ಕಾಂಗ್ರೆಸ್ ಸರ್ಕಾರದ ವಿರುದ್ಧ ಆಪ್ ಕಿಡಿ

ಬೆಂಗಳೂರು: ಗ್ಯಾರಂಟಿ ಹಣವನ್ನೇ ಬಿಡುಗಡೆ ಮಾಡದೇ ತಲಾದಾಯದಲ್ಲಿ ರಾಜ್ಯವೇ ಪ್ರಥಮ ಎಂದು ಹೇಳಲು ಕಾಂಗ್ರೆಸ್ ನಾಯಕರುಗಳಿಗೆ ನಾಚಿಕೆಯಾಗುವುದಿಲ್ಲವೇ ಎಂದು ಆಪ್ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಪ್ರಶ್ನಿಸಿದ್ದಾರೆ

ಕಳೆದ ಫೆಬ್ರವರಿ ತಿಂಗಳಿನಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷಿಯ ಹಣವನ್ನೇ ಬಿಡುಗಡೆ ಮಾಡಿಲ್ಲ. ಎಲ್ಲ ಜಿಲ್ಲೆಗಳಲ್ಲಿಯೂ ಮಹಿಳೆಯರು ಸಾಕಷ್ಟು ಆಕ್ರೋಶಭರಿತರಾಗಿದ್ದಾರೆ. ಗ್ಯಾರೆಂಟಿ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಚುನಾವಣೆಗಳಿಗಾಗಿ, ತಮ್ಮ ನಕಲಿ ಸಾಧನ ಸಮಾವೇಶಗಳ ಸಮಯದಲ್ಲಿ ಮಹಿಳೆಯರ ಪ್ರಲೋಭನೆಗಾಗಿ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು ಮಿಕ್ಕೆಲ್ಲಾ ಗ್ಯಾರಂಟಿಗಳು ಸಂಪೂರ್ಣ ಹಳ್ಳ ಹಿಡಿದಿವೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರವು ಕಡ್ಡಾಯವಾಗಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ತಲಾ 5 ಕೆ.ಜಿ. ಅಕ್ಕಿಯನ್ನು ಅನ್ನಭಾಗ್ಯ ಎಂಬ ಹೆಸರಿನಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರವು ತನ್ನ ಕಾರ್ಯಕ್ರಮದಂತೆ ಬಿಂಬಿಸಿ
ಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದ್ದಾರೆ.

ಗೃಹ ಜ್ಯೋತಿ ಎಂಬ ಹೆಸರಿನಲ್ಲಿ 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆಂದು ಸುಳ್ಳು ಹೇಳಿ ಈಗ ಸರಾಸರಿಯ ನೆಪದಲ್ಲಿ 50 ಯೂನಿಟ್ ಗಳನ್ನು ನೀಡಲು ಸಹ ಸಾಧ್ಯವಾಗುತ್ತಿಲ್ಲ,ಬೇಕಾಬಿಟ್ಟಿ ವಿದ್ಯುತ್ ಬೆಲೆ ಏರಿಸಿ ರಾಜ್ಯದ ಕೈಗಾರಿಕಗಳ ಮೇಲೆ ಹಾಗೂ ಗೃಹಶಕ್ತಿ ಬಳಕೆದಾರರ ಬಿಲ್ಲುಗಳಲ್ಲಿ ಸುಲಿಗೆ ಮಾಡುತ್ತಿದ್ದಾರೆ, ಈಗ ಪ್ರತಿಯೊಬ್ಬ ಬಳಕೆದಾರರು ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕೆಂಬ ಕಡ್ಡಾಯವನ್ನು ಹಾಕುವ ಮೂಲಕ ಸಿದ್ದರಾಮಯ್ಯ ಸರ್ಕಾರ ಹಗಲುದರೊಡೆಗೆ ಇಳಿದಿರುವುದು ರಾಜ್ಯದ ಜನತೆಯ ನತದೃಷ್ಟ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸೀತಾರಾಮ ಗುಂಡಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆಯಿಂದ ಪ್ರಯಾಣಿಕರ ಹಾಗೂ ಸಾರಿಗೆ ನಿಗಮಗಳ ಪರಿಸ್ಥಿತಿ ಹೇಳ ತೀರದಾಗಿದೆ,ಯುವ ನಿಧಿ ಯೋಜನೆಯಲ್ಲಿ ಮಾಸಾಶನವನ್ನು ರಾಜ್ಯದ ಯಾವ ನಿರುದ್ಯೋಗ ಪದವೀಧರರಿಗೆ ಬಿಡುಗಡೆ ಮಾಡುತ್ತಿದ್ದಾರಾ ಎಂಬ ಮಾಹಿತಿ ಸರ್ಕಾರದಲ್ಲಿಯೇ ಇಲ್ಲದಾಗಿದೆ ಎಂದು ಅವರು ವ್ಯಂಗ್ಯ ವಾಡಿದ್ದಾರೆ.

ಬೆಂಗಳೂರು ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಐಟಿ ಉದ್ಯಮಗಳು ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸಿವೆ. ರಾಜ್ಯದ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಎಷ್ಟೇ ಸಂಕಷ್ಟಗಳು ಬಂದರೂ ಸಹ ತಮ್ಮ ಉತ್ಪಾದನೆಯ ಮೂಲಕ ತಲಾದಾಯದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದ್ದಾರೆ.

ಬೆಂಗಳೂರು ನಗರವು ದೇಶದ ಅರ್ಥವ್ಯವಸ್ಥೆಯ ಹೃದಯ ಎಂಬ ಹಿರಿಮೆ ಗರಿಮೆಯನ್ನು ಈ ಮೂಲಕ ಗಳಿಸಿಕೊಂಡಿದೆ. ದೇಶಕ್ಕೆ ಅತಿ ಹೆಚ್ಚಿನ ತೆರಿಗೆ ಕೊಡುಗೆ ಬೆಂಗಳೂರು ನಗರದಿಂದ ಹೋಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಮಾತ್ರ ರಾಜ್ಯವು ತಲಾದಾಯದಲ್ಲಿ ದೇಶದಲ್ಲಿಯೇ ಪ್ರಪ್ರಥಮ ಸ್ಥಾನದಲ್ಲಿ ಇದೆ ಎಂಬುದನ್ನು ಅರಿಯಲಿ.

