ಮೈಕ್ರೋ ಫೈನಾನ್ಸ್ :ರೈತರ ಆತ್ಮಹತ್ಯೆಗೆ ಸರ್ಕಾರ ಹೊಣೆ ಮು.ಮಂ ಚಂದ್ರು

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ಮೈಕ್ರೋ ಫೈನಾನ್ಸ್ ಗಳ ವಸೂಲಿ ದಂಧೆಗಳಿಗೆ ರೈತರು ಆತ್ಮಹತ್ಯೆ ಮಾರ್ಗ ಹಿಡಿದಿರುವುದಕ್ಕೆ ರಾಜ್ಯ ಸರ್ಕಾರ ಹೊಣೆ ಹೊರಬೇಕು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಚಂದ್ರು,ಮೈಕ್ರೋ ಫೈನಾನ್ಸ್‌ ಹಾವಳಿಗೆ ಕೂಡಲೇ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಅಕ್ರಮ ಕಂಪನಿಗಳು ಸ್ಥಳೀಯ ರಾಜಕಾರಣಿಗಳು ಹಾಗೂ ಪೊಲೀಸ್ ಇಲಾಖೆಯ ಕೃಪಾಕಟಾಕ್ಷದಿಂದಾಗಿ ರೈತಾಪಿ ಮಕ್ಕಳ ಮೇಲೆ ಆರ್ ಬಿ ಐ ನಿಯಮಾವಳಿಗಳು ಹಾಗೂ ಈ ನೆಲದ ಕಾನೂನುಗಳನ್ನು ಉಲ್ಲಂಘಿಸಿ ಅಕ್ರಮ ವಸೂಲಿ, ಬೆದರಿಕೆ, ಅಪಮಾನ ದಂತಹ ಕ್ರಿಮಿನಲ್ ಮಾರ್ಗಗಳಿಂದ ಚಕ್ರ ಬಡ್ಡಿ ವಸೂಲಿ ಮಾಡುತ್ತಿರುವುದು ರಾಜ್ಯದಲ್ಲಿ ಪೊಲೀಸ್ ಇಲಾಖೆ ವೈಫಲ್ಯಗೊಂಡಿರುವುದರ ಸಂಕೇತವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸಹಕಾರಿ ಸಂಸ್ಥೆಗಳು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಹಣಕಾಸು ನೆರವು ನೀಡದೆ ಕೇವಲ ಪ್ರಭಾವಿಗಳ, ಸ್ಥಳೀಯ ಶಾಸಕರುಗಳ ಬಿಗಿ ಮುಷ್ಟಿಯಲ್ಲಿ ಸಿಲುಕಿಕೊಂಡಿವೆ. ಮತ್ತೊಂದು ಕಡೆ ಸರ್ಕಾರದಿಂದ ರೈತಾಪಿ ವರ್ಗಗಳಿಗೆ ಬೆಳೆ ನಷ್ಟ ಪರಿಹಾರಗಳಿಗೆ ಪರಿಣಾಮಕಾರಿ ಯಾದ ಯೋಜನೆಗಳು ತಲುಪದೇ ಅನಿವಾರ್ಯವಾಗಿ ರೈತರು ಸಾಲಕ್ಕಾಗಿ ಇಂತಹ ಅಕ್ರಮ ಫೈನಾನ್ಸ್ ಕಂಪನಿಗಳ ಮೊರೆ ಹೋಗಿ ತಮ್ಮ ಜೀವಗಳನ್ನೇ ಬಲಿ ಕೊಡುವಂತಹ ವಾತಾವರಣ ಹಾಗೂ ಸಂದರ್ಭಗಳು ರಾಜ್ಯದಲ್ಲಿ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪೊಲೀಸ್ ಇಲಾಖೆ ಹಾಗೂ ಕೇಂದ್ರದ ಜಾರಿ ನಿರ್ದೇಶನಾಲಯ ಕಣ್ಮುಚ್ಚಿ ಕುಳಿತಿರುವುದು ಬೇಸರದ ಸಂಗತಿಯಾಗಿದೆ. ಆರಂಭದಲ್ಲೇ ಈ ಕಂಪನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದರೆ ರೈತರ ಜೀವವನ್ನು ಉಳಿಸಬಹುದಾಗಿತ್ತು. ಆದರೆ ಹಲವು ತಿಂಗಳುಗಳಿಂದ ಸರ್ಕಾರ ಹಾಗೂ ವಿಪಕ್ಷಗಳು ಇಲ್ಲಸಲ್ಲದ ರಾಜಕೀಯ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ,ಹಾಗಾಗಿ ರೈತರ ಆತ್ಮಹತ್ಯೆಗೆ ತಾವುಗಳೇ ನೇರ ಹೊಣೆ ಹೊರಬೇಕೆಂದು ಒತ್ತಾಯಿಸಿದ್ದಾರೆ.

