ಮೈಸೂರು: ಮೈಸೂರಿ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಸ್ಕಂದ ಪರ್ವತ ಪಾರ್ವತಿ ಬೆಟ್ಟಕ್ಕೆ ನಾಳೆ ಬೆಳಿಗ್ಗೆ 9.30 ಕ್ಕೆ ತೆರಳಲಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಲ್ಲಿರುವ ಕಂದೇಗಾಲ ಸ್ಕಂದ ಪರ್ವತ ಪಾರ್ವತಿ ಬೆಟ್ಟಕ್ಕೆ 50 ವರ್ಷಗಳ ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಹಾಗೂ ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ.
ಮೈಸೂರು: ನಾಡಿನಾದ್ಯಂತ ದತ್ತಾತ್ರೇಯ ಜಯಂತಿಯನ್ನು ಸಡಗರದಿಂದ ಆಚರಿಸಲಾಗುತ್ತಿದ್ದು,ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶ್ವಶಾಂತಿಗಾಗಿ ದತ್ತ ಜಯಂತಿ ಆಚರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ವೇಳೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ದತ್ತಾತ್ರೇಯ ಮಹಿಮೆ ಹಾಗೂ ಪುರಾಣಗಳಲ್ಲಿ ದತ್ತನ ಇರುವಿಕೆಯ ಬಗ್ಗೆ ತಿಳಿಸಿದರು. ದತ್ತಾತ್ರೇಯ ಮಹಾವಿಷ್ಣುವಿನ ಆರನೇ ಅವತಾರ. ಅತ್ರಿ ಮತ್ತು ಅನುಸೂಯೆಯರಿಗೆ ಮಗನಾಗಿ ಬಂದವನು. ಆ ಕಾಲದ ರಾಜರುಗಳಿಗೆ ಮತ್ತು ಜನಸಾಮಾನ್ಯರಿಗೆ ಅದ್ಭುತವಾದ ಬೋಧನೆಗಳನ್ನು ಮಾಡಿದ ಜ್ಞಾನಸಾಗರ ಈ ದತ್ತಾತ್ರೇಯ ಎಂದು ಬಣ್ಣಿಸಿದರು. ವೇದ-ಪುರಾಣಗಳಲ್ಲಿ ದತ್ತನ ಇರುವಿಕೆ: ದತ್ತಾತ್ರೇಯರು ಕೇವಲ ದತ್ತ ಪರಂಪರೆಗೆ ಸೀಮಿತರಲ್ಲ, ಅವರು ವೇದ, ಮಹಾಭಾರತ ಮತ್ತು ರಾಮಾಯಣ ಕಾಲಘಟ್ಟದಲ್ಲೂ ಇದ್ದರು ಎಂದು ಶ್ರೀಗಳು ವಿವರಿಸಿದರು. ದತ್ತಾತ್ರೇಯರು ಸಂಚಾರಿಗಳು, ಅವರಿಗೆ ಇಂಥದ್ದೇ ನೆಲೆ ಅಂತಿಲ್ಲ. ಅವರು ಎಲ್ಲೆಡೆ ಇರುತ್ತಾರೆ. ರಾಮಾಯಣದಲ್ಲಿ ರಾಮನಿಗೆ ದತ್ತಾತ್ರೇಯರು ಕಾಣಿಸಿಕೊಳ್ಳುತ್ತಾರೆ, ಎಂದು ಪೌರಾಣಿಕ ಹಿನ್ನೆಲೆಯನ್ನು ತೆರೆದಿಟ್ಟರು. ಸೀತೆಯ ಆಭರಣ ಮತ್ತು ಅನುಸೂಯೆ ರಾಮಾಯಣದ ಸ್ವಾರಸ್ಯಕರ ಪ್ರಸಂಗವೊಂದನ್ನು ಉಲ್ಲೇಖಿಸಿದ ಶ್ರೀಗಳು, ರಾಮ ವನವಾಸಕ್ಕೆ ಹೋದಾಗ ಮೊದಲು ಭೇಟಿ ನೀಡಿದ್ದು ಅತ್ರಿ ಮಹರ್ಷಿಗಳ ಆಶ್ರಮಕ್ಕೆ. ಅಲ್ಲಿ ಅತಿಥಿ ಸತ್ಕಾರದ ನಂತರ ಅನುಸೂಯೆ ಸೀತೆಗೆ ದಿವ್ಯವಾದ ಆಭರಣಗಳು ಮತ್ತು ಬಾಡದ ಹೂವುಗಳನ್ನು ನೀಡುತ್ತಾಳೆ. ಆಗ ರಾಮ, ‘ಎಲ್ಲವನ್ನೂ ತ್ಯಜಿಸಿ ಬಂದ ನಮಗೆ ಈ ಒಡವೆಗಳು ಏಕೆ?