ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ-ಸಿಎಂ ಗೆ ಅಶೋಕ್ ಟಾಂಗ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನವರೇ,
ಕಾಂಗ್ರೆಸ್ ಪಕ್ಷಕ್ಕೆ ಸೇರಿ ಸುಮಾರು 20 ವರ್ಷಗಳಾದ ಮೇಲೆ ಮೊಟ್ಟಮೊದಲ ಬಾರಿಗೆ ಡಿಸಿಎಂ ಡಿ‌.ಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ, ನಾಟಿಕೋಳಿ ತಿಂಡಿ ತಿಂದು ಹೋಮ್ ಟೂರ್ ಮಾಡಿಕೊಂಡು ಬಂದಿದ್ದೀರಿ.ಮುಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ಎಲ್ಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಛೇಡಿಸಿದ್ದಾರೆ.
ಯಾರ ಜೊತೆ ಅಂತ ನಿಮ್ಮ ಹೈಕಮಾಂಡ್ ಏಜೆಂಟ್ ವೇಣುಗೋಪಾಲ್ ಅವರು ಆದೇಶ ಕೊಡುವುದಕ್ಕೂ ಮುಂಚೆ ಒಮ್ಮೆ ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ ಎಂದು ಟ್ವೀಟ್ ಮಾಡಿ‌ ಸಿಎಂ ಕಾಲೆಳೆದಿದ್ದಾರೆ.
ಶೌಚಾಲಯಗಳೇ ಇಲ್ಲದ ಶಾಲೆಗಳು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳು, ಬಿದ್ದು ಹೋಗುತ್ತಿರುವ ಗೋಡೆಗಳು, ಶಿಕ್ಷಕರಿಲ್ಲದ ತರಗತಿಗಳನ್ನು ಒಮ್ಮೆ ಕಣ್ತುಂಬಿಕೊಂಡು ಬನ್ನಿ ಸಿದ್ದರಾಮಯ್ಯನವರೇ.
ಇಂತಹ ಲಜ್ಜೆಗೆಟ್ಟ ಸರ್ಕಾರವನ್ನ ಇಡೀ ಪ್ರಪಂಚದ ಇತಿಹಾಸದಲ್ಲೇ ಕಾಣಲು ಸಾಧ್ಯವಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.

ಸರ್ಕಾರಿ ಸ್ಕೂಲ್ ಟೂರ್ ಮಾಡಿ ಬನ್ನಿ ಸ್ವಾಮಿ-ಸಿಎಂ ಗೆ ಅಶೋಕ್ ಟಾಂಗ್ Read More

ಸಿಎಂ ಸ್ಥಾನದ ಕಚ್ಚಾಟದಿಂದ ಆಡಳಿತ ಯಂತ್ರ ನಿಷ್ಕ್ರಿಯ:ಅಶೋಕ್ ಟೀಕೆ

ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದಾಗಿ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಆರೋಪಿಸಿದ್ದಾರೆ.

ಶಾಸಕರ ಕಚೇರಿ ಮುಂಭಾಗ ಆಯೋಜಿಸಿದ್ದ ವಂದೇ ಮಾತರಂ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೂಡಲೇ ಕಾಂಗ್ರೆಸ್‌ ಹೈಕಮಾಂಡ್‌ ಯಾರು ಮುಖ್ಯಮಂತ್ರಿ ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಒತ್ತಾಯಿಸಿದರು.

ಡಿ.ಕೆ.ಶಿವಕುಮಾರ್‌ ಅವರನ್ನು ಸಿಎಂ ಪದವಿಯಲ್ಲಿ ಕೂರಿಸಬೇಕು ಎಂದು ಅವರ ಪರ ಶಾಸಕರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ನೀಡಿಲ್ಲದಿದ್ದರೆ ಸರ್ಕಾರ ನಡೆಯುವುದಿಲ್ಲ,ಅಧಿಕಾರಿಗಳು ಕೆಲಸ ಮಾಡುವುದಿಲ್ಲ, ಆಡಳಿತಯಂತ್ರ ಕೋಮಾದಲ್ಲಿದೆ ಎಂದು ಲೇವಡಿ ಮಾಡಿದರು.

