ಬಿಬಿಎಂಪಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ-ಆಪ್ ಖಂಡನೆ

ಬೆಂಗಳೂರು: ಬೆಂಗಳೂರು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ ಮಾಡುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಮ್ ಆದ್ಮಿ ಪಾರ್ಟಿ ಕಿಡಿಕಾರಿದೆ.

ಬೆಳಗಾವಿ ವಿಧಾನಸಭೆಯಲ್ಲಿ ಮಂಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ 2025 ರಲ್ಲಿ ಸರ್ಕಾರಕ್ಕೆ ಬೆಂಗಳೂರಿನ 5 ನಗರ ಪಾಲಿಕೆಗಳಿಗೆ ನಾಮ ನಿರ್ದೇಶನ ಮಾಡುವ ಅಧಿಕಾರ ಪಡೆದುಕೊಳ್ಳಲು ಹೊರಟಿರುವುದು ನಿಜಕ್ಕೂ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಕಟುವಾಗಿ ಖಂಡಿಸಿದರು.

ಕಳೆದ ಐದು ವರ್ಷಗಳಿಂದ ಚುನಾವಣೆಗಳನ್ನು ನಡೆಸಲು ಹೆದರಿ ಬೆಂಗಳೂರಿನ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಈಗಾಗಲೇ ನುಂಗಿ ನೀರು ಕುಡಿದಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆಯನ್ನು ಮತ್ತಷ್ಟು ಅವಧಿಯ ಕಾಲ ಮುಂದುವರಿಸಲು ಈ ರೀತಿಯ ಕರಾಳ ಮಸೂದೆಯನ್ನು ಮಂಡಿಸುತ್ತಿದ್ದಾರೆ. ಇದು ಬೆಂಗಳೂರಿಗರಿಗೆ ಮಾಡುತ್ತಿರುವ ಅನ್ಯಾಯ ಎಂದು ಹೇಳಿದರು.
ಬೆಂಗಳೂರಿನ ಜನತೆಗೆ ಈ ರಾಷ್ಟ್ರದ ಸಂವಿಧಾನ ಕೊಡ ಮಾಡಿರುವ ಹಕ್ಕಿನಂತೆ ಚುನಾವಣೆಯನ್ನು ನಡೆಸಿ ತಮ್ಮ ತಮ್ಮ ನಗರ ಪಾಲಿಕೆ ಸದಸ್ಯರುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲ ಅವಕಾಶವನ್ನು ತಪ್ಪಿಸುವುದೇ ಇವರ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರವು ಈ ಮೂಲಕ ಕಾನೂನನ್ನೇ ತಿರುಚಲು ಹೊರಟಿರುವುದನ್ನು ಬೆಂಗಳೂರಿನ ಪ್ರತಿ ಮನೆಮನೆಗಳಿಗೆ ತಿಳಿಸಿ ಸರ್ಕಾರದ ವಿರುದ್ಧ ಆಂದೋಲನವನ್ನು ರೂಪಿಸುತ್ತೇವೆ ಎಂದು ಸೀತಾರಾಮ್ ಗುಂಡಪ್ಪ ತಿಳಿಸಿದರು.

ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರುಗಳನ್ನು ಜೀತದಾಳುಗಳಂತೆ ದುಡಿಸಿಕೊಂಡು ಪಕ್ಷದ ವಿರುದ್ಧ ತಿರುಗಿ ಬೀಳುವ ಸಮಯದಲ್ಲಿ ಇವರೆಲ್ಲರಿಗೂ ಬೆಂಗಳೂರಿನ ಎಲ್ಲಾ ಐದು ಪಾಲಿಕೆಗಳಲ್ಲಿಯ ಆಡಳಿತದಲ್ಲಿ ಮೂಗು ತೂರಿಸಿ, ಭ್ರಷ್ಟ ದುಷ್ಟ ಕೂಟಗಳನ್ನು ತಯಾರು ಮಾಡುವ ಹುನ್ನಾರವೇ ಈ ಮಸೂದೆಯ ಮೂಲ ಉದ್ದೇಶವಾಗಿದೆ. ಆಮ್ ಆದ್ಮಿ ಪಕ್ಷವು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ. ಬೆಂಗಳೂರಿಗರನ್ನು ಒಟ್ಟುಗೂಡಿಸಿ ಈ ಕರಾಳ ಮಸೂದೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಸೀತಾರಾಮ್ ಗುಂಡಪ್ಪ ಎಚ್ಚರಿಸಿದರು.

ಬಿಬಿಎಂಪಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ-ಆಪ್ ಖಂಡನೆ Read More

