ದರ್ಶನ್ ನಟನೆಯ ಡೆವಿಲ್ ಚಿತ್ರ ಬಿಡುಗಡೆ-ಭರ್ಜರಿ ರೆಸ್ಪಾನ್ಸ್

ಬೆಂಗಳೂರು: ನಟ ದರ್ಶನ್ ತೂಗುದೀಪ ಅಭಿನಯದ ದಿ ಡೆವಿಲ್ ಚಿತ್ರ ಗುರುವಾರ ತೆರೆ ಕಂಡಿದ್ದು,ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಅಭಿಮಾನಿಗಳು ಚಿತ್ರಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ದಿ ಡೆವಿಲ್’ ನ ರೇಟಿಂಗ್ ಮತ್ತು ವಿಮರ್ಶೆಗಳನ್ನು ಬುಕ್ ಮೈ ಶೊ ನಂತಹ ಕೆಲ ವೇದಿಕೆಗಳಲ್ಲಿ ತಿಳಿಸುವಂತಿಲ್ಲ.
ಅಭಿಮಾನಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಕುರಿತು ಚಿತ್ರ ವೀಕ್ಷಿಸಿದ ಬಳಿಕ ದರ್ಶನ್ ಸಹೋದರ, ನಿರ್ದೇಶಕ ದಿನಕರ್ ತೂಗುದೀಪ ಮಾತನಾಡಿ, ನೆಗೆಟಿವ್ ವಿಮರ್ಶೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ಆಫ್ ಮಾಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ದುಡ್ಡು ಕೊಟ್ಟು ರೇಟಿಂಗ್ ಮಾಡಿಸೋ ಕೆಲಸ ಆಗುತ್ತಿದೆ. ಈ ಮೂಲಕ ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವ ಕೆಲಸ ಮಾಡಲಾಗುತ್ತಿದೆ ನನ್ನ ರಾಯಲ್ ಸಿನಿಮಾಗೂ ಇದೇ ಅನುಭವ ಆಗಿದೆ ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ದರ್ಶನ್ ನಟನೆಯ ಡೆವಿಲ್ ಚಿತ್ರ ಬಿಡುಗಡೆ-ಭರ್ಜರಿ ರೆಸ್ಪಾನ್ಸ್ Read More

ಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು

ಮೈಸೂರು: ಮೈಸೂರಿನ ಲಲಿತಾ ಮಹಲ್ ರಸ್ತೆ, ಶ್ರೀ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ವಿಶಿಷ್ಟ ವಾತಾವರಣ ನಿರ್ಮಾಣವಾಗಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರ ‘ಡೆವಿಲ್’ ಯಶಸ್ವಿಯಾಗಲಿ ಎಂಬ ಹಾರೈಕೆಯೊಂದಿಗೆ ಅಭಿಮಾನಿಗಳು ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸಿ, ಅದರ ಮುಂದೆ ತಾಯಿ ಚಾಮುಂಡೇಶ್ವರಿ ಭಾವಚಿತ್ರ ಇಟ್ಟು ವಿಶೇಷ ಪೂಜೆ ನೆರವೇರಿಸಿದರು.

ಅಭಿಮಾನಿಗಳು ಕಟೌಟ್ ಮುಂದೆ ಕುಂಬಳಕಾಯಿಯಲ್ಲಿ ದೃಷ್ಟಿ ತೆಗೆದು, ಹಾಲು-ಅಕ್ಷತೆ ನೀಡಿ, ಚಿತ್ರಕ್ಕೆ ಅಡಚಣೆಗಳಿಲ್ಲದೆ ಯಶಸ್ವಿಯಾಗಲಿ, ತಂಡ ಸುಗಮ ಪಯಣ ಕಂಡು ಜನ ಮೆಚ್ಚುಗೆಯನ್ನು ಗಳಿಸಲಿ ಎಂಬ ಸಂಕಲ್ಪ ಮಾಡಲಾಯಿತು.

ಹೂವಿನ ಹಾರಹಾಕಿ ಅಭಿಮಾನಿಗಳ ಘೋಷಣೆಯ ನಡುವೆ
ಡೆವಿಲ್ ಗೆಲ್ಲುವುದು ಪಕ್ಕ,
ದರ್ಶನ್ ಮತ್ತೊಮ್ಮೆ ಸಿನಿಮಾ ರಂಗದಲ್ಲಿ ಗರ್ಜಿಸಲಿ,ಎಂಬ ಘೋಷಣೆಗಳು ಮೊಳಗಿದವು.

ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಯಶಸ್ಸಿಗಾಗಿ ಮಾಡಿದ ಈ ಭಕ್ತಿಪರ ಕಾರ್ಯಕ್ರಮ ಅಭಿಮಾನಿಗಳ ನಿಷ್ಠೆ, ಭಾವ ಮತ್ತು ಸಿನಿಮಾ ಪ್ರೇಮಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ, ಜಿ. ರಾಘವೇಂದ್ರ, ರವಿಕುಮಾರ್, ಬನ್ನೂರು ಚಂದನ್, ಹರೀಶ್ ನಾಯ್ಡು, ಎಸ್.ಎನ್. ರಾಜೇಶ್, ರಾಕೇಶ್, ಮಣಿ ದಚ್ಚು, ನವೀನ್ ಹಾಗೂ ಹಲವಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

ಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು Read More

‌ನಟ‌ ದರ್ಶನ್ ಗೆ ಶಾಕ್ ನೀಡಿದ ಕೋರ್ಟ್

ಬೆಂಗಳೂರು: ಹಾಸಿಗೆ, ದಿಂಬು ಕೇಳಿದ್ದ ನಟ ದರ್ಶನ್‌ಗೆ ಕೋರ್ಟ್‌ ಶಾಕ್‌ ಮೇಲೆ ಶಾಕ್ ನೀಡಿದೆ.

ತಿಂಗಳಿಗೊಮ್ಮೆ ಮಾತ್ರ ಬಟ್ಟೆ, ಹೊದಿಕೆ ಒದಗಿಸುವಂತೆ 57ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.

ಪರಪ್ಪನ ಅಗ್ರಹಾರದಲ್ಲಿರುವ ಕ್ವಾರಂಟೈನ್ ಸೆಲ್‌ನಿಂದ ಮುಖ್ಯ ಸೆಲ್‌ಗೆ ವರ್ಗಾವಣೆ ಕೋರಿದ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಾಧಿಕಾರಿಗಳಿಗೆ ಕೋರ್ಟ್‌ ಅವಕಾಶ ನೀಡಿದೆ.

ರೇಣುಕಾಸ್ವಾಮಿ ಪ್ರಕರಣದ ಶೀಘ್ರ ವಿಚಾರಣೆ ಕೋರಿದ ಎಸ್‌ಪಿಪಿ ಅರ್ಜಿಯನ್ನು ಕೋರ್ಟ್‌ ಮಾನ್ಯ ಮಾಡಿದೆ.

ಅ.31 ರಂದು ದೋಷಾರೋಪ ನಿಗದಿಗೆ ಕೋರ್ಟ್ ಸೂಚನೆ ನೀಡುವ ಮೂಲಕ ದರ್ಶನ್‌ಗೆ ಮತ್ತೊಂದು ಶಾಕ್‌ ನೀಡಿದೆ.

ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ 6 ಜನ ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ವಿಚಾರಣೆ ಹಾಜರಾದರೆ ಉಳಿದ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು.

ನನ್ನನ್ನು ಕ್ವಾರಂಟೈನ್‌ ಸೆಲ್‌ನಲ್ಲೇ ಇರಿಸಲಾಗಿದೆ. ಬಿಸಿಲು ಬೀಳದ ಜಾಗದಲ್ಲಿ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ನನ್ನ ಆರೋಗ್ಯದಲ್ಲಿ ಮತ್ತಷ್ಟು ವ್ಯತ್ಯಾಸವಾಗಿದೆ. ಈ ಹಿಂದೆ ನ್ಯಾಯಾಲಯವು ನೀಡಿದ್ದ ಆದೇಶಕ್ಕೂ ಜೈಲಿನ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ.

ಜೈಲಿನಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು ಹಲವು ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್‌ ಕಾಣಿಸಿಕೊಂಡಿದೆ, ಬೆನ್ನು ನೋವಿನಿಂದ ಬಳಲುತ್ತಿದ್ದೇನೆ,ಆದ್ದರಿಂದ ದಿಂಬು, ಬೆಡ್ ಶೀಟ್, ಹಾಸಿಗೆ ನೀಡುವಂತೆ ದರ್ಶನ್‌ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.

‌ನಟ‌ ದರ್ಶನ್ ಗೆ ಶಾಕ್ ನೀಡಿದ ಕೋರ್ಟ್ Read More

ಜೈಲಿನಲ್ಲಿ ದರ್ಶನ್​ಗೆ ವಾಕಿಂಗ್​ ಹೊರತು ಎಲ್ಲ ನಿಯಮ ಪಾಲನೆ

ಬೆಂಗಳೂರು: ಜೈಲಿನಲ್ಲಿರುವ ನಟ ದರ್ಶನ್​ಗೆ ಬಿಸಿಲಿನಲ್ಲಿ ವಾಕ್ ಮಾಡಲು ಅವಕಾಶ ಹೊರತುಪಡಿಸಿ ಜೈಲಿನ ಎಲ್ಲಾ ನಿಯಮಗಳ ಪಾಲನೆಯಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಕೋರ್ಟ್​ಗೆ ನೀಡಿದ ವರದಿಯಲ್ಲಿ ತಿಳಿಸಲಾಗಿದೆ.

ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​​ ಗೆ ಮೂಲಸೌಕರ್ಯ ಒದಗಿಸದ ಆರೋಪ ಸಂಬಂಧ ಖುದ್ದು ತೆರಳಿ ಪರಿಶೀಲಿಸುವಂತೆ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ,
ಕಾನೂನು ಸೇವಾ ಪ್ರಾಧಿಕಾರವು
ಸ್ಥಳ ಪರಿಶೀಲನೆ ನಡೆಸಿತು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಆರೋಗ್ಯ ದೃಷ್ಠಿಯಿಂದ ಬಿಸಿಲಿನಲ್ಲಿ ವಾಕ್ ಮಾಡಲು ಅವಕಾಶ ಕಲ್ಪಿಸಬೇಕು ಅದು ಬಿಟ್ಟರೆ, ಜೈಲಿನ ಕೈಪಿಡಿ ಅನುಸಾರ ಎಲ್ಲ ನಿಯಮ ಪಾಲನೆಯಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ದರ್ಶನ್​​ಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ನಗರದ 57ನೇ ಸಿಸಿಹೆಚ್ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

ಜೈಲಿನ ಕೈಪಿಡಿ ಅನುಸಾರ ಸೌಲಭ್ಯ ಒದಗಿಸಬೇಕೆಂದು ಕೋರ್ಟ್ ಹೇಳಿತ್ತು. ಆದರೂ ಜೈಲಾಧಿಕಾರಿಗಳು ನ್ಯಾಯಾಲಯ ಆದೇಶವನ್ನ ಧಿಕ್ಕರಿಸಿದ್ಧಾರೆ ಎಂದು ದರ್ಶನ್ ಪರ ವಕೀಲರು ಆರೋಪಿಸಿದ್ದರು.

ಈ ಬಗ್ಗೆ ಖುದ್ದು ಜೈಲಿಗೆ ಬಂದು ಪರಿಶೀಲಿಸುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ್ದ ನ್ಯಾಯಾಲಯವು ಕಾನೂನು ಸೇವಾ ಪ್ರಾಧಿಕಾರಕ್ಕೆ ಜೈಲಿಗೆ ಭೇಟಿ ನೀಡಿ ಅ.18ರೊಳಗೆ ವರದಿ ನೀಡುವಂತೆ ಸೂಚಿಸಿತ್ತು.

ಅದರಂತೆ ಬೆಂಗಳೂರು ನಗರ ಜಿಲ್ಲಾ ವಿಭಾಗದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಿ.ವರದರಾಜು ಅವರು ಕಳೆದ ಮಂಗಳವಾರ ತೆರಳಿ ಪರಿಶೀಲಿಸಿ, ಕೋರ್ಟ್​​ಗೆ ವರದಿ ನೀಡಿದ್ಧಾರೆ.

ನ್ಯಾಯಾಲಯದ ಆದೇಶದ ಅನುಸಾರ ಕಳೆದ ಮಂಗಳವಾರ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದ ವರದರಾಜು ಅವರು ದರ್ಶನ್ ಆರೋಗ್ಯ ವಿಚಾರಿಸಿ,ನಂತರ ಅವರು ಇರುವ ಬ್ಯಾರಕ್​ನ್ನು ಪರಿಶೀಲಿಸಿದ್ದರು. ಅಲ್ಲದೇ, ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳ ಬಗ್ಗೆ ತಕರಾರು ಎತ್ತಿರುವ ಅಂಶಗಳ ಬಗ್ಗೆ ದರ್ಶನ್ ಜೊತೆ ಖುದ್ದು ಚರ್ಚಿಸಿದ್ದರು.

