ಅಧಿಕಾರಿಗಳ ನಟ್ಟು,ಬೋಲ್ಟ್ರ್ ಸರಿ ಮಾಡಿ: ಮುಖ್ಯಮಂತ್ರಿ ಚಂದ್ರು ಆಗ್ರಹ

ಬೆಂಗಳೂರು: ಭ್ರಷ್ಟ ಲೋಕಸೇವಾ ಆಯೋಗದ ಅಧಿಕಾರಿಗಳ ನಟ್ಟು ಮತ್ತು ಬೋಲ್ಟ್ ಗಳನ್ನು ಮೊದಲು ಸರಿ ಮಾಡಿ, ಇಲ್ಲದಿದ್ದಲ್ಲಿ ನಾವೆಲ್ಲ ಸೇರಿ ಯಾರ ನಟ್ಟು , ಬೋಲ್ಟ್ ಸರಿ ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯ ಮಂತ್ರಿ ಚಂದ್ರು ಹೇಳಿದರು.

ಲೋಪ ದೋಷದ ಆಯೋಗ, ಲೂಟಿಕೋರರ ಆಯೋಗ, ಅಯೋಗ್ಯರ ಆಯೋಗವಾಗಿ ಮಾರ್ಪಟ್ಟಿರುವ ಲೋಕಸೇವಾ ಆಯೋಗವನ್ನು ಕೂಡಲೇ ರದ್ದು ಮಾಡಬೇಕು,ನೂತನ ಆಯೋಗವನ್ನು ರಚಿಸಬೇಕು,ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡಿ ತಪ್ಪು ಮಾಡಿರುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು
ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಟಿ.ಎ.ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಆದ್ಯತೆ ನೀಡದೆ ಭಾಷಾಂತರ ಮಾಡಿ, ಕೃಪಾಂಕ ನೀಡುವ ಮೂಲಕ ಜಾರಿಕೊಳ್ಳುತ್ತಿರುವ ಇಂತಹ ಅಧಿಕಾರಿಗಳಿಂದ ಪರೀಕ್ಷೆ ಬರೆಸಿದರು ಅವರು ಸಹ ನಾಲ್ಕೈದು ಬಾರಿ ಫೇಲ್ ಆಗುತ್ತಾರೆ. ಇಂತಹ ಅಯೋಗ್ಯರಿಂದಲೆ ಮತ್ತೆ ತಪ್ಪನ್ನು ಸರಿಪಡಿಸುವ ಮುಖ್ಯಮಂತ್ರಿಗಳ ಮಾತು ನಿಜಕ್ಕೂ ಹಾಸ್ಯಾಸ್ಪದ ಎಂದು ಟೀಕಿಸಿದರು.

ತಕ್ಷಣ ಅಮರಣಾಂತ ಉಪವಾಸ ಕೂತಿರುವ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

ಅಧಿಕಾರಿಗಳ ನಟ್ಟು,ಬೋಲ್ಟ್ರ್ ಸರಿ ಮಾಡಿ: ಮುಖ್ಯಮಂತ್ರಿ ಚಂದ್ರು ಆಗ್ರಹ Read More

ಪ್ರತ್ಯೇಕ ಕಂಪನಿಗಳ ಮಾಡಿ ಬಿಬಿಎಂಪಿಯ ಕತ್ತು ಹಿಸುಕಬೇಡಿ- ಜಗದೀಶ್ ವಿ.ಸದಂ

ಬೆಂಗಳೂರು: ಸುರಂಗ ಮಾರ್ಗ, ರಸ್ತೆ ಅಭಿವೃದ್ಧಿ ಮುಂತಾದ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲು ಪ್ರತ್ಯೇಕ ಕಂಪನಿಯನ್ನು ಸ್ಥಾಪಿಸಿ ಬಿಬಿಎಂಪಿಯನ್ನು ಕತ್ತು ಹಿಸುಕಿ ಸಾಯಿಸಬೇಡಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಗರಂ ಆಗಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಬಿಬಿಎಂಪಿಯನ್ನು ಸಾಯಿಸಲು ಆಮ್ ಆದ್ಮಿ ಪಕ್ಷ ಎಂದಿಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಕಳೆದ ಬಜೆಟ್ ನಲ್ಲಿ 7 ಸಾವಿರ ಕೋಟಿಗಳನ್ನು ಬೆಂಗಳೂರು ಅಭಿವೃದ್ಧಿಗಾಗಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಸ್ಪೆಷಲ್ ಪರ್ಪಸ್ ವೆಹಿಕಲ್ ಎಂಬ ನೆಪದಲ್ಲಿ ಪ್ರತ್ಯೇಕ ಲಿಮಿಟೆಡ್ ಕಂಪನಿಯನ್ನು ಮಾಡಲು ಹೊರಟಿರುವುದು ಸಂಪೂರ್ಣ ಭ್ರಷ್ಟಾಚಾರ ಮಾಡಲು ಹೂಡಿರುವ ಕುತಂತ್ರ ಎಂದು ಆರೋಪಿಸಿದರು.

ಈಗಾಗಲೇ ಬಿಬಿಎಂಪಿಯಿಂದ ಕಸ ನಿರ್ವಹಣೆ, ರಸ್ತೆ ಅಭಿವೃದ್ಧಿ ಯಂತಹ ಕೆಲಸಗಳಿಗೆ ಪ್ರತ್ಯೇಕ ಸ್ಮಾರ್ಟ್ ಸಿಟಿ ಲಿಮಿಟೆಡ್ ಮಾಡಿ ಬೆಂಗಳೂರನ್ನು ಅಭಿವೃದ್ಧಿ ಮಾಡಿರುವುದು ಅಷ್ಟರಲ್ಲಿಯೇ ಇದೆ.ಎಲ್ಲೂ ಸಹ ಪಾರದರ್ಶಕತೆ ಕಂಡುಬಂದಿಲ್ಲ. ಈ ಕಂಪನಿಗಳು ಸಂಪೂರ್ಣ ಭ್ರಷ್ಟಾಚಾರಿಗಳ
ಕೂಪವಾಗಿದೆಯೇ ಹೊರತು ಮತ್ತೇನು ಸಾಧಿಸಿಲ್ಲ ಎಂದು ಟೀಕಿಸಿದರು.