ಆದರೆ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಗ್ಯಾರಂಟಿಗಳಿಂದಲೇ ರಾಜ್ಯದ ತಲಾದಾಯ ವೃದ್ಧಿಯಾಗಿದೆ ಎಂಬ ಹಸಿ ಹಸಿ ಸುಳ್ಳುಗಳನ್ನು ಹರಡುವ ಮೂಲಕ ಜನತೆಯನ್ನು ದಾರಿತಪ್ಪಿಸುವ ನೀಚ ಕೆಲಸಗಳನ್ನು ನಿಲ್ಲಿಸಬೇಕು ಎಂದು
ಸೀತಾರಾಮ ಗುಂಡಪ್ಪ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಆಪ್ ಕಿಡಿ Read More

ಗೋವಾ ಸಿಎಂ ಗೆ ಪ್ರಧಾನಿಗಳು ಕರೆದು ಬುದ್ಧಿ ಹೇಳಲಿ – ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಪಕ್ಕದ ಗೋವಾ ರಾಜ್ಯದಲ್ಲಿ ಕನ್ನಡಿಗರಿಗೆ ವಾಹನ ಖರೀದಿಸಲು ಮತ್ತು ಅವುಗಳನ್ನು ನೋಂದಣಿ ಮಾಡಿಸಲು ಪರವಾನಗಿ ನೀಡದಂತೆ ನಿರ್ಬಂಧದ ಕಾನೂನು ರೂಪಿಸಲು ಹೊರಟಿರುವ ಗೋವಾ ಸರ್ಕಾರದ ನಡೆಯನ್ನು ಆಪ್‌‌ ವಿರೋಧಿಸಿದೆ.

ಗೋವಾ ಸರ್ಕಾರದ ಈ ನೀತಿಯನ್ನು ಎಲ್ಲರೂ ವಿರೋಧಿಸಬೇಕು ಹಾಗೂ ಖಂಡಿಸಬೇಕು ಎಂದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಕರೆ ನೀಡಿದ್ದಾರೆ.

ನಮ್ಮ ದೇಶದ ಪ್ರಜೆಗಳು ಯಾವುದೇ ರಾಜ್ಯದಲ್ಲಿ ಮುಕ್ತವಾಗಿ ವಾಸಿಸುವ ಅವಕಾಶವನ್ನು ನೀಡಿದೆ,ನಮ್ಮ ದೇಶದ ಸಂವಿಧಾನವನ್ನು, ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಗೋವಾ ಮುಖ್ಯಮಂತ್ರಿಗಳಿಗೆ ಎಲ್ಲ ಬಿಜೆಪಿ ನಾಯಕರು ಮತ್ತು ಪ್ರಧಾನಿ ಮೋದಿ ಅವರು ಬುದ್ಧಿ ಹೇಳಬೇಕು ಎಂದು ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ಗೋವಾ ರಾಜ್ಯದ ಸ್ಥಳೀಯ ಸಂಘಟನೆಗಳು ಕನ್ನಡಿಗರನ್ನು ಮೊದಲಿನಿಂದಲೂ ಅತಂತ್ರಗೊಳಿಸುವ ಹಾಗೂ ಹೊರದೊಬ್ಬುವ ಹುನ್ನಾರದಲ್ಲಿ ತೊಡಗಿದ್ದರು. ಈಗ ಸ್ವತಹ ಸರ್ಕಾರವೇ ಇಂತಹ ಸಂವಿಧಾನ ಬಾಹಿರ ಕೃತ್ಯಕ್ಕೆ ತೊಡಗಿರುವುದು ನಿಜಕ್ಕೂ ಭಾರತಮಾತೆಗೆ ಮಾಡುವ ದ್ರೋಹವಾಗಿದೆ ಎಂದು ಹೇಳಿದ್ದಾರೆ.

ಹಲವು ದಶಕಗಳಿಂದ ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಗಣನೀಯ ಪಾತ್ರವನ್ನು ವಹಿಸಿರುವ ಕನ್ನಡಿಗರು ಈ ರೀತಿಯ ಅನ್ಯಾಯಕ್ಕೆ ಒಳಗಾಗುವುದನ್ನು ಸಹಿಸಲು ಸಾಧ್ಯವಿಲ್ಲ.

ಪ್ರತಿಯೊಂದು ರಾಜ್ಯಗಳು ಇದೇ ನೀತಿಯನ್ನು ಅನುಸರಿಸಿದರೆ ದೇಶದಲ್ಲಿ ಅಂತಃಕಲಹ ಭುಗಿಲೆದ್ದು ದೇಶವೇ ಆತಂಕಕಾರಿ ಪರಿಸ್ಥಿತಿಗೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೂಡಲೇ ದೇಶದ ಪ್ರಧಾನಿಗಳು ಮಧ್ಯಪ್ರವೇಶ ಮಾಡಿ ಗೋವಾ ರಾಜ್ಯದ ಈ ರೀತಿಯ ಕನ್ನಡಿಗರ ಮೇಲಿನ ದಬ್ಬಾಳಿಕೆ , ದೌರ್ಜನ್ಯ ನೀತಿಯನ್ನು ತಡೆಗಟ್ಟಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.

ಗೋವಾ ಸಿಎಂ ಗೆ ಪ್ರಧಾನಿಗಳು ಕರೆದು ಬುದ್ಧಿ ಹೇಳಲಿ – ಮುಖ್ಯಮಂತ್ರಿ ಚಂದ್ರು Read More

ಸಣ್ಣವರ್ತಕರ ಪರ ಆಮ್ ಆದ್ಮಿ ಪಕ್ಷ-ಜಗದೀಶ್ ವಿ. ಸದಂ

ಬೆಂಗಳೂರು: ಸಣ್ಣ ಸಣ್ಣ ವ್ಯಾಪಾರಗಳಲ್ಲಿ ತೊಡಗಿಕೊಂಡು ಸ್ವಯಂ ಉದ್ಯೋಗ ನಡೆಸುತ್ತಿರುವ ವರ್ಗಗಳಿಗೆ ರಾಜ್ಯ ಸರ್ಕಾರ ಜಿಎಸ್‌ಟಿ ನೋಟಿಸ್ ನೀಡಿ ಕಿರುಕುಳ ಕೊಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಕಿಡಿಕಾರಿದೆ.

