ಬೆಂಗಳೂರು: ಗುಬ್ಬಿವಾಣಿ ಟ್ರಸ್ಟ್ ಹಮ್ಮಿಕೊಂಡಿರುವ ಅವಳ ಹೆಜ್ಜೆ ಕಿರುಚಿತ್ರೋತ್ಸವ-2026 ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರ ಸ್ಪರ್ಧೆಗೆ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್‌ನಲ್ಲಿ ಉಚಿತ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಮೊದಲ ಆವೃತ್ತಿಯ ಅದ್ಭುತ ಯಶಸ್ಸಿನ ನಂತರ, ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ ಎರಡನೆಯ ಅವಳ ಹೆಜ್ಜೆ ಕಿರುಚಿತ್ರೋತ್ಸವಕ್ಕೆ ಮಹಿಳಾ ನಿರ್ದೇಶಕರಿಂದ ಕನ್ನಡ ಕಿರುಚಿತ್ರಗಳ ಸ್ಪರ್ಧೆಗೆ ನೋಂದಣಿಯನ್ನು ಆಹ್ವಾನಿಸಲಾಗಿದೆ.
ಇದು ಮಹಿಳಾ ನಿರ್ದೇಶಕರಿಗೇ ಮೀಸಲಾದ ಏಕೈಕ ಕನ್ನಡ ಕಿರುಚಿತ್ರ ಸ್ಪರ್ಧೆಯಾಗಿದೆ
ಅತ್ಯುತ್ತಮ ಕಿರುಚಿತ್ರಕ್ಕೆ ಅವಳ ಹೆಜ್ಜೆ ಪ್ರಶಸ್ತಿ 1,00,000 ನಗದು ಬಹುಮಾನ ಇರುತ್ತದೆ. ಹಲವಾರು ವಿಶೇಷ ವಿಭಾಗಗಳಲ್ಲಿ ತಲಾ ಒಂದು ಕಿರುಚಿತ್ರಕ್ಕೆ 10,000 ನಗದು ಬಹುಮಾನ ಇರಲಿದೆ.
ನೋಂದಣಿ ವಿವರಗಳು: ಸಲ್ಲಿಕೆ ಅರ್ಹತೆ: ನಿರ್ದೇಶಕರು ಮಹಿಳೆಯೇ ಆಗಿರಬೇಕು; 5-30 ನಿಮಿಷ; 2024, 2025 ಅಥವಾ 2026ರಲ್ಲಿ ನಿರ್ಮಿತ ಕನ್ನಡ ಕಿರುಚಿತ್ರಗಳು.
ಪ್ರವೇಶ ಶುಲ್ಕ: ನವೆಂಬರ್‌ನಲ್ಲಿ ಉಚಿತವಿರುತ್ತದೆ (ರಾಜ್ಯೋತ್ಸವ ವಿಶೇಷ); ಡಿಸೆಂಬರ್ 1 ರಿಂದ ಜನವರಿ 31, 2026 ರವರೆಗೆ 1,000 ರೂ ಶುಲ್ಕ ಕಟ್ಟಬೇಕಿದೆ.
ಹೆಚ್ಚಿನ ಮಾಹಿತಿಗೆ www.gubbivanitrust.ngo | Whats App: 8867747236 ಸಂಪರ್ಕಿಸಬಹುದು ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.
ಬೆಂಗಳೂರು: ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿದ್ದ ಅವಳ ಹೆಜ್ಜೆ ಮಹಿಳಾ ಕನ್ನಡ ಕಿರುಚಿತ್ರೋತ್ಸವದಲ್ಲಿ ನಿರ್ದೇಶಕಿ ಕವಿತಾ ಬಿ ನಾಯಕ್ ಅವರ ಅನ್ ಹರ್ಡ್ ಎಕೋಸ್ ಎಂಬ ಕನ್ನಡ ಕಿರುಚಿತ್ರವು ಪ್ರತಿಷ್ಠಿತ ಅವಳ ಹೆಜ್ಜೆ ಪ್ರಶಸ್ತಿಯನ್ನು1 ಲಕ್ಷ ನಗದು ಬಹುಮಾನದೊಂದಿಗೆ ಮುಡಿಗೇರಿಸಿಕೊಂಡಿದೆ.