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸಿದ ಅನುಸೂಯೆ, ‘ಇವು ಸಾಮಾನ್ಯ ಒಡವೆಗಳಲ್ಲ, ಅರಣ್ಯದಲ್ಲಿ ಸಂಚರಿಸುವಾಗ ಇವುಗಳ ಅವಶ್ಯಕತೆ ಇದೆ’ ಎಂದು ಹೇಳುತ್ತಾಳೆ. “ಮುಂದೆ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ, ಸೀತೆ ಇದೇ ಆಭರಣಗಳನ್ನು ಗುರುತುಗಾಗಿ ಕೆಳಗೆ ಎಸೆಯುತ್ತಾಳೆ. ರಾಮ ಮತ್ತು ಲಕ್ಷ್ಮಣರು ಸೀತೆಯನ್ನು ಹುಡುಕುವಾಗ ಈ ದಿವ್ಯ ಆಭರಣಗಳೇ ದಾರಿದೀಪವಾಗುತ್ತವೆ. ಇದು ದತ್ತಾತ್ರೇಯರ ಕೃಪೆಯಿಂದಲೇ ನಡೆದಿದ್ದು ಎಂದು ಶ್ರೀಗಳು ವಿವರಿಸಿದರು. ಪಟ್ಟಾಭಿಷೇಕ ಮತ್ತು ಪಿಂಗಳ ನಾಗ: ಶ್ರೀರಾಮ ಪಟ್ಟಾಭಿಷೇಕದ ಸಂದರ್ಭದ ಮತ್ತೊಂದು ಅಪರೂಪದ ಕಥೆಯನ್ನು ಶ್ರೀಗಳು ಹಂಚಿಕೊಂಡರು. “ಪಟ್ಟಾಭಿಷೇಕದ ಸಮಯದಲ್ಲಿ ರಾಮ ಎಲ್ಲೋ ನೋಡುತ್ತಾ ಅನ್ಯಮನಸ್ಕನಾಗಿರುತ್ತಾನೆ. ಆಗ ಹನುಮಂತ (ಪಿಂಗಳ ನಾಗ) ರಾಮನನ್ನು ಪ್ರಶ್ನಿಸಿದಾಗ, ‘ನನ್ನ ಭಕ್ತನೊಬ್ಬ ಪಿಂಗಳ ನಾಗನ ರೂಪದಲ್ಲಿ ಬಂದಿದ್ದಾನೆ, ಅವನ ದರ್ಶನವಾಗುವರೆಗೂ ಪಟ್ಟಾಭಿಷೇಕ ಬೇಡ’ ಎಂದು ರಾಮ ಹೇಳುತ್ತಾನೆ. ಆ ಭಕ್ತನ ದರ್ಶನವಾದ ನಂತರವೇ ಪಟ್ಟಾಭಿಷೇಕ ನೆರವೇರುತ್ತದೆ,” ಎಂದು ದತ್ತ ತತ್ವದ ಗೂಢಾರ್ಥವನ್ನು ತಿಳಿಸಿಕೊಟ್ಟರು. ವಿಶ್ವಶಾಂತಿಗಾಗಿ ಪ್ರಾರ್ಥನೆ: ದತ್ತ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಅಭಿಷೇಕಗಳನ್ನು ನಡೆದಿವೆ, ಪ್ರಪಂಚಕ್ಕೆ ಶಾಂತಿಯಾಗಲಿ, ಜನರಿಗೆ ಸದ್ಬುದ್ಧಿ ಸಿಗಲಿ ಎನ್ನುವುದು ನಮ್ಮ ಆಶಯ,” ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
ನಂತರ ಭಕ್ತರು ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ ಮಾಡಿದರು. ಇದೇ ಸಂದರ್ಭದಲ್ಲಿ ಫೆಬ್ರವರಿ 14 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಶ್ರಮದ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಹನುಮಾನ್ ಚಾಲೀಸಾ ಪಾರಾಯಣದ ಪೋಸ್ಟರ್ ಗಳನ್ನು ಶ್ರೀಗಳು ಬಿಡುಗಡೆ ಮಾಡಿದರು. ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಉದ್ಯಮಿ ರಾಮೇಗೌಡ ಉಪಸ್ಥಿತರಿದ್ದರು.
ಮೈಸೂರು: ಈಗಾಗಲೇ ಹಲವು ವಿಶೇಷತೆಗಳಿಂದ ದಾಖಲೆಗಳನ್ನು ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಿರುವ ಮೈಸೂರಿನ ಅವಧೂತ ದತ್ತ ಪೀಠ ಇದೀಗ ಮತ್ತೊಂದು ದಾಖಲೆ ಬರೆದಿದೆ.
ಈ ಬಾರಿ ಬೋನ್ಸಾಯಿ ವೃಕ್ಷಗಳ ಸಂಗ್ರಹಣೆಯಲ್ಲಿ ದಾಖಲೆ ಮಾಡಿದ್ದು ಇದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಸಕ್ತಿ,ಕಾಳಜಿ ಮತ್ತು ಪರಿಸರ ಪ್ರೇಮ ಕಾರಣ.
ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿನ ವಿಶ್ವವಿಖ್ಯಾತ ಕಿಷ್ಕಿಂಧಾ ಮೂಲಿಕಾ ಬೋನ್ಸಾಯಿ ವನವು 2006 ರಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಂದ ಸ್ಥಾಪಿಸಲ್ಪಟ್ಟಿದ್ದು ದೇಶಾದ್ಯಂತ ಎಲ್ಲ ಜನರು,ಪ್ರವಾಸಿಗರು ಹಾಗೂ ಭಕ್ತರ ಮನ ಸೂರೆಗೊಳ್ಳುತ್ತಿದೆ.
ಇದೇ ಜೂನ್ 6 ರಿಂದ 15ರ ವರೆಗೆ ನಡೆಯುತ್ತಿರುವ ವನದುರ್ಗಾ ಪೂಜೆಯ ಪ್ರಯುಕ್ತ ಆಶ್ರಮದ ಬೋನ್ಸಾಯಿ ವನದಲ್ಲಿ ಹೊಸದಾಗಿ ಸಾವಿರಾರು ಅತ್ಯಪರೂಪದ ಬೋನ್ಸಾಯಿ ವೃಕ್ಷಗಳನ್ನು ಸಂಗ್ರಹಿಸಲಾಗಿದೆ.
ಇವುಗಳನ್ನು ನಮ್ಮ ದೇಶವಷ್ಟೇ ಅಲ್ಲದೆ ಥೈವಾನ್,ಇಂಗ್ಲೆಂಡ್, ಜಪಾನ್ ಮತ್ತಿತರ ದೇಶಗಳಿಂದ ತರಿಸಲಾಗಿದೆ.
ವಿಶ್ವದಲ್ಲೇ ಅತಿ ಹೆಚ್ಚು ಬೋನ್ಸಾಯಿ ವೃಕ್ಷಗಳಿರುವ ವನವೆಂಬ ಹೆಗ್ಗಳಿಕೆ ಪಡೆದಿರುವ ಅವಧೂತ ದತ್ತಪೀಠ ಈಗ ಮತ್ತೊಂದು ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.
ಈಗ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಒಟ್ಟು 10836 ಬೋನ್ಸಾಯ್ ವೃಕ್ಷಗಳಿವೆ. ಪುಣೆಯಲ್ಲಿ 3333 ಬೋನ್ಸಾಯ್ ವೃಕ್ಷಗಳಿದ್ದು ಅಲ್ಲಿನ ದಾಖಲೆಯನ್ನು ಅವಧೂತ ದತ್ತಪೀಠ ಮುರಿದಿದೆ.
ಇಂದು ಗಿನ್ನಿಸ್ ಸಂಸ್ಥೆಯ ಪ್ರತಿನಿಧಿ ಋಷಿನಾಥ್ ಅವರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ವಿಶ್ವದಾಖಲೆ ಪ್ರಮಾಣ ಪತ್ರವನ್ನು ಶ್ರೀ ಸ್ವಾಮೀಜಿ ಅವರಿಗೆ ಪ್ರದಾನ ಮಾಡಿದರು.ಈ ವೇಳೆ ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಮೈಸೂರು: ಇಡೀ ವಿಶ್ವದಲ್ಲಿ ಮೈಸೂರಿನ ಅವಧೂತ ದತ್ತಪೀಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಚಂಡೀಯಾಗ ಮತ್ತು ಅತಿ ಶ್ರೇಷ್ಠವಾದ ವನದುರ್ಗಾ ವೃಕ್ಷ ಶಾಂತಿ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ.
ಅವಧೂತ ದತ್ತಪೀಠದ ಶುಖ ವನದ ಬಳಿ ಮಾಧ್ಯಮ ಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನಾಳೆ ಶುಕ್ರವಾರ ದುರ್ಗಾದೇವಿಯ ಪ್ರಾರ್ಥನೆಯೊಂದಿಗೆ ಚಂಡೀಯಾಗ ಪ್ರಾರಂಭವಾಗಲಿದೆ ಎಂದು ಹೇಳಿದರು.
ಹಿಂದೆ ಮಹಾಭಾರತದ ಕಾಲದಲ್ಲಿ ಇಂತಹ ಸಹಸ್ರ ಚಂಡಿ ಯಾಗ ನಡೆದಿತ್ತು,ಅದು ಹೊರತುಪಡಿಸಿ ಪ್ರಪಂಚದಲ್ಲೇ ಪ್ರಪ್ರಥಮ ಬಾರಿಗೆ ನಮ್ಮ ಆಶ್ರಮದಲ್ಲಿ ನಡೆಯುತ್ತಿದೆ,ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ನಮ್ಮ ದೇಶ, ಕರ್ನಾಟಕ ಮತ್ತು ಇಡೀ ಜಗತ್ತಿಗೆ ಒಳಿತಾಗಲಿ,ಜನರು ಉನ್ನತಿಗೆ ಹೋಗಬೇಕು,ಕಷ್ಟ ಕೋಟಲೆಗಳು ತೊಲಗಬೇಕು,ಆರೋಗ್ಯ ಪ್ರಾಪ್ತಿಯಾಗಬೇಕು ,ಶಾಂತಿ ನೆಮ್ಮದಿ ಸಿಗಬೇಕೆಂದು ಸಂಕಲ್ಪ ಮಾಡಿ ಇಂತಹ ಒಂದು ಶ್ರೇಷ್ಟವಾದ ಚಂಡೀ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಯಾವುದೇ ಜಾತಿ,ಧರ್ಮ,ಲಿಂಗ ಭೇದವಿಲ್ಲದೆ ಯಾರು ಬೇಕಾದರೂ ಪಾಲ್ಗೊಳ್ಳಬಹುದಾಗಿದೆ ಎಂದು ಶ್ರೀಗಳು ತಿಳಿಸಿದರು.