ಕೂಡಲೇ ಕಾನೂನಿನ ಬಿಗಿ ಕುಣಿಕೆಯನ್ನು ಹಣಕಾಸು ಕಂಪನಿಗಳ ವಿರುದ್ಧ ಪ್ರಯೋಗಿಸಬೇಕು ಹಾಗೂ ಕೇಂದ್ರದ ಜಾರಿ ನಿರ್ದೇಶನಾಲಯಕ್ಕೆ ಕ್ರಮ ತೆಗೆದುಕೊಳ್ಳಲು ಶೀಘ್ರ ಶಿಫಾರಸ್ಸು ಮಾಡಿ ರೈತರ ಆತ್ಮಹತ್ಯೆ,ಶೋಷಣೆಗಳನ್ನು ತಪ್ಪಿಸಬೇಕೆಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಮುಖ್ಯ ಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಮೈಕ್ರೋ ಫೈನಾನ್ಸ್ :ರೈತರ ಆತ್ಮಹತ್ಯೆಗೆ ಸರ್ಕಾರ ಹೊಣೆ ಮು.ಮಂ ಚಂದ್ರು Read More

ನಮ್ಮ ಕ್ಲಿನಿಕ್ ಹೆಸರಿನಲ್ಲಿ ನೂರಾರು ಕೋಟಿ ಗುಳುಂ – ಉಷಾ ಮೋಹನ್ ಆರೋಪ

ಬೆಂಗಳೂರು: ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಹೆಸರಿನಲ್ಲಿ ನೂರಾರು ಕೋಟಿ ಗುಳುಂ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಗಂಭೀರ ಆರೋಪ ಮಾಡಿದರು.

ಮಾಧ್ಯಮ ಗೋಷ್ಠಿಯಲ್ಲಿಂದು ಈ ಕುರಿತು ಮಾತನಾಡಿದ ಅವರು,ನಮ್ಮ ಕ್ಲಿನಿಕ್ ಗಳು ಪ್ರಾರಂಭವಾಗಿ ಎರಡು ವರ್ಷಗಳಾಗಿವೆ. ಇದುವರೆಗೆ ಆರೋಗ್ಯ ಇಲಾಖೆಯಿಂದ 350 ಕೋಟಿ ರೂ ವೆಚ್ಚ ಮಾಡಲಾಗಿದೆ. ಬಿಬಿಎಂಪಿಯ ಅಂಕಿ ಅಂಶಗಳ ಪ್ರಕಾರ 2,29,000 ರೋಗಿಗಳನ್ನು ಆರೈಕೆ ಮಾಡಲಾಗಿದ್ದು ಪ್ರತಿಯೊಬ್ಬರಿಗೂ 1800 ರೂ ಗಳಂತೆ ವ್ಯಯ ಮಾಡುತ್ತಿದ್ದು ಕೋಟ್ಯಾಂತರ ರೂಪಾಯಿಗಳು ಭ್ರಷ್ಟಾಚಾರಿಗಳ ಪಾಲಾಗುತ್ತಿದೆ ಎಂದು ದೂರಿದರು.

