ಎಸ್ ಸಿ ಜನರ ಮೇಲೆ ದೌರ್ಜನ್ಯವಾದರೆ ತಕ್ಷಣ ಎಫ್ಐಆರ್ ದಾಖಲಿಸಿ- ವಡೆಪಲ್ಲಿ ರಾಮಚಂದರ್

ಮೈಸೂರು: ಪರಿಶಿಷ್ಟ ಜಾತಿಯ ಜನರ ಮೇಲೆ ದೌರ್ಜನ್ಯ ನಡೆದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಭದ್ರತೆ ಒದಗಿಸಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಸದಸ್ಯ ವಡೆಪಲ್ಲಿ ರಾಮಚಂದರ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಡಿ ದೇವರಾಜ ಅರಸು ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪರಿಶಿಷ್ಟ ಜಾತಿಯ ಜನರಿಗೆ ಇರುವ ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ಪಾರದರ್ಶಕವಾಗಿ ತಲುಪಿಸಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶಿಷ್ಟ ಜಾತಿಯ ಜನರಿಗೆ ಮುದ್ರಾ ಯೋಜನೆ, ಎಂ ಎಸ್ ಎಂ ಇ ಯೋಜನೆ, ಶೈಕ್ಷಣಿಕ ಶಾಲಾ ಯೋಜನೆ, ಸ್ಟಾರ್ಟ್ ಆಫ್ ಮುಂತಾದ ಯೋಜನೆಗಳಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯವನ್ನು ನೀಡಿ ಅವರ ಏಳಿಗೆಗೆ ಕ್ರಮ ಕೈಗೊಳ್ಳಬೇಕು.
ಸಾಲ ನೀಡಲು ಅವರನ್ನು ಬ್ಯಾಂಕುಗಳು ಅಲೆದಾಡಿಸಬಾರದು ಈ ಬಗ್ಗೆ ಕ್ರಮ ವಹಿಸಬೇಕು. ಬ್ಯಾಂಕುಗಳು ಸಾಲ ನೀಡುವಲ್ಲಿ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ದೂರುಗಳು ಬರುತ್ತಿವೆ. ಮುಂದೆ ಇಂತಹ ದೂರುಗಳಿಗೆ ಆಸ್ಪದ ನೀಡದಂತೆ ಕಾರ್ಯ ನಿರ್ವಹಿಸಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ
ವಡೆಪಲ್ಲಿ ರಾಮಚಂದರ್ ಸೂಚಿಸಿದರು.

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ನಿರ್ದೇಶಕರಾದ ಸುನಿಲ್ ಕುಮಾರ್ ಬಾಬು ಅವರು ಮಾತನಾಡಿ ಸದಸ್ಯರು ಪರಿಶಿಷ್ಟ ಜಾತಿಗಳ ಜನರ ಹಕ್ಕುಗಳನ್ನು ರಕ್ಷಿಸುವ ಹಾಗೂ ಸೌಲಭ್ಯಗಳನ್ನು ಕಲ್ಪಿಸುವಂತೆ ನೋಡಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಸಮಿತಿಯ ಸದಸ್ಯರು ನ್ಯಾಯಿಕ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಕಳೆದ ವರ್ಷ 69 ರಷ್ಟು ಫಲಿತಾಂಶ ಬಂದಿದೆ. ಇದು ಕಡಿಮೆ ಆಗಿದೆ. ಎಸ್ ಎಸ್ ಎಲ್ ಸಿ ಯಲ್ಲಿ ಎಸ್ ಸಿ ಹಾಗೂ ಎಸ್ ಟಿ ವಿಧ್ಯಾರ್ಥಿಗಳ ಉತ್ತೀರ್ಣ ಮಟ್ಟವನ್ನು ಹೆಚ್ಚಳ ಮಾಡಲು ಯಾವ ಯಾವ ಕ್ರಮಗಳನ್ನು ಹಮ್ಮಿಕೊಂಡಿದ್ದೀರಿ ಎಂಬ ಬಗ್ಗೆ ಡಿಡಿಪಿಐ ಅವರಿಂದ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ಜಿಲ್ಲೆಯಲ್ಲಿ ಎಸ್ ಸಿ ಹಾಗೂ ಎಸ್ ಟಿ ನಿವೇಶನ ರಹಿತರ ಸರ್ವೇ ಮಾಡಲಾಗಿದ್ದು, ಇವರಿಗೆ ಹಂತ ಹಂತವಾಗಿ ನಿವೇಶನ ನೀಡಲು ಕ್ರಮ ವಹಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ನಿವೇಶನ ರಹಿತರು ಹೆಚ್ಚು ಇದ್ದಾರೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ ಅವರು ಮಾತನಾಡಿ,ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಶಿಷ್ಟ ಜಾತಿಗಳ ಮಾನಿಟರಿಂಗ್ ಕಮಿಟಿ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ. ಜಿಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರೀ ಮೆಟ್ರಿಕ್ 45 ಹಾಗೂ ಪೋಸ್ಟ್ ಮೆಟ್ರಿಕ್ 36 ಹಾಸ್ಟೆಲ್ ಗಳು ಇವೆ ಎಂದು ತಿಳಿಸಿದರು.

ಸಭೆಯಲ್ಲಿ ಎನ್ ಸಿ ಎಸ್ ಸಿ ಸೂರಜ್ ಕುಮಾರ್ ಯಾದವ್, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಾದ ವಿಷ್ಣುವರ್ಧನ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಗಳಾದ ಡಾ ಪಿ ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಎಸ್ ಸಿ ಜನರ ಮೇಲೆ ದೌರ್ಜನ್ಯವಾದರೆ ತಕ್ಷಣ ಎಫ್ಐಆರ್ ದಾಖಲಿಸಿ- ವಡೆಪಲ್ಲಿ ರಾಮಚಂದರ್ Read More