11 ಹೋಮ ಕುಂಡಗಳಲ್ಲಿ 10 ದಿನಗಳ ಕಾಲ ಸಹಸ್ರ ಚಂಡೀಯಾಗ ನಡೆಯಲಿದೆ ಎಂದು ಹೇಳಿದರು.
ಚಂಡೀಯಾಗದ ಜೊತೆಜೊತೆಗೆ ವನದುರ್ಗಾ ವೃಕ್ಷ ಶಾಂತಿ ಮಹಾಯಜ್ಞ ನಡೆಯಲಿದೆ, ವಿಶ್ವ ಶಾಂತಿ ಹಾಗೂ ಪರಿಸರ ಸಮತೋಲನಕ್ಕಾಗಿ 8,000 ಬೋನ್ಸಾಯ್ ವೃಕ್ಷಗಳ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಇಂದಿನ ಮಕ್ಕಳಿಗೆ ಕೆಲವು ಗಿಡ ಮರಗಳ ಪರಿಚಯ ಬಿಟ್ಟರೆ ಅಮೂಲ್ಯ ವೃಕ್ಷಗಳು ಗೊತ್ತಿಲ್ಲ, ನಕ್ಷತ್ರ ವೃಕ್ಷ, ನವಗ್ರಹ ವೃಕ್ಷಗಳು ಗೊತ್ತಿಲ್ಲ,ಅದಕ್ಕಾಗಿ ಒಂದು ವೃಕ್ಷದ ಮ್ಯೂಸಿಯಂ ಮಾಡಬೇಕು ಎಂಬ ಮಹಾದಾಸೆ ಇತ್ತು. ಅದಕ್ಕೋಸ್ಕರ ತೈವಾನ್, ಇಂಗ್ಲೆಂಡ್, ಜಪಾನ್ ಮತ್ತಿತರ ದೇಶಗಳಿಂದ ಅಮೂಲ್ಯ ಗಿಡಗಳನ್ನು ತರಿಸಿದ್ದೇವೆ, ವೃಕ್ಷ ಶಾಂತಿ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.
ಬರಿ ವೃಕ್ಷಗಳನ್ನು ತರಿಸುವುದಷ್ಟೇ ಅಲ್ಲ ತೆಲಂಗಾಣ, ಆಂಧ್ರ, ತಮಿಳುನಾಡು ಕರ್ನಾಟಕ ಸೇರಿದಂತೆ ಎಲ್ಲೆಲ್ಲಿ ಜಮೀನು ಲಭ್ಯವಿದೆಯೋ ಅಲ್ಲಿ ಜಮೀನು ಖರೀದಿಸಿ, ನೀರು ತರಿಸಿ ವೃಕ್ಷಗಳನ್ನು ಬೆಳೆಸುವ ಏರ್ಪಾಟು ಮಾಡಿದ್ದೇವೆ ಎಂದು ಶ್ರೀಗಳು ತಿಳಿಸಿದರು.
ಅತ್ಯಮೂಲ್ಯ ಗಿಡಗಳುಳ್ಳ ಪಂಚ ಮೂಲಿಕ ವನವನ್ನು ಹೊಸದಾಗಿ ಮಾಡಲಾಗಿದೆ ಅದಕ್ಕಾಗಿ ಸಾಹಸ್ರಾರು ಬೊನ್ಸಾಯ್ ವೃಕ್ಷಗಳನ್ನು ಸೇರಿಸಲಾಗಿದೆ ಅದು ಸಂಜೆ ಉದ್ಘಾಟನೆಗೊಳಲಿದೆ.
ಈ ಪಂಚಮೂಲಿಕ ವನದಲ್ಲಿ ನಾವ್ಯಾರೂ ನೋಡಿರದ ಸಹಸ್ರ, ಸಹಸ್ರ ಗಿಡಗಳನ್ನು ತಂದು ಸೇರಿಸಲಾಗಿದೆ ಪೂಜೆಗೆ ಅತ್ಯುತ್ಕೃಷ್ಟವಾದ ಗಿಡಮರಗಳು ಇವೆ,ಸಂಜೀವಿನಿಯಂತಹ ಅತ್ಯಮೂಲ್ಯ ವೃಕ್ಷ, ಬೇವು,ಆಲ, ನೆಲ್ಲಿ ವಟವೃಕ್ಷ ಹೀಗೆ ಅನೇಕ ವೃಕ್ಷಗಳನ್ನು ಸಂರಕ್ಷಿಸಲಾಗುತ್ತಿದೆ.