ದೇಶದಲ್ಲಿ ತಾಂಡವವಾಡುತ್ತಿ
ರುವ ನಿರುದ್ಯೋಗ ಸಮಸ್ಯೆಯಿಂದ ಕಂಗೆಟ್ಟ ಪ್ರತಿಭಾವಂತ ಹಾಗೂ ವಿದ್ಯಾವಂತ ಯುವಕರು ತಮ್ಮ ಜೀವನಕ್ಕಾಗಿ ಬೇಕರಿ, ಕಾಂಡಿಮೆಂಟ್ಸ್ ಸೇರಿದಂತೆ ಸಣ್ಣ ಸಣ್ಣ ವ್ಯಾಪಾರಗಳಲ್ಲಿ ತೊಡಗಿಕೊಂಡು ಸ್ವಯಂ ಉದ್ಯೋಗ ನಡೆಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ.ಆದರೆ ಈ ವರ್ಗಗಳಿಗೆ ರಾಜ್ಯ ಸರ್ಕಾರ ಜಿಎಸ್‌ಟಿ ನೋಟಿಸ್ ನೀಡುವ ಮೂಲಕ ಕಿರುಕುಳ‌ ನೀಡುತ್ತಿದೆ,ಇದನ್ನು ಆಮ್ ಆದ್ಮಿ ಪಕ್ಷ ವಿರೋಧಿಸುತ್ತದೆ ಹಾಗೂ ಸದಾ ಸಣ್ಣ ವ್ಯಾಪಾ ರಿಗಳ ಪರ ಇರುತ್ತದೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಸುದ್ದಿಗಾರರೊಂದಿಗೆ ತಿಳಿಸಿದರು.

ಈ ಯುವ ಜನರು ಸಣ್ಣ ಸಣ್ಣ ಬಂಡವಾಳಗಳಿಂದ ಉದ್ದಿಮೆಗಳನ್ನು ಆರಂಭಿಸಿ ದೇಶದ ಹಾಗೂ ರಾಜ್ಯದ ಆರ್ಥಿಕತೆಗೆ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ, ಇಂದು ಕರ್ನಾಟಕ ರಾಜ್ಯ ತಲಾದಾಯದಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿ ಇದ್ದರೆ ಅದರ ನೇರ ಶ್ರೇಯಸ್ಸು ಇಂತಹ ಯುವ ವರ್ಗಗಳಿಗೆ ಸಲ್ಲಬೇಕಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರ ಇಂತಹ ವರ್ಗಗಳಿಗೆ ಸಾಕಷ್ಟು ಸಾಲ ಸೌಲಭ್ಯಗಳ ಮೂಲಕ ನೆರವು ನೀಡಬೇಕೆ ಹೊರತು ಜಿಎಸ್‌ಟಿ ಅಧಿಕಾರಿಗಳ ಲೂಟಿಕೋರತನಕ್ಕೆ ಅನುವು ಮಾಡಿಕೊಡುಬಾರದು ಎಂದು ಜಗದೀಶ್ ತಿಳಿಸಿದರು.

ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯಲಿರುವ ಸಣ್ಣ‌ವ್ಯಾಪಾರಿಗಳ ಪ್ರತಿಭಟನಾ ಸಭೆಗೆ ಆಮ್ ಆದ್ಮಿ ಪಕ್ಷವು ಸಂಪೂರ್ಣ ಬೆಂಬಲ ನೀಡಲಿದೆ. ನಮ್ಮ ಪಕ್ಷದ ವರ್ತಕರ ವಿಭಾಗದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ತೆರಿಗೆ ರೂಪದ ಸುಲಿಗೆ ನೀತಿಯನ್ನು ಖಂಡಿಸಲಿದೆ. ಪಕ್ಷದ ತೆರಿಗೆ ಹಾಗೂ ಲೆಕ್ಕ ಪರಿಶೋಧಕರ ತಂಡ ಇವರ ನೆರವಿಗೆ ನಿಲ್ಲಲಿದೆ ಎಂದು ಜಗದೀಶ್ ವಿ. ಸದಂ ತಿಳಿಸಿದರು.

ಸಣ್ಣವರ್ತಕರ ಪರ ಆಮ್ ಆದ್ಮಿ ಪಕ್ಷ-ಜಗದೀಶ್ ವಿ. ಸದಂ Read More

ವಾರ್ಡ್ ಸಮಿತಿಗಳ ಶಿಫಾರಸ್ಸಿನಂತೆ ಬಿಡುಗಡೆಯಾದ ಹಣ ಖರ್ಚಾಗಲಿ: ಆಪ್

ಬೆಂಗಳೂರು: ರಾಜ್ಯ ಸರ್ಕಾರ ಶಾಸಕರಿಗೆ ಬಿಡುಗಡೆ ಮಾಡಿರುವ 50 ಕೋಟಿ ಹಣವನ್ನು ಬೆಂಗಳೂರಿನ ಶಾಸಕರುಗಳು ಸ್ಥಳೀಯ ವಾರ್ಡ್ ಸಮಿತಿಗಳ ಶಿಫಾರಸ್ಸಿನ ಅನುಸಾರ ಸರಿಯಾಗಿ ಖರ್ಚು ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಈ ಕುರಿತು ಆಮ್ ಆದ್ಮಿ ಪಕ್ಷದ ಬೆಂಗಳೂರು ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಮಾತನಾಡಿದ್ದು, ಈಗಾಗಲೇ ಬೆಂಗಳೂರಿನಲ್ಲಿ ನಾನಾ ಸಮಸ್ಯೆಗಳಿವೆ. ಬಿಡುಗಡೆಯಾಗಿರುವ ಹಣ ಯಾವ ಮೂಲೆಗೂ ಸಾಲದು ಎಂದು ಹೇಳಿದರು.

ಬಿಬಿಎಂಪಿ ವಿಸರ್ಜನೆಯಾಗಿ 5 ವರ್ಷ ಆಗಿದೆ.ಪ್ರತಿಯೊಂದು ವಾರ್ಡ್ ಗಳಲ್ಲಿಯೂ ನಾಗರಿಕರುಗಳಿಗೆ ವಾಸಿಸಲು ಸಾಧ್ಯವೇ ಆಗದಂತಹ ಜ್ವಲಂತ ಸಮಸ್ಯೆಗಳು ಇವೆ. ಇವುಗಳನ್ನು ವಾರ್ಡ್ ಸಮಿತಿಯ ಸಭೆಯ ಮೂಲಕ ಚರ್ಚಿಸಿ ಆದ್ಯತೆ ಮೂಲಕ ಕೈಗೆತ್ತಿಕೊಳ್ಳಬೇಕು, ಅದನ್ನು ಬಿಟ್ಟು ಬೆಂಗಳೂರಿನ ಶಾಸಕರುಗಳು ತಮ್ಮ ಸಂಬಂಧಿಗಳಿಗೆ ಹಾಗೂ ಬೆಂಬಲಿಗರಿಗೆ ಗುತ್ತಿಗೆ ನೀಡುವ ಮೂಲಕ ಹಣವನ್ನು ಲಪಟಾಯಿಸುವ ತಂತ್ರಗಾರಿಕೆಯಲ್ಲಿ ತೊಡಗಬಾರದೆಂದು ಅಶೋಕ್ ಮೃತ್ಯುಂಜಯ ಆಗ್ರಹಿಸಿದರು.

