ಮೈಸೂರು: ಮೈಕ್ರೋ ಫೈನಾನ್ಸ್ ಪ್ರಕರಣಗಳು ಹಾಗು ಸಂಭವಿಸುತ್ತಿರುವ ಸಾವುಗಳು ಸರ್ಕಾರಿ ಕಾರ್ಯಕ್ರಮಗಳ ವೈಫಲ್ಯಕ್ಕೆ ಸಾಕ್ಷಿಯಾಗಿವೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಪ್ರಕರಣಗಳು ಸೃಷ್ಟಿಸುತ್ತಿರುವ ತಲ್ಲಣಗಳು ಒಂದೆರಡಲ್ಲ, ಅನೇಕ ಸಾವು ನೋವುಗಳು ಆಗುತ್ತಿವೆ. ಸರ್ಕಾರಗಳಿಂದ ಅನುಷ್ಟಾನ ಆಗುತ್ತಿರುವ ಕಾರ್ಯಕ್ರಮಗಳ ವೈಫಲ್ಯಕ್ಕೆ ಇವೆಲ್ಲಾ ಸಾಕ್ಷಿ, ಕಾರ್ಯಕ್ರಮಗಳು ಜನರಿಗೆ ತಲುಪುತ್ತಿಲ್ಲ ಎಂದು ತಿಳಿಸಿದರು.
ಸರಕಾರಗಳ ಕಾರ್ಯಕ್ರಮಗಳು ಜನರಿಗೆ ಯಾಕೆ ತಲುಪುತ್ತಿಲ್ಲ ಎಂಬ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಭಿವೃದ್ಧಿಶೀಲ ರಾಜ್ಯ ಕರ್ನಾಟಕದಲ್ಲಿ ಘಟಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಬಂಧೀ ಪ್ರಕರಣಗಳು ಯಾರಿಗೂ ಶೋಭೆ ತರುವಂತದ್ದಲ್ಲ, ಇದಕ್ಕೆ ಪರಿಹಾರ ಏನು ಎಂಬ ಬಗ್ಗೆ ಆಲೋಚನೆ ಮಾಡಬೇಕಿದೆ ಎಂದು ಸಲಹೆ ನೀಡಿದರು.
ದೇಶದಲ್ಲಿ ಹಣವಿದೆ. ಅದನ್ನು ಹೇಗೆ ಬಳಕೆ ಮಾಡುತ್ತಿದ್ದೇವೆ ಎನ್ನುವುದು ಮುಖ್ಯ. ನಮ್ಮ ಕಾರ್ಯಕ್ರಮಗಳು ಎಲ್ಲಿ ವಿಫಲವಾಗುತ್ತಿವೆ. ಜನಪ್ರತಿನಿಧಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಓರೆಗೆ ಹಚ್ಚಬೇಕಿದೆ. ಆನ್ಲೈನ್ ಲಾಟರಿ, ಗೇಮ್ ಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ. ಕುಟುಂಬಗಳು ನಾಶವಾಗುತ್ತಿವೆ. ಇಂಥ ಪಿಡುಗುಗಳಿಗೆ ಕಡಿವಾಣ ಹಾಕದೇ ಇದ್ದರೆ ಇದೇ ಅತಿದೊಡ್ಡ ಸಮಸ್ಯೆಯಾಗಿ ಮುಂದೆ ಸಮಾಜವನ್ನು ಕಾಡಲಿದೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಕೃಷಿ ವೃತ್ತಿ ಮೂರನೇ ದರ್ಜೆ ವೃತ್ತಿ ಎನ್ನುವ ಮನಸ್ಸು ಕೆಲವರಲ್ಲಿದೆ, ಅಂತಹ ಮನೋಭಾವ ಹೋಗಬೇಕು,ದೇಶಕ್ಕೆ ಅನ್ನ ನೀಡುವ ರೈತನ ಬಗ್ಗೆ ತಾತ್ಸಾರ ಇದೆ. ನಿರ್ಲಕ್ಷ್ಯ ಮಾಡುತ್ತಿದ್ದೇವೆ. ನನ್ನ ಪ್ರಕಾರ ರೈತನ ಪ್ರಗತಿಯೇ ದೇಶದ ಪ್ರಗತಿ ಎಂದು ಸಚಿವರು ಹೇಳಿದರು.