ಸಾರ್ವಜನಿಕರು, ರೈತ ಸಮುದಾಯ, ವಿದ್ಯಾರ್ಥಿಗಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಕಾಳಜಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಇಲ್ಲ,ಇತ್ತ
ಸಿದ್ದರಾಮಯ್ಯ‌ ಅವರನ್ನು ಉಳಿಸಲು ಒಂದು ಗ್ಯಾಂಗ್‌, ಇಳಿಸಲು ಮತ್ತೊಂದು ಗ್ಯಾಂಗ್‌ ಕೆಲಸ ಮಾಡುತ್ತಿದೆ. ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕೆಂದು ಒಂದು ತಂಡ, ಆಗಬಾರದೆಂದು ಮತ್ತೊಂದು ತಂಡ ತಂತ್ರ- ಕುತಂತ್ರ ಮಾಡುತ್ತಿವೆ ಎಂದು ಅಶೋಕ್ ಟೇಕಾಪ್ರಹಾರ ನಡೆಸಿದರು.

ರಾಜ್ಯದಲ್ಲಿ ಅಪರಾಧ ಕೃತ್ಯಗಳು ಹೆಚ್ಚಿವೆ. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರಾಜಕೀಯ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಯಾರು ಮುಖ್ಯಮಂತ್ರಿ ಅಂತಾ ಗೊತ್ತಾಗಿಲ್ಲ, ರಾಹುಲ್‌ ಗಾಂಧಿ ವೀಕ್‌ ಲೀಡರ್‌, ಇಡೀ ರಾಜ್ಯದಲ್ಲಿ ವೀಕ್‌ ನಾಯಕತ್ವ ಎದ್ದು ಕಾಣುತ್ತಿದೆ. ಈ ಗೇಮ್‌ಗಳ ನಡುವೆ ರಾಜ್ಯದ ಜನರು ಪರಿತಪಿಸುತ್ತಿದ್ದಾರೆ, ಕೂಡಲೇ ಕಾಂಗ್ರೆಸ್‌ ಹೈಕಮಾಂಡ್‌ ಸಿಎಂ ಬಗ್ಗೆ ತನ್ನ ತೀರ್ಮಾನ ನೀಡಬೇಕು ಎಂದು ಒತ್ತಾಯಿಸಿ ದರು.

ಕಾಂಗ್ರೆಸ್‌ನ ಇಬ್ಬರು ಶಾಸಕರು ಜೈಲಲ್ಲಿದ್ದಾರೆ. ಅವರ ಮತಗಳನ್ನು ಕೇಳಲು ಡಿಕೆಶಿ ಜೈಲಿಗೆ ಹೋಗಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಇಂತಹ ಪಾಡು ಬಂದಿರುವುದು ಶೋಚನೀಯ,
136 ಶಾಸಕರನ್ನು ನಿಯಂತ್ರಣದಲ್ಲಿಟ್ಟು
ಕೊಳ್ಳಲು ಸಾಧ್ಯವಾಗುತ್ತಿಲ್ಲ, ವಿರೋಧ ಪಕ್ಷದ ಕಾಟ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಹೇಳುವುದಾದರೆ, ನಮ್ಮ ವಿರೋಧ ಪಕ್ಷ ಬಲವಾಗಿದೆ ಎಂದರ್ಥ ಎಂದು ಅಶೋಕ ಟಾಂಗ್ ನೀಡಿದರು.

ಸಿಎಂ ಸ್ಥಾನದ ಕಚ್ಚಾಟದಿಂದ ಆಡಳಿತ ಯಂತ್ರ ನಿಷ್ಕ್ರಿಯ:ಅಶೋಕ್ ಟೀಕೆ Read More

ಸುರಂಗ ರಸ್ತೆ ಮೂಲಕ ಪರಿಸರ ನಾಶ:ಸರ್ಕಾರದ ‌ವಿರುದ್ಧ ಅಶೋಕ ಆಕ್ರೋಶ

ಬೆಂಗಳೂರು: ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಪರಿಸರವನ್ನು ಹಾಳುಗೆಡವುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು

ಸ್ಯಾಂಕಿ ಕೆರೆ ಬಳಿ ನಡೆದ ಸಹಿ ಸಂಗ್ರಹ ಹಾಗೂ ಪರಿಶೀಲನೆ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸುರಂಗ ರಸ್ತೆಗಾಗಿ ಸ್ಯಾಂಕಿ ಕೆರೆಗೆ ಧಕ್ಕೆ ತರಲಾಗುತ್ತಿದೆ. ನಾವ್ಯಾರೂ ಅಭಿವೃದ್ಧಿಯ ವಿರೋಧಿಗಳಲ್ಲ, ಆದರೆ ಯಾವುದೇ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಂದರೂ ಪರಿಸರವನ್ನು ಹಾಳು ಮಾಡಲು ನೋಡುತ್ತದೆ. ಪರಿಸರ ಇಲಾಖೆ, ಪುರಾತತ್ವ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳ ಅನುಮತಿಯನ್ನೂ ಪಡೆದಿಲ್ಲ ಎಂದು ಆರೋಪಿಸಿದರು.