ಯಾಗದ ಸಂದರ್ಭದಲ್ಲಿ ಪ್ರತಿ 1000 ವೃಕ್ಷಗಳ ಸಮೂಹವನ್ನು ಎಂಟು ವಿವಿಧ ದೇವತೆಗಳಿಗೆ ಸಮರ್ಪಿಸಲಾಗುತ್ತದೆ. ಗಣಪತಿ, ವಿಷ್ಣು, ಲಲಿತಾ, ಶಿವ, ಸುಬ್ರಹ್ಮಣ್ಯ, ದತ್ತಾತ್ರೇಯ, ಹನುಮಂತ ಮತ್ತು ಸೂರ್ಯದೇವ – ಈ ಎಂಟು ದೇವತೆಗಳ ಸಹಸ್ರನಾಮದ ಪವಿತ್ರ ನಾಮಗಳನ್ನು ಪ್ರತಿಯೊಂದು ವೃಕ್ಷಕ್ಕೂ ಹೆಸರಿಸಲಾಗುತ್ತಿದೆ ಎಂದು ಸ್ವಾಮೀಜಿ ತಿಳಿಸಿದರು.
ಈ ವೇಳೆ ಪಂಚ ಮೂಲಿಕಾ ವನದಲ್ಲಿನ ಬೋನ್ಸಾಯ್ ವೃಕ್ಷಗಳನ್ನು ಸ್ವತಃ ಸ್ವಾಮೀಜಿ ಮಾಧ್ಯಮದವರಿಗೆ ಪರಿಚಯಿಸಿದರು.
ನಮ್ಮ ಆಶ್ರಮ ಆಧ್ಯಾತ್ಮದ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ತೊಡಗಿದೆ ನಮ್ಮ ಎಲ್ಲಾ ದೇವಾಲಯಗಳಲ್ಲಿ ಮಂಗಳಾರತಿಯಿಂದ ಬರುವ ಪ್ರತಿಯೊಂದು ಪೈಸೆಯನ್ನು ನೆರೆ,ಬರ ಮತ್ತಿತರ ಅವಘಡಗಳಲ್ಲಿ ಸಂತ್ರಸ್ತರಾದವರಿಗೆ ಸಮರ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದೆಲ್ಲದರ ಜೊತೆಗೆ ಭಗವದ್ಗೀತೆ ಕಂಠಪಾಠ ಮಾಡಿಸಲಾಗುತ್ತದೆ, ಭಗವದ್ಗೀತೆ ಓದುವುದರಿಂದ ಮಾನಸಿಕ ಖಿನ್ನತೆ ದೂರವಾಗಲಿದೆ ಮನುಷ್ಯನ ಜೀವನ ಸುಧಾರಿಸಲಿದೆ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ನುಡಿದರು.
ನಿನ್ನೆಯ ಅವಘಡ ಕುರಿತು ಮಾತನಾಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು,ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ ಸಿ ಬಿ ವಿಜಯೋತ್ಸವ ಸಂಭ್ರಮದ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟಿರುವುದಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದರು.
ಇತ್ತೀಚೆಗೆ ಇಂತಹ ಕಾಲ್ತುಳಿತಗಳು ಹೆಚ್ಚಾಗುತ್ತಿದೆ, ತಿರುಪತಿಯಲ್ಲಿ, ಪ್ರಯಾಗ್ ರಾಜ್ ನಲ್ಲಿ ಹೀಗೆ ಆಗಿತ್ತು. ಇದೀಗ ಬೆಂಗಳೂರಿನಲ್ಲೂ ಆಗಿದೆ, ಇದೆಲ್ಲದಕ್ಕೂ ನಮ್ಮ ಜನರಲ್ಲಿ ಶಿಸ್ತು,ಸಂಯಮ ಇಲ್ಲದಿರುವುದು ಮುಖ್ಯ ಕಾರಣ ಎಂದು ಸ್ವಾಮೀಜಿ ವಿಷಾದಿಸಿದರು.
ಮೈಸೂರು: ಮೈಸೂರಿನ ಅವಧೂತ ದತ್ತಪೀಠದ ವತಿಯಿಂದ ಭಾರತೀಯ ಸೇನೆಗೆ 25 ಲಕ್ಷ ರೂಗಳ ಕಾಣಿಕೆಯನ್ನು ಅರ್ಪಿಸಲಾಯಿತು.
ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 26ನೇ ಬ್ರಹ್ಮೋತ್ಸವ ಇಂದು ಸಂಜೆ ವೇದ ಪಾರಾಯಣಗಳ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೈಸೂರು ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮೂಲಕ ಅವಧೂತ ದತ್ತ ಪೀಠದಿಂದ ಕೊಡ ಮಾಡುವ 25 ಲಕ್ಷ ರೂಗಳ ಚೆಕ್ ಹಸ್ತಾಂತರಿಸಲಾಯಿತು.
