ಗ್ರೂಪ್ ಎ ಬಿ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ ರಾಜ್ಯದ ಹೆಮ್ಮೆ: ಶಾಲಿನಿ ರಜನೀಶ್

ಮೈಸೂರು: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಿoದ ಗ್ರೂಪ್ ʼಎʼ ಮತ್ತು ʼಬಿʼ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ ನೀಡುತ್ತಿರುವುದು ನಮ್ಮ ರಾಜ್ಯದ‌ ಹೆಮ್ಮೆಯ‌ ವಿಷಯ ಎಂದು ಮೈಸೂರು ಆಡಳಿತ ತರಬೇತಿ ಸಂಸ್ಧೆಯ ಮಹಾ ನಿರ್ದೇಶಕರಾದ ಶಾಲಿನಿ ರಜನೀಶ್‌ ತಿಳಿಸಿದರು.

ಪ್ರತಿ ವರ್ಷ ಸರಾಸರಿ 280 ತರಬೇತಿ ಕಾರ್ಯಕ್ರಮಗಳ ಮೂಲಕ
ಸುಮಾರು 8400 ಗ್ರೂಪ್ ʼಎʼ ಮತ್ತು ʼಬಿʼ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಲಾಗುತ್ತಿದೆ, ನಮ್ಮ ರಾಜ್ಯದ ಉತ್ತಮ ಆಡಳಿತದ ಬಗ್ಗೆ ತಿಳಿದು ಕೊಳ್ಳಲು ಬರುವ ಇತರೆ ರಾಜ್ಯಗಳ ಅಧಿಕಾರಿಗಳಿಗೆ ನಮ್ಮ ಸಂಸ್ಥೆ ವತಿಯಿಂದ ತರಬೇತಿ ನೀಡುತ್ತಿರುವುದು ನಮ್ಮ ರಾಜ್ಯದ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು.

2024 ನೇ ಬ್ಯಾಚ್ ನ ತ್ರಿಪುರ ರಾಜ್ಯದ ಆಡಳಿತ ಸೇವೆಗೆ ಸೇರಿದ ʼಎʼ ವೃಂದದ ಒಟ್ಟು 30 ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಮೇ 9 ರಿಂದ ಮೇ 12 ರವರೆಗೆ ಹಮ್ಮಿಕೊಂಡಿದ್ದು ಈ ತರಬೇತಿ ಕಾರ್ಯಕ್ರಮವನ್ನು ಮೈಸೂರು ಆಡಳಿತ ತರಬೇತಿ ಸಂಸ್ಥೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಶಾಲುನಿ ರಜನೀಶ್ ಮಾತನಾಡಿದರು.

ನಮ್ಮ ರಾಜ್ಯದ ಇ-ಆಡಳಿತ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಉತ್ತಮ ಆಡಳಿತ ಹಾಗೂ ನಾಗರೀಕ ಸ್ನೇಹಿ ಯೋಜನೆಗಳಾದ ʼಭೂಮಿʼ, ʼಮೋಜಿಣಿʼ,ʼಸೇವಾಸಿಂಧುʼ, ʼಏಕೀಕೃತ ಭೂ ನಿರ್ವಹಣಾ ವ್ಯವಸ್ಥೆʼ, ʼಕೂಸಿನ ಮನೆʼಇತ್ಯಾದಿ ಯಶಸ್ವಿ ಯೋಜನೆಗಳ ಕುರಿತು ತರಬೇತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಶಿಕ್ಷಣಾರ್ಥಿಗಳು ಮೈಸೂರಿನ ಪಾರಂಪರಿಕ ಸ್ಥಳಗಳು, ಚಾಮರಾಜನಗರ ಜಿಲ್ಲೆಯ ನಿಟ್ರೆ ಗ್ರಾಮ ಪಂಚಾಯತಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬoಧಿಸಿದoತೆ ಮೈಸೂರು ಮಹಾನಗರ ಪಾಲಿಕೆಗೆ ಭೇಟಿ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾದ (ಆಡಳಿತ), ರೂಪಶ್ರೀ ಕೆ, ಜಂಟಿ ನಿರ್ದೇಶಕರಾದ (ತರಬೇತಿ) ಸಾಧನ ಅಶೋಕ್ ಪೋಟೆ, ಹಾಗೂ ತರಬೇತಿ ನಿರ್ದೇಶಕರಾದ ಡಾ. ಕವಿತ ಎಂ.ಆರ್ ಮತ್ತು ಸಂಸ್ಥೆಯ ಎಲ್ಲಾ ಬೋಧಕರು ಉಪಸ್ಥಿತರಿದ್ದರು.