ಬಿಬಿಎಂಪಿಯು ಬೆಂಗಳೂರಿನ ಅಭಿವೃದ್ಧಿಯನ್ನು ಮಾಡಲು ಸಂಪೂರ್ಣ ಸ್ವಶಕ್ತವಾಗಿದೆ. ಇಲ್ಲಿನ 500ಕ್ಕೂ ಹೆಚ್ಚು ಇಂಜಿನಿಯರ್ ಗಳು ಇಂತಹ ಬೃಹತ್ ಕಾಮಗಾರಿಗಳನ್ನು ನಿರ್ವಹಿಸಲು ಪರಿಣಿತಿಯನ್ನು ಹೊಂದಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಬಿಬಿಎಂಪಿಯ ಮೂಲಕ ಈ ಬೃಹತ್ ಕಾಮಗಾರಿಗಳನ್ನು ಮಾಡಲು ಅನುವು ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಆಮ್ ಆದ್ಮಿ ಪಕ್ಷ ಉಗ್ರ ಹೋರಾಟಕ್ಕೆ ಇಳಿಯುತ್ತದೆ ಎಂದು ಜಗದೀಶ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಶಶಿಧರ ಆರಾಧ್ಯ, ಬೆಂಗಳೂರು ಯುವ ಘಟಕದ ಅಧ್ಯಕ್ಷ ಉಮೇಶ್ ಪಿಳ್ಳೆ ಗೌಡ ಉಪಸ್ಥಿತರಿದ್ದರು.

ಪ್ರತ್ಯೇಕ ಕಂಪನಿಗಳ ಮಾಡಿ ಬಿಬಿಎಂಪಿಯ ಕತ್ತು ಹಿಸುಕಬೇಡಿ- ಜಗದೀಶ್ ವಿ.ಸದಂ Read More

ಗ್ಯಾರೆಂಟಿಗಳ ಖರ್ಚಿನ ಅಂದಾಜೇ ಗೊತ್ತಿಲ್ಲದೆ ಮಂಡಿಸಿದ ದೋಷಪೂರಿತ ಬಜೆಟ್ : ಮು. ಮ ಚಂದ್ರು

ಬೆಂಗಳೂರು, ಮಾ.7: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಈ ಸಾಲಿನ ಬಜೆಟ್ ನಲ್ಲಿ ಪಂಚ ಗ್ಯಾರಂಟಿಗಳ ಖರ್ಚಿನ ನಿಖರ ಮೊತ್ತವೇ ಸರಕಾರಕ್ಕೆ ಗೊತ್ತಿಲ್ಲದಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯ ಮಂತ್ರಿ ಚಂದ್ರು ಟೀಕಿಸಿದ್ದಾರೆ

ಸಿದ್ದರಾಮಯ್ಯ ಅವರು ತಮ್ಮ ಎರಡನೇ ಅವಧಿಯ ಪ್ರಥಮ ಬಜೆಟ್ ನಲ್ಲಿ ಗ್ಯಾರಂಟಿಗಳಿಗಾಗಿ 17000 ಕೋಟಿ ಎಂದು ಅಂದಾಜು ಮಾಡಿದ್ದರು. ಆದರೆ ಅದು 28,000 ಕೋಟಿ ರೂಪಾಯಿಗಳಿಗೆ ತಲುಪಿತು. ಕಳೆದ ಬಜೆಟ್ ನಲ್ಲಿಯೂ ಸಹ ಗ್ಯಾರೆಂಟಿಗಳಿಗಾಗಿ ಮೀಸಲಿಟ್ಟಿದ್ದ ಹಣಕ್ಕೂ ಖರ್ಚು ಮಾಡಿದ ಹಣಕ್ಕೂ ಶೇ.47 ನಷ್ಟು ಹೆಚ್ಚಾಯಿತು.

ಅಂದರೆ ಈ ಸರ್ಕಾರಕ್ಕೆ ತಾವು ನೀಡುತ್ತಿರುವ ಗ್ಯಾರಂಟಿಗಳಿಗೆ ಎಷ್ಟು ಖರ್ಚಾಗುತ್ತದೆ ಎಂಬ ಪ್ರಾಥಮಿಕ ಅಧ್ಯಯನವೇ ಇಲ್ಲದಂತಹ ಕೇವಲ ವೋಟ್ ಬ್ಯಾಂಕ್ ಗಾಗಿ ಮಾತ್ರ ಘೋಷಿಸಿರುವಂತಹ ಯೋಜನೆ ಎಂಬುದು ಸಾಬೀತಾಗುತ್ತಿದೆ.

ಇದರಿಂದಾಗಿ ಬಜೆಟ್ ಮೀಸಲಿಟ್ಟಿರುವ ಮೊತ್ತಕ್ಕೂ ಖರ್ಚಾಗುವ ಮುತ್ತಕ್ಕೂ ಅಜಗಜಾಂತರ ವ್ಯತ್ಯಾಸವಾಗಿ ಸರ್ಕಾರವು ಆರ್ಥಿಕ ಕೊರತೆಯಿಂದಾಗಿ ತತ್ತರಿಸುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಟೀಕಿಸಿದ್ದಾರೆ.