ಜಿಬಿಎ ಆಡಳಿತದಲ್ಲಿ ಭ್ರಷ್ಟಾಚಾರ ತಡೆಗೆಉಪ ಲೋಕಾಯುಕ್ತರ ನೇಮಿಸಿ:ಆಪ್

ಬೆಂಗಳೂರು: ಜಿಬಿಎ ಆಡಳಿತದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಹಾಗೂ ಪಾರದರ್ಶಕತೆ ತರಲು ವಿಶೇಷ ಉಪ ಲೋಕಾಯುಕ್ತರನ್ನು ನೇಮಿಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಸರ್ಕಾರವು ಈಗಾಗಲೇ ನೂತನವಾಗಿ ರಚಿಸಿರುವ ಜಿಬಿಎ ಆಡಳಿತ ಸೇರಿದಂತೆ ಐದು ನಗರ ಪಾಲಿಕೆಗಳ ಆಡಳಿತದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಹಾಗೂ ಪಾರದರ್ಶಕತೆಯನ್ನು ತರಲು ಪ್ರತ್ಯೇಕವಾಗಿ ಉಪಲೋಕಾಯುಕ್ತರನ್ನು ನೇಮಿಸುವುದು ಸೂಕ್ತ ಎಂದು ಸುದ್ದಿ ಗೋಷ್ಠಿಯಲ್ಲಿ ಪಕ್ಷದ ರಾಜ್ಯಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ
ಒತ್ತಾಯಿಸಿದರು.
ಈ ಹಿಂದಿನ ಬಿಬಿಎಂಪಿ ಆಡಳಿತಾವಧಿಯಲ್ಲಿ ಇತ್ತೀಚಿನ ದಶಕಗಳಲ್ಲಿ ಲಕ್ಷಾಂತರ ಕೋಟಿ ಹಣವನ್ನು ಲೂಟಿ ಮಾಡಲಾಗಿದೆ, ಬಿಡಿಗಾಸು ಸಹ ಚಪ್ತ ಮಾಡಲು ಸಾಧ್ಯವಾಗಿಲ್ಲ ಹಾಗೂ ಯಾರಿಗೂ ಇದುವರೆಗೂ ಶಿಕ್ಷೆ ಆಗಿಲ್ಲ. ಇದೇ ರೀತಿಯ ಭ್ರಷ್ಟ ಆಡಳಿತ ಈಗಿನ ಜಿಬಿಎ ದಲ್ಲಿ ಮುಂದುವರಿದಿದೆ, ಇಲ್ಲಿನ ಭ್ರಷ್ಟ ವ್ಯವಸ್ಥೆಯಿಂದಾಗಿ ಬೆಂಗಳೂರಿಗರು ಎಲ್ಲಾ ವಲಯಗಳಲ್ಲು ಸಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಇಲ್ಲಿನ ಗುತ್ತಿಗೆದಾರರಿಗೆ ಈಗಿರುವ ಕಾನೂನಿನಲ್ಲಿ ತಪ್ಪಿಸಿಕೊಳ್ಳಲು ಸಾಕಷ್ಟು ನೆರವು ಸಿಗುತ್ತಿದೆ. ಗುತ್ತಿಗೆದಾರರನ್ನು ಸಹ ಸರ್ಕಾರಿ ನೌಕರರೆಂದು ಪರಿಗಣಿಸಿ ಅವರ ವಿರುದ್ಧವು ಕಠಿಣ ಕ್ರಮ ತೆಗೆದುಕೊಳ್ಳಲು ಕಾನೂನು ತಿದ್ದುಪಡಿಯನ್ನು ಮಾಡಬೇಕೆಂದು ಒತ್ತಾಯಿಸಿದರು.
ಉಪಲೋಕಾಯುಕ್ತರಿಗೆ ಜಿಬಿಎ ಕೇಂದ್ರ ಕಚೇರಿಯಲ್ಲಿಯೇ ಸಕಲ ವ್ಯವಸ್ಥೆಗಳುಳ್ಳ ಕಚೇರಿಯನ್ನು ನೀಡಬೇಕು. ಬ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆತಂಕ‌ ವ್ಯಕ್ತಪಡಿಸಿದರು.
ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ್ ರಾವ್ ಮಾತನಾಡಿ,ಈಗಿರುವ ಕಾನೂನಿನಲ್ಲಿ ಗುತ್ತಿಗೆದಾರರನ್ನು ನೇರವಾಗಿ ಆರೋಪಿಗಳನ್ನು ಮಾಡಲು ಸಾಧ್ಯವಿಲ್ಲ ಹಾಗಾಗಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಭ್ರಷ್ಟ ಗುತ್ತಿಗೆದಾರರನ್ನು ಕಾನೂನಿನ ಅಂಕುಶಕ್ಕೆ ಒಳಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ , ರಾಜ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.

ಜಿಬಿಎ ಆಡಳಿತದಲ್ಲಿ ಭ್ರಷ್ಟಾಚಾರ ತಡೆಗೆಉಪ ಲೋಕಾಯುಕ್ತರ ನೇಮಿಸಿ:ಆಪ್ Read More

ಅಪರಾಧ ಕೃತ್ಯಗಳ ತಡೆಗಟ್ಟಲು ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಆಪ್ ಆಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಅಪರಾಧ ಕೃತ್ಯಗಳ ಪ್ರಮಾಣ ದಿನೇ ದಿನೇ ಹೆಚ್ಚಾಗಿದ್ದು,ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಇವುಗಳನ್ನು ತಡೆಗಟ್ಟಲು ವಿಶೇಷ ಚರ್ಚೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಈ ಬಗ್ಗೆ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ಲಕ್ಷ್ಮಿಕಾಂತ ರಾವ್ ಮಾತನಾಡಿ ಪ್ರತಿ ದಿವಸ 10 ಪೋಕ್ಸೋ ಕೇಸುಗಳು ದಾಖಲಾಗುತ್ತಿದ್ದರೆ , ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.

ರಾಜ್ಯದಾದ್ಯಂತ ಸೈಬರ್ ಅಪರಾಧ ಕೃತ್ಯಗಳು ಕೂಡಾ ಏಗ್ಗಿಲ್ಲದೆ ನಡೆಯುತ್ತಿದ್ದು ಜನಸಾಮಾನ್ಯನ ದುಡಿಮೆಯ ಹಣ ಕಳ್ಳರ ಪಾಲಾಗುತ್ತಿದೆ. ಕೊರಿಯರ್ ಮತ್ತು ಆನ್ ಲೈನ್ ಬಂಡವಾಡ ಹೂಡಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಸಂಘಟಿತ ಅಪರಾಧಗಳು ದಿನೇ ದಿನೇ ಮುಗಿಲು ಮುಟ್ಟುತ್ತಿದೆ. ಜನಸಾಮಾನ್ಯನ ಹಣವನ್ನು ಮರಳಿ ಪಡೆದುಕೊಳ್ಳಲು ಪೊಲೀಸ್ ಇಲಾಖೆಯಿಂದ ಎಳ್ಳಷ್ಟು ಅನುಕೂಲಗಳು ಸಿಗುತ್ತಿಲ್ಲ. ಸಾಕಷ್ಟು ಪ್ರಭಾವ ಹಾಗೂ ಹಣ ಬಲವಿಲ್ಲದೆ ಯಾವುದೇ ಆರೋಪಿಗಳ ಮೇಲೆ ಎಫ್ಐಆರ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನೇಕ ಅಪರಾಧ ಕೃತ್ಯಗಳಲ್ಲಿ ಪೊಲೀಸರೇ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಂತಹ ಪೊಲೀಸರ ಮೇಲೆ ಯಾವುದೇ ಕ್ರಿಮಿನಲ್ ಮುಖದ್ದಮೆಯನ್ನು ದಾಖಲಿಸದೆ ಕೇವಲ ಇಲಾಖಾ ತನಿಖೆಗೆ ಶಿಫಾರಸು ಮಾಡುತ್ತಿರುವುದರಿಂದ ಪೊಲೀಸ್ ಸಿಬ್ಬಂದಿ ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.