ಮೆಟ್ರೋ ಯೋಜನೆಯಿಂದಾಗಿ ನಗರದಲ್ಲಿ ಟ್ರಾಫಿಕ್ ಕಡಿಮೆಯಾಗಿದೆ. ಲಕ್ಷಾಂತರ ಜನರು ಮೆಟ್ರೊ ಬಳಸುತ್ತಿದ್ದಾರೆ. ಇದನ್ನೇ ಸುಧಾರಣೆ ಮಾಡಿ ಬೇಗ ಯೋಜನೆ ಪೂರ್ಣಗೊಳಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಸುರಂಗ ಕೊರೆದರೆ ಉಂಟಾಗುವ ಹೂಳನ್ನು ಎಲ್ಲಿಗೆ ಸಾಗಿಸುತ್ತಾರೆ ಎಂಬ ಬಗ್ಗೆ ಖಾತರಿಯಿಲ್ಲ. ಕಾಸು ಹೊಡೆಯುವ ಯೋಜನೆ ನಗರಕ್ಕೆ ಬೇಕಿಲ್ಲ. ಈಗಾಗಲೇ ಬಿಹಾರ ಚುನಾವಣೆಗೆ ಹಣ ಕಳುಹಿಸಿದ್ದಾರೆ. ಈ ರೀತಿ ಹಣ ಮಾಡಲು ಯೋಜನೆ ಮಾಡಬಾರದು ಎಂದು ಟೀಕಿಸಿದರು.

ತೆರಿಗೆಗಳ ಭಾರದಿಂದ ಬೆಂಗಳೂರಿನ ಜನರಿಗೆ ಚಿತ್ರಹಿಂಸೆಯಾಗಿದೆ. ತ್ಯಾಜ್ಯ, ನೀರು ಎಲ್ಲ ದರ ಏರಿಕೆಯಾಗಿದೆ. ಸುರಂಗ ರಸ್ತೆ ನಿರ್ಮಾಣವಾದರೆ ಅದಕ್ಕೆ 20 ಸಾವಿರ ರೂ. ನಷ್ಟು ಟೋಲ್ ಪಾವತಿಸಬೇಕಾಗುತ್ತದೆ. ಸರ್ಕಾರ ಈ ಬಗ್ಗೆ ಚಿಂತನೆ ಮಾಡಲಿ ಎಂದು ‌ಸಲಹೆ ನೀಡಿದರು.

ಕಾಂಗ್ರೆಸ್ ಸೋಲು ಕಂಡಾಗಲೆಲ್ಲ ಮತಗಳ್ಳತನ ಹಾಗೂ ಇವಿಎಂ ಸರಿ ಇಲ್ಲ ಎಂಬ ಆರೋಪ ಬರುತ್ತದೆ. ಬಿಹಾರದಲ್ಲೇ ವೋಟ್ ಚೋರಿ ಬಗ್ಗೆ ಅಭಿಯಾನ ಮಾಡಿದ್ದು, ಅದನ್ನು ಮತದಾರರು ತಿರಸ್ಕರಿಸಿದ್ದಾರೆ. ಮತಪಟ್ಟಿ ಪರಿಷ್ಕರಣೆ ವೇಳೆ ಅನ್ಯದೇಶಗಳ ಜನರ ಹೆಸರು, ಸತ್ತವರ ಹೆಸರು ರದ್ದಾಗಿದೆ. ವಿಶೇಷ ಪರಿಷ್ಕರಣೆ ಸರಿ ಇಲ್ಲ ಎಂದರೆ ಯಾರೂ ನಂಬಲ್ಲ. ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಮಕಾಡೆ ಮಲಗಿದ್ದು, ಕರ್ನಾಟಕದಲ್ಲೂ ಆಡಳಿತ ಕೊನೆಯಾಗಲಿದೆ. ವೋಟ್ ಚೋರಿ ಎಂದು ಹೇಳಿ ಬಿಹಾರದ ಜನತೆಗೆ ಅಪಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಅಶೋಕ ಒತ್ತಾಯಿಸಿದರು.

