ಶಂಕರ ನಾಗ್ ಹುಟ್ಟುಹಬ್ಬದ ದಿನ: ಆಟೋ ಚಾಲಕರ ದಿನಾಚರಣೆ ಘೋಷಣೆಗೆ ಆಗ್ರಹ

ಮೈಸೂರು: ಶಂಕರ ನಾಗ್ ಅವರ ಹುಟ್ಟುಹಬ್ಬದ ದಿನವನ್ನು ಆಟೋ ಚಾಲಕರ ದಿನಾಚರಣೆ ಎಂದು ಘೋಷಿಸುವಂತೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಮನವಿ ಮಾಡಿದರು.

ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ದೇವರಾಜ ಅರಸು ರಸ್ತೆಯಲ್ಲಿರುವ ಆಟೋ ನಿಲ್ದಾಣದಲ್ಲಿ ಕನ್ನಡ ಚಿತ್ರರಂಗದ ಕರಾಟೆ ಕಿಂಗ್, ನಟ, ನಿರ್ದೇಶಕ ಶಂಕರನಾಗ್ ಅವರ ಹುಟ್ಟುಹಬ್ಬವನ್ನು ಸಿಹಿ ವಿತರಿಸಿ ಆಚರಿಸಿದ ವೇಳೆ ಸದಸ್ಯರಾದ ನಜರ್ಬಾದ್ ನಟರಾಜ್ ಮಾತನಾಡಿದರು.

ಆಟೋ ಚಾಲಕರು ಸ್ವಾಭಿಮಾನಿಗಳು. ಸಂಪಾದನೆಯ ಜೊತೆಯಲ್ಲೆ ಸಮಾಜದ ಒಳತಿಗಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಹೃದಯವಂತರು ಎಂದು ಬಣ್ಣಿಸಿದರು.

ಕನ್ನಡಚಿತ್ರರಂಗದ ಬಹುಮುಖ ಪ್ರತಿಭಾವಂತ ಕರಾಟೆಕಿಂಗ್ ಶಂಕರ್ ನಾಗ್ ಅವರು ನಿರ್ದೇಶನ ಮತ್ತು ನಟನೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ದೂರದೃಷ್ಟಿಯುಳ್ಳ ಕಲಾವಿದ. ಇವರ ನಿರ್ದೇಶನದ ಮಾಲ್ಗುಡಿ ಡೇಸ್ ವಿಶ್ವವಿಖ್ಯಾತಿ ಪಡೆದ ದಂತಕಥೆಯಾಗಿದೆ ಎಂದು ಹೇಳಿದರು.

ಸಾಧನೆಯೇ ಬದುಕಿನ ಗುರಿ ಎಂಬ ಶಂಕರನಾಗ್ ಅವರ ತತ್ವ ನಮ್ಮೆಲ್ಲರಿಗೂ ಪ್ರೇರಣೆ. ಮುಂದಿನ ದಿನದಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ವತಿಯಿಂದ ಶಂಕರ ನಾಗ್ ಅವರ ಹುಟ್ಟುಹಬ್ಬದ ದಿನವನ್ನು ಆಟೋ ಚಾಲಕರ ದಿನಾಚರಣೆ ಎಂದು ಘೋಷಿಸಲು ಮುಂದಾಗಬೇಕು ಎಂದು ಕೋರಿದರು.

ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ,ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರು ಇಡಬೇಕು ಹಾಗೂ ಮೈಸೂರಿನಲ್ಲಿ ಶಂಕರ್ ನಾಗ್ ಸ್ಮಾರಕ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್, ನೀತು, ದಿನೇಶ್,ಕಡಕೋಳ ಶಿವು, ಭರತ್, ಅಭಿ, ರಾಕೇಶ್ ಹಾಗೂ ಆಟೋ ಚಾಲಕರು
ಹಾಜರಿದ್ದರು.