ರಾಜ್ಯದ ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆಗೆ 22 ಸಾವಿರ ಕೋಟಿ ರೂಪಾಯಿಗಳ ಅನುದಾನ ಮೀಸಲಿಟ್ಟಿದ್ದಾರೆ. ಆದರೆ ಈ ಇಲಾಖೆಯಲ್ಲಿ ಈಗಾಗಲೇ 31,000 ಕೋಟಿ ರೂಗಳನ್ನು ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ವರ್ಷವೂ ಸಹ ಯಾವುದೇ ನಯಾ ಪೈಸೆ ನೀರಾವರಿ ಯೋಜನೆಗಳು ಆಗುವುದಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಇದೊಂದು ಬೋಗಸ್ ಬಜೆಟ್ ಎಂದು ಹೇಳಿದ್ದಾರೆ

ಈ ವರ್ಷವೂ ಸಹ 1,06,000 ಕೋಟಿ ರೂಪಾಯಿಗಳ ಸಾಲವನ್ನು ಪಡೆದಿದ್ದಾರೆ. ರಾಜ್ಯದ ಸಾಲದ ಮೊತ್ತ ಈಗ 4,73, 477 ಕೋಟಿ ರೂಪಾಯಿಗಳಾಗಿದೆ. ಪ್ರತಿ ವರ್ಷ ಕೇವಲ ಬಡ್ಡಿ ಪಾವತಿಗಾಗಿ 50,000 ಕೋಟಿ ರೂಪಾಯಿಗಳನ್ನು ನೀಡಬೇಕಾಗಿರುವುದು ರಾಜ್ಯದ ಪಾಲಿನ ಜನತೆಯ ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ತೆರಿಗೆ ಪಾಲು ಸರಿಯಾಗಿ ಬಂದಿಲ್ಲವೆಂದು ಪದೇ ಪದೇ ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪ ಮಾಡುತ್ತಲೇ ಇದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸದೆ ಇರುವುದರಿಂದ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ, ಆಸ್ತಿ ತೆರಿಗೆಗಳ ಹೆಚ್ಚಳಕ್ಕಾಗಿ, ನಗರಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ನೀಡುವ ಮೊತ್ತಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಬೇಕಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಚಂದ್ರು ತಿಳಿಸಿದ್ದಾರೆ.

ಬೆಂಗಳೂರು ನಗರ ಅಭಿವೃದ್ಧಿಗಾಗಿ 7000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ. ಆದರೆ ಸ್ಥಳೀಯ ಆಡಳಿತ ಸಂಸ್ಥೆಯಾದ ಬಿಬಿಎಂಪಿಗೆ ಇದನ್ನು ನೇರವಾಗಿ ನೀಡದೆ ವಿಶೇಷ ಉದ್ದೇಶತ ವಾಹನ ಎಂದು ಪ್ರತ್ಯೇಕಿಸಿ ಈ ಮೂಲಕ ನೇರವಾಗಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ವೃತ್ತಿಪರ ತೆರಿಗೆಯನ್ನು 200 ರೂ ಗಳಿಂದ ಏಕಾಏಕಿ 300 ರೂ.ಗಳಿಗೆ ಏರಿಸಿರುವುದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕೋಟ್ಯಾಂತರ ಕಾರ್ಮಿಕರ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಆತಂಕ ಪಟ್ಟಿದ್ದಾರೆ‌

23ರ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 14.8 % ಅನುದಾನವನ್ನು ಮೀಸಲು ಇಡಲಾಗಿತ್ತು.
ಆದರೆ ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರವು ಅನುಕ್ರಮವಾಗಿ ಕಳೆದ ಮೂರು ಬಜೆಟ್ ಗಳಿಂದ 11 % , 11.7% ಈಗ ಕೇವಲ 10% ಗೆ ಇಳಿಸಿರುವುದು ನಿಜಕ್ಕೂ ಶಿಕ್ಷಣ ಕ್ಷೇತ್ರಕ್ಕೆ ಇವರಿಗಿರುವ ತಾತ್ಸಾರ ಮನೋಭಾವನೆ ಎದ್ದು ಕಾಣುತ್ತದೆ.

ಕಳೆದ ಬಜೆಟ್ ನಲ್ಲಿ 4.9% ನಷ್ಟು ಇದ್ದ ಅನುದಾನವನ್ನು ಈಗ ಕೇವಲ 0.1% ನಷ್ಟು ಏರಿಸಿ 4332 ರೂಗಳನ್ನು ಘೋಷಿಸಿದ್ದಾರೆ. ಆನೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಅನುದಾನದ ಕೊರತೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಯಾವುದೂ ಇಲ್ಲದರ ಪ್ರಾಣವನ್ನು ಒತ್ತೆ ಇಡುವಂತಹ ಪರಿಸ್ಥಿತಿ ಇದೆ ಎಂದು ಜರಿದಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ ಬೆಂಗಳೂರಿನ ಸುರಂಗ ಮಾರ್ಗ ನಿರ್ಮಾಣಕ್ಕೆ 40,000 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ನೀಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಮುಖ್ಯ ಮಂತ್ರಿ ಚಂದ್ರು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯನವರು ಅನ್ನ ರಾಮಯ್ಯ ಎಂದು ಪ್ರಖ್ಯಾತವಾಗಿರುವ ಅನ್ನಭಾಗ್ಯ ಯೋಜನೆಯನ್ನು ಕೃಷಿ ಇಲಾಖೆಗೆ ನೀಡುವ ಅನುದಾನದಲ್ಲಿ ಸೇರಿಸಿದ್ದಾರೆ. ರೈತರು, ಯಂತ್ರೋಪಕರಣ , ಬೀಜ ,ರಸಗೊಬ್ಬರ , ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗಳಿಗೆ ಬೇಕಾಗುವಂತಹ ಸಾಮಗ್ರಿಗಳ ಸಬ್ಸಿಡಿಗಾಗಿ ಈ ಇಲಾಖೆಗೆ ಒದಗಿಸುವ ಅನುದಾನವನ್ನು ಉಪಯೋಗಿಸಬೇಕಿದೆ. ಆದರೆ ಅನ್ನಭಾಗ್ಯ ಯೋಜನೆಗೆ ಮಾತ್ರವೇ 10,000 ಕೋಟಿ ರೂಪಾಯಿಗಳು ಖರ್ಚಾಗುತ್ತದೆ. ರೈತರ ಯಂತ್ರೋಪಕರಣಗಳ ಖರೀದಿಗೆ ಯಾವುದೇ ಸಬ್ಸಿಡಿ ದೊರಕುವುದಿಲ್ಲ. ರಾಜ್ಯದ ಕೋಟ್ಯಾಂತರ ರೈತರುಗಳಿಗೆ ಮಾಡುತ್ತಿರುವ ಮಹಾ ಮೋಸ ಎಂದು ಹೇಳಬಹುದು ಎಂದು ಮುಖ್ಯ ಮಂತ್ರಿ ಚಂದ್ರು‌ ವಿಶ್ಲೇಷಿಸಿದ್ದಾರೆ

ಈ ಬಜೆಟ್ ರಾಜ್ಯದ ರೈತರು, ಜನಸಾಮಾನ್ಯರಿಗೆ ಯಾವುದೇ ವಿಶೇಷವಾದಂತಹ ಅನುಕೂಲಗಳನ್ನು ನೀಡಲಾಗದಂತಹ ದೋಷಪೂರಿತ ಬಜೆಟ್ ಆಗಿದೆ ಎಂದು ಅವರು ಟೀಕಿಸಿದ್ದಾರೆ.