ಬಿಹಾರದ ಚುನಾವಣೆಯಲ್ಲಿ ಗೆದ್ದಿದ್ದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಅವಕಾಶ ಬರುತ್ತಿತ್ತು. ಈಗ ಸಿಎಂ ಸಿದ್ದರಾಮಯ್ಯ ಬಲಿಷ್ಠವಾಗಿದ್ದಾರೆ. ರಾಹುಲ್ ಗಾಂಧಿಯ ಮಾತನ್ನು ಇನ್ನು ಯಾರೂ ಕೇಳುವುದಿಲ್ಲ. ಸಿದ್ದರಾಮಯ್ಯನವರ ಮಾತನ್ನು ರಾಹುಲ್ ಗಾಂಧಿ‌‌ ಕೇಳಬೇಕಾಗುತ್ತದೆ ಎಂದು ವ್ಯಂಗ್ಯವಾಗಿ ನುಡಿದರು.

ಸುರಂಗ ರಸ್ತೆ ಮೂಲಕ ಪರಿಸರ ನಾಶ:ಸರ್ಕಾರದ ‌ವಿರುದ್ಧ ಅಶೋಕ ಆಕ್ರೋಶ Read More

ಬಿಹಾರದ ಸೋಲು-ರಾಹುಲ್ ಗಾಂಧಿ ವಿರುದ್ದ ಅಶೋಕ್ ಲೇವಡಿ

ಬೆಂಗಳೂರು: ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು ಎಂದು ಪ್ರತಿಪಕ್ಷ ನಾಯಕ‌ ಆರ್.ಅಶೋಕ್ ಗೇಲಿ ಮಾಡಿದ್ದಾರೆ.

ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿ ಬಿಡಬಹುದೇನೋ ಆದರೆ ಅವರು ಕಾಂಗ್ರೆಸ್ ಪಕ್ಷವನ್ನ ಎಷ್ಟು ಚುನಾವಣೆಗಳಲ್ಲಿ ಸೋಲಿಸಿದ್ದಾರೆ ಎನ್ನುವುದನ್ನು ಲೆಕ್ಕ ಮಾಡುವುದು ಕಷ್ಟ ಎಂದು ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

ಸುಶಾಸನ, ಭ್ರಷ್ಟಾಚಾರ ಮುಕ್ತ ಆಡಳಿತ, ಅಭಿವೃದ್ಧಿ ರಾಜಕಾರಣದಿಂದಾಗಿ ಜನಮನ್ನಣೆ ಗಳಿಸಿರುವ ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಸರ್ಕಾರದ ಮುಂದೆ ಜಂಗಲ್ ರಾಜ್ ಕುಖ್ಯಾತಿಯ ಆರ್ ಜೆ ಡಿ – ಕಾಂಗ್ರೆಸ್ ಮಹಾಘಟಬಂಧನ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಪಕ್ಕಕ್ಕೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ರಾಹುಲ್ ಗಾಂಧಿ ಅವರು ಮುಖಭಂಗ ತಪ್ಪಿಸಿಕೊಳ್ಳಲು ವೋಟ್ ಚೋರಿ ಎಂಬ ಕಟ್ಟುಕಥೆ ಮೂಲಕ ಜನರನ್ನ ದಿಕ್ಕು ತಪ್ಪಿಸಲು ಹೊರಟಿದ್ದು ಎಂದು ಟೀಕಿಸಿದ್ದಾರೆ.

ಆದರೆ ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ವೋಟ್ ಚೋರಿ ಪ್ರಹಸನವನ್ನ ಸಾರಾಸಗಟಾಗಿ ತಿರಸ್ಕರಿಸಿ ಪ್ರಧಾನಿ ಮೋದಿ ಹಾಗು ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಸ್ಪಷ್ಟ ಜನಾದೇಶ ನೀಡಿದ್ದಾರೆ‌ ಎಂದು ಹೇಳಿದ್ದಾರೆ.

ಹರಿಯಾಣ, ಮಹಾರಾಷ್ಟ್ರ, ಬಿಹಾರದಲ್ಲಿ ಬಂದಿರುವ ಸ್ಥಿತಿಯೇ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲೂ ಬರುವ ದಿನ ಬಹಳ ದೂರವಿಲ್ಲ. ಈಗಾಗಲೇ ಜನಮನ್ನಣೆ ಕಳೆದುಕೊಂಡಿರುವ ಕಾಂಗ್ರೆಸ್‌ ಪಕ್ಷ ಕರ್ನಾಟಕದಲ್ಲೂ ಧೂಳೀಪಟ ಆಗುವುದು ನೂರಕ್ಕೆ ನೂರು ಗ್ಯಾರೆಂಟಿ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.