ಶಂಕರ ನಾಗ್ ಹುಟ್ಟುಹಬ್ಬದ ದಿನ: ಆಟೋ ಚಾಲಕರ ದಿನಾಚರಣೆ ಘೋಷಣೆಗೆ ಆಗ್ರಹ Read More

ನಟ ರಾಜು ತಾಳಿಕೋಟೆ ವಿಧಿವಶ

ಉಡುಪಿ: ಹಿರಿಯ ರಂಗಕರ್ಮಿ,ನಟ ರಾಜು ತಾಳಿಕೋಟೆ ಅವರು ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಧಾರವಾಡ ರಂಗಾಯಣ ನಿರ್ದೇಶಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಹಾಸ್ಯ ನಟನಾಗಿ, ರಂಗಕರ್ಮಿಯಾಗಿ ಅವರು ಜನಮನ ಗೆದ್ದಿದ್ದರು. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ರಾಜು ತಾಳಿಕೋಟೆ ಮೃತರಾಗಿದ್ದಾರೆ.

ನಿನ್ನೆಯಿಂದ ಮೂರು‌ ದಿನ ಶೂಟಿಂಗ್ ಮಾಡಬೇಕಿತ್ತು. ಆದರೆ ಅಷ್ಟರಲ್ಲಿ ಅವರು ನಿಧರಾಗಿದ್ದು, ಚಿತ್ರತಂಡಕ್ಕೆ ದೊಡ್ಡ ಅಘಾತ ಆಗಿದೆ.

ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಲು ರಾಜು ತಾಳಿಕೋಟೆ ಅವರು ಉಡುಪಿಗೆ ಬಂದಿದ್ದರು. ಚಿತ್ರೀಕರಣ ಮುಗಿಸಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದಾಗ ಅ.12 ರ ರಾತ್ರಿ ಹೃದಯಾಘಾತ ಆಗಿದೆ,ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು.

ಈ ಮೊದಲು ಕೂಡ ರಾಜು ತಾಳಿಕೋಟೆ ಅವರಿಗೆ ಹೃದಯಾಘಾತ ಆಗಿತ್ತು. ಆಗ ಚಿಕಿತ್ಸೆ ನೀಡಿ ಸ್ಟಂಟ್ ಹಾಕಲಾಗಿತ್ತು. ಈಗ ಒತ್ತಡ ಜಾಸ್ತಿ ಆಗಿದ್ದರಿಂದ ಮತ್ತೆ ಹಾರ್ಟ್ ಅಟ್ಯಾಕ್ ಆಗಿರಬಹುದು. ವಿಜಯಪುರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಅವರ ಪುತ್ರ ಮಾಹಿತಿ ನೀಡಿದ್ದಾರೆ.

ರಾಜು ತಾಳಿಕೋಟೆ ಅವರಿಗೆ
ಇಬ್ಬರು ಪತ್ನಿಯರು,ಅವರೇ ತಮ್ಮ ಪಾಲಿನ ಶಕ್ತಿ ಎಂದು ಅವರು ಹೇಳಿಕೊಳ್ಳುತ್ತಿದ್ದರು‌

ರಾಜು ತಾಳಿಕೋಟೆ ಅವರು ಮನಸಾರೆ, ಪಂಚರಂಗಿ, ಲೈಫು ಇಷ್ಟೇನೇ,ರಾಜಧಾನಿ, ಅಲೆಮಾರಿ,ಮೈನಾ,ಟೋಪಿವಾಲಾ ಮತ್ತಿತರ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 7’ ರಿಯಾಲಿಟಿ ಶೋನಲ್ಲಿ ಅವರು ಸ್ಪರ್ಧಿಸಿ ಜನರ ಮನ ಗೆದ್ದಿದ್ದರು.

ಭಾನುವಾರ ರಾತ್ರಿ 12 ಗಂಟೆಗೆ ರಾಜು ತಾಳಿಕೋಟೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ತಕ್ಷಣ ನಾನೇ ಆಸ್ಪತ್ರೆಗೆ ಕರೆದುಕೊಂಡು ಬಂದೆ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾದರು. ನಮ್ಮ ಸಿನಿಮಾದ ಶೂಟಿಂಗ್​​ನಲ್ಲಿ 2 ದಿನ ಭಾಗವಹಿಸಿದ್ದರು ಎಂದು ನಟ ಶೈನ್ ಶೆಟ್ಟಿ ಅವರು ತಿಳಿಸಿದ್ದಾರೆ.