ದರ್ಶನ್ ಇರುವ ಬ್ಯಾರಕ್​​ನಲ್ಲಿ ಇಂಡಿಯನ್ ಹಾಗೂ ವೆಸ್ಟರ್ನ್ ಶೈಲಿಯ ಎರಡು ಶೌಚಾಲಯಗಳಿವೆ. ಹಾಸಿಗೆ, ದಿಂಬು ಕೊಟ್ಟಿಲ್ಲವೆಂಬ ಆರೋಪ ಸಂಬಂಧ ವಿಚಾರಣಾಧೀನ ಕೈದಿಗೆ ಹಾಸಿಗೆ, ದಿಂಬಿಗೆ ಅವಕಾಶವಿಲ್ಲ. ಇತರೆ ಕೈದಿಗಳಂತೆ ಬಿಸಿಲಿನಲ್ಲಿ ದರ್ಶನ್ ನಡೆದಾಡಲು ಬಿಟ್ಟಿಲ್ಲವೆಂಬ ತಕರಾರಿಗೆ ನಿಯಮದಂತೆ 1 ಗಂಟೆ ವಾಕಿಂಗ್ ಹಾಗೂ ಆಟವಾಡಲು ಅವಕಾಶ ನೀಡಬಹುದು. ಆದರೆ, ದರ್ಶನ್ ಸೆಲೆಬ್ರಿಟಿ ಆಗಿರುವುದರಿಂದ ಓಡಾಡಿದರೆ ಇತರ ಬ್ಯಾರಕ್​ನವರು ಕಿರುಚುತ್ತಾರೆ. ಅಕ್ಕಪಕ್ಕದ ಅಪಾರ್ಟ್​​​​​ ಮೆಂಟ್​​ಗಳಿಂದ ಫೋಟೋ ತೆಗೆಯುತ್ತಾರೆಂದು ಜೈಲಾಧಿಕಾರಿಗಳು ಆಕ್ಷೇಪಿಸಿದ್ದಾರೆ. ಜೈಲಿನ ಶಿಸ್ತುಪಾಲನೆ ಹಾಗೂ ನಿರ್ವಹಣೆ ಹೊರತುಪಡಿಸಿ, ವಾಕಿಂಗ್ ಮಾಡಲು ಹಾಗೂ ಆಟಕ್ಕೆ ‌ಅವಕಾಶ ನೀಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ಟಿ.ವಿ ನೀಡಿಲ್ಲವೆಂದು ದರ್ಶನ್ ತಕರಾರು ಸಂಬಂಧ. ಕೈದಿಗಳಿಗೆ ಟಿ.ವಿ ನೋಡಲು ಅವಕಾಶ ನೀಡಬಹುದು. ಆದರೆ, ಪ್ರತಿ ಬ್ಯಾರಕ್​ಗೆ ಟಿ.ವಿ ನೀಡಬೇಕು ಎಂಬ ನಿಯಮವಿಲ್ಲ. ಫೋನ್​ನಲ್ಲಿ ಮಾತನಾಡುವಾಗ ಸ್ಪೀಕರ್ ಆನ್ ಮಾಡಿಸುತ್ತಾರೆ ಎಂದು ದರ್ಶನ್ ಆಪಾದನೆಗೆ ಆರೋಪಿಗಳ ಮೇಲೆ ನಿಗಾ ಇಡುವ ದೃಷ್ಡಿಯಿಂದ ಕಾನೂನಿನಲ್ಲಿ ಅವಕಾಶವಿದೆ. ಆರೋಪಿಗಳಿಗೆ ತಿಳಿಸಿ ಫೋನ್ ಕಾಲ್ ರೆಕಾರ್ಡ್​​ಗೆ ನಿಯಮದಲ್ಲಿ ಅವಕಾಶವಿದೆ. ಈ ಬಗ್ಗೆ ಜೈಲಧಿಕಾರಿಗಳು ನಿಯಮ ರೂಪಿಸಿದ್ದಾರೆ ಎಂದು ವರದರಾಜು ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಸೂರ್ಯನ ಬೆಳಕಿಲ್ಲದೇ ಕಾಲಿಗೆ ಫಂಗಸ್ ಬಂದಿದೆ ಎಂಬ ದರ್ಶನ್ ಹೇಳಿದ್ದರು. ಪರಿಶೀಲನೆ ವೇಳೆ ಕಾಲಿನಲ್ಲಿ ಫಂಗಸ್ ಬಂದಿಲ್ಲ, ಹಿಮ್ಮಡಿಯಲ್ಲಿ ಬಿರುಕಿದೆ. ಈ ಬಗ್ಗೆ ಚರ್ಮರೋಗ ತಜ್ಞರು ಪರಿಶೀಲಿಸಿದ್ದಾರೆ. ಜೈಲಿನ ವೈದ್ಯಾಧಿಕಾರಿಗಳು ಎರಡು ದಿನಕ್ಕೊಮ್ಮೆ ಬ್ಯಾರಕ್​​ಗೆ ಭೇಟಿ ನೀಡುತ್ತಿದ್ದಾರೆ. ದರ್ಶನ್​ಗೆ ಫಿಸಿಯೋಥೆರಪಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸೊಳ್ಳೆ ಬತ್ತಿ, ಕನ್ನಡಿ, ಬಾಚಣಿಗೆ ನೀಡಿಲ್ಲವೆಂಬ ಆಪಾದನೆಗೆ, ಸಜಾ ಬಂಧಿಗಳಿಗೆ ಮಾತ್ರ ಇವುಗಳನ್ನು ಕೊಡಬಹುದು. ವಿಚಾರಣಾಧೀನ ಕೈದಿಗೆ ಕೊಡಲು ಜೈಲು ನಿಯಮದಲ್ಲಿ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.ಹೀಗೆ ದರ್ಶನ್ ಗೆ ಸೌಲಭ್ಯಗಳನ್ನು ಹೆಚ್ಚುಕಡಿಮೆ ನಿರಾಕರಿಸಿ,ನಿರಾಸೆ ಉಂಟಾಗುವಂತಾಗಿದೆ.

ಜೈಲಿನಲ್ಲಿ ದರ್ಶನ್​ಗೆ ವಾಕಿಂಗ್​ ಹೊರತು ಎಲ್ಲ ನಿಯಮ ಪಾಲನೆ Read More

ದರ್ಶನ್‌ಗೆ ಹಾಸಿಗೆ, ದಿಂಬು:ಅ.9 ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯ ಕುರಿತು ‌ಮಂಗಳವಾರ ವಿಚಾರಣೆ ನಡೆಸಿದ ನ್ಯಾ ಯಾಲಯ,ಈ ಕುರಿತು ಆದೇಶವನ್ನು ಅ.9ಕ್ಕೆ ಕಾಯ್ದಿರಿಸಿದೆ.