ಎನ್ ಡಿ ಎ ಗೆಲುವಿಗೆ ಕಾರಣೀಭೂತರಾದ ಜನತೆ ಹಾಗೂ‌ ಮೈತ್ರಿಕೂಟದ ಎಲ್ಲ ನಾಯಕರು, ಕಾರ್ಯಕರ್ತರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಬಿಹಾರದ ಸೋಲು-ರಾಹುಲ್ ಗಾಂಧಿ ವಿರುದ್ದ ಅಶೋಕ್ ಲೇವಡಿ Read More

ರಾಜ್ಯ ಸರ್ಕಾರ ರೈತರನ್ನು ಪೂರ್ಣವಾಗಿ ನಿರ್ಲಕ್ಷಿಸಿದೆ:ಅಶೋಕ್

ಬೆಂಗಳೂರು: ಅಧಿಕಾರ ಹಸ್ತಾಂತರ, ಸಂಪುಟ ವಿಸ್ತರಣೆ, ಆರ್ ಎಸ್ಎಸ್ ನಿಷೇಧ, ಬುರುಡೆ ಪ್ರಕರಣ ಹೀಗೆ ಅನವಶ್ಯಕ ಗೊಂದಲಗಳಲ್ಲೇ ಮುಳುಗಿ ಕಾಲಹರಣ ಮಾಡುತ್ತಾ‌ ರಾಜ್ಯ ಸರ್ಕಾರ ರೈತರನ್ನು ಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ಮಾಡಿ 30 ದಿನಗಳೊಳಗೆ ನೆರೆ ಪರಿಹಾರ ಕೊಡುತ್ತೇವೆ ಎಂದು ಹೇಳಿದಿರಲ್ಲ ಸಿದ್ದರಾಮಯ್ಯ ನವರೇ, ಎಲ್ಲಿ ಹೋಯಿತು ನಿಮ್ಮ ನುಡಿಯಂತೆ ನಡೆಯುವ ಸರ್ಕಾರದ ಬದ್ಧತೆ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಪಾಪ ನೀವು ತಾನೇ ಏನು ಮಾಡುತ್ತೀರಿ ಬಿಡಿ. ಅತ್ತ ರಾಹುಲ್ ಗಾಂಧಿ ಅವರು ಭೇಟಿ ಮಾಡುವುದಕ್ಕೂ ಸಮಯ ಕೊಡುತ್ತಿಲ್ಲ. ಇತ್ತ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಡೆಡ್ ಲೈನ್ ಮೇಲೆ ಡೆಡ್ ಲೈನ್ ಕೊಟ್ಟರೂ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇನ್ನು ನೆರೆ ಪರಿಹಾರ, ಕಬ್ಬು, ಜೋಳ ಬೆಳೆಗಾರರಿಗೆ ಹೆಚ್ಚುವರಿ ಬೆಂಬಲ ಬೆಲೆ ಕೊಡಬೇಕು ಅಂದರೆ ನಿಮ್ಮ ಮಾತು ಯಾರು ಕೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಅಯ್ಯೋ ಸಿಎಂ ಸಿದ್ದರಾಮಯ್ಯನವರ ಅಸಹಾಯಕತೆ ನೋಡಿದರೆ ನಿಜಕ್ಕೂ ಕನಿಕರ ಮೂಡುತ್ತಿದೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