ರೈತನ ಬದುಕು ಸರಿ ಮಾಡದೆ ಇದ್ದರೆ ನಾವು ಯಾವುದೇ ಕ್ಷೇತ್ರದಲ್ಲಿ ಎಷ್ಟೇ ಬೆಳೆದು ಎಷ್ಟೇ ಪೈಪೋಟಿ ಕೊಟ್ಟರೂ ಉಪಯೋಗವಿಲ್ಲ ಎಂದು ಅಭಿಪ್ರಾಯ ಪಟ್ಟರು.
ಆಧುನಿಕ ಕೃಷಿಯಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ. ಇಲ್ಲಿ ನಡೆಯುತ್ತಿರುವ ಕೃಷಿ ವಿಚಾರ ಸಂಕಿರಣ ಅರ್ಥಪೂರ್ಣ. ಸುತ್ತೂರು ಜಾತ್ರಾ ಮಹೋತ್ಸವ ಕಂಡು ನನಗೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.
೧೦೬೬ನೇ ಶ್ರೀ ಶಿವರಾತ್ರೀಶ್ವರ ಜಯಂತಿಯನ್ನು ಮಳವಳ್ಳಿಯಲ್ಲಿ ಆಚರಿಸಬೇಕು ಎನ್ನುವುದು ನಮ್ಮ ಅಭಿಲಾಷೆ. ಅದಕ್ಕೆ ಪರಮಪೂಜ್ಯರು ಅನುಮತಿ ಕೊಡಬೇಕು ಎಂದು ಇದೇ ವೇಳೆ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾ ಸ್ವಾಮೀಜಿ ಅವರ ಅನುಮತಿಯನ್ನು ಕುಮಾರಸ್ವಾಮಿ ಸಚಿವರು ಕೇಳಿದರು.

ಇದಕ್ಕೆ ತಕ್ಷಣವೇ ಸ್ಪಂದಿಸಿದ ಶ್ರೀಗಳು ತಮ್ಮ ಒಪ್ಪಿಗೆ ಸೂಚಿಸಿ, ಜಯಂತಿ ಅರ್ಥಪೂರ್ಣವಾಗಿ ನಡೆಯಲಿ ಎಂದು ಹಾರೈಸಿದರು.
ಪ್ರಯಾಗ್ ರಾಜ್ ನಲ್ಲಿ
ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇಂದು ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ವರು ಮೃತಪಟ್ಟಿರುವ ಸುದ್ದಿ ಆಘಾತ ಮೂಡಿಸಿದೆ, ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ನನ್ನ ಸಂತಾಪಗಳು ಎಂದು ಕಾರ್ಯಕ್ರಮದ ನಂತರ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ತಿಳಿಸಿದರು.
ಅಲ್ಲಿನ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕ ಸಾಧಿಸಿ ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.
ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮೇಳನ ಬೃಹತ್ ಕುಂಭಮೇಳದಲ್ಲಿ ಭಾಗಿಯಾಗಲು ತೆರಳುತ್ತಿರುವ ಕನ್ನಡಿಗರು ಅಲ್ಲಿನ ಸ್ಥಳೀಯ ಆಡಳಿತ, ಪೊಲೀಸ್ ಸಿಬ್ಬಂದಿ ಮತ್ತು ಆಯೋಜಕರು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಅವರಿಗೆ ಸಹಕರಿಸಿ. ಯಾವುದೇ ಗಾಳಿ ಸುದ್ದಿಗಳಿಗೆ, ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.