ನಟ ರಾಜು ತಾಳಿಕೋಟೆ ವಿಧಿವಶ Read More

ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ತೆರವು:ವಸಿಷ್ಠ ಸಿಂಹ ಬೇಸರ

ಮೈಸೂರು: ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ತೆರವು ಗೊಳಿಸಿರುವುದಕ್ಕೆ ಖ್ಯಾತ ನಟ ವಸಿಷ್ಠ ಸಿಂಹ ತೀವ್ರ ದುಖಃ ವ್ಯಕ್ತ ಪಡಿಸಿದ್ದಾರೆ.

ವಿಷಯ ಗೊತ್ತಾಗುತ್ತಿದಂತೆ ಅನಾರೋಗ್ಯದ ಕಾರಣ ಆಡಿಯೋ ಒಂದನ್ನು ಬಿಡುಗಡೆ ಮಾಡಿರುವ ಅವರು,ರಾತೊರಾತ್ರಿ ಸದ್ದಿಲ್ಲದೆ ಮೇರು ನಟನ ಸಮಾಧಿಯನ್ನು ಧ್ವಂಸಗೊಳಿಸಿರುವುದು ಅತ್ಯಂತ ಅಸಹ್ಯಕರ ಮತ್ತು ಹೇಯ ಕೃತ್ಯ ಎಂದು ಕಿಡಿ ಕಾರಿದ್ದಾರೆ.

ಬಹಳ ವರ್ಷಗಳಿಂದ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ವಿಷ್ಣು ಸರ್ ಅವರ ಸ್ಮಾರಕ ಮಾಡಬೇಕೆಂದು ಅಭಿಮಾನಿಗಳು ಹಾಗೂ ಸಾವಿರಾರು ಮಂದಿ ಹೋರಾಟ ಮಾಡುತ್ತಾ ಬಂದಿದ್ದಾರೆ ಆದರೆ ತಾರ್ಕಿಕ ಅಂತ್ಯ ಕಾಣದೆ ಆ ಪುಣ್ಯ ಸ್ಥಳ ಇಂದು ಕಣ್ಮರೆಯಾಗಿದೆ ಎಂದು ನೊಂದು ನುಡಿದಿದ್ದಾರೆ.

ಇಂತಹ ಮೇರು ನಟನನ್ನು ಸಮಾಧಿ ರೂಪದಲ್ಲಿ ಕಣ್ತುಂಬಿಕೊಳ್ಳಲು ನೂರಾರು ಮಂದಿ ಅಭಿಮಾನ್ ಸ್ಟುಡಿಯೋಗೆ ಭೇಟಿ ಕೊಟ್ಟು ನಮಸ್ಕಾರ ಹಾಕಿ ಬರುತ್ತಿದ್ದರು. ಅವರನ್ನು ಆರಾಧಿಸುವವರು, ಬೇಕಾದವರು ಅಭಿಮಾನಿಗಳು ಅಲ್ಲಿಗೆ ಭೇಟಿ ನೀಡುತ್ತಿದ್ದರು. ಇಂದಲ್ಲ ನಾಳೆ ಸ್ಮಾರಕ ಆಗುತ್ತೆ ಎಂದು ನಾನು ಸೇರಿದಂತೆ ಅಭಿಮಾನಿಗಳು ಎದುರು ನೋಡುತ್ತಿದ್ದೆವು ಆದರೆ ಮೊನ್ನೆ ರಾತ್ರಿ ಸದ್ದಿಲ್ಲದೆ ಸಮಾಧಿ ಇತ್ತು ಎಂಬುದನ್ನೇ ಮರೆಮಾಚನಂತೆ ನೆಲಸಮ ಮಾಡಿದ್ದಾರೆ ಇದನ್ನು ಒಳ್ಳೆಯ ಮಾತಲ್ಲಿ ಹೇಳಲು ಆಗುತ್ತಿಲ್ಲ ಇದು ಅತ್ಯಂತ ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತಹ ಸಾಧಕ, ಮೇರು ನಟ ಸಹೃದಯ ವ್ಯಕ್ತಿಗೆ ಈ ರೀತಿ ಅಪವನ ಮಾನ ಮಾಡಿರುವುದು ಇಡೀ ಕರ್ನಾಟಕದ ಜನತೆಗೆ ಒಂದು ಕಪ್ಪು ಚುಕ್ಕೆಯಾಗಿದೆ, ಸಮಾಧಿ ಸ್ಥಳದಲ್ಲಿ ಒಂದು ಸಣ್ಣ ಸೌಕರ್ಯ ಮಾಡಿಕೊಡಲು ಆಗದಂತ ಪರಿಸ್ಥಿತಿಗೆ ಹೋಗಿದ್ದಾರಾ ನಮ್ಮನ್ನು ಆಳುವವರು ಅವರು ಇದನ್ನೆಲ್ಲ ಕೈ ಬಿಟ್ಟುಬಿಟ್ಟರಾ, ಹಾಗಾದರೆ ಮೇರು ನಟನ ಸಾಧನೆಗೆ ಬೆಲೆಯೇ ಇಲ್ಲವೇ ಎಂದು ದುಖಿಃಸಿದರು.