ಕನಿಷ್ಟ ಸವಲತ್ತುಗಳನ್ನು ಒದಗಿಸಲು ಕೋರ್ಟ್ ಆದೇಶವಿದ್ದರೂ ಕೂಡ ಪರಪ್ಪನ ಅಗ್ರಹಾರ ಜೈಲಧಿಕಾರಿಗಳು ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ನಟ ದರ್ಶನ್ ಪರ ವಕೀಲರು ಜೈಲಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಈ ಕುರಿತು 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಸೆ.30 ವಿಚಾರಣೆ ನಡೆಯಿತು.

ಈ ಸಂದರ್ಭದಲ್ಲಿ ಜೈಲ್ ಸೂಪರಿಂಟೆಂಡೆಂಟ್ ಸುರೇಶ್ ಕೂಡ ಹಾಜರಾಗಿದ್ದರು.

ಈ ವೇಳೆ ಎಸ್ಪಿಪಿ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ಸುನೀಲ್ ಅವರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅ.9ಕ್ಕೆಆದೇಶವನ್ನು ಕಾಯ್ದಿರಿಸಿದೆ.

ದರ್ಶನ್‌ಗೆ ಹಾಸಿಗೆ, ದಿಂಬು:ಅ.9 ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್ Read More

ಸುಪ್ರೀಂ ಮಹತ್ವದ ಆದೇಶ:ನಟ ದರ್ಶನ್‌,ಪವಿತ್ರ ಗೌಡ ಜಾಮೀನು ರದ್ದು

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಏಳು ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿ ಶಾಕ್ ನೀಡಿದೆ.

ಗುರುವಾರ ಈ ಕೇಸ್‌ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರಿದ್ದ ಪೀಠವು ಈ ಮಹತ್ವದ ಆದೇಶ ನೀಡಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಇತರೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ 2024 ಡಿಸೆಂಬರ್‌ನಲ್ಲಿ ಜಾಮೀನು ನೀಡಿತ್ತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನೆ ಮಾಡಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಈ ಕುರಿತು ಇತ್ತೀಚೆಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಜಾಮೀನು ನೀಡಿದ ನಡೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಎಲ್ಲಾ ಪ್ರಕರಣದಲ್ಲಿಯೂ ಇದೇ ರೀತಿ ಕೊಲೆ ಅಪರಾಧಿಗೆ ಜಾಮೀನು ನೀಡಬಹುದೆ ಎಂದು ಕಟುವಾಗಿ ಪ್ರಶ್ನೆ ಮಾಡಿತ್ತು.

ಆರೋಪಿಗಳಾದ ದರ್ಶನ್‌ ತೂಗುದೀಪ,
ಪವಿತ್ರಾ ಗೌಡ,ಆರ್‌ ನಾಗರಾಜು,ಎಂ ಲಕ್ಷ್ಮಣ್,ಅನು ಕುಮಾರ್‌ ಅಲಿಯಾಸ್‌ ಅನು,ಜಗದೀಶ್‌ ಅಲಿಯಾಸ್‌ ಜಗ್ಗ
ಪ್ರದೋಷ್‌ ರಾವ್‌ ಅವರುಗಳು ಮತ್ತೆ ಜೈಲು ಸೇರಬೇಕಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ,ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಹಿಂಪಡೆಯಲಾಗಿದೆ ಎಂದು ಸುಪ್ರೀಂ ಸ್ಪಷ್ಟವಾಗಿ ತಿಳಿಸಿದೆ.

ಜಾಮೀನು ಮಂಜೂರು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು,
ಆರೋಪಿ ಎಷ್ಟೇ ದೊಡ್ಡವರಾಗಿರಲಿ, ಅವರು ಕಾನೂನಿಗಿಂತ ದೊಡ್ಡವರಲ್ಲ, ಯಾರೂ ಕಾನೂನಿಗಿಂತ ಮೇಲಿಲ್ಲ, ಯಾರೂ ಕಾನೂನಿಗಿಂತ ಕೆಳಗಿಲ್ಲ. ನಾವು ಕಾನೂನನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ,ಎಲ್ಲಾ ಸಮಯದಲ್ಲೂ ಕಾನೂನನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದೆ.

ನಟ ದರ್ಶನ್ ಗೆ ಐಶಾರಾಮಿ ಟ್ರೀಟ್‌ಮೆಂಟ್‌ ಬಗ್ಗೆಯೂ ಸುಪ್ರೀಂ ಕಿಡಿಕಾರಿದೆ.
ಒಂದು ವೇಳೆ ಆರೋಪಿಗಳಿಗೆ ಜೈಲಿನಲ್ಲೇ‌ ರಾಜಾತೀತ್ಯ ನೀಡಲಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದರೆ, ನಾವು ತೆಗೆದುಕೊಳ್ಳುವ ಮೊದಲ ಹೆಜ್ಜೆ ಜೈಲಿನ ಅಧೀಕ್ಷಕರು ಮತ್ತು ಸಂಬಂಧಪಟ್ಟ ಇತರ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸುವುದು ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರು ಕಠಿಣವಾಗಿ ಎಚ್ಚರಿಸಿದ್ದಾರೆ.

