದಿನೇಶ್, ಮಹೇಶ್, ಶ್ರೀನಿವಾಸ್, ರಾಜೇಶ್, ರಾಘವೇಂದ್ರ,ಹರೀಶ ನಾಯ್ಡು
ಮತ್ತಿತರರು ಹಾಜರಿದ್ದರು.

ದಸರಾ ಉತ್ಸವ ಉದ್ಘಾಟನೆಗೆ ಭಾನು ಮುಸ್ತಾಕ್ ಹೆಸರು ಸ್ವಾಗತಿಸಿ ಸಿಹಿ ವಿತರಣೆ Read More

ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಸರ್ಕಾರದ ನಿರ್ಧಾರ ಸ್ವಾಗತಾರ್ಹ:ತೇಜಸ್ವಿ

ಮೈಸೂರು: ಈ ಬಾರಿ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಯನ್ನು ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಬಾನು ಮುಷ್ತಾಕ್ ಅವರಿಂದ ಮಾಡಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.

ಬೂಕರ್ ಪ್ರಶಸ್ತಿ ಪಡೆದ ಸಂದರ್ಭದಲ್ಲೇ ಈ ಬಾರಿಯ ದಸರಾ ಉತ್ಸವವನ್ನು ಬಾನು ಮುಷ್ತಾಕ್ ಅವರಿಂದ ಉದ್ಘಾಟನೆ ಮಾಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೆ ಅನೇಕ ಪತ್ರಿಕೆಗಳಲ್ಲಿ ಈ ಕುರಿತು ವರದಿ ಕೂಡ ಆಗಿತ್ತು ಎಂದು ಹೇಳಿದ್ದಾರೆ.

ಈಗ ರಾಜ್ಯ ಸರ್ಕಾರ ಅಧಿಕೃತವಾಗಿ ಬಾನು ಮುಷ್ತಾಕ್ ಅವರ ಹೆಸರನ್ನು ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ತೇಜಸ್ವಿ ಹೇಳಿದ್ದಾರೆ.

ಕೆಲವರು ಬಾನು ಮುಷ್ತಾಕ್ ಅವರು ಮುಸ್ಲಿಂ ಸಮುದಾಯದ ದವರು ಅವರಿಂದ ದಸರಾ ಉದ್ಘಾಟನೆ ಮಾಡಿಸದಂತೆ ವಿರೋಧ ಮಾಡಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ನಮ್ಮದು ಜಾತ್ಯತೀತ ರಾಷ್ಟ್ರ ವಾಗಿದ್ದು ಸರ್ವ ಧರ್ಮದ ಶಾಂತಿಯ ತೋಟ ವಾಗಿದೆ, ಕೆಲವು ರಾಜಕಾರಣಿಗಳ ಈ ರೀತಿಯ ಹೇಳಿಕೆಗಳಿಂದ ಕೋಮು ಸೌಹಾರ್ದತೆಗೆ ದಕ್ಕೆ ಉಂಟಾಗುತ್ತದೆ ದಸರಾ ಸಂದರ್ಭದಲ್ಲಿ ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಇಂತಹಾ ಹೇಳಿಕೆ ಕಾರಣ ವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ

ಕೂಡಲೇ ರಾಜ್ಯ ಸರ್ಕಾರ ಅಥವಾ ಪೋಲಿಸ್ ಇಲಾಖೆ ಜಾತಿ ಧರ್ಮದ ಹೆಸರಿನಲ್ಲಿ ಈ ರೀತಿಯ ಹೇಳಿಕೆ ಕೊಡುವವರಿಗೆ ತಿಳುವಳಿಕೆ ನೀಡಬೇಕು ಮೀತಿ ಮೀರಿದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಸರ್ಕಾರದ ನಿರ್ಧಾರ ಸ್ವಾಗತಾರ್ಹ:ತೇಜಸ್ವಿ Read More