ಪ್ರತಿಯೊಂದು ದೂರಿನಲ್ಲೂ ರಾಜಕಾರಣಿಗಳ ಹಾಗೂ ಅವರ ಬಂಟರುಗಳ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ನಗರದಾದ್ಯಂತ ಕೋಟಿಗಟ್ಟಲೆ ಹಣ ಸುರಿದು ವರ್ಗಾವಣೆ ಮಾಡಿಸಿಕೊಂಡು ಬಂದ ಅಧಿಕಾರಿಗಳಿಂದ ಯಾವುದೇ ಅಪರಾಧ ಕೃತ್ಯಗಳು ಹಾಗೂ ಶಿಕ್ಷೆಗಳು ತಕ್ಕ ಪ್ರಮಾಣದಲ್ಲಿ ಆಗದೆ ಪ್ರತಿಯೊಂದು ಪೊಲೀಸ್ ಠಾಣೆಗಳು ಸಹ ಪ್ರತಿ ದಿವಸ ಲಕ್ಷಾಂತರ ರೂಪಾಯಿಗಳನ್ನು ದುಡಿಯುವ ಎಟಿಎಂ ಗಳಾಗಿ ಪರಿವರ್ತನೆ ಆಗುತ್ತಿದೆ ಎಂದು ಕಿಡಿಕಾರಿದರು.

ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ರಸ್ತೆಯಲ್ಲಿ ಕಾಣಿಸಿಕೊಳ್ಳದೆ ತಮ್ಮ ವೃತ್ತಿಪರತೆಯಲ್ಲಿ ವಿಫಲರಾಗಿರುವ ಕಾರಣದಿಂದ ಅತಿಯಾದ ಸಂಚಾರ ಸಮಸ್ಯೆ ಎದುರಾಗುತ್ತಿದೆ.

ಹಗಲಲ್ಲೇ ಬ್ಯಾಂಕ್ ರಾಬರಿಗಳು, ದೊಂಬಿ ಗಲಾಟೆಗಳು, ಗಣೇಶ ವಿಸರ್ಜನೆ ಹೆಸರಿನಲ್ಲಿ ಮೂಲಭೂತವಾದಿಗಳ ಕೋಮು ಪ್ರಚೋದಿತ ವ್ಯವಸ್ಥಿತ ಶಾಂತಿಭಂಗ ಕೃತ್ಯಗಳು ನಡೆಯುತ್ತಿದ್ದು, ತಹಬದಿಗೆ ತರಲು ಗೃಹ ಇಲಾಖೆ ಸಂಪೂರ್ಣ ವಿಫಲಗೊಂಡಿದ್ದು ಗೃಹ ಸಚಿವರು ಪ್ರತಿಯೊಂದು ಹಂತದಲ್ಲಿಯೂ ವೈಫಲ್ಯತೆಯನ್ನು ಕಾಣುತ್ತಿದ್ದಾರೆ. ಈ ಬಗ್ಗೆ ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಬೇಕು ಎಂದು ಲಕ್ಷ್ಮಿಕಾಂತ ರಾವ್ ಆಗ್ರಹಿಸಿದರು.

ಅಪರಾಧ ಕೃತ್ಯಗಳ ತಡೆಗಟ್ಟಲು ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಆಪ್ ಆಗ್ರಹ Read More

ಆಡಳಿತದಲ್ಲಿನ ಭ್ರಷ್ಟ ವ್ಯವಸ್ಥೆಯ ಗ್ರಹಣ ತೊಲಗಿಸಲು ಕನ್ನಡಿಗರು ಕೈಜೋಡಿಸಿ:ಆಪ್

ಬೆಂಗಳೂರು: ಬೆಂಗಳೂರಿನಲ್ಲಿರುವ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ ಹಾಗೂ 14ನೇ ವರ್ಷದ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ವೇಳೆ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ಆದ್ಮಿ ಪಕ್ಷವು ಕೇವಲ ರಾಜಕೀಯ ಸಂಘಟನೆಯಾಗಿರದೇ ಒಂದು ರಾಜಕೀಯ ಆಂದೋಲನ ವಾಗಿದೆ, ಆಡಳಿತದಲ್ಲಿರುವ ಭ್ರಷ್ಟ ವ್ಯವಸ್ಥೆಗೆ ಹಿಡಿದಿರುವ ಗ್ರಹಣವನ್ನು ಹೋಗಲಾಡಿಸಲು ಕನ್ನಡಿಗರೆಲ್ಲರೂ ಒಂದಾಗಿ ಪಕ್ಷದೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ ಮಾತನಾಡಿ ಪರಂಪರಾನುಗತ ಪಕ್ಷಗಳ ಕುಟುಂಬ ರಾಜಕಾರಣ, ಸೃಜನ ಪಕ್ಷಪಾತ, ರಾಜಕೀಯದ ವ್ಯಾಪಾರಿಕರಣ ಇವೆಲ್ಲವನ್ನೂ ಮುಲೋಚ್ಚಾಟನೆ ಮಾಡಲು ಪಕ್ಷದೊಂದಿಗೆ ಎಲ್ಲರೂ ಕೈಜೋಡಿಸಬೇಕು. ನಮ್ಮೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ ಸಾಧನೆ ಕನಸು ಇದೆ. ಇವೆಲ್ಲವನ್ನೂ ಕನ್ನಡಿಗರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಅಧಿಕಾರಯುತ ರಾಜಕಾರಣದಲ್ಲಿ ಜನಸಾಮಾನ್ಯನು ಭಾಗವಹಿಸಿದಾಗ ಮಾತ್ರ ಪರಿವರ್ತನೆ ಸಾಧ್ಯವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅನೇಕ ನಾಯಕರುಗಳು ಪಕ್ಷಕ್ಕೆ ಸೇರ್ಪಡೆಗೊಂಡರು.
ಅವರುಗಳಲ್ಲಿ ಪ್ರಮುಖವಾಗಿ ಖಾಸಗಿ ವಾಹಿನಿಯ ಮಾಜಿ ನಿರ್ದೇಶಕಿ , ಪ್ರಾಣಿ ರಕ್ಷಣಾ ಸಂಘದ ಮಧುಮಿತ ನಟರಾಜನ್, ದಲಿತ ಸಂಘರ್ಷ ಸಮಿತಿಯ ಮುಖಂಡರುಗಳಾದ ನಂಜಪ್ಪ, ಚಂದ್ರಪ್ಪ, ರಾಘವೇಂದ್ರ, ಶಿವಸೇನೆ ಪಕ್ಷದ ನಾಯಕ ಮೋಹನ್ ಹಾಗೂ ರವಿ ಅಪಾರ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರ್ಪಡೆಗೊಂಡರು.