ದರ್ಶನ್ ಸೇರಿ ಇತರ ಆರೋಪಗಳನ್ನು ವಶಕ್ಕೆ ಪಡೆಯುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ,ಜತೆಗೆ ಯಾವ ಜೈಲು ಎಂಬುದನ್ನೂ ನಿರ್ಧರಿಸಿದೆ.ಹಾಗಾಗಿ ಯಾವ ಕ್ಷಣದಲ್ಲಾದರೂ ದರ್ಶನ್,ಪವಿತ್ರ ಗೌಡ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆಯಬಹುದು.

ಸುಪ್ರೀಂ ಮಹತ್ವದ ಆದೇಶ:ನಟ ದರ್ಶನ್‌,ಪವಿತ್ರ ಗೌಡ ಜಾಮೀನು ರದ್ದು Read More

ದರ್ಶನ್-ಸುಮಲತಾ ನಡುವೆ ಬುರುಕು?

ಬೆಂಗಳೂರು: ನಟ ದರ್ಶನ್ ಮತ್ತು ಸುಮಲತಾ ನಡುವೆ ಬಿರುಕು ಮೂಡಿರಬಹುದೆ ಎಂಬ ಅನುಮಾನ ಡಿ ಬಾಸ್ ಅಭಿಮಾನಿಗಳನ್ನು ಕಾಡುತ್ತಿದೆ.

ಸುಮಲತಾ ಸೇರಿದಂತೆ ದರ್ಶನ್ ಎಲ್ಲರನ್ನೂ ಇನ್ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಹಂಚಿಕೊಂಡಿರುವ ಮತ್ತೊಂದು ಪೋಸ್ಟ್ ಈಗ ಇಬ್ಬರ ನಡುವಿನ ಬಿರುಕಿನ ಬಗ್ಗೆ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ.

ಮತ್ತೊಂದು ಮಾರ್ಮಿಕ ಸಂದೇಶವೊಂದನ್ನು ನಟಿ ಹಂಚಿಕೊಂಡಿದ್ದಾರೆ. ನೋವಿಲ್ಲದಂತೆ ಎದ್ದು ಬರುವುದು, ಚಿಂತೆ ಇಲ್ಲದಂತೆ ಇರೋದು. ನಿಮ್ಮನ್ನು ಯಾರು ಅರ್ಥ ಮಾಡಿಕೊಳ್ತಾರೋ ಅಂಥವರ ಜೊತೆಗೆ ಇರೋದು. ಇವೆಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ತೋರಿಸಲಾಗದ ಖಜಾನೆ ಎಂದು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

ಜೈಲಿನಲ್ಲಿದ್ದಾಗ ತನ್ನ ಬೆನ್ನಿಗೆ ಸುಮಲತಾ ನಿಲ್ಲಲಿಲ್ಲ ಅಂತ ದರ್ಶನ್ ಗೆ ಕೋಪವಿದೆಯೆ ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಾ ಇದೆ.

ಹಿಂದಿನ ಪೋಸ್ಟ್‌ನಲ್ಲಿ, ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದ್ರೆ.. ಯಾರು ಸತ್ಯವನ್ನ ತಿರುಚುತ್ತಾರೋ, ತಮ್ಮದೇ ತಪ್ಪು ಇಟ್ಕೊಂಡು ಬೇರೆಯವರ ಮೇಲೆ ಹಾಕಿ ನೋವು ಮಾಡೋದು, ತಮ್ಮ ಮೇಲಿನ ನಿಂದನೆಯನ್ನ ಬೇರೆಯವರ ಮೇಲೆ ಹಾಕೋದು, ಗೂಬೆ ಕೂರಿಸೋದು ಮಾಡಿ ತಮ್ಮನ್ನ ತಾವು ಹೀರೋ ಎಂಬಂತೆ ಬಿಂಬಿಸಿಕೊಳ್ಳೋದು ಎಂದು ಸುಮಲತಾ ಅವರು ಪೋಸ್ಟ್ ಮಾಡಿದ್ದರು.

ತಾಯಿ ಸಮಾನರಾದ ಸುಮಲತಾ, ತಮ್ಮನ ಸಮಾನರಾದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಸೇರಿದಂತೆ ಆರು ಮಂದಿ ಆಪ್ತರನ್ನು ನಟ ದರ್ಶನ್ ಇನ್ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ದಾರೆ.

ದರ್ಶನ್ ಈ ನಡೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆರು ಮಂದಿಯನ್ನು ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫಾಲೋ ಮಾಡುತ್ತಿದ್ದರು. ಆದರೆ, ಈಗ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ 0 ಫಾಲೋ ಇದೆ. ಈ ಬೆಳವಣಿಗೆ ಫ್ಯಾನ್ಸ್ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ದರ್ಶನ್-ಸುಮಲತಾ ನಡುವೆ ಬುರುಕು? Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ

ಶ್ರೀರಂಗಪಟ್ಟಣ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನುಮದಿನವನ್ನು ಅಭಿಮಾನಿಗಳು ವಿಶೇಷವಾಗಿ ಆಚರಿಸಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್
ಅಭಿಮಾನಿಗಳು ಶ್ರೀರಂಗಪಟ್ಟಣದ ಸಾಯಿಬಾಬಾ ಅನಾಥಾಶ್ರಮದಲ್ಲಿನ ಮಕ್ಕಳೊಂದಿಗೆ ದರ್ಶನ್ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು.