ರಾಜ್ಯ ಸರ್ಕಾರ ರೈತರನ್ನು ಪೂರ್ಣವಾಗಿ ನಿರ್ಲಕ್ಷಿಸಿದೆ:ಅಶೋಕ್ Read More

ಕಾಂಗ್ರೆಸ್ ಸರ್ಕಾರದ ಉದ್ಧಟತನಕ್ಕೆ ಮತ್ತೋರ್ವ ರೈತ ಬಲಿ:ಅಶೋಕ್ ಕಿಡಿ

ಬೆಂಗಳೂರು: ಸಮಸ್ಯೆ ಪರಿಹಾರಕ್ಕಾಗಿ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸುತ್ತಿ ಬೇಸತ್ತು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಮೃತಪಟ್ಟಿರುವುದು ಘಾಸಿ ಉಂಟುಮಾಡಿದೆ ಎಂದು ‌ಪ್ರತಿಪಕ್ಷ ನಾಯಕ ಆರ್.ಅಶೋಕ್ ನೊಂದು ನುಡಿದಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕು ಮೂಡನಹಳ್ಳಿ ಗ್ರಾಮದ ಮಂಜೇಗೌಡ ಎಂಬ ಬಡ ರೈತ ಸಾವು ಬದುಕಿನ ಹೋರಾಟದಲ್ಲಿ ಸೋತು ಇಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮನಸಿಗೆ ಘಾಸಿಯಾಗಿದೆ ಎಂದು ಟ್ವೀಟ್ ಮಾಡಿ ಅವರು ಹೇಳಿದ್ದಾರೆ.

ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಕಾಟಾಚಾರಕ್ಕೆ ಒಂದು ದಿನ ಜನಸ್ಪಂದನ ಕಾರ್ಯಕ್ರಮ ನಡೆಸಿ ಫೋಟೋ ತೆಗೆಸಿಕೊಂಡು ಪುಟಗಟ್ಟಲೆ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆದುಕೊಂಡಿರಲ್ಲ ಇದರಿಂದ ರೈತರು, ಜನಸಾಮಾನ್ಯರಿಗೆ ಏನು ಪ್ರಯೋಜನವಾಗಿದೆ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ಪ್ರತಿ ತಿಂಗಳು ಜನಸ್ಪಂದನ ಮಾಡಿ ಜನರ ಅಹವಾಲು ಸ್ವೀಕರಿಸಿ ಎಂದು ತಾವು ಕೊಟ್ಟ ಆದೇಶ ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ನಿಮ್ಮ ಮಾತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಯಾರೂ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಬಡವರು, ರೈತರು ಸರ್ಕಾರಿ ಕಚೇರಿಗಳಿಗೆ ಬಂದರೆ ಅವರನ್ನು ಒಳಗೆ ಕರೆದು ಅವರ ಅಹವಾಲು ಕೇಳುವ, ಅವರ ಅರ್ಜಿ ಸ್ವೀಕರಿಸುವ ಕನಿಷ್ಠ ಸೌಜನ್ಯವೂ ಇಲ್ಲದಂತಾಗಿದೆ ನಿಮ್ಮ ಸಂವೇದನಾರಹಿತ ಸರ್ಕಾರಕ್ಕೆ ಎಂದು ‌ಅಶೋಕ್ ಚಾಟಿ ಬೀಸಿದ್ದಾರೆ‌

ನಿಮ್ಮ ಈ ದುರಾಡಳಿತಕ್ಕೆ, ಬೇಜವಾಬ್ದಾರಿತನಕ್ಕೆ, ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು, ಜನರ ಪಾಲಿಗೆ ನಿಮ್ಮ ಸರ್ಕಾರ ಎಂದೋ ಸತ್ತು ಹೋಗಿದೆ, ಸಾಕು ಈ ಭಂಡ ಬಾಳು. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಉದ್ಧಟತನಕ್ಕೆ ಮತ್ತೋರ್ವ ರೈತ ಬಲಿ:ಅಶೋಕ್ ಕಿಡಿ Read More

ಮೊದಲು ಪಾಲಿಕೆ ಶಿಕ್ಷಕರಿಗೆ ಸಂಬಳ ಕೊಡಿ-ಅಶೋಕ್ ಆಗ್ರಹ

ಬೆಂಗಳೂರು: ಟನಲ್ ರೋಡ್ ಬಿಡಿ ಸ್ವಾಮಿ,ಮೊದಲು ಪಾಲಿಕೆ ಶಿಕ್ಷಕರಿಗೆ ಸಂಬಳ ಕೊಡಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪರೋಕ್ಷವಾಗಿ ಬೆಂಗಳೂರು ಅಭಿವೃದ್ಧಿ ಸಚಿವರೂ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಆಗ್ರಹಿಸಿದ್ದಾರೆ.

