ಶ್ರೀದತ್ತವೇಂಕಟೇಶ್ವರ ದೇವಸ್ಥಾನದಲ್ಲಿಶ್ರಾವಣ ಪುರಾಣಶ್ರವಣ

ಮೈಸೂರು: ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರ ಹಾಗೂ ಪುಣ್ಯಪ್ರದವಾದ ಮಾಸವೆಂದು ಪರಿಗಣಿಸಲಾಗಿದೆ.

ಶ್ರಾವಣ ಮಾಸದ ಅವಧಿಯಲ್ಲಿ ಅನೇಕ ವ್ರತಗಳು, ಹಬ್ಬಗಳು, ಧಾರ್ಮಿಕ ಸಮಾರಂಭಗಳು ಜರುಗುತ್ತವೆ.

ಪರಮಶಿವನ ಆರಾಧನೆ, ಶ್ರೀವೇಂಕಟರಮಣನ ಪೂಜೆ, ವರಮಹಾಲಕ್ಷ್ಮೀ ವ್ರತ, ಶ್ರೀಕೃಷ್ಣ ಜನ್ಮಾಷ್ಟಮಿ, ಹಯಗ್ರೀವ ಜಯಂತಿ, ಉಪಾಕರ್ಮ ಮುಂತಾದವುಗಳಲ್ಲಿ ಭಕ್ತರು ಭಾವಪೂರ್ಣವಾಗಿ ತೊಡಗುತ್ತಾರೆ.

ಈ ಮಾಸವು ಮುಹೂರ್ತಗಳ ಸಮೃದ್ಧಿಯಿಂದಲೂ ವಿಶೇಷ ಮಹತ್ವ ಹೊಂದಿದ್ದು, ಅನೇಕ ಶ್ರೇಯೋಮಯ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ.

ಈ ಪವಿತ್ರ ಮಾಸದಲ್ಲಿ ಪುರಾಣಶ್ರವಣಕ್ಕೂ ಅಪಾರ ಮಹಿಮೆ ಇದೆ. ಶ್ರಾವಣ ಮಾಸದಲ್ಲಿ ಪುರಾಣಗಳನ್ನು ಆಲಿಸುವುದು ಶ್ರವಣಮಾತ್ರದಿಂದಲೇ ಪುಣ್ಯ ಫಲಗಳನ್ನು ನೀಡುತ್ತದೆ ಎಂದು ಶಾಸ್ತ್ರಗಳು ಸಾರುತ್ತವೆ.

ಈ ಹಿನ್ನೆಲೆಯಲ್ಲಿಯೇ, ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀದತ್ತವೇಂಕಟೇಶ್ವರ ದೇವಸ್ಥಾನದಲ್ಲಿ, ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ದಿವ್ಯಾನುಗ್ರಹ ಹಾಗೂ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥರ ಮಾರ್ಗದರ್ಶನದಲ್ಲಿ, ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಶ್ರಾವಣ ಮಾಸದ ಪ್ರತಿ ಶನಿವಾರ ಸಂಜೆ 5.30 ರಿಂದ 6.30ರವರೆಗೆ, ವಿದ್ವಾನ್ ಶ್ರೀ ನಾರಾಯಣ ದೇಸಾಯಿ ಅವರಿಂದ ಭಾಗವತ ಪುರಾಣ ಪ್ರವಚನ ನಡೆಯುತ್ತಿದೆ.

ಅದರಲ್ಲಿ ಶ್ರಾವಣ ಮಾಸದ ಪಾವಿತ್ರ್ಯತೆ, ವ್ರತಾಚರಣೆಗಳ ತಾತ್ಪರ್ಯ ಹಾಗೂ ಆಚರಣೆಗಳ ಮಹತ್ವವನ್ನು ಸುಲಭವಾಗಿ ಹಾಗೂ ಆಳವಾಗಿ ವಿವರಿಸಲಾಗುತ್ತಿದೆ.

ಈಗಾಗಲೇ ಎರಡು ವಾರಗಳ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನವಾಗಿದ್ದು, ಮುಂದಿನ ದಿನಗಳಲ್ಲಿ ಆಗಸ್ಟ್ 9, 16, ಹಾಗೂ 23ರಂದು ಈ ಸರಣಿಯ ಪ್ರವಚನಗಳು ನಡೆಯಲಿವೆ.