ಈ ಅನಾಥಾಶ್ರಮದಲ್ಲಿ ದರ್ಶನ್ ಅಭಿಮಾನಿಗಳು
ಕೇಕ್ ಕತ್ತರಿಸಿ ಎಲ್ಲರಿಗೂ ವಿತರಿಸಿದರು.

ನಂತರ ಅಲ್ಲಿನ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕಗಳನ್ನು ನೀಡಿದರು.ಅಲ್ಲದೆ ಊಟದ ವ್ಯವಸ್ಥೆಯನ್ನು ಮಾಡಿ ಅಭಿಮಾನಿಗಳು ಹುಟ್ಟುಹಬ್ಬವನ್ನು ಆಚರಿಸಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ Read More

ನಟ ದರ್ಶನ್‌ ಗನ್‌ ಲೈಸೆನ್ಸ್‌ ತಾತ್ಕಾಲಿಕ ಅಮಾನತು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ದಯಾನಂದ್‌ ತಿಳಿಸಿದ್ದಾರೆ.

ಮೂರು ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷೆ ವಿಧಿಸಬಹುದಾದ ಕೇಸ್‍ನಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಬಳಿ ಲೈಸೆನ್ಸ್ ಇರುವ ಗನ್ ಇದ್ದರೆ ಅದನ್ನು ಕೂಡಲೇ ವಶಕ್ಕೆ ಪಡೆಯಲಾಗುತ್ತದೆ. ಅಲ್ಲದೇ ಆ ವ್ಯಕ್ತಿಯ ಲೈಸೆನ್ಸ್ ರದ್ದು ಮಾಡಬಹುದಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‍ನಲ್ಲಿ ಲೈಸೆನ್ಸ್ ಗನ್ ಬಳಕೆ ಮಾಡಿರುವುದು ಎಲ್ಲಿಯೂ ಕಂಡುಬರದ ಕಾರಣ ತಾತ್ಕಾಲಿಕವಾಗಿ ಅಂದರೆ ಕೇಸ್ ಮುಗಿಯುವತನಕ ಅಮಾನತ್ತಿನಲ್ಲಿಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ನಟ ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡಲು ಈಗಾಗಲೇ ಪೊಲೀಸರು ನೋಟಿಸ್ ನೀಡಿದ್ದರು. ನೋಟಿಸ್‍ನಲ್ಲಿ, ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ. ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಗನ್ ಇರುವುದರಿಂದ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನ ಇದೆ. ಆದ್ದರಿಂದ ನಿಮ್ಮ ಲೈಸೆನ್ಸ್ ರದ್ದು ಮಾಡಬೇಕಿದೆ. ಈ ಬಗ್ಗೆ ಒಂದು ವಾರದೊಳಗೆ ಉತ್ತರಿಸಬೇಕು. ನೋಟಿಸ್‍ಗೆ ಉತ್ತರ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.

ಪೊಲೀಸರ ನೋಟಿಸ್‍ಗೆ ಉತ್ತರಿಸಿದ್ದ ದರ್ಶನ್, ನಾನು ಸೆಲೆಬ್ರಿಟಿ ಆಗಿರುವುದರಿಂದ ಆತ್ಮರಕ್ಷಣೆಗೆ ಗನ್ ಅವಶ್ಯಕತೆ ಇದೆ. ನನ್ನ ಮೇಲಿರುವ ಕೇಸ್‍ನ ಸಮಯದಲ್ಲಿ ಆ ಗನ್ ಬಳಕೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಗನ್ ದುರ್ಬಳಕೆ ಮಾಡಿಕೊಳ್ಳುವುದಿಲ್ಲ, ಹಾಗಾಗಿ ಗನ್ ಲೈಸೆನ್ಸ್ ಮುಂದುವರೆಸಿ ಎಂದು ಮನವಿ ಮಾಡಿದ್ದರು.

ನಟ ದರ್ಶನ್‌ ಗನ್‌ ಲೈಸೆನ್ಸ್‌ ತಾತ್ಕಾಲಿಕ ಅಮಾನತು Read More

6‌ ವಾರಗಳ ಮಧ್ಯಂತರ ಜಾಮೀನು ಮಂಜೂರು:ದರ್ಶನ್ ಗೆ ಬಿಡುಗಡೆ ಭಾಗ್ಯ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಗೆ ಕಡೆಗೂ 6 ವಾರಗಳ ಮಧ್ಯಂತರ ಜಾಮೀನು ದೊರೆತಿದ್ದು,ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲೇ ಮಧ್ಯಂತರ ಜಾಮೀನು ಮಂಜೂರಾಗಿರುವುದು ಹಬ್ಬಕ್ಕೆ ಗಿಫ್ಟ್ ಎಂದೇ ಅಭಿಮಾನಿಗಳು ಹೇಳುತ್ತಿದ್ದಾರೆ.ಅಂತೂ ಜೈಲಿನಿಂದ ಹೊರಬರಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ದರ್ಶನ್ 4 ತಿಂಗಳು 20 ದಿನಗಳ ಬಳಿಕ ಬಿಡುಗಡೆಯಾಗುತ್ತಿದ್ದಾರೆ.