ಗ್ಯಾರೆಂಟಿಗಳ ಖರ್ಚಿನ ಅಂದಾಜೇ ಗೊತ್ತಿಲ್ಲದೆ ಮಂಡಿಸಿದ ದೋಷಪೂರಿತ ಬಜೆಟ್ : ಮು. ಮ ಚಂದ್ರು Read More

ಮರಾಠಿ ಪುಂಡರನ್ನು ಶಾಶ್ವತವಾಗಿ ಗಡಿಪಾರು ಮಾಡಿ:ಸಿಎಂಗೆ ಮು.ಮ ಚಂದ್ರು ಪತ್ರ

ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿ ಪುಂಡರು ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವುದು ಯಾವುದೇ ನಾಗರೀಕ ಸಮಾಜವು ಸಹಿಸಲು ಸಾಧ್ಯವಿಲ್ಲ‌ ಎಂದು ಆಮ್‌ ಆದ್ಮಿ ಪಕ್ಷದ ‌ರಾಜ್ಯಾಧ್ಯಕ್ಷ ಮುಖ್ಯ ಮಂತ್ರಿ‌ ಚಂದ್ರು ಕಿಡಿಕಾರಿದ್ದಾರೆ.

ಪದೇ ಪದೇ ಇಂತಹ ಘಟನೆಗಳನ್ನು ಮುಂದುವರಿಸುತ್ತಿರುವ ಈ ಮರಾಠಿ ಪುಂಡರುಗಳನ್ನು ಗುರುತಿಸಿ ರಾಜ್ಯದಿಂದ ಶಾಶ್ವತವಾಗಿ ಗಡಿಪಾರು ಮಾಡಲು ತಾವು ಈ ಕೂಡಲೇ ಆದೇಶ ಹೊರಡಿಸಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ‌ ಅವರಿಗೆ ಚಂದ್ರು ಮನವಿ ಮಾಡಿದ್ದಾರೆ.

ಈ‌ ಕುರಿತು ಸಿಎಂಗೆ ಪತ್ರ ಬರೆದಿರುವ ಅವರು,ಅನೇಕ ವರ್ಷಗಳಿಂದ ತಮ್ಮ ರಾಜಕೀಯ ಅಭಿಲಾಷೆಗಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಸಾಮರಸ್ಯ ಸಂಬಂಧಕ್ಕೆ ಧಕ್ಕೆ ತರುವ ಕೃತ್ಯಗಳನ್ನು ಎಸಗಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿರುವ ಈ ಸಮಾಜದ್ರೋಹಿಗಳ ಮೇಲೆ ಕೂಡಲೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಎರಡೂ ರಾಜ್ಯಗಳಲ್ಲಿ ಶಾಂತಿಭಂಗ ವಾಗುವ ಅಪಾಯ ಇದೆ ಎಂದು ಎಚ್ಚರಿಸಿದ್ದಾರೆ.

ಈ ಕೃತ್ಯಕ್ಕೆ ಸಂಬಂಧಿಸಿದಂತೆ ತಾವು ಕೂಡಲೇ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬೇಕು. ಅಲ್ಲದೆ ಭಾಷಾ ಸಾಮರಸ್ಯವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಹಾಳು ಮಾಡುತ್ತಿರುವ ತಮ್ಮ ಪಕ್ಷವು ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರುಗಳಿಗೆ ಕಠಿಣ ಎಚ್ಚರಿಕೆ ನೀಡುವ ಮೂಲಕ ಕನ್ನಡಿಗರೊಂದಿಗೆ ಸರಕಾರ ಇದೆ ಎಂಬ ಎಚ್ಚರಿಕೆಯನ್ನು ರವಾನಿಸಬೇಕೆಂದು ಮುಖ್ಯ ಮಂತ್ರಿ‌ ಚಂದ್ರು ಒತ್ತಾಯಿಸಿದ್ದಾರೆ.

ಮರಾಠಿ ಪುಂಡರನ್ನು ಶಾಶ್ವತವಾಗಿ ಗಡಿಪಾರು ಮಾಡಿ:ಸಿಎಂಗೆ ಮು.ಮ ಚಂದ್ರು ಪತ್ರ Read More

ಬಿಬಿಎಂಪಿ ಚುನಾವಣೆ ಮುಂದೂಡುವುದೇ ಬಿಜೆಪಿ,ಕಾಂಗ್ರೆಸ್ ಶಾಸಕರ ಗುರಿ:ಆಪ್

ಬೆಂಗಳೂರು: ಬೆಂಗಳೂರಿನ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಶಾಸಕರುಗಳು ಯಾವುದೇ ಕಾರಣಕ್ಕೂ ಬಿಬಿಎಂಪಿ ಚುನಾವಣೆಯನ್ನು ನಡೆಸಲು ಬಿಡುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಗ್ರೇಟರ್ ಬೆಂಗಳೂರು ಮಸೂದೆ ಎಂಬ ನೆಪದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಒಂದು ಕಡೆಯಾದರೆ ಮತ್ತೊಂದು ಕಡೆ ಈ ಮಸೂದೆಯನ್ನು ವಿರೋಧಿಸಿ ಸರ್ವೋಚ್ಚ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಲು ಹೊರಟಿರುವ ಬಿಜೆಪಿ ಶಾಸಕರು ಯಾವುದೇ ಕಾರಣಕ್ಕೂ ಬಿಬಿಎಂಪಿ ಚುನಾವಣೆಯನ್ನು ಸದ್ಯದಲ್ಲಿ ನಡೆಸಲು ಬಿಡುವುದಿಲ್ಲ ಎಂದು ಹೇಳಿದರು.

