ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡಿದ್ದ ಇಬ್ಬರು ಅಂದರ್
(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಜಿಂಕೆಯನ್ನು ಬೇಟೆಯಾಡಿ ಅದರ ಮಾಂಸವನ್ನು ತುಂಡು ಮಾಡಿ ಪಾಲು ಹಾಕುತ್ತಿದ್ದ ಇಬ್ಬರನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು
ಬಂಧಸಿದ್ದಾರೆ.
ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಮಹದೇವ (42) ಹಾಗೂ ದೊಡ್ಡಿಂದುವಾಡಿ ಗ್ರಾಮದ ಕಿರಣ್ (30) ಬಂಧಿತ ಆರೋಪಿಗಳು.
ಆರೋಪಿಗಳಿಂದ 41 ಕೆ.ಜಿ ಮಾಂಸ, ಒಂದು ತಲೆ ಐದು ಕಾಲುಗಳು, ಒಂದು ಮಚ್ಚು, 4 ಚೂರಿಗಳು, 3 ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಂಧಿತರು ಸೇರಿದಂತೆ ಐವರು ಆರೋಪಿಗಳು ಜಿಂಕೆಯನ್ನು ಬೇಟೆಯಾಡಿ ತಂದು ದೊಡ್ಡಿಂದುವಾಡಿ ಕಬಿನಿ ಚಾನೆಲ್ ಬಳಿ ತುಂಡು ಮಾಡಿ ಅದರ ಮಾಂಸವನ್ನು ಪಾಲು ಹಾಕುತ್ತಿದ್ದರು.
ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಕೂಡಲೆ ಮಡಿಕೇರಿ ಅರಣ್ಯ ಘಟಕದ ಪ್ರಭಾರ ಪೊಲೀಸ್ ಅಧೀಕ್ಷಕ ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ನಂತರ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು 41 ಕೆಜಿ ಜಿಂಕೆಯ ಹಸಿ ಮಾಂಸ, ಜಿಂಕೆಯ ಒಂದು ತಲೆ ಐದು ಕಾಲುಗಳು, ಮಾಂಸವನ್ನು ಕತ್ತರಿಸಲು ಬಳಸಿದ್ದ ಒಂದು ಮಚ್ಚು ಹಾಗೂ 4 ಚೂರಿಗಳು ಹಾಗೂ 3 ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಂಡು ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಉಳಿದ ಆರೋಪಿಗಳು ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿ ತಲೆಮರಿಸಿಕೊಂಡಿದ್ದಾರೆ. ದಾಳಿಯಲ್ಲಿ ಪಿ.ಎಸ್.ಐ ವಿಜಯರಾಜ್ ಮುಖ್ಯ ಪೇದೆಗಳಾದ ಸ್ವಾಮಿ, ಬಸವರಾಜು, ರಾಮಚಂದ್ರ, ಜಮಿಲ್, ಪ್ರಭಾಕರ ಹಾಗೂ ಮಹಿಳಾ ಮುಖ್ಯ ಪೇದೆ ಲತಾ ಮತ್ತು ಪೇದೆ ಬಸವರಾಜು ರವರು ಭಾಗವಹಿಸಿದ್ದರು.
ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡಿದ್ದ ಇಬ್ಬರು ಅಂದರ್ Read More