ದರ್ಶನ್‌ಗೆ ಹೈಕೋರ್ಟ್‌ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಬೆನ್ನುಹುರಿ ನೋವಿಗೆ ಪರಿಹಾರ ಪಡೆಯಲು ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಕೋರಿ ದರ್ಶನ್‌ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಬುಧವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಪ್ರತಿ ವಾರ ವೈದ್ಯಕೀಯ ವರದಿಯನ್ನು ಸಲ್ಲಿಕೆ ಮಾಡಬೇಕು. ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಒಪ್ಪಿಸಬೇಕೆಂದು ಕೋರ್ಟ್ ಷರತ್ತು ವಿಧಿಸಿದೆ.

ದರ್ಶನ್ ಪರ ವಕೀಲರು ಮೂರು ತಿಂಗಳ ಜಾಮೀನು ಕೋರಿದ್ದರು. ಆದರೆ ಕೋರ್ಟ್ 6 ವಾರಗಳ ಜಾಮೀನು ಮಂಜೂರು ಮಾಡಿದೆ ಹಾಗಾಗಿ ದರ್ಶನ್‌ಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.

ನ್ಯಾಯಾಲಯದ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡರೆ ಇಂದು ಸಂಜೆ ಅಥವಾ ರಾತ್ರಿಯೇ ದರ್ಶನ್‌ ಜೈಲಿನಿಂದ ಹೊರಬರಲಿದ್ದಾರೆ,ಇಲ್ಲದಿದ್ದರೆ ಗುರುವಾರ ಬಿಡುಗಡೆಯಾಗುವರು.

ಹೈಕೋರ್ಟ್‌ನಲ್ಲಿ ದರ್ಶನ್ ಪರ ವಕೀಲ ಸಿ.ವಿ ನಾಗೇಶ್, ದರ್ಶನ್ ನೋವು ಉಲ್ಲೇಖಿಸಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಅವಶ್ಯಕತೆ ಇದೆ. ಇಲ್ಲದೆ ಹೋದಲ್ಲಿ ದರ್ಶನ್ ಒಂದು ಕಾಲಿಗೆ ಆಗಿರುವ ಸಮಸ್ಯೆ ಮತ್ತೊಂದು ಕಾಲಿಗೂ ಆಗಬಹುದು ಆದ್ದರಿಂದ 3 ತಿಂಗಳು ಮಧ್ಯಂತರ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದರು.ಅದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಮೈಸೂರಿನಲ್ಲಿ ದರ್ಶನ್‌ ಅವರನ್ನು ಪೊಲೀಸರು ಜೂನ್ 11 ರಂದು ಬೆಂಗಳೂರಿಗೆ ಕರೆ ತಂದು ಬಂಧಿಸಿದ್ದರು.11 ದಿನಗಳ ಕಾಲ ಪೊಲೀಸರ ಕಸ್ಟಡಿಯಲ್ಲಿ ವಿಚಾರಣೆ ಎದುರಿಸಿದ್ದ ದರ್ಶನ್ ಬಳಿಕ ವಿಚಾರಣಾ ಕೈದಿಯಾಗಿ ಜೈಲು ಸೇರಿದ್ದರು.

ಜೂನ್ 22ಕ್ಕೆ ನ್ಯಾಯಾಂಗ ಬಂಧನ ಜಾರಿಯಾಗಿತ್ತು. ಪರಪ್ಪನ ಅಗ್ರಹಾರ ಜೈಲಲ್ಲಿ ಪಾರ್ಟಿ ಮಾಡಿದ ಫೋಟೋ ವೈರಲ್‌ ಆದ ನಂತರ ಕೋರ್ಟ್‌ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿಸಿತ್ತು. 69 ದಿನ ಪರಪ್ಪನ ಅಗ್ರಹಾರದಲ್ಲಿ ಕಳೆದ ದರ್ಶನ್ ಆಗಸ್ಟ್ 29 ಕ್ಕೆ ಬಳ್ಳಾರಿ ಜೈಲಿಗೆ ಬಂದಿದ್ದು,ಸಧ್ಯ ತಾತ್ಕಾಲಿಕ ಬಿಡುಗಡೆ ಭಾಗ್ಯ ಸಿಕ್ಕಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಗ್ಯದ ವಿಚಾರವಾಗಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ, ಆರೋಗ್ಯ ಎಲ್ಲರ ಹಕ್ಕು ಎಂದು ಹೇಳಿ ಬುಧವಾರಕ್ಕೆ ಆದೇಶ ಕಾಯ್ದಿರಿಸಿದ್ದರು.

ಹಾಗಾಗಿ ಇಂದು 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದರು.

6‌ ವಾರಗಳ ಮಧ್ಯಂತರ ಜಾಮೀನು ಮಂಜೂರು:ದರ್ಶನ್ ಗೆ ಬಿಡುಗಡೆ ಭಾಗ್ಯ Read More