ಗ್ರೂಪ್ ಎ ಬಿ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ ರಾಜ್ಯದ ಹೆಮ್ಮೆ: ಶಾಲಿನಿ ರಜನೀಶ್ Read More

ಕಾಂಗ್ರೆಸ್‌ ಸರ್ಕಾರದಿಂದ ಜನರ ಮೇಲೆ ತೆರಿಗೆಯ ದಾಳಿ: ಅಶೋಕ್ ಕಿಡಿ

ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ದಾಳಿ ಮಾಡಿದಂತೆಯೇ ಕಾಂಗ್ರೆಸ್‌ ಸರ್ಕಾರ ಜನರ ಮೇಲೆ ತೆರಿಗೆಯ ದಾಳಿ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಬೆಲೆ ಏರಿಕೆಯ ನೀತಿ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದ್ದು, ಅದಕ್ಕೆ ಕಾಂಗ್ರೆಸ್‌ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂದಮೇಲೆ ಈ ಹೋರಾಟ ಯಶಸ್ವಿಯಾಗಿದೆ ಎಂದೇ ಅರ್ಥ ಎಂದರು.

ಬೆಂಗಳೂರಿನಲ್ಲಿ ಕಸಕ್ಕೆ, ಪಾರ್ಕಿಂಗ್‌ಗೆ ಶುಲ್ಕ ವಿಧಿಸಿದ್ದಾರೆ. ಇದು ತುಘಲಕ್‌ ದರ್ಬಾರ್‌ ಆಗಿದ್ದು, ಯಾರೂ ಕೇಳುವವರಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವೀಲ್‌ಚೇರ್‌ನಲ್ಲಿದ್ದರೆ, ಡಿಸಿಎಂ ಡಿ.ಕೆ.ಶಿವಕುಮಾರ್‌ ಬೊಟ್ಟು ಇಟ್ಟುಕೊಂಡು ದೇವಸ್ಥಾನಗಳಲ್ಲಿ ಹೋಮ ಮಾಡಿಸುತ್ತಿದ್ದಾರೆ. ಬೊಟ್ಟು ಇಟ್ಟುಕೊಂಡು ಎಲ್ಲವನ್ನೂ ಮುಸ್ಲಿಮರಿಗೆ ಧಾರೆ ಎರೆಯುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಇಲ್ಲಿ ಆಡಳಿತವನ್ನು ಯಾರೂ ನಡೆಸುತ್ತಿಲ್ಲ. ಅಧಿಕಾರಕ್ಕಾಗಿ ಕಿತ್ತಾಟ ಮಾತ್ರ ನಡೆಯುತ್ತಿದೆ. ಈ ಹಿಂದೆ ಮುಡಾ ಹಗರಣದ ವಿರುದ್ಧ ಪಾದಯಾತ್ರೆ ಮಾಡಿದ್ದಕ್ಕಾಗಿ ಸಚಿವರು ರಾಜೀನಾಮೆ ನೀಡಿದರು. ಮುಖ್ಯಮಂತ್ರಿ ಸೈಟುಗಳನ್ನು ವಾಪಸ್‌ ಕೊಟ್ಟರು. ಇವೆಲ್ಲ ನಮ್ಮ ಹೋರಾಟದ ಫಲ ಈಗಲೂ ಹೋರಾಟ ಮಾಡಿ ಫಲಿತಾಂಶ ನೀಡುತ್ತೇವೆ ಎಂದು ಅಶೋಕ್ ತಿಳಿಸಿದರು.

ಭಾರತದ ಸಂಸತ್ತು ಯಾವತ್ತಿಗೂ ಶ್ರೇಷ್ಠವಾದುದು. ಇವರನ್ನು ಕೇಳಿ ಯಾರೂ ವಕ್ಫ್‌ ಕಾನೂನು ತರುವುದಿಲ್ಲ. ಹಿಂದೆ ಮನಮೋಹನ್‌ ಸಿಂಗ್‌ ಅವಧಿಯಲ್ಲಿ ತಂದ ಕಾನೂನಿನಿಂದಾಗಿ ಭೂಮಿ ಕಬಳಿಕೆಯಾಗಿದೆ. ವಕ್ಫ್‌ ತಿದ್ದುಪಡಿ ಕಾನೂನನ್ನು ಎಲ್ಲರೂ ಪಾಲಿಸಲೇಬೇಕು. ಕಾಂಗ್ರೆಸ್‌ನವರು 50 ಸಲ ಸಂವಿಧಾನ ಬದಲಿಸಿದ್ದಾರೆ. ಅವರಿಂದ ಬಿಜೆಪಿ ಬುದ್ಧಿ ಕಲಿಯಬೇಕಿಲ್ಲ ಎಂದು ತುರುಗೇಟು ನೀಡಿದರು.