ಸುರಂಗ ರಸ್ತೆ ಮಾಡ್ತೀನಿ, ಸ್ಕೈ ಡೆಕ್ ಮಾಡ್ತೀನಿ, ಬ್ರ್ಯಾಂಡ್ ಬೆಂಗಳೂರು ಮಾಡ್ತೀನಿ, ಜಿಬಿಎ ಮಾಡ್ತೀನಿ ಅಂತ ಬರೀ ಸುಳ್ಳು ಹೇಳಿ ಕನ್ನಡಿಗರಿಗೆ ಚೊಂಬು ಕೊಟ್ಟಿದ್ದೇ ನಿಮ್ಮ ಸಾಧನೆ ಎಂದು ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

ನಿಮ್ಮ ಜಿಬಿಎ ಅವ್ಯವಸ್ಥೆಯಿಂದ ಪಾಲಿಕೆ ಶಿಕ್ಷಕರು ಕಳೆದ 4 ತಿಂಗಳಿಂದ ಸಂಬಳವಿಲ್ಲದೆ ಸಂಸಾರ ತೂಗಿಸಲು ಪರದಾಡುತ್ತಿದ್ದಾರೆ. ಮೊದಲು ಅವರಿಗೆ ಬಾಕಿ ವೇತನ ಬಿಡುಗಡೆ ಮಾಡಿ ಶಿಕ್ಷರರ ಸಮಸ್ಯೆ ಬಗೆಹರಿಸಿ ಎಂದು ಅಶೋಕ ತಾಕೀತು ಮಾಡಿದ್ದಾರೆ.

ಮೊದಲು ಪಾಲಿಕೆ ಶಿಕ್ಷಕರಿಗೆ ಸಂಬಳ ಕೊಡಿ-ಅಶೋಕ್ ಆಗ್ರಹ Read More

ಬೆಲೆ ಇಳಿಕೆ ಯಾವಾಗ:ಸರ್ಕಾರಕ್ಕೆ ಅಶೋಕ್ ಪ್ರಶ್ನೆ

ಬೆಂಗಳೂರು: ಜಿಎಸ್ಟಿ ಸುಧಾರಣೆ ನಂತರ ದಿನಬಳಕೆ ವಸ್ತುಗಳಿಂದ ಹಿಡಿದು ಬೈಕು-ಕಾರುಗಳವರೆಗೆ ದೇಶಾದ್ಯಂತ ವ್ಯಾಪಾರ ವಹಿವಾಟು ಜೋರಾಗಿದ್ದು, ಜನಸಾಮಾನ್ಯರು ಸಂತೋಷದಿಂದ ಜಿಎಸ್ಟಿ ಉಳಿತಾಯದ ಲಾಭ ಪಡುತ್ತಿದ್ದಾರೆ. ವ್ಯಾಪಾರಸ್ಥರು, ವರ್ತಕರು ಸಂತೋಷಗೊಂಡಿದ್ದಾರೆ.

ಆದರೆ ರಾಜ್ಯದಲ್ಲಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಿಂದ ಸತತವಾಗಿ ಏರಿಸಿರುವ ಹಾಲು, ಪೆಟ್ರೋಲ್, ಡಿಸೇಲ್, ನೀರು, ವಿದ್ಯುತ್ ಬೆಲೆಯನ್ನು ಇಳಿಸುವುದು ಯಾವಾಗ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಜಿ ಎಸ್ ಟಿ: ಗ್ಯರೆಂಟಿ ಸಿದ್ದರಾಮಯ್ಯ ಟ್ಯಾಕ್ಸ್
ನಿಂದ ಕನ್ನಡಿಗರಿಗೆ ಮುಕ್ತಿ ಯಾವಾಗ ಎಂದು ಟೀಕಿಸಿದ್ದಾರೆ.

ಬೆಲೆ ಇಳಿಕೆ ಯಾವಾಗ:ಸರ್ಕಾರಕ್ಕೆ ಅಶೋಕ್ ಪ್ರಶ್ನೆ Read More

ಸಿದ್ದರಾಮಯ್ಯ ವಿರುದ್ಧ ಅಶೋಕ್ ಕಿಡಿ

ಬೆಂಗಳೂರು: ಹಿಂದೂಗಳ ದೇವಸ್ಥಾನ, ಹಬ್ಬ, ಆಚರಣೆಗಳಿಗೆ ಅಡಚಣೆ ಉಂಟು ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅದೆಂತಹ ವಿಕೃತ ಸಂತೋಷ ಸಿಗುತ್ತೋ ಗೊತ್ತಿಲ್ಲ ಎಂದು ಪ್ರತಿಪಕ್ಷ ನಾಯಕ‌ ಆರ್.ಅಶೋಕ್ ಟೀಕಿಸಿದ್ದಾರೆ.