ಈ ಎರಡೂ ಪಕ್ಷಗಳ ಶಾಸಕರಿಗೆ ಬೆಂಗಳೂರಿನ ಅಭಿವೃದ್ಧಿ ಬೇಕಾಗಿಲ್ಲ ಬೆಂಗಳೂರಿನಿಂದ ಬರುವ ಕಟ್ಟಡ ನಿರ್ಮಾಣ ತೆರಿಗೆ, ಅಕ್ರಮ ಟೆಂಡರ್ ಗಳು, ಬೃಹತ್ ಕಾಮಗಾರಿಗಳ ಮೇಲಿನ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆಮದನಿಗಳ ಮೇಲೆ ಇವರ ಕಣ್ಣು ನೆಟ್ಟಿದೆ ಎಂದು ಡಾ. ಸತೀಶ್ ಕುಮಾರ್ ಗಂಭೀರ ಆರೋಪ ಮಾಡಿದರು.

ಬಿಜೆಪಿ ಸರ್ಕಾರದಲ್ಲಿ ಕೂಡಲೇ ಚುನಾವಣೆಯನ್ನು ನಡೆಸಿ ಎಂದು ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರಾದ ಶಿವರಾಜ್ ಹಾಗೂ ಅಬ್ದುಲ್ ವಾಹಿಬ್ ಕೋರ್ಟ್‌ ಮೆಟ್ಟಿಲೇರಿದ್ದರು. ಈಗ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವು ತೀರ್ಪನ್ನು ನೀಡುತ್ತಿರುವ ಸಂದರ್ಭದಲ್ಲಿ ಬಿಜೆಪಿಯವರು ಮೂರು ದಿನಗಳ ಹಿಂದೆ ಪಕ್ಷದ ವಕೀಲರ ಸಮಿತಿಯನ್ನು ನೇಮಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಾಡುತ್ತಿರುವುದನ್ನು ನೋಡಿದರೆ ಅನವಶ್ಯಕವಾಗಿ ಗೊಂದಲಗಳನ್ನು ಉಂಟು ಮಾಡಿ ಚುನಾವಣೆಯನ್ನು ಮುಂದೂಡುವುದೇ ಇವರ ಮುಖ್ಯ ಉದ್ದೇಶವಾದಂತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಬೆಂಗಳೂರು ಅನೇಕ ಸಮಸ್ಯೆಗಳ ಆಗರವಾಗಿದ್ದು ನಾಗರೀಕರು ವಾಸ ಮಾಡಲು ಯೋಗ್ಯವಾದ ನಗರವಾಗಿ ಉಳಿದಿಲ್ಲ. ಕಳೆದ ಐದು ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆ ನಡೆಸದೆ ಎರಡೂ ಪಕ್ಷಗಳು ಸಂವಿಧಾನದ ಆಶಯವನ್ನು ಗಾಳಿಗೆ ತೂರಿ, ವಿಧಾನಸಭೆಯಲ್ಲಿ ನೂತನ ಮಸೂದೆಗಳನ್ನು ಮಂಡನೆ ಮಾಡುವ ಮೂಲಕ, ನ್ಯಾಯಾಲಯಗಳ ಸಮಯವನ್ನು ವ್ಯರ್ಥ ಮಾಡಿ ಎರಡು ಪಕ್ಷಗಳ ಶಾಸಕರು ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.

ಮೂರು ಪಕ್ಷಗಳ ಶಾಸಕರುಗಳ ಪ್ರಮುಖ ನಾಯಕರುಗಳ ಕಪ್ಪು ಹಣದ ಸಾವಿರಾರು ಕೋಟಿ ಬೇನಾಮಿ ಆಸ್ತಿಗಳು ಬೆಂಗಳೂರಿನ ಸುತ್ತಮುತ್ತ ಇರುವ ಕಾರಣ ಗ್ರೇಟರ್ ಬೆಂಗಳೂರು ಕಾಯ್ದೆಯ ಮೂಲಕ ಏಳು ಪಾಲಿಕೆಗಳಾಗಿ ವಿಭಜನೆ ಮಾಡುತ್ತಿದ್ದಾರೆ. ಪಕ್ಷವು ಮುಂದಿನ ದಿವಸಗಳಲ್ಲಿ ಈ ಬಗ್ಗೆ ಹೋರಾಟ ನಡೆಸಲಿದೆ ಎಂದು ಡಾ. ಸತೀಶ್ ಎಚ್ಚರಿಸಿದರು.

ಬಿಬಿಎಂಪಿ ಚುನಾವಣೆ ಮುಂದೂಡುವುದೇ ಬಿಜೆಪಿ,ಕಾಂಗ್ರೆಸ್ ಶಾಸಕರ ಗುರಿ:ಆಪ್ Read More

ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆಗಳು – ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆಗಳು ನಿರರ್ತಕ ಎಂದು
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ ‌