ಪ್ರವಚನದ ನಂತರ ಸಂಜೆ 6.30ರಿಂದ 7.30ರವರೆಗೆ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಲಿದೆ ನಂತರ ಪ್ರಸಾದ ವಿತರಣೆ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುರಾಣ ಶ್ರವಣ, ಸಂಗೀತಾನಂದ ಹಾಗೂ ಭಕ್ತಿಸಮಾಗಮದ ಮೂಲಕ ಭಗವಂತನ ಕರುಣೆಗೆ ಪಾತ್ರರಾಗಬೇಕೆಂದು ಆಶ್ರಮ ಕಾರ್ಯನಿರ್ವಹಣಾ ಸಮಿತಿ ವಿನಂತಿಸಿದೆ.

ಶ್ರೀದತ್ತವೇಂಕಟೇಶ್ವರ ದೇವಸ್ಥಾನದಲ್ಲಿಶ್ರಾವಣ ಪುರಾಣಶ್ರವಣ Read More

ಧರ್ಮವನ್ನು ಪಾಲಿಸುವ ಕೆಲಸ ಮಾಡಿದರೆ ಇಡೀ ದೇಶದಲ್ಲಿ ಶಾಂತಿ ಲಭ್ಯ:ಸುತ್ತೂರು ಶ್ರೀ

ಮೈಸೂರು: ನಾವೆಲ್ಲರೂ ಧರ್ಮವನ್ನು ಪಾಲಿಸುವ ಕೆಲಸ ಮಾಡಿದರೆ ಇಡೀ ದೇಶದಲ್ಲಿ ಶಾಂತಿ ಲಭಿಸಲಿದೆ ಎಂದು ಸುತ್ತೂರು ಪೀಠಾಧೀಶ್ವರರಾದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ನುಡಿದರು.

ನಾದಮಂಟಪದ 27 ನೆ‌ ವಾರ್ಷಿಕೋತ್ಸವ ಹಾಗೂ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುತ್ತೂರು ಶ್ರೀಗಳು ಮಾತನಾಡಿದರು.

ಪಹಲ್ಗಂ ದಾಳಿ ಖಂಡಿಸಿ ಇತ್ತೀಚಿಗೆ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಯಲ್ಲಿ ಕಾಲು ನೋವಿನಲ್ಲೂ ಸ್ವತಹ ಗಣಪತಿ ಶ್ರೀಗಳು ಭಾಗವಹಿಸಿದರು. ಇಂತಹ ಆಕ್ರಮಣ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದರು. ಅಂದಿನ ದಾಳಿಯಿಂದ ನಮ್ಮ ದೇಶದ ಅದೆಷ್ಟೋ ಕುಟುಂಬಗಳು ನೋವು ಅನುಭವಿಸುತ್ತಿವೆ ಎಂದು‌ ಸುತ್ತೂರು ಶ್ರೀಗಲಕು ವಿಷಾದಿಸಿದರು.

ನಮ್ಮನ್ನೆಲ್ಲ ರಕ್ಷಿಸಲು ಹೋರಾಟ ಮಾಡುತ್ತಿರುವ ಸೈನಿಕರಿಗೆ ಮತ್ತು ದೇಶ ರಕ್ಷಣೆಗೆ ಸದಾ ಶ್ರಮಿಸುತ್ತಿರುವ ನಮ್ಮ ಯೋಧರನ್ನು ಗೌರವಿಸೋಣ ಪ್ರಾಣದ ಹಂಗು ತೊರೆದು ದೇಶ ಕಾಯುತ್ತಿರುವವರಿಗಾಗಿ ನಾವೆಲ್ಲ ಪ್ರಾರ್ಥಿಸೋಣ ಎಂದು ಸುತ್ತೂರು ಶ್ರೀಗಳು ಕರೆ ನೀಡಿದರು.

ಅವಧೂತ ದತ್ತಪೀಠ ಮತ್ತು ಗಣಪತಿ ಸಚ್ಚಿದಾನಂದ ಆಶ್ರಮ ಆಸುಪಾಸಿನಲ್ಲೇ ಇವೆ.ಅವಧೂತ ದತ್ತಪೀಠ,ಸಚ್ಚಿದಾನಂದ ಮೂಲ ಆಶ್ರಮ ಮೈಸೂರಿನಲ್ಲಿ ಇರುವುದು ಮೈಸೂರಿಗರ ಹೆಮ್ಮೆ. ಇಂತಹ ಅತ್ಯುತ್ತಮ ತಾಣವನ್ನು ಪೂಜ್ಯರು ಕೊಡುಗೆಯಾಗಿ ಕೊಟ್ಟಿರುವುದು ಪುಣ್ಯ ಎಂದು ಬಣ್ಣಿಸಿದರು.