ಸಂಭ್ರಮಾಚರಣೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹ್ವಾನಿ, ಲಕ್ಷ್ಮಿಕಾಂತ್ ರಾವ್, ಡಾ. ಸತೀಶ್ ಕುಮಾರ್, ಉಷಾ ಮೋಹನ್, ಸುಷ್ಮಾ ವೀರ್, ಅಶ್ವಿನ್ ಶೆಟ್ಟಿ, ಜಗದೀಶ್ ವಿ ಸದಂ, ರುದ್ರಯ್ಯ ನವಲಿ ಮಠ ಸೇರಿದಂತೆ ಅನೇಕ ಪಕ್ಷದ ಮುಖಂಡರುಗಳು ಪಾಲ್ಗೊಂಡಿದ್ದರು.

ಆಡಳಿತದಲ್ಲಿನ ಭ್ರಷ್ಟ ವ್ಯವಸ್ಥೆಯ ಗ್ರಹಣ ತೊಲಗಿಸಲು ಕನ್ನಡಿಗರು ಕೈಜೋಡಿಸಿ:ಆಪ್ Read More

ನ.26 ರಂದು ಆಮ್ ಆದ್ಮಿ ಪಕ್ಷದ 14ನೇ ಸಂಸ್ಥಾಪನ ದಿನಾಚರಣೆ

ಬೆಂಗಳೂರು: ಆಮ್ ಆದ್ಮಿ ಪಕ್ಷದ 14ನೇ ಸಂಸ್ಥಾಪನಾ ದಿನಾಚರಣೆಯನ್ನು ನ. 26 ರಂದು ಆಚರಿಸಲಾಗುತ್ತಿದೆ.

ಈ‌ ಕುರಿತು ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಮಾತನಾಡಿ,ಸಂಸ್ಥಾಪನಾ ದಿನಾಚರಣೆಯನ್ನು
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಬೆಂಗಳೂರಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಡಗರದಿಂದ ಆಚರಿಸಲಾಗುವುದೆಂದು ತಿಳಿಸಿದರು.

ದೇಶದಲ್ಲಿ ಅವ್ಯಾಹತವಾಗಿ ಬೇರು ಬಿಟ್ಟಿರುವ ಭ್ರಷ್ಟ ಆಡಳಿತ ವ್ಯವಸ್ಥೆ, ಪಾರಂಪರಿಕ ಪಕ್ಷಗಳ ಕುಟುಂಬ ರಾಜಕಾರಣ , ಸ್ವಜನ ಪಕ್ಷಪಾತ, ಜನಸಾಮಾನ್ಯರಿಗೆ ಮೂಲಭೂತ ಹಕ್ಕುಗಳ ನಿರಾಕರಣೆ ಇವುಗಳ ವಿರುದ್ಧ ಕಳೆದ 13 ವರ್ಷಗಳ ಹಿಂದೆ ಉದಯಿಸಿದ ಆಮ್ ಆದ್ಮಿ ಪಕ್ಷವು ಕೇವಲ ರಾಜಕೀಯ ಪಕ್ಷವಾಗಿರದೆ ಜನಪರ ರಾಜಕೀಯ ಆಂದೋಲನವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬ ಜನಸಾಮಾನ್ಯನು ಸಹ ರಾಜಕೀಯ ಹಕ್ಕುಗಳನ್ನು ಪಡೆಯಬೇಕೆಂಬುದೇ ಪಕ್ಷದ ಹೆಗ್ಗುರಿಯಾಗಿದೆ. ಜನಸಾಮಾನ್ಯನಿಂದಲೇ ಜನಸಾಮಾನ್ಯನ ಮೂಲಭೂತ ಸಮಸ್ಯೆಗಳೆಲ್ಲ ಪರಿಹಾರ ಆಗಬೇಕೆಂಬುದು ಪಕ್ಷದ ಆಶಯವಾಗಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ನಮ್ಮ ಜನಪ್ರಿಯ ನಾಯಕ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಪಕ್ಷವು ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಅಧಿಕಾರವನ್ನು ಸ್ಥಾಪಿಸಿ ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಕ್ರಾಂತಿಕಾರಕ ಮಾರ್ಪಾಡುಗಳನ್ನು ಮಾಡಿರುವುದು ನಮ್ಮ ಪಕ್ಷದ ಪ್ರಮುಖ ಸಾಧನೆಯಾಗಿದೆ ಎಂದು ವಿವರಿಸಿದರು.

ಮುಂಬರುವ ದಿವಸಗಳಲ್ಲಿ ಗುಜರಾತ್, ಗೋವಾ, ಕರ್ನಾಟಕ , ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪಕ್ಷವು ಆಡಳಿತವನ್ನು ಸ್ಥಾಪಿಸುವುದರಲ್ಲಿ ಸಂಘಟನಾತ್ಮಕವಾಗಿ ಮುನ್ನಡೆಯನ್ನು ಸಾಧಿಸುತ್ತಿದೆ.

ಮುಂಬರುವ ದಿವಸಗಳಲ್ಲಿ ಪರಂಪರಾನುಗತ ಪಕ್ಷಗಳ ಸ್ಥಾಪಿತ ಹಿತಾಸಕ್ತಿಗಳನ್ನು ಮುರಿದು ದೇಶದ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ವ್ಯವಸ್ಥೆಯನ್ನು ಮರು ಸ್ಥಾಪಿಸುವುದೇ ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದು ಜಗದೀಶ್ ವಿ.ಸದಂ ತಿಳಿಸಿದರು.

ನಂತರ ಮಾತನಾಡಿದ ಪಕ್ಷದ ರಾಜ್ಯ ಖಜಾಂಚಿ ಪ್ರಕಾಶ್ ನೆಡುನಂಗಡಿ ಅವರು 14ನೇ ವರ್ಷದ ಸಂಸ್ಥಾಪನಾ ದಿನಾಚರಣೆ ನಿಮಿತ್ತ ರಾಜ್ಯದಲ್ಲಿಯೂ ಎಲ್ಲಾ ಕಡೆ ವಿಜೃಂಭಣೆಯಿಂದ ಆಚರಿಸಿ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಾದರಿಯಾಗಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷ ಲಕ್ಷ್ಮಿಕಾಂತ ರಾವ್ ಉಪಸ್ಥಿತರಿದ್ದರು.