ಈ ಬಗ್ಗೆ ಸರ್ಕಾರ ಕೆಲವೊಂದು ನಿಬಂಧನೆಗಳನ್ನು ಹೊರಡಿಸಬೇಕೆಂದು ಅವರು ಆಗ್ರಹಿಸಿದರು.

ವಾರ್ಡ್ ಸಮಿತಿಗಳ ಶಿಫಾರಸ್ಸಿನಂತೆ ಬಿಡುಗಡೆಯಾದ ಹಣ ಖರ್ಚಾಗಲಿ: ಆಪ್ Read More

ಆಟೋ ಟಿಪ್ಪರ್ ಕಾಂಪ್ಯಾಕ್ಟರ್ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ನಿಲ್ಲಿಸಿ: ಎಎಪಿ

ಬೆಂಗಳೂರು: ಪೌರಕಾರ್ಮಿಕರು, ಆಟೋ ಟಿಪ್ಪರ್,ಕಾಂಪ್ಯಾಕ್ಟರ್ ಗಳ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ನಿಲ್ಲಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

ಬಿಬಿಎಂಪಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಅವರು,
ಬೆಂಗಳೂರಿನಲ್ಲಿ ಕಸ ನಿರ್ವಹಣೆ ಹೆಸರಿನಲ್ಲಿ ಪ್ರತಿ ವಾರ್ಡ್ ಗಳಲ್ಲಿ ನಿಗದಿಯಾಗಿರುವ ಸಂಖ್ಯೆಯಲ್ಲಿ ಪೌರಕಾರ್ಮಿಕರು, ಆಟೋ ಟಿಪ್ಪರ್ ಮತ್ತು ಕಾಂಪ್ಯಾಕ್ಟರ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಗುತ್ತಿಗೆದಾರರು ಇವುಗಳ ಹೆಸರಿನಲ್ಲಿ ನಡೆಸುತ್ತಿರುವ ಕೋಟ್ಯಾಂತರ ಬಿಲ್ ಲೂಟಿಯನ್ನು ತಡೆಗಟ್ಟಿದಲ್ಲಿ ಮಾತ್ರ ಬೆಂಗಳೂರು ನಗರವನ್ನು ಕಸಮುಕ್ತವನ್ನಾಗಿಸಬಹುದು ಎಂದು ಹೇಳಿದರು.

ಮುಖ್ಯ ಆಯುಕ್ತರು ಪ್ರತಿ ವಾರ್ಡ್ ಗಳಲ್ಲಿ ಇವುಗಳ ಹೆಸರಿನಲ್ಲಿ ನಡೆಯುತ್ತಿರುವ ಲೂಟಿಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಅನವಶ್ಯಕವಾಗಿ ತೆರಿಗೆದಾರರ ಹಣ ಅಕ್ರಮವಾಗಿ ನಗರದ ಶಾಸಕರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರುಗಳ ಜೇಬಿಗೆ ಸೇರುತ್ತಿದೆ. ಅದನ್ನು ಬಿಟ್ಟು ಹೆಚ್ಚುವರಿ ಯಾಗಿ ಮತ್ತಷ್ಟು ವಾಹನಗಳನ್ನು ಪಡೆದುಕೊಂಡಲ್ಲಿ ಮತ್ತಷ್ಟು ಲೂಟಿ ಹೆಚ್ಚಾಗುತ್ತದೆಯೇ ಹೊರತು ಬೇರೇನೂ ಆಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.

ಆಯುಕ್ತರು ತಮ್ಮ ವಿಚಕ್ಷಣ ದಳವನ್ನು ಉಪಯೋಗಿಸಿಕೊಂಡು ಇವುಗಳ ಬಗ್ಗೆ ರಹಸ್ಯ ತನಿಖೆ ನಡೆಸಿ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಂಡಲ್ಲಿ ತೆರಿಗೆದಾರರ ನೂರಾರು ಕೋಟಿ ಹಣ ಲೂಟಿ ಆಗುವುದು ನಿಲ್ಲುತ್ತದೆ. ಬೆಂಗಳೂರು ಕಸಮುಕ್ತವಾಗುತ್ತದೆ. ಪ್ರತಿ ದಿವಸ ಪೌರಕಾರ್ಮಿಕರು ಹಾಗೂ ವಾಹನಗಳ ಹಾಜರಾತಿಯನ್ನು ಖಾತ್ರಿಪಡಿಸಿಕೊಳ್ಳಲು ಸ್ಥಳೀಯ ನಾಗರಿಕರ ಸಮಿತಿಯನ್ನು ರಚಿಸಿ ಇವುಗಳಿಗೆ ದೆಹಲಿ ರಾಜ್ಯದ ಮಾದರಿಯಲ್ಲಿ ಸಾಂವಿಧಾನಿಕ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು.

ಅದನ್ನು ಬಿಟ್ಟು ಒಂದೆರಡು ಕಿಲೋಮೀಟರ್ ಪಾದಯಾತ್ರೆ ನಡೆಸುವುದು ಕೇವಲ ಪ್ರದರ್ಶನ ಹಾಗೂ ಜನತೆಯ ಕಣ್ಣೊರೆಸುವ ತಂತ್ರವೇ ಹೊರತು ಬೇರೇನೂ ಅಲ್ಲ. ಇಂತಹ ಕ್ರಮಗಳ ಮೂಲಕ ನಗರದಲ್ಲಿ ಅನೇಕ ವರ್ಷಗಳಿಂದ ಬೇರು ಬಿಟ್ಟಿರುವ ಕಸದ ಮಾಫಿಯಾವನ್ನು ತಡೆಗಟ್ಟದಿದ್ದಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರು ನಗರವನ್ನು ಕಸಮುಕ್ತ ಮಾಡಲು ಸಾಧ್ಯವಿಲ್ಲ. ಬೇಕಾಬಿಟ್ಟಿಯಾಗಿ ಜನತೆಯ ಹಣ ಅನ್ಯರ ಪಾಲಾಗುತ್ತಿರುವುದನ್ನು ತಡೆಗಟ್ಟುವ ದಿಸೆಯಲ್ಲಿ ಸರ್ಕಾರ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಗದೀಶ್ ವಿ.ಸದಂ ಆಗ್ರಹಿಸಿದರು.