ಕಾಣಿಕೆಯನ್ನು ಸ್ವೀಕರಿಸಿ ಮಾತನಾಡಿದ ಯದುವೀರ್ ಒಡೆಯರ್ ಅವರು, ಮೈಸೂರು ನಗರ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಂಸ್ಕೃತಿ ಮತ್ತು ಪರಂಪರೆ,ಗುರು ಪರಂಪರೆಯನ್ನು ಅವಧೂತ ದತ್ತಪೀಠ ಉಳಿಸಿಕೊಂಡು ಬಂದಿದೆ.ಅತ್ಯುತ್ತಮ ವಾತಾವರಣ, ಸಂಗೀತದ ವಾತಾವರಣ ಇಲ್ಲಿ ನೆಲೆಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83ನೇ ಜನ್ಮದಿನೋತ್ಸವವೂ ಕೂಡ ಇರುವುದರಿಂದ ಅವರಿಗೆ ಆರೋಗ್ಯ ಐಶ್ವರ್ಯ ಆಯಸ್ಸು ಸಂತೋಷ ಸಿಗಲಿ ಎಂದು ಶುಭ ಹಾರೈಸಿದರು.
ಆಶ್ರಮದಿಂದ ಕೊಡ ಮಾಡಿರುವ ಈ ಕಾಣಿಕೆಯನ್ನು ನಾನು ನಮ್ಮ ಭಾರತ ಸರ್ಕಾರಕ್ಕೆ ತಲುಪಿಸುತ್ತೇನೆ, ಶ್ರೀಗಳ ಆಶೀರ್ವಾದವು ಇಡೀ ಭಾರತದ ಜನರ ಮೇಲೆ ಮತ್ತು ನಮ್ಮ ಸೈನಿಕರ ಮೇಲೆ ಇರಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಯದುವೀರ ಕೃಷ್ಣ ದತ್ತ ಚಾನರಾಜ ಒಡೆಯರ್ ಕೋರಿದರು.
ಈ ವೇಳೆ ನಿವೃತ್ತ ನ್ಯಾಯ ಮೂರ್ತಿ ಮಂಜುಳಾ ಚೆಲ್ಲೂರ್, ಶಾಸಕರಾದ ಟಿ ಎಸ್ ಶ್ರೀವತ್ಸ, ಬಿಜೆಪಿ ನಗರ ಅಧ್ಯಕ್ಷ ಎಲ್. ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಮೈಸೂರು: ಈ ವರ್ಷ ಕಠಿಣವಾದ ದಿನಗಳನ್ನು ದೇಶ ಎದುರಿಸ ಬೇಕಾಗುತ್ತದೆ,ಪ್ರಾಕೃತಿಕ ಅನಾಹುತಗಳು ಸಂಭವಿಸುತ್ತದೆ ಹಾಗಾಗಿ ದೈವೀಕ ಭಾವನೆ ಹೊಂದಬೇಕು ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಜನತೆಗೆ ತಿಳಿಸಿದ್ದಾರೆ.
ಈ ವರ್ಷ ಪ್ರಾಕೃತಿಕ ವಿಕೋಪಗಳು, ಯುದ್ಧಗಳು,ಅಪಮೃತ್ಯುಗಳು ಸಂಭವಿಸಲಿವೆ. ಹರಿ,ಶಿವನ ಕೃಪೆ ಇರುವುದರಿಂದ ಇವು ಕಡಿಮೆಯಾದರೂ ಜನತೆ ಕೂಡಾ ದೈವದ ಕಡೆ ಹೆಚ್ಚು ಗಮನ ಕೊಡಬೇಕು ಎಂದು ತಿಳಿಹೇಳಿದರು.
ಈ ಬಾರಿಯ ಕುಂಭ ಮೇಳ ಅತ್ಯಂತ ಶುಭ,ಅದರಲ್ಲೂ ಆಧ್ಯಾತ್ಮಿಕ ಪ್ರಪಂಚಕ್ಕೆ ಶುಭಕರವಾಗಿದೆ,ದೇಶದ ಜನತೆ ಧಾರ್ಮಿಕತೆ ಬಗ್ಗೆ ಅತ್ಯಂತ ಶ್ರದ್ಧೆ ತೋರಿದ್ದಾರೆ ,ಇದು ಅದೃಷ್ಟವೇ ಸರಿ ಎಂದು ತಿಳಿಸಿದರು.
ಅತೀ ದೊಡ್ಡ ಸಂಖ್ಯೆಯಲ್ಲಿ ಯುವಜನರು ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದು ಅವರಲ್ಲಿ ನಮ್ಮ ದರ್ಮದ ಬಗ್ಗೆ ಜಾಗೃತಿ ಮೂಡುತ್ತಿದೆ ಇದು ಒಳ್ಳೆಯದು ಎಂದು ಶ್ರೀಗಳು ಸಂತಸಪಟ್ಟರು.