ನ.26 ರಂದು ಆಮ್ ಆದ್ಮಿ ಪಕ್ಷದ 14ನೇ ಸಂಸ್ಥಾಪನ ದಿನಾಚರಣೆ Read More

ಗೃಹ ಸಚಿವರ ರಾಜೀನಾಮೆಗೆ ಆಪ್ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಎಲ್ಲೆಂದರಲ್ಲಿ ಅವ್ಯಾಹತವಾಗಿ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದು ಜನತೆ ಶಾಂತಿಯಿಂದ ಜೀವಿಸಲು ಸಾಧ್ಯವಾಗುತ್ತಿಲ್ಲ ಎಂದು ‌ಆಮ್ ಆದ್ಮಿ ಪಕ್ಷದ‌ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿಕಾಂತ ರಾವ್ ಆತಂಕ ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಕ್ಷದ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಹಾಡಹಗಲೇ ಸಿನಿಮಿಯ ರೀತಿಯಲ್ಲಿ ಕೋಟ್ಯಾಂತರ ಹಣವನ್ನು ಲೂಟಿ ಮಾಡುವಂತ ಪ್ರಕರಣಗಳು ನಡೆಯುತ್ತಿವೆ. ಮಹಿಳೆ ಮತ್ತು ಮಕ್ಕಳ ಮೇಲೆ ಮೇಲೆ ನಿರಂತರ ಅತ್ಯಾಚಾರ, ದೌರ್ಜನ್ಯ ನಡೆಯುತ್ತಲೇ ಇವೆ.ಇದರ ಹೊಣೆ ಹೊತ್ತು ಗೃಹ‌ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕೋಟ್ಯಾಂತರ ರೂಪಾಯಿಗಳ ಸೈಬರ್ ಅಪರಾಧಗಳು, ಕಳ್ಳತನ ಕೊಲೆ , ದೊಂಬಿ, ಕೋಮು ದುಳ್ಳುರಿ ನಡೆಯುತ್ತಿದ್ದರೂ ಗೃಹ ಸಚಿವ ಜಿ ಪರಮೇಶ್ವರ್ ಉಡಾಫೆ ಉತ್ತರಗಳನ್ನು ನೀಡುತ್ತಾ ನಿರಂತರ ವೈಫಲ್ಯವನ್ನು ಹೊಂದುತ್ತಿದ್ದಾರೆ ಎಂದು ಲಕ್ಷ್ಮಿಕಾಂತ ರಾವ್
ಟೀಕಿಸಿದರು.

ಗೃಹ ಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಎಳ್ಳಷ್ಟೂ ಹತೋಟಿ ಇಲ್ಲದಂತಾಗಿದೆ. ಕೂಡಲೇ ಇಂತಹ ನಿರ್ಲಕ್ಷ್ಯ,ಬೇಜವಾಬ್ದಾರಿ ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಮುಖ್ಯ ಮಂತ್ರಿಗಳನ್ನು ಆಗ್ರಹಿಸಿದರು.

ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೆವು,ಆದರೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಇದು ಹೀಗೇ ಮುಂದುವರೆದರೆ ಮುಖ್ಯಮಂತ್ರಿಗಳ ಮನೆ ಮುಂದೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ ಎಂದು ಲಕ್ಷ್ಮಿಕಾಂತ ರಾವ್ ಎಚ್ಚರಿಸಿದರು.

ಗೃಹ ಸಚಿವರ ರಾಜೀನಾಮೆಗೆ ಆಪ್ ಆಗ್ರಹ Read More

ಆಮ್ ಆದ್ಮಿ ಪಕ್ಷದ ಜಿಬಿಎ ಚುನಾವಣಾ ಸಮಿತಿ ಘೋಷಣೆ

ಬೆಂಗಳೂರು: ಆಮ್ ಆದ್ಮಿ ಪಕ್ಷದ ಜಿಬಿಎ ಚುನಾವಣಾ ಸಮಿತಿಯನ್ನು ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಘೋಷಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಬಿಎ ಚುನಾವಣಾ ಸಮಿತಿಯನ್ನು ಮುಖ್ಯಮಂತ್ರಿ ಚಂದ್ರು ಘೋಷಿಸಿದರು.

ನಂತರ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಮೂರು ಪಕ್ಷಗಳು ಬೆಂಗಳೂರು ಪಾಲಿಕೆ ಚುನಾವಣೆಗಳನ್ನು ನಡೆಸದೆ,ವಾರ್ಡ್ ಮಟ್ಟದಲ್ಲಿ
ಜನಪ್ರತಿನಿಧಿಗಳಿಲ್ಲದೆ ಬೆಂಗಳೂರಿನ ಪರಿಸ್ಥಿತಿ ಹೇಳ ತೀರದಾಗಿದೆ‌ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನ ಯಾವೊಬ್ಬ ಶಾಸಕರಿಗೂ ಈ ಬಗ್ಗೆ ಕಾಳಜಿ ಇಲ್ಲ, ವಿಶ್ವಮಟ್ಟದಲ್ಲಿ ಸಿಲಿಕಾನ್ ನಗರಿ ಎಂಬ ಖ್ಯಾತಿ ಹೊಂದಿದ್ದ ಬೆಂಗಳೂರು ಇಂದು ಗಾರ್ಬೇಜ್ ನಗರವಾಗಿ ಪರಿವರ್ತಿತವಾಗಿರುವುದು ದುರಂತ ಎಂದು ‌ಹೇಳಿದರು.

ಕಳೆದ ಕೆಲ ದಶಕಗಳಿಂದ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದಾಗಿ ನಗರದ ಮೂಲಭೂತ ಸೌಕರ್ಯಗಳ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳೆಲ್ಲವೂ ಅತ್ಯಂತ ಕಳಪೆ ಮಟ್ಟದ್ದಾಗಿದ್ದು,ನಾಗರಿಕರು ಪ್ರತಿ ದಿವಸ ಪರಿತಪಿಸುವಂತಾಗಿದೆ ಎಂದು ಹೇಳಿದರು.