ಕಳೆದ ಒಂಬತ್ತು ವರ್ಷಗಳಲ್ಲಿ ದೆಹಲಿ ರಾಜ್ಯದಲ್ಲಿ 550ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್ ಗಳಲ್ಲಿ 7 ಕೋಟಿಗೂ ಹೆಚ್ಚು ರೋಗಿಗಳನ್ನು ಆರೈಕೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಕೇವಲ 101 ರೂಪಾಯಿಗಳಷ್ಟು ಮಾತ್ರ ಖರ್ಚು ಬರುತ್ತಿದೆ,ಆದರೆ ರಾಜ್ಯದ ನಮ್ಮ ಕ್ಲಿನಿಕ್ ಗಳಲ್ಲಿ ಬೃಹತ್ ಮಟ್ಟದ ಖರ್ಚನ್ನು ತೋರಿಸಿ ರೋಗಿಗಳ ಹೆಸರಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಗುಳುಂ ಮಾಡುತ್ತಿರುವುದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಲೇ ಉತ್ತರ ನೀಡಬೇಕು ಎಂದು ಅಂಕಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ‌ ಉಷಾ ಒತ್ತಾಯಿಸಿದರು.

ಮಂತ್ರಿಗಳು ಮೂರು ದಿವಸ ತಮ್ಮ ಸಮಯವನ್ನು ಮೀಸಲಿಟ್ಟು ದೆಹಲಿಗೆ ಭೇಟಿ ನೀಡಿ ಅಲ್ಲಿನ ಆರೋಗ್ಯ ವ್ಯವಸ್ಥೆಯನ್ನು ತಿಳಿದುಕೊಂಡು ಅದೇ ರೀತಿಯ ಗುಣಮಟ್ಟದ ಚಿಕಿತ್ಸೆಗಳನ್ನು ಅಗ್ಗದ ದರದಲ್ಲಿ ಹೇಗೆ ನೀಡಬಹುದೆಂಬುದನ್ನು ಅರಿಯಲಿ ಎಂದು ಸಲಹೆ ನೀಡಿದರು.

ಇಲ್ಲದಿದ್ದಲ್ಲಿ ಆರೋಗ್ಯ ಮಂತ್ರಿಗಳಿಗೂ ನಮ್ಮ ಕ್ಲಿನಿಕ್ ಗಳಿಂದ ಬಹುಪಾಲು ಹೋಗುತ್ತಿದೆ ಎಂಬುದನ್ನು ರಾಜ್ಯದ ಜನ ಅರ್ಥಮಾಡಿಕೊಳ್ಳ ಬೇಕಾಗುತ್ತದೆ ಈ ಕುರಿತುಸಚಿವರು ಉತ್ತರಿಸಬೇಕು ಎಂದು ಉಷಾ ಮೋಹನ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಉಪಸ್ಥಿತರಿದ್ದರು.

ನಮ್ಮ ಕ್ಲಿನಿಕ್ ಹೆಸರಿನಲ್ಲಿ ನೂರಾರು ಕೋಟಿ ಗುಳುಂ – ಉಷಾ ಮೋಹನ್ ಆರೋಪ Read More

ಕೆ ಪಿ ಎಸ್ ಸಿ ಪರೀಕ್ಷಾರ್ಥಿಗಳ ಪ್ರತಿಭಟನೆಗೆ ಆಪ್ ಬೆಂಬಲ

ಬೆಂಗಳೂರು: ಕೆ ಪಿ ಎಸ್ ಸಿ ಮಂಡಳಿಯು ನಿರಂತರವಾಗಿ ಅನೇಕ ವೈಫಲ್ಯಗಳನ್ನು ಎದುರಿಸುತ್ತಾ ಬ್ರಷ್ಟಾಚಾರಿಗಳ ಆಡಂಬೋಲವಾಗಿ ಮಾರ್ಪಟ್ಟಿರುವುದು ದುರಂತ ಎಂದು ಆಮ್ ಆದ್ಮಿ ಪಕ್ಷ ಕಿಡಿಕಾರಿದೆ.

ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ ಅವರ ಬದುಕಿಗೆ ಬೆಳಕಾಗಬೇಕಿದ್ದ ಉದ್ಯೋಗ ಸೌಧ ಇಂದು ಬ್ರಷ್ಟಾಚಾರಿಗಳ ಆಡಂಬೋಲವಾಗಿ ಮಾರ್ಪಟ್ಟಿರುವುದು ರಾಜ್ಯದ ಕನ್ನಡಿಗರ ದುರದೃಷ್ಟವೇ ಸರಿ. ಈ ಬಗ್ಗೆ ನಿರಂತರವಾಗಿ ಹೋರಾಟವನ್ನು ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು ಪರೀಕ್ಷಾರ್ಥಿಗಳ ಬೆಂಬಲಕ್ಕೆ ಸದಾಕಾಲ ಇರಲಿದೆ ಎಂದು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಡಾ. ಸತೀಶ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಜ.15 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಪರೀಕ್ಷಾರ್ಥಿಗಳ ತೀವ್ರ ಪ್ರತಿಭಟನೆಯಲ್ಲಿ ಆಮ್ ಆದ್ವಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಎಲ್ಲ ನಾಯಕರು, ಕಾರ್ಯಕರ್ತರು ಭಾಗವಹಿಸಿ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.