ಮುಖ್ಯಮಂತ್ರಿಗಳು ನಡೆಸುತ್ತಿರುವ ಬಜೆಟ್ ಪೂರ್ವ ಸಭೆಗಳಿಗೆ ಅಲ್ಪಸಂಖ್ಯಾತರ ಮುಖಂಡರುಗಳೊಂದಿಗೆ ಇದುವರೆಗೂ ಸಭೆ ನಡೆಸದಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸಾಕಾರಕ್ಕೆ ಧಕ್ಕೆ ತರುವಂತಿದೆ ಎಂದು ಡಾ.ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ದಲಿತ ವರ್ಗ ಹಾಗೂ ಹಿಂದುಳಿದ ವರ್ಗಗಳ ಅನೇಕ ಸಂಘ ಸಂಸ್ಥೆಗಳು ಮತ್ತು ನಾಯಕರುಗಳ ಸಭೆಗಳನ್ನು ನಡೆಸಿ ಅವರುಗಳ ಅನೇಕ ಬೇಡಿಕೆಗಳನ್ನು ಆಲಿಸಿ ಬಜೆಟ್ ಪೂರ್ವ ತಯಾರಿಯನ್ನು ಮುಖ್ಯ ಮಂತ್ರಿಗಳು ನಡೆಸಿದ್ದಾರೆ,ಅದು ಶ್ಲಾಘನೀಯ,ಆದರೆ ಇದೇ ರೀತಿಯಲ್ಲಿ ರಾಜ್ಯದ ಅಲ್ಪಸಂಖ್ಯಾತರುಗಳ ಯಾವುದೇ ಸಭೆಯನ್ನು ಇದುವರೆಗೂ ನಡೆಸದೆ ಇರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಧಕ್ಕೆ ತರುವಂತಿದೆ. ಕೇವಲ ತಮ್ಮ ಮಂತ್ರಿಮಂಡಲದ ಪ್ರಮುಖ ಸಚಿವರೊಬ್ಬರೇ ಎಲ್ಲಾ ಅಲ್ಪಸಂಖ್ಯಾತರ ಧ್ವನಿ ಎಂಬಂತೆ ಭಾಸವಾಗುತ್ತಿರುವುದು ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಅಲ್ಪಸಂಖ್ಯಾತರುಗಳಲ್ಲಿ ಮುಸ್ಲಿಂ ಜನಾಂಗದೊಂದಿಗೆ ಕ್ರಿಶ್ಚಿಯನ್ ,ಜೈನ್, ಬೌದ್ಧ ,ಪಾರ್ಸಿ, ಸಿಖ್ ಸಮುದಾಯಗಳು ಸಹ ಸೇರಿರುವುದು ಇತ್ತೀಚಿನ ದಿನಗಳಲ್ಲಿ ಆಳುವವರು ಮರೆಯುತ್ತಿರುವಂತಿದೆ. ಆದುದರಿಂದ ಕೂಡಲೇ ಅಲ್ಪಸಂಖ್ಯಾತರ ಎಲ್ಲ ವರ್ಗಗಳ ಮುಖಂಡರುಗಳನ್ನು ಸಂಘ ಸಂಸ್ಥೆಗಳನ್ನು ತಮ್ಮ ಬಜೆಟ್ ಪೂರ್ವ ಸಭೆಗೆ ಕರೆದು ಅವರ ಅನೇಕ ವರ್ಷಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಹಾಗೂ ನೈಜ ಸಾಮಾಜಿಕ ಪರಿಕಲ್ಪನೆಯನ್ನು ಎತ್ತಿ ಹಿಡಿಯಬೇಕೆಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆಗಳು – ಮುಖ್ಯಮಂತ್ರಿ ಚಂದ್ರು Read More

ಮೆಟ್ರೋ ದರ ಹೆಚ್ಚಳ: ಆಪ್ ತೀವ್ರ ಆಕ್ರೋಶ

ಬೆಂಗಳೂರು: ಬೆಂಗಳೂರು ಮೆಟ್ರೋ ದರವನ್ನು ಏಕಾಏಕಿ ದುಪ್ಪಟ್ಟು ಹೆಚ್ಚಿಸಿರುವ ಬೆಂಗಳೂರು ಮೆಟ್ರೋ ನಿಗಮದ ಕ್ರಮವನ್ನು
ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ.

ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಆಪ್ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಅವರು, ಈ ದರ ಹೆಚ್ಚಳ ದೆಹಲಿ ರಾಜ್ಯದ ಚುನಾವಣೆಯ ನಂತರ ಕೇಂದ್ರ ಸರ್ಕಾರ ಬೆಂಗಳೂರಿಗರಿಗೆ ನೀಡುತ್ತಿರುವ ಕೊಡುಗೆ ಎಂದು ಟೀಕಿಸಿದರು.

ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದ ಜನಸಾಮಾನ್ಯ ವಿರೋಧಿ ನಿಲುವನ್ನು ಇದು ಸ್ಪಷ್ಟಪಡಿಸುತ್ತಿದೆ. ಮೆಟ್ರೊ ನಿಗಮವು ತನ್ನ ಹೇಳಿಕೆಯಲ್ಲಿ ದೆಹಲಿ ಚುನಾವಣೆಯ ನಿಮಿತ್ತ ದರ ಏರಿಸಿರಲಿಲ್ಲ ಎಂದು ಹೇಳಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದರು.

ಜನಸಾಮಾನ್ಯರು ಈಗಾಗಲೇ ಎಲ್ಲ ಅವಶ್ಯಕತೆಗಳ ಬೆಲೆ ಏರಿಕೆಯಿಂದಾಗಿ ತತ್ತರಿಸುತ್ತಿರುವ ಸಂದರ್ಭದಲ್ಲಿ ಮೆಟ್ರೋ ದರ ಹೆಚ್ಚಳದಿಂದಾಗಿ ಮತ್ತೊಂದು ಬರೆಯನ್ನು ಎಳೆದಿದ್ದಾರೆ.

ಮಹಾನಗರಗಳು ಅದರಲ್ಲೂ ಬೆಂಗಳೂರಿನಂತಹ ವಿಶ್ವಮಟ್ಟದ ನಗರದಲ್ಲಿ ಸಂಚಾರ ಒತ್ತಡದ ಸಮಸ್ಯೆಯಿಂದಾಗಿ ದೇಶದ ಆರ್ಥಿಕತೆ ಕುಸಿಯುತ್ತಿರುವ ಕಾಲಘಟ್ಟದಲ್ಲಿ ಮೆಟ್ರೋ ಸಂಚಾರದಿಂದಾಗಿ ಸಂಚಾರದ ಒತ್ತಡ ಕಡಿಮೆ ಮಾಡುವ ಮೂಲ ಆಶಯವನ್ನೇ ಮೆಟ್ರೋ ನಿಗಮ ಹಾಗೂ ರಾಜ್ಯ, ಕೇಂದ್ರ ಸರ್ಕಾರಗಳು ಮರೆತಿರುವುದು ನಿಜಕ್ಕೂ ಶೋಚನೀಯ ಎಂದು ಟೀಕಿಸಿದರು.