ಆಟೋ ಟಿಪ್ಪರ್ ಕಾಂಪ್ಯಾಕ್ಟರ್ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ನಿಲ್ಲಿಸಿ: ಎಎಪಿ Read More

ಆಟೋಗಳಿಗೆ ಸೂಕ್ತ ಪರ್ಮಿಟ್ ನೀಡದೆ ಸರ್ಕಾರದಿಂದ ದಂಡ- ಎ ಎ ಪಿ ಕಿಡಿ

ಬೆಂಗಳೂರು: ಬಿಎಸ್ 6 ಆಟೋಗಳಿಗೆ ರಾಜ್ಯ ಸಾರಿಗೆ ಇಲಾಖೆ ಇದುವರೆವಿಗೆ ಪರ್ಮಿಟ್ ನೀಡಿಲ್ಲ, ಆದರೆ ಈಗ ಏಕಾಏಕಿ ಆಟೋಗಳಿಗೆ ದಂಡ ವಿಧಿಸಿ ಜಪ್ತಿ ಮಾಡುತ್ತಿರುವುದು ಎಷ್ಟು ಸರಿ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿಸಿದೆ.

2019, 1920 ಎರಡು ವರ್ಷಗಳ ಕೊರೋನಾ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಸಾವು ನೋವುಗಳಿಂದ ತತ್ತರಿಸಿದ ಸಂದರ್ಭ ದಲ್ಲಿ ಸಂಚಾರಕ್ಕೆ ಬಿಡುಗಡೆಯಾದ ಸಾವಿರಾರು ಬಿಎಸ್ 6 ಆಟೋಗಳಿಗೆ ರಾಜ್ಯ ಸಾರಿಗೆ ಇಲಾಖೆ ಇದುವರೆವಿಗೂ ಪರ್ಮಿಟ್ ನೀಡಿಲ್ಲ. ಆದರೆ ಈಗ ಏಕಾಏಕಿ ಆಟೋಗಳಿಗೆ ಎಲ್ಲೆಂದರಲ್ಲಿ ದಂಡ ವಿಧಿಸಿ ಜಪ್ತಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಮ್ ಆದ್ಮಿ ಪಕ್ಷವು ಇಂದು ಇಲ್ಲಿ ಕರೆದಿದ್ದ ಸಾರಿಗೆ ಇಲಾಖೆಯ ಸಭೆಯಲ್ಲಿ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಪ್ರಶ್ನಿಸಿತು.

ಸಭೆಯ ನಂತರ ರಾಜ್ಯ ಆಟೋ ಘಟಕದ ಅಧ್ಯಕ್ಷ ಆಯುಬ್ ಖಾನ್ ಮಾತನಾಡಿ ಏಕಾಏಕಿ ಬಿಎಸ್ 7 ಆಟೋಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅವಕಾಶ ನೀಡಿದ್ದೆ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಿದರು.

ಕೊರೋನಾ ಸಂದರ್ಭದಲ್ಲಿ ಯಾವುದೇ ಸಾಲ ಸೌಲಭ್ಯಗಳು ಸಿಗದಿದ್ದ ದುಸ್ಥಿತಿಯ ಕಾಲದಲ್ಲಿ ತಮ್ಮ ಜೀವನ ನಡೆಸಲು ಬಿಎಸ್ 6 ಆಟೋಗಳನ್ನು ಖರೀದಿಸಿದ್ದ ಬೆಂಗಳೂರಿನ ಸಾವಿರಾರು ಆಟೋ ಚಾಲಕರು ಸಾರಿಗೆ ಇಲಾಖೆಯಿಂದ ಕೇವಲ ನೊಂದಾವಣಿ ಮಾತ್ರ ಮಾಡಿಕೊಂಡು ಪರ್ಮಿಟ್ ಭಾಗ್ಯವಿಲ್ಲದೆ ಇದುವರೆಗೂ ಸಾರಿಗೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆದರೆ ಈಗ ಏಕಾಏಕಿ ಸಾರಿಗೆ ಇಲಾಖೆಯ ಅಧಿಕಾರಿಗಳು ರಸ್ತೆಗಳಲ್ಲಿ ಅಲ್ಲಲ್ಲಿ ಪರ್ಮಿಟ್ ಇಲ್ಲದ ಕಾರಣ ಬಿಎಸ್ 6 ಆಟೋಗಳನ್ನು ಜಪ್ತಿ ಮಾಡಿ ದುಬಾರಿ ದಂಡ ವಿಧಿಸುತ್ತಿದ್ದಾರೆ ಎಂದು ಆಯುಬ್ ಖಾನ್ ಅಲವತ್ತುಕೊಂಡರು.

ಕೂಡಲೇ ಬಿಎಸ್ 6 ಆಟೋಗಳಿಗೆ ಪರ್ಮಿಟ್ ಭಾಗ್ಯ ನೀಡಿ ಜಪ್ತಿ ಹಾಗೂ ಇನ್ನಿತರ ಕಾನೂನು ಕ್ರಮಗಳಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಬಡ ಆಟೋ ಚಾಲಕರು ತಮ್ಮ ಯೂನಿಫಾರಂ , ಎಮಿಷನ್ ಸರ್ಟಿಫಿಕೇಟ್, ಇನ್ಶೂರೆನ್ಸ್ ಗಳನ್ನು ಮಾಡಿಸಿಕೊಳ್ಳಲು ವಾರಗಟ್ಟಲೆ ಕಂಪನಿಗಳ ಮುಂದೆ ಸರಣಿ ಸಾಲಿನಲ್ಲಿ ನಿಲ್ಲುವ ದುಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರಣ ಕೇಳಿದರೆ ಸರ್ವರ್ ಡೌನ್ ಎಂದು ಹೇಳುತ್ತಿದ್ದಾರೆ. ಮೀಟರ್ ತಯಾರಿ ಮಾಡಿಕೊಳ್ಳಲು ಅಂಗಡಿಗಳ ಮುಂದೆ ಕನಿಷ್ಠ 5 ದಿವಸಗಳ ಕಾಲ ಕಾಯಬೇಕಿದೆ. ಅಲ್ಲಿಯ ತನಕ ಬಡ ಆಟೋ ಚಾಲಕರು ಹಾಗೂ ಅವರ ಕುಟುಂಬದವರಿಗೆ ಉಪವಾಸವೇ ಗತಿಯಾಗಿದೆ ಎಂದು ಆಯುಬ್ ಖಾನ್ ತಿಳಿಸಿದರು.