ಸಾವಿರಾರು ಕೋಟಿ ರೂಪಾಯಿಗಳು ಭ್ರಷ್ಟಾಚಾರಿಗಳ ಪಾಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿ ದಿವಸ ಪಾಲಿಕೆಯ ಕರ್ಮಕಾಂಡಗಳು ಬಯಲಾಗುತ್ತಿದ್ದರೂ ಸಹ ಯಾರಿಗೂ ಸಹ ಕಠಿಣ ಶಿಕ್ಷೆಯಾಗುತ್ತಿಲ್ಲ” ಎಂದು ಮುಖ್ಯಮಂತ್ರಿ ಚಂದ್ರು ಕಿಡಿ ಕಾರಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಹಿರಿಮೆ, ಗರಿಮೆ, ಗೌರವವನ್ನು ಮತ್ತೆ ಮರು ಸ್ಥಾಪಿಸುವ ಸುಸಂದರ್ಭ ಇಂದು ಬಂದಿದೆ ಎಂದು ತಿಳಿಸಿದರು.

ನಾಗರಿಕರೆಲ್ಲರೂ ಒಂದಾಗಿ ಪ್ರಾಮಾಣಿಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮುಂಬರುವ ಚುನಾವಣೆಯಲ್ಲಿ ಅಯೋಗ್ಯರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಮನವಿ ಮಾಡಿದರು.

ಆಮ್ ಆದ್ಮಿ ಪಕ್ಷವು ಬೆಂಗಳೂರಿನಲ್ಲಿಯೇ ಹುಟ್ಟಿ ಇಂದು ಅತ್ಯಂತ ಸಂಘಟನಾತ್ಮಕವಾಗಿ ಬೆಳೆದಿದೆ. ಪಕ್ಷದ ಮೂಲ ಸಿದ್ದಾಂತವಾಗಿರುವ ಪ್ರತಿಯೊಬ್ಬರಿಗೂ ವಿಶ್ವ ಗುಣಮಟ್ಟದ ಸರ್ಕಾರಿ ಶಿಕ್ಷಣ ವ್ಯವಸ್ಥೆ, ಆರೋಗ್ಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಬೆಂಗಳೂರು ನಗರದಲ್ಲಿಯೂ ಅಧಿಕಾರ ಸ್ಥಾಪಿಸುವ ಮೂಲಕ ತಲುಪಿಸುವುದೇ ನಮ್ಮ ಮುಂದಿನ ಗುರಿಯಾಗಿದೆ ಎಂದು ತಿಳಿಸಿದರು.

ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ಈಗಾಗಲೇ ಬೆಂಗಳೂರು ನಗರದ ವಾರ್ಡ್ ಮಟ್ಟದಲ್ಲಿ ನಮ್ಮ ಸಂಘಟನೆ ಸದೃಢವಾಗಿದೆ,ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಈಗಾಗಲೇ ಹಲವು ವರ್ಷಗಳಿಂದ ಕಾರ್ಯೋನ್ಮುಖರಾಗಿ ಜನತೆಯ ಅಶೋತ್ತರಗಳಿಗೆ ಸ್ಪಂದಿಸುತ್ತಿದ್ದಾರೆ. ನಗರದ ಅನೇಕ ಸಾಮಾಜಿಕ ಕಾರ್ಯಕರ್ತರು ಕೂಡಾ ಪಕ್ಷದೊಂದಿಗೆ ಜೋಡಿಸಿಕೊಳ್ಳುತ್ತಿದ್ದಾರೆ. ಮುಂಬರುವ ಪಾಲಿಕೆಗಳ ಚುನಾವಣೆಯಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರ ಪಡೆಯುವ ಮೂಲಕ ಬೆಂಗಳೂರು ನಗರದ ಆಮೂಲಾಗ್ರ ಸುಧಾರಣೆಯನ್ನು ಮಾಡುವುದೇ ನಮ್ಮ ಹೆಗ್ಗುರಿ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿಕಾಂತರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ, ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಆಮ್ ಆದ್ಮಿ ಪಕ್ಷದ ಜಿಬಿಎ ಚುನಾವಣಾ ಸಮಿತಿ ಘೋಷಣೆ Read More

ಜನತೆಯನ್ನು ಕುಡುಕರಾಗಿಸುವ ಸರ್ಕಾರದ ನೀತಿ ಒಪ್ಪಲಾಗದು:ಮುಖ್ಯ ಮಂತ್ರಿ ಚಂದ್ರು

ಬೆಂಗಳೂರು: ಜನತೆಯನ್ನು ಕುಡುಕರನ್ನಾಗಿಸುವ ಸರ್ಕಾರದ ನೀತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಮ್ ಆದ್ಮಿ ಪಕ್ಷದ‌ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಮಧ್ಯ ಹಾಗೂ ಡ್ರಗ್ಸ್ ಹಾವಳಿಯಿಂದಾಗಿ ಯುವಜನತೆ ಮತ್ತು ಸಮಾಜ ನೈತಿಕ ಅಧಃಪತನಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಸರ್ಕಾರವು ಮತ್ತಷ್ಟು ಮಧ್ಯದ ಅಂಗಡಿಗಳನ್ನು ತೆರೆಯಲು ಅನುಮತಿಯನ್ನು ನೀಡುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಡಾ. ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.