ಇಡೀ ಕುಂಭಮೇಳದ ದಿನಗಳಲ್ಲಿ ನಮ್ಮ ದೇಶ ಅಷ್ಟೇ ಅಲ್ಲ ಇಡೀ ಪ್ರಪಂಚಕ್ಕೆ ಒಳ್ಳೆಯದಾಗಲಿ ಎಂದು ನಮ್ಮ ಭಾರತ ಪ್ರಾರ್ಥಿಸಿದೆ ನಮ್ಮ ವೇದ ಪದ್ಧತಿಯು ಸಹ ಇದನ್ನೇ ಬೋಧಿಸುತ್ತದೆ ಇದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂದು ಹೇಳಿದರು.
ಮುಂದೆ ಆಗುವ ಅನಾಹುತಗಳು ಕಷ್ಟಗಳು ತಪ್ಪಬೇಕಾದರೆ ಯುವಜನರು ಸೇರಿದಂತೆ ಇಡೀ ದೇಶದ ಜನತೆ ಮತ್ತು ಪ್ರಜಾಪ್ರತಿನಿಧಿಗಳು ದೈವಿಕ ಭಾವನೆ ಹೊಂದಿರಬೇಕು ಆದಷ್ಟು ದೇವಸ್ಥಾನಗಳನ್ನು ದರ್ಶಿಸಬೇಕು, ಪುರಾತನ ಆಲಯಗಳನ್ನು ದರ್ಶನ ಮಾಡಬೇಕು ದೇವಸ್ಥಾನಗಳ ಜೀರ್ಣೋದ್ಧಾರಗಳು ಆದರೆ ಇನ್ನೂ ಒಳಿತಾಗಲಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಪ್ರಜಾಪ್ರತಿನಿಧಿಗಳು ದೈವಿಕ ಭಾವನೆ ಹೊಂದುವ ಜೊತೆಗೆ ಎಲ್ಲಾ ಮಠಗಳು ಉಪಾಸನೆಗಳು ಒಂದೇ ಎಂಬುದನ್ನು ಅರಿಯಬೇಕು. ನಮ್ಮ ಆಚಾರ್ಯರು ಕೂಡ ಮಹತ್ವದ ಸಂದೇಶಗಳನ್ನು ನೀಡಿದ್ದಾರೆ ಅವರ ಆಶಯಗಳನ್ನು ಸಂದೇಶಗಳನ್ನು ಪಾಲಿಸಬೇಕು ನಾವೆಲ್ಲರೂ ಸಾತ್ವಿಕ ಜೀವನ ನಡೆಸಿದರೆ ಖಂಡಿತ ಕಷ್ಟಕೋಟಲೆಗಳಿಂದ ಸ್ವಲ್ಪವಾದರೂ ಪಾರಾಗಬಹುದು ಎಂದು ತಿಳಿಸಿದರು
ಮುಂದಿನ ದಿನಗಳಲ್ಲಿ ಅನಾಹುತಗಳು ಇದ್ದೇ ಇರುತ್ತದೆ. ಮೊದಲು ಜನರಲ್ಲಿರುವ ಅತೃಪ್ತಿ ಭಾವನೆ ಹೋಗಬೇಕು ಸದಾ ಹರಿಹೀ ಓಂ, ಓಂ ನಮಃ ಶಿವಾಯ ಜಪಿಸಬೇಕು, ಇಂದು ಅತ್ಯಂತ ಶುಭದಿನ, ಎಲ್ಲಾ ಗ್ರಹಗಳು ಒಂದೇ ರೇಖೆಯಲ್ಲಿ ಬಂದಿರುತ್ತದೆ ಎಂದು ಶ್ರೀಗಳು ತಿಳಿಸಿದರು.
ಈ ಮಹಾಶಿವರಾತ್ರಿಯಂದು ಇಡೀ ನಾಡಿನ ಜನತೆಗೆ ಶುಭವಾಗಲಿ ಎಲ್ಲರೂ ತಪ್ಪದೇ ಶಿವ ಸ್ಮರಣೆ ಮಾಡಿ ಹರಾ,ಜರಾ ಮಹಾದೇವ ಎಂದು ಹೇಳಿ ಓಂ ನಮಃ ಶಿವಾಯ ಎಂದು ಹೇಳುತ್ತಾ ಒಂದು ಚೊಂಬು ನೀರಿನ ಅಭಿಷೇಕ ಮಾಡಿ ಆ ಶಿವನೇ ಎಲ್ಲರನ್ನು ಆಶೀರ್ವದಿಸುತ್ತಾನೆ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉಪಸಿತರಿದ್ದರು.
ಮೈಸೂರು: ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಆವರಣದಲ್ಲಿರುವ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಅಲಂಕಾರಗಳನ್ನು ಸ್ವಾಮಿಗೆ ನೆರವೇರಿಸಲಾಯಿತು.
ಮುಂಜಾನೆಯಿಂದಲೇ ಭಕ್ತ ಸಾಗರವೇ ದೇವಾಲಯಕ್ಕೆ ಆಗಮಿಸಿ, ಉತ್ತರ ದ್ವಾರದಿಂದ ಪ್ರವೇಶಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಈ ವೇಳೆ ಅವಧೂತ ಧತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಮಾತನಾಡಿ ಲೋಕ ಕಲ್ಯಾಣಾರ್ಥವಾಗಿ ಇಂದು ಸ್ವಾಮಿಗೆ ವಿಶೇಷ ಪೂಜೆಯನ್ನು ನೆರವೇರಿಸಿ ಪ್ರಾರ್ಥನೆ ಮಾಡಲಾಗಿದೆ ಎಂದು ತಿಳಿಸಿದರು.