ಈಗಾಗಲೇ ಆಟೋ ಚಾಲಕರು ತಮ್ಮ ಮಕ್ಕಳ ಶಾಲಾ ಶುಲ್ಕ, ಆರೋಗ್ಯ ವೆಚ್ಚ ಹಾಗೂ ಹಬ್ಬ ಹರಿದಿನಗಳ ಸಲುವಾಗಿ ತಮ್ಮಲ್ಲಿದ್ದ ಹಣವನ್ನು ಖರ್ಚು ಮಾಡಿಕೊಂಡು ಸಾಲಗಾರರ ಸುಳಿಗೆ ಸಿಲುಕುವಂತಹ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಆಟೋ ಚಾಲಕರುಗಳಿಗೆ ಪರ್ಮಿಟ್ ಸೇರಿದಂತೆ ತಮ್ಮ ಎಲ್ಲಾ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ಮೂರು ತಿಂಗಳು ಕಾಲಾವಕಾಶ ನೀಡಿ ಬಡ ಆಟೋ ಚಾಲಕರ ಕುಟುಂಬ ನಿರ್ವಹಣೆಗೆ ಸರ್ಕಾರ ಈ ಮೂಲಕ ನೆರವಾಗಬೇಕು
ಎಂದು ಪಕ್ಷದ ಪರವಾಗಿ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಮಾಡಿದರು.

ಆಟೋಗಳಿಗೆ ಸೂಕ್ತ ಪರ್ಮಿಟ್ ನೀಡದೆ ಸರ್ಕಾರದಿಂದ ದಂಡ- ಎ ಎ ಪಿ ಕಿಡಿ Read More

ನಾಗರೀಕ ಸಮಾಜದಲ್ಲಿ ಇರಲು ರವಿಕುಮಾರ್ ಯೋಗ್ಯರಲ್ಲ: ಅಂಜನಾ ಗೌಡ

ಬೆಂಗಳೂರು: ವಿಧಾನಪರಿಷತ್ ಸದಸ್ಯ ಹಾಗೂ ಮುಖ್ಯ ಸಚೇತಕ ಎನ್. ರವಿಕುಮಾರ್ ತಮ್ಮ ಹೇಳಿಕೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಮೇಲೆ ಅವಹೇಳನ ಹೇಳಿಕೆ ನೀಡಿರುವುದು ಖಂಡನಾರ್ಹ ಎಂದು
ಆಪ್ ಟೀಕಿಸಿದೆ.

ರವಿಕುಮಾರ್ ಹೇಳಿಕೆ ದೇಶದ ಮಹಿಳಾ ಅಧಿಕಾರಿಗಳು ಹಾಗೂ ದೇಶದ ಮಹಿಳೆಯರ ಘನತೆಗೆ, ಗೌರವಕ್ಕೆ ಮಾಡಿರುವ ಘೋರ ಅಪಮಾನ,ಇಂತಹ ವ್ಯಕ್ತಿಗಳು ನಾಗರಿಕ ಸಮಾಜದಲ್ಲಿ ಇರಲು ಯೋಗ್ಯರಲ್ಲ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ ಅಂಜನ ಗೌಡ ವಾಗ್ದಾಳಿ ನಡೆಸಿದರು.

ಪಕ್ಷದ ವತಿಯಿಂದ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ನಂತರ ಮಾತನಾಡಿದ ಅವರು,ಇಂತಹ ನೀಚ ಮನಸ್ಸಿನ ವ್ಯಕ್ತಿಯು ರಾಜ್ಯದ ಚಿಂತಕರ ಚಾವಡಿ ಯಾಗಿರುವ ವಿಧಾನಪರಿಷತ್ತಿನಲ್ಲಿ ಇರುವುದು ಹಾಗೂ ಮುಖ್ಯ ಸಚೇತಕ ಹುದ್ದೆಯಲ್ಲಿ ಮುಂದುವರೆದಿರುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾಡಿರುವಂತಹ ಅಪಮಾನ. ಇಂತಹ ವ್ಯಕ್ತಿಯು ಯಾವುದೇ ಕಾರಣಕ್ಕೂ ಇಂತಹ ಘನತೆಯ ಅಧಿಕಾರದಲ್ಲಿ ಮುಂದುವರಿಯಲು ಎಳ್ಳಷ್ಟು ಯೋಗ್ಯ ಅಲ್ಲ ಎಂದು ಹೇಳಿದರು.

ಕೂಡಲೇ ರವಿಕುಮಾರ್ ಅವರನ್ನು ವಿಧಾನಪರಿಷತ್ತಿನಿಂದ ಉಚ್ಛಾಟಿಸಬೇಕು ಮತ್ತು ಮುಖ್ಯ ಸಚೇತಕ ಪದವಿಯಿಂದ ಮುಂದುವರಿಯದಂತೆ ವಿಧಾನ ಪರಿಷತ್ತಿನ ಸಭಾಧ್ಯಕ್ಷರಿಗೆ ಶಿಫಾರಸ್ಸು ಮಾಡಬೇಕು ಹಾಗೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರನ್ನು ಅಂಜನಾ ಗೌಡ ಒತ್ತಾಯಿಸಿದರು.

ನಾಗರೀಕ ಸಮಾಜದಲ್ಲಿ ಇರಲು ರವಿಕುಮಾರ್ ಯೋಗ್ಯರಲ್ಲ: ಅಂಜನಾ ಗೌಡ Read More

ದೇಶದ ಜನಸಾಮಾನ್ಯರ ಏಕೈಕ ಆಶಾಕಿರಣ ಆಮ್ ಆದ್ಮಿ ಪಕ್ಷ-ಆತಿಷಿ ಸಿಂಗ್

ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ದುರಾಡಳಿತದಿಂದ ನಲುಗಿ ಹೋಗಿರುವ ಜನಸಾಮಾನ್ಯನಿಗೆ ಏಕೈಕ ಆಶಾಕಿರಣ ಆಮ್ ಆದ್ಮಿ ಪಕ್ಷ ಒಂದೇ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ಸಿಂಗ್ ಹೇಳಿದರು.

ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,
ದೆಹಲಿಯಲ್ಲಿ ನಾವು ಕಳೆದ ಹತ್ತು ವರ್ಷಗಳಿಂದ ಮಾಡಿರುವ ಸಾಧನೆ ಹಾಗೂ ಪಂಜಾಬ್ ನಲ್ಲಿ ನೀಡುತ್ತಿರುವ ಸ್ವಚ್ಛ, ಪ್ರಾಮಾಣಿಕ ಆಡಳಿತ ವೈಖರಿ ನೋಡಿದಾಗ ಜನಸಾಮಾನ್ಯರು ಆಡಳಿತಕ್ಕೆ ಬಂದಾಗ ಮಾತ್ರ ದೇಶದಲ್ಲಿ ಬದಲಾವಣೆ ಸಾಧ್ಯವೆ ಹೊರತು ಪರಂಪರಾನುಗತ ಪಕ್ಷಗಳಿಂದ ಖಂಡಿತ ಸಾಧ್ಯವಿಲ್ಲ ಎಂದು ತಿಳಿಸಿದರು.