ತಾಯಿ ಚಾಮುಂಡೇಶ್ವರಿ, ತಾಯಿ ಭುವನೇಶ್ವರಿ, ನಮ್ಮ ಸಂಸ್ಕೃತಿಯ ಪ್ರತೀಕವಾದ ಅರಿಷಿಣ, ಕುಂಕುಮದ ಮೇಲೆ ನಂಬಿಕೆ ಇಲ್ಲದ ಅನ್ಯ ಧರ್ಮೀಯರಿಂದ ದಸರಾ ಉದ್ಘಾಟನೆ ಮಾಡಿಸುವ ಹಠ ಸಾಧಿಸಿದ್ದಾಯಿತು ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ದುಬಾರಿ ಪಾಸ್ ನೆಪದಲ್ಲಿ ಜನಸಾಮಾನ್ಯರಿಗೆ ದಸರಾ ವೀಕ್ಷಣೆ ಕಷ್ಟಸಾಧ್ಯ ಮಾಡಿದ್ದಾಯ್ತು
ಈಗ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ 14 ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಏರಿಕೆ ಮಾಡುವ ಮೂಲಕ ಹಿಂದೂಗಳಿಗೆ ಮತ್ತೊಂದು ಪೆಟ್ಟು ನೀಡಿದ್ದಾರೆ ಎಂದು ಅಶೋಕ್ ದೂರಿದ್ದಾರೆ‌

ಹಿಂದೂಗಳೆಂದರೆ ತಮಗೆ ಯಾಕಿಷ್ಟು ದ್ವೇಷ, ತಾತ್ಸಾರ ಸಿದ್ದರಾಮಯ್ಯನವರೇ,ರಾಹುಲ್ ಗಾಂಧಿ ಅವರ ಸಂವಿಧಾನ ಪುಸ್ತಕದಲ್ಲಿ ಹಿಂದೂಗಳು ಎರಡನೇ ದರ್ಜೆ ಪ್ರಜೆಗಳಾ ಎಂದು ಅಶೋಕ್ ಕಾರವಾಗಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಅಶೋಕ್ ಕಿಡಿ Read More

ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ:ಅಶೋಕ್‌ ವ್ಯಂಗ್ಯ ಸಲಹೆ

ಬೆಂಗಳೂರು: ಅಭಿವೃದ್ಧಿಗೆ ದುಡ್ಡಿಲ್ಲ,ರಾಜ್ಯದ ಪ್ರಗತಿಗೆ ಯಾವುದೇ ದೂರದೃಷ್ಟಿ ಇಲ್ಲ,ಹೂಡಿಕೆದಾರರನ್ನು, ಉದ್ಯಮಿಗಳನ್ನು ಆಕರ್ಷಿಸುವ, ಹಿಡಿದಿಟ್ಟುಕೊಳ್ಳುವ ಆಸಕ್ತಿ ಇಲ್ಲದ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.

ಹಿಂದೆಂದೂ ಕಂಡರಿಯದ ದುರಾಡಳಿತ, ಭ್ರಷ್ಟಾಚಾರದ ಕೂಪದಲ್ಲಿ ರಾಜ್ಯವನ್ನು ಮುಳುಗಿಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಮುಜುಗರಕ್ಕೊಳಗಾದಾಗಲೆಲ್ಲ ಜನರ ದಿಕ್ಕು ತಪ್ಪಿಸಲು, ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ಎಂಬ ಮೆಗಾ ಸೀರಿಯಲ್ ನ ಒಂದೊಂದೇ ಸಂಚಿಕೆ ಹೊರಬಿಡುವ ನಾಟಕ ಮಾಡುತ್ತಿದೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ‌

ಸಿಎಂ ಸಿದ್ದರಾಮಯ್ಯನವರೇ, ಇನ್ನೆಷ್ಟು ದಿನ ಈ ಭಂಡ ಬಾಳು. ನೀವು ಹೇಳಿದ್ದನ್ನ ನಿಮ್ಮ ಸಂಪುಟ ಸದಸ್ಯರೆ ಒಪ್ಪುವುದಿಲ್ಲ, ಶಾಸಕರೂ ಒಪ್ಪುವುದಿಲ್ಲ, ಹೈಕಮಾಂಡ್ ಅಂತೂ ನಿಮ್ಮ ಮಾತಿಗೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ, ಈ ಭಂಡ ಬಾಳು ಸಾಕು ಮಾಡಿ ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ ಎಂದು ಅಶೋಕ್ ಹೇಳಿದ್ದಾರೆ.

ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ:ಅಶೋಕ್‌ ವ್ಯಂಗ್ಯ ಸಲಹೆ Read More