ಮಂಡಳಿಯಲ್ಲಿ ನಡೆಯುತ್ತಿರುವ ನಿರಂತರ ಪರೀಕ್ಷೆ ಪತ್ರಿಕೆಗಳಲ್ಲಿನ ಭಾಷಾಂತರ ಸಮಸ್ಯೆ, ಮರು ಪರೀಕ್ಷೆ, ಫಲಿತಾಂಶ ಬಂದರೂ ನೇಮಕಾತಿ ಪತ್ರ ನೀಡದೆ ಇರುವುದು, ಸದಸ್ಯರ ನಡುವಿನ ಒಮ್ಮತದ ಕೊರತೆ, ಕಾಲಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸದಿರುವುದು ಸೇರಿದಂತೆ ಅನೇಕ ಗೊಂದಲಗಳನ್ನು ಶೀಘ್ರವೇ ಸರ್ಕಾರವು ಬಗೆಹರಿಸಬೇಕೆಂದು ಇದೇ ವೇಳೆ ಸತೀಶ್ ಒತ್ತಾಯಿಸಿದರು.

ಕೆ ಪಿ ಎಸ್ ಸಿ ಪರೀಕ್ಷಾರ್ಥಿಗಳ ಪ್ರತಿಭಟನೆಗೆ ಆಪ್ ಬೆಂಬಲ Read More

ಹಂಪಿ ಕನ್ನಡ ವಿವಿ ಉಳಿವಿಗೆ ಕೂಡಲೇ 23 ಕೋಟಿ ಬಿಡುಗಡೆಗೆ ಮು ಮ ಚಂದ್ರು ಆಗ್ರಹ

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಳಿವಿಗಾಗಿ ಕೂಡಲೇ 23 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ

ಕಳೆದ 32 ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ ಭಾಗವಾದ ಐತಿಹಾಸಿಕ ಸ್ಥಳ ಹಂಪಿಯಲ್ಲಿ ಕನ್ನಡ ನಾಡು, ನುಡಿ ,ಸಂಸ್ಕೃತಿಗೆ ಸಂಬಂಧಿಸಿದ ಸಂಶೋಧನೆಗೆ ಮೀಸಲಾಗಿ ಈ ಹಂಪಿ ವಿಶ್ವವಿದ್ಯಾಲ ಸ್ಥಾಪನೆಯಾಯಿತು ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಸೂಕ್ತ ಅನುದಾನವಿಲ್ಲದೆ ಸಂಶೋಧನಾ ಯೋಜನೆಗಳನ್ನು ನಿರ್ವಹಿಸಲು, ಇವುಗಳನ್ನು ಪ್ರಕಟಿಸಲು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿಗಳ ವೇತನ ಹಾಗೂ ದಿನನಿತ್ಯದ ನಿರ್ವಹಣಾ ಕಾರ್ಯಗಳಿಗೆ ತೊಡಕುಂಟಾಗಿದೆ ಹಾಗಾಗಿ ಕೂಡಲೇ 23 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಡಾ. ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನವನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಪಾದರ್ಪಣೆ ಮಾಡಿ ಇಂದು ಮುಖ್ಯಮಂತ್ರಿಗಳಾಗಿರುವ ಸಂದರ್ಭದಲ್ಲಿ ಕನ್ನಡದ ಕೈಂಕರ್ಯಕ್ಕಾಗಿಯೇ ಮೀಸಲಿಟ್ಟಿರುವ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಕುಲಪತಿಗಳು ಪತ್ರ ಬರೆದು ನಂತರ ಸ್ವತಹ ಮುಖ್ಯಮಂತ್ರಿಗಳೇ ಅನುದಾನ ಬಿಡುಗಡೆ ಮಾಡಲು ಆದೇಶ ಮಾಡಿದ್ದರೂ ಸಹ ಆರ್ಥಿಕ ಇಲಾಖೆಯಿಂದ ಐದು ತಿಂಗಳಾದರೂ ಅನುದಾನ ಬಿಡುಗಡೆ ಮಾಡಲು ಮೀನಾ ಮೇಷ ಎಣಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಪತ್ರದಲ್ಲಿ ಚಂದ್ರು ಹೇಳಿದ್ದಾರೆ.