ಬೆಂಗಳೂರು ಮೆಟ್ರೋ ನಿಗಮದ ನೌಕರರ ಸಂಘದವರೇ ಈ ರೀತಿಯ ಬೆಲೆ ಏರಿಕೆಯನ್ನು ಖಂಡಿಸಿ ಪರಿಹಾರ ಕ್ರಮಗಳನ್ನು ಸೂಚಿಸಿದ್ದರೂ ಅಧಿಕಾರಿಗಳ ಅಂದಾ ದರ್ಬಾರ್, ಮೆಟ್ರೋ ಆಸ್ತಿಗಳ ಬಾಡಿಗೆ ಸಂಗ್ರಹಣೆಯಲ್ಲಿ ವೈಫಲ್ಯ, ಸ್ವಚ್ಛತೆಯ ನೆಪದಲ್ಲಿ ಪ್ರತಿವರ್ಷ ನೂರಾರು ಕೋಟಿಗಳ ಲೂಟಿ ಅನವಶ್ಯಕ ಸಿಬ್ಬಂದಿಗಳ ನೇಮಕ ಹಾಗೂ ಇನ್ನೂ ಮುಂತಾದ ವಿಷಯಗಳಲ್ಲಿ ಅಧಿಕಾರಿಗಳ ನಿರ್ಲಕ್ಷತನ,
ಬೇಜವಾಬ್ದಾರಿತನಗಳಿಂದಾಗಿ ಬೆಂಗಳೂರಿನ ಜನಸಾಮಾನ್ಯರು ಬೆಲೆ ತೆರುವಂತಾಗಿದೆ ಎಂದು ಜಗದೀಶ್ ಅಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಮೆಟ್ರೋ ಹೆಚ್ಚಳದ ಬಗ್ಗೆ ನಮ್ಮ ಆಕ್ಷೇಪಣೆ ಏನು ಇಲ್ಲ ಎಂದು ಹೇಳಿರುವುದು 136 ಸ್ಥಾನಗಳನ್ನು ನೀಡಿ ರಾಜ್ಯದಲ್ಲಿ ಅಧಿಕಾರ ನೀಡಿದಂತಹ ಕರ್ನಾಟಕದ ಪ್ರಭುದ್ಧ ಜನತೆಗೆ ಮಾಡಿದಂತಹ ಮಹಾ ದ್ರೋಹ ಎಂದು ಖಂಡಿಸಿದರು.

ಈ ತಕ್ಷಣದಿಂದಲೇ ಬಿಜೆಪಿಯ ಬೆಂಗಳೂರಿನ ಮೂವರು ಲೋಕಸಭಾ ಸದಸ್ಯರು ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರುಗಳು ಬೀದಿಗಿಳಿದು ಹೋರಾಟ ಮಾಡಬೇಕು ನಮ್ಮ ಪಕ್ಷವೂ ಸಹ ಬೆಂಗಳೂರಿಗರೊಂದಿಗೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಿದೆ, ಯಾವುದೇ ಕಾರಣಕ್ಕೂ ಬೆಲೆ ಏರಿಕೆಯನ್ನು ಹೆಚ್ಚಿಸಲು ಬಿಡುವುದಿಲ್ಲ ಎಂದು ಸತೀಶ್ ಎಚ್ಚರಿಸಿದರು.

ಮೆಟ್ರೋ ದರ ಹೆಚ್ಚಳ: ಆಪ್ ತೀವ್ರ ಆಕ್ರೋಶ Read More

ಸಿಎಂ ಸ್ಥಾನಕ್ಕೆ ಅತಿಶಿ ರಾಜೀನಾಮೆ

ನವದೆಹಲಿ: ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಮ್‌ ಆದ್ಮಿ ಪಕ್ಷ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಅತಿಶಿ ರಾಜೀನಾಮೆ ಸಲ್ಲಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಜಯ ಘೋಷಿಸಿದ ಒಂದು ದಿನದ ನಂತರ ಅಶಿತಿ, ರಾಜ್ಯಪಾಲ ವಿ.ಕೆ ಸಕ್ಸೇನಾ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಆಪ್ ನ ಮಾಜಿ ಸಿಎಂ ಕೇಜ್ರಿವಾಲ್‌ ಸೇರಿದಂತೆ ಘಟಾನುಘಟಿ ನಾಯಕರೇ ಸೋಲುಂಡ ಹೊರತಾಗಿಯೂ ಅತಿಶಿ ತಮ್ಮ ಕಲ್ಕಾಜಿ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸಿದ್ದಾರೆ.

ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್‌ ಬಿಧೂರಿ ವಿರುದ್ಧ ತೀವ್ರ ಹಿನ್ನಡೆ ಅನುಭವಿಸಿದ್ದ ಅತಿಶಿ 8-9ನೇ ಸುತ್ತಿನ ಬಳಿಕ‌ ಸತತವಾಗಿ ಮುನ್ನಡೆ ಕಾಯ್ದುಕೊಂಡು ಗೆಲುವು ಸಾಧಿಸಿದ್ದರು.ಈಗ ಅವರು ತಮ್ಮ ಪಕ್ಷ ಸೋಲನುಭವಿಸಿದ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಿಎಂ ಸ್ಥಾನಕ್ಕೆ ಅತಿಶಿ ರಾಜೀನಾಮೆ Read More

ದೆಹಲಿ ಚುನಾವಣೆಯಲ್ಲಿ ಸೋಲು:ಕೇಜ್ರಿವಾಲ್ ಕನಸು ಭಗ್ನ

ನವದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯ ಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸೋಲನುಭವಿಸಿದ್ದು ಆಪ್ ಗೆ ತೀವ್ರ ಮುಖ‌ಭಂಗ ವಾದಂತಾಗಿದೆ

ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಸಾಹಿಬ್‌ ಸಿಂಗ್‌ ವಿರುದ್ಧ ಅರವಿಂದ್ ಕೇಜ್ರಿವಾಲ್ ಸೋಲನು ಭವಿಸಿದ್ದು, ದೆಹಲಿಗೆ ಹ್ಯಾಟ್ರಿಕ್ ಮುಖ್ಯಮಂತ್ರಿಯಾಗುವ ಕನಸು ನುಚ್ಚುನೂರಾಗಿದೆ.