ಜನಸಾಮಾನ್ಯನು ಸಹ ಮುಖ್ಯಮಂತ್ರಿ ಆಗಬಹುದೆಂಬ ಉದಾಹರಣೆಯನ್ನು ನನ್ನನ್ನು ನೋಡಿದರೆ ಗೊತ್ತಾಗುತ್ತದೆ. ಇದೇ ರೀತಿಯ ಪರ್ಯಾಯ ರಾಜಕಾರಣವನ್ನು ದೇಶದೆಲ್ಲೆಡೆ ಜನಸಾಮಾನ್ಯರು ಸ್ವಾಗತಿಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ನಮ್ಮ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ. ಕಾರ್ಯಕರ್ತರೆಲ್ಲರೂ ಅಧಿಕಾರ ಇರಲಿ ಬಿಡಲಿ ಹಗಲಿರುಳು ಜನಸಾಮಾನ್ಯನ ಏಳಿಗೆಗಾಗಿ ದುಡಿಯಬೇಕು, ಹಾಗಾದರೆ ಮತ್ತು ರಾಜಕೀಯ ಪರಿವರ್ತನೆ ಖಂಡಿತಾ ಸಾಧ್ಯ ಎಂದು ತಿಳಿಸಿದರು.

ಈ ವೇಳೆ ಪಕ್ಷದ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು , ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹ್ವಾನಿ, ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ ಹಾಗೂ ಪ್ರಮುಖ ಕಾರ್ಯಕರ್ತರುಗಳು, ಮುಖಂಡರುಗಳು ಭಾಗವಹಿಸಿದ್ದರು.

ದೇಶದ ಜನಸಾಮಾನ್ಯರ ಏಕೈಕ ಆಶಾಕಿರಣ ಆಮ್ ಆದ್ಮಿ ಪಕ್ಷ-ಆತಿಷಿ ಸಿಂಗ್ Read More

ಹಕ್ಕಿಗಾಗಿ ಹೋರಾಡುತ್ತಿರುವ ರೈತರ ಬಂಧನ ಅಮಾನವೀಯ- ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ದೇವನಹಳ್ಳಿ ಚಲೋ ಪ್ರತಿಭಟನೆ ವೇಳೆ ರೈತರನ್ನು ಏಕಾಏಕಿ ಬಂಧಿಸಿರುವ ಪೊಲೀಸರ ಕ್ರಮ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಅಮಾನವೀಯ ನಡೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ನಾಡಿನ ಎಲ್ಲ ಜನತೆ ಖಂಡಿಸಬೇಕಾಗುತ್ತದೆ ಎಂದು ಹೇಳಿದರು.

ದೇವನಹಳ್ಳಿಯಲ್ಲಿ ಸಾವಿರಾರು ರೈತರು ತಮ್ಮ ವಂಶಾನುಗತ ಕೃಷಿ ಭೂಮಿ ಹಕ್ಕಿಗಾಗಿ ಸಾವಿರ ದಿವಸಗಳಿಂದ ಹೋರಾಟ ನಡೆಸುತ್ತಿದ್ದಾರೆ. ಮಹಿಳೆಯರು ವೃದ್ಧರು ಎಂಬುದನ್ನು ಸಹ ಪರಿಗಣಿಸದೆ ಪೊಲೀಸರು ಬಂಧನದ ವೇಳೆಯಲ್ಲಿ ನಡೆಸಿದ ದೌರ್ಜನ್ಯ ಯಾವುದೇ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದು ಎಂದು ಚಂದ್ರು ಕಿಡಿಕಾರಿದರು.

ಈ ಹಿಂದೆ ಯಡಿಯೂರಪ್ಪನವರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ಸಿದ್ದರಾಮಯ್ಯನವರಿಗೊ ಸಹ ರಾಜ್ಯದ ಜನ ತಕ್ಕಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ. ಈ ಘಟನೆಗೆ ಸರ್ಕಾರ ಉತ್ತರದಾಯಿತ್ವವಾಗಿರುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಎಲ್ಲ ರೈತಾಪಿ ವರ್ಗಗಳ ಮೇಲೆ ಈ ರೀತಿಯ ದೌರ್ಜನ್ಯವನ್ನು ಪಕ್ಷವು ಖಂಡಿಸುತ್ತದೆ ಮತ್ತು ಅವರ ಹೋರಾಟದಲ್ಲಿ ಸದಾಕಾಲ ನಿಲ್ಲುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಭರವಸೆ ನೀಡಿದರು.

ಹಕ್ಕಿಗಾಗಿ ಹೋರಾಡುತ್ತಿರುವ ರೈತರ ಬಂಧನ ಅಮಾನವೀಯ- ಮುಖ್ಯಮಂತ್ರಿ ಚಂದ್ರು Read More

ತಿಪ್ಪಗೊಂಡನಹಳ್ಳಿ ಜಲಾಶಯ ಉಳಿಸಿ ಹೋರಾಟಕ್ಕೆ ಬೆಂಗಳೂರಿಗರು ಕೈಜೋಡಿಸಿ:ಆಪ್

ಬೆಂಗಳೂರು: ಬೆಂಗಳೂರು ನಗರಕ್ಕೆ ಹಲವು ವರ್ಷಗಳಿಂದ ಕುಡಿಯುವ ನೀರು ಕೊಡುತ್ತಿದ್ದ ಅರ್ಕಾವತಿ ನದಿಯ ತಿಪ್ಪಗೊಂಡನಹಳ್ಳಿ ಜಲಾಶಯ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಹೇಳಿದೆ.

ತಿಪ್ಪಗೊಂಡನಹಳ್ಳಿ ಜಲಾಶಯ ಉಳಿಸಿಕೊಳ್ಳುವ ಅನಿವಾರ್ಯತೆ
ಹೋರಾಟದಲ್ಲಿ ಬೆಂಗಳೂರನ್ನು ಪ್ರೀತಿಸುವವರು ಮತ್ತು ನಗರದ ನಾಗರೀಕರೆಲ್ಲ ಭಾಗವಹಿಸಬೇಕಾದ ಅನಿವಾರ್ಯತೆ ಹಾಗೂ ಸಂದಿಗ್ಧತೆ ಇದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಧ್ಯಕ್ಷ ಸೀತಾರಾಮ್ ಗುಂಡಪ್ಪ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಹೋರಾಟದ ಭಾಗವಾಗಿ ಇದೇ ಜೂನ್ 28ರಂದು ನಗರದ ಬಳ್ಳಾರಿ ರಸ್ತೆಯ ಅಖಿಲ ಭಾರತ ವೀರಶೈವ ಮಹಾಸಭಾ ಸಭಾಂಗಣದಲ್ಲಿ ಅನೇಕ ಹೋರಾಟಗಾರರು ಹಾಗೂ ತಜ್ಞರೊಂದಿಗೆ ವಿಚಾರ ಸಂಕಿರಣ ಆಯೋಜಿಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಸೀತಾರಾಮ್ ಗುಂಡಪ್ಪ ತಿಳಿಸಿದರು.