ಎಂಟು ಆಕರ್ಷಕ ಕಿರುಚಿತ್ರಗಳನ್ನು ಪ್ರದರ್ಶಿಸಿದ ಈ ಉತ್ಸವಕ್ಕೆ ಪ್ರೇಕ್ಷಕರು ಉತ್ತಮ ಸ್ಪಂದನೆ ನೀಡಿದರು.ಎಂಟು ನಿರ್ದೇಶಕಿಯರೊಂದಿಗಿನ ಪ್ರಶ್ನೋತ್ತರದಲ್ಲಿ ಪ್ರೇಕ್ಷಕರು ಉತ್ಸಾಹಭರಿತ, ಚಿಂತನಶೀಲ ಪ್ರಶ್ನೆಗಳನ್ನು ಅವರ ಮುಂದಿಟ್ಟರು.
ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಕವಿತಾ ಬಿ ನಾಯಕ್ ರಂಗಭೂಮಿ ಕಲಾವಿದೆ ಮತ್ತು ನಿರ್ದೇಶಕಿ. ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ನಿರ್ದೇಶನ ಮತ್ತು ಚಿತ್ರಕಥೆಗಳಲ್ಲಿ ಡಿಪ್ಲೋಮಾ ಪಡೆದು “ಹದಿನೇಳೆಂಟು” ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಸಿನಿಮಾ ಮಾಧ್ಯಮದ ಮೂಲಕ ಮಹಿಳೆಯರ ಸಮಸ್ಯೆಗಳನ್ನು ಪ್ರೇಕ್ಷಕರಿಗೆ ತಲುಪಿಸಬೇಕೆಂಬ ಅವರ ಬದ್ಧತೆ, “ಅನ್‌ಹರ್ಡ್ ಎಕೋಸ್” ಮೂಲಕ ಮುಂದುವರೆಸಿದ್ದಾರೆ. ಈ ಚಿತ್ರವು ಪ್ರೇಕ್ಷಕರ ಆಯ್ಕೆ ಬಹುಮಾನವನ್ನು ಸಹ ಪಡೆದುಕೊಂಡಿದ್ದು, ಅದರ ಬಲವಾದ ಭಾವನಾತ್ಮಕ ಸಂಪರ್ಕಕ್ಕೆ ಸಾಕ್ಷಿಯಾಗಿದೆ.
ಕ್ಷಮಾ ಅಂಬೆಕಲ್ಲು ಅವರ ಕಿರುಚಿತ್ರ “ಪುಷ್ಪ”, ವಿದ್ಯಾರ್ಥಿನಿ ನಿರ್ದೇಶಕಿ ಎಂಬ ವಿಶೇಷ ವರ್ಗದಲ್ಲಿ ನಗದು ಬಹುಮಾನ ಪಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಕ್ಷಮಾ, ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠದಲ್ಲಿ ದೃಶ್ಯ ಸಂವಹನದಲ್ಲಿ ಬಿ.ಎಸ್ಸಿ. ಪದವಿ ಪಡೆಯುತ್ತಿದ್ದಾರೆ.
ಚೊಚ್ಚಲ ನಿರ್ದೇಶನದ ಇತರ ಮೂರು ಕಿರುಚಿತ್ರಗಳು ಸಹ ನಗದು ಬಹುಮಾನಗಳನ್ನು ಪಡೆದಿವೆ: ಮಂದಾರ ಬಟ್ಟಲಹಳ್ಳಿ ನಿರ್ದೇಶನದ “ದಿ ಲಾಸ್ಟ್ ಹ್ಯಾಪಿ ಕಸ್ಟಮರ್” (2024), ಸಿಂಚನಾ ಶೈಲೇಶ್ ನಿರ್ದೇಶನದ “ಕೇಕ್‌ವಾಕ್” (2025) ಮತ್ತು ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ “ಆನ್‌ಲೈನ್” (2025).
ಹಾವೇರಿ ಜಿಲ್ಲೆಯ ರೈತ ಮಹಿಳೆ ರೇಣುಕಾ ಯಲ್ಲಪ್ಪ ಮಲ್ಲಿಗಾರ್ ನಿರ್ಮಿಸಿದ “ನೀರೆಲ್ಲವೂ ತೀರ್ಥ” (2025) ಎಂಬ ಕಿರುಚಿತ್ರವನ್ನು ಸ್ಪರ್ಧಾತ್ಮಕವಲ್ಲದ ವಿಭಾಗದಲ್ಲಿ ಪ್ರದರ್ಶಿಸಲಾಯಿತು.