ಇದರಲ್ಲಿ ಎಸ್ಸಿ ಎಸ್ ಪಿ / ಟಿ ಎಸ್ ಪಿ ಯೋಜನೆ ಹಾಗೂ ಗಿರಿಜನ ಉಪ ಯೋಜನೆಗೆ ಮೀಸಲಿಟ್ಟಿರುವ ಹಣವೂ ಸೇರಿದೆ.ಕೂಡಲೇ ಅನುದಾನ ಬಿಡುಗಡೆ ಮಾಡದಿದ್ದಲ್ಲಿ ಕನ್ನಡ ಕಟ್ಟಾಳುವಾಗಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಹಂಪಿ ಕನ್ನಡ ವಿವಿ ಉಳಿವಿಗೆ ಕೂಡಲೇ 23 ಕೋಟಿ ಬಿಡುಗಡೆಗೆ ಮು ಮ ಚಂದ್ರು ಆಗ್ರಹ Read More

ಬಸ್ ದರ ಏರಿಕೆ ವಿರುದ್ಧ ವಿಶಿಷ್ಟ ಪ್ರತಿಭಟನೆ ಮಾಡಿದ ಆಮ್ ಆದ್ಮಿ ಪಕ್ಷ

ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ಬಸ್ ದರ ಶೇ 15 ರಷ್ಟು ಏರಿಕೆ ಮಾಡಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ವಿಶಿಷ್ಯ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಪ್ ನೂರಾರು ಕಾರ್ಯಕರ್ತರು ಎತ್ತಿನ ಬಂಡಿ ಎಳೆಯುವ ಮೂಲಕ ತೀವ್ರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಸರ್ಕಾರದ ಎತ್ತಿನ ಬಂಡಿ ಗ್ಯಾರಂಟಿ , ಸರ್ಕಾರ ಜಾಲಿ ಜಾಲಿ, ಜನರ ಜೇಬು ಖಾಲಿ ಖಾಲಿ ಎಂದು ಚಪ್ಪಾಳೆ ತಟ್ಟುತ್ತಾ ಹಾಡುತ್ತಾ ಘೋಷಣೆ ಕೂಗಿ ವಿಶಿಷ್ಟ ವಾಗಿ ಹೋರಾಟ ನಡೆಸಿ ಸರ್ಕಾರದ ಕ್ರಮವನ್ನು ವಿರೋಧಿಸಿದರು.

ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಆಮ್ ಆದ್ಮಿ ಪಕ್ಷದ ಗ್ಯಾರೆಂಟಿಗಳನ್ನು ನಕಲು ಮಾಡಿ ಅಧಿಕಾರ ಹಿಡಿದಿದೆ ಎಂದು ಟೀಕಿಸಿದರು.

ಈ ಸರ್ಕಾರಕ್ಕೆ ಭ್ರಷ್ಟಾಚಾರ ನಿಲ್ಲಿಸದೆ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡಲಾಗುತ್ತಿಲ್ಲ.ಅದಕ್ಕಾಗಿ ದರ ಏರಿಕೆ ಮಾಡುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಎರಡು ಬಜೆಟ್ ಗಳಲ್ಲಿ 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ.ಈ ದುಡ್ಡು ಯಾರ ಜೇಬು ಸೇರುತ್ತಿದೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಸ್ಟ್ಯಾಂಪ್ ಡ್ಯೂಟಿ, ಅಬಕಾರಿ ಸುಂಕ, ವಿದ್ಯುತ್ ದರ, ಹಾಲಿನ ದರ ಎಲ್ಲವನ್ನು ಗಗನಕ್ಕೆ ಮುಟ್ಟಿಸಿದ್ದಾರೆ. ಈಗ ಬಸ್ ದರ ಏರಿಸಿದ್ದಾರೆ, ಮುಂದಿನ ದಿನಗಳಲ್ಲಿ ನೀರಿನ ದರವನ್ನು ಏರಿಸಲಿದ್ದಾರೆ, ಜನ ಪರ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರವು ಆರ್ಥಿಕ ದಿವಾಳಿಯಾಗುವ ಹಂತಕ್ಕೆ ತಲುಪಿರುವ ಅನುಮಾನ ಜನತೆಯಲ್ಲಿ ಕಾಡುತ್ತಿದೆ ಎಂದು‌ ತಿಳಿಸಿದರು.