ನಿಜಕ್ಕೂ ಇದು ಹೀಗೆ ಆಗಬಾರದಿತ್ತು ವಿಷಯ ತಿಳಿದು ನನಗೆ ಬಹಳ, ಬಹಳ ಬೇಸರ ಆಯ್ತು ಇದರ ಹಿಂದೆ ಯಾರೇ ಇದ್ದರು ಅವರನ್ನು ದೇವರು ಚೆನ್ನಾಗಿ ಇಟ್ಟಿರಲಿ ಎಂದು ದುಃಖದಿಂದ ವಶಿಷ್ಟ ಸಿಂಹ ಹೇಳಿದರು.

ಇದಕ್ಕೆ ನಾವು ಸೂಕ್ತವಾದ ಪರಿಹಾರ ಕಂಡುಕೊಳ್ಳಲೇ ಬೇಕಿದೆ ಎಂದು ಹೇಳಿದ ಅವರ ಇದು ಎಂದಿಗೂ ಕಳಿಸಲಾಗದ ನೋವು ಆದರ್ಶಕ್ಕೆ ಬೆಲೆ ಇಲ್ಲದಂತಾಗಿಬಿಟ್ಟಿದೆ ಎಂದು ನುಡಿದಿದ್ದಾರೆ.

ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ತೆರವು:ವಸಿಷ್ಠ ಸಿಂಹ ಬೇಸರ Read More

ದರ್ಶನ್ ಜಾಮೀನು ಅರ್ಜಿ ವಿಚಾರಣೆ 28ಕ್ಕೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 28ಕ್ಕೆ ಮುಂದೂಡಿದೆ.

ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಬೆನ್ನುಹುರಿ ನೋವಿನಿಂದ ದರ್ಶನ್ ಬಳಲುತ್ತಿದ್ದಾರೆ ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ,ಆದ್ದರಿಂದ ಅನಾರೋಗ್ಯದ ಕಾರಣಕ್ಕಾಗಿ ಜಾಮೀನು ಕೇಳುತ್ತಿದ್ದೇವೆ ಎಂದು ಹೇಳಿದರು.

ಜೈಲು ಅಧಿಕಾರಿಗಳಿಂದ ದರ್ಶನ್ ಅವರ ವೈದ್ಯಕೀಯ ವರದಿ ಕೇಳಿದ ನ್ಯಾಯಾಲಯ, ಆಕ್ಷೇಪ ಸಲ್ಲಿಕೆಗೆ ಎಸ್. ಪಿ. ಪಿ. ಪ್ರಸನ್ನ ಕುಮಾರ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿತು.

ದರ್ಶನ್ ಜಾಮೀನು ಅರ್ಜಿ ವಿಚಾರಣೆ 28ಕ್ಕೆ ಮುಂದೂಡಿಕೆ Read More

ದರ್ಶನ್‌ ಜಾಮೀನು ಅರ್ಜಿ ಭವಿಷ್ಯ ಅ.14 ರಂದು ಪ್ರಕಟ

ಬೆಂಗಳೂರು: ನಟ ದರ್ಶನ್‌ ಮತ್ತು ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ಭವಿಷ್ಯ ಅ.14 ರಂದು ಪ್ರಕಟವಾಗಲಿದೆ.