ಹುಬ್ಬಳ್ಳಿಯಲ್ಲಿ ಅತ್ಯಾಚಾರ-ಕೊಲೆ ಮಾಡಿದ ವ್ಯಕ್ತಿ ಕಾನೂನು ರೀತಿಯಲ್ಲಿ ಎನ್‌ಕೌಂಟರ್‌ ಆಗಿರುವುದು ಉತ್ತಮ. ಇಂತಹ ತಪ್ಪು ಮಾಡಿದವರಿಗೆ ಕಾನೂನು ರೀತಿಯಲ್ಲೇ ಶಿಕ್ಷೆಯಾಗಬೇಕು ಎಂದು ಅಶೋಕ್ ಹೇಳಿದರು.

ಕಾಂಗ್ರೆಸ್‌ ಸರ್ಕಾರದಿಂದ ಜನರ ಮೇಲೆ ತೆರಿಗೆಯ ದಾಳಿ: ಅಶೋಕ್ ಕಿಡಿ Read More

ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರ ಕುಸಿತ:ಜನಾಕ್ರೋಶವೇ ಸಾಕ್ಷಿ-ಅಶೋಕ್

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರ ಕುಸಿದುಬಿದ್ದಿದ್ದು, ಭ್ರಷ್ಟಾಚಾರ ಮೇರೆ ಮೀರಿರುವುದಕ್ಕೆ ರಾಜ್ಯಾದ್ಯಂತ ವ್ಯಕ್ತವಾಗುತ್ತಿರುವ ಜನಾಕ್ರೋಶ ವೇ ಸಾಕ್ಷಿ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಎಂದು ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ನೀಡಿರುವ ಸರ್ಟಿಫಿಕೇಟ್ ಮತ್ತು 20 ತಿಂಗಳ ಬಳಿಕ ಸರ್ಕಾರ ಟೇಕಾಫ್ ಆಗುತ್ತಿದೆ ಎಂದು ಸಚಿವ ಡಿ.ಸುಧಾಕರ್ ನೀಡಿರುವ ಹೇಳಿಕೆ ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಿವೆ ಎಂದು ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಸರ್ಕಾರದ ಬಗ್ಗೆ ರಾಜ್ಯಾದ್ಯಂತ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮ ಪಕ್ಷದ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲ ಮತ್ತು ಭೇಟಿ ನೀಡುತ್ತಿರುವ ಜಿಲ್ಲೆಗಳಲ್ಲಿ ಜನರು ವ್ಯಕ್ತಪಡಿಸುತ್ತಿರುವ ಅನಿಸಿಕೆಗಳು ಇದಕ್ಕೆ ಪೂರಕವಾಗಿವೆ ಎಂದು ಹೇಳಿದ್ದಾರೆ.

ಇದೊಂದು ವಂಚಕ ಸರ್ಕಾರ,ಕೆಟ್ಟ ಆಡಳಿತ ನೀಡುತ್ತಿದೆ. ಅದನ್ನು ಮರೆಮಾಚಲು ನಡೆಸಿದ ಕಸರತ್ತು ವಿಫಲವಾಗಿವೆ. 20 ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಬಣ್ಣ ಬಯಲಾಗಿದೆ. ಅವೈಜ್ಞಾನಿಕ ಗ್ಯಾರಂಟಿ ಯೋಜನೆ ಜಾರಿಯಿಂದ ಬೊಕ್ಕಸ ಬರಿದಾಗಿ, ಸರ್ಕಾರ ದಿವಾಳಿಯಾಗಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸಿಎಂ ಮತ್ತು ಸಚಿವರು ಎಲ್ಲಿಯೂ ಪ್ರವಾಸ ಮಾಡುತ್ತಿಲ್ಲ,ಭೇಟಿ ನೀಡಿದ ಕಡೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಬೆಂಗಳೂರಿನಲ್ಲಿ ಕುಳಿತು ಕಾಲಾಹರಣ ಮಾಡುತ್ತಿದ್ದಾರೆ, ಯಾವ ಕಚೇರಿಗೆ ಹೋದರು ಲಂಚದ ಹಾವಳಿಯಿಂದ ಜನ ಹೈರಾಣಾ ಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ವಾಸ್ತವ ಸಂಗತಿಯನ್ನು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೇ ಹಾದಿ ಬೀದಿಗಳಲ್ಲಿ ಟೀಕಿಸುತ್ತಿದ್ದಾರೆ. ಹೆಚ್ಚು ದಿನ ಸುಳ್ಳು ಹೇಳಿ ಕಾಲಾಹರಣ ಮಾಡಲು ಆಗುವುದಿಲ್ಲ. ಹೀಗಾಗಿ ಆ ಸತ್ಯವನ್ನು ರಾಯರೆಡ್ಡಿ ಮತ್ತು ಸಚಿವ ಡಿ. ಸುಧಾಕರ್ ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕಿಂತ ಈ ಸರ್ಕಾರಕ್ಕೆ ದೊಡ್ಡ ಸರ್ಟಿಫಿಕೇಟ್ ಬೇಕೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