ಪಕ್ಕದ ತಮಿಳುನಾಡು, ಕೇರಳ ಇನ್ನಿತರ ರಾಜ್ಯಗಳಲ್ಲಿ ಊರಾಚೆ ಮಧ್ಯದ ಅಂಗಡಿಗಳು ಇವೆ. ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಂಪೂರ್ಣ ಮದ್ಯಪಾನ ನಿಷಿದ್ಧವಾಗಿದೆ.ಈ ಹಿಂದೆ ಬಂಗಾರಪ್ಪ ಸರ್ಕಾರದ ಅವಧಿಯಲ್ಲಿ ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಲೈಸೆನ್ಸ್ ಗಳನ್ನು ನೀಡಿದ ಪರಿಣಾಮದಿಂದ ಈಗಾಗಲೇ ಸಮಾಜವು ದುಷ್ಪರಿಣಾಮವನ್ನು ಎದುರಿಸುವಂತಾಗಿದೆ ಎಂದು ಚಂದ್ರು‌ ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರವು ಯುವಜನತೆಯನ್ನು ನಶೆ ಮುಕ್ತರನ್ನಾಗಿಸಲು ಅಲ್ಲಲ್ಲಿ ಕೇಂದ್ರಗಳನ್ನು ತೆರೆಯುವುದನ್ನು ಬಿಟ್ಟು ಸರ್ಕಾರವೇ ಎಂ ಎಸ್ ಐ ಎಲ್ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಮಧ್ಯದ ಅಂಗಡಿಗಳನ್ನು ತೆರೆದು ಜನತೆಯನ್ನು ಮತ್ತಷ್ಟು ಕುಡುಕರನ್ನಾಗಿಸುತ್ತಿದೆ. ಅಲ್ಲದೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ವೈಫಲ್ಯಗಳಿಂದಾಗಿ ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಮಧ್ಯ ರಾಜಾರೋಶವಾಗಿ ಸರಬರಾಜಾಗುತ್ತಿದೆ. ಇವುಗಳನ್ನು ತಡೆಗಟ್ಟುವುದನ್ನು ಬಿಟ್ಟು ಮುಖ್ಯಮಂತ್ರಿಗಳೇ ಮುಂದೆ ನಿಂತು ತಮ್ಮ ಕಮಿಷನ್ ಧನದಾಹದಿಂದ ಮತ್ತಷ್ಟು ಲೈಸೆನ್ಸ್ ಗಳನ್ನು ವಿತರಿಸಲು ಹೊರಟಿರುವುದನ್ನು ರಾಜ್ಯದ ಮಹಿಳೆಯರು ಸೇರಿದಂತೆ ಯಾರು ಸಹ ಒಪ್ಪುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸಮಾಜವನ್ನು ಹಾಳು ಗೆಡವಿ ಅಬಕಾರಿ ಆದಾಯದಿಂದಲೇ ಸರ್ಕಾರವನ್ನು ನಡೆಸಲು ಹೊರಟಿರುವ ಮುಖ್ಯಮಂತ್ರಿಗಳ ಆರ್ಥಿಕ ನೀತಿಯ ವಿರುದ್ಧ ಆಮ್ ಆದ್ಮಿ ಪಕ್ಷವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.

ಜನತೆಯನ್ನು ಕುಡುಕರಾಗಿಸುವ ಸರ್ಕಾರದ ನೀತಿ ಒಪ್ಪಲಾಗದು:ಮುಖ್ಯ ಮಂತ್ರಿ ಚಂದ್ರು Read More

ಕಬ್ಬು ಬೆಳೆಗಾರರ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಪೂರ್ಣ ಬೆಂಬಲ-ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟಕ್ಕೆ
ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರವು ಕಬ್ಬು ಬೆಳೆಗಾರರಿಗೆ ನಿಗದಿ ಮಾಡಿರುವ 3,550 ರೂ.ಗಳ ಎಫ್. ಆರ್. ಪಿ ದರವನ್ನು ನೀಡಲು ಹಿಂಜರಿಯುತ್ತಿರುವ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಕ್ರಮವನ್ನು ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆ ಮಾಲೀಕರುಗಳ ಪರವಾದ ಧೋರಣೆಯನ್ನು ನಮ್ಮ ಪಕ್ಷ ಸಂಪೂರ್ಣ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈಗಾಗಲೇ ಘೋಷಿಸಿರುವ ಎಫ್‌ಆರ್‌ಪಿ ದರವು ಅವೈಜ್ಞಾನಿಕವಾಗಿದೆ,ಇದು ಕಬ್ಬು ಬೆಳೆದಿರುವ ರೈತರಿಗೆ ಸಾಕಷ್ಟು ನಷ್ಟವಾಗುತ್ತದೆ. ಇದನ್ನು ಪರಿಷ್ಕರಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ರಾಜ್ಯದ ಕಾರ್ಖಾನೆ ಮಾಲೀಕರುಗಳೆಲ್ಲರೂ ಮೂರು ಪಕ್ಷಗಳ ಪ್ರಮುಖರು ಮಂತ್ರಿಗಳು, ಶಾಸಕರು, ಸಂಸದರುಗಳೇ ಆಗಿದ್ದಾರೆ. ಇವರ ಒತ್ತಡಕ್ಕೆ ಸಂಪೂರ್ಣ ಶರಣಾಗಿರುವ ರಾಜ್ಯ ಸರ್ಕಾರವು ಕೇಂದ್ರ ನಿಗದಿಪಡಿಸಿರುವ ದರವನ್ನು ಪರಿಷ್ಕರಿಸಿಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ಕೇಂದ್ರವು ನಿಗದಿಪಡಿಸಿರುವ ದರ ಸಹ ನೀಡಲು ಒಪ್ಪಿಕೊಳ್ಳದ ಮಾಲೀಕರುಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ದುರುಳ ನೀತಿಯನ್ನು ಆಮ್ ಆದ್ಮಿ ಪಕ್ಷವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖ್ಯ ಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳಾದಿಯಾಗಿ ಸಕ್ಕರೆ ಸಚಿವರು ಹಾಗೂ ಕಬ್ಬು ನಿಯಂತ್ರಣ ಪ್ರಾಧಿಕಾರ ಸಂಪೂರ್ಣ ಕಾರ್ಖಾನೆಗಳ ಮಾಲೀಕರುಗಳ ಪರವಾದ ಧೋರಣೆಯನ್ನು ತಳೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನಾಚಿಕೆ ಇಲ್ಲದ ರಾಜ್ಯದ ಬಿಜೆಪಿ ನಾಯಕರುಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡವನ್ನು ತರದೆ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ಕೇವಲ ಪ್ರಚಾರಕ್ಕಾಗಿ ಎಂದು ಮುಖ್ಯಮಂತ್ರಿ ಚಂದ್ರು ಟೀಕಿಸಿದರು.