ಲೋಕಕಲ್ಯಾಣಾರ್ಥವಾಗಿ ಪೂಜೆ ಮಾಡಿ ನಮ್ಮ ಕರ್ನಾಟಕ ರಾಜ್ಯ, ಕರ್ನಾಟಕದ ಪ್ರಜೆಗಳು, ನಮ್ಮ ದೇಶ, ಇಡೀ ಪ್ರಪಂಚ ಚೆನ್ನಾಗಿರಲಿ ಶಾಂತಿ ಇರಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಗಿದೆ ಎಂದು ಹೇಳಿದರು.
ಶುಕ್ರವಾರದ ದಿನ ವೈಕುಂಠ ಏಕಾದಶಿ ಬಂದಿರುವುದು ತುಂಬಾ ವಿಶೇಷ, ಇವತ್ತು ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದೆ ನಮ್ಮ ಆಶ್ರಮದಲ್ಲೇ ಬೆಳೆದಿರುವ ಪುಷ್ಪಗಳಿಂದ ಪೂಜೆ ಮಾಡಿ ಅಲಂಕರಿಸಲಾಗಿದೆ, ಸ್ವಾಮಿಗೆ ವೈ ಜಯಂತಿ ಮಾಲ ಅಂದರೆ ಏಳು ತರಹದ ಪುಷ್ಪಗಳಿಂದ ಮತ್ತು ತುಳಸಿ ಪ್ರಿಯ ಸ್ವಾಮಿಗೆ ತುಳಸಿಯಿಂದ ಮತ್ತು ಪಾರಿಜಾತ ಹೂಗಳಿಂದ ಅಲಂಕಾರ ಮಾಡಿರುವುದು ಇವತ್ತಿನ ವಿಶೇಷ ಎಂದು ಬಣ್ಣಿಸಿದರು.
ಬೆಳಿಗ್ಗೆ ಎರಡು ಗಂಟೆಯಿಂದಲೇ ಸ್ವಾಮಿಗೆ ವಿಶೇಷ ಅಭಿಷೇಕ ಮಾಡಲಾಗಿದೆ, ಈಗಾಗಲೇ ತಿರುಪಾವೈ ಪಾರಾಯಣ, ಧನುರ್ಮಾಸ ಪೂಜೆ, ವಿಷ್ಣು ಸಹಸ್ರನಾಮ ಎಲ್ಲವೂ ಆಗಿದೆ. ಭೂ ಸಮೇತ ವೆಂಕಟೇಶ್ವರ ಸ್ವಾಮಿ ಅಲಂಕಾರ ಮಾಡಲಾಗಿದೆ ಇದರಂದ ಎಲ್ಲರಿಗೂ ಎಲ್ಲ ರೀತಿಯ ಶಕ್ತಿ ಬರಲಿ ಎಂದು ಪ್ರಾರ್ಥಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.
ವೈಕುಂಠ ಏಕಾದಶಿ ದಿನ ವೈಕುಂಠದಲ್ಲೂ ಕೂಡ ಉತ್ತರ ದ್ವಾರ ತೆರೆಯಲಾಗಿರುತ್ತದೆ ದೇವಾನುದೇವತೆಗಳು, ಋಷಿಮುನಿಗಳು, ಸಾಧುಗಳು ಶ್ರೀ ಸ್ವಾಮಿಯ ದರ್ಶನ ಪಡೆಯುತ್ತಾರೆ. ಅದರ ಪ್ರತಿಕವಾಗಿ ಇಂದು ಉತ್ತರ ದ್ವಾರದಲ್ಲಿ ಬಂದು ದೇವರ ದರ್ಶನ ಮಾಡಿದರೆ ಒಳ್ಳೆಯದು ಎಂದು ನಂಬಲಾಗಿದೆ.ಉತ್ತರ ಧ್ವಾರದಿಂದ ಪ್ರವೇಶಿಸಿ ಸ್ವಾಮಿಯ ದೃಷ್ಟಿ ಬಿದ್ದರೆ ಆಧ್ಯಾತ್ಮಿಕ ಚೈತನ್ಯ ಸಿಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ವೇದ ಶಾಸ್ತ್ರಗಳು ಹೇಳುತ್ತವೆ ಹಾಗಾಗಿ ಇಂದಿನ ದಿನ ವೈಕುಂಠ ದ್ವಾರ ಅಂದರೆ ಉತ್ತರ ದ್ವಾರದಿಂದ ಪ್ರವೇಶಿಸಿ ಸ್ವಾಮಿಯ ದರ್ಶನ ಪಡೆಯುವುದು ರೂಢಿಯಾಗಿದೆ ಎಂದು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.