ಚಿತ್ರೋತ್ಸವದ ಪ್ರಮುಖ ಆಕರ್ಷಣೆ, ಪತ್ರಕರ್ತೆ ಸುನಯನ ಸುರೇಶ್ ನಿರ್ವಹಿಸಿದ ಚರ್ಚಾಗೋಷ್ಠಿ ಕನ್ನಡ ಸಿನಿಮಾದಲ್ಲಿ ಮಹಿಳಾ ಧ್ವನಿ ಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕಿ ರೂಪಾ ರಾವ್(ಗಂಟು ಮೂಟೆ), ಟೆಂಟ್ ಸಿನೆಮಾ ಶಾಲೆಯ ಸ್ಥಾಪಕ ನಿರ್ದೇಶಕಿ ಶೋಭಾ ಸಿ.ಎಸ್. ಮತ್ತು ಮುಖ್ಯ ಅತಿಥಿ ಡಿ. ಸುಮನ್ ಕಿತ್ತೂರು ಭಾಗವಹಿಸಿದ್ದರು.
ತಮ್ಮ ಜಾತಕಗಳು ಹೊಂದಿಕೆಯಾಗಲಿಲ್ಲ ಎಂಬ ಕಾರಣಕ್ಕೆ ತನ್ನ ಚಿತ್ರಕ್ಕೆ ಹಣಕಾಸು ಒದಗಿಸಲು ನಿರಾಕರಿಸಿದ ನಿರ್ಮಾಪಕರ ಬಗ್ಗೆ ಸುಮನ್ ಕಿತ್ತೂರು ಒಂದು ಸ್ವಾರಸ್ಯಕರ ಅನುಭವವನ್ನು ಹಂಚಿಕೊಂಡು ಇದು ನಿರ್ದೇಶಕರಿಗೆ ಇರುವ ತರ್ಕಹೀನ ಅಡೆತಡೆಗಳ ಉದಾಹರಣೆಯಾಗಿದೆ ಎಂದು ತಿಳಿಸಿದರು.
ರೂಪಾ ರಾವ್ ಅವರು ಮಾತನಾಡಿ, ಚಲನಚಿತ್ರೋದ್ಯಮದಲ್ಲಿ ಎದುರಿಸಿದ ಲಿಂಗ ತಾರತಮ್ಯದ ಬಗ್ಗೆ ಮುಕ್ತವಾಗಿ ಮಾತನಾಡಿ, “ನಿರ್ಮಾಪಕರು ಮತ್ತು ವಿತರಕರು ನನ್ನನ್ನು ನೇರವಾಗಿ ಉದ್ದೇಶಿಸಿ ಮಾತನಾಡುವ ಬದಲು ನನ್ನ ಪುರುಷ ಸಹಾಯಕರೊಂದಿಗೆ ಮಾತನಾಡುತ್ತಿದ್ದರು. ಹಲವು ನಿರಾಕರಣೆಗಳು ಮತ್ತು ಆರ್ಥಿಕ ಸಂಕಷ್ಟಗಳ ನಡುವೆಯೂ ‘ಹುಚ್ಚು ಮತ್ತು ಉತ್ಸಾಹ’ ಇದ್ದರೆ ಮಾತ್ರ ಚಲನಚಿತ್ರ ನಿರ್ದೇಶಕರು ಮುಂದುವರೆಯಲು ಸಾಧ್ಯ ಎಂದು ಹೇಳಿದರು.
ಇದು ಕೇವಲ ಕಿರುಚಿತ್ರ ಪ್ರದರ್ಶನವಲ್ಲ – ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವ, ಲಿಂಗ ಸಮಾನತೆಯ ಚಿಂತನೆಗೆ ಉತ್ತೇಜನ ನೀಡುವ ಒಂದು ಚಳುವಳಿ ಎಂದು ಗುಬ್ಬಿವಾಣಿ – ಸ್ಥಾಪಕ ಟ್ರಸ್ಟಿ ಮಾಲವಿಕ ಅವರು ಹೇಳಿದರು.
ಈ ಉತ್ಸವದ ಮೊದಲ ಆವೃತ್ತಿಯ ಯಶಸ್ಸಿನಿಂದ ನಮಗೆ ತುಂಬಾ ಪ್ರೋತ್ಸಾಹ ಸಿಕ್ಕಿದೆ. ಮುಂದಿನ ವರ್ಷದಲ್ಲಿ ಕರ್ನಾಟಕದಾದ್ಯಂತ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಕ್ಕಾಗಿ ಎದುರು ನೋಡುತ್ತೇವೆ ಎಂದು ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ಸಂತಸದಿಂದ ತಿಳಿಸಿದರು.