ಮೈಸೂರು: ಆಷಾಢ ಮಾಸ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಮೊಬೈಲ್ ಹಾಗೂ ಕ್ಯಾಮರಾದಲ್ಲಿ ರೀಲ್ಸ್ ಮಾಡುವುದು ಹಾಗೂ ಫೋಟೋ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಾಳೆ ಮೊದಲ ಅಷಾಢ ಶುಕ್ರವಾರ.ಚಾಮುಂಡಿ ಬೆಟ್ಟದಲ್ಲಿ ಸಕಲ ಸುದ್ದತೆಗಳನ್ನು ಮಾಡಲಾಗಿದೆ.
ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಜುಲೈ 4 ರಂದು ಎರಡನೇ ಆಷಾಢ ಶುಕ್ರವಾರ, ಜುಲೈ 11 ರಂದು ಮೂರನೇ ಆಷಾಢ ಶುಕ್ರವಾರ, ಜುಲೈ 17 ಗುರುವಾರ ದಂದು ವರ್ಧಂತಿ ಉತ್ಸವ ನೆರವೇರಲಿದೆ.
ಜುಲೈ 18 ರಂದು ನಾಲ್ಕನೇ ಆಷಾಢ ಶುಕ್ರವಾರ ಇರಲಿದೆ. ಪ್ರತಿ ಶುಕ್ರವಾರ ಬೆಳಿಗ್ಗೆ ವಿಶೇಷ ಅಭಿಷೇಕ, ದೇವಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರ ಉತ್ಸವ ನೆರವೇರಲಿದ್ದು ನಂತರ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.
ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದಂದು ಪ್ರಾತಃಕಾಲ 5.30ಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಮಂಗಳಾರತಿ ಬೆಳಿಗ್ಗೆ 9.30ಕ್ಕೆ ಮಹಾಮಂಗಳಾರತಿ ನಂತರ ಬೆಳಿಗ್ಗೆ 10.30ಕ್ಕೆ ಅಮ್ಮನವರಿಗೆ ಚಿನ್ನದ ಪಲ್ಲಕ್ಕಿ ಉತ್ಸವ, ಮಂಟಪೋತ್ಸವ, ಪ್ರಸಾದ ವಿನಿಯೋಗ ರಾತ್ರಿ 8.30ಕ್ಕೆ ಶ್ರೀಯವರಿಗೆ ಉತ್ಸವ ಫಲಪೂಜೆ, ದರ್ಬಾರ್ ಉತ್ಸವ, ಮಂಟಪೋತ್ಸವ, ರಾಷ್ಟ್ರಾಶೀರ್ವಾದ ಜರುಗಲಿದೆ.
ಆಷಾಢ ಶುಕ್ರವಾರದಂದು ಭಕ್ತಾದಿಗಳು ಈ ಕೆಳಗಿನ ಅಂಶಗಳನ್ನ ಗಮನದಲ್ಲಿಟ್ಟುಕೊಳ್ಳಬೇಕಿದೆ.
ಚಾಮುಂಡೇಶ್ವರಿ ದೇವಾಲಯದಲ್ಲಿ ಉತ್ಸವ ಮೂರ್ತಿ, ಗರ್ಭಗುಡಿ ಮತ್ತು ಪ್ರಾಂಗಣದಲ್ಲಿ ಮೊಬೈಲ್ ಹಾಗೂ ಕ್ಯಾಮರದಲ್ಲಿ ರೀಲ್ಸ್ ಮಾಡುವುದು ಹಾಗೂ ಫೋಟೋ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಫೋಟೋ ಮತ್ತು ವಿಡಿಯೋ ಮಾಡಿದ್ದು ಕಂಡುಬಂದಲ್ಲಿ ಮೊಬೈಲ್ ,ಕ್ಯಾಮರವನ್ನು ಶಾಶ್ವತವಾಗಿ ವಶಪಡಿಸಿಕೊಳ್ಳಲಾಗುತ್ತದೆ.
ಇನ್ನು ಮುಂದೆ ಪ್ರಾಧಿಕಾರದ ವತಿಯಿಂದಲೇ ಉತ್ಸವ ಮೂರ್ತಿಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿ ಮತ್ತು ನೇರಪ್ರಸಾರವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತದೆ.
ಆಷಾಢ ಮಾಸದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಯಾವುದೇ ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶವಿರುವುದಿಲ್ಲ. ಆಷಾಢ ಮಾಸದಲ್ಲಿ ಈ ಮೇಲಿನ ದಿನಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಲಲಿತ ಮಹಲಿನ ಆವರಣದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವತಿಯಿಂದ ಉಚಿತ ಬಸ್ ಸೇವೆ ಮತ್ತು ವಾಹನ ನಿಲುಗಡೆ ಮಾಡಲಾಗಿದೆ.
ಎಲ್ಲಾ ವಿಶೇಷ ದರ್ಶನದ ಟಿಕೆಟ್ ಗಳನ್ನು ಲಲಿತ ಮಹಲ್ ಆವರಣದಲ್ಲಿ ನೀಡಲಾಗುತ್ತದೆ, ಬೆಟ್ಟದ ಮೇಲೆ ಯಾವುದೇ ವಿಶೇಷ ದರ್ಶನದ ಟಿಕೆಟ್ ಗಳನ್ನು ನೀಡಲಾಗುವುದಿಲ್ಲ. ಧರ್ಮದರ್ಶನ, 300 ರೂ. ದರ್ಶನ, 2000 ರೂ ದರ್ಶನ ಹೀಗೆ ವಿವಿಧ ಬಗೆಯ ದರ್ಶನದ ವ್ಯವಸ್ಥೆಯನ್ನು ಮಾಡಿದ್ದು ಇದಕ್ಕೆ ಅನುಗುಣವಾಗುವಂತೆ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಚಾಮುಂಡಿ ಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಾಳೆ ಮೊದಲ ಆಷಾಢ ಶುಕ್ರವಾರ. ಹಿರಿಯ ಪೊಲೀಸ್ ಅಧಿಕಾರಿಗಳು,ಜಿಲ್ಲಾಧಿಕಾರಿಗಳು ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಾಳೆ ಮೊದಲ ಆಷಾಢ ಶುಕ್ರವಾರ: ಬೆಟ್ಟದಲ್ಲಿ ಸಕಲ ಸಿದ್ಧತೆ;ಚಿತ್ರೀಕರಣ ನಿಷೆಧ Read More