ಸುದೀರ್ಘ ವಿಚಾರಣೆ ನಡೆಸಿದ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶರಾದ ಜೈಶಂಕರ್‌ ವಿಚಾರಣೆಯನ್ನು ಮುಕ್ತಾಯಗೊಳಿಸಿ ಅ.14 ರಂದು ಅದೇಶ ಪ್ರಕಟಿಸುವುದಾಗಿ ತಿಳಿಸಿದರು.

ಇಂದು ದರ್ಶನ್‌ ಪರ ಹಿರಿಯ ಕ್ರಿಮಿನಲ್‌ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದರೆ ಪೊಲೀಸರ ಪರವಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.

ಬುಧವಾರ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಕೋರ್ಟ್‌ ಅ.14 ರಂದು ಆದೇಶ ಪ್ರಕಟಿಸುವುದಾಗಿ ಹೇಳಿತ್ತು.

ದರ್ಶನ್‌ ಜಾಮೀನು ಅರ್ಜಿ ಭವಿಷ್ಯ ಅ.14 ರಂದು ಪ್ರಕಟ Read More

ದರ್ಶನ್ ಗಿಲ್ಲ ಗಣೇಶನ ದರ್ಶನ,ಪೂಜೆ ಭಾಗ್ಯ

ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಗಣೇಶ ಚತುರ್ಥಿ ಆಚರಿಸಿದರೂ ಕೂಡಾ ಆರೋಪಿ ದರ್ಶನ್‌ಗೆ ಗಣೇಶನ ದರ್ಶನ ಭಾಗ್ಯ ಸಿಗದಂತಾಗಿದೆ.

ಜೈಲು ಒಳಭಾಗದಲ್ಲಿ ಬಾಳೆ ಕಂಬ, ಬಲೂನ್, ಲೈಟಿಂಗ್, ಹಣ್ಣು, ಚಿತ್ತಾರದ ಹಾಳೆಯ ಅಲಂಕಾರದೊಂದಿಗೆ ಗಣೇಶ ಮೂರ್ತಿ ಪ್ರತಿಷ್ಟಾಪಿಸಲಾಯಿತು.

ಗಣೇಶ ಕೂರಿಸುವುದು ಜೈಲು ಸಿಬ್ಬಂದಿ ಮಾತ್ರ. ಆದರೆ, ಪ್ರತಿ ವರ್ಷ ಎಲ್ಲಾ ಕೈದಿಗಳು ಸೇರಿ ಅದ್ದೂರಿಯಾಗಿ ಅಲಂಕಾರ ಮಾಡಿ ಹಬ್ಬ ಮಾಡುತ್ತಿದ್ದರು.

ಈ ವರ್ಷ ದರ್ಶನ್ ಜೈಲಿನಲ್ಲಿರುವ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಗಣೇಶನ ದರ್ಶನ ಮಾಡಿ ಕೈ ಮುಗಿದು ಪ್ರಾರ್ಥನೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಜೈಲಿನಲ್ಲಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶ ನೀಡಿಲ್ಲ.

ಜೈಲಿನಲ್ಲಿ 3 ಅಡಿ ಎತ್ತರದ ಇಲಿಯ ಮೇಲೆ ಕುಳಿತಿರುವ ವಿಘ್ನೇಶ್ವರನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಆರೋಪಿ ದರ್ಶನ್ ಸೇರಿದಂತೆ ಇತರೆ ಮೂರು ಕೈದಿಗಳಿದ್ದಾರೆ.ದರ್ಶನ್ ಸೇರಿ ಹೈ ಸೆಕ್ಯೂರಿಟಿ ಸೆಲ್‌ನಲ್ಲಿರುವ ಯಾವೊಬ್ಬ ಕೈದಿಗೂ ಗಣೇಶ ಪೂಜೆಗೆ ಅವಕಾಶ ನೀಡಲಾಗಿಲ್ಲ.

ದರ್ಶನ್ ಗಿಲ್ಲ ಗಣೇಶನ ದರ್ಶನ,ಪೂಜೆ ಭಾಗ್ಯ Read More