ಹೋರಾಟ ಸಮಿತಿಯ ಸಂಚಾಲಕ ಶಶಿಧರ್ ಆರಾಧ್ಯ ಮಾತನಾಡಿ ಎಲ್ಲ ಸರ್ಕಾರಗಳು ಬೆಂಗಳೂರು ನಗರವನ್ನು ರಿಯಲ್ ಎಸ್ಟೇಟ್ ಅಡ್ಡೆ ಮಾಡಿಕೊಂಡು, ಕೊಳ್ಳೆ ಹೊಡೆಯುತ್ತಿವೆಯೇ ಹೊರತು ಭವಿಷ್ಯದಲ್ಲಿ ನಾಗರಿಕರಿಗೆ ಜಲಮೂಲಗಳನ್ನು ಉಳಿಸಿಕೊಳ್ಳುವ ಯಾವುದೇ ಭದ್ಧತೆ ಇವರಲ್ಲಿ ಕಾಣುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಜಲಾಶಯದ 10 ಕಿ.ಮೀ ವ್ಯಾಪ್ತಿಯಲ್ಲಿ ನಗರೀಕರಣ ಮತ್ತು ಕೈಗಾರಿಕೀಕರಣವನ್ನು ನಿಯಂತ್ರಿಸಲು ಸಂರಕ್ಷಣಾ ವಲಯವೆಂದು ಗುರುತಿಸಿದೆ, ಆದರೂ ಜಲಾಶಯವು ಅನೇಕ ವರ್ಷಗಳಿಂದ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ, ಕೈಗಾರಿಕೆಗಳ ತ್ಯಾಜ್ಯ ವಿಸರ್ಜನೆ, ಬೆಂಗಳೂರಿನ ಒಳಚರಂಡಿ ಹರಿವು, ಅನುಚಿತ ಘನ ತ್ಯಾಜ್ಯ ವಿಲೇವಾರಿ, ನೀಲಗಿರಿ ಏಕ ಸಂಸ್ಕೃತಿ, ತೆರೆದ ಪಿಟ್ ಕ್ವಾರಿ
ಗಳಂತಹ ಅನೇಕ ನೈಸರ್ಗಿಕ ವಿರೋಧಿ ಕೃತ್ಯಗಳ ಪರಿಣಾಮಗಳಿಂದಾಗಿ ಈ ಜಲಾಶಯವು ಅಪಾಯದ ಅಂಚಿನಲ್ಲಿದೆ ವಿಷಾದಿಸಿದರು.

ಕೂಡಲೇ ಜಲಾಶಯವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟನಾತ್ಮಕ ಹೋರಾಟವನ್ನು ಮಾಡಬೇಕಾಗಿದೆ. ಇಲ್ಲಿನ ಬಫರ್ ವಲಯವನ್ನು 500 ಮೀಟರ್ ಗಳಿಂದ ಕೇವಲ 30 ಮೀಟರ್ ಗೆ ಇಳಿಸಲಾಗುತ್ತದೆ ಎಂಬ ಸರ್ಕಾರದ ನಿರ್ಣಯವನ್ನು ನಾವೆಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕಾಗಿದೆ ಎಂದು ಕರೆ ನೀಡಿದರು.

ಇದರಿಂದ ಜಲಾಶಯವು ಇನ್ನಷ್ಟು ಕಲುಷಿತವಾಗಿ ಮತ್ತು ಅಕ್ಕಪಕ್ಕದ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಈಗಾಗಲೇ ನೈಸರ್ಗಿಕ ನದಿ ಹರಿವಿನ ನಷ್ಟವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಮಳೆ ನೀರಿನ ಒಳಹರಿವು ಕಡಿಮೆಯಾಗುವುದು ಹಾಗೂ ಸ್ಥಳೀಯ ಜೀವವೈವಿಧ್ಯತೆಗೆ ಧಕ್ಕೆಯಾಗುತ್ತದೆ ಎಂದು ಶಶಿಧರ್ ಆರಾಧ್ಯ ವಿವರಿಸಿದರು.

ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ ಆಮ್ ಆದ್ಮಿ ಪಕ್ಷವು ಸ್ಥಳೀಯ ರೈತರು,ಪರಿಸರ ಹೋರಾಟಗಾರರು, ಕೆರೆ ತಜ್ಞರು ಹಾಗೂ ನಾಗರಿಕ ಸಂಘಗಳ ಜೊತೆಗೂಡಿ ನಡೆಯುತ್ತಿರುವ ಈ ಹೋರಾಟದಲ್ಲಿ ತಜ್ಞರುಗಳಾದ ಎಂ. ಎನ್. ತಿಪ್ಪೇಸ್ವಾಮಿ , ಕಾತ್ಯಾಯಿನಿ ಚಾಮರಾಜು , ವಿಶ್ವನಾಥ್, ಸಿಂಹಾದ್ರಿ, ರಾಮಪ್ರಸಾದ್ ಸೇರಿದಂತೆ ಅನೇಕ ಹೋರಾಟಗಾರರು, ತಜ್ಞರು ಭಾಗವಹಿಸಲಿದ್ದಾರೆ.

ಮುಂಬರುವ ಹೋರಾಟಗಳ ರೂಪುರೇಷೆಯ ವಿವರಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಬೆಂಗಳೂರನ್ನು ಪ್ರೀತಿಸುವ ಪ್ರತಿಯೊಬ್ಬ ನಾಗರಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಅನಿಲ್ ನಾಚಪ್ಪ, ಪುಟ್ಟಣ್ಣ ಗೌಡ ,ಮೋಹನ್ ರಾಜ್, ಅಂಜನಾ ಗೌಡ, ಜೋಶ್ವ ಸಿಂಟು, ಕಾರ್ತಿಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ತಿಪ್ಪಗೊಂಡನಹಳ್ಳಿ ಜಲಾಶಯ ಉಳಿಸಿ ಹೋರಾಟಕ್ಕೆ ಬೆಂಗಳೂರಿಗರು ಕೈಜೋಡಿಸಿ:ಆಪ್ Read More