ಬಸ್ ದರ ಏರಿಕೆಯನ್ನು ಕೂಡಲೇ ಹಿಂಪಡೆಯದಿದ್ದಲ್ಲಿ ಪಕ್ಷವು ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತದೆ ಎಂದು ಚಂದ್ರಶೇಖರ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರುಗಳಾದ ನಂಜಪ್ಪ ಕಾಳೇಗೌಡ, ಲೋಹಿತ್, ಗೋಪಾಲ್ ,ಸುರೇಶ್ ,
ಡಾ. ಕೇಶವ್, ವೀಣಾ , ಭಾನುಪ್ರಿಯ, ಪುಷ್ಪ ಕೇಶವ್, ಶಶಿಧರ ಆರಾಧ್ಯ, ಅಶೋಕ್ ಮೃತ್ಯುಂಜಯ, ನವೀನ್,ಪುಟ್ಟಣ್ಣ, ಮುನೇಶ್ ಸರವಣ , ಶಾಶವಲಿ ಸೇರಿದಂತೆ ‌ಪಕ್ಷದ ಅನೇಕ ನಾಯಕರು ಭಾಗವಹಿಸಿದ್ದರು.

ಬಸ್ ದರ ಏರಿಕೆ ವಿರುದ್ಧ ವಿಶಿಷ್ಟ ಪ್ರತಿಭಟನೆ ಮಾಡಿದ ಆಮ್ ಆದ್ಮಿ ಪಕ್ಷ Read More

ಬ್ಯಾಟರಿ ಆಧಾರಿತ ಆಟೋಗಳಿಗೆ ತಮಿಳುನಾಡು, ದೆಹಲಿ ಮಾದರಿ ಉಚಿತ ಪರವಾನಗಿ ನೀಡಿ: ಮು.ಮ ಚಂದ್ರು

ಬೆಂಗಳೂರು: ರಾಜ್ಯದಲ್ಲಿನ ಬ್ಯಾಟರಿ ಆಧಾರಿತ ಆಟೋರಿಕ್ಷಾಗಳಿಗೆ ತಮಿಳುನಾಡು ಹಾಗೂ ದೆಹಲಿ ಸರ್ಕಾರಗಳ ಮಾದರಿಯಲ್ಲಿ ಕೂಡಲೇ ಉಚಿತ ಪರವಾನಗಿ ನೀಡಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಂದ್ರು ಈ ಬಗ್ಗೆ ಪತ್ರ ಬರೆದಿದ್ದಾರೆ.

ಅನವಶ್ಯಕವಾಗಿ ಆಟೋ ಮೀಟರ್ ಬೆಲೆಗಳನ್ನು ಏರಿಸಿ ಗ್ರಾಹಕರಿಗೆ ಅನವಶ್ಯಕವಾಗಿ ಹೊರೆ ಮಾಡುವ ಅವಶ್ಯಕತೆಯೇ ಇರುವುದಿಲ್ಲವೆಂದು ಸಲಹೆ ನೀಡಿದ್ದಾರೆ