ಕೆಲ ತಿಂಗಳ ಹಿಂದೆ ವಿಧಾನಸೌಧದ ಮುಂದೆ ದಿನವಿಡೀ ಜನತಾ ದರ್ಶನ ಕಾರ್ಯಕ್ರಮ ನಡೆಸಿದ್ದ ಸಿದ್ದರಾಮಯ್ಯನವರು, ಇನ್ನು ಮುಂದೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಿಂಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರಗಳಲ್ಲಿ ಜನತಾ ದರ್ಶನ ಮಾಡಬೇಕು ಎಂದು ಸೂಚನೆ ನೀಡಿದ್ದರು. ಸಿಎಂ ಮಾತಿಗೆ ಯಾವ ಸಚಿವರು ಕಿವಿಗಿಡಲಿಲ್ಲ. ಎಲ್ಲಿಯೂ ಜನತಾ ದರ್ಶನ ನಡೆಯಲಿಲ್ಲ. ಇದು ಸರ್ಕಾರದ ಕಾರ್ಯವೈಖರಿಗೆ ಒಂದು ಸಣ್ಣ ಉದಾಹರಣೆ ಎಂದು ಅಶೋಕ್ ಟೀಕಿಸಿದ್ದಾರೆ.

ಸಿದ್ದರಾಮಯ್ಯನವರು ಇನ್ನೆಷ್ಟು ದಿನ ಇರುತ್ತಾರೆ,ಬದಲಾಗುತ್ತಾರೆ ಎಂಬ ಉಡಾಫೆ ಸಚಿವರಲ್ಲಿದೆ. ಇದರಿಂದ ಜನರ ಅಹವಾಲು ಕೇಳುವವರು ದಿಕ್ಕಿಲ್ಲದಂತಾಗಿದೆ. ಅಧಿಕಾರಿಗಳು ಕೂಡ ಮಾತು ಕೇಳುತ್ತಿಲ್ಲ, ಕಚೇರಿಗೂ ಬರುತ್ತಿಲ್ಲ. ಹೀಗಾಗಿ ಆಡಳಿತ ಹಳಿ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗ ವಿಧಾನಸೌಧದ ಆಡಳಿತ ಕೇರಳದ ವಯನಾಡಿಗೆ ಶಿಫ್ಟ್ ಆಗಿದೆ. ಅಲ್ಲಿಂದ ಬರುವ ಸೂಚನೆಯನ್ನು ಇಲ್ಲಿ ಪಾಲಿಸಲಾಗುತ್ತಿದೆ. ಹುಲಿ ಯೋಜನೆ ಪ್ರದೇಶದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪ್ರದೇಶದಲ್ಲಿ ಮಲಯಾಳಂ ಚಲನಚಿತ್ರ ಚಿತ್ರೀಕರಣ ಮಾಡಲು ಅವಕಾಶ ನೀಡಿರುವುದೇ ಇದಕ್ಕೆ ಸಾಕ್ಷಿ. ನಿರ್ಬಂಧಿತ ಪ್ರದೇಶದಲ್ಲಿ ಶೂಟಿಂಗ್ ಮಾಡಲು ಸ್ಥಳೀಯ ಅಧಿಕಾರಿಗಳು ಅವಕಾಶ ನೀಡಿಲ್ಲ,ಸರ್ಕಾರದ ಮಟ್ಟದಲ್ಲೇ ಶೂಟಿಂಗ್ ನಡೆಸಲು ಅವಕಾಶ ನೀಡಲಾಗಿದೆ ಎಂದು ಸ್ಥಳೀಯ ಎಸಿಎಫ್ ಹೇಳಿಕೆ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಅಂದರೆ ಯಾರು, ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ ಎಂದು ಅಶೋಕ್ ಒತ್ತಾಯಿಸಿದ್ದಾರೆ‌.

ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರ ಕುಸಿತ:ಜನಾಕ್ರೋಶವೇ ಸಾಕ್ಷಿ-ಅಶೋಕ್ Read More