ಮಹಾರಾಷ್ಟ್ರ, ತಮಿಳುನಾಡು ರಾಜ್ಯದ ಕಾರ್ಖಾನೆಗಳು ಕೇಂದ್ರದ ಎಫ್ ಆರ್ ಪಿ ದರದಲ್ಲಿ ಲಕ್ಷಾಂತರ ಟನ್ ಬೆಳೆದಿರುವ ಕಬ್ಬನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೂ ಸಹ ನಷ್ಟವಾಗುತ್ತಿದೆ. ಆಮ್ ಆದ್ಮಿ ಪಕ್ಷವು ಜಯ ಸಿಕ್ಕುವವರೆಗೂ ರೈತರ ಜೊತೆಗಿದ್ದು ಅವರ ಹೋರಾಟದಲ್ಲಿ ಸಂಪೂರ್ಣ ಭಾಗವಹಿಸುತ್ತೇವೆ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ಕಬ್ಬು ಬೆಳೆಗಾರರ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಪೂರ್ಣ ಬೆಂಬಲ-ಮುಖ್ಯಮಂತ್ರಿ ಚಂದ್ರು Read More

ಡಿಕೆಶಿ ದುರ್ವತ್ರನೆಯಿಂದ ಬೆಂಗಳೂರು ಐಟಿ ಸಿಟಿ ಪಟ್ಟ ಕಳೆದುಕೊಳ್ಳಲಿದೆ:ಆಪ್ ಆರೋಪ

ಬೆಂಗಳೂರು: ಡಿಕೆಶಿ ದುರ್ವತ್ರನೆಯಿಂದ ಬೆಂಗಳೂರು ನಗರ ಐಟಿ ಸಿಟಿ ಪಟ್ಟ ಕಳೆದುಕೊಳ್ಳಲಿದೆ ಎಂದು ‌ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಬಗ್ಗೆ ಡಿ.ಕೆ. ಶಿವಕುಮಾರ್ ವಾಗ್ದಾಳಿಯ ಬಗ್ಗೆ ಆಮ್ ಆದ್ಮ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿದ್ದು, ಬೆಂಗಳೂರು ಸಿಲಿಕಾನ್ ನಗರ ವೆಂದು ಖ್ಯಾತಿಗೊಳ್ಳಲು ಇಲ್ಲಿನ ಐಟಿ ಉದ್ಯಮಿಗಳ ಕೊಡುಗೆ ಸಾಕಷ್ಟು ಮಟ್ಟದಲ್ಲಿದೆ ಎಂದು ಹೇಳಿದರು.

ದೇಶಕ್ಕೆ ಎರಡನೇ ಅತಿ ದೊಡ್ಡ ತೆರಿಗೆಯನ್ನು ನೀಡುವ ಹಾಗೂ ದೇಶದ ಆರ್ಥಿಕ ಇಂಜಿನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಐಟಿ ಉದ್ಯಮಗಳು, ಇಲ್ಲಿನ ಉದ್ಯೋಗಿಗಳು ಹಾಗೂ ಅವರಿಗೆ ಪೂರಕವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಅನೇಕ ಕಂಪನಿಗಳು ಪ್ರಮುಖ ಕಾರಣವಾಗಿವೆ.

ಈ ಕನಿಷ್ಠ ಜ್ಞಾನ ಇಲ್ಲದ ಬೆಂಗಳೂರು ನಗರಾಭಿವೃದ್ಧಿಯ ಹೊಣೆಯನ್ನು ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಇತ್ತೀಚಿನ ದುರ್ವತ್ರನಕಾರಿ ಹೇಳಿಕೆಗಳಿಂದಾಗಿ ಏಷ್ಯಾದ ಅತಿ ದೊಡ್ಡ ಹೂಡಿಕೆಯಾದ ಗೂಗಲ್ ಸಂಸ್ಥೆಯ ಕೃತಕ ಬುದ್ಧಿಮತ್ತೆಯ ಡೇಟಾ ಮೈನಿಂಗ್ ಕೇಂದ್ರವು ವಿಶಾಖಪಟ್ಟಣದ ಪಾಲಾಗಿದೆ. ಈ ರೀತಿಯ ನಡೆಯಿಂದಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕುಂಠಿತಗೊಳ್ಳುವುದು ನಿಸ್ಸಂದೇಹ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರಿನ ಮೂಲಭೂತ ಸೌಕರ್ಯದ ನೆಪದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಕೊಳ್ಳೆಹೊಡೆಯುವ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಇತ್ತೀಚೆಗೆ ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪ ಮಾಡಿಕೊಂಡೆ ಬಂದ ಕಾಂಗ್ರೆಸ್ ಪಕ್ಷವು ಸಹ ಯಾವುದೇ ತನಿಖೆಯನ್ನು ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡುವುದನ್ನು ಬಿಟ್ಟು ತಾವೇ 60% ಕಮಿಷನ್ ದಂಧೆಗೆ ಇಳಿದಿರುವುದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣ ಎಂದು ಆರೋಪಿಸಿದರು.

ಇಂತಹ ಸಂದರ್ಭದಲ್ಲಿ ಡಿಕೆಶಿ ಯ ದುರಹಂಕಾರಿ ಹೇಳಿಕೆಗಳು ಇಲ್ಲಿನ ಐಟಿ ಉದ್ಯಮಿಗಳು ಬೆಂಗಳೂರನ್ನು ಬಿಡುವಂತೆ ಪ್ರಚೋದಿಸುತ್ತದೆ. ಉದ್ಯಮಿಗಳಿಗೆ ಪೂರಕವಾದಂತಹ ಉತ್ತಮ ರಸ್ತೆ, ನೀರು, ಒಳಚರಂಡಿ, ಸಂಚಾರ ವ್ಯವಸ್ಥೆಯಂತಹ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವುದನ್ನು ಬಿಟ್ಟು ಪ್ರತಿದಿನವೂ ಈ ರೀತಿಯ ಅಹಂಕಾರದ ಮಾತುಗಳನ್ನು ಬೆಂಗಳೂರಿಗರು ಸಹಿಸಲು ಸಾಧ್ಯವಿಲ್ಲ, ಮುಖ್ಯಮಂತ್ರಿಗಳು ಡಿಕೆಶಿ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸೀತಾರಾಮ್ ಗುಂಡಪ್ಪ ಅಗ್ರಹಿಸಿದರು.

ಡಿಕೆಶಿ ದುರ್ವತ್ರನೆಯಿಂದ ಬೆಂಗಳೂರು ಐಟಿ ಸಿಟಿ ಪಟ್ಟ ಕಳೆದುಕೊಳ್ಳಲಿದೆ:ಆಪ್ ಆರೋಪ Read More