ಕರ್ನಾಟಕ ರಾಜ್ಯದಲ್ಲಿನ ಹಲವು ನಗರಗಳಲ್ಲಿ ಮೀಟರ್ ಆಧಾರದಲ್ಲಿ ಓಡಾಡುತ್ತಿರುವ ಬ್ಯಾಟರಿ ಚಾಲಿತ ಆಟೋರಿಕ್ಷಾ ಗಳು ರಾಜ್ಯದ ಸಾರಿಗೆ ಇಲಾಖೆಯ ಯಾವುದೇ ಕಾನೂನು ಕಟ್ಟಳೆಗಳಿಗೆ ಒಳಪಟ್ಟಿಲ್ಲ, ಮೆಥನಲ್ ಮತ್ತು ಇಥೆನಾಲ್ ಇಂಧನ ಬಳಸಿ ಸಂಚರಿಸುತ್ತಿರುವ ಪಾರಂಪರಿಕ ಆಟೋರಿಕ್ಷಾಗಳ ಚಾಲಕರುಗಳ ಆದಾಯದಲ್ಲಿ ವ್ಯತ್ಯಯ ಉಂಟಾಗಿ ಆರ್ಥಿಕವಾಗಿ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.

ಯಾವುದೇ ಸಾರಿಗೆ ನಿಯಮಾವಳಿಗಳ ಅಂಕುಶವಿಲ್ಲದ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ರಸ್ತೆಗಳಿದಿರುವ ಪರಿಣಾಮ ಇಂದು ಸರ್ಕಾರದ ಸಾರಿಗೆ ನಿಯಮಾವಳಿಗಳ ಪ್ರಕಾರ ಪರವಾನಗಿ ತೆಗೆದುಕೊಂಡು ಪ್ರಾಮಾಣಿಕವಾಗಿ ತೆರಿಗೆ ಕಟ್ಟಿಕೊಂಡು ಬರುತ್ತಿರುವ ಲಕ್ಷಾಂತರ ಬಡ ಆಟೋರಿಕ್ಷಾ ಚಾಲಕರುಗಳು ತಮ್ಮ ಸಂಸಾರವನ್ನು ನಿರ್ವಹಿಸಲೂ ಸಾಧ್ಯವಾಗದ ಸಂಕಷ್ಟ ಪರಿಸ್ಥಿತಿಗೆ ಧೂಡಲ್ಪಟ್ಟಿದ್ದಾರೆ ಎಂದು ಪತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಕಳವಳ ವ್ಯಕ್ತಪಡಿಸಿದ್ದಾರೆ.

ಪಕ್ಕದ ತಮಿಳುನಾಡು ಹಾಗೂ ದೆಹಲಿ ರಾಜ್ಯಗಳಲ್ಲಿ ಬ್ಯಾಟರಿ ಆಧಾರಿತ ಆಟೋರಿಕ್ಷಾ ಗಳಿಗೆ ಸೂಕ್ತ ನಿಯಮಾವಳಿಗಳನ್ನು ರೂಪಿಸಿ ಎರಡೂ ವರ್ಗಗಳ ಆಟೋರಿಕ್ಷ ಚಾಲಕರಗಳು ಸುಭಿಕ್ಷವಾಗಿ ಜೀವನವನ್ನು ನಡೆಸಿಕೊಂಡು ಹೋಗುವ ವಾತಾವರಣವನ್ನು ಕಲ್ಪಿಸಿ ಕೊಟ್ಟಿದ್ದಾರೆ. ರಾಜ್ಯದಲ್ಲಿಯೂ ಕೂಡಲೇ ಇದೇ ರೀತಿಯ ನಿಯಮಾವಳಿಗಳನ್ನು ಅಳವಡಿಸುವ ಮೂಲಕ ಲಕ್ಷಾಂತರ ಆಟೋ ಚಾಲಕರು ಆರ್ಥಿಕ ಸಂಕಷ್ಟದಿಂದ ಹೊರಬರುವಂತಹ ವಾತಾವರಣ ಕಲ್ಪಿಸಿ ಕೊಡಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಪಕ್ಷದ ಆಟೋ ಘಟಕದ ರಾಜ್ಯಾಧ್ಯಕ್ಷ ಅಯುಬ್ ಖಾನ್ ಇನ್ನಿತರ ಆಟೋ ಸಂಘಟನೆಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಮನವಿ ಪತ್ರವನ್ನು ಸಲ್ಲಿಸಿದರು.

ಬ್ಯಾಟರಿ ಆಧಾರಿತ ಆಟೋಗಳಿಗೆ ತಮಿಳುನಾಡು, ದೆಹಲಿ ಮಾದರಿ ಉಚಿತ ಪರವಾನಗಿ ನೀಡಿ: ಮು.ಮ ಚಂದ್ರು Read More