ಕಳೆದ 2 ಚುನಾವಣೆಗಳಲ್ಲೂ ನವದೆಹಲಿ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದ ಕೇಜ್ರಿವಾಲ್‌ ಸತತ 2 ಬಾರಿ ಸಿಎಂ ಆಗಿದ್ದರು. 3ನೇ ಬಾರಿಯೂ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಪರ್ವೇಶ್‌ ವಿರುದ್ಧ 3,000ಕ್ಕೂ ಅಧಿಕ ಮತಗಳ ಅಂತರದಿಂದ ಸೋತಿದ್ದಾರೆ.

ದೆಹಲಿ ಚುನಾವಣೆಯಲ್ಲಿ ಸೋಲು:ಕೇಜ್ರಿವಾಲ್ ಕನಸು ಭಗ್ನ Read More

ನೀರಿನ ದರ ಹೆಚ್ಚಳದ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಎಎಪಿ ತೀವ್ರ ವಿರೋಧ

ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳದ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ
ಬೆಂಗಳೂರು ನಗರ ಅಭಿವೃದ್ಧಿ ಸಚಿವ
ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಎಎಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕೊಳಗೇರಿ ನಿವಾಸಿಗಳಿಗೆ ಉಚಿತ ನೀರು ಪೂರೈಸಲು ಆಗದೆ ಅವರುಗಳ ಸ್ವಾಭಿಮಾನಕ್ಕೆ ಅಪಮಾನ ತರುವಂತ ರೀತಿಯ ಹೇಳಿಕೆಯನ್ನು ನೀಡಿರುವುದಲ್ಲದೆ ನೀರಿನ ದರ ಹೆಚ್ಚಿಸುವುದಾಗಿ ತಿಳಿಸಿರುವ ಡಿ.ಕೆ ಶಿವಕುಮಾರ್ ಅವರ ನಿಲುವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಹಾಗೂ ಯಾವುದೇ ಕಾರಣಕ್ಕೂ ನೀರಿನ ದರವನ್ನು ಹೆಚ್ಚಿಸಲು ಬಿಡುವುದಿಲ್ಲ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಎಚ್ಚರಿಸಿದರು.

ಕಾವೇರಿ ನೀರಿನ ಪೈಪ್ ಲೈನ್ ಗಳಲ್ಲಿ ಈಗಲೂ ಶೇ.35ರಷ್ಟು ಸೋರಿಕೆಯಾಗುತ್ತಿದೆ ಎಂದು ಜಲಮಂಡಳಿಯೇ ತನ್ನ ವರದಿಯಲ್ಲಿ ತಿಳಿಸಿದೆ. ಹೀಗಿರುವಾಗ ದುರಸ್ತಿ ಕಾರ್ಯಗಳಿಗೆ ಪ್ರತಿವರ್ಷ ಮಂಡಳಿಯು ಖರ್ಚು ಮಾಡುತ್ತಿರುವ ಸಾವಿರಾರು ಕೋಟಿ ಜನತೆಯ ತೆರಿಗೆ ಹಣ ಯಾರ ಜೇಬಿಗೆ ಸೇರುತ್ತಿದೆ ಎಂದು ಅವರು ಪ್ರಶ್ನಿಸಿದರು.

ಎಲ್ ಅಂಡ್ ಟಿ ಕಂಪನಿ ಜಲ ಮಂಡಳಿಯ ಕಾಮಗಾರಿಯನ್ನು ತೆಗೆದುಕೊಳ್ಳದಿರುವ ಕಾರಣ ಏನು ಎಂಬುದನ್ನು ಡಿ.ಕೆ. ಶಿವಕುಮಾರ್ ತಿಳಿಸಬೇಕು ಎಂದು ಜಗದೀಶ್ ಆಗ್ರಹಿಸಿದರು.

ಈ ಹಿಂದಿನ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಬೆಂಗಳೂರಿನಾದ್ಯಂತ 10,000 ಕೋಟಿ ರೂ ಖರ್ಚು ಮಾಡಿ ಹೊಸ ಪೈಪುಗಳನ್ನು ಅಳವಡಿಸಿದ ಕಾಮಗಾರಿಗಳಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ ಎಂದು ಗೊತ್ತಿದ್ದರೂ 40 % ಕಮಿಷನ್ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಡಿ.ಕೆ. ಶಿವಕುಮಾರ್ ಎಕೆ ಇನ್ನೂ ತನಿಖೆಗೆ ಆದೇಶ ನೀಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರು ಜಲ ಮಂಡಳಿಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಪ್ರತಿ ವರ್ಷ ನಡೆಯುವ ಸಾವಿರಾರು ಕೋಟಿ ಭ್ರಷ್ಟಾಚಾರ ಮುಂದುವರಿಸಿ,ನೀರಿನ ಸೋರಿಕೆ ತಡೆಗಟ್ಟದೆ ಇರುವುದು ಹಾಗೂ ಅಕ್ರಮ ಸಂಪರ್ಕಗಳಿಗೆ ಕಡಿವಾಣ ಹಾಕದೆ ಕೇವಲ ತಮ್ಮ ಆಮದನಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ಬೆಂಗಳೂರು ನಿವಾಸಿಗಳು ದರ ಏರಿಕೆಯಿಂದಾಗಿ ತತ್ತರಿಸುವಂತಹ ಪರಿಸ್ಥಿತಿಗೆ ತಲುಪಿದ್ದಾರೆ. ಆಮ್ ಆದ್ಮಿ ಪಕ್ಷ ಈ ಬಗ್ಗೆ ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಜಗದೀಶ್ ವಿ.ಸದಂ ಕಠಿಣ ಎಚ್ವರಿಕೆ ನೀಡಿದರು.

ನೀರಿನ ದರ ಹೆಚ್ಚಳದ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಎಎಪಿ ತೀವ್ರ ವಿರೋಧ Read More