ಗಣಪತಿ ಸಚ್ಚಿದಾನಂದ ಆಶ್ರಮ ಮತ್ತು ಸುತ್ತೂರು ಮಠಗಳು ಮಾನಸಿಕವಾದಂತಹ ನಿಕಟ ಸಂಬಂಧ ಹೊಂದಿವೆ ಈ ಎರಡೂ ಆಶ್ರಮಗಳು ಮಧುರ ಬಾಂಧವ್ಯದ ಸಂಕೇತವಾಗಿವೆ. ನಾನು ಇಂದು ಒಂದು ಕುಟುಂಬದ ಸಮಾರಂಭದಲ್ಲಿ ಸದಸ್ಯನಾಗಿ ಪಾಲ್ಗೊಂಡಂತಹ ಅನುಭವ ಆಗಿದೆ ಇದು ನನಗೆ ಅತ್ಯಂತ ಸಂತಸ ತಂದಿದೆ ಶ್ರೀಗಳು ಇನ್ನೂ ಆರೋಗ್ಯವಂತರಾಗಿ ಶತಮಾನದ ಕಡೆಗೆ ನಡೆಯಲಿ ಎಂದು ಪ್ರಾರ್ಥಿಸಿದರು.

ಗಣಪತಿ ಸ್ವಾಮೀಜಿಯವರು ಭಕ್ತರಿಗೆ ಅನುಗ್ರಹಿಸುತ್ತಾರೆ ಆದರೆ ಅದೇ ಭಕ್ತ ವೃಂದವು ಸ್ವಾಮೀಜಿಗಳ ಆರೋಗ್ಯ ಮತ್ತು ಆಯುಷ್ ವೃದ್ಧಿಗಾಗಿ ಭಗವಂತನಲ್ಲಿ ಪ್ರಾರ್ಥಿಸಿದರೆ ಅವನು ಕರುಣಿಸುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ದೇಶ ಆಧ್ಯಾತ್ಮಿಕವಾಗಿ ಸಂಪತ್ ಭರಿತವಾದ ದೇಶ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಜಗತ್ತಿಗೆ ನಮ್ಮ ಋಷಿಮುನಿಗಳು ತಪಸ್ ಶಕ್ತಿಯಿಂದ ಮತ್ತು ಅವರ ಅನುಷ್ಠಾನದಿಂದ ಕೊಟ್ಟ ಕೊಡುಗೆ ಅಪಾರ. ಜಗತ್ತಿನಲ್ಲಿ ಈಗ ಆಗುತ್ತಿರುವ ಎಷ್ಟೋ ಸಂಶೋಧನೆಗಳನ್ನೆಲ್ಲ ಭಾರತೀಯರು ಬಹಳ ಹಿಂದೆಯೇ ಕೊಟ್ಟಿದ್ದರು ಎಂದು ಸುತ್ತೂರು ಶ್ರೀ ವಿವರಿಸಿದರು.

ಭಾರತಕ್ಕೆ ಭವ್ಯ ಪರಂಪರೆ ಇದೆ. ನದಿಗಳು ನಿರಂತರವಾಗಿ ಹರಿಯುತ್ತವೆ. ಅದೇ ರೀತಿ ಧಾರ್ಮಿಕ ಪರಂಪರೆಯು ನಿರಂತರವಾಗಿ ಹರಿಯುತ್ತಲೇ ಇರುತ್ತದೆ.ಅಮನತಹ ಧಾರ್ಮಿಕ ಪರಂಪರೆಯನ್ನು ಗಣಪತಿ ಶ್ರೀಗಳು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.

ಅವರ ದರ್ಶನ ಮಾಡಿದರೆ ಎಷ್ಟೋ ಸಂತೃಪ್ತಿ ಸಿಗುತ್ತದೆ ಎಂದು ಭಕ್ತರು ಹೇಳುತ್ತಾರೆ, ಆಶೀರ್ವಾದ ಸಿಕ್ಕರೆ ಸಾಕು ಎಂದು ಕಾಯುವವರು ಇದ್ದಾರೆ ಎಂದು ಹೇಳಿದರು.

ಜಗತ್ತಿನಾದ್ಯಂತ ಗಣಪತಿ ಸಚ್ಚಿದಾನಂದ ಆಶ್ರಮದ ಶಾಖೆಗಳು ಇವೆ.ಅವುಗಳ ಮೂಲಕ ಆಯಾ ಭಾಗದ ಜನರಿಗೆ ಶ್ರೀಗಳು ಅನುಗ್ರಹಿಸುತ್ತಾ ಬಂದಿದ್ದಾರೆ ಎಂದು ಶಿವರಾತ್ರಿ ಮಹಾ ಸ್ವಾಮೀಜಿ ನುಡಿದರು.

ಇಡೀ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಪ್ರೀತಿ ಉಂಟು ಮಾಡಬೇಕು ಎಂಬ ಮಹಾದಾಸೆಯನ್ನು ಗಣಪತಿ ಶ್ರೀಗಳು ಇಟ್ಟುಕೊಂಡಿದ್ದಾರೆ. ಆದರೆ ನಮ್ಮ ದೇಶದ ಮೇಲೆ ದಾಳಿಗಳು ನಡೆಯುತ್ತಿವೆ ಜಗತ್ತಿನಲ್ಲಿ ಆಗುತ್ತಿರುವ ಪ್ರಕ್ಷುಬ್ದ ವಾತಾವರಣಕ್ಕೆ ಶ್ರೀಗಳು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ಶ್ರೀಗಳ ವಿಶ್ವ ಶಾಂತಿ ಪ್ರೀತಿಯನ್ನು ಧರ್ಮವನ್ನು ಪಾಲಿಸುವ ಮೂಲಕ ನಾವೆಲ್ಲರೂ ಅನುಸರಿಸಬೇಕು ಎಂದು ಕರೆ ನೀಡಿದರು.

ಈ ವಳೆ ಸುತ್ತೂರು ಶ್ರೀಗಳು ಗಣಪತಿ ಶ್ರೀಗಳಿಗೆ ಗೌರವ ಸಮರ್ಪಿಸಿದರು ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮೀಜಿಯವರಿಗೂ ಗೌರವಿಸಿದರು.

ಧರ್ಮವನ್ನು ಪಾಲಿಸುವ ಕೆಲಸ ಮಾಡಿದರೆ ಇಡೀ ದೇಶದಲ್ಲಿ ಶಾಂತಿ ಲಭ್ಯ:ಸುತ್ತೂರು ಶ್ರೀ Read More

ಜಗತ್ತಿನ ಎಲ್ಲಾ ಕಷ್ಟ ನಿವಾರಣೆಗೆ ದತ್ತಾತ್ರೇಯ ಸ್ಮರಣೆ ಒಳಿತು: ಗಣಪತಿ ಶ್ರೀಗಳು

ಮೈಸೂರು: ಕೇವಲ ಸ್ಮರಣೆ ಮಾತ್ರದಿಂದ ದತ್ತಾತ್ರೆಯ ಸ್ವಾಮಿಗಳು ಸಂತುಷ್ಟರಾಗುತ್ತಾರೆ, ಜಗತ್ತಿನ ಎಲ್ಲಾ ಕಷ್ಟ ನಿವಾರಣೆಗೆ ದತ್ತಾತ್ರೇಯ ಸ್ಮರಣೆ ಮಾಡಬೇಕು ಎಂದು ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿ ನುಡಿದರು.

ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಕಳೆದ 55 ವರ್ಷಗಳಿಂದ ದತ್ತಾತ್ರೇಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷವೂ ಕೂಡ ಆಚರಿಸಲಾಗುತ್ತಿದೆ.

ಬೆಳಿಗ್ಗೆ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಲ್ಲಿರುವ ದತ್ತಾತ್ರೇಯ ಸ್ವಾಮಿಗೆ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ತೈಲಾಭಿಷೇಕ ನೆರವೇರಿಸಿ, ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು.

ಇಡೀ ವಿಶ್ವದಲ್ಲಿ ಯುದ್ಧ ಭಯ ಕಾಡುತ್ತಿದೆ ಎಲ್ಲೆಲ್ಲೂ ನೆಮ್ಮದಿ ಇಲ್ಲದಂತಾಗಿದೆ ಹಾಗಾಗಿ ಶ್ರೀ ದತ್ತಾತ್ರೇಯ ಸ್ವಾಮಿ ಇಡೀ ಪ್ರಪಂಚವನ್ನು ರಕ್ಷಣೆ ಮಾಡಲಿ ಎಲ್ಲೆಡೆ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ದತ್ತಾತ್ರೇಯ ಸ್ವಾಮಿಗಳು ತೃತಯುಗದ ಅವತಾರ ಪುರುಷರು. ದೇವತೆಗಳು ರಾಕ್ಷಸರು ಮತ್ತು ಮನುಷ್ಯರಿಗೂ ಕೂಡ ಅವರು ಗುರುಗಳು. ಮನುಷ್ಯನಿಗೆ ಬುದ್ಧಿ ಕೆಟ್ಟಾಗ ಆರೋಗ್ಯ ಹದಗೆಟ್ಟಾಗ, ದಿಕ್ಕು ತಪ್ಪಿದಾಗ ದತ್ತಾತ್ರೆಯರ ಸ್ಮರಣೆ ಮಾಡುವುದು ಒಳ್ಳೆಯದು ಎಂದು ಶ್ರೀಗಳು ಸಲಹೆ ನೀಡಿದರು.

ದತ್ತಾತ್ರೇಯರು ಪೂರ್ಣ ವಿಷ್ಣು ಸ್ವರೂಪ. ದತ್ತಾತ್ರೇಯ ಸ್ವಾಮಿಯ ಆರಾಧನೆ ಮಾಡಿದರೆ ವಿಷ್ಣುವಿನ ಆರಾಧನೆ ಮಾಡಿದಂತೆ, ಶಿವನನ್ನು ಆರಾಧನೆ ಮಾಡಿದಂತೆ, ಬ್ರಹ್ಮ ಅಂದರೆ ಜ್ಞಾನವನ್ನು ಆರಾಧನೆ ಮಾಡಿದಂತೆ ಎಂದು ಬಣ್ಣಿಸಿದರು.

ಇಂದು ನಮ್ಮ ಆಶ್ರಮದಲ್ಲಿರುವ ಪುರಾತನ ಶ್ರೀ ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ ಮತ್ತು ಸುಗಂಧದ್ರವ್ಯ ಅಭಿಷೇಕವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ.

ಇಡೀ ವಿಶ್ವ ಮತ್ತು ಪ್ರಜೆಗಳು ಪ್ರಜಾಪ್ರತಿನಿಧಿಗಳು ಮಕ್ಕಳಾದಿಯಾಗಿ ಎಲ್ಲ ರಂಗದಲ್ಲಿರುವವರಿಗೂ ದತ್ತಾತ್ರೇಯರು ಆಶೀರ್ವಾದ ಮಾಡಲೆಂದು ಲೋಕ ಕಲ್ಯಾಣಾರ್ಥವಾಗು ಈ ಅಭಿಷೇಕಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಇಂದು ಬೆಳಿಗ್ಗೆ ಪೌರ್ಣಮಿ ಹಾಗೂ ಶ್ರೀ ದತ್ತಾತ್ರೇಯ ಜಯಂತಿ ಪ್ರಯುಕ್ತ ಪವಮಾನ ಹೋಮ ಮತ್ತು ದತ್ತಾತ್ರೇಯ ವಜ್ರ ಮಂತ್ರ ಹೋಮ ನೆರವೇರಿತು.

ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ
ಶ್ರೀ ಚಕ್ರ ಪೂಜೆ ಮತ್ತು ಪೂರ್ಣಾಹುತಿ ನೆರವೇರಿತು. ಸಾವಿರಾರು ಭಕ್ತರು ದತ್ತಾತ್ರೇಯನ ದರ್ಶನ ಪಡೆದರು

ನಂತರ ಶ್ರೀ ದತ್ತಾತ್ರೇಯ ಸ್ವಾಮಿಗೆ ಭಕ್ತರಿಂದ
ಸಹಸ್ರ ಕಳಶ ತೈಲಾಭಿಷೇಕ ಮಾಡಲಾಯಿತು.
ಕೊಚ್ಚಿ ಆಶ್ರಮ ಭಜನಾ ತಂಡದಿಂದ ಶ್ರೀ ದತ್ತಾತ್ರೇಯ ಸ್ವಾಮಿ ನಾಮ ಸಂಕೀರ್ತನೆ ಹಾಗೂ ಅನಘ ವ್ರತ ಕೂಡಾ ಹಮ್ಮಿಕೊಳ್ಳಲಾಗಿತ್ತು.

ಪೂಜಾ ಕಾರ್ಯಗಳು ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ನೆರವೇರಿತು.

ಜಗತ್ತಿನ ಎಲ್ಲಾ ಕಷ್ಟ ನಿವಾರಣೆಗೆ ದತ್ತಾತ್ರೇಯ ಸ್ಮರಣೆ ಒಳಿತು: ಗಣಪತಿ ಶ